varthabharthi


ವೈವಿಧ್ಯ

ಭಾರತದ ಶಿಕ್ಷಣ ನೀತಿ ಎಡವುತ್ತಿದೆಯೇ?

ವಾರ್ತಾ ಭಾರತಿ : 27 Jul, 2019
ಅಬುಸಾಲಿಹ್ ಶರೀಫ್

ಸರ್ವರಿಗೂ ಕೈಗೆಟಕುವ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಅಗತ್ಯದ ಕುರಿತ ದೂರದರ್ಶಿತ್ವವನ್ನು ಡಿಎನ್‌ಇಪಿ19 ವರದಿ ನಮ್ಮ ಮುಂದಿಡುತ್ತದೆ. ನಾಲ್ಕು ಭಾಗಗಳೊಂದಿಗೆ 477 ಪುಟಗಳನ್ನು ಒಳಗೊಂಡ ಈ ಕರಡು ಪ್ರತಿ ಒಟ್ಟು 23 ಅಧ್ಯಾಯಗಳನ್ನು ಒಳಗೊಂಡಿದೆ. ಆದರೂ, ಇದು ಪ್ರಚಲಿತ ಸಮಸ್ಯೆಗಳನ್ನು ಸ್ಪಂದಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳನ್ನು ನಡೆಸಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ-2019 (ಡಿಎನ್‌ಇಪಿ19) ಕರಡು ಪ್ರತಿಯು ಖಂಡಿತವಾಗಿಯೂ ಓದಲೇ ಬೇಕಾದ ದಾಖಲೆಯಾಗಿದೆ ಹಾಗೂ ತಾನು ಹೊಂದಿರುವ ಜನ ಸಂಪನ್ಮೂಲದ ಲಾಭವನ್ನು ಅದು ಸದುಪಯೋಗಪಡಿಸಿಕೊಳ್ಳುವ ಭಾರತದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ. ತ್ವರಿತಗತಿಯ ಅರ್ಥಿಕ ಅಭಿವೃದ್ಧಿಯು ಯುವ ಕಾರ್ಮಿಕ ಶಕ್ತಿಯ ಗುಣಮಟ್ಟವನ್ನು ಆಧರಿಸಿದೆ. ಆದರೆ ಶಿಕ್ಷಣ ಸೇರಿದಂತೆ ಮಾನವ ಅಭಿವೃದ್ಧಿಯಲ್ಲಿ ಸಮರ್ಪಕವಾದ ಹೂಡಿಕೆಗಳನ್ನು ಮಾಡಿದಲ್ಲಿ ಮಾತ್ರವೇ ವೌಲ್ಯಯುತವಾದ ಯುವಕಾರ್ಮಿಕ ಶಕ್ತಿಯಿಂದ ಮಾತ್ರವೇ ಇದನ್ನು ಸಾಧಿಸಲು ಸಾಧ್ಯವಿದೆ. ಬಡತನ ಹಾಗೂ ಅಸಮಾನತೆಗೆ ಕೊನೆಹಾಡುವುದಕ್ಕೆ ಶಿಕ್ಷಣವು ಶಕ್ತಿಯುತವಾದ ಸಾಧನವಾಗಿದೆ ಹಾಗೂ ಜಾಗತಿಕ ಅರ್ಥಿಕತೆಯಲ್ಲಿ ಸ್ಪರ್ಧಾತ್ಮಕತೆಗೆ ಅದು ಉತ್ತೇಜನವನ್ನು ನೀಡುತ್ತದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಭಾರತದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಕೇಂದ್ರ ಬಿಂದುವಾಗಿದೆಯೆಂದು ವಿಶ್ವಬ್ಯಾಂಕ್ ಪ್ರತಿಪಾದಿಸಿದೆ.
ಸರ್ವರಿಗೂ ಕೈಗೆಟಕುವ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಅಗತ್ಯದ ಕುರಿತ ದೂರದರ್ಶಿತ್ವವನ್ನು ಡಿಎನ್‌ಇಪಿ19 ವರದಿ ನಮ್ಮ ಮುಂದಿಡುತ್ತದೆ. ನಾಲ್ಕು ಭಾಗಗಳೊಂದಿಗೆ 477 ಪುಟಗಳನ್ನು ಒಳಗೊಂಡ ಈ ಕರಡು ಪ್ರತಿ ಒಟ್ಟು 23 ಅಧ್ಯಾಯಗಳನ್ನು ಒಳಗೊಂಡಿದೆ. ಆದರೂ, ಇದು ಪ್ರಚಲಿತ ಸಮಸ್ಯೆಗಳನ್ನು ಸ್ಪಂದಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳನ್ನು ನಡೆಸಿಲ್ಲ.
ಈ ಕರಡು ಪ್ರತಿಯು ಒಳಗೊಂಡಿರಬೇಕಾದಂತಹ ಐದು ಅಂಶಗಳ ಬಗ್ಗೆ ನಾನು ಚರ್ಚಿಸಲಿದ್ದೇನೆ. ಒಂದನೆಯದಾಗಿ ಶಿಕ್ಷಣಕ್ಕೆ ಆರ್ಥಿಕ ನಿಧಿ ಪೂರೈಕೆ, ಎರಡನೆಯದಾಗಿ ಖಾಸಗೀಕರಣ, ಮೂರನೆಯದಾಗಿ ತಂತ್ರಜ್ಞಾನದ ಮೂಲಕ ಸಮಾನತೆಗೆ ಉತ್ತೇಜನ, ನಾಲ್ಕನೆಯದಾಗಿ ಶಿಕ್ಷಣದ ಮಾಧ್ಯಮವಾಗಿ ಇಂಗ್ಲಿಷ್ ಬಳಕೆ.
ಭಾರತದ ಪ್ರಸಕ್ತ ಶಿಕ್ಷಣದ ಪರಿಸ್ಥಿತಿಯನ್ನು ಗಮನಿಸಿದರೆ, ಈ ವರದಿಯು ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣದಲ್ಲಿ ಸಾರ್ವಜನಿಕ ಹೂಡಿಕೆಗಳ ಪ್ರಯೋಜನಗಳನ್ನು ಚರ್ಚಿಸುತ್ತವೆ.
ಡಿಎನ್‌ಇಪಿ 19, ಸರಕಾರದ ವಾರ್ಷಿಕ ಆದಾಯದಲ್ಲಿ ಶೇ.20ರಷ್ಟು ಶಿಕ್ಷಣಕ್ಕಾಗಿ ಹೂಡಿಕೆ ಮಾಡಬೇಕೆಂದು ಪ್ರತಿಪಾದಿಸುತ್ತದೆ. ಆದರೆ ಶಿಕ್ಷಣ ವಲಯದಲ್ಲಿ ಭಾರತವು ಯಾಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡಿದಷ್ಟು ಪ್ರಮಾಣ( ಒಟ್ಟು ಜಿಡಿಪಿಯ ಶೇ.6ರಷ್ಟು)ದಲ್ಲಿ ಹಣವನ್ನು ಶಿಕ್ಷಣಕ್ಕಾಗಿ ವ್ಯಯಿಸುತ್ತಿಲ್ಲವೆಂಬ ಬಗ್ಗೆ ಪರಾಮರ್ಶೆ ನಡೆಸುವುದನ್ನು ಮರೆತಿದೆ. ಶಿಕ್ಷಣಕ್ಕೆ ಪ್ರಸಕ್ತ ಭಾರತದಲ್ಲಿ ನೀಡಲಾಗುವ ಅನುದಾನ (ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ)ವು ಒಟ್ಟು ಜಿಡಿಪಿಯ ಕೇವಲ 3 ಶೇಕಡದಷ್ಟಾಗಿದೆ.
ಶಿಕ್ಷಣದಲ್ಲಿ ಖಾಸಗಿ ಹೂಡಿಕೆಗಳ ಪಾತ್ರ ಹಾಗೂ ದೇಶಾದ್ಯಂತ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪ್ರಸರಣೆಯ ಬಗ್ಗೆಯೂ ವರದಿಯಲ್ಲಿ ಚರ್ಚಿಸಲಾಗಿಲ್ಲ. ಗುಣಮಟ್ಟದಲ್ಲಿ ರಾಜಿಯಾಗುವ ಜೊತೆಗೆ ಖಾಸಗಿ ಶಾಲೆಗಳು ಹಾಗೂ ಸ್ವಚ್ಛಂದ ಹಾಗೂ ಅನಿಯಂತ್ರಿತ ಬೆಳವಣಿಗೆಯು ದೇಶದಲ್ಲಿ ಸಾಮಾಜಿಕ ಅಸಮಾನತೆಗಳನ್ನು ಹೆಚ್ಚಿಸುತ್ತದೆಯಷ್ಟೇ.
     71ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ (ನ್ಯಾಶನಲ್ ಸ್ಯಾಂಪಲ್ ಸರ್ವೇ)ಯ ಪ್ರಕಾರ, ಶೇ.21ರಷ್ಟು ಗ್ರಾಮೀಣ ಹಾಗೂ ಶೇ.42ರಷ್ಟು ನಗರಪ್ರದೇಶದ ಶಾಲಾ ಮಕ್ಕಳು ಖಾಸಗಿ- ಅನುದಾನರಹಿತ ಶಾಲೆಗಳಲ್ಲಿ ದಾಖಲಾಗಿದ್ದಾರೆ. 6ರಿಂದ 18 ವರ್ಷ ವಯಸ್ಸಿನ ಸುಮಾರು 5 ಕೋಟಿ ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಸಾರ್ವಜನಿಕ ರಂಗದ ಸಂಸ್ಥೆಗಳ ಮೂಲಕ ನೀಡುವುದು ಅತ್ಯಂತ ಮುಖ್ಯವಾಗಿದೆ. ಪರಸ್ಪರ ಭ್ರಾತೃತ್ವದ ಭಾವನೆ ಹಾಗೂ ರಾಷ್ಟ್ರವಾದವನ್ನು ಮೂಡಿಸುವುದಕ್ಕಾಗಿ ವಿವಿಧ ಜಾತಿ, ವರ್ಗಗಳು ಹಾಗೂ ಧರ್ಮಗಳಿಗೆ ಸೇರಿದ ಮಕ್ಕಳನ್ನು ಇಂತಹ ಶಾಲೆಗಳಲ್ಲಿ ಕಲಿಸುವುದು ಅಗತ್ಯವಾಗಿದೆ. ಜಾತಿ, ಧರ್ಮ, ವರ್ಗ ಹಾಗೂ ಭಾಷೆಯ ಆಧಾರದಲ್ಲಿ ಮಕ್ಕಳನ್ನು ಬೇರ್ಪಡಿಸಿ, ಪ್ರಾಥಮಿಕ ಶಿಕ್ಷಣವನ್ನು ನೀಡಲಾಗುತ್ತಿರುವುದು ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆಯ ಬೆಳವಣಿಗೆಗೆ ಒಂದು ಮುಖ್ಯ ಕಾರಣವಾಗಿದೆ.
ಶಿಕ್ಷಣದ ಮೇಲೆ ಕುಟುಂಬಗಳು ವೆಚ್ಚಮಾಡುವ ಆದಾಯದ ಪಾಲನ್ನು ಅಂದಾಜಿಸಲು ಕೂಡಾ ವರದಿಯು ವಿಫಲವಾಗಿದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಹೀಗೆ ಶಿಕ್ಷಣದ ಪ್ರತಿ ಹಂತದಲ್ಲೂ ಹಣಕಾಸು ಒದಗಿಸುವಿಕೆಯು ಬಹುದೊಡ್ಡ ಸವಾಲಾಗಿದೆ.
21ನೇ ಶತಮಾನದಲ್ಲಿ ತಂತ್ರಜ್ಞಾನದ ಪ್ರಗತಿಯು ವಿಶ್ವದಾದ್ಯಂತ ಅತ್ಯಂತ ಜಾತ್ಯತೀತ ಹಾಗೂ ಶಿಕ್ಷಣದ ಸಮಾನತೆಗೆ ಕಾರಣವಾಗಿದೆ. ಖಾನ್ ಅಕಾಡಮಿಯ ಆನ್‌ಲೈನ್ ಶಿಕ್ಷಣ ಇದಕ್ಕೊಂದು ಉದಾಹಣೆಯಾಗಿದೆ. ಖಾನ್ ಅಕಾಡಮಿಯ ಜ್ಞಾನ ಪ್ರಸಾರವನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಕೂಡಾ ಬಳಸಿಕೊಳ್ಳುತ್ತಿದ್ದಾರೆ. ಇಂತಹ ತಂತ್ರಜ್ಞಾನದ ವೇದಿಕೆಗಳನ್ನು ಪ್ರಾಥಮಿಕ, ಮಾಧ್ಯಮಿಕ ಹಾಗೂ ಹೈಸ್ಕೂಲ್ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತ್ವರಿತವಾಗಿ ಬಳಸಿಕೊಳ್ಳಬೇಕಾಗಿದೆ. ಈ ತಂತ್ರಜ್ಞಾನದ ಮೂಲಕ ಧಾರಾವಿ, ಮುಂಬೈ ಅಥವಾ ರಾಮಪುರದಲ್ಲಿರುವ ಮಗುವೊಂದು ಅಮೆರಿಕದ ಅತ್ಯುತ್ತಮ ಶಾಲೆಗಳಲ್ಲೊಂದಾದ ವಾಶಿಂಗ್ಟನ್‌ನ ಥಾಮಸ್ ಜೆಫರ್ಸನ್ ಹೈಸ್ಕೂಲ್‌ನ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿದೆ.
ಜಗತ್ತಿನಾದ್ಯಂತದ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಹಕ್ಕಿದೆ ಹಾಗೂ ಅದನ್ನು ಕೈಗೆಟಕುವ ರೀತಿಯಲ್ಲಿ ಒದಗಿಸಬೇಕಾಗಿದೆ. ಇದಕ್ಕೆ ತಂತ್ರಜ್ಞಾನವು ಒಂದು ಪರಿಹಾರವನ್ನು ತೋರಿಸಿಕೊಟ್ಟಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ.
ಶಾಸ್ತ್ರೀಯ ಭಾಷೆಗಳು, ಮಾತೃಭಾಷೆಗಳು ಹಾಗೂ ಪ್ರಾದೇಶಿಕ ಭಾಷೆಗಳ ಅಧ್ಯಯನದ ಮೂಲಕ ನಮ್ಮ ಸಂಸ್ಕೃತಿಯನ್ನು ರಕ್ಷಿಸುವ ಹಾಗೂ ಉತ್ತೇಜಿಸುವ ಅಗತ್ಯವಿದೆ ಎಂದು ಡಿಎನ್‌ಇಪಿ19 ಪ್ರತಿಪಾದಿಸಿರುವುದನ್ನು ನಾನು ಗೌರವಿಸುತ್ತೇನೆ. ಆದಾಗ್ಯೂ, ಭಾರತದಲ್ಲಿ ಇಂಗ್ಲಿಷ್ ಭಾಷಾ ಜ್ಞಾನವು ಆದಾಯ ವೃದ್ಧಿಗೆ ದಾರಿ ಮಾಡಿಕೊಡುತ್ತದೆಯೆಂಬುದನ್ನು ಯಾರೂ ಕೂಡಾ ಅಲ್ಲಗಳೆಯುವಂತಿಲ್ಲ. ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವವರು, ಇಂಗ್ಲಿಷ್ ಭಾಷೆಯ ಜ್ಞಾನವಿಲ್ಲದವರಿಗಿಂತ ಮೂರು ಪಟ್ಟು ಹೆಚ್ಚು ಆದಾಯವನ್ನು ಹೊಂದಿರುತ್ತಾರೆಂಬುದು ವಾಸ್ತವ. ಈ ಅಂಶವನ್ನು ಕಡೆಗಣಿಸಿ, ಡಿಎನ್‌ಇಪಿ 19 ವರದಿಯು, ಭಾಷಾ ಬಲೆಯನ್ನು ಇರಿಸಿದೆ. ಇದರಿಂದಾಗಿ ಸಾಮಾಜಿಕ ಅಸಮಾನತೆ ಸೃಷ್ಟಿಯಾಗಲಿದೆ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಹಿನ್ನಡೆಯಾಗಲಿದೆ.
 ಜನಸಮೂಹಕ್ಕೆ ಶಿಕ್ಷಣವನ್ನು ಒದಗಿಸುವಲ್ಲಿ ರಾಜ್ಯ ಸರಕಾರಗಳ ಪಾತ್ರದ ಬಗ್ಗೆ ವರದಿಯು ಹೆಚ್ಚು ಒತ್ತು ನೀಡಿಲ್ಲ. ಪ್ರಾತಿನಿಧ್ಯ ಪಡೆಯದ ಗುಂಪುಗಳನ್ನು ಗುರಿಯಿರಿಸಿಕೊಂಡು ವಿಶೇಷ ಶಿಕ್ಷಣ ವಲಯಗಳನ್ನು ಸ್ಥಾಪಿಸುವ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ ಶಿಕ್ಷಣದಲ್ಲಿ ಹಿಂದುಳಿದಿರುವ ರಾಜ್ಯಗಳನ್ನು ಗುರುತಿಸದೆ ಹಾಗೂ ಅವುಗಳನ್ನು ಸಮೀಪಿಸದೆ ಇದ್ದಲ್ಲಿ ಅಂತಹ ಕಾರ್ಯತಂತ್ರವು ಅಂತಿಮವಾಗಿ ವಿಫಲವಾಗುತ್ತದೆ.
ಸರ್ವಶಿಕ್ಷ ಅಭಿಯಾನದ ಮೂಲಕ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ನಡೆಸಲಾದ ಪ್ರಯತ್ನಗಳನ್ನು ಡಿಎನ್‌ಇಪಿ19 ವರದಿಯು ಅಂದಾಜಿಸಿಲ್ಲ ಹಾಗೂ ಪರಾಮರ್ಶಿಸಿಲ್ಲ. ರಾಷ್ಟ್ರೀಯ ಶಿಕ್ಷಾ ಆಯೋಗವನ್ನು ಅಥವಾ ರಾಷ್ಟ್ರೀಯ ಶಿಕ್ಷಣ ಆಯೋಗವನ್ನು ಹೇಗೆ ಸ್ಥಾಪಿಸುವುದು ಹಾಗೂ ಅದನ್ನು ಹೇಗೆ ನಿರ್ವಹಿಸುವುದು ಎಂಬ ಬಗ್ಗೆ ವಿವರಿಸಲು ಒಂದು ಇಡೀ ಅಧ್ಯಾಯವನ್ನು ಡಿಎನ್‌ಇಪಿ19 ವರದಿಯು ಮೀಸಲಿರಿಸಿದೆ. ಇದು ಶೈಕ್ಷಣಿಕ ವ್ಯವಸ್ಥೆಯ ಕೇಂದ್ರೀಕರಣದೆಡೆಗೆ ಬೆಟ್ಟು ಮಾಡಿ ತೋರಿಸುತ್ತದೆ. ಇದು ಆರ್ಥಿಕತೆಗೆ ಮಾತ್ರವಲ್ಲ ಸಾಮಾಜಿಕ ಸೌಹಾರ್ದಕ್ಕೂ ವಿರೋಧಿಯಾಗಿದೆ.
ಕೃಪೆ: indianexpress.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)