varthabharthi


ಸಿನಿಮಾ

ಹನ್ನೆರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಿದ ಶಿಲ್ಪಾ ಶೆಟ್ಟಿ

ವಾರ್ತಾ ಭಾರತಿ : 28 Jul, 2019

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್ ಸಿನೆಮಾಗಳಲ್ಲಿ ತನ್ನದೇ ಛಾಪು ಬಿಟ್ಟ ನಟಿ. ಬಾಝಿಗರ್, ಮೈ ಖಿಲಾಡಿ ತೂ ಅನಾಡಿ ಯಂತಹ ಸೂಪರ್ ಹಿಟ್ ಸಿನೆಮಾಗಳಲ್ಲಿ ನಟಿಸಿರುವ ಶಿಲ್ಪಾ ವಿವಾಹದ ನಂತರ ಸಿನೆಮಾರಂಗದಿಂದ ದೂರವೇ ಉಳಿದಿದ್ದರು. ಅವರ ಕೊನೆಯ ಸಿನೆಮಾ ಧರ್ಮೇಂದ್ರ, ಸನ್ನಿ ಮತ್ತು ಬಾಬಿ ಡಿಯೋಲ್ ಅಭಿನಯದ ‘ಅಪ್ನೆ’ 2007ರಲ್ಲಿ ತೆರೆಕಂಡಿತ್ತು.

ಸದ್ಯ ಶಿಲ್ಪಾ ಹೆಸರಾಂತ ಚಿತ್ರ ನಿರ್ದೇಶಕ ಅಝೀಝ್ ಮಿರ್ಝಾ ಅವರ ಪುತ್ರ ಹರೂನ್ ಅವರ ನಿರ್ದೇಶನದ ಚೊಚ್ಚಲ ಸಿನೆಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ರಮೇಶ್ ತೌರಾನಿ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ದಿಲ್ಜಿತ್ ದೊಸಾಂಜ್ ಮತ್ತು ಯಾಮಿ ಗೌತಮ್ ಕೂಡಾ ನಟಿಸುತ್ತಿದ್ದಾರೆ. ಹೆಸರಿಡದ ಈ ಹಾಸ್ಯ ಪ್ರಧಾನ ಚಿತ್ರದಲ್ಲಿ ಶಿಲ್ಪಾ ಓರ್ವ ಲೇಖಕಿಯ ಪಾತ್ರವನ್ನು ನಿಭಾಯಿಸಲಿದ್ದಾರೆ.

ಈ ಚಿತ್ರಕ್ಕೆ ನೀರಜ್‌ವೋರ ಅವರು ಬರೆದ ಕತೆಯಿದೆ. 2017ರಲ್ಲಿ ನಿಧನರಾದ ವೋರ ಅವರು ಹೇರಫೇರಿ ಮತ್ತು ಭೂಲ್ ಭುಲಯ್ಯ ನಂತರ ಅಂತಿಮವಾಗಿ ಬರೆದ ಕತೆಯನ್ನು ಈ ಚಿತ್ರ ಹೊಂದಿದೆ ಎಂದು ನಿರ್ಮಾಪಕ ರಮೇಶ್ ತೌರಾನಿ ತಿಳಿಸಿದ್ದಾರೆ. ಸಿನೆಮಾ ರಂಗದಿಂದ ದೂರವಿದ್ದರೂ ಶಿಲ್ಪಾ ಹಿಂದಿ ವಾಹಿನಿಯೊಂದರಲ್ಲಿ ಡಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರಳಾಗಿ ಎಲ್ಲರ ಗಮನ ಸೆಳೆದಿದ್ದರು. ಸಾಮಾಜಿಕ ಮಾಧ್ಯಮದಲ್ಲೂ ಸಕ್ರಿಯವಾಗಿರುವ ಶಿಲ್ಪಾ ಯೋಗ, ಆಹಾರ ಹಾಗೂ ಆರೋಗ್ಯ ಜೀವನಕ್ಕೆ ಸಂಬಂಧಪಟ್ಟ ಹಲವು ಸಲಹೆಗಳನ್ನು ನೀಡುವ ಮೂಲಕ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)