varthabharthi


ಸಂಪಾದಕೀಯ

ನಾಡಿಗೆ ಬೆಂಕಿ ಹಚ್ಚಲು ಪರವಾನಿಗೆ?

ವಾರ್ತಾ ಭಾರತಿ : 2 Aug, 2019

ಯಡಿಯೂರಪ್ಪ ಕೊನೆಗೂ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಅವಕಾಶ ತೀರಾ ಕಡಿಮೆ ಇರುವುದರಿಂದ, ಯಡಿಯೂರಪ್ಪರು ಸರ್ವ ಪ್ರಯತ್ನಗಳನ್ನು ನಡೆಸಿ ಮೈತ್ರಿ ಸರಕಾರವನ್ನು ಉರುಳಿಸಿ ಗದ್ದುಗೆಯೇರಿದ್ದಾರೆ. ಸರಕಾರ ರಚನೆ ಮಾಡಲು ಬಿಜೆಪಿ ವರಿಷ್ಠರು ಅವಕಾಶ ನೀಡುವುದಿಲ್ಲ ಎಂಬ ವದಂತಿಗಳ ನಡುವೆಯೇ ತನ್ನ ವೈಯಕ್ತಿಕ ಪ್ರತಿಷ್ಠೆಯನ್ನು ಬಳಸಿಕೊಂಡು ಆರೆಸ್ಸೆಸ್‌ಗೇ ಸವಾಲು ಹಾಕುವಂತೆ ಸರಕಾರವನ್ನು ರಚಿಸಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳ ರಾಜಕೀಯ ಬೆಳವಣಿಗೆಗಳು ಯಡಿಯೂರಪ್ಪರಿಗೂ ಸಾಕಷ್ಟು ಪಾಠಗಳನ್ನು ಕಲಿಸಿದೆ. ‘ನೀರ ಮೇಲಿನ ಗುಳ್ಳೆ’ಯಂತೆ ಗದ್ದುಗೆಯ ಮೇಲೆ ತಾನಿದ್ದೇನೆ ಎನ್ನುವ ಅರಿವು ಅವರಿಗಿದೆ.

ತನ್ನ ‘ದುರ್ವಾಸ’ ಕೋಪಕ್ಕೆ ಕಡಿವಾಣ ಹಾಕಿ, ಹೊಂದಾಣಿಕೆಯ ಜೊತೆಗೆ ಅವಧಿ ಪೂರೈಸುವುದಷ್ಟೇ ಅವರ ಮುಂದಿರುವ ಏಕೈಕ ಗುರಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಮಾಡಿರುವ ತಪ್ಪುಗಳ ‘ಫಲ’ವನ್ನು ತಾನೀಗ ಅನುಭವಿಸುತ್ತಿದ್ದೇನೆ ಎನ್ನುವ ಋಣ ಭಾರ ಅವರಲ್ಲಿರುವುದರಿಂದ, ಎಲ್ಲ ಶಾಸಕರ ಕೋರಿಕೆಗಳಿಗೂ ‘ತಥಾಸ್ತು’ ಎನ್ನುತ್ತಾ ಮುಂದುವರಿಯುವುದಷ್ಟೇ ಅವರ ಅನಿವಾರ್ಯ ‘ಕರ್ಮ’. ಇಂತಹದೊಂದು ಅಭದ್ರ ಸ್ಥಿತಿಯಲ್ಲಿ ಕುಳಿತುಕೊಂಡು ಆಡಳಿತಾತ್ಮಕವಾಗಿ ಯಾವುದೇ ಮಹತ್ತರ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಅಸಾಧ್ಯವಾಗಿರುವುದರಿಂದ, ಇರುವ ಅವಕಾಶಗಳಲ್ಲೇ ಸುದ್ದಿಯಾಗುವ ಪ್ರಯತ್ನದಲ್ಲಿದ್ದಾರೆ. ಅದರ ಭಾಗವಾಗಿಯೇ ಅಧಿಕಾರಕ್ಕೇರಿದ ಎರಡೇ ದಿನಗಳಲ್ಲಿ ‘ಟಿಪ್ಪು ಜಯಂತಿ ರದ್ದು’ ಕೊಡುಗೆಯನ್ನು ಸಂಘಪರಿವಾರ ಕಾರ್ಯಕರ್ತರಿಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಪರಿವಾರವನ್ನು ಖುಷಿಪಡಿಸಲಿರುವ ಹತ್ತು ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವ ಸೂಚನೆಗಳನ್ನು ಈ ಮೂಲಕ ನೀಡಿದ್ದಾರೆ. ಕೊಡಗು ಜಿಲ್ಲೆಯ ಏಕೈಕ ಸಮಸ್ಯೆಯೇನೋ ಎಂಬಂತೆ ಶಾಸಕ ಕೆ.ಜಿ.ಬೋಪಯ್ಯ ‘ಟಿಪ್ಪು ಜಯಂತಿಯನ್ನು ರದ್ದುಗೊಳಿಸಬೇಕು’ ಸಲ್ಲಿಸಿದ ಮನವಿಗೆ ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿದರು. ಇಷ್ಟಕ್ಕೂ ಟಿಪ್ಪು ಜಯಂತಿ ಎನ್ನುವುದು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಅಥವಾ ಬಡ ಮುಸ್ಲಿಮರ ರೇಶನ್ ಕಾರ್ಡ್‌ನ ಹೆಸರು ಆಗಿಲ್ಲದೇ ಇರುವುದರಿಂದ ರಾಜ್ಯದ ಮುಸ್ಲಿಮರು ಇದರಿಂದ ಕಳೆದುಕೊಳ್ಳುವುದು ಅಷ್ಟರಲ್ಲೇ ಇದೆ.

ಟಿಪ್ಪು ಜಯಂತಿಯನ್ನು ರದ್ದುಗೊಳಿಸಿರುವುದರಿಂದ ಏನಾದರೂ ನಷ್ಟವಾಗಿದ್ದರೆ, ಅದು ಈ ದೇಶದ ಸ್ವಾತಂತ್ರ ಹೋರಾಟದ ಇತಿಹಾಸಕ್ಕೆ. ಟಿಪ್ಪು ಬರೇ ರಾಜ್ಯ ಅಥವಾ ದೇಶಕ್ಕೆ ಸೀಮಿತವಾದವನಲ್ಲ. ಆತನನ್ನು ಅಮೆರಿಕದ ನಾಸಾ ಸ್ಮರಿಸುತ್ತಿದೆ. ಶತ್ರುವಾಗಿ ತನ್ನ ವಿರುದ್ಧ ಕಾದಿದ್ದರೂ, ಆತನ ನೆನಪುಗಳನ್ನು ಬ್ರಿಟನ್ ಜತನದಲ್ಲಿ ಕಾಯುತ್ತಿದೆ. ಟಿಪ್ಪುವಿನ ಕನಸುಗಳು ರಾಜ್ಯದ ಮುಸ್ಲಿಮರ ಕನಸುಗಳು ಎಂದು ಬಿಜೆಪಿ ಸರಕಾರ ಭಾವಿಸುತ್ತದೆಯಾದರೆ, ಕನ್ನಡ ನಾಡಿನ ಇತಿಹಾಸದ ಕುರಿತು ಅದರ ಬೌದ್ಧಿಕ ದಾರಿದ್ರವನ್ನಷ್ಟೇ ಅದು ಹೇಳುತ್ತದೆ. ಟಿಪ್ಪುವನ್ನು ಈ ನಾಡು ಸ್ಮರಿಸುವುದು ಒಬ್ಬ ರಾಜನಾಗಿ ತನ್ನ ನಾಡನ್ನು ಉಳಿಸಲು ಬ್ರಿಟಿಷರನ್ನು ಎದುರಿಸಿದ ಕಾರಣಕ್ಕಾಗಿ ಮಾತ್ರವಲ್ಲ. ಆತ ತನ್ನ ಆಡಳಿತಾವಧಿಯಲ್ಲಿ ಈ ನಾಡಿನ ರೈತರಿಗೆ, ದಲಿತರಿಗೆ, ಶೋಷಿತರಿಗೆ ನೀಡಿದ ಕೊಡುಗೆಗಳೇ ಆತನನ್ನು ಸಾರ್ವಕಾಲಿಕ ನಾಯಕನನ್ನಾಗಿಸಿದೆ. ದಲಿತರಿಗೆ ಮೊತ್ತ ಮೊದಲು ಭೂಮಿ ಹಂಚಿದ್ದು, ರೈತರನ್ನು ಜಮೀನ್ದಾರರ ಕಪಿಮುಷ್ಟಿಯಿಂದ ಬಿಡಿಸಿದ್ದು, ರೇಷ್ಮೆ, ಗೋಸಾಕಣೆಗಳಿಗೆ ಆದ್ಯತೆಗಳನ್ನು ನೀಡಿದ್ದು, ತಂತ್ರಜ್ಞಾನ, ನೀರಾವರಿಗಳಿಗೆ ಆತ ನೀಡಿದ ಕೊಡುಗೆ ಇವೆಲ್ಲವೂ ಟಿಪ್ಪುವನ್ನು ನಾಡು ಸ್ಮರಿಸುವುದಕ್ಕಿರುವ ಪ್ರಮುಖ ಕಾರಣಗಳು. ಸರಕಾರ ವರ್ಷಕ್ಕೊಮ್ಮೆ ಕಾಟಾಚಾರಕ್ಕೆ ಜಿಲ್ಲಾಡಳಿತದ ಮೂಲಕ ಆಚರಿಸುವ ಟಿಪ್ಪು ಜಯಂತಿಯಿಂದ ಆತನ ನೆನಪುಗಳು ಅಜರಾಮರವಾಗುತ್ತದೆ ಎನ್ನುವುದು ದೊಡ್ಡ ಭ್ರಮೆ. ಆತನ ಹೆಸರಿನಲ್ಲಿ ಒಂದಿಷ್ಟು ಅಧಿಕಾರಿಗಳು ದುಡ್ಡು ಮಾಡಬಹುದು. ಇದೇ ಸಂದರ್ಭದಲ್ಲಿ ಸಂಘಪರಿವಾರ ಟಿಪ್ಪು ಜಯಂತಿಯ ಹೆಸರಿನಲ್ಲಿ ದೊಂಬಿ ಎಬ್ಬಿಸಿ ರಾಜಕೀಯ ಲಾಭಗಳಿಗಾಗಿ ರಣಹದ್ದುಗಳಂತೆ ಹೊಂಚಿ ಹಾಕಿ ಕೂತಿದೆ.

ಬಹುಶಃ ಟಿಪ್ಪು ಜಯಂತಿಯಿಂದ ನಿಜಕ್ಕೂ ನಷ್ಟವಾಗಿರುವುದು ಈ ರಣಹದ್ದುಗಳಿಗೆ. ಗಲಭೆ ಎಬ್ಬಿಸಿ ಉದ್ವಿಗ್ನ ವಾತಾವರಣ ನಿರ್ಮಿಸುವುದಕ್ಕೆ ಅವರಿಗೆ ‘ನೆಪ’ವೊಂದು ಇಲ್ಲದಂತಾಗಿದೆ. ಇಷ್ಟಕ್ಕೂ ಸರಕಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ನಿಷೇಧಿಸಿಲ್ಲ. ಅಧಿಕೃತವಾಗಿ ಸರಕಾರಿ ಕಾರ್ಯಕ್ರಮವಾಗಿ ಅದನ್ನು ಆಚರಿಸುವುದಿಲ್ಲ ಎಂದು ಹೇಳಿದೆ. ಟಿಪ್ಪು ಸುಲ್ತಾನ್ ನೆನಪುಗಳು ಜನಸಾಮಾನ್ಯರ ಬದುಕಿನೊಂದಿಗೆ ಸಂಬಂಧವನ್ನು ಹೊಂದಿರುವುದು ನಿಜವೇ ಆಗಿದ್ದರೆ, ನಾಡಿನ ಜನರೇ ಟಿಪ್ಪು ಕುರಿತಂತೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಯಾವ ಅಡ್ಡಿಯೂ ಇಲ್ಲ. ಇಂದು ಟಿಪ್ಪು ಸುಲ್ತಾನ್ ಚರಿತ್ರೆಯನ್ನು ತಿರುಚಲಾಗಿದ್ದರೆ, ಶಿವಾಜಿಯ ಚರಿತ್ರೆಯನ್ನು ಸಂಘಪರಿವಾರ ಹೈಜಾಕ್ ಮಾಡಿದೆ. ಟಿಪ್ಪು ಮತ್ತು ಶಿವಾಜಿ ದಲಿತ ಮತ್ತು ಶೋಷಿತ ವರ್ಗದ ನಾಯಕರು. ಮೊಗಲರ ವಿರುದ್ಧ ಹೋರಾಟದಲ್ಲಿ ಶಿವಾಜಿಗೆ ಹೆಗಲೆಣೆಯಾಗಿ ನಿಂತವರು ಮುಸ್ಲಿಮರು ಮತ್ತು ದಲಿತ ಯೋಧರು. ಔರಂಗಜೇಬ್ ಜೊತೆಗೆ ನಿಂತವರು ರಜಪೂತರು ಮತ್ತು ವೈದಿಕರು. ಶಿವಾಜಿಯು ರಾಜನಾಗದಂತೆ ತಡೆಯಲು ವೈದಿಕ ಶಕ್ತಿಗಳು ಕೊನೆಯವರೆಗೂ ಸಂಚು ಹೂಡಿದವು. ಆದರೆ ಇಂದು ಅದೇ ವೈದಿಕ ಹಿತಾಸಕ್ತಿಗಳು ಶಿವಾಜಿಯನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದೆ. ಟಿಪ್ಪು ಮತ್ತು ಶಿವಾಜಿಯ ನಿಜವಾದ ವಾರಸುದಾರರು ಸಂಘಟಿತರಾಗಿ ನಿಜ ಇತಿಹಾಸವನ್ನು ಜನರೆಡೆಗೆ ತಲುಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೇ ಯಡಿಯೂರಪ್ಪ ನಿರ್ಧಾರಕ್ಕೆ ನೀಡಬಹುದಾದ ಪ್ರತ್ಯುತ್ತರವಾಗಿದೆ. ಇದೇ ಸಂದರ್ಭದಲ್ಲಿ ಟಿಪ್ಪು ಜಯಂತಿ ರದ್ದಾಗಿರುವುದರ ಕುರಿತಂತೆ ಕಾಂಗ್ರೆಸ್ ನಾಯಕರ ಹಳಹಳಿಕೆಗಳಿಗೆ ಯಾವ ಅರ್ಥವೂ ಇಲ್ಲ. ಟಿಪ್ಪು ಜಯಂತಿ ಆಚರಿಸಲು ಮುಂದಾದ ಜನರ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ಹೂಡಿರುವುದು ಕಾಂಗ್ರೆಸ್ ಸರಕಾರವೇ ಆಗಿದೆ. ಆ ಸಂದರ್ಭದಲ್ಲಿ ಸಂಭವಿಸಿದ ಸಾವುನೋವುಗಳನ್ನು ತಡೆಯಲು, ಸಂಘಪರಿವಾರದ ಸಂಚುಗಳನ್ನು ವಿಫಲಗೊಳಿಸಲು ಅಂದಿನ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿತ್ತು.

ಅಷ್ಟೇ ಅಲ್ಲ, ಸ್ವತಃ ಕಾಂಗ್ರೆಸ್‌ನೊಳಗಿರುವ ನಾಯಕರಿಗೇ ಟಿಪ್ಪುವಿನ ಇತಿಹಾಸದ ಕುರಿತಂತೆ ಸ್ಪಷ್ಟತೆಯಿರಲಿಲ್ಲ. ಅಂದಿನ ಕಾಂಗ್ರೆಸ್ ಮುಖಂಡರಲ್ಲೊಬ್ಬರಾದ ಪ್ರಮೋದ್ ಮಧ್ವರಾಜ್, ಟಿಪ್ಪು ಜಯಂತಿಯ ದಿನ ‘ತಲೆಮರೆಸಿ’ ಓಡಾಡಿದ್ದರು ಮತ್ತು ಅದನ್ನು ಸಾರ್ವಜನಿಕ ವೇದಿಕೆಯಲ್ಲಿ ತನ್ನ ‘ಸಾಧನೆ’ ಎಂಬಂತೆ ಆಡಿಕೊಂಡಿದ್ದರು. ಸ್ವತಃ ಕಾಂಗ್ರೆಸ್‌ನೊಳಗಿನ ಜನರಿಗೇ ಟಿಪ್ಪುವಿನ ಕುರಿತಂತೆ ಮನದಟ್ಟು ಮಾಡಲು ವಿಫಲರಾಗಿರುವ ಸಿದ್ದರಾಮಯ್ಯ, ಟಿಪ್ಪು ಜಯಂತಿಯ ಕುರಿತಂತೆ ಬಿಜೆಪಿಗೆ ಮನವರಿಕೆ ಮಾಡಿಸಲು ಹೊರಡುವುದೇ ಒಂದು ದೊಡ್ಡ ತಮಾಷೆಯಾಗಿದೆ. ಆದರೆ ಅತ್ಯಂತ ಅಪಾಯಕಾರಿ ಅಂಶವೆಂದರೆ, ಕಾರವಾರ ಮತ್ತು ತೀರ್ಥಹಳ್ಳಿಯಲ್ಲಿ ಕೋಮುಗಲಭೆಗಳನ್ನು ನಡೆಸಿ, ಸಮಾಜಕ್ಕೆ ಅಪಾರ ನಾಶ, ನಷ್ಟಗಳನ್ನು ಉಂಟು ಮಾಡಿದ ಸಂಘಪರಿವಾರದ ದುಷ್ಕರ್ಮಿಗಳ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಮುಖ್ಯಮಂತ್ರಿಯನ್ನು ಕೆಲವು ಶಾಸಕರು ಮತ್ತು ಸಂಘಪರಿವಾರ ದ ಮುಖಂಡರು ಒತ್ತಾಯಿಸುತ್ತಿದ್ದಾರೆ.

ನಂದಿನಿ ಎನ್ನುವ ಬಾಲಕಿಯ ಆತ್ಮಹತ್ಯೆಯನ್ನು ‘ಸಾಮೂಹಿಕ ಅತ್ಯಾಚಾರ’ ಎಂದು ವದಂತಿಯನ್ನು ಹಬ್ಬಿಸಿ ತೀರ್ಥಹಳ್ಳಿಗೆ ಬೆಂಕಿ ಹಚ್ಚಿದ ಸಂಘಪರಿವಾರದ ದುಷ್ಕರ್ಮಿಗಳನ್ನು ಬಿಡುಗಡೆ ಮಾಡುವುದು ಎಂದರೆ ನಾಡಿಗೆ ಇನ್ನೊಮ್ಮೆ ಬೆಂಕಿ ಹಚ್ಚಲು ಅವರಿಗೆ ಪರವಾನಿಗೆ ನೀಡುವುದು ಎಂದೇ ಅರ್ಥ. ಕಾರವಾರದಲ್ಲಿ ಪರೇಶ್ ಮೇಸ್ತ ಎಂಬ ತರುಣನ ಸಾವನ್ನು ಕೂಡ ಇದೇ ರೀತಿ ಸಮಾಜದ ಸ್ವಾಸ್ಥ ಕೆಡಿಸಲು ಬಳಸಿದರು. ಸಂಘಪರಿವಾರದ ದುಷ್ಕರ್ಮಿಗಳು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ನಂತಹ ರಾಜ್ಯಗಳನ್ನು ಯಾವಸ್ಥಿತಿಗೆ ತಂದಿಟ್ಟಿದ್ದಾರೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ತನ್ನ ಅಸ್ತಿತ್ವಕ್ಕಾಗಿ ಯಡಿಯೂರಪ್ಪ, ನಾಡಿಗೆ ಬೆಂಕಿಹಚ್ಚಿದ ದುಷ್ಟರಿಗೆ ‘ಅಮಾಯಕ’ರೆಂಬ ಹಣೆಪಟ್ಟಿ ಕಟ್ಟಿ ಅವರ ಮೇಲಿನ ಪ್ರಕರಣಗಳನ್ನು ಹಿಂದೆಗೆದುಕೊಂಡರೆ, ಭವಿಷ್ಯದಲ್ಲಿ ನಮ್ಮ ನಾಡು ಇನ್ನೊಂದು ಉತ್ತರಪ್ರದೇಶವಾಗುವುದರಲ್ಲಿ ಅನುಮಾನವಿಲ್ಲ. ಯಾವ ಕಾರಣಕ್ಕೂ ಕೋಮುಗಲಭೆಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆಯಲು ಅವಕಾಶ ನೀಡಬಾರದು. ಜೆಡಿಎಸ್ ಮತ್ತು ಕಾಂಗ್ರೆಸ್ ಟಿಪ್ಪುವಿನ ಜಪ ಕೈ ಬಿಟ್ಟು ಈ ನಿಟ್ಟಿನಲ್ಲಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)