varthabharthi


ನಿಮ್ಮ ಅಂಕಣ

ಪ್ರಜಾತಂತ್ರದ ಸಣ್ಣಸಣ್ಣ ಧ್ವನಿಗಳು

ವಾರ್ತಾ ಭಾರತಿ : 7 Aug, 2019
ಗೋಪಾಲ್ ಗುರು

ಪ್ರಜಾತಂತ್ರದ ಸಣ್ಣ ಸಣ್ಣ ಧ್ವನಿಗಳ ಪರವಾಗಿ ಮಾಡುವ ವಾದಗಳು ಮೂರು ಕಾರಣಗಳಿಂದ ಕೆಲವರಿಗೆ ತಪ್ಪೆನಿಸಬಹುದು. ಮೊದಲನೆಯದು ಇಂದಿನ ಆಧುನಿಕ ಪ್ರಜಾತಂತ್ರದ ಚೌಕಟ್ಟಿಗೆ ಪ್ರಜಾತಂತ್ರದ ಸಣ್ಣ ಧ್ವನಿಗಳು ಸುಸಂಗತವಲ್ಲವೆಂದು ಹಲವರಿಗೆ ಅನಿಸಬಹುದು. ಇದು ಏಕೆಂದರೆ ಪ್ರಜಾಪ್ರಭುತ್ವದ ಸಿದ್ಧಾಂತದ ಪ್ರಕಾರ ಅದು ದೊಡ್ಡ ಮತ್ತು ಸಣ್ಣ ಎಂಬ ಭೇದಭಾವವಿಲ್ಲದೆ ಎಲ್ಲಾ ಧ್ವನಿಗಳಿಗೂ ಸಮಾನನೆಲೆಯನ್ನು ಕಲ್ಪಿಸಿಕೊಡುತ್ತದೆ. ನಮ್ಮ ಸಂವಿಧಾನದಲ್ಲಿ ನೀಡಲ್ಪಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಹೀಗೆ ಅರ್ಥೈಸಿಕೊಳ್ಳುತ್ತೇವೆ. ಎರಡನೆಯದಾಗಿ ಸೈದ್ಧಾಂತಿಕವಾಗಿ ಭಾರತದ ಪ್ರಭುತ್ವವು ಎಲ್ಲಾ ನಾಗರಿಕರ ಧ್ವನಿಗಳ ಪ್ರತಿನಿಧಿ ಎಂದು ಭಾವಿಸಲಾಗುತ್ತದೆ. ನಮ್ಮ ಸಾಂವಿಧಾನಾತ್ಮಕ ನಿಲುವು ಹೀಗಿರುವಾಗ ಪ್ರಜಾತಂತ್ರದ ಸಾರ್ವಜನಿಕ ಜೀವನದಲ್ಲಿ ದೊಡ್ಡ ಮತ್ತು ಸಣ್ಣ ಧ್ವನಿಗಳೆಂಬ ವ್ಯತ್ಯಾಸಗಳಿಗೆ ತಾವೆಲ್ಲಿಯದು? ಇದರ ಮುಂದುವರಿಕೆಯಾಗಿ ಹೇಳುವುದಾದಲ್ಲಿ ಆಳುವ ಪಕ್ಷವು, ತನಗೆ ವೋಟು ಮಾಡದ ನಾಗರಿಕರನ್ನೂ ಒಳಗೊಂಡಂತೆ ಎಲ್ಲಾ ಭಾರತೀಯರ ಧ್ವನಿಯಾಗಿ ವ್ಯಕ್ತಗೊಳ್ಳಬೇಕು. ಹೀಗಾಗಿ ಅದು ಸಣ್ಣ ಮತ್ತು ದೊಡ್ಡ ಧ್ವನಿಗಳೆಂಬ ವ್ಯತ್ಯಾಸವನ್ನು ಹೊಡೆದುಹಾಕುತ್ತದೆ.

ಅಂತಿಮವಾಗಿ ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಚಳವಳಿಗಳೂ ಕೂಡಾ ತಮ್ಮನ್ನು ತಾವು ಪ್ರಜಾತಂತ್ರದ ಸಣ್ಣ ಧ್ವನಿಗಳು ಎಂದು ಬಣ್ಣಿಸಿಕೊಳ್ಳುತ್ತಿರುವಾಗ ಅದು ಪ್ರತಿರೋಧದ ಧ್ವನಿಗಿಂತ ಸ್ವತಂತ್ರವಾದ ಮತ್ತೊಂದು ಧ್ವನಿಯ ಅಗತ್ಯವನ್ನೇ ಹುಟ್ಟುಹಾಕಬಾರದು. ಆದರೂ ಇಂದು ನಾವು ಭಾರತದ ಪ್ರಜಾತಂತ್ರದಲ್ಲಿ ಇಂತಹ ಸ್ವತಂತ್ರ ಧ್ವನಿಗಳು ಮೂಕವಾಗಿಯೂ ಮತ್ತು ಧ್ವನಿಪೂರ್ಣವಾಗಿಯೂ ಪ್ರತಿಧ್ವನಿಸುತ್ತಿರುವುದನ್ನು ಕಾಣುತ್ತೇವೆ. ಪ್ರಜಾಪ್ರಭುತ್ವವು ಎಲ್ಲಾ ಧ್ವನಿಗಳಿಗೂ ಸಮಾನ ಅವಕಾಶ ನೀಡುವ ಮೂಲಕ ಎಲ್ಲರನ್ನೂ ಸಬಲೀಕರಿಸುತ್ತದೆಂದು ಹೇಳುತ್ತಿದ್ದರೂ ಒಂದು ಪ್ರಜಾತಂತ್ರದಲ್ಲಿ ಅಲಕ್ಷಿತ ಧ್ವನಿಗಳು ಒಂದು ಸಜೀವ ಪ್ರಜಾತಂತ್ರದ ಅನಿವಾರ್ಯ ಅಭಿವ್ಯಕ್ತಿಗಳಾಗಿವೆ. ನಿಗೂಢವೇನೆಂದರೆ ಆದಿವಾಸಿಗಳ, ದಲಿತರ, ಅಲ್ಪಸಂಖ್ಯಾತರ ಮತ್ತು ಕಾರ್ಮಿಕರ ಧ್ವನಿಗಳು ಸಣ್ಣ ಧ್ವನಿಗಳಾಗಿಯೇ ಇರುತ್ತವೆ. ಎಲ್ಲಾ ಸರಕಾರಗಳ ಅಧಿಕಾರಾವಧಿಯಲ್ಲೂ ಅದೇ ಜನರು ನ್ಯಾಯ, ಸಮಾನತೆ ಮತ್ತು ಘನತೆಗಳ ಬಗ್ಗೆ ಅದೇ ಧ್ವನಿಯೆತ್ತುವುದನ್ನು ನಾವು ಕಾಣುತ್ತೇವೆ. ಈ ಧ್ವನಿಗಳ ತೀವ್ರತೆಯನ್ನು ಮತ್ತು ಅವು ಪದೇಪದೇ ಕೇಳಿಬರುವುದನ್ನು ಸಿನಿಕ ಧ್ವನಿಗಳೆಂದು ಬಣ್ಣಿಸಿಬಿಡಲಾಗುತ್ತಿದೆ. ಇಂತಹ ಧ್ವನಿಗಳಿಗೆ ಶಾಶ್ವತ ಅಸಮಾಧಾನಗಳಿವೆಯೆಂಬಂತೆ ಚಿತ್ರಿಸುತ್ತಾ ಅವುಗಳ ಹಿಂದೆ ಯಾವುದೇ ಬಲವಾದ ಕಾರಣವಿರುವುದನ್ನೇ ನಿರಾಕರಿಸಲಾಗುತ್ತದೆ. ಆದರೆ ಈ ‘ಪದಾಂಕಿತ ಸಿನಿಕತನ’ಕ್ಕೆ ಒಂದು ಆಂತರಿಕ ಕಾರಣವಿದೆ.

ಅದರ ಜೊತೆಗೆ ಎಲ್ಲಾ ನಾಗರಿಕ ಧ್ವನಿಗಳಿಗೂ ಸಮಾನ ಅವಕಾಶವನ್ನು ಕಲ್ಪಿಸುವ ಭರವಸೆಗಳನ್ನು ಸಂವಿಧಾನವು ಸೈದ್ಧಾಂತಿಕವಾಗಿ ನೀಡಿದರೂ ಆ ಧ್ವನಿಗಳನ್ನು ಅಗತ್ಯವಿರುವಷ್ಟಾದರೂ ಆಲಿಸುವಲ್ಲಿ ಸಮಾಜದ ಬಹುಸಂಖ್ಯಾತರು ಮತ್ತು ಸರಕಾರವು ವಿಫಲವಾಗಿರುವ ಹಿನ್ನೆಲೆಯೂ ಇದೆ. ಧ್ವನಿಗಳು ಪ್ರಜಾತಂತ್ರವನ್ನು ಅಲ್ಲಗೆಳೆಯುವ ಉದ್ದೇಶವನ್ನು ಹೊಂದಿಲ್ಲವೆಂಬುದನ್ನು ಮತ್ತು ತಮ್ಮ ಆವೇದನೆಗಳನ್ನು ವಿವರಿಸುವ ಆಶಯಗಳನ್ನಷ್ಟೇ ಹೊಂದಿವೆಯೆಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಸಂವೇದನಾಶೀಲತೆಯನ್ನು ನಾವು ಹೊಂದಿರಬೇಕಿರುತ್ತದೆ. ಹಾಗೆ ನೋಡಿದರೆ ಆ ಧ್ವನಿಗಳು ನಮ್ಮ ಪ್ರಜಾತಂತ್ರವು ಅವರ ಸಂಘರ್ಷಮಯ ಅಸ್ತಿತ್ವಕ್ಕೆ ಸಂವೇದನಾಶೀಲವಾಗುವಂತೆ ಮಾಡುತ್ತವೆ. ಹೀಗಾಗಿ ಆ ಧ್ವನಿಗಳನ್ನು ಸರಕಾರಕ್ಕಾಗಲೀ, ಪ್ರಜಾತಂತ್ರಕ್ಕಾಗಲೀ ಅಪಾಯವೆಂದು ಪರಿಗಣಿಸುವುದು ಅನ್ಯಾಯ. ಅವು ಹಿಂಸಾಚಾರಗಳಿಗೆ, ವಂಚನೆಗಳಿಗೆ, ದಮನಕ್ಕೆ ಮತ್ತು ಜಾತಿವಾದಿ ದೂಷಣೆಗಳಿಗೆ ತುತ್ತಾದವರ ಧ್ವನಿಗಳಾಗಿದ್ದು ವಾಸ್ತವ ಸತ್ಯಗಳಾಗಿವೆ. ಆ ಧ್ವನಿಗಳು ಆರೋಗ್ಯ ಸೇವೆ, ನಗರ ಯೋಜನೆ ಮತ್ತು ಮಾರುಕಟ್ಟೆ ವೈಫಲ್ಯಗಳಿಗೆ ತಾವು ಮಾತ್ರ ಏಕೆ ಬಲಿಪಶುಗಳಾಗುತ್ತಿದ್ದೇವೆ ಎಂಬ ನಿಗೂಢ ಪ್ರಶ್ನೆಯನ್ನು ಮುಂದಿರಿಸುತ್ತವೆ. ಆ ಧ್ವನಿ ವಿವರಗಳು ತಮ್ಮ ನೋವು ಮತ್ತು ವೇದನೆಗಳನ್ನು ಬಹುಸಂಖ್ಯಾತ ಸಮುದಾಯ ಮತ್ತು ಸರಕಾರದ ನೈತಿಕಶೀಲತೆಯ ಮುಂದಿರಿಸುತ್ತದೆ. ಆ ಧ್ವನಿಗಳು ಅತ್ಯಂತ ಆಕ್ರಮಣಶೀಲ ವ್ಯಕ್ತಿಗಳನ್ನೂ ಒಳಗೊಂಡಂತೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮಾನವೀಯ ಸ್ಪಂದನೆಗೆ ಸದಾ ಜಾಗವಿರುತ್ತದೆಂಬ ನಿರೀಕ್ಷೆಯನ್ನಿಟ್ಟುಕೊಂಡಿರುತ್ತವೆ.

ಅದೇ ರೀತಿ ಈ ಸಣ್ಣ ಧ್ವನಿಗಳ ಅಭಿವ್ಯಕ್ತಿಯು ಎಷ್ಟೇ ಕರ್ಣ ಕಠೋರವಾಗಿದ್ದರೂ ತಾರ್ಕಿಕವಾಗಿಯೇ ಕಂಡುಬರುತ್ತವೆ. ವಿಶೇಷವಾಗಿ ಆಂತರಿಕ ಸುಧಾರಣೆಗೆ ಸಾಧ್ಯವಿರುವ ಸಂದರ್ಭವು ಈ ಧ್ವನಿಗಳಿಗೆ ಶಕ್ತಿಯನ್ನು ತುಂಬುತ್ತವೆ ಅಥವಾ ಅದು ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಕೋಟಾಗಳಿಗಾಗಿ ಕಂಡುಬಂದಂತಹ ಬಲವಾದ ಧ್ವನಿಗಳನ್ನು ಮೊದಲ ಆದ್ಯತೆಯಲ್ಲಿ ಕೇಳಿಸಿಕೊಳ್ಳಲು ಮುಂದಾಗಬಹುದು. ಯಾವ ಧ್ವನಿಗಳು ದಿನೇ ದಿನೇ ಕ್ಷೀಣಗೊಳ್ಳುತ್ತಾ ಹೋಗುತ್ತಿದೆಯೋ ಆ ಧ್ವನಿಗಳಿಗೆ ಪ್ರಭುತ್ವವು ಹೆಚ್ಚು ಬೆಂಬಲ ನೀಡಬೇಕೆಂದು ಒಂದು ನೈತಿಕ ನೆಲೆಯಲ್ಲಿ ನಿರೀಕ್ಷಿಸಲಾಗುತ್ತದೆ. ಆದರೆ ಪ್ರಮುಖ ಪ್ರತಿರೋಧ ಧ್ವನಿಗಳೂ ಸಹ ಈ ಸಣ್ಣ ಧ್ವನಿಗಳನ್ನು ಆಲಿಸುತ್ತಿಲ್ಲ. ಈ ಸಣ್ಣ ಧ್ವನಿಗಳು ಎತ್ತುತ್ತಿರುವ ವಿಷಯಗಳ ಸಮಾನ ಭೂಮಿಕೆಯ ಸುತ್ತಾ ಒಂದಾಗಿ ಧ್ವನಿ ಎತ್ತಲು ವಿರೋಧ ಪಕ್ಷಗಳು ವಿಫಲವಾಗಿರುವುದೇ ಆ ನಿರ್ಲಕ್ಷ್ಯದ ಅಭಿವ್ಯಕ್ತಿಯಾಗಿದೆ. ಈ ವಿರೋಧ ಪಕ್ಷಗಳು ಆಳುವ ಪಕ್ಷಕ್ಕೆ ಬದಲಾಗಿ ಮತ್ತೊಂದು ರಾಜಕೀಯ ಪಕ್ಷವು ಅಧಿಕಾರಕ್ಕೆ ಬರುವಂತೆ ಮಾಡಲು ತಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸುತ್ತಿವೆಯೇ ವಿನಾ ಸಣ್ಣ ಧ್ವನಿಗಳನ್ನು ಕೇಳಿಸಿಕೊಳ್ಳಲು ಅಗತ್ಯವಿರುವ ಮತ್ತು ಒಂದು ಮೂಲಭೂತವಾಗಿಯೇ ಪರ್ಯಾಯವಾದ ರಾಜಕೀಯವನ್ನು ನಿರ್ಮಿಸುವಲ್ಲಿ ಕಾಳಜಿ ವಹಿಸುತ್ತಿಲ್ಲ. ಸಣ್ಣ ಧ್ವನಿಗಳಿಗೆ ನಿರಂತರವಾಗಿ ಶಕ್ತಿಯನ್ನು ಒದಗಿಸುವುದರ ಮೂಲಕ ಪರ್ಯಾಯ ರಾಜಕೀಯದ ನಿರ್ವಚನ ಅನಾವರಣಗೊಳ್ಳುತ್ತದೆ.

ಈ ಪರ್ಯಾಯ ರಾಜಕೀಯವು ಆಗಾಗ ಈ ಸಣ್ಣ ಧ್ವನಿಗಳ ಅಹವಾಲನ್ನು ಕೇಳಿಸಿಕೊಳ್ಳುವ ಅಥವಾ ಶಬ್ಧ್ದಾಡಂಬರಗಳ ಮೂಲಕ ಮಾತ್ರ ಅದರ ಪರವಾದ ನಿಲುವನ್ನು ತಾಳುವ ಬದಲಿಗೆ ಆ ಧ್ವನಿಗಳಿಗೆ ಮತ್ತಷ್ಟು ಶಕ್ತಿಯನ್ನು ತುಂಬಿ ಪ್ರಧಾನಧಾರೆ ಸಮಾಜದಿಂದ ತತ್‌ಕ್ಷಣದ ಪರಿಹಾರಗಳನ್ನು ತಂದೊದಗಿಸಲೂ ಯತ್ನಿಸಬೇಕು. ದಿನೇದಿನೇ ಹದಗೆಡುತ್ತಿರುವ ತಮ್ಮ ಪರಿಸ್ಥಿತಿಗಳನ್ನು ಸುಧಾರಿಸುವ ಪರಿಹಾರವನ್ನು ಪಡೆದುಕೊಳ್ಳಲು ಈ ಅಲಕ್ಷಿತ ಧ್ವನಿಗಳ ಹೋರಾಟದ ಮೇಲೆ ಪರ್ಯಾಯ ರಾಜಕೀಯವು ಪ್ರಭಾವ ಬೀರಬಲ್ಲದು. ಇದಕ್ಕಾಗಿ ಅವರು ಸಂವೇದನಾಶೀಲ ಮತ್ತು ಉತ್ತರದಾಯಿಯಾಗಿರುವ ಪ್ರಭುತ್ವ ಮತ್ತು ಈ ಸಣ್ಣಧ್ವನಿಗಳ ನಡುವೆ ಬದ್ಧತೆಯಿಂದ ಸಮಾಲೋಚನೆ ನಡೆಸಬಲ್ಲ ಪ್ರತಿನಿಧಿಗಳನ್ನು ಅರಸುತ್ತಾರೆಯೇ ವಿನಃ ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುವ ರಾಜಕಾರಣಿಗಳನ್ನಲ್ಲ. ಶಾಸಕರ ಈ ವಲಸೆಗಳು ಅವರ ಬದುಕಿನ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ.

ಚುನಾವಣೆಯ ಮೂಲಕ ಅವರು ಪ್ರತಿಪಾದಿಸುವ ರಾಜಕೀಯ ಧ್ವನಿಗಳು ಪ್ರಕ್ರಿಯೆಯನ್ನು ಗಟ್ಟಿಗೊಳಿಸುತ್ತದೆಯೇ ವಿನಾ ಅದರ ಪರಿಣಾಮದ ಮೇಲೆ ಮಾತ್ರ ಅವರಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಈ ದಿನಮಾನಗಳಲ್ಲಿ ಅದು ಸಾಮಾಜಿಕ ಮತ್ತು ಲಿಂಗ ತಾರತಮ್ಯಗಳಿಲ್ಲದೆ ಶ್ರೀಮಂತರನ್ನು ಸೃಷ್ಟಿಸುತ್ತಿದೆ. ಒಂದು ಪರ್ಯಾಯ ಮಾದರಿ ರಾಜಕೀಯವು ಪಕ್ಷಾಂತರ ರಾಜಕೀಯವನ್ನು ಕಡ್ಡಾಯವಾಗಿ ಸಾಮೂಹಿಕ ಪ್ರಜಾತಾಂತ್ರಿಕ ಧ್ವನಿಗಳ ಭಾಗವಾಗುವಂತೆ ಮಾಡುವುದರಿಂದ ಸಣ್ಣ ಧ್ವನಿಗಳ ಮಟ್ಟಿಗೆ ಅದು ಯಾವುದೇ ಪರಿಣಾಮವನ್ನು ಬೀರುವಂತಾಗುವುದಿಲ್ಲ.

ಕೃಪೆ: Economic and Political Weekly

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)