varthabharthi


ಬೆಂಗಳೂರು

17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತವೆಂದು ಘೋಷಣೆ

ಪ್ರವಾಹ ಪೀಡಿತರ ಪುನರ್‌ವಸತಿಗೆ ಎಷ್ಟೇ ಖರ್ಚಾದರು ಅಗತ್ಯ ಕ್ರಮ: ಸಿಎಂ ಯಡಿಯೂರಪ್ಪ

ವಾರ್ತಾ ಭಾರತಿ : 10 Aug, 2019

ಬೆಂಗಳೂರು, ಆ.10: ಪ್ರವಾಹ ಪೀಡಿತರ ರಕ್ಷಣೆ ಹಾಗೂ ಪುನರ್‌ವಸತಿಗೆ ಎಷ್ಟೇ ಖರ್ಚಾದರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಯಾರೊಬ್ಬರು ಎದೆಗುಂದಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದ ಜನತೆ ಹಾಗೂ ಸರಕಾರ ಪ್ರವಾಹ ಪೀಡಿತರ ಬೆನ್ನಿಗಿದೆ. ರಾಜ್ಯ ಸರಕಾರ ಇತರೆ ಕಾರ್ಯಕ್ರಮಗಳನ್ನು ಬದಿಗೊತ್ತಿಯಾದರೂ ಪ್ರವಾಹ ಪೀಡಿತರಿಗೆ ಪುನರ್‌ವಸತಿ ಕಲ್ಪಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಅರ್ಧಭಾಗ ನೆರೆ ಹಾವಳಿಗೆ ಬಲಿಯಾಗಿದ್ದು, ಕಳೆದ 45 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭೀಕರ ಪ್ರವಾಹ ಕಂಡಿರಲಿಲ್ಲ. ಈವರೆಗೆ 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಪ್ರವಾಹಕ್ಕೆ ಸಿಲುಕಿ 24 ಮಂದಿ ಸಾವನ್ನಪ್ಪಿದ್ದಾರೆ. ಇವರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಒಟ್ಟು ರಾಜ್ಯದ 1,024ಗ್ರಾಮಗಳು ಸಂಪೂರ್ಣವಾಗಿ ಮಳೆ ಪ್ರವಾಹಕ್ಕೆ ಸಿಲುಕಿವೆ. ಸುಮಾರು 2,35,105 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇಲ್ಲಿಯವರೆಗೆ 624 ಪರಿಹಾರ ಕೇಂದ್ರಗಳನ್ನು ತೆರೆದಿದ್ದು, 1,57,498 ಜನರು ಆಶ್ರಯ ಪಡೆದಿದ್ದಾರೆ. ಇವರಿಗೆ ಅಗತ್ಯ ಆಹಾರ, ಔಷಧಿ ಸೇರಿದಂತೆ ಮೂಲಭೂತ ಅಗತ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸುಮಾರು 3,22,448 ಹೆಕ್ಟರ್ ಕೃಷಿ ಭೂಮಿ ಹಾನಿಯಾಗಿದೆ. ಸಾವಿರಾರು ಜನ ಮನೆ ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೂ 12,651 ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ ಎಂಬ ಮಾಹಿತಿ ಬಂದಿದ್ದು, ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಅವರು ಹೇಳಿದರು.

ಪ್ರವಾಹದಲ್ಲಿ ಸಿಲುಕಿರುವವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ನಿಟ್ಟಿನಲ್ಲಿ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಎನ್‌ಡಿಆರ್‌ಎಫ್‌ನ 20ತಂಡಗಳು, ಭೂ ಸೇನೆಯ 11ತಂಡಗಳು, ನೌಕಾಪಡೆಯ 5ತಂಡಗಳು ಹಾಗೂ ವಾಯು ಪಡೆಯ 4ಹೆಲಿಕ್ಯಾಪ್ಟರ್‌ಗಳು, ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನೆರೆಸಂತ್ರಸ್ಥರಿಗೆ ಪುನರ್‌ವಸತಿ ಕಲ್ಪಿಸಲು ನೆರವು ಪಡೆಯುವುದಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿದ್ದು, ಇದಕ್ಕೆ ಉತ್ತಮವಾದ ಸ್ಪಂದನೆ ವ್ಯಕ್ತವಾಗುತ್ತದೆ. ರಾಜ್ಯ ನೌಕರರ ಸಂಘವು ಒಂದು ದಿನದ ವೇತನ 200 ಕೋಟಿ ರೂ. ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ. ಅದೇ ರೀತಿಯಲ್ಲಿ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿಗಳು, ರಾಜ್ಯದ ಕೈಗಾರಿಕೋದ್ಯಮಿಗಳು ಸೇರಿದಂತೆ ನಾಡಿನ ಜನತೆ ಆರ್ಥಿಕ ಸಹಾಯಕ್ಕೆ ಮುಂದಾಗ ಬೇಕೆಂದು ಅವರು ಮನವಿ ಮಾಡಿದರು.

3 ಸಾವಿರ ಕೋಟಿ ರೂ.ಗೆ ಮನವಿ

ರಾಜ್ಯದಲ್ಲಿ ತಲೆದೋರಿರುವ ನೆರೆ ಸಂತ್ರಸ್ಥರ ಪರಿಹಾರಕ್ಕಾಗಿ ತಕ್ಷಣ ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರಕ್ಕೆ ಇಲ್ಲಿನ ಪರಿಸ್ಥಿತಿಯ ಅರಿವಿದೆ. ಅದಕ್ಕಾಗಿಯೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಒಂದೆರಡು ದಿನ ನೋಡಿಕೊಂಡು ಇನ್ನಷ್ಟು ನೆರವಿಗೆ ಬೇಡಿಕೆ ಸಲ್ಲಿಸಲಾಗುವುದು.

''ಸಂಪುಟ ರಚನೆ ಬಗ್ಗೆ ದೆಹಲಿಯ ವರಿಷ್ಠರೊಂದಿಗೆ ಚರ್ಚೆ ಮಾಡಲು ಮೊನ್ನೆಯೆ ದೆಹಲಿಗೆ ಹೋಗಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಇನ್ನು ಎರಡು-ಮೂರು ದಿನ ಪರಿಸ್ಥಿತಿ ನೋಡಿಕೊಂಡು ಪುನಃ ದೆಹಲಿಗೆ ಹೋಗುತ್ತೇನೆ. ಶೀಘ್ರವೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಇದೇ ಆ.13ರಂದು ನಡೆಯಬೇಕಿರುವ ಸಿಆರ್‌ಪಿಎಫ್ ಪರೀಕ್ಷೆಯನ್ನು ಮುಂದೂಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು.''

-ಯಡಿಯೂರಪ್ಪ, ಮುಖ್ಯಮಂತ್ರಿ

ನೆರೆ ಪರಿಹಾರಕ್ಕೆ ನೌಕರರ ಸಂಘದಿಂದ 200 ಕೋಟಿ: ಷಡಕ್ಷರಿ

ನೆರೆ ಸಂತ್ರಸ್ಥರ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರಕಾರಿ ನೌಕರರು ಒಂದು ದಿನದ ಸಂಬಳ ಸುಮಾರು 200 ಕೋಟಿ ರೂ. ಸಂಗ್ರಹವಾಗಲಿದೆ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಶನಿವಾರ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂಪ್ಪರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ನೌಕರರಿಂದ ಸಂಬಳ ರೂಪದಲ್ಲಿ 175 ಕೋಟಿ ರೂ.ಸಂಗ್ರಹವಾಗುತ್ತದೆ. ಕೆಲವರು ವೈಯಕ್ತಿಕವಾಗಿ 50ಸಾವಿರ ರೂ., ಒಂದು ಲಕ್ಷ ರೂ.ವರೆಗೆ ಕೊಡಲಿದ್ದಾರೆ. ಎಲ್ಲವೂ ಸೇರಿ 200 ಕೋಟಿ ರೂ.ಆಗುತ್ತದೆ. ಇದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)