varthabharthi


ನಿಮ್ಮ ಅಂಕಣ

ರಾಷ್ಟ್ರೀಯ ಶಿಕ್ಷಣ ನೀತಿ-2019: ಪರಿಗಣಿಸಬೇಕಾದ ಒಂದಿಷ್ಟು ಸಲಹೆಗಳು

ವಾರ್ತಾ ಭಾರತಿ : 26 Jul, 2019
ಡಾ. ಜಗನ್ನಾಥ ಕೆ. ಡಾಂಗೆ ಪ್ರಾಧ್ಯಾಪಕರು, ಶಿಕ್ಷಣ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.

ಭಾಗ-1

ಹಿರಿಯ ವಿಜ್ಞಾನಿ, ವಿದ್ವಾಂಸರಾದ ಡಾ. ಕಸ್ತೂರಿರಂಗನ್‌ರವರು 477 ಪುಟಗಳನ್ನೊಳಗೊಂಡ ರಾಷ್ಟ್ರೀಯ ಶಿಕ್ಷಣ ನೀತಿ- 2019ರ ಕರಡು ಪ್ರತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿಯ ಸಚಿವರಾಗಿದ್ದ ಪ್ರಕಾಶ್ ಜಾವಡೇಕರರಿಗೆ ವರದಿ ಸಲ್ಲಿಸಿದ್ದು, ಈ ವರದಿಯು ಕರಡು ಪ್ರತಿಯಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸಲಹೆ ಸೂಚನೆಗಳನ್ನು, ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ, ಶಿಕ್ಷಣ ತಜ್ಞರಿಗೆ, ಪೋಷಕರಿಗೆ, ಸಮಾಜ ಸೇವಕರಿಗೆ, ಶಿಕ್ಷಕ ಬಾಂಧವರಿಗೆ ಮತ್ತು ವಿದ್ಯಾರ್ಥಿಗಳಿಗೆ ಜುಲೈ 31ರವರೆಗೆ ಅವಕಾಶ ನೀಡಿದೆ. ಸಮಾನ ಅವಕಾಶ, ಸಮಾನತೆ, ಗುಣಾತ್ಮಕತೆ, ಕೈಗೆಟುಕುವಿಕೆ ಮತ್ತು ಹೊಣೆಗಾರಿಕೆಯಂತಹ ಶಿಕ್ಷಣದ ಸವಾಲುಗಳನ್ನು ಮೆಟ್ಟಿ ನಿಲ್ಲಲು ಈ ಶಿಕ್ಷಣ ನೀತಿಯು ಕ್ಷಿಪ್ರವಾಗಿ ಕಾರ್ಯನಿರ್ವಹಿಸಲಿದೆ ಎನ್ನುವುದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆಶಯ ಮತ್ತು ದೂರದೃಷ್ಟಿ. ಈ ವಿಚಾರವಾಗಿ ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿರುವ ಹಲವಾರು ಅಧ್ಯಾಪಕ ವೃಂದದವರು, ಸಂಪನ್ಮೂಲ ವ್ಯಕ್ತಿಗಳು, ಶಾಲಾ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ಪ್ರಶಿಕ್ಷಣಾರ್ಥಿಗಳು, ಸರಕಾರೇತರ ಸಂಘ ಸಂಸ್ಥೆಗಳ ಸದಸ್ಯರು ಸಂವಾದ ನಡೆಸಲಾಗಿ, ‘‘ಸಮಗ್ರ ಶಿಕ್ಷಣ ವ್ಯವಸ್ಥೆ ಮತ್ತು 21ನೇ ಶತಮಾನದ ಕೌಶಲವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾದರೆ ಮತ್ತು ಶಿಕ್ಷಕರು ಅವುಗಳನ್ನು ನೀಡಬೇಕಾದರೆ ಜಾತಿ, ಲಿಂಗ, ಧರ್ಮ, ಜನಾಂಗ, ಭಾಷೆ, ಪ್ರಾಂತಗಳ ಆಧಾರದ ಮೇಲೆ ತಾರತಮ್ಯ ಮಾಡದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಜಾತಿ ಮುಕ್ತ ಮತ್ತು ಸಮಾನತೆಯ ಅಡಿಯಲ್ಲಿ ಕಲಿಯಲು ಮತ್ತು ಅದಕ್ಕೆ ಪೂರಕವಾದ ಸೂಕ್ತ ಸಲಹೆಗಳನ್ನು ನೀಡುವುದಾಗಿದೆ.

ಶಿಕ್ಷಣ ನೀತಿಯು ಭಾರತ ಕೇಂದ್ರಿತ ವ್ಯವಸ್ಥೆಯನ್ನು ತರುವುದಾಗಿ ತಿಳಿಸಿದ್ದು, ಭಾರತ ಕೇಂದ್ರಿತ ವ್ಯವಸ್ಥೆಯೆಂದರೆ ಹಿಂದಿನ ಕಾಲದಲ್ಲಿದ್ದ ಅಸಮಾನತೆಯ ದಾರಿಯೇ?, ಗುಲಾಮಗಿರಿಯ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿರುವುದೇ? ಅಥವಾ ಸಮಾನತೆ ಸಾರುವ ನಿಟ್ಟಿನಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯದ ಹೊರತಾದ ಶಿಕ್ಷಣ ಪದ್ಧತಿಯೇ ಎಂದು ಸ್ಪಷ್ಟಪಡಿಸದಿರುವುದು. ಹಾಗೆಯೇ, ಬಡವ ಮತ್ತು ಶ್ರೀಮಂತರ ನಡುವೆ ಅಂತರ ಕಡಿಮೆ ಮಾಡುವ ಸಲುವಾಗಿ ನಿರ್ದಿಷ್ಟವಾಗಿ ಸೂಚಿಸುವ ಯಾವುದೇ ಅಂಶಗಳು ರಾಷ್ಟ್ರೀಯ ಶಿಕ್ಷಣ 2019ರಲ್ಲಿ ಕಂಡು ಬರದಿರುವುದು ಕರಡು ಪ್ರತಿಯ ದೊಡ್ಡ ಕೊರತೆ ಎನ್ನುವ ಭಾವನೆ ಹೊರಹೊಮ್ಮಿದ್ದು ವಿಶೇಷ’’. ರಾಷ್ಟ್ರೀಯ ಶಿಕ್ಷಣ ನೀತಿ-2019ಕ್ಕೆ ನೀಡಲು ತಯಾರಿಸಲಾದ ಸಲಹೆಗಳ ಪ್ರಮುಖ ಅಂಶಗಳೆಂದರೆ;

ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ:
* ರಾಷ್ಟ್ರೀಯ ಶಿಕ್ಷಣ ನೀತಿ-2019ರ ಪ್ರಕಾರ ಪೂರ್ವ ಪ್ರಾಥಮಿಕ ಅಥವಾ ಅಂಗನವಾಡಿ ಶಿಕ್ಷಣವನ್ನು ಶಾಲಾ ಶಿಕ್ಷಣದ ಮುಖ್ಯ ವ್ಯಾಪ್ತಿಗೆ ಸೇರಿಸಿದ್ದು, ಅಂಗನವಾಡಿ ಶಿಕ್ಷಕಿಯರಿಗೆ ಸೂಕ್ತ ತರಬೇತಿಯನ್ನು ನೀಡಲು ಹೊಸ ಪಠ್ಯಕ್ರಮವನ್ನು ರೂಪಿಸುವ ಅವಶ್ಯಕತೆ ಮತ್ತು ಅವರ ಸೇವೆಯನ್ನು ಖಾಯಂಗೊಳಿಸಿ ಶಿಕ್ಷಣದ ಗುರಿ ಉದ್ದೇಶಗಳನ್ನು ಈಡೇರಿಸುವಲ್ಲಿ ನಿಯಮ ರೂಪಿಸುವುದು.
* ಶಾಲಾ ಸಂಕೀರ್ಣ ರಚನೆಯಲ್ಲಿ ಖಾಸಗಿ ಶಾಲೆಗಳನ್ನು ಕೂಡ ಶಾಲಾ ಸಂಕೀರ್ಣದ ಭಾಗವಾಗಿ ಪರಿಗಣಿಸುವುದು.
* ರಾಷ್ಟ್ರೀಯ ಶಿಕ್ಷಣ ನೀತಿ ಔದ್ಯೋಗಿಕ ಶಿಕ್ಷಣಕ್ಕೆ ಒತ್ತು ನೀಡಿದ್ದು, ಉತ್ತಮ ಮೂಲಭೂತ ಸೌಕರ್ಯದೊಂದಿಗೆ, ಪ್ರತೀ ವಿದ್ಯಾರ್ಥಿಗಳಿಗೂ ಕೌಶಲಗಳನ್ನು ಬೆಳೆಸಲು ಅವಶ್ಯಕವಾದ ವರ್ಕ್‌ಶಾಪ್, ಸ್ಟುಡಿಯೋ ಕಟ್ಟಡಗಳನ್ನು ನಿರ್ಮಿಸುವುದು ಹಾಗೂ ಫೋಟೊಗ್ರಫಿ, ವೀಡಿಯೊಗ್ರಫಿ, ಫ್ಯಾಷನ್ ಡಿಸೈನಿಂಗ್, ಗಣಕ ತಂತ್ರಾಂಶಗಳ ಅಭಿವೃದ್ಧಿ, ಟೈಲರಿಂಗ್‌ಗಳಂತಹ ಕೌಶಲಗಳನ್ನು ಪರಿಗಣಿಸುವುದು.

* ಖಾಸಗಿ ಸಂಸ್ಥೆಗಳ ಕುಂದು ಕೊರತೆಗಳನ್ನು ಗುರುತಿಸಲು ಸೂಕ್ತವಾದ ಮೇಲ್ವಿಚಾರಣಾ ವ್ಯವಸ್ಥೆ ಅಥವಾ ಸಮಿತಿಯನ್ನು ಸರಕಾರದಿಂದಲೇ ರೂಪಿಸುವುದು. * ಅವಶ್ಯಕತೆಗೆ ಅನುಗುಣವಾಗಿ ಖಾಸಗಿ, ಅನುದಾನಿತ ಮತ್ತು ಸರಕಾರಿ ಶಾಲೆಗಳನ್ನು ವಿಶೇಷ ಭಾಗಗಳಲ್ಲಿ ಒಂದೇ ಶಾಲಾ ಸಮುಚ್ಚಯದಡಿಯಲ್ಲೇ ತರಲು ನಿಯಮ ರೂಪಿಸುವುದು.
* ರಾಷ್ಟ್ರೀಯ ಶಿಕ್ಷಣ ನೀತಿ(2019)ಯು, ಅನುಭವಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿರುವುದರಿಂದ ಪ್ರತಿ ಶಾಲಾ ಸಮುಚ್ಚಯ ಸುಸಜ್ಜಿತವಾದ ವಿಜ್ಞಾನ ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ಕಾರ್ಯಾಗಾರ, ಗಣಕಯಂತ್ರ ಪ್ರಯೋಗಾಲಯಗಳನ್ನು ಹೊಂದುವುದು.
* ಕಲಿಕಾರ್ಥಿಯ ಜೀವನ ಕೌಶಲಗಳನ್ನು ಬೆಳೆಸಲು, ಶಿಕ್ಷಣದ ಎಲ್ಲಾ ಕಾರ್ಯಕ್ರಮ ಅಥವಾ ವಿಷಯಗಳಿಗೆ ಸಂಬಂಧಿಸಿದ ಪ್ರಾಜೆಕ್ಟ್‌ಗಳಲ್ಲಿ ಜೀವನ ಕೌಶಲಗಳನ್ನು ಪರಿಗಣಿಸುವುದು.
* ರಾಷ್ಟ್ರೀಯ ಶಿಕ್ಷಣ ನೀತಿ-2019ರಲ್ಲಿ ಶಿಕ್ಷಣದ ಮೂಲಕ ಸಮಾನತೆಗೆ ಒತ್ತು ನೀಡಿದ್ದು, ಸರಕಾರಿ ಶಾಲೆಗಳಲ್ಲಿ ಇರುವ ವಿದ್ಯಾರ್ಥಿಗಳ ಶುಲ್ಕ, ಶಿಕ್ಷಕರ ನೇಮಕ, ಸಂಬಳ ಮತ್ತು ಇತರ ಸೌಲಭ್ಯಗಳನ್ನು ಖಾಸಗಿ ಶಾಲೆಗಳಲ್ಲೂ ಕಡ್ಡಾಯವಾಗಿ ಅನುಷ್ಠಾನವಾಗುವಂತೆ ನಿಯಮಗಳನ್ನು ರೂಪಿಸುವುದು.
* ಶಿಕ್ಷಕರ ಉದ್ಯೋಗ, ಭದ್ರತೆ, ಗೌರವದ ವಿಷಯದಲ್ಲಿ ಸರಕಾರಿ ಮತ್ತು ಖಾಸಗಿ ಎಂಬ ಭೇದಭಾವ, ತಾರತಮ್ಯ ಹೋಗಲಾಡಿಸುವುದು.
* ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿಗಳ ಶುಲ್ಕ ರಚನೆಯ ಕುರಿತು ಉತ್ತಮ ಸೂತ್ರವನ್ನು ಖಾಸಗಿ ಶಾಲೆಗಳಿಗೆ ರಾಜ್ಯ ಶಿಕ್ಷಣ ಮಂಡಳಿಯು ನೀಡುವುದರಿಂದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕವನ್ನು ಮತ್ತು ಶಿಕ್ಷಕರಿಗೆ ಹೆಚ್ಚಿನ ವೇತನವನ್ನು ನೀಡಿದಂತಾಗುತ್ತದೆ.
* ಶಿಕ್ಷಣ ಸಂಸ್ಥೆಗಳಲ್ಲಿ ಅಡ್-ಹಾಕ್/ಏಜೆನ್ಸಿಗಳ ಮೂಲಕ ಮಾನವ ಸಂಪನ್ಮೂಲದ ನೇಮಕಾತಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ನಿಲ್ಲಿಸುವುದು.
* ಬೋರ್ಡ್ ಪರೀಕ್ಷೆಯನ್ನು ಪರೀಕ್ಷಾ ಮಂಡಳಿಯಿಂದ ನಡೆಸುವಾಗ ಡಿಜಿಟಲ್ ರೂಪದ ಕಣ್ಗಾವಲಿನಲ್ಲಿ ನಡೆಸುವುದು.
* ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆಯನ್ನು ತರಲು ‘ಒಂದು ದೇಶ ಒಂದು ಪಠ್ಯಕ್ರಮ’(ರಾಷ್ಟ್ರೀಯ ಪಠ್ಯಕ್ರಮ ಶೇ. 80 ಮತ್ತು ಪ್ರಾದೇಶಿಕ/ಸ್ಥಳೀಯ ಪಠ್ಯಕ್ರಮ ಶೇ. 20 ಇರುವಂತೆ) ಎನ್ನುವ ಪದ್ಧತಿಯನ್ನು ಅನುಷ್ಠಾನಗೊಳಿಸುವುದು.
* ಅಧಿಸೂಚನೆ, ಆಯ್ಕೆ, ತರಬೇತಿ, ನಿಯೋಜನೆಯನ್ನು ಪ್ರತೀ ವರ್ಷವೂ ಪಾರದರ್ಶಕತೆಯಿಂದ ನಡೆಸುವುದು.
* ದೈಹಿಕ ಆರೋಗ್ಯ ಕಾಪಾಡಲು ಪ್ರತೀ ಶಾಲಾ ಸಮುಚ್ಚಯದಲ್ಲಿ ದೈಹಿಕ ಪೋಷಣಾ ಅಕಾಡೆಮಿಯನ್ನು ಸ್ಥಾಪಿಸಿ ಉತ್ತಮ ಅಥ್ಲೆಟ್ಸ್‌ಗಳನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಬಹುದು ಮತ್ತು ಒಲಿಂಪಿಕ್ಸ್‌ನ ಗುರಿ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ರೀತಿಯಲ್ಲಿ ತರಬೇತಿಯನ್ನು ನೀಡುವುದು.
* 1ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ದತ್ತಾಂಶ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಿ, ನಿರ್ವಹಣೆ ಮಾಡುವುದರ ಮೂಲಕ ಪ್ರತಿಯೊಬ್ಬರ ಬುದ್ಧಿವಂತಿಕೆ, ಸೃಜನಶೀಲತೆ, ಆಸಕ್ತಿ, ವಿಶೇಷ ಸಾಮರ್ಥ್ಯವನ್ನು ಅರಿತು ಪೋಷಿಸಿ ಬೆಳೆಸುವುದು.
* ಸರಕಾರದ ವತಿಯಿಂದ ಕನಿಷ್ಟ ಶುಲ್ಕವನ್ನು ಪಡೆದು ಖಾಸಗಿ ಶಾಲೆಗಳಿಗೂ ಪಠ್ಯಪುಸ್ತಕವನ್ನು ಸರಿಯಾದ ಸಮಯಕ್ಕೆ ಒದಗಿಸುವುದು.
* ಶಾಲಾ ಸಮುಚ್ಛಯ ಮತ್ತು ಖಾಸಗಿ ಸಂಸ್ಥೆಗಳಲ್ಲೂ ಜಾತ್ಯಾತೀತ ಪರಿಸರವನ್ನು ಉಂಟು ಮಾಡುವುದರಿಂದ ಪ್ರಜಾಪ್ರಭುತ್ವವನ್ನು ಪೋಷಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದು.

* ತುಳಿತಕ್ಕೊಳಗಾದ, ಅಸ್ಪಶ್ಯತೆಗೊಳಗಾದ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ, ಸಂದೇಶ ನೀಡಿದ ಮತ್ತು ಸ್ಥಳೀಯ ಜನರ ಯಶಸ್ಸಿನ ಕತೆಗಳನ್ನು, ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬಿ, ಸಾಧನೆಗೆೆ ಪ್ರೇರೇಪಿಸುವುದು. * ಶಾಲಾ ಕಾಲೇಜುಗಳಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳ ಮತದಾನದ ಮೂಲಕ ಮತದಾನದ ಮಹತ್ವವನ್ನು ತಿಳಿಯಪಡಿಸಲು ನಿಯಮಗಳನ್ನು ರೂಪಿಸುವುದು.
* ಪ್ರತಿಯೊಂದು ಶಾಲಾ ಕಾಲೇಜುಗಳಲ್ಲೂ ಕಡ್ಡಾಯವಾಗಿ ಕ್ರೀಡಾಂಗಣ ಇರುವಂತೆ ನೋಡಿಕೊಂಡು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ನಿಯಮವನ್ನು ರೂಪಿಸುವುದು.
* ಪ್ರಸ್ತುತ ರಾಜಕೀಯ, ಸಾಮಾಜಿಕ ಘಟನೆಗಳಿಗೆ ಸಂಬಂಧಿಸಿದಂತೆ, ಪ್ರತೀ ವಾರವೂ ಶಾಲಾ ಕಾಲೇಜುಗಳಲ್ಲಿ ಚರ್ಚೆಯಾಗುವಂತೆ ಅವಧಿಯನ್ನು ನಿಗದಿಪಡಿಸಿ, ಪಠ್ಯಕ್ರಮದಲ್ಲೂ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿರುವ ವಿಚಾರಗಳನ್ನು, ಸೃಜನಶೀಲ ಕಲ್ಪನೆಗಳನ್ನು ಬೆಳೆಸಿ ಇವುಗಳನ್ನು ಮೌಲ್ಯಮಾಪನದ ಭಾಗವನ್ನಾಗಿಸಲು ಸಲಹೆ ನೀಡುವುದು.
* ಶಾಲಾ ಕಾಲೇಜುಗಳಲ್ಲಿ ಮಿಶ್ರ ಗುಂಪುಗಳ ಸಹಕಾರಯುತ ಕಲಿಕೆಯ ಪ್ರಕ್ರಿಯೆಯಲ್ಲಿ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳೊಂದಿಗೆ ಬೆರೆಯುವ, ಕಲಿಯುವ, ಜವಾಬ್ದಾರಿ ನಿರ್ವಹಿಸುವ ಅವಕಾಶ ಮಾಡಿಕೊಟ್ಟಾಗ ಉತ್ತಮ ಬಾಂಧವ್ಯ ಏರ್ಪಟ್ಟು, ರ್ಯಾಗಿಂಗ್ ಅನ್ನು ನಿಯಂತ್ರಣ ಮಾಡಬಹುದಾಗಿದೆೆ.
* ಮೌಲ್ಯ-ಕೇಂದ್ರಿತ, ಮಗು-ಕೇಂದ್ರಿತ, ಅನುಭವ-ಕೇಂದ್ರಿತ, ಮತ್ತು ಜಾತ್ಯಾತೀತ-ಕೇಂದ್ರಿತ ಉಪಕ್ರಮಗಳನ್ನು ಅಳವಡಿಸಲು ಸಲಹೆ ನೀಡುವುದು.
* ಜಾತ್ಯಾತೀತ ತತ್ವಗಳನ್ನು ದಾಖಲಾತಿ, ಪಠ್ಯಕ್ರಮರಚನೆ, ಶಿಕ್ಷಕ-ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯಲ್ಲಿ, ಆಡಳಿತ ಮತ್ತು ನಿರ್ವಹಣೆಯಲ್ಲೂ ಅಳವಡಿಸಿಕೊಳ್ಳುವುದರ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ನೀತಿಯನ್ನು ರೂಪಿಸುವುದು.
* ಪ್ರಸ್ತುತ ಧರ್ಮ ನಿರಪೇಕ್ಷ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಇದ್ದು, ಜಾತ್ಯತೀತ, ಸರ್ವ ಧರ್ಮಗಳನ್ನೊಳಗೊಂಡ, ಸಮಾನವಾದ ಅಂಶಗಳ ಶಿಕ್ಷಣವನ್ನು ನೀಡುವಂತೆ ಸೂಕ್ತ ಸಲಹೆಗಳನ್ನು ನೀಡುವುದು.
* ಮಕ್ಕಳಲ್ಲಿ ಆಯ್ಕೆ ಸ್ವಾತಂತ್ರ್ಯವನ್ನು ಬೆಳೆಸಲು-ಪ್ರಾಥಮಿಕ ಹಂತದಿಂದಲೇ ಕನಿಷ್ಟ ಆಯ್ಕೆಗೆ ಪ್ರಾತಿನಿಧ್ಯ ನೀಡುವುದು.
* ಈಗಾಗಲೇ ಪದವಿ ಪಡೆದ/ಹನ್ನೆರಡನೇ ತರಗತಿ ಪಾಸಾದ ಯುವ ಸಮುದಾಯವನ್ನು ಔದ್ಯೋಗಿಕ, ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್‌ಗಳ ಮುೂಲಕ ವೃತ್ತಿ ಕೌಶಲಗಳನ್ನು ಬೆಳೆಸಲು ಅವಕಾಶ ಒದಗಿಸುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)