varthabharthi


ಸಂಪಾದಕೀಯ

ಉದ್ಯಮಿಗಳ ಪಾಲಿಗೆ ಐಟಿ ‘ಸುಪಾರಿ ಕಿಲ್ಲರ್’ ಆಗದಿರಲಿ

ವಾರ್ತಾ ಭಾರತಿ : 1 Aug, 2019

ಕಾಫಿ ಯಾವತ್ತೂ ಸಿಹಿಯಾಗಿರಬೇಕಾಗಿಲ್ಲ. ಕಾಫಿ ಎಸ್ಟೇಟ್‌ನಲ್ಲಿ ದುಡಿಯುವ ಕಾರ್ಮಿಕರ ಪಾಲಿಗೆ ಕಾಫಿ ಸದಾ ಕಹಿ. ತುತ್ತಿನ ಚೀಲ ಅರಸುತ್ತಾ ಕಾಫಿ ಎಸ್ಟೇಟ್‌ನಲ್ಲಿ ಕಳೆದು ಹೋಗಿರುವ ಅಸಂಖ್ಯಾತ ಕಾರ್ಮಿಕರ ಪಾಲಿಗೆ ಕಾಫಿ ತೋಟಗಳು ಶ್ರಮಕ್ಕೆ ತಕ್ಕ ಫಲವನ್ನು ಕೊಟ್ಟದ್ದು ಕಡಿಮೆ. ಸದ್ಯದ ದಿನಗಳಲ್ಲಂತೂ ಕಾಫಿ, ಟೀ ಎಸ್ಟೇಟ್‌ಗಳಲ್ಲಿ ದುಡಿಯುವ ಕಾರ್ಮಿಕರ ಸ್ಥಿತಿ ಹೃದಯವಿದ್ರಾವಕವಾಗಿದೆ. ಅಸ್ಸಾಮಿನಲ್ಲಿ ಟೀ ಎಸ್ಟೇಟ್ ಮುಚ್ಚಿದ ಕಾರಣಕ್ಕಾಗಿಯೇ ಹಲವು ಕಾರ್ಮಿಕರು ಹಸಿವಿನಿಂದ ಸತ್ತರು. ಬಹುತೇಕ ಕಾರ್ಮಿಕರು ಬೀದಿ ಪಾಲಾದರು. ಅಳಿದುಳಿದ ಕಾರ್ಮಿಕರು ವಲಸಿಗರು, ಅಕ್ರಮ ನುಸುಳುಕೋರರು ಎಂಬೆಲ್ಲ ಹಣೆ ಪಟ್ಟಿ ಕಟ್ಟಿಕೊಂಡು ಜೈಲು ಪಾಲಾದರು. ಈ ಕಾರ್ಮಿಕರ ಕಣ್ಣೀರಲ್ಲಿ ಅರಳಿದ ಕಾಫಿ ಬೀಜಗಳು ನಗರಗಳಲ್ಲಿ ಕಾಫಿ ಸಂಸ್ಕೃತಿಯೊಂದನ್ನು ಸೃಷ್ಟಿಸಿದೆ. ಹೊಸ ತಲೆಮಾರಿನ ಯುವಕರ ಜೀವನ ಶೈಲಿ ಕಾಫಿಯ ಮೂಲಕ ಜೀವಂತಿಕೆಯನ್ನು ಪಡೆದುಕೊಂಡಿದೆ. ಆದರೆ ಇವರೆಲ್ಲ ಈ ಕಾಫಿಯ ಹಿಂದೆ ತಮ್ಮ ಜೀವವನ್ನು ತೇಯುವ ಕಾರ್ಮಿಕರ ಕುರಿತಂತೆ ಯೋಚಿಸಿರುವುದು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಇದೀಗ ಮೊದಲ ಬಾರಿಗೆ ನಗರಗಳ ‘ಕಾಫಿ ಹೌಸ್’ ‘ಕಾಫಿ ಡೇ’ಗಳಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಕಾಫಿ ಒಂದು ತೋಟಗಾರಿಕಾ ಬೆಳೆಯಾಗಿ ಗುರುತಿಸಿಕೊಂಡ ಹೊತ್ತಿನಲ್ಲೇ, ಈ ಕಾಫಿ ಪೇಯವನ್ನು ಆಧುನಿಕ ಜೀವನ ಶೈಲಿಗೆ ಪೂರಕವಾಗಿ ರೂಪಿಸಿ, ಅದನ್ನೇ ಒಂದು ‘ಉದ್ಯಮ’ವಾಗಿ ಪರಿವರ್ತಿಸಿ ಯುವ ತಲೆಮಾರಿಗೆ ತಲುಪಿಸಿದ ‘ಕಾಫಿ ಡೇ’ ಮುಖ್ಯಸ್ಥ ಸಿದ್ಧಾರ್ಥ ಹೆಗ್ಡೆ ಅವರ ದುರಂತ, ಕಾಫಿಯನ್ನು ಮತ್ತೆ ಕಹಿಯಾಗಿಸಿದೆ. ಕಾಫಿ ಉದ್ಯಮದ ಆಳಅಗಲ ಅರಿಯದ ಯುವ ತಲೆಮಾರನ್ನು ಕೂಡ ಈ ದುರಂತ ಒಂದು ಕ್ಷಣ ಬೆಚ್ಚಿ ಬೀಳಿಸಿದೆ. ‘ಕಾಫಿ ಡೇ’ ಮೂಲಕ ನಗರ ಪ್ರದೇಶಗಳಲ್ಲಿ ಬದುಕು ಕಂಡು ಕೊಂಡ ಸಾವಿರಾರು ಯುವಕರು ತಲ್ಲಣಿಸಿ ಕೂತಿದ್ದಾರೆ. ಈವರೆಗೆ ಕಾಫಿ ಎಸ್ಟೇಟ್‌ನ ಕಾರ್ಮಿಕರ ದುರಂತಗಳ ಕುರಿತಂತೆ ಮಾತನಾಡುತ್ತಿದ್ದ ಮಾಧ್ಯಮಗಳೂ ಮೊದಲ ಬಾರಿಗೆ ಕಾಫಿ ಎಸ್ಟೇಟ್‌ನ ಮಾಲಕನ ದುರಂತದ ಕುರಿತಂತೆ ಚರ್ಚಿಸಬೇಕಾದ ಸನ್ನಿವೇಶದಲ್ಲಿ ಸಿಲುಕಿಕೊಂಡಿದೆ. ಸಿದ್ದಾರ್ಥ ಅವರ ದುರಂತ, ಈ ದೇಶದಲ್ಲಿ ಮಧ್ಯಮ ಮಟ್ಟದಲ್ಲಿರುವ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮೊದಲ ಬಾರಿಗೆ ಮುನ್ನೆಲೆಗೆ ತಂದಿದೆ. ರೈತರನ್ನು ಮಾತ್ರವಲ್ಲ, ಕ್ರಿಯಾಶೀಲರಾಗಿರುವ ಉದ್ಯಮಿಗಳನ್ನು ಕೂಡ ಭ್ರಷ್ಟ ರಾಜಕಾರಣ ಹೇಗೆ ಸರ್ವನಾಶ ಮಾಡಬಹುದು ಎನ್ನುವುದಕ್ಕೆ ಸಿದ್ದಾರ್ಥ ಅವರ ದುರಂತವೇ ಒಂದು ಉದಾಹರಣೆಯಾಗಿದೆ.

  ನೋಟು ನಿಷೇಧದ ಅವಸರದ ತೀರ್ಮಾನ ಭಾರತದ ಉದ್ಯಮ ವಲಯದ ಮೇಲೆ ಭಾರೀ ದುಷ್ಪರಿಣಾಮಗಳನ್ನು ಉಂಟು ಮಾಡಿತು. ಗ್ರಾಮೀಣ ಮಟ್ಟದ ಸಣ್ಣ ಉದ್ದಿಮೆಗಳು ಸರ್ವನಾಶವಾದವು. ಕೃಷಿಯನ್ನು ಆಧರಿಸಿದ ಹೈನೋದ್ಯಮ ಕೂಡ ಸರಕಾರ ‘ಜಾನುವಾರು ಮಾರಾಟ ನಿಷೇಧ’ದ ಗೊಂದಲಕಾರಿ ನೀತಿಯಿಂದಾಗಿ ಅಸ್ತವ್ಯಸ್ತವಾಯಿತು. ಅಭಿವೃದ್ಧಿ ಭಾರೀ ಪ್ರಮಾಣದಲ್ಲಿ ಇಳಿಮುಖ ಕಂಡಿತು. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಯಿತು. ಇದರ ಬೆನ್ನಿಗೇ ಜಿಎಸ್‌ಟಿ ಜಾರಿಯಾಯಿತು. ಆದರೆ ವೈಜ್ಞಾನಿಕವಲ್ಲದ ತೆರಿಗೆಗಳೂ ಉದ್ಯಮದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಿದವು. ಉದ್ಯಮ ವಲಯದಲ್ಲಿ ಮಾತ್ರವಲ್ಲ, ಗ್ರಾಹಕರಲ್ಲೂ ಆತಂಕಗಳನ್ನು ಬಿತ್ತಿತು. ಈ ಎಲ್ಲ ಅಸ್ತವ್ಯಸ್ತಗಳ ನಡುವೆ ಮಧ್ಯಮ ಗಾತ್ರದ ಉದ್ಯಮಿಗಳು ಅದು ಹೇಗೋ ತಮ್ಮನ್ನು ತಾವು ಸಂಭಾಳಿಸಿಕೊಂಡು,ತಮ್ಮ ಉದ್ಯೋಗಿಗಳನ್ನು ಉಳಿಸಿಕೊಂಡು ಮುಂದೆ ಹೋಗಲು ಹವಣಿಸುತ್ತಿರುವಾಗಲೇ, ವಿವಿಧ ಉದ್ಯಮಿಗಳನ್ನು ಮಟ್ಟ ಹಾಕಲು ಸರಕಾರವೇ ವಿವಿಧ ತನಿಖಾ ಸಂಸ್ಥೆಗಳನ್ನು ಬಳಸತೊಡಗಿದ ಆರೋಪಗಳು ವ್ಯಾಪಕವಾಗಿ ಕೇಳಿ ಬಂದವು. ತಮ್ಮ ಪಕ್ಷವನ್ನು ಬೆಂಬಲಿಸದ ಅಥವಾ ವಿರೋಧ ಪಕ್ಷಗಳ ಜೊತೆಗೆ ನಂಟಿರುವ ಉದ್ಯಮಿಗಳನ್ನು ಬೆದರಿಸಲು ಸರಕಾರ ಐಟಿ ಅಧಿಕಾರಿಗಳನ್ನು ಯಾವ ಸಂಕೋಚವೂ ಇಲ್ಲದೆ ಬಳಸತೊಡಗಿರುವುದು ಸದ್ಯಕ್ಕೆ ಮಾಧ್ಯಮಗಳಲ್ಲಿ ಬಹಿರಂಗವಾಗಿ ಚರ್ಚೆಯಾಗುತ್ತಿದೆ.

ಇದರ ಅರ್ಥ, ಈ ದೇಶದಲ್ಲಿರುವ ಉದ್ಯಮಿಗಳೆಲ್ಲ ಅಮಾಯಕರು ಮತ್ತು ಐಟಿ ಅಧಿಕಾರಿಗಳು ವಿಲನ್‌ಗಳೆಂದಲ್ಲ. ತೆರಿಗೆ ವಂಚಕ ಉದ್ಯಮಿಗಳು ಈ ದೇಶದಲ್ಲಿ ಬಹಳಷ್ಟಿದ್ದಾರೆ. ಆದರೆ ಉದ್ಯಮಿಗಳಿಗಿಂತ ದೊಡ್ಡ ಸಂಖ್ಯೆಯಲ್ಲಿ ತೆರಿಗೆವಂಚಕ ರಾಜಕಾರಣಿಗಳಿದ್ದಾರೆ ್ಲ. ಐಟಿ ಅಧಿಕಾರಿಗಳು ನಿಜಕ್ಕೂ ತೆರಿಗೆ ವಂಚಕ ಉದ್ಯಮಿಗಳನ್ನು ಗುರುತಿಸಿ ಅವರಿಂದ ಸರಕಾರಕ್ಕೆ ಸಲ್ಲಬೇಕಾದುದನ್ನು ವಸೂಲಿ ಮಾಡಿದರೆ ಅವರ ಕರ್ತವ್ಯ ಪ್ರಜ್ಞೆಗಾಗಿ ನಾವು ಅಭಿನಂದಿಸಬೇಕಾಗುತ್ತದೆ. ಆದರೆ ನಡೆಯುತ್ತಿರುವುದು ಬೇರೆಯೇ ಆಗಿದೆ. ತನ್ನ ವಿರೋಧಿಗಳನ್ನು ಗುರುತಿಸಿ ಅವರನ್ನು ಮಟ್ಟ ಹಾಕಲು ಸರಕಾರ ಐಟಿ ಅಧಿಕಾರಿಗಳನ್ನು ಬಳಸುತ್ತಿದೆ ಎನ್ನುವುದು ಸದ್ಯದ ಆರೋಪ. ನೋಟು ನಿಷೇಧ, ಜಿಎಸ್‌ಟಿಯಂತಹ ಕ್ರಮಗಳಿಂದ ತತ್ತರಿಸಿ ಕೂತ ಉದ್ಯಮ ವಲಯ ಸರಕಾರದ ವಿರುದ್ಧ ಮಾತನಾಡಲಾಗದಂತಹ ಭೀತಿಯ ವಾತಾವರಣದಲ್ಲಿ ಸಿಲುಕಿಕೊಂಡಿದೆ. ಸರಕಾರದ ನೀತಿಯ ವಿರುದ್ಧ ಮಾತನಾಡಿದ್ದೇ ಆದರೆ, ಅದು ತನ್ನ ವಿರುದ್ಧ ಐಟಿ ಅಧಿಕಾರಿಗಳನ್ನು ಬಳಸಿ ಸೇಡು ತೀರಿಸಿಕೊಳ್ಳುವ ಭಯ ಅವರನ್ನು ಆವರಿಸತೊಡಗಿದೆ. ‘ಕಾನೂನು ಪ್ರಕಾರ ವ್ಯವಹಾರ ಮಾಡಿದರೆ ಐಟಿ ಅಧಿಕಾರಿಗಳಿಗೆ ಹೆದರುವ ಅಗತ್ಯವೇನು?’ ಎನ್ನುವ ಉಡಾಫೆ ಪ್ರಶ್ನೆಯನ್ನು ಕೆಲವರು ಕೇಳುವುದಿದೆ. ಆದರೆ ಐಟಿ ಅಧಿಕಾರಿಗಳು ಎಂದಲ್ಲ, ಯಾವುದೇ ತನಿಖಾ ಸಂಸ್ಥೆಗಳು ಕಿರುಕುಳ ಕೊಡುವ ಉದ್ದೇಶವನ್ನು ಹೊಂದಿದ್ದರೆ ಒಬ್ಬ ಉದ್ಯಮಿಯನ್ನು ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸುವುದು ಕಷ್ಟವೇನಲ್ಲ.

ಕೇಂದ್ರ ಸರಕಾರ ಈ ತಂತ್ರವನ್ನು ಬಳಸಿಕೊಂಡು ವಿವಿಧ ಉದ್ಯಮಿಗಳನ್ನು ಬ್ಲಾಕ್‌ಮೇಲ್ ಮಾಡುತ್ತಿದೆ ಎನ್ನುವ ಆರೋಪ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಸಿದ್ಧಾರ್ಥ ಅವರ ದುರಂತಕ್ಕೂ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣವಾಗಿದೆ ಎನ್ನುವ ಆರೋಪ ಈ ಕಾರಣಕ್ಕಾಗಿ ಮಹತ್ವವನ್ನು ಪಡೆದುಕೊಂಡಿದೆ. ‘ಉದ್ಯಮಿ’ ಎಂದಾಕ್ಷಣ ಆತ ‘ಈ ದೇಶವನ್ನು ದೋಚುವುದಕ್ಕಾಗಿಯೇ ಇರುವವನು’ ಎಂಬ ಪೂರ್ವಗ್ರಹವನ್ನು ಬಿಟ್ಟು ನಾವು ಸದ್ಯದ ಬೆಳವಣಿಗೆಗಳನ್ನು ಚರ್ಚಿಸಬೇಕಾಗಿದೆ. ಒಬ್ಬ ಉದ್ಯಮಿ ಬೆಳೆಯುತ್ತಾ ಹೋದಂತೆಯೇ ಅವನ ಜೊತೆಗೆ ಉದ್ಯೋಗಗಳ ಸಂಖ್ಯೆಯೂ ಬೆಳೆಯುತ್ತಾ ಹೋಗುತ್ತದೆ. ದೇಶದ ಸಮಗ್ರ ಅಭಿವೃದ್ಧಿಗೆ ಅದು ತನ್ನ ಕೊಡುಗೆಗಳನ್ನು ಬೇರೆ ಬೇರೆ ರೂಪಗಳಲ್ಲಿ ನೀಡುತ್ತದೆ. ಸಿದ್ಧಾರ್ಥ ಅವರ ಕಾಫಿ ಡೇ ಸಂಸ್ಥೆ ನಿರುದ್ಯೋಗಿಗಳಾಗಿದ್ದ ಸಾವಿರಾರು ಯುವಕರಿಗೆ ಉದ್ಯೋಗಗಳನ್ನು ನೀಡಿತ್ತು ಎನ್ನುವ ಅಂಶವೂ ಗಮನಾರ್ಹವಾಗಿದೆ. ಇದೇ ಸಂದರ್ಭದಲ್ಲಿ ತನ್ನ ಮಾವ ಎಸ್. ಎಂ. ಕೃಷ್ಣ ಅಧಿಕಾರವನ್ನು ಬಳಸಿ ಸಿದ್ದಾರ್ಥ ಲಾಭ ಮಾಡಿರಬಾರದು ಎಂದಿಲ್ಲ. ಆದರೆ ಕೇಂದ್ರ ಸರಕಾರ ರಾಜಕೀಯ ಕಾರಣಗಳಿಗಾಗಿ ಸಿದ್ಧಾರ್ಥ ವಿರುದ್ಧ ಐಟಿ ದಾಳಿಯನ್ನು ನಡೆಸಿತು ಎನ್ನುವ ದೂರುಗಳಿವೆ. ಐಟಿ ಅಧಿಕಾರಿಗಳು ಬೇರೆ ಬೇರೆ ರೀತಿಯಲ್ಲಿ ಸಿದ್ಧಾರ್ಥ ಅವರ ದಾರಿಯನ್ನು ಮುಚ್ಚುತ್ತಾ ಅವರನ್ನು ಅಸಹಾಯಕರನ್ನಾಗಿ ಮಾಡಿದರು ಎನ್ನಲಾಗುತ್ತ್ತಿದೆ.

ಐಟಿ ಅಧಿಕಾರಿಗಳ ಗುರಿ, ಉದ್ಯಮದ ದಾರಿಯನ್ನು ಸುಗಮ ಮಾಡಿಕೊಟ್ಟು ದೇಶಕ್ಕೂ, ಸಮಾಜಕ್ಕೂ ಪ್ರಯೋಜನವಾಗುವಂತೆ ನೋಡಿಕೊಳ್ಳುವುದೇ ಹೊರತು, ಯಶಸ್ವಿಯಾಗಿ ಮುನ್ನಡೆಯುತ್ತಿರುವ ಉದ್ಯಮಗಳನ್ನು ಕಿರುಕುಳ ನೀಡಿ ಮುಚ್ಚಿಸುವುದಲ್ಲ. ನಿಜಕ್ಕೂ ಐಟಿ ಅಧಿಕಾರಿಗಳು ತೆರಿಗೆ ವಂಚಕರ ಕುರಿತಂತೆ ಕಾಳಜಿ ಹೊಂದಿದೆಯೆಂದಾದರೆ, ಕಳೆದ ಕೆಲವು ತಿಂಗಳುಗಳಿಂದ ವಿವಿಧ ರೆಸಾರ್ಟ್‌ಗಳಲ್ಲಿ ಕೋಟ್ಯಂತರ ರೂಪಾಯಿಗಳಿಗೆ ಬಿಕರಿಯಾಗುತ್ತಿದ್ದ ‘ಕುದುರೆ ವ್ಯಾಪಾರ’ ನಡೆಯುವಲ್ಲಿ ತನ್ನ ಕಾರ್ಯಾಚರಣೆಯನ್ನು ನಡೆಸಬಹುದಿತ್ತು. ನೋಟು ನಿಷೇಧದ ಬಳಿಕ ಉದ್ಯಮಗಳೆಲ್ಲ ಕುಸಿತ ಕಾಣುತ್ತಿರುವಾಗ, ಶಾಸಕರನ್ನು ಕೋಟ್ಯಂತರ ರೂಪಾಯಿಗಳನ್ನು ಕೊಟ್ಟು ಕೊಂಡುಕೊಳ್ಳಲು ಅವರಿಗಿರುವ ಹಣದ ಮೂಲ ಯಾವುದು ಎನ್ನುವುದನ್ನು ತನಿಖೆ ನಡೆಸಬಹುದಿತ್ತು.

ಅವೆಲ್ಲವನ್ನೂ ಬಿಟ್ಟು ರಾಜಕಾರಣಿಗಳ ಸನ್ನೆಗನುಗುಣವಾಗಿ, ವಿವಿಧ ಉದ್ಯಮಿಗಳಿಗೆ ಕಿರುಕುಳ ನೀಡಿ ಅವರನ್ನು ಹತಾಶರನ್ನಾಗಿಸುವುದೇ ತನ್ನ ಗುರಿ ಎಂದು ಐಟಿ ಅಧಿಕಾರಿಗಳು ಭಾವಿಸಿದರೆ, ಅದು ಈ ದೇಶಕ್ಕೆ ಯಾವ ರೀತಿಯಲ್ಲೂ ಒಳಿತನ್ನು ಮಾಡಲಾರದು. ರೋಗ ವಾಸಿ ಮಾಡಬೇಕಾದ ವೈದ್ಯರು ರೋಗಿಯನ್ನೇ ನಿವಾರಿಸಲು ಹೊರಟಂತಿದೆ ಐಟಿ ಅಧಿಕಾರಿಗಳ ನಡೆ. ಉದ್ಯಮಿಗಳ ಪಾಲಿಗೆ ಐಟಿ ಅಧಿಕಾರಿಗಳು ಹೇಗೆ ಸುಪಾರಿ ಕಿಲ್ಲರ್‌ಗಳಾಗುತ್ತಿದ್ದಾರೆ ಎನ್ನುವುದಕ್ಕೆ ಸಿದ್ಧಾರ್ಥ ಅವರ ದುರಂತವೇ ಉದಾಹರಣೆ. ಇಂತಹ ಆತ್ಮಹತ್ಯೆಗಳು ಅಳಿದುಳಿದ ಉದ್ಯಮಿಗಳ ನೈತಿಕ ಸ್ಥೈರ್ಯವನ್ನು ಕೆಡಿಸುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಐಟಿಯಂತಹ ಸಂಸ್ಥೆಗಳನ್ನು ರಾಜಕೀಯ ದುರುದ್ದೇಶಗಳಿಗೆ ಬಳಸುವುದು ಇನ್ನಾದರೂ ನಿಲ್ಲಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)