varthabharthi


ಕ್ರೀಡೆ

ಪಾಕ್‌ನಿಂದ ಡೇವಿಸ್‌ಕಪ್ ಸ್ಥಳಾಂತರಕ್ಕೆ ಭಾರತ ಬೇಡಿಕೆ

ವಾರ್ತಾ ಭಾರತಿ : 11 Aug, 2019

ಹೊಸದಿಲ್ಲಿ, ಆ.11: ಉಭಯ ದೇಶಗಳ ನಡುವೆ ರಾಜಕೀಯ ಉದ್ವಿಗ್ನತೆ ನೆಲೆಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ತಟಸ್ಥ ತಾಣಕ್ಕೆ ಮುಂಬರುವ ಡೇವಿಸ್ ಕಪ್ ಪಂದ್ಯವನ್ನು ಸ್ಥಳಾಂತರ ಮಾಡಬೇಕೆಂದು ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟಕ್ಕೆ (ಐಟಿಎಫ್)ಭಾರತ ಬೇಡಿಕೆ ಇಟ್ಟಿದೆ.

ಭಾರತೀಯ ಟೆನಿಸ್ ತಂಡ ಸೆಪ್ಟಂಬರ್ 14 ಹಾಗೂ 15 ರಂದು ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಏಶ್ಯ-ಒಶಿಯಾನಿಯಾ ಗ್ರೂಪ್-1 ಪಂದ್ಯದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಭಾರತ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿ 370ನ್ನು ರದ್ದುಪಡಿಸಿದ ಬಳಿಕ ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಊಹಿಸಲು ಅಸಾಧ್ಯವಾಗಿರುವ ಕಾರಣ ನಾವು ಐಟಿಎಫ್ ಬಳಿ ತಟಸ್ಥ ತಾಣಕ್ಕಾಗಿ ಬೇಡಿಕೆ ಇಟ್ಟಿದ್ದೇವೆ. ಈಗಿನ ಪರಿಸ್ಥಿತಿಗೆ ಇದು ಸರಿಯಾದ ಕೋರಿಕೆಯಾಗಿದೆ ಎಂದು ನಮ್ಮ ನಂಬಿಕೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಅಧ್ಯಕ್ಷ ಪ್ರವೀಣ್ ಮಹಾಜನ್ ರವಿವಾರ ಹೇಳಿದ್ದಾರೆ.

ಎರಡೂ ದೇಶಗಳ ಮಧ್ಯೆ ಕ್ರೀಡಾ ಬಾಂಧವ್ಯ ಮುರಿದುಬಿದ್ದಿದ್ದರೂ ಎಐಟಿಎ ತನ್ನ ತಂಡವನ್ನು ಡೇವಿಸ್ ಕಪ್ ಆಡಲು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ಎಲ್ಲ ಸಿದ್ಧತೆ ನಡೆಸಿತ್ತು. ಆದರೆ, ಕಾಶ್ಮೀರದ ಪರಿಸ್ಥಿತಿ ಹೊಸ ಅನುಮಾನವನ್ನು ಹುಟ್ಟುಹಾಕಿದೆ.

2008ರಲ್ಲಿ ಮುಂಬೈ ಮೇಲೆ ಉಗ್ರಗಾಮಿಗಳ ದಾಳಿ ನಡೆದ ಬಳಿಕ ಪಾಕಿಸ್ತಾನದೊಂದಿಗೆ ಭಾರತ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯವನ್ನು ರದ್ದುಪಡಿಸಿದೆ.

ಭಾರತದ ಟೆನಿಸ್ ತಂಡ ಡೇವಿಸ್ ಕಪ್ ಪಂದ್ಯವನ್ನಾಡಲು 1964ರಲ್ಲಿ ಕೊನೆಯ ಬಾರಿ ಪಾಕ್‌ಗೆ ತೆರಳಿತ್ತು. ಆಗ ಭಾರತ ಆತಿಥೇಯ ಪಾಕ್‌ನ್ನು 4-0 ಅಂತರದಿಂದ ಮಣಿಸಿತ್ತು. 2006ರಲ್ಲಿ ಮುಂಬೈಗೆ ಪ್ರವಾಸ ಕೈಗೊಂಡಿದ್ದ ಪಾಕ್‌ನ ಡೇವಿಸ್ ಕಪ್ ತಂಡ 2-3 ಅಂತರದಿಂದ ಸೋಲುಂಡಿತ್ತು.

ದಕ್ಷಿಣ ಏಶ್ಯದ ರಾಷ್ಟ್ರಕ್ಕೆ ಭದ್ರತಾ ಭೀತಿಯಿಂದಾಗಿ ಇತರ ತಂಡಗಳು ಪ್ರಯಾಣ ಬೆಳೆಸಲು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಪಾಕ್ ತನ್ನ ತವರಿನಲ್ಲಿ ನಡೆಯಬೇಕಾಗಿದ್ದ ಡೇವಿಸ್ ಕಪ್ ಪಂದ್ಯವನ್ನು ತಟಸ್ಥ ತಾಣದಲ್ಲಿ ಆಯೋಜಿಸುತ್ತಿತ್ತು.

ಎಐಟಿಎ ತಟಸ್ಥ ತಾಣಕ್ಕೆ ಬೇಡಿಕೆ ಇಟ್ಟರೆ ನಾವು ಆ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಇತ್ತೀಚೆಗೆ ಪಾಕಿಸ್ತಾನ ಟೆನಿಸ್ ಒಕ್ಕೂಟದ ಅಧ್ಯಕ್ಷ ಸಲೀಮ್ ಸೈಫುಲ್ಲಾ ಖಾನ್ ಹೇಳಿದ್ದಾರೆ.

ಭಾರತ ತಂಡ ಡೇವಿಸ್ ಕಪ್ ಪಂದ್ಯಕ್ಕೆ ಸಂಪೂರ್ಣ ಶಕ್ತಿಶಾಲಿ ತಂಡವನ್ನು ಆಯ್ಕೆ ಮಾಡಿದೆ. ದೇಶದ ಅಗ್ರಮಾನ್ಯ ರ್ಯಾಂಕಿನಲ್ಲಿರುವ ಆಟಗಾರರಾದ ಪ್ರಜ್ಞೇಶ್ ಗುಣೇಶ್ವರನ್(90) ಹಾಗೂ ರಾಮಕುಮಾರ್ ರಾಮನಾಥನ್(184)ನಾಲ್ಕು ಸಿಂಗಲ್ಸ್ ಪಂದ್ಯಗಳಲ್ಲಿ ಆಡಲಿದ್ದಾರೆ.

ಡೇವಿಸ್ ಕಪ್ ಪಂದ್ಯ ಸ್ಥಳಾಂತರ ಸಾಧ್ಯತೆ ತಳ್ಳಿಹಾಕಿದ ಪಾಕ್ ಟಿನಿಸ್ ಒಕ್ಕೂಟ

ಕರಾಚಿ, ಆ.11: ಇಸ್ಲಾಮಾಬಾದ್‌ನಲ್ಲಿ ಭಾರತ ವಿರುದ್ಧ ಸೆಪ್ಟಂಬರ್ 14-15 ರಂದು ನಡೆಯಲಿರುವ ಡೇವಿಸ್ ಕಪ್ ಏಶ್ಯಾ/ಒಶಿಯಾನಿಯ ಗ್ರೂಪ್-1 ಪಂದ್ಯವನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಪಾಕಿಸ್ತಾನ ಟೆನಿಸ್ ಒಕ್ಕೂಟ(ಪಿಟಿಎಫ್)ರವಿವಾರ ತಳ್ಳಿಹಾಕಿದೆ.

 ‘‘ಇಸ್ಲಾಮಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪಂದ್ಯದ ಆತಿಥ್ಯವಹಿಸಲು ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದೇವೆ. ಸೆಪ್ಟಂಬರ್ 14-15ರಂದು ನಿಗದಿಯಾಗಿರುವ ಪಂದ್ಯಕ್ಕೆ ಬದ್ಧರಾಗಿದ್ದೇವೆ. ಇಸ್ಲಾಮಾಬಾದ್‌ಗೆ ಆಗಮಿಸಲು ಭಾರತೀಯ ತಂಡದ ಅಸುರಕ್ಷತೆ ಭಾವನೆಗೆ ಯಾವುದೇ ಸಮಸ್ಯೆ ಅಥವಾ ಕಾರಣ ನನಗೆ ಕಂಡುಬರುತ್ತಿಲ್ಲ’’ ಎಂದು ಪಿಟಿಎಫ್ ಮುಖ್ಯಸ್ಥ ಸಲೀಂ ಸೈಫುಲ್ಲಾ ಹೇಳಿದ್ದಾರೆ.

 ಭಾರತೀಯ ಟೆನಿಸ್ ತಂಡಕ್ಕೆ ಪಾಕಿಸ್ತಾನ ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ. ಸುರಕ್ಷಿತ ನಗರವಾಗಿರುವ ಇಸ್ಲಾಮಾಬಾದ್‌ನಲ್ಲಿ ಭಾರತ ತಂಡ 4 ದಿನಗಳ ಕಾಲ ಇರುತ್ತದೆ. ಆಟಗಾರರು ನೆಲೆಸುವ ಹೊಟೇಲ್ ಹಾಗೂ ಆಡುವ ತಾಣಗಳಲ್ಲಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಮಾಡಿದ್ದೇವೆ. ಹಾಗಾಗಿ ಇಸ್ಲಾಮಾಬಾದ್‌ನಲ್ಲಿ ಆಡಲು ಅವರಿಗೆ ಸಮಸ್ಯೆ ಏನು? ಭಾರತ ಬಯಸಿದರೆ, ಪಂದ್ಯದಿಂದ ಪ್ರೇಕ್ಷಕರನ್ನೂ ಹೊರಗಿಡುತ್ತೇವೆ. ಪಂದ್ಯ ಸ್ಥಳಾಂತರಿಸುವ ಸಂಬಂಧ ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ ನಮ್ಮನ್ನು ಈ ತನಕ ಸಂಪರ್ಕಿಸಿಲ್ಲ ಎಂದು ಸೈಫುಲ್ಲಾ ಹೇಳಿದ್ದಾರೆ.

ದೇಶದಲ್ಲಿ ಟೆನಿಸ್‌ನ್ನು ಬೆಳೆಸಲು ಹಾಗೂ ಆದಾಯ ಹೆಚ್ಚಿಸಿಕೊಳ್ಳಲು ಡೇವಿಸ್ ಕಪ್ ಪಂದ್ಯ ಪಾಕಿಸ್ತಾನಕ್ಕೆ ಅತ್ಯಂತ ಮುಖ್ಯವಾಗಿದೆ. ಡೇವಿಸ್ ಕಪ್ ಪೂರ್ವನಿಗದಿಯಂತೆ ಇಸ್ಲಾಮಾಬಾದ್‌ನಲ್ಲಿ ನಡೆಯುವುದನ್ನು ಖಚಿತಪಡಿಸಲು ಪಿಟಿಎಫ್ ಈಗಾಗಲೇ ಸಂಬಂಧಪಟ್ಟ ಸಚಿವರ ಸಂಪರ್ಕದಲ್ಲಿದೆ. ದೀರ್ಘ ಸಮಯದ ಬಳಿಕ ನಾವು ನಮ್ಮ ದೇಶದಲ್ಲಿ ಡೇವಿಸ್ ಕಪ್ ಪಂದ್ಯವನ್ನು ಆಯೋಜಿಸಿದ್ದೇವೆ ಎಂದು ಪಿಟಿಎಫ್ ಮುಖ್ಯಸ್ಥರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)