varthabharthi


ನಿಮ್ಮ ಅಂಕಣ

ಆರ್‌ಟಿಐ ಮೇಲೆ ಏಕೆ ಇಷ್ಟು ಹಗೆ?

ವಾರ್ತಾ ಭಾರತಿ : 7 Aug, 2019
ಮಾಡಭೂಷಿ ಶ್ರೀಧರ್, ಮಾಜಿ ಕೇಂದ್ರ ಮಾಹಿತಿ ಕಮಿಷನರ್. ಕನ್ನಡಕ್ಕೆ: ಕಸ್ತೂರಿ

ಒಣಗಿಹೋದ ಬಡಮನುಷ್ಯನಿಗೆ ಸಾಧನವಾಗಿ ಉಪಕರಿಸುತ್ತಿರುವ ಒಂದು ಹಕ್ಕನ್ನು ನಾವು ತಂದು ಕೊಂಡೆವು. ಈಗ ಈ ಹಕ್ಕನ್ನು ಇವರು ವಿಧವಿಧವಾಗಿ ಕೊಲ್ಲುತ್ತಿದ್ದಾರೇಕೆ? ತಿದ್ದುತೇವೆ ಎನ್ನುತ್ತಾ ಏಕೆ ತಲೆಯನ್ನೇ ತೆಗೆಯುತ್ತಿದ್ದಾರೆ? ಇದರಿಂದ ಯಾವ ಉಪಯೋಗಗಳನ್ನು ಕೇಂದ್ರ ಸರಕಾರ ಆಶಿಸುತ್ತಿದೆ? ಭ್ರಷ್ಟಾಚಾರ ವಿರೋಧಿ ಎಂದು ಸದಾ ಹೇಳಿಕೊಳ್ಳುತ್ತಿರುವ ಬಿಜೆಪಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಮಾಹಿತಿ ಹಕ್ಕು ಕಾನೂನನ್ನು ಏಕೆ ನೀರು ಪಾಲು ಮಾಡುತ್ತಿದೆ?


ಒಟ್ಟಿನಲ್ಲಿ ಆರ್‌ಟಿಐಯನ್ನು ಕೊಂದು ಹಾಕಿದರು. ‘ಯು ಟೂ ಬ್ರೂಟಸ್’ ಎಂಬಂತೆ ಅನೇಕ ರಾಜಕೀಯ ಪಕ್ಷಗಳು ಸೇರಿ ಈ ಹತ್ಯೆ ಮಾಡಿವೆ. ರಾಜ್ಯ ಸಭೆಯಲ್ಲಿ ಹಿರಿಯರು ತುಸು ಆಲೋಚಿಸಿ ಈ ಕೆಲಸಕ್ಕೆ ಬಾರದ ತಿದ್ದು ಪಡಿಯನ್ನು ವಿರೋಧಿಸುತ್ತಾರೆ ಅಂದುಕೊಂಡರೆ, ಅವರೆಲ್ಲ ಆಡಳಿತ ಪಕ್ಷದ ಹೆಜ್ಜೆಯಲ್ಲಿ ಹೆಜ್ಜೆ ಹಾಕಿದರು. ತೆಲಂಗಾಣದ ಆಶಾ ದೀಪ ಟಿಆರ್‌ಎಸ್, ಆಂಧ್ರಪ್ರಜೆಗಳು ಇದೀಗ ನಂಬಿಕೊಂಡಿರುವ ಜಗನ್ ಪಕ್ಷ, ಒಡಿಶಾವನ್ನು ಅವಿಚ್ಛಿನ್ನವಾಗಿ ಆಳುತ್ತಿರುವ ಬಿಜೂ ಜನತಾದಳ ಮುಖಂಡ ನವೀನ್ ಪಟ್ನಾಯಕ್ ಎಲ್ಲರೂ ಬಿಜೆಪಿ ಭಯಕ್ಕೆ ಶರಣಾದರು. ಪ್ರಜೆಗಳ ಹೃದಯದಂತಿದ್ದ ಮಾಹಿತಿ ಹಕ್ಕಿಗೆ ನೇರವಾಗಿ ಇರಿದರು. ಪ್ರಧಾನಿ ಮೋದಿ ಸ್ವತಃ ಒಡಿಶಾ ಮುಖ್ಯಮಂತ್ರಿಗೆ ಫೋನ್ ಮಾಡಿ ಆರ್‌ಟಿಐ ಬದಲಾವಣೆಗಳಿಗೆ ಬೆಂಬಲ ಕೊಡಿ ಎಂದು ಕೋರಿದ್ದರು. ಟಿಆರ್‌ಎಸ್ ನಾಯಕ ಕೆ.ಕೇಶವರಾವ್ ಈ ಬಿಲ್ ಆರ್‌ಟಿಐಯನ್ನು ಮುಳುಗಿಸುತ್ತದೆ, ಸಿಐಸಿಯನ್ನು ದುರ್ಬಲಗೊಳಿಸುತ್ತದೆ ಎನ್ನುತ್ತಾ, ಸೆಲೆಕ್ಟ್ ಕಮಿಟಿಗೆ ಕಳುಹಿಸಬೇಕೆಂದು ಕೋರಿದರು. ಅದಕ್ಕೆ ಮುನ್ನ ಟಿಆರ್‌ಎಸ್ ಲೋಕಸಭೆಯಲ್ಲಿ ಈ ಬಿಲ್‌ನ ವಿರೋಧಿಸಿ ಸೆಲೆಕ್ಟ್ ಕಮಿಟಿಗೆ ಕಳುಹಿಸಬೇಕೆಂದು ಸಹಿ ಕೂಡಾ ಮಾಡಿತ್ತು. ಆದರೆ ಆನಂತರದ ಬೆಳವಣಿಗೆಯಲ್ಲಿ ಯೂಟರ್ನ್ ಪಡೆದುಕೊಂಡು ತಿದ್ದುಪಡಿಗೆ ಬೆಂಬಲ ನೀಡಿದೆ. ಇನ್ನು ವೈಎಸ್‌ಆರ್‌ಸಿಪಿ ವಿಜಯ ಸಾಯಿ ರೆಡ್ಡಿ ನಾವು ತಿದ್ದುಪಡಿಯನ್ನು ಸಮರ್ಥಿಸುತ್ತೇವೆ ಎಂದು ಹೇಳಿ ಸಹಕರಿಸಿದರು. ರಾಜ್ಯಗಳ ಅಧಿಕಾರಗಳನ್ನು ತಗ್ಗಿಸುವ ಈ ಬಿಲ್‌ಗಳನ್ನು ಏಕೆ ಸಮರ್ಥಿಸಿದ್ದೀರೆಂದು ವಿವರಿಸಬಲ್ಲರೇ! ಎಂದು ಈ ಮೂರು ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಕೇಳಿ ಬರೆದ ಬಹಿರಂಗ ಪತ್ರಕ್ಕೆ ಇದುವರೆಗೆ ಉತ್ತರ ಇಲ್ಲ. ಒಣಗಿಹೋದ ಬಡಮನುಷ್ಯನಿಗೆ ಸಾಧನವಾಗಿ ಉಪಕರಿಸುತ್ತಿರುವ ಒಂದು ಹಕ್ಕನ್ನು ನಾವು ತಂದು ಕೊಂಡೆವು. ಈಗ ಈ ಹಕ್ಕನ್ನು ಇವರು ವಿಧವಿಧವಾಗಿ ಕೊಲ್ಲುತ್ತಿದ್ದಾರೇಕೆ? ತಿದ್ದುತೇವೆ ಎನ್ನುತ್ತಾ ಏಕೆ ತಲೆಯನ್ನೇ ತೆಗೆಯುತ್ತಿದ್ದಾರೆ? ಇದರಿಂದ ಯಾವ ಉಪಯೋಗಗಳನ್ನು ಕೇಂದ್ರ ಸರಕಾರ ಆಶಿಸುತ್ತಿದೆ? ಭ್ರಷ್ಟಾಚಾರ ವಿರೋಧಿ ಎಂದು ಸದಾ ಹೇಳಿಕೊಳ್ಳುತ್ತಿರುವ ಬಿಜೆಪಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಮಾಹಿತಿ ಹಕ್ಕು ಕಾನೂನನ್ನು ಏಕೆ ನೀರು ಪಾಲು ಮಾಡುತ್ತಿದೆ? ಈ ಕಾನೂನಿಗೆ ಭ್ರಷ್ಟಾಚಾರದ ಮೂಲವನ್ನು ಹುಡುಕಿ ತೆಗೆವ ಶಕ್ತಿ ಇದೆ ಎಂದು ಎಷ್ಟೋ ಸಲ ಸಾಬೀತಾಗಿದೆ. ಆರ್‌ಟಿಐಯನ್ನು ನೀರು ಪಾಲು ಮಾಡುವುದೆಂದರೆ ಭ್ರಷ್ಟಾಚಾರಕ್ಕೆ ಬಾಗಿಲು ತೆರೆದಂತೆಯೇ. ಆರ್‌ಟಿಐಯನ್ನು ಇನ್ನೂ ಬಲಿಷ್ಟಗೊಳಿಸಬೇಕೆಂದು ಕಮೀಷನರ್ ಆಗುವ ಮುನ್ನ, ಕಮೀಷನ್‌ನಲ್ಲಿ ಇದ್ದಾಗ ಮತ್ತು ಆ ಬಳಿಕವೂ ಗಟ್ಟಿಯಾಗಿ ಮೀಡಿಯಾ, ಸೋಷಿಯಲ್ ಮೀಡಿಯಾಗಳ ಮೂಲಕ ಚರ್ಚಿಸುತ್ತಲೇ ಇದ್ದೇನೆ. ಆಡಳಿತ ಪಕ್ಷದ ಅನುಯಾಯಿಗಳಿಗೆ ಅದು ಇಷ್ಟವಾಗಲಿಲ್ಲ. ಆರ್‌ಟಿಐನಿಂದ ಪ್ರಯೋಜನಗಳು ಪಕ್ಷಾತೀತವಾಗಿವೆ ಎಂದು ಪಕ್ಷಗಳು, ಅವರ ವಿಧೇಯರು, ವೀರಾಭಿಮಾನಿಗಳು, ಬೆಂಬಲಿಗರು ಸಹ ಗುರುತಿಸದೇ ಹೋದರೆ ನಮ್ಮ ಓದು ಬರಹ ಯಾವ ಪುರುಷಾರ್ಥಕ್ಕೆ?

ದೇಶದಲ್ಲಿ ಲಕ್ಷಾಂತರ ಸರಕಾರಿ ಕಾರ್ಯಾಲಯಗಳು ನೂರಾರು ಯೂನಿವರ್ಸಿಟಿಗಳು, ಸಾವಿರಾರು ಕಾಲೇಜುಗಳು, ಪಾಠ ಶಾಲೆಗಳು... ಪ್ರತಿ ಸ್ಥಳದಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಲಂಚಗುಳಿತನ ಇದೆ. ಲಕ್ಷಾಂತರ ಕಚೇರಿಗಳಲ್ಲಿ ದಿನವೂ ಸಾವಿರಾರು ರೂಪಾಯಿಗಳ ಭ್ರಷ್ಟಾಚಾರ ನಡೆಯುತ್ತಿದೆ ಅಂದುಕೊಂಡರೂ ದಿನವೂ ದೇಶಾದ್ಯಂತ ಕೆಲವು ಸಾವಿರ ಕೋಟಿಗಳ ಭ್ರಷ್ಟಾಚಾರ ನಡೆಯುತ್ತದೆಯೆಂದು ಅರ್ಥ. ನಮ್ಮ ನಾಯಕರು, ಕೋರ್ಟುಗಳು ಮತ್ತು ಸಿಬಿಐ ಕೆಲವು ಸಾವಿರ ಕೋಟಿಗಳ ಭ್ರಷ್ಟಾಚಾರ ಕುರಿತು ಮಾತ್ರವೇ ತಲೆಕೆಡಿಸಿಕೊಳ್ಳುತ್ತವೆ. ಸಣ್ಣ ಮೊತ್ತಗಳಲ್ಲಿ ದೇಶಾದ್ಯಂತ ವ್ಯಾಪಿಸಿರುವ ಅಕ್ರಮವನ್ನು ವಿರೋಧಿಸುವುದು, ತಡೆಯಲು ಸಮರ್ಥವಾದುದು ಆರ್‌ಟಿಐ ಒಂದೇ. ಈ ದುಷ್ಟರಿಂದ ಭಾದಿತರೆಲ್ಲರಿಗೂ ಆಸರೆ ಆರ್‌ಟಿಐ ಒಂದೇ. ರಾಜಕೀಯ ಸಂಬಂಧಗಳಿದ್ದರೆ ಸಾಕು ತಮ್ಮನ್ನು ಯಾರೂ ಏನೂ ಮಾಡಲಾರರು ಎಂದು ಬೀಗುವ ಐಎಎಸ್ ಅಧಿಕಾರಿಗಳ, ವೈಸ್ ಚಾನ್ಸಲರ್‌ಗಳ ಆಕ್ರಮಗಳಿಗೆ ಎಷ್ಟು ಜನ ಸಣ್ಣ ಉದ್ಯೋಗಿಗಳು, ಅಸಿಸ್ಟೆಂಟ್‌ಗಳು ಸಂಕಟಕ್ಕೀಡಾಗಿದ್ದಾರೆಂದು ಹೆಚ್ಚಿನವರಿಗೆ ತಿಳಿಯದು. ಈ ಅಧಿಕಾರಿಗಳು, ವಿಸಿಗಳ ಚಮಚಾಗಳು ಸಹ ಸಾಮಾನ್ಯರನ್ನು ಎಷ್ಟು ಅಳಿಸಿದ್ದಾರೆಂದು ಅನುಭವಿಸಿದವರಿಗೆ ತಿಳಿಯುತ್ತದೆ. ಅರಣ್ಯಾಧಿಕಾರಿಗಳು ಗಿರಿಜನರ ಬದುಕುಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದಾರೆಂಬುದು ಕೂಡಾ ಅನುಭವಿಸಿದವರಿಗಷ್ಟೇ ಗೊತ್ತು.
ತಲೆ ಮೇಲೆ ಚಾರ್ಜ್‌ಶೀಟ್ ನೇತಾಡುತ್ತಿರುವವರು ಕೂಡಾ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಗಳು, ಮಂತ್ರಿಗಳು, ಎಂಪಿಗಳು ಎಂಎಲ್‌ಎಗಳಾಗಿ ದೇಶವನ್ನು ಆಳುತ್ತಿದ್ದರೆ, ಕೇವಲ ಸಂಶಯದ ಮೇಲೆ, ಯಾವ ಸಾಕ್ಷಗಳೂ ಇಲ್ಲದೇ ಹೋದರೂ ವರವರ ರಾವ್‌ರಂಥವರು ಪ್ರಜಾ ಹಕ್ಕುಗಳಿಗೋಸ್ಕರ ಕವಿತೆಗಳು ರಚನೆ ಮಾಡುತ್ತಿದ್ದುದಕ್ಕೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಸರಿಯಾದ ಆಹಾರ ಇಲ್ಲ. ಚಿಕಿತ್ಸೆ ಇಲ್ಲ. ಜೈಲು ಮ್ಯಾನುವಲ್ ಪ್ರಕಾರ ಕನಿಷ್ಠ ಸೌಕರ್ಯಗಳು ಇರಬೇಕು ಎಂದು ಕೇಳಬೇಕೆಂದರೆ ಮ್ಯಾನುವಲ್ ಕಾಪಿ ಇರಬೇಕು. ಆರ್‌ಟಿಐ ಕೆಳಗೆ ಕೇಳಿದರೂ ಜೈಲ್ ಅಧಿಕಾರಿಗಳು ಕೊಡರು. ಕನಿಷ್ಠ ಕೇಳುವುದಕ್ಕಾದರೂ ಆರ್‌ಟಿಐ ಒಂದು ಸಾಧನ. ಅದು ಬ್ರಹ್ಮಾಸ್ತ್ರ ಎಂಬುದು ಅತಿಶಯೋೀಕ್ತಿ ಅಗತ್ಯ ಇಲ್ಲ. ವ್ಯವಸ್ಥೆಯನ್ನು ಬಿಗಿಗೊಳಿಸುವ ಸ್ಕ್ರೂಡ್ರೈವರ್ ಅದು. ಅದರಲ್ಲಿನ ಕಬ್ಬಿಣವನ್ನು ಕಿತ್ತೆಸೆಯವುದೇ ಬಿಜೆಪಿ, ಅದರ ಮಿತ್ರ ಪಕ್ಷಗಳು ಸೇರಿ ತಂದಿರುವ ಈ ತಿದ್ದುಪಡಿ.
ದೇಶ ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನ ಬೆಲೆಕಳೆದುಕೊಂಡಿದೆ. ಮಹಾರಥರಾದ ಜನಪ್ರತಿನಿಧಿಗಳು ಖರೀದಿ ವಸ್ತುಗಳಾಗಿ ಹೋಗಿದ್ದಾರೆ. ಕೊಳ್ಳುವ ದೊಡ್ಡವರು ಕೊಳ್ಳುತ್ತಾರೆ. ಇಲ್ಲದೆ ಹೋದರೆ ಅವರ ರಾಜೀನಾಮೆಗಳನ್ನು ಕೊಳ್ಳುತ್ತಾರೆ. ಅಧಿಕಾರಿಗಳನ್ನು ಕೊಳ್ಳುತ್ತಾರೆ. ಲಾಯರ್‌ಗಳನ್ನು, ಕೋರ್ಟುಗಳನ್ನು, ತೀರ್ಪುಗಳನ್ನು ಅನುಕೂಲವಾಗಿ ಸಾಧಿಸಿಕೊಳ್ಳುವುದಕ್ಕೆ ಎಲ್ಲಾ ದಾರಿಗಳನ್ನು ಅನುಸರಿಸುತ್ತಾರೆ. ಒಂದೊಮ್ಮೆ ಆರ್‌ಟಿಐಯನ್ನು ಸಮರ್ಪಕವಾಗಿ ಜಾರಿ ಮಾಡಿದರೆ ಈ ಆಟಗಳಾವುವೂ ಸಾಗವು. ಆದ್ದರಿಂದ ಅದನ್ನೇ ನಿಸ್ಸತ್ವಗೊಳಿಸುತ್ತಿದ್ದಾರೆ.

ತಿಂಗಳಿಗೆ 500-600ರೂ.ಗಳ ಪೆನ್ಶನ್ ಆರು ತಿಂಗಳು ತಲುಪದೇ ಹೋದರೆ ಆ ನಿರ್ಭಾಗ್ಯರು ಯಾವ ಕೋರ್ಟಿಗೆ ಹೋಗಬಲ್ಲರು? ಅದು ಬದುಕುವ ಹಕ್ಕು ಎಂದು ನೀವು ನೇರವಾಗಿ ನಮ್ಮ ಬಾಗಿಲು ತಟ್ಟಬಹುದು ಎಂದು ಸುಪ್ರೀಂ ಕೋರ್ಟ್ ಸಾಕಷ್ಟು ತೀರ್ಪುಗಳನ್ನು ಕೊಟ್ಟಿದ್ದರೂ. ಆದರೆ 10ರೂ.ಗಳ ಆರ್‌ಟಿಐನಿಂದ ಅಂತಹ ನೂರಾರು ಮಂದಿಗೆ ಪಿಂಚಣಿ ಮತ್ತೆ ಸಿಕ್ಕಿದೆ. ಕೇವಲ 10 ರೂ.ಗಳಿಂದ ಕೊಂಚವಾದರೂ ನ್ಯಾಯ ಸಿಕ್ಕವರು ಅಸಂಖ್ಯಾತರಿದ್ದಾರೆ. ಕೆಳಗಿನ ಕೋರ್ಟಿನಿಂದ ಸುಪ್ರೀಂಕೋರ್ಟ್‌ವರೆಗೆ ಸಿಕ್ಕದ ಪರಿಹಾರ ಆರ್‌ಟಿಐನಡಿ ಸಿಕ್ಕಿದೆ. ಈಗ ಇದಕ್ಕೂ ಕುತ್ತು ತಂದಿದ್ದಾರೆ. ಆರ್‌ಟಿಐಯನ್ನು ಮುಳುಗಿಸುವುದಕ್ಕೆ ವಿಧವಿಧವಾದ ತಂತ್ರ-ಕುತಂತ್ರಗಳನ್ನು ಮಾಡಿದರು. ಹೊಸ ನಿಯಮಗಳನ್ನು ತರುತ್ತೇವೆ ಎನ್ನುತ್ತಾ ಮಾಹಿತಿ ಕಮಿಷನ್ ಅಧಿಕಾರಗಳನ್ನು ಕತ್ತರಿಸಬೇಕೆಂದುಕೊಂಡರು. ನಾನು ತೀವ್ರವಾಗಿ ಪ್ರತಿಭಟಿಸಿದೆ. 2018ರಲ್ಲಿ ನಾನು ಬರೆದ ಪತ್ರಗಳು ಮಾಧ್ಯಮಗಳ ಮೂಲಕ ಹೊರಬಿದ್ದವು. ಹಾಗಾಗಿ ಹಿಂದೆ ಸರಿದರು. ಸಾಮಾನ್ಯ ಮಾಹಿತಿ ಕೊಡುವುದನ್ನು ವ್ಯವಸ್ಥಿತವಾಗಿ ನಿಲ್ಲಿಸುವ ಪ್ರಯತ್ನಗಳಿಗೆ ವಿರುದ್ಧವಾಗಿ ಕಮಿಷನರ್ ಸ್ಥಾನದಲ್ಲಿದ್ದು ಹೋರಾಡಿದ್ದೇನೆ, ಈಗಲೂ ಹೋರಾಡುತ್ತಲೇ ಇದ್ದೇನೆ. ಈ ನೆಲೆಯಲ್ಲಿ ಕೆಲವೆಡೆ ಜಯಸಿಕ್ಕರೂ ಈ ತಿದ್ದುಪಡಿ ತಡೆಯಲಾರದೇ ಹೋದುದು ದೊಡ್ಡ ಸೋಲು.
ಇನ್ನು ಈ ತಿದ್ದುಪಡಿ ನಂತರ ಏನಾಗಬಹುದೋ ನೋಡೋಣ. ಕಮಿಷನರ್‌ಗಳಿಗೆ ಕಾನೂನು ಪ್ರಕಾರದ 5 ವರ್ಷಗಳ ಅಧಿಕಾರ ಇರದು. ಪ್ರತಿಸಲ ನೇಮಿಸುವಾಗ ನೋಟಿಫಿಕೇಶನ್ ಕೊಡುತ್ತಾ ಕಡಿಮೆ ಸಂಬಳ, ಕಡಿಮೆ ಅಧಿಕಾರಾವಧಿ, ಕೆಳಗಿನ ಸ್ಥಾನ ನಿರ್ಣಯಿಸುತ್ತಾರೆ. ಒಂದು ಸಲ ಎರಡು ವರ್ಷ ಎನ್ನಬಹುದು, ಮತ್ತೊಂದು ಸಲ ನಾಲ್ಕು ವರ್ಷ ಎನ್ನಬಹುದು. ಸ್ಥಾನ ಜಾಯಿಂಟ್ ಸೆಕ್ರೆಟರಿ ಅಥವಾ ಮತ್ತೊಂದು ಸ್ಥಾಯಿ (ಇವೆಲ್ಲಾ ಉದಾಹರಣೆಗಳಷ್ಟೆ). ಈ ವಿಧವಾಗಿ ನಿಯಮಿತರಾದ ಮಾನವತಾವಾದಿಗಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಾರೆಯೇ? ಅವರು ಮಾಹಿತಿ ಕಾನೂನು ಪ್ರಕಾರ ಮಾಹಿತಿ ಕೊಡಬೇಕಾಗಿದ್ದರೂ ಸಹ ಕೊಡಬೇಕೆಂದು ಆದೇಶ ಜಾರಿ ಮಾಡಲು ಅಧಿಕಾರಸ್ಥರು ಬಿಡುತ್ತಾರೆಯೇ? ಬೇಡವೆಂದು ಆದೇಶ ಕೊಟ್ಟಲ್ಲಿ ಆ ಕಮಿಷನರ್ ಏನಾಗುತ್ತಾನೆ?

ಮಾಹಿತಿ ಹಕ್ಕು ಕಾನೂನಿನಲ್ಲಿ ಉಳಿದ ನಿಯಮಗಳಾವುವೂ ಬದಲಾಗಿಲ್ಲ. ಹಕ್ಕಿನ ಪರಿಮಿತಿಗಳು ಪರಿಧಿಗಳು ಹಿಂದಿನವೇ. ಆದರೆ ಕಮಿಷನರ್ ಬೆನ್ನು ಮೂಳೆಯನ್ನೇ ಮುರಿದಿದ್ದಾರೆ. ಇಷ್ಟು ಮಂದಿ ಎಂಪಿಗಳಿದ್ದಾರೆ. ಇಷ್ಟು ರಾಜಕೀಯ ಪಕ್ಷಗಳಿವೆ. ಕೆಲವರು ಹೊರತು ಎಲ್ಲರೂ ವೌನ ಆಚರಿಸಿದರೆ ಅದು ಜನಪ್ರತಿನಿಧಿಗಳ ಸಭೆ ಎಂದು ಅನ್ನ ಬಲ್ಲೆವೇ? ಅವರನ್ನು ವಿಮರ್ಶಿಸಿದವರನ್ನು ಬಯ್ಯುವುದೇ ಹೊರತು ಸತ್ಯಾಸತ್ಯಗಳನ್ನು ಯಾರೂ ಗಮನಿಸಿದ್ದಾರೆಯೇ? ಆರ್‌ಟಿಐ ಬಗ್ಗೆ ಒಂದಿಷ್ಟಾದರೂ ಆಲೋಚಿಸಿದರೇ? ಉವೈಸಿ ಈ ತಿದ್ದುಪಡಿಯನ್ನು ವಿರೋಧಿಸಿದರೆ ಅವರನ್ನು ಮತಾಂಧತೆಯಿಂದ ನಿಂದಿಸಲಾಗುತ್ತದೆ, ಶಶಿ ತರೂರ್ ವಿರೋಧಿಸಿದರೆ ಅವರ ಮೇಲೆ ಕೇಸ್‌ಗಳನ್ನು ಹಾಕಲಾಗುತ್ತದೆ.. ಈ ಕುರಿತು ಯಾರೂ ಕೇಳುವಂತಿಲ್ಲ.
ಆದ್ದರಿಂದ ಭ್ರಷ್ಟಾಚಾರವನ್ನು ವಿರೋಧಿಸುವ ನಿಜನಾಗರಿಕರಿಗೆ ನನ್ನ ವಿನಂತಿ. ಮಾಹಿತಿ ಹಕ್ಕನ್ನು ಕಾಪಾಡಿಕೊಳ್ಳಿ. ಪ್ರಾಣ ತೆಗೆವ ಘೋಷಣೆಗಳಿಗಿಂತ ಮಾಹಿತಿ ಹಕ್ಕಿಗೆ ಹೆಚ್ಚಿನ ಶಕ್ತಿ ಇದೆ. ಇದನ್ನು ನಂಬಿರಿ. ಮಾಹಿತಿ ಹಕ್ಕನ್ನು ವಿರೋಧಿಸುತ್ತಿದ್ದಾರೆ ಎಂದರೆ ಅಕ್ರಮ ಬಯಸುವವರು ಎಂದು ಅನುಮಾನಿಸಿರಿ. ಈ ದೇಶ ಸಂವಿಧಾನವನ್ನು ಕಾಪಾಡಿಕೊಳ್ಳಿರಿ.

ಸಂವಿಧಾನ ಸಭೆಯಲ್ಲಿ ಕೊನೆಯ ದಿನದಂದು ಬಿ.ಆರ್. ಅಂಬೇಡ್ಕರ್ ಹೇಳಿದ ವೌಲ್ಯಯುತ ಮಾತುಗಳ ನೆನಪು ಮಾಡುತ್ತೇನೆ:
‘‘ಜಾನ್ ಸ್ಟುವರ್ಟ್ ಮಿಲ್ ಎಂಬ ಶ್ರೇಷ್ಠ ಸಂವಿಧಾನ ತತ್ವವೇತ್ತ, ಆಡಳಿತಗಾರ ಎಷ್ಟು ಶ್ರೇಷ್ಠನಾದರೂ ಸರಿ, ಆತನ ಪಾದಗಳ ಮೇಲೆ ನಿಮ್ಮ ಸ್ವಾತಂತ್ರವನ್ನು ಇಡಬೇಡಿರಿ. ಅಷ್ಟೊಂದು ನಂಬಬೇಡಿ. ಹಾಗೆ ಮಾಡಿದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಹಾಳು ಮಾಡಿಬಿಡಬಹುದು. ಬದುಕೆಲ್ಲಾ ದೇಶಕ್ಕೋಸ್ಕರ ತ್ಯಾಗ ಮಾಡಿದ ಶ್ರೇಷ್ಠರಿಗೆ ಕೃತಜ್ಞರಾಗಿರುವುದರಲ್ಲಿ ತಪ್ಪಿಲ್ಲ. ಆದರೆ ಅದಕ್ಕೂ ಮಿತಿಗಳಿವೆ. ಐರಿಷ್ ದೇಶಭಕ್ತ ಡೇನಿಯಲ್ ಒಕಾನೆಲ್ ಹೇಳುತ್ತಾನೆ- ಒಬ್ಬ ಪುರುಷನಿಗೆ ತನ್ನ ಆತ್ಮಗೌರವವನ್ನು ಕೊಂದುಕೊಂಡಷ್ಟು, ಒಬ್ಬ ಸ್ತ್ರೀಗೆ ತನ್ನ ಶೀಲವನ್ನು ಬಲಿ ಕೊಡುವಷ್ಟು, ಒಂದು ದೇಶ ತನ್ನ ಸ್ವಾತಂತ್ರವನ್ನು ಬಲಿಹಾಕುವಷ್ಟು ಅತಿರೇಕಕ್ಕೆ ಹೋಗ ಕೂಡದು. ರಾಜಕೀಯದಲ್ಲಿ ಭಕ್ತಿ, ವ್ಯಕ್ತಿ ಪೂಜೆ ಪತನಕ್ಕೆ, ಸರ್ವಾಧಿಕಾರಕ್ಕೆ ರಾಜಮಾರ್ಗ.’’

ಕೃಪೆ: ಆಂಧ್ರಜ್ಯೋತಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)