varthabharthi


ಸಂಪಾದಕೀಯ

ಆರ್ಥಿಕ ವೈಫಲ್ಯ ಮರೆಮಾಚಲು ಕಾಶ್ಮೀರವೆಂಬ ಜೇನುಗೂಡಿಗೆ ಕಲ್ಲು?

ವಾರ್ತಾ ಭಾರತಿ : 5 Aug, 2019

ಕಾಶ್ಮೀರದಲ್ಲಿ ಅತಿರಂಜಿತ ವದಂತಿಗಳು ಹರಡುತ್ತಿದೆಯೋ ಅಥವಾ ಸ್ವತಃ ಕೇಂದ್ರ ಸರಕಾರದ ಅಪ್ರಬುದ್ಧ ನಿರ್ಧಾರಗಳು ವದಂತಿಗಳನ್ನು ಸೃಷ್ಟಿಸುತ್ತಿದೆಯೋ ಎನ್ನುವುದು ಸ್ಪಷ್ಟವಾಗದೆ ಕಣಿವೆ ಪ್ರದೇಶ ಮಾತ್ರವಲ್ಲ, ದೇಶಕ್ಕೆ ದೇಶವೇ ಆತಂಕದಲ್ಲಿದೆ. ಕಾಶ್ಮೀರದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಕಾರಣ ಮುಂದಿಟ್ಟು ಇತ್ತೀಚೆಗಷ್ಟೇ ಭಾರೀ ಪ್ರಮಾಣದ ಸೇನೆಯನ್ನು ನಿಯೋಜನೆ ಮಾಡಿದ ಬಳಿಕ, ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶದ ಹಿತಕ್ಕೆ ಪೂರಕವಾಗಿಲ್ಲ. ಸೇನೆ ನಿಯೋಜನೆಯಾದ ಬೆನ್ನಿಗೇ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆಯಲು ಮತ್ತು ಅದರ ವಿರುದ್ಧದ ಪ್ರತಿರೋಧಗಳನ್ನು ದಮನಿಸಲು ಸರಕಾರ ಸಿದ್ಧತೆ ನಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಜಮ್ಮು ಕಾಶ್ಮೀರ ರಾಜ್ಯಪಾಲ ಎಸ್. ಪಿ. ಮಲಿಕ್ ಅವರು ‘ವದಂತಿಗಳನ್ನು ನಂಬದಿರಿ’ ಎಂದು ವಿವಿಧ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟವಾದ ಹೇಳಿಕೆಯೊಂದನ್ನು ಪ್ರಧಾನಿಯವರೇ ನೀಡಬೇಕು ಎಂದು ಜಮ್ಮು ಕಾಶ್ಮೀರ ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ. ನಿಯೋಜಿಸಿರುವ ಸೇನೆಗೂ ಭಯೋತ್ಪಾದನಾ ದಾಳಿ ಸಾಧ್ಯತೆಗಳಿಗೂ ಯಾವ ತಾಳೆಯೂ ಸಿಗುತ್ತಿಲ್ಲ.

ಭಯೋತ್ಪಾದಕರು ಯುದ್ಧೋಪಾದಿಯಲ್ಲಿ ದಾಳಿ ನಡೆಸುವುದಿಲ್ಲ. ‘ ಭಯೋತ್ಪಾದಕರು ಹೇಗೆ ನಮ್ಮದೇ ನೆಲದೊಳಗೆ, ಗುಪ್ತಚರ ಇಲಾಖೆಯ ವೈಫಲ್ಯವನ್ನು ಬಳಸಿಕೊಂಡು ದಾಳಿ ನಡೆಸಬಹುದು ಎನ್ನುವುದಕ್ಕೆ ‘ಪುಲ್ವಾಮ ದಾಳಿ’ ಉದಾಹರಣೆಯಾಗಿದೆ. ಇದೇ ಸಂದರ್ಭದಲ್ಲಿ ‘ಭಯೋತ್ಪಾದನಾ ದಾಳಿ ಸಾಧ್ಯತೆ’ ಕೇಂದ್ರದ ಸೃಷ್ಟಿ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಕಾಶ್ಮೀರವನ್ನು ಉದ್ವಿಗ್ನಗೊಳಿಸುವ ಪ್ರಯತ್ನಕ್ಕೆ ಕೇಂದ್ರ ಸರಕಾರ ಇಳಿದಿದೆ ಎಂದು ಅದು ದೂರಿದೆ. ಬರೇ ಸಾಮಾಜಿಕ ಜಾಲತಾಣಗಳ ಬರಹಗಳೇ ಆಗಿದ್ದರೆ ಈ ಎಲ್ಲವನ್ನು ವದಂತಿಗಳೆಂದು ನಿರಾಕರಿಸಿ ಬಿಡಬಹುದಾಗಿತ್ತು. ಆದರೆ ಸ್ವತಃ ಕೇಂದ್ರ ಸರಕಾರವೇ ‘ಅಮರನಾಥ ಯಾತ್ರೆ’ಯಲ್ಲಿರುವ ಪ್ರವಾಸಿಗರನ್ನು ಅನಿರೀಕ್ಷಿತವಾಗಿ ಆತುರಾತುರವಾಗಿ ಮರಳಲು ಸೂಚನೆ ನೀಡಿದೆ. ಅಷ್ಟೇ ಅಲ್ಲ, ವಿದೇಶಿ ಪ್ರವಾಸಿಗರು ತಕ್ಷಣ ಕಾಶ್ಮೀರ ತೊರೆಯುವಂತೆ ಆದೇಶ ನೀಡಿದ್ದು, ಅದಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೆಯೇ ಕಾಶ್ಮೀರದಲ್ಲಿರುವ ವಿವಿಧ ಗಣ್ಯರನ್ನು ತಕ್ಷಣವೇ ತೆರಳುವುದಕ್ಕೆ ಸರಕಾರ ಸೂಚನೆ ನೀಡಿದೆ. ಇವೆಲ್ಲವೂ ಕಾಶ್ಮೀರದ ಗವರ್ನರ್ ಮೂಗಿನ ನೇರಕ್ಕೆ ನಡೆಯುತ್ತಿಲ್ಲ. ಕೇಂದ್ರ ಸರಕಾರವೇ ಈ ನಿರ್ದೇಶನಗಳನ್ನು ನೀಡುತ್ತಿವೆಯಾದುದರಿಂದ, ಗವರ್ನರ್ ಸ್ಪಷ್ಟೀಕರಣಗಳಿಂದ ಕಾಶ್ಮೀರದಲ್ಲಿ ವದಂತಿಗಳಿಗೆ ತಡೆ ಬೀಳುತ್ತದೆ ಎನ್ನುವಂತಿಲ್ಲ. ಇದೇ ಸಂದರ್ಭದಲ್ಲಿ ಗಡಿ ಭಾಗದಲ್ಲೂ ಭಾರೀ ಗುಂಡಿನ ಚಕಮಕಿಗಳು ನಡೆಯುತ್ತಿರುವ ಕುರಿತಂತೆ ಸುದ್ದಿಗಳು ಹೊರಬೀಳುತ್ತಿವೆ. ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದ್ದು, ‘ಮೃತದೇಹಗಳನ್ನು ಕೊಂಡೊಯ್ಯಿರಿ’ ಎಂಬ ಪ್ರಸ್ತಾವವನ್ನು ಸೇನೆ ಪಾಕಿಸ್ತಾನಕ್ಕೆ ಕಳುಹಿಸಿದೆ. ಎಂದಿನಂತೆಯೇ ಪಾಕಿಸ್ತಾನ ‘ಅವರಿಗೂ ನಮಗೂ ಸಂಬಂಧವಿಲ್ಲ’ ಎಂಬ ಹೇಳಿಕೆಯನ್ನು ನೀಡಿ ಕೈ ಕೊಡವಿದೆ. ಇದರ ಬೆನ್ನಿಗೇ, ಕಾಶ್ಮೀರದಲ್ಲಿ ಸರ್ವ ಪ್ರಾದೇಶಿಕ ಪಕ್ಷಗಳ ಸಭೆ ನಡೆದಿದೆ. ಗೃಹ ಸಚಿವ ಅಮಿತ್ ಶಾ ಗುಪ್ತಚರ ಇಲಾಖೆಗಳು ಮತ್ತು ಭದ್ರತಾ ಸಲಹೆಗಾರರನ್ನು ಭೇಟಿ ಮಾಡಿದ್ದಾರೆ. ಇಷ್ಟೆಲ್ಲ ನಡೆದ ಬಳಿಕ ‘ವದಂತಿಗಳಿಗೆ ಕಿವಿ ಕೊಡಬೇಡಿ’ ಎನ್ನುವ ಹೇಳಿಕೆ ನೀಡಿ ರಾಜ್ಯಪಾಲರು ಜಾರಿಕೊಳ್ಳುವಂತಿಲ್ಲ. ನಡೆದಿರುವುದೆಲ್ಲ ವದಂತಿಗಳೇ ಆಗಿದ್ದರೆ, ಸರಕಾರ ತೆಗೆದುಕೊಂಡಿರುವ ಇಷ್ಟೆಲ್ಲ ಕ್ರಮಗಳಿಗೆ ಏನು ಅರ್ಥ?

ಆರ್ಥಿಕವಾಗಿ ದೇಶದ ಸ್ಥಿತಿ ಚಿಂತಾಜನಕವಾಗಿದೆ. ಈ ದೇಶದ ಉದ್ಯಮಿಗಳು ದೊಡ್ಡ ಧ್ವನಿಯಲ್ಲಿ ಸರಕಾರದ ನೀತಿಗಳನ್ನು ಪ್ರಶ್ನಿಸತೊಡಗಿದ್ದಾರೆ. ಆಟೊಮೊಬೈಲ್ ಕ್ಷೇತ್ರ ಸಂಕಷ್ಟದಲ್ಲಿದೆ. 30 ಸ್ಟೀಲ್ ಕಂಪೆನಿಗಳು ಮುಚ್ಚುವಹಂತದಲ್ಲಿವೆ. ಮನೆ, ನಿವೇಶನ, ಖರೀದಿಯಲ್ಲಿಯೂ ಭಾರೀ ಹಿಂಜರಿತ ಕಂಡು ಬಂದಿದೆ ಎಂದು ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪಾರೆಖ್ ಹೇಳಿಕೆ ನೀಡಿದ್ದಾರೆ. ಬಜಾಜ್, ಗೋದ್ರೆಜ್‌ನಂತಹ ಸಂಸ್ಥೆಗಳ ಮುಖ್ಯಸ್ಥರು ಸರಕಾರದ ನೀತಿಗಳನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದ ಮೋಹನ್ ದಾಸ್ ಪೈಯಂತಹ ಉದ್ಯಮಿಗಳು ‘ದೇಶದಲ್ಲಿ ತೆರಿಗೆ ಭಯೋತ್ಪಾದನೆ ನಡೆಯುತ್ತಿದೆ’ ಎಂದು ಟೀಕಿಸುವಂತಹ ಸ್ಥಿತಿಗೆ ತಲುಪಿದ್ದಾರೆ. ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕೈಜಾರಿದೆ ಎನ್ನುವುದು ಆಳುವವರಿಗೆ ಮನವರಿಕೆಯಾಗಿದೆ. ಅದನ್ನು ಹಳಿಗೆ ತರುವ ಆರ್ಥಿಕ ಮುತ್ಸದ್ದಿಗಳೂ ಸರಕಾರದಲ್ಲಿ ಇಲ್ಲ. ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕುವ ಒಂದೇ ಉದ್ದೇಶದಿಂದ ಕೇಂದ್ರ ಸರಕಾರ, ಕಾಶ್ಮೀರವೆನ್ನುವ ಜೇನುಗೂಡಿಗೆ ಕೈ ಹಾಕಲು ಹೊರಟಿದೆ ಎನ್ನುವ ಒಂದು ವಾದವಿದೆ. ಇದಕ್ಕೆ ಪೂರಕವಾಗಿ ‘‘ಇನ್ನೆರಡು ನಾಲ್ಕು ದಿನಗಳ ಕಾಲ ಕಾಯಿರಿ. ಯಾವುದೂ ಗುಟ್ಟಾಗಿ ನಡೆಯುವುದಿಲ್ಲ. ಪಾರ್ಲಿಮೆಂಟ್ ಮೂಲಕವೇ ಎಲ್ಲವೂ ನಡೆಯುತ್ತದೆ’’ ಎಂಬ ಅರ್ಥದ ಹೇಳಿಕೆಗಳನ್ನು ರಾಜ್ಯಪಾಲರು ಆಡಿದ್ದಾರೆ. ರಾಜ್ಯಪಾಲರ ಅಡ್ಡಗೋಡೆಯ ಮೇಲಿಟ್ಟ ಈ ಹೇಳಿಕೆಯೇ ಎಲ್ಲವನ್ನೂ ಹೇಳುತ್ತದೆ.

ಮುಂದಿನ ದಿನಗಳಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ಸಂಸತ್ತಿನಲ್ಲಿ ಗದ್ದಲ ಎಬ್ಬಿಸಲಿದೆ ಮತ್ತು ಆ ಗದ್ದಲ ಕಾಶ್ಮೀರ ನಾಗರಿಕರ ಬದುಕಿನ ಮೇಲೆ ಚೆಲ್ಲಾಟವಾಡಲಿದೆ. ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗ, ಅವರ ಆಡಳಿತದ ವೈಫಲ್ಯಗಳು ಸಂಸತ್‌ನಲ್ಲಿ ಚರ್ಚೆಯಾಗುತ್ತವೆ ಎನ್ನುವಾಗ ಕಾರ್ಗಿಲ್ ಯುದ್ಧ ನಡೆಯಿತು. ಈ ಯುದ್ಧದ ಸಾವುನೋವು, ವೈಫಲ್ಯಗಳನ್ನು ಪ್ರಶ್ನಿಸಲು ಸಂಸತ್ ಸಿದ್ಧತೆ ನಡೆಸುತ್ತಿರುವ ಹೊತ್ತಿಗೆ, ಸಂಸತ್‌ನ ಮೇಲೆ ದಾಳಿ ನಡೆಯಿತು. ಕಳೆದ ಚುನಾವಣೆಯ ಹೊತ್ತಿಗೆ ನಡೆದ ‘ಪುಲ್ವಾಮ ದಾಳಿ’ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದೀಗ ಕಾಶ್ಮೀರವನ್ನು ಗುರಾಣಿಯಾಗಿಸಿಕೊಂಡು, ದೇಶಾದ್ಯಂತ ಮೊಳಗುತ್ತಿರುವ ಆರ್ಥಿಕ ಹಾಹಾಕಾರದಿಂದ ಪಾರಾಗಬಹುದು ಎಂದು ಸರಕಾರ ಭಾವಿಸಿದಂತಿದೆ. ಆದರೆ ಕಾಶ್ಮೀರವೆನ್ನುವುದು ಸೂಕ್ಷ್ಮ ಹೆಣಿಗೆ. ಅದು ಬಿಚ್ಚಿಕೊಂಡರೆ ಅದರ ಪರಿಣಾಮ ಇಡೀ ದೇಶ ಅನುಭವಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ಸರಕಾರಕ್ಕೆ ಇರಬೇಕು. ಇದು ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಲುಪಿಸಬಹುದು. ವಾಸ್ತವಗಳನ್ನು ಮರೆತು ಭಾವನೆಗಳ ಮೂಲಕ ಚೆಲ್ಲಾಟವಾಡುತ್ತಾ ಜನರನ್ನು ಬಹುಕಾಲ ವಿಸ್ಮತಿಯಲ್ಲಿ ಇಡಲು ಸಾಧ್ಯವಿಲ್ಲ. ನೆಹರೂ, ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್ ಗಾಂಧಿ, ವಾಜಪೇಯಿಯಂತಹ ಮುತ್ಸದ್ದಿಗಳು ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನದ ತಳಹದಿಯಲ್ಲಿ ಕಟ್ಟಿ ನಿಲ್ಲಿಸಿದ ಭಾರತ ಅತ್ಯಂತ ಆತಂಕದ ದಿನಗಳನ್ನು ಎದುರಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)