varthabharthi


ನಿಮ್ಮ ಅಂಕಣ

ಹೆಣ್ಣು ಮತ್ತು ಮಣ್ಣಿಗಾಗಿ ಬಾಯ್ಬಿಟ್ಟವರು...

ವಾರ್ತಾ ಭಾರತಿ : 11 Aug, 2019
ಉಷಾ ಕಟ್ಟೆಮನೆ, ಬೆಂಗಳೂರು

ಹೆಣ್ಣು ಮತ್ತು ಮಣ್ಣಿನ ಮೇಲಿನ ಮೋಹಕ್ಕೊಳಗಾದವರು ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ಕಾಶ್ಮೀರಕ್ಕೆ ಎಂದೂ ಹೋಗದ, ಹೋದರೂ ಅಲ್ಲಿಯ ಜನಸಾಮಾನ್ಯರೊಡನೆ ಬೆರೆಯದ, ಕೇವಲ ಭಾರತೀಯ ಸಿನೆಮಾಗಳಲ್ಲಿ ತೋರಿಸುವ ಕಾಶ್ಮೀರವನ್ನು, ಅಲ್ಲಿಯ ಕಲ್ಪಿತ ಉಗ್ರಗಾಮಿಗಳನ್ನೇ ಮಾದರಿಯಾಗಿಟ್ಟುಕೊಂಡವರು ಈಗ ಕಾಶ್ಮೀರವೆಂಬ ಭೂಭಾಗ ನಮ್ಮದೇ ಆಗಿಹೋಯಿತು ಎಂದು ಸಂಭ್ರಮಿಸುತ್ತಿದ್ದಾರೆ. ಆದರೆ ಅಲ್ಲಿಯೂ ನಮ್ಮ ನಿಮ್ಮ ಹಾಗೆ ಇರುವ ಮನುಷ್ಯರಿರುತ್ತಾರೆ ಅವರಿಗೂ ಭಾವನೆಗಳಿರುತ್ತವೆ, ಸ್ವಂತ ಅಭಿಪ್ರಾಯಗಳಿರುತ್ತವೆ ಎಂಬುದನ್ನು ಮರೆತೇ ಬಿಡುತ್ತಾರೆ.


‘‘ಈಗ ಯಾರು ಬೇಕಾದರೂ ಕಾಶ್ಮೀರದ ಸುಂದರ ಕನ್ಯೆಯರನ್ನು ಮದುವೆಯಾಗಬಹುದು’’ ಹೀಗೆಂದು ಜೊಲ್ಲುಬುರುಕ ಹೇಳಿಕೆಯನ್ನು ನೀಡಿದವರು ನಮ್ಮ ನಿಮ್ಮಂತಹ ಸಾಮಾನ್ಯರಲ್ಲ. ಮುಝಫ್ಫರ್ ನಗರದ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ ಸಿಂಗ್ ಸೈನಿ. ನಿನ್ನೆ ಮಂಗಳವಾರ ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ತೆರೆವುಗೊಳಿದ ಸಂಭ್ರಮವನ್ನು ತನ್ನ ಪಕ್ಷದ ಕಾರ್ಯಕರ್ತರೊಡನೆ ಆಚರಿಸುತ್ತಿದ್ದ ಸಂದರ್ಭದಲ್ಲಿ ಬಹಿರಂಗವಾಗಿ ಹೇಳಿದ ಮಾತುಗಳಿವು.

ಪೇಸ್‌ಬುಕ್‌ನಲ್ಲಿ ನನ್ನ ಗೆಳೆತನದ ಪಟ್ಟಿಯಲ್ಲಿರುವ ಒಬ್ಬ ವ್ಯಕ್ತಿಯಿದ್ದಾನೆ. ವಿದೇಶದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದು ತಾಯ್ನೆಡಿಗೆ ಮರಳಿ ಈಗ ಕೃಷಿಯಲ್ಲಿ ತೊಡಗಿಕೊಂಡಿರುವಾತ. ಕಾಶ್ಮೀರಕ್ಕೆ ಕೊಡಮಾಡಿರುವ ವಿಶೇಷಾಧಿಕಾರವನ್ನು ತೆಗೆದು ಹಾಕಿದ ಒಡನೆಯೇ ಆತ ಪುಂಖಾನುಪುಂಖಾವಾಗಿ ಸ್ಟೇಟಸ್‌ಗಳನ್ನು ಹಾಕತೊಡಗಿದ. ಆತ ಬರೆಯುತ್ತಾನೆ; ‘‘ಕಾಶ್ಯಪ ಗೋತ್ರದವರಿಗೆ ಕಾಶ್ಮೀರಕ್ಕೆ ಪ್ರೀಟೂರ್ ವ್ಯವಸ್ಥೆ ಇದೆಯಾ?’’
ಇನ್ನು ಹಲವರ ಕನಸು ಕಾಶ್ಮೀರಕ್ಕೆ ಹೋಗಿ ಭೂಮಿ ಖರೀದಿಸುವುದು, ಹೊಟೇಲ್ ತೆರೆಯುವುದು, ಸೇಬು ತೋಟ ಮಾಡುವುದು, ಕೇಸರಿ, ಅಕ್ರೋಟ್ ಬೆಳೆಯುವುದು. ಹವ್ಯಕರಿಗಾಗಿ ಅಲ್ಲಿಂದ ಹೆಣ್ಣು ತರುವುದು..ಪಟ್ಟಿ ತುಂಬಾ ಉದ್ದ ಇದೆ.
ಎಲ್ಲವನ್ನೂ ಲಾಭದ ದೃಷ್ಟಿಯಿಂದ ನೋಡುವುದು ನಮಗೆ ಹೇಗೆ ಅಭ್ಯಾಸ ಆಗಿದೆ ನೋಡಿ!
ಸಂಭ್ರಮಪಡುವುದಕ್ಕೆ ಎಲ್ಲರಿಗೂ ಅವರವರದೇ ಕಾರಣಗಳಿರಬಹುದು. ಆದರೆ ಸಾವಿರಾರು ಕಾಶ್ಮೀರಿಗಳು ನಮ್ಮ ನಡುವೆಯೇ ಬದುಕುತ್ತಾ ಇದ್ದಾರೆ ಎಂಬ ಎಚ್ಚರ ನಮಗಿದ್ದಿದ್ದರೆ ಈ ರೀತಿಯ ಸಂವೇದನಾರಹಿತ ಮಾತುಗಳು ಹೊರಬರುತ್ತಿರಲಿಲ್ಲವೇನೋ. ಇವರ್ಯಾರಿಗೂ ಭಾರತದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳ ಅರಿವೂ ಇದ್ದಂತಿಲ್ಲ. ಇದ್ದವರಿಗೂ ಕನಿಷ್ಠ ಪಾಪಪ್ರಜ್ಞೆಯೂ ಇಲ್ಲ.
 
ಹೌದು ಇತಿಹಾಸದಲ್ಲಿ ತಪ್ಪುಗಳು ನಡೆದಿವೆ. ಈಗ ಹೊಸ ಪೀಳಿಗೆ ಉದಯಿಸಿದೆ. ಅವರಲ್ಲಿ ಕೆಲವರು ವಿದ್ಯಾಭ್ಯಾಸಕ್ಕಾಗಿ, ವ್ಯಾಪಾರಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಈ ನೆಲದೊಡನೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಕಾಶ್ಮೀರ ಕಣಿವೆ ಬಹುತೇಕ ಶಾಂತವಾಗಿತ್ತು. ಹಿಂದೊಮ್ಮೆ ಕಾಶ್ಮೀರದ ಅನಭಿಷಿಕ್ತ ದೊರೆಯಂತೆ ವರ್ತಿಸುತ್ತಿದ್ದ ಫಾರೂಕ್ ಅಬ್ದುಲ್ಲಾರೇ ಮೊನ್ನೆ ದಿನ ಎನ್‌ಡಿಟಿವಿಯ ವರದಿಗಾರನೆದುರು ಗದ್ಗದಿತವಾಗಿದ್ದು ನೋಡಿದಾಗ ಕಾಲಾಂತರದಲ್ಲಿ ಆದ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು.. ಕಾಶ್ಮೀರದ ಇತಿಹಾಸವನ್ನು ಸಂಕ್ಷಿಪ್ತವಾಗಿ ನೋಡುವುದಾದರೆ ಈಗ ಅಲ್ಪಸಂಖ್ಯಾತರಾಗಿರುವ ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆಯ ಮೂಲ ನಿವಾಸಿಗಳು. ಅಲ್ಲಿಯ ಜನರು ಬೌದ್ಧ ಮತ್ತು ಹಿಂದೂ ಧರ್ಮದ ಅನುಯಾಯಿಗಳಾಗಿದ್ದರು. 12ನೇ ಶತಮಾನದಲ್ಲಿ ಇಲ್ಲಿಗೆ ಮುಸ್ಲಿಮರು ಆಗಮಿಸಿದರೆಂದು ಇತಿಹಾಸಕಾರರು ಹೇಳುತ್ತಾರೆ. ಆಗ ಆಳ್ವಿಕೆಯಲ್ಲಿದ್ದ ಹಿಂದೂ ರಾಜರು ಅವರ ಧರ್ಮಪ್ರಸಾರಕ್ಕೆ ಅಡ್ಡಿಯುಂಟು ಮಾಡಲಿಲ್ಲ. ಆದರೆ 14ನೇ ಶತಮಾನಕ್ಕಾಗುವಾಗ ಅದೊಂದು ಪ್ರಬಲ ಧರ್ಮವಾಗಿ ಪ್ರವರ್ಧಮಾನಕ್ಕೆ ಬಂತು. ಈ ನಡುವೆ ಮುಸ್ಲಿಮ್ ಧರ್ಮದವರೂ ರಾಜರೂ ಆದರು. ಆದರೆ ಹಿಂದೂ ಮುಸ್ಲಿಮರು ಸೌಹಾರ್ದದಿಂದಲೇ ಬದುಕಿದ್ದರು. ಸ್ಥಳೀಯ ಸಂಸ್ಕೃತಿಯೊಡನೆ ಮುಸ್ಲಿಮರ ಕಲಾಕೌಶಲ್ಯವೂ ಸೇರಿಕೊಂಡು ಕರಕುಶಲ ವಸ್ತುಗಳಿಗೆ ಹೊಸತೊಂದು ಮೆರಗು ಬಂದು ಇಲ್ಲಿಯ ಪಿಂಗಾಣಿ ವಸ್ತುಗಳು, ಶಾಲು, ಕಾರ್ಪೆಟ್ ಮುಂತಾದ ವಸ್ತುಗಳು ಜಗದ್ವಿಖ್ಯಾತಿಯನ್ನು ಪಡೆದುಕೊಂಡವು. ಇದೊಂದು ಪ್ರವಾಸಿ ಕೇಂದ್ರವಾಗಿ ಬೆಳೆಯತೊಡಗಿತು.
1819ರಲ್ಲಿ ಕಾಶ್ಮೀರ ಮತ್ತೆ ಸಿಖ್ ದೊರೆ ಮಹಾರಾಜ ರಂಜಿತ್ ಸಿಂಗ್ ತೆಕ್ಕೆಗೆ ಬಂದಾಗ ಆತ ಹಲವು ಮುಸ್ಲಿಂ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ. ರಾಜ್ಯದ ಉನ್ನತ ಸ್ಥಾನಗಳಲ್ಲಿ ಕಾಶ್ಮೀರಿ ಪಂದಿತರುಗಳ ನೇಮಕವಾಯಿತು. ಅದುವರೆಗೂ ಇದ್ದ ಸೌಹಾರ್ದಮಯ ವಾತಾವರಣ ಕದಡಿ ಹೋಯಿತು. ಆಗಿನ ಕಾಶ್ಮೀರದ ಸ್ಥಿತಿ ಹೇಗಿತ್ತು ಎಂಬುದನ್ನು ಭಾರತದಲ್ಲಿ ಅಧಿಕಾರಿಯೂ, ಪ್ರವಾಸಿ ಲೇಖಕನೂ, ಬ್ರಿಟಿಷ್ ಕೌನ್ಸಿಲ್ ಸದಸ್ಯನೂ ಆಗಿದ್ದ ವಾಲ್ಟರ್ ಲಾರೆನ್ಸ್ ತನ್ನ ‘ವ್ಯಾಲಿ ಆಫ್ ಕಾಶ್ಮೀರ’ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಹಾಗೆಯೇ ಗೌಶನಾಥ್ ಕೌಲ್ ಎಂಬ ಲೇಖಕ ತನ್ನ ‘ಕಾಶ್ಮೀರ’ ಎಂಬ ಪುಸ್ತಕದಲ್ಲಿ ಮುಸ್ಲಿಮರ ದಯನೀಯ ಸ್ಥಿತಿಯ ಬಗ್ಗೆ ಬರೆಯುತ್ತಾ, ‘‘ಶೇ. 90ರಷ್ಟು ಮುಸ್ಲಿಮರ ಆಸ್ತಿಪಾಸ್ತಿ ಹಿಂದೂ ಲೇವಾದೇವಿಗಾರರ ವಶದಲ್ಲಿದ್ದು ಅವರು ತೀರಾ ಬಡತನದ ಬದುಕನ್ನು ಸಾಗಿಸುತ್ತಿದ್ದಾರೆ’’ ಎಂದು ದಾಖಲಿಸಿದ್ದಾನೆ.
ಇದನ್ನೆಲ್ಲಾ ಗಮನಿಸುವಾಗ ಭಾರತದಲ್ಲಿ ದಲಿತರು ಮತ್ತು ಶೂದ್ರರು ಜಾತಿ ತಾರತಮ್ಯದಿಂದ ಹೇಗೆ ನರಳಿದರೋ ಅದೇ ನರಳುವಿಕೆಯನ್ನು ಮುಸ್ಲಿಮರು ಅನುಭವಿಸಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅಲ್ಲಿಯ ಜನರೆದೆ ಮಿದುವಾಗುತ್ತಿರುವ ಹೊತ್ತಿನಲ್ಲಿ ಪ್ರಜಾಪ್ರಭುತ್ವಕ್ಕೆ ತಕ್ಕುದಲ್ಲದ ರೀತಿಯಲ್ಲಿ ಭಾರತ ಸರಕಾರ ವರ್ತಿಸಿದೆ. ಹೆಣ್ಣು ಮತ್ತು ಮಣ್ಣಿನ ಮೇಲಿನ ಮೋಹಕ್ಕೊಳಗಾದವರು ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ಕಾಶ್ಮೀರಕ್ಕೆ ಎಂದೂ ಹೋಗದ, ಹೋದರೂ ಅಲ್ಲಿಯ ಜನಸಾಮಾನ್ಯರೊಡನೆ ಬೆರೆಯದ, ಕೇವಲ ಭಾರತೀಯ ಸಿನೆಮಾಗಳಲ್ಲಿ ತೋರಿಸುವ ಕಾಶ್ಮೀರವನ್ನು, ಅಲ್ಲಿಯ ಕಲ್ಪಿತ ಉಗ್ರಗಾಮಿಗಳನ್ನೇ ಮಾದರಿಯಾಗಿಟ್ಟುಕೊಂಡವರು ಈಗ ಕಾಶ್ಮೀರವೆಂಬ ಭೂಭಾಗ ನಮ್ಮದೇ ಆಗಿಹೋಯಿತು ಎಂದು ಸಂಭ್ರಮಿಸುತ್ತಿದ್ದಾರೆ. ಆದರೆ ಅಲ್ಲಿಯೂ ನಮ್ಮ ನಿಮ್ಮ ಹಾಗೆ ಇರುವ ಮನುಷ್ಯರಿರುತ್ತಾರೆ ಅವರಿಗೂ ಭಾವನೆಗಳಿರುತ್ತವೆ, ಸ್ವಂತ ಅಭಿಪ್ರಾಯಗಳಿರುತ್ತವೆ ಎಂಬುದನ್ನು ಮರೆತೇ ಬಿಡುತ್ತಾರೆ.

ದೇಶದಾದ್ಯಂತ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಮಾಧ್ಯಮದವರು ಮಾತಾಡಿಸಿದಾಗಲೂ ಇದೇ ಅಭಿಪ್ರಾಯ ಹೊಮ್ಮಿತ್ತು; ಅವರೆಲ್ಲರೂ ತಾವು ಭಾರತೀಯರು ಎಂದು ಒಕ್ಕೊರಲಿನಿಂದ ಹೇಳಿದ್ದರು ಆದರೆ ಕೇಂದ್ರ ಸರಕಾರದ ಈಗಿನ ನಡೆಯಿಂದ ಬೇಸರವಾಗಿದ್ದನ್ನೂ ಹೇಳಿಕೊಂಡಿದ್ದಾರೆ. ತಮ್ಮ ಕುಟುಂಬದವರೊಡನೆ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ, ನಮಗೆ ಆತಂಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಜಾಗದಲ್ಲಿ ನಾವೇ ನಿಂತು ನೋಡಿದರೆ ಖಂಡಿತವಾಗಿಯೂ ಇದು ನಂಬಿಕೆದ್ರೋಹ, ವಿಶ್ವಾಸಘಾತುಕತನವಾಗಿಯೇ ಕಾಣುತ್ತದೆ. ಇಂದು ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಗುಂಪುಹಲ್ಲೆಗಳು ನಾಳೆ ಕಾಶ್ಮೀರದಲ್ಲಿಯೂ ನಡೆಯಬಹುದಲ್ಲವೇ? ಆ ಆತಂಕವಾದರೂ ನಮ್ಮಲ್ಲಿ ಕೆಲವರಿಗೆ ಹುಟ್ಟಬೇಕಲ್ಲವೇ? ಅದು ಬಿಟ್ಟು ಆಸೆಬುರುಕರಂತೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದು ಮನುಷ್ಯರ ಘನತೆಯನ್ನು ಮುಕ್ಕಾಗಿಸುವಂತಹದು. ಭವ್ಯ ಪರಂಪರೆ ನಮ್ಮದು ಎಂದು ಹೇಳಿಕೊಳ್ಳುವ ಸರ್ವರನ್ನೂ ಸಮಭಾವದಿಂದ ನೋಡಿಕೊಳ್ಳಬೇಕಾದ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೊಂದು ಜಗತ್ತಿನೆದುರು ನಗೆಪಾಟಲಿಗೆ ಒಳಗಾಗಬೇಕಾಗಿ ಬಂದದ್ದು ನಿಜಕ್ಕೂ ಶೋಚನಿಯ ಸಂಗತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)