varthabharthi


ಕ್ರೀಡೆ

ಇಂದು ಭಾರತ-ವೆಸ್ಟ್ಇಂಡೀಸ್ ಎರಡನೇ ಏಕದಿನ ಪಂದ್ಯ

ವಾರ್ತಾ ಭಾರತಿ : 10 Aug, 2019

ಪೋರ್ಟ್ ಆಫ್ ಸ್ಪೇನ್, ಆ.10: ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವೆ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ರವಿವಾರ ನಡೆಯಲಿದೆ.

 ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಕೇವಲ 13 ಓವರ್‌ಗಳ ಆಟ ಸಾಧ್ಯವಾಗಿತ್ತು. ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದೂರವಾಗಿದೆ. ಈ ಮೊದಲು ನಡೆದ ಟ್ವೆಂಟಿ-20 ಸರಣಿಯನ್ನು ಭಾರತ 3-0 ಅಂತರದಲ್ಲಿ ವಶಪಡಿಸಿಕೊಂಡಿತ್ತು. ಶ್ರೇಯಸ್ ಅಯ್ಯರ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ತಂಡದ ನಾಲ್ಕನೇ ಕ್ರಮಾಂಕ ಖಾಲಿಯಾಗಿದ್ದು, ಅಯ್ಯರ್ ತೆರವಾಗಿರುವ ಸ್ಥಾನವನ್ನು ತುಂಬುವ ವಿಶ್ವಾಸದಲ್ಲಿದ್ದಾರೆ.

ಅಯ್ಯರ್ ಟ್ವೆಂಟಿ-20 ಪಂದ್ಯಗಳಲ್ಲಿ ಆಡಿರಲಿಲ್ಲ. ಮೊದಲ ಏಕದಿನ ತಂಡದ ಅಂತಿಮ ಹನ್ನೊಂದರ ಬಳಗದಲ್ಲಿದ್ದರೂ, ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಅವರಿಗೆ ಕೇವಲ 2 ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ತಕ್ಷಣ ತನ್ನ ಸ್ಥಾನವನ್ನು ಭದ್ರಪಡಿಸಲು ಸಾಧ್ಯವಿಲ್ಲ. ಇನ್ನೂ ಹಲವು ಪಂದ್ಯಗಳಲ್ಲಿ ಚೆನ್ನಾಗಿ ಆಡಬೇಕಿದೆ.

     ಈಗಾಗಲೇ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ’ಎ ತಂಡದ ವಿರುದ್ಧದ ಸರಣಿಯಲ್ಲಿ ಭಾರತ ಎ’ ತಂಡದಲ್ಲಿ ಆಡಿದ್ದ ಅಯ್ಯರ್ ಎರಡು ಅರ್ಧಶತಕಗಳನ್ನು ಸಿಡಿಸಿದ್ದರು. ವಿಶ್ವಕಪ್‌ನ ವೇಳೆ ಗಾಯಗೊಂಡು ಹೊರಗುಳಿದಿದ್ದ ಶಿಖರ್ ಧವನ್ ತಂಡಕ್ಕೆ ವಾಪಸಾಗಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಧವನ್ ಮತ್ತು ರೋಹಿತ್ ಶರ್ಮಾ ಇವರಲ್ಲಿ ಯಾರಾದರು ಒಬ್ಬರು ಗಾಯದಿಂದ ಅಥವಾ ಇತರ ಯಾವುದಾದರೂ ಕಾರಣದಿಂದ ಹೊರಗುಳಿದರೆ ಲೋಕೇಶ್ ರಾಹುಲ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲಿದ್ದಾರೆ. ಕೇದಾರ್ ಜಾಧವ್‌ಗೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಯುವ ಆಟಗಾರ ಶುಭಮನ್ ಗಿಲ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರು ವಿಂಡೀಸ್ ‘ಎ ವಿರುದ್ಧ ಮೂರನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್‌ನಲ್ಲಿ ದ್ವಿಶತಕ ದಾಖಲಿಸಿದ್ದರು.ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅಂತಿಮ ಹನ್ನೊಂದರ ಬಳಗದಲ್ಲಿ ಆಡಲಿದ್ದಾರೆ. ಆದರೆ ಅವರ ಸೇವೆ ಎಷ್ಟರ ಮಟ್ಟಿಗೆ ತಂಡ ಕ್ಕೆ ಉಪಯುಕ್ತವಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

  ಒಂದು ವೇಳೆ ಭುವನೇಶ್ವರ ಕುಮಾರ್ ಅವರಿಗೆ ವಿಶ್ರಾಂತಿ ನೀಡಿದರೆ ನವದೀಪ್ ಸೈನಿ ಅವಕಾಶ ಪಡೆಯಲಿದ್ದಾರೆ. ಹೆಚ್ಚುವರಿ ಆಗಿ ಸ್ಪಿನ್ನರ್ ಆಗಿ ಯಜುವೇಂದ್ರ ಚಹಾಲ್ ಅವರನ್ನು ಕಣಕ್ಕಿಳಿಸಿದರೆ ವೇಗಿ ಖಲೀಲ್ ಅಹ್ಮದ್ ಅಂತಿಮ ಹನ್ನೊಂದರ ಬಳಗದಿಂದ ಹೊರಗುಳಿಯಬೇಕಾಗುತ್ತದೆ.

ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ರವೀಂದ್ರ ಜಡೇಜ, ಶಿಖರ್ ಧವನ್, ಭುವನೇಶ್ವರ ಕುಮಾರ್, ಕೇದಾರ್ ಜಾಧವ್, ಮುಹಮ್ಮದ್ ಶಮಿ, ಕುಲದೀಪ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ಖಲೀಲ್ ಅಹ್ಮದ್, ಮನೀಷ್ ಪಾಂಡೆ, ಯಜುವೇಂದ್ರ ಚಹಾಲ್, ಲೋಕೇಶ್ ರಾಹುಲ್ , ನವ್‌ದೀಪ್ ಸೈನಿ.

ವೆಸ್ಟ್‌ಇಂಡೀಸ್: ಜೇಸನ್ ಹೋಲ್ಡರ್(ನಾಯಕ), ಕ್ರಿಸ್ ಗೇಲ್, ಕೇಮರ್ ರೋಚ್, ಕಾರ್ಲೊಸ್ ಬ್ರಾಥ್‌ವೇಟ್, ಎವಿನ್ ಲೆವಿಸ್, ಶೆಲ್ಡಾನ್ ಕೊಟ್ರೆಲ್, ನಿಕೊಲಾಸ್ ಪೂರನ್, ಫ್ಯಾಬಿಯನ್ ಆ್ಯಲೆನ್, ಶಿಮ್ರಾನ್ ಹೆಟ್ಮೆಯರ್, ಶಾಹಿ ಹೋಪ್(ವಿಕೆಟ್ ಕೀಪರ್), ರೋಸ್ಟನ್ ಚೇಸ್, ಜೋನ್ ಕ್ಯಾಂಪ್‌ಬೆಲ್, ಕೆಮೊ ಪಾಲ್ , ಒಶಾನೆ ಥಾಮಸ್.

ಪಂದ್ಯದ ಸಮಯ: ರಾತ್ರಿ 7:00 ಗಂಟೆಗೆ ಆರಂಭ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)