varthabharthi


ಸಂಪಾದಕೀಯ

ಮಾಹಿತಿ ಹಕ್ಕು ಕಾಯ್ದೆಯ ಮೇಲೆ ದಾಳಿ

ವಾರ್ತಾ ಭಾರತಿ : 27 Jul, 2019

ಯುಪಿಎ ಅಧಿಕಾರಾವಧಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ವ್ಯಾಪಕ ಆರೋಪಗಳಿದ್ದರೂ, ಹಲವು ಮಹತ್ವದ ಜನಪರ ಕಾಯ್ದೆಗಳು ಜಾರಿಗೊಂಡಿರುವುದು ಈ ಸರಕಾರದ ಅವಧಿಯಲ್ಲಿ ಎನ್ನುವುದನ್ನು ನಾವು ಮರೆಯುವಂತಿಲ್ಲ. ಅದರಲ್ಲಿ ಮುಖ್ಯವಾದುದು ಮಾಹಿತಿ ಹಕ್ಕು ಕಾಯ್ದೆ. ಈ ಕಾಯ್ದೆ ಜಾರಿಗೊಂಡಂದಿನಿಂದ, ಮತದಾರರು ನಿಜವಾದ ಅರ್ಥದಲ್ಲಿ ಪ್ರಭುಗಳಾದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಅಧಿಕಾರಯುತವಾಗಿ ಪ್ರಶ್ನಿಸಲು ಈ ಕಾಯ್ದೆ ಸಹಾಯ ಮಾಡಿತು. ಮಾಹಿತಿ ಹಕ್ಕು ಕಾರ್ಯಕರ್ತರ ತಂಡಗಳು ಅಲ್ಲಲ್ಲಿ ರಚನೆಯಾದವು. ರಾಜಕಾರಣಿಗಳು ಮತ್ತು ಅಧಿಕಾರಿಗಳು ಈ ಕಾರ್ಯಕರ್ತರನ್ನು ಮಟ್ಟಹಾಕಲು ಪ್ರಯತ್ನ ನಡೆಸುತ್ತಾ ಬಂದಿದ್ದಾರಾದರೂ, ಕಾಯ್ದೆಯ ಬಲದಿಂದಾಗಿ ಅವರು ಈವರೆಗೆ ಯಶಸ್ವಿಯಾಗಿಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡೇ ಯುಪಿಎ ಸರಕಾರದ ಹಲವು ಭ್ರಷ್ಟಾಚಾರಗಳನ್ನು ಬಯಲುಗೊಳಿಸಲಾಯಿತು. ಆದರೂ ಈ ಕಾಯ್ದೆಗೆ ಕೊನೆಯವರೆಗೂ ಯುಪಿಎ ಬದ್ಧವಾಗಿಯೇ ಉಳಿದಿತ್ತು. ದುರದೃಷ್ಟವಶಾತ್, ಕಾಂಗ್ರೆಸ್ ಭ್ರಷ್ಟಾಚಾರಗಳ ಕಡೆಗೆ ಬೆರಳು ತೋರಿಸಿ ಅಧಿಕಾರ ಹಿಡಿದಿರುವ ಮೋದಿ ನೇತೃತ್ವದ ಸರಕಾರ ಈ ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾಗಿದೆ.

ಕಾಯ್ದೆಯನ್ನು ದುರ್ಬಲಗೊಳಿಸುವುದೆಂದರೆ ಸರಕಾರವನ್ನು ಪ್ರಶ್ನಿಸುವ ನಾಗರಿಕರ ಹಕ್ಕುಗಳನ್ನು ಮೊಟಕುಗೊಳಿಸುವುದು ಎಂದೇ ಅರ್ಥ. ಆರ್‌ಟಿಐ ಕಾಯ್ದೆಯ ಕುರಿತಂತೆ ಯುಪಿಎ ಸರಕಾರಕ್ಕಿಲ್ಲದ ಭಯ, ನರೇಂದ್ರ ಮೋದಿ ಸರಕಾರಕ್ಕೆ ಯಾಕಿದೆ? ಎನ್ನುವ ಪ್ರಶ್ನೆ ಚರ್ಚೆಗೆ ಅರ್ಹವಾಗಿದೆ. ಭ್ರಷ್ಟ ಸರಕಾರವಷ್ಟೇ ಮಾಹಿತಿಗಳನ್ನು ಬಹಿರಂಗಗೊಳಿಸಲು ಹಿಂದೇಟು ಹಾಕಬೇಕು. ಕಾಂಗ್ರೆಸನ್ನು ಭ್ರಷ್ಟವೆಂದು ಕರೆಯುವ ಮೋದಿ ಸರಕಾರ, ಯಾಕೆ ಆರ್‌ಟಿಐ ವಿರುದ್ಧ ತನ್ನ ಖಡ್ಗ ಝಳಪಿಸುತ್ತಿದೆ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿಯವರೇ ಉತ್ತರಿಸಬೇಕಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಹಿಡಿದ ಬಳಿಕ ಹಲವು ಉನ್ನತ ತನಿಖಾ ಸಂಸ್ಥೆಗಳ ಹಲ್ಲುಗಳನ್ನು ಕಿತ್ತು ಹಾಕಿದ್ದಾರೆ. ಮಾತ್ರವಲ್ಲ, ಅವುಗಳನ್ನು ತನ್ನ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿವೆ. ಆದರೆ ಆರ್‌ಟಿಐಗೆ ಕೈ ಇಕ್ಕುವ ಮೂಲಕ ಈ ದೇಶದ ಪ್ರಜೆಗಳ ಹಕ್ಕುಗಳನ್ನು ದಮನಿಸಲು ಹೊರಟಿದ್ದಾರೆ.

2005ರ ಆರ್‌ಟಿಐ(ಮಾಹಿತಿ ಹಕ್ಕು ಕಾಯ್ದೆ) ಕಾಯ್ದೆಯ ಪ್ರಕಾರ ರಾಜ್ಯ ಮತ್ತು ಕೇಂದ್ರ ಮಾಹಿತಿ ಆಯೋಗಗಳ ಕಾರ್ಯಾವಧಿ ಐದು ವರ್ಷ ಇರುತ್ತದೆ. ಆದರೆ ತಿದ್ದುಪಡಿಯ ಪ್ರಕಾರ ಆಯೋಗಗಳ ಕಾರ್ಯಾವಧಿಯನ್ನು ಕೇಂದ್ರ ಸರಕಾರ ನಿಗದಿಗೊಳಿಸುತ್ತದೆ. ಮಂಡಿಸಲಾಗಿರುವ ಮಸೂದೆಯು ರಾಜ್ಯ ಮತ್ತು ಕೇಂದ್ರ ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ವೇತನವನ್ನು ನಿಗದಿಗೊಳಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿದೆ. ಈ ಮೂಲಕ ಆಯುಕ್ತರ ಸಂಪೂರ್ಣ ನಿಯಂತ್ರಣ ತನ್ನ ಕೈಯಲ್ಲಿರಬೇಕು ಎನ್ನುವುದನ್ನು ಸರಕಾರ ಬಯಸಿದೆ. ಜೊತೆಗೆ ಆಯುಕ್ತರ ವೇತನಗಳನ್ನು ನಿಗದಿ ಪಡಿಸುವ ಅಧಿಕಾರವನ್ನು ಕೇಂದ್ರ ಸರಕಾರ ತನ್ನದಾಗಿಸಿಕೊಂಡಿದೆ. ಮೂಲ ಕಾಯ್ದೆಯ ಪ್ರಕಾರ, ಪ್ರಧಾನ ಮಾಹಿತಿ ಆಯುಕ್ತ(ಸಿಐಸಿ)ರಿಗೆ ಮುಖ್ಯ ಚುನಾವಣಾ ಆಯುಕ್ತರಷ್ಟೇ ವೇತನ ಹಾಗೂ ಮಾಹಿತಿ ಆಯುಕ್ತ(ಐಸಿ)ರಿಗೆ ಚುನಾವಣಾ ಆಯುಕ್ತರಷ್ಟೇ ವೇತನ ನಿಗದಿಗೊಳಿಸುತ್ತದೆ. ತಿದ್ದುಪಡಿ ಮಸೂದೆಯ ಪ್ರಕಾರ ಪ್ರಧಾನ ಮಾಹಿತಿ ಆಯುಕ್ತ ಹಾಗೂ ಮಾಹಿತಿ ಆಯುಕ್ತರ ವೇತನ ನಿಗದಿಗೊಳಿಸುವ ಅಧಿಕಾರ ಕೇಂದ್ರ ಸರಕಾರದ್ದಾಗಿದೆ.

ಅಷ್ಟೇ ಅಲ್ಲ, ಅವರ ವೇತನಗಳನ್ನು ಬೇರೆ ಬೇರೆ ರೀತಿಯಲ್ಲಿ ಕಡಿತಗೊಳಿಸಲು ಕೇಂದ್ರ ಸರಕಾರಕ್ಕೆ ಪೂರ್ಣ ಅವಕಾಶ ಸಿಕ್ಕಿದಂತಾಗಿದೆ. ಸಂವಿಧಾನದಡಿ ಮೂಲಭೂತ ಹಕ್ಕು ಎಂದು ಪರಿಗಣಿಸಲ್ಪಟ್ಟಿರುವ ಮಾಹಿತಿಗಳನ್ನು ಪಡೆಯುವ ಹಕ್ಕುಕೋರಿಕೆಯ ಬಗ್ಗೆ ನಿರ್ಣಯಿಸುವ ಅಂತಿಮ ಅಧಿಕಾರ ಮಾಹಿತಿ ಹಕ್ಕು ಆಯೋಗಕ್ಕಿರುತ್ತದೆ . ಆದರೆ ಆಯೋಗದ ಕಾರ್ಯನಿರ್ವಹಣೆಯನ್ನು ಸರಕಾರ ನಿಯಂತ್ರಿಸುವುದರಿಂದ ಮಾಹಿತಿ ಹಕ್ಕು ಆಯೋಗವನ್ನು ಮೂಲಭೂತವಾಗಿ ದುರ್ಬಲಗೊಳಿಸಿದಂತಾಗಿದೆ. ಆಯೋಗಕ್ಕೆ ಸ್ವತಂತ್ರ ಕಾರ್ಯನಿರ್ವಹಣೆ ಅಸಾಧ್ಯ ಮಾತಾಗಲಿದೆ. ಸರಕಾರ ತನಗೆ ನಿಷ್ಠರಾದ ಅಧಿಕಾರಿಗಳನ್ನು ಮಾಹಿತಿ ಹಕ್ಕು ಆಯುಕ್ತರನ್ನಾಗಿ ಮಾಡಲು ಪೂರ್ಣ ಅವಕಾಶವಿರುವುದರಿಂದ, ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ.

ಹೇಗೆ ಸರಕಾರದ ಹಸ್ತಕ್ಷೇಪದೊಂದಿಗೆ ಸಿಬಿಐ ತನ್ನ ಸ್ವಂತಿಕೆಯನ್ನು ಕಳೆದುಕೊಂಡಿತೋ, ಮಾಹಿತಿ ಆಯುಕ್ತರ ಸ್ಥಿತಿ ಅದಕ್ಕಿಂತಲೂ ಹೀನಾಯವಾಗಲಿದೆ. ಆಯುಕ್ತರಿಗೆ ನಿರ್ದಿಷ್ಟ ಅಧಿಕಾರಾವಧಿ ಇರದಿದ್ದರೆ ಮತ್ತು ಅವರಿಗೆ ಯಾವುದೇ ಪದನಾಮ ಇರದಿದ್ದರೆ ಅವರು ಅಧಿಕಾರಿಗಳಿಗೆ ಆದೇಶ ನೀಡಲು ಸಾಧ್ಯವೇ? ಅವರು ಅಧಿಕಾರಿಗಳಿಗೆ ಆದೇಶ ನೀಡಲು ಸಾಧ್ಯವಿಲ್ಲದಿದ್ದರೆ, ಆಯುಕ್ತರು ಎಲ್ಲಿಂದ ಮಾಹಿತಿಯನ್ನು ಪಡೆಯುತ್ತಾರೆ? ಮಾಹಿತಿ ಆಯುಕ್ತರು ಸರಕಾರಿ ಪ್ರಾಧಿಕಾರಕ್ಕೆ ಆದೇಶ ನೀಡಬೇಕು, ಮಾಹಿತಿ ಅಧಿಕಾರಿಗೆ ಆದೇಶ ನೀಡುವುದಲ್ಲ. ಆದರೆ ಈಗ ಹೀಗೆ ಆದೇಶ ನೀಡಲು ಆಗುವುದಿಲ್ಲ ಯಾಕೆಂದರೆ, ಅವರು ಜಂಟಿ ಕಾರ್ಯದರ್ಶಿಗಳಲ್ಲ ಅಥವಾ ಉಪ ಕಾರ್ಯದರ್ಶಿಗಳಲ್ಲ. ಆಯುಕ್ತರನ್ನು ವಜಾಗೊಳಿಸುವ ಸಂದರ್ಭದಲ್ಲಿ ಸ್ವಾತಂತ್ರದ ಮಹತ್ವವು ಪರಿಗಣನೆಗೆ ಬರುತ್ತದೆ. ಅವರ ಅಧಿಕಾರಾವಧಿಯನ್ನು ನಿಗದಿಗೊಳಿಸದೆ ಮತ್ತು ಕಡಿವೆುಗೊಳಿಸುವ ಮೂಲಕ ಒಟ್ಟಾರೆ ಈ ವಿಷಯದಲ್ಲಿ ಅನಿಶ್ಚಿತತೆ ಮೂಡಿಸಲು ಸರಕಾರ ಪ್ರಯತ್ನಿಸಬಹುದಾಗಿದೆ. ವಿಪರ್ಯಾಸವೆಂದರೆ, ಸರಕಾರದ ಈ ತಿದ್ದುಪಡಿ ಯತ್ನದ ವಿರುದ್ಧ ರಾಜಕಾರಣಿಗಳು ನಿರೀಕ್ಷಿಸಿದ ಮಟ್ಟಿಗೆ ತಮ್ಮ ಪ್ರತಿಭಟನೆಗಳನ್ನು ವ್ಯಕ್ತಪಡಿಸಿಲ್ಲ. ಯಾಕೆಂದರೆ ಈ ತಿದ್ದುಪಡಿಗಳ ಕುರಿತಂತೆ ಎಲ್ಲ ರಾಜಕಾರಣಿಗಳೂ ಒಳಗೊಳಗೆ ಒಲವನ್ನು ಹೊಂದಿದ್ದಾರೆ. ಬಹುತೇಕ ಆಳುವವರಿಗೂ, ಅಧಿಕಾರಿಗಳಿಗೂ ಆರ್‌ಟಿಐ ಗಂಟಲ ಮುಳ್ಳಾಗಿರುವುದರಿಂದ ಅವರೆಲ್ಲರೂ ಆರ್‌ಟಿಐ ತಿದ್ದುಪಡಿಗಳಿಗೆ ತಮ್ಮ ತಮ್ಮ ವೌನ ಸಮ್ಮತವನ್ನು ವ್ಯಕ್ತಪಡಿಸಿದ್ದಾರೆ.

ಒಂದೆಡೆ ಮಾಹಿತಿ ಹಕ್ಕು ಕಾರ್ಯಕರ್ತರ ಜೀವ ಆಪತ್ತಿನಲ್ಲಿದೆ. ಹಲವರು ಕೊಲೆಯಾಗಿದ್ದಾರೆ. ಹಲವರ ಮೇಲೆ ಹಲ್ಲೆಗಳು ನಡೆದಿವೆ. ಉಳಿದವರು ನಿರಂತರ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ, ಇದೀಗ ಆರ್‌ಟಿಐ ಕಾಯ್ದೆಯ ಮೇಲೆಯೇ ಬಹಿರಂಗ ದಾಳಿ ನಡೆದಿದೆ. ಹೀಗಿರುವಾಗ ಕಾರ್ಯಕರ್ತರ ಹೋರಾಟಕ್ಕೆ ಇನ್ನಷ್ಟು ಅಡ್ಡಿ ಆತಂಕಗಳು ಎದುರಾಗಲಿವೆ. ಮಾಹಿತಿಗಳನ್ನು ಪಡೆಯುವುದಿರಲಿ, ಸರಕಾರದಿಂದ ಮಾಹಿತಿ ಕೇಳಿದ ಕಾರಣಕ್ಕಾಗಿಯೇ ವ್ಯವಸ್ಥೆಯಿಂದ ಉಗ್ರಗಾಮಿಗಳು, ಬ್ಲಾಕ್‌ಮೇಲರ್‌ಗಳು, ನಗರ ನಕ್ಸಲರು ಎಂಬಿತ್ಯಾದಿ ಬಿರುದುಗಳ ಜೊತೆಗೆ ಹೋರಾಟಗಾರರು ಜೈಲು ಸೇರುವ ಸಾಧ್ಯತೆಗಳಿವೆ. ಮಾಹಿತಿ ಆಯುಕ್ತರು ಇದಕ್ಕೆ ವೌನ ಸಾಕ್ಷಿಯಾಗಿ ಉಳಿಯಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)