varthabharthi


ಭೀಮ ಚಿಂತನೆ

ಕೇವಲ ಶಿಕ್ಷಣದಿಂದ ಯೋಗ್ಯತೆ ಬರುವುದಿಲ್ಲ

ವಾರ್ತಾ ಭಾರತಿ : 26 Jul, 2019

ಧಾರವಾಡ ಜಿಲ್ಲೆಯ ಮೊದಲ ಬಹಿಷ್ಕೃತರ ಪರಿಷತ್ತು ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ತಾ. 25ನೇ ಡಿಸೆಂಬರ್ 1929ರಂದು ಸಾಯಂಕಾಲ ಆಗಷ್ಟೇ ಕಟ್ಟಿದ ಕೋಟೆಯ ಪ್ರವೇಶದ್ವಾರದ ಹತ್ತಿರವಿದ್ದ ಮೈದಾನದಲ್ಲಿ ಅತ್ಯಂತ ಉತ್ಸಾಹದಲ್ಲಿ ಜರುಗಿತು. ಸಭೆಗೆ ದಲಿತರ ಪ್ರತಿನಿಧಿಗಳಾಗಿ ಮಾಂಗ್, ಮಹರ್, ಚಮ್ಮಾರರು, ಭಂಗಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ದಲಿತರಲ್ಲದೆ ಅನೇಕ ಮೇಲ್ಜಾತಿಯ ಜನ ಕೂಡ ಹಾಜರಿದ್ದರು. ಮಂಚದಮೇಲೆ ಮೈಸೂರಿನ ಕನಕ ಲಕ್ಷ್ಮೀ ಅಮ್ಮಾ, ಮುದವೇಡು ಕೃಷ್ಣರಾಯಪ್ಪ ಕುಳಿತಿದ್ದರು. ಮೇಲ್ಜಾತಿಯವರಲ್ಲಿ ಡಾ. ಕಿರ್ಲೋಸ್ಕರ್, ಡಾ. ಕಮಲಾಪೂರ್‌ನಂತಹ ಪ್ರಸಿದ್ಧ ಜನ ಕುಳಿತಿದ್ದರು. ಡಾ. ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ,

ನಮಗೆ ಸಿಕ್ಕ ಹೊಗಳಿಕೆಗೆ ನಾವು ಯೋಗ್ಯರೂ ಅಲ್ಲವೋ ಅನ್ನುವುದನ್ನು ನಾವೇ ನಿರ್ಧರಿಸುವುದು ಬಹಳ ಕಷ್ಟ. ಶ್ರೋತೃಗಳೇ ಸ್ತುತಿಯ ಯೋಗ್ಯತೆಯನ್ನು ನಿರ್ಧರಿಸುವವರು. ನಾನು ಲಂಡನ್‌ನಿಂದ ಬಂದಾಗ ನನಗೆ ಮಾನ ಪತ್ರ ಕೊಡಿಸುವ ಬಗ್ಗೆ ಜನ ಸಾಕಷ್ಟು ಕಷ್ಟ ಪಟ್ಟರು. ಆದರೆ ನಾನು ಯಾವುದೇ ಮೋಹಕ್ಕೆ ಬಲಿಯಾಗದೆ ಮಾನ ಪತ್ರ ಸ್ವೀಕರಿಸಲಿಲ್ಲ ಅನ್ನುವುದಕ್ಕೆ ಕಾರಣವೊಂದೇ. ಮಾನ ಪತ್ರ ಸ್ವೀಕರಿಸಲು ಕೂಡಾ ಯೋಗ್ಯತೆ ಬೇಕು. ಕೇವಲ ವಿದ್ಯೆ ಕಲಿತರೆ ಆ ಯೋಗ್ಯತೆ ಬರುತ್ತದೆ ಎಂದು ನನಗನಿಸುವುದಿಲ್ಲ. ಮನುಷ್ಯ ವಿದ್ವಾಂಸನಾದರೆ ಆತ ಸಮಾಜಕ್ಕಾಗುತ್ತಾನೆ ಎಂದೇನು ಇಲ್ಲ. ವಿದ್ವಾಂಸ ಮನುಷ್ಯ ವಂಚಕ, ಮೋಸಗಾರ, ಸಾಲಗಾರ ಇನ್ನೇನೇನೋ ಆಗಿರುತ್ತಾನೆ. ಇಂದಿನ ಪರಿಸ್ಥಿತಿಯಲ್ಲಿ ವಿದ್ಯೆ ಕಲಿತ ಆಧುನಿಕ ಜನ ದಲಿತರೊಂದಿಗೆ ಯಾವ ರೀತಿ ವರ್ತಿಸುತ್ತಿದ್ದಾರೆ ಅನ್ನುವುದನ್ನು ನೀವೇ ನೋಡುತ್ತಿದ್ದೀರಿ. ಇದೆಲ್ಲ ಸಹಜ. ಏಕೆಂದರೆ ಸ್ಪಶ್ಯ ಅಸ್ಪಶ್ಯ ಅನ್ನುವುದು ಸನಾತನ ಕಾಲದಿಂದಲೂ ನಡೆದುಕೊಂಡು ಬಂದಂತಹದ್ದು. ಈ ಸಮಸ್ಯೆ ಯಾವ ಕಾಲಕ್ಕೆ ಪರಿಹಾರ ವಾಗಬಹುದು ಅನ್ನುವುದನ್ನು ಯಾರು ಹೇಳಲಾರರು. ಅಸ್ಪಶ್ಯತೆ ಹೋಗಲಾಡಿಸುವ ಅನೇಕ ಮಾರ್ಗಗಳಿವೆ ಅದರಲ್ಲಿ ಮಹತ್ವವಾದದ್ದು ರಾಜಕೀಯ ಅಧಿಕಾರವನ್ನು ನಮ್ಮ ಕೈಯಲ್ಲಿ ತಗೆದುಕೊಳ್ಳುವುದು. ಇತ್ತೀಚೆಗೆ ನಮ್ಮನ್ನು ಸುಧಾರಿಸಲು ಅನೇಕ ಮೇಲ್ಜಾತಿಯ ಜನ ಮುಂದೆ ಬರುತ್ತಿದ್ದಾರೆ. ದೊಡ್ಡ ದೊಡ್ಡ ಸಾಹೇಬರು ನಮ್ಮ ಬಗ್ಗೆ ಆತ್ಮೀಯತೆ ತೋರಿಸುತ್ತಿದ್ದಾರೆ. ಆದರೆ ಮೆತ್ತಗೆ ಬಂದು ಯಾವಾಗಲು ಸ್ವಚ್ಛವಾಗಿರಿ, ಹೊಸ ದೃಷ್ಟಿ ಇಟ್ಟುಕೊಳ್ಳಿ ಎಂದೆಲ್ಲಾ ಹೇಳುತ್ತಾರಲ್ಲಾ ಇದೆಲ್ಲಾ ಸರಿಯೇ? ದಲಿತರ ಸುಧಾರಣೆ ಕೇವಲ ಒಳ್ಳೊಳ್ಳೆ ಬಟ್ಟೆ ಹಾಕಿಕೊಳ್ಳುವುದರಲ್ಲಿಲ್ಲ. ಆದರೆ ಇವೆಲ್ಲ ವಿಷಯಗಳು ರಾಜಕೀಯದ ಅಧೀನವಾಗಿದೆ ಅನ್ನುವುದನ್ನು ನೆನಪಿಡಿ.

ಕಾಡು ಮನುಷ್ಯರು, ಹಿಂದೂ ಸಮಾಜ ಹಾಗೂ ದಲಿತ ಸಮಾಜ ಇವುಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಪ್ರತಿಯೊಬ್ಬರ ರೂಢಿ ಪರಂಪರೆಗಳು ಭಿನ್ನವಾಗಿವೆ, ದಲಿತೋದ್ಧಾರದ ವಿಷಯದಲ್ಲಿ ಹೊಸ ಕಾನೂನನ್ನು ಜಾರಿಗೆ ತರುವ ಧ್ಯೆರ್ಯ ಸರಕಾರ ತೋರುತ್ತಿಲ್ಲ. ಸ್ವಲ್ಪ ಮಟ್ಟಿಗಾದರೂ ರಾಜಕೀಯ ಅಧಿಕಾರ ಸಿಗದೇ ನಮ್ಮ ಸುಧಾರಣೆ ವೇಗ ಪಡೆಯಲಾರದು. ರಾಜಕೀಯ ಅಧಿಕಾರ ಪಡೆಯಲು ನಾವು ಪ್ರಯತ್ನಿಸಬೇಕು. ಅಂತೆಯೇ ಮೇಲ್ಜಾತಿ ಜನರ ಅನ್ಯಾಯವನ್ನು ದೂರ ಮಾಡಲು ಕಷ್ಟಪಡಬೇಕು. ಎಲ್ಲ ದಿಕ್ಕಿನಿಂದಲೂ ಶೀಘ್ರತೆಯಿಂದ ಕೆಲಸಗಳು ನಡೆಯಬೇಕಿವೆ. ಕೊಂಕಣದಲ್ಲಿ ದಲಿತರ ಸ್ಥಿತಿ ಅವರಿರುವ ಊರಿನ ಜನರನ್ನು ಅವಲಂಬಿಸಿದೆ. ದಲಿತರಿಗೆ ಊರಿನ ಪಾಟೀಲನು ಅನುಕೂಲಕರವಾಗಿರಬೇಕು. ಆತನ ತಲೆ ಕೆಟ್ಟರೆ ತನ್ನ ಗೂಂಡಾಗಳನ್ನು ಕಳಿಸಿ ದಲಿತರನ್ನು ಸಾಕಷ್ಟು ಪೀಡಿಸುತ್ತಾನೆ. ಈ ಪಾಟೀಲರು ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕುತ್ತಾರೆ, ಹಾಗೆ ಬಹಿಷ್ಕಾರ ಹಾಕುವ ಹಕ್ಕು ಅಲ್ಲಿ ಅವರಿಗಿರುತ್ತದೆ. ಇಂತಹ ಬಹಿಷ್ಕಾರಕ್ಕೆ ದಲಿತರು ಹೆದರುತ್ತಾರೆ. ಹಾಗಾಗಿ ಈಗ ನಡೆಸುತ್ತಿರುವ ಚಳವಳಿಯಿಂದವರು ದೂರವಿರಬಯಸುತ್ತಿದ್ದಾರೆ. ದಲಿತರ ಪರಿಸ್ಥಿತಿ ಇಂದಿಗೂ ಕೂಡ ವಿಚಿತ್ರವಾಗಿದೆ. ಬ್ರಿಟಿಷರ ಈ ರಾಜ್ಯದಲ್ಲಿ ದಲಿತರ ಮೇಲೆ ಹಾಕಲಾಗುವ ಸಾಮಾಜಿಕ ಬಹಿಷ್ಕಾರವನ್ನು ದೂರ ಮಾಡುವ ಇಲ್ಲವೇ ಸರಿಪಡಿಸುವ ಯಾವುದೇ ಕಾಯ್ದೆ ಇನ್ನೂ ಜಾರಿಗೆ ಬರುತ್ತಿಲ್ಲ. ನಾವೆಲ್ಲರೂ ಈಗ ಸ್ವಾತಂತ್ರವಾದಿಗಳಾಗಬೇಕು ಎಂದು ನನಗನಿಸುತ್ತದೆ. ಈ ದೇಶದಲ್ಲಿ ಮಹರ್ ಹಾಗೂ ಮಾಂಗ್‌ರಿಗಾದರೂ ಸ್ವಾತಂತ್ರ ಬೇಕು, ಇತ್ತೀಚೆಗೆ ಎಲ್ಲೆಲ್ಲೋ ಸ್ವಾತಂತ್ರ ಬೇಡುವ ಚಳವಳಿಗಳು ನಡೆದಿವೆ. ನನಗನಿಸಿದ ಮಟ್ಟಿಗೆ ಈ ಸ್ವಾತಂತ್ರದ ಎಲ್ಲ ಲಾಭಗಳು ಬೇರೆಯವರ ಪಾಲಾಗಲಿವೆ. ಇದರಲ್ಲಿ ನಮ್ಮಂತಹ ನಿರ್ಗತಿಕರಿಗೆ ಮಾತ್ರ ಲಾಭವಾಗಬೇಕು.

ಆದರೆ, ಸ್ವಾತಂತ್ರದ ಕೊಡುಕೊಳ್ಳುವಿಕೆಯಲ್ಲಿ ಯಾವುದೇ ಅರ್ಥವಿದೆ ಎಂದು ನನಗನಿಸುವುದಿಲ್ಲ. ನನಗೆ ಬ್ರಿಟಿಷ್ ಸರಕಾರದ ಮೇಲೆ ಎಳ್ಳಷ್ಟೂ ನಂಬಿಕೆಯಿಲ್ಲ ಅನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈ ಸರಕಾರ ನಮ್ಮ ಉದ್ಧಾರಕ್ಕಾಗಿ ಏನೂ ಮಾಡುತ್ತಿಲ್ಲ, ನಮ್ಮ ಉದ್ಧಾರ ನಾವೇ ಮಾಡಿಕೊಳ್ಳಬೇಕಿದೆ. ಅಸ್ಪಶ್ಯತೆ ಇರುವವರೆಗೆ ಸ್ವಾತಂತ್ರ ಸಿಗುವುದಿಲ್ಲ ಎಂದು ಇಂದಿನ ಸ್ವಾಗತಾಧ್ಯಕ್ಷರು ಹೇಳಿದರು, ಆದರೆ ಇದು ಸುಳ್ಳು. ಬ್ರಿಟಿಷ್ ಸರಕಾರ ತತ್ವಜ್ಞಾನಿ ಸರಕಾರವಲ್ಲ, ಅದು ಪಕ್ಕಾ ವ್ಯವಹಾರಿ ಸರಕಾರ. ಕೇಳಿಕೊಂಡು ಬಂದವರಿಗೆ ಸ್ವಾತಂತ್ರ ಕೊಡಲು ಅವರು ಕುಳಿತಿಲ್ಲ. ಬೇರೆಯವರನ್ನು ಲೂಟಿ ಮಾಡುವ, ಬೇರೆಯವರಿಗೆ ತೊಂದರೆ ಕೊಡುವವರನ್ನೇ ಖುಷಿಪಡಿಸುತ್ತದೆ ಈ ಸರಕಾರ. ನಮಗೆ ಸ್ವಾತಂತ್ರ ಕೊಟ್ಟರೂ ತಮ್ಮ ಸಾಮ್ರಾಜ್ಯ ಸುರಕ್ಷಿತವಾಗಿದೆಯೇ? ಅನ್ನುವುದನ್ನು ಖಚಿತಪಡಿಸಿಕೊಂಡು ನಂತರವೇ ಮುಂದಿನ ಹೆಜ್ಜೆ ಇಡುತ್ತದೆ. ನಿಮ್ಮ ವ್ಯವಹಾರ, ತೊಂದರೆಗಳು ಅವರಿಗೆ ಸಂಬಂಧಪಟ್ಟಿದ್ದಲ್ಲ. ಈ ದೇಶದ ಒಳ್ಳೆಯದಕ್ಕಾಗಿ ಸ್ವಾತಂತ್ರ ಯಾರೂ ಕೊಡುತ್ತಿಲ್ಲ. ಸ್ವಾತಂತ್ರಕ್ಕಾಗಿ ನಡೆಯುತ್ತಿರುವ ಮಾತುಕತೆಯಲ್ಲಿ ನಿಮ್ಮನ್ನು ನಮ್ಮನ್ನು ಯಾರಾದರೂ ಕೇಳುತ್ತಿದ್ದಾರೆಯೇ? ಮಹಾತ್ಮಾ ಗಾಂಧಿ, ಸಪ್ರೂ, ನೆಹರೂ, ಜಿನ್ನಾ ಇವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಜನ ನಮ್ಮಾಂದಿಗೆ ಎಷ್ಟರ ಮಟ್ಟಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಅನ್ನುವುದು ಕಾಣುತ್ತಿದೆ. ಹಾಗಾಗಿ ನಾವು ಈಗ ಸ್ವಾತಂತ್ರವಾದಿಗಳಾಗಬೇಕಿದೆ. ಆದರೆ ಕೇವಲ ಸ್ವಾತಂತ್ರ ಪಡೆದು ಏನಾಗಲಿದೆ? ಅದಕ್ಕಾಗಿ ಯೋಗ್ಯತೆ ಬೇಡವೇ? ನಾವು ಹಠ ಮಾಡಿ, ಕಾಡಿಬೇಡಿದರೆ ನಮಗೆ ಬೇಕಿರುವ ಅಧಿಕಾರಗಳು ನಮಗೆ ಸಿಕ್ಕಾವು. ಆದರೆ, ಜ್ಞಾನವಿಲ್ಲದೆ ಅಧಿಕಾರವು ವ್ಯರ್ಥ. ದಲಿತರು ಬಹುಸಂಖ್ಯಾತರಾಗಿದ್ದಾರೆ ಅನ್ನುವುದರಿಂದೇನೂ ಆಗದು, ಸ್ವಾತಂತ್ರ ಅನುಭವಿಸಲು ಕೂಡ ಯೋಗ್ಯತೆ ಬೇಕು.

ನಮ್ಮ ಸಾಮಾಜಿಕ ಪರಿಸ್ಥಿತಿ ಉಳಿದ ಸಮಾಜಕ್ಕಿಂತ ಭಿನ್ನವಾಗಿದೆ. ಜಾತಿಭೇದ ಉಳಿದ ಸಮಾಜದಲ್ಲೂ ಇದೆ. ಆದರೆ ನಮ್ಮಲ್ಲಿ ಗುಣಭೇದ ಎನ್ನುವ ವಿಶೇಷವಾದ ಭೇದವಿದೆ. ಜಾತಿಭೇದ ಹಾಗೂ ಗುಣಭೇದಗಳು ಸಮಾಂತರವಾಗಿ ನಡೆಯುತ್ತವೆ. ಅವು ಇಂದೂ ಕೂಡ ಪ್ಯಾರಲಲ್ ಆಗಿವೆ. ಇಂತಹ ಪ್ರಕಾರಗಳು ಯಾವುದೇ ದೇಶದಲ್ಲಿಲ್ಲ. ನಾವು ಅನಾದಿಕಾಲದಿಂದ ಆನುವಂಶಿಕ ಗುಣಗಳನ್ನು ಒಪ್ಪಿಕೊಂಡಿರುವುದರಿಂದ ಅದರ ದುಷ್ಪರಿಣಾಮಗಳನ್ನೀಗ ಅನುಭವಿಸುತ್ತಿದ್ದೇವೆ. ಒಬ್ಬ ವಿದ್ಯಾವಂತ ದಲಿತ ಎಲ್ಲರಿಂದ ದೂರವೇ ಉಳಿಯುತ್ತಾನೆ. ಆದರೆ ಅವಿದ್ಯಾವಂತ ಬ್ರಾಹ್ಮಣ ದೊಡ್ಡ ದೊಡ್ಡ ಹುದ್ದೆಗಳನ್ನಲಂಕರಿಸುತ್ತಾನೆ. ಕೇವಲ ವಿಜ್ಞಾನವಿದ್ದಿದ್ದರಿಂದಲೇ ಇದೆಲ್ಲವನ್ನೂ ಮುಂದುವರಿಸಿಕೊಂಡು ಹೋಗಲಾಯಿತು. ಅಜ್ಞಾನವಿರದಿದ್ದರೆ ಸಮತೆಯ ಹೋರಾಟ ಎಂದೋ ಆರಂಭವಾಗಿರುತ್ತಿತ್ತು. ಬ್ರಾಹ್ಮಣ ಗುಣಗಳಿಂದ ನೀಚನಾಗಿದ್ದರೂ ಜಾತಿಯಿಂದ ಶ್ರೇಷ್ಠನಾಗಿರುತ್ತಾನೆ. ಗುಣಭೇದಗಳ ಈ ಅಂತರ ಕಡಿಮೆಯಾಗಬೇಕು. ಅದಕ್ಕಾಗಿ ಶಿಕ್ಷಣದ ಪ್ರಸಾರವಾಗಬೇಕು. ನಾವು ಜಾಗೃತರಾಗಬೇಕು. ಅವಕಾಶಗಳನ್ನು ಪಡೆದು ತಮ್ಮ ಪಾಲಿನವುಗಳನ್ನು ಗಿಟ್ಟಿಸಿಕೊಳ್ಳುವುದು ನಮಗೆ ಗೊತ್ತು. ಆದರೆ, ಶಿಕ್ಷಣವಿಲ್ಲದೇ ನಮಗದು ಸಾಧ್ಯವಾಗುತ್ತಿಲ್ಲ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ನಾನಿಲ್ಲಿ ಬೇಕೆಂದೇ ಕಸಿದುಕೊಳ್ಳಲು ಎಂದು ಶಬ್ದ ಉಪಯೋಗಿಸುತ್ತಿದ್ದೇನೆ, ಪ್ರಯತ್ನಿಸಬೇಕು. ಇದು ಮನುಷ್ಯತ್ವಕ್ಕಾಗಿ ನಡೆಸುವ ಹೋರಾಟ. ಅದಕ್ಕಾಗಿ ಸತ್ಯಾಗ್ರಹ ನಡೆಸಬೇಕಾಗಿರುವುದು ಕಡೆಯ ಉಪಾಯ. ನಾವಿಂದು ಸ್ವಕೀಯರು ಹಾಗೂ ಪರಕೀಯರಿಬ್ಬರೊಂದಿಗೂ ಸತ್ಯಾಗ್ರಹ ಮಾಡಬೇಕಿದೆ. ಇಬ್ಬರು ಯಾವ ರೀತಿಯ ಅನ್ಯಾಯ ಮಾಡುತ್ತಾರೋ ಆ ರೀತಿಯ ಉಪಾಯ ಅವರ ವಿರುದ್ಧ ಮಾಡಬೇಕಿದೆ. ಪುರಾಣದಲ್ಲಿ ಕೌರವ ಪಾಂಡವರಲ್ಲಿ ಇಷ್ಟು ದೊಡ್ಡ ಹೋರಾಟವೇಕಾಯಿತು? ಕೇವಲ ರಾಜ್ಯಕ್ಕಾಗಿ. ಅಸ್ಪಶ್ಯತೆ ಎಲ್ಲ ಸಮಾಜದ ಕಲ್ಯಾಣವಾಗಗೊಡಲಾರದು. ನಮ್ಮ ಅಂತಸ್ತನ್ನು ನಾವೇ ಹೆಚ್ಚಿಸಿಕೊಳ್ಳಬೇಕಿದೆ. ನಮ್ಮ ಉದ್ಧಾರಕ್ಕಾಗಿ ಈ ಹೋರಾಟ ನಾವು ಇಂದಲ್ಲ ನಾಳೆ ಮಾಡಲೇಬೇಕಿದೆ ಅನ್ನುವುದನ್ನು ನೆನಪಿಡಿ, ಇಲ್ಲದಿದ್ದರೆ ಮೇಲ್ಜಾತಿ ಜನರ ದುರಭಿಮಾನ ಹೋಗಲಾಡಿಸಲು ಸಾಧ್ಯವಿಲ್ಲ. ಗೊಡ್ಡು ಮತಗಳಿರುವ ಜನ ಎಲ್ಲೆಲ್ಲೋ ಇದ್ದಾರೆ. ಹಾಗಾಗಿ ನೀವು ಸ್ವಾವಲಂಬನೆಯ ದಾರಿ ಹಿಡಿಯಿರಿ ಎಂದಷ್ಟೇ ನನಗೆ ಹೇಳುವುದಿದೆ. ನಿಮ್ಮನ್ನು ಇದೇ ಸ್ಥಿತಿಯಲ್ಲಿಡಬೇಕು ಅನ್ನುವ ಅವರ ನಿರ್ಧಾರ ಬಹಳ ಗಟ್ಟಿಯಾಗಿದೆ. ನಿಮ್ಮ ಮಾಂಗ್‌ರ ವತನದ ಅಭಿಮಾನದಿಂದ ನೀವು ಎಷ್ಟು ಪರಾವಲಂಬಿಗಳಾಗಿದ್ದೀರಿ ಅನ್ನುವುದು ನಿಮಗೆ ಗೊತ್ತಿದೆಯೇ? ಈ ಮಾಂಗ್‌ರ ವತನದಿಂದಾಗಿ ಮಾಂಗ್ ಹಳ್ಳಿಗಳಲ್ಲೇ ಖಾಯಂ ಆಗಿ ಬಂದಿಗಳಾಗಿದ್ದಾರೆ.
 

ಮಾಂಗ್‌ನೆಂದರೆ ಸರಕಾರಿ ಭಿಕಾರಿ. ಈ ವತನದಿಂದ ಪ್ರತಿಯೊಂದು ಹಳ್ಳಿಯಲ್ಲಿ ಇಂತಹ ಭಿಕಾರಿಗಳು ಸರಕಾರಕ್ಕೆ ಸಿಕ್ಕಿದ್ದಾರೆ. ಮಾಂಗ್‌ರನ್ನು ಭಿಕಾರಿಗಳನ್ನಾಗಿ ಮಾಡುವ ಈ ವತನಗಳಿಗೆ ಮೊರೆಹೋಗದೆ ಧ್ಯೆರ್ಯದಿಂದ ಇದರ ವಿರುದ್ಧ ಹೋರಾಡಬೇಕಿದೆ. ತನ್ನ ಶಿಕ್ಷಣಕ್ಕಾಗಿ ಆತ ತನ್ನ ಸಹಾಯವನ್ನು ತಾನೇ ಮಾಡಿಕೊಳ್ಳಬೇಕಿದೆ. ಬೇರೆ ಯಾರೂ ಅವನಿಗೆ ಸಹಾಯ ಮಾಡಲಾರರು. ಉದಾರ ಮನಸ್ಸಿರುವವರು ಕೆಲವರು ಸಹಾಯ ಮಾಡಬಹುದೆನ್ನಿ. ಉದಾರಿಗಳ ಸಹಾಯ ಕೇವಲ ಎರವಲು. ಮಾಂಗ್ ಬಡವರಾದರೂ ಸಂಖ್ಯೆಯಲ್ಲಿ ಕಡಿಮೆಯಿದ್ದಾರೆಯೇ? ಅವರು ಒಗ್ಗಟ್ಟಾದರೆ ತಮ್ಮ ಶಿಕ್ಷಣದ ಪ್ರಶ್ನೆಯನ್ನು ತಾವೇ ಪರಿಹರಿಸಿಕೊಂಡಾರು. ಧಾರವಾಡ ಜಿಲ್ಲೆಯಲ್ಲಿ ಒಂದು ಲಕ್ಷದಷ್ಟು ಮಾಂಗ್‌ರಿರಬಹುದು, ಪ್ರತಿಯೊಬ್ಬರೂ ಒಂದೊಂದು ರೂಪಾಯಿ ತೆಗೆದರೆ ಒಂದು ಲಕ್ಷ ರೂಪಾಯಿಯಷ್ಟು ಹಣ ಒಟ್ಟು ಗೂಡುತ್ತದೆ. ಆ ಹಣದಿಂದ ನೂರು ಮಕ್ಕಳ ಬೋರ್ಡಿಂಗ್‌ನ ವ್ಯವಸ್ಥೆಯಾಗಬಹುದು. ಸದ್ಯಕ್ಕೆ ಇಲ್ಲೊಂದು ಸ್ಥಾಪನೆಯಾಗಿದೆ. ಅದೊಂದು ಸರಕಾರಿ ಆಶ್ರಮವಾಗಿದೆ. ಸಿಕ್ಕಿರುವ ಗ್ರಾಂಟ್ ಸಾಕಷ್ಟಿದೆ.

ಪ್ರತಿಯೊಬ್ಬ ವಿದ್ಯಾರ್ಥಿಗೆ ಹತ್ತು ರೂಪಾಯಿ ಸಿಗುತ್ತವೆ. ಉಳಿದ ಕಡೆಗಳಲ್ಲಿ ಇಷ್ಟೊಂದು ಮೊತ್ತದ ಸಹಾಯ ಸಿಗುವುದಿಲ್ಲ. ಸದ್ಯಕ್ಕೆ ಹದಿನೈದು ಮಕ್ಕಳ ವ್ಯವಸ್ಥೆಯಾಗಿದೆ. ಸ್ವಲ್ಪ ಹೋರಾಡಿದರೆ ಇನ್ನೂ ಹದಿನೈದು ಮಕ್ಕಳ ವ್ಯವಸ್ಥೆಯಾಗಬಹುದು. ಆದರೆ ಇಷ್ಟೆಲ್ಲ ಮಾಡುವುದಕ್ಕಿಂತ ನಿಮ್ಮ ಸಹಾಯ ನೀವೇ ಮಾಡಿಕೊಂಡರೆ ಒಳ್ಳೆಯದಲ್ಲವೇ? ಈಗ ಈ ವ್ಯವಸ್ಥೆ ಕೇವಲ ನಮ್ಮಲ್ಲಿದೆ. ನಾವಿರುವುದು ಮುಂಬೈಯಲ್ಲಿ, ಬೋರ್ಡಿಂಗ್ ಇರುವುದು ಇಲ್ಲಿ, ಅಂತರ ಸಾಕಷ್ಟು ದೂರವಿದೆ. ನಿಮಗೆ ಬೇಕಿರುವಂತಹ ವ್ಯವಸ್ಥೆ ಮಾಡಿಕೊಳ್ಳಲು ಒಂದು ಕಮಿಟಿಯನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ವ್ಯವಸ್ಥೆ ಮಾಡಿಕೊಳ್ಳಿ. ಧಾರವಾಡ ಜಿಲ್ಲೆಯ ದಲಿತ ವಿದ್ಯಾರ್ಥಿಗಳ ವ್ಯವಸ್ಥೆಯಾಗಿದೆ. ಇದಕ್ಕಿಂತ ಹೆಚ್ಚಿನ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಬಹುದು. ಹೀಗೆ ತಮ್ಮ ಬಾಂಧವರಿಗೆ ತೀವ್ರ ಕಳಕಳಿಯಿಂದ ಉಪದೇಶ ಮಾಡಿ ತನಗೆ ಅಧ್ಯಕ್ಷ ಸ್ಥಾನ ಕೊಟ್ಟು ಗೌರವಿಸಿದ್ದಕ್ಕಾಗಿ ಧನ್ಯವಾದಗಳನ್ನರ್ಪಿಸಿ ತಮ್ಮ ಭಾಷಣ ಮುಗಿಸಿದರು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)