varthabharthi


ಕರ್ನಾಟಕ

ಮನಸ್ಸಿನ ಕೊಳೆಯನ್ನು ತೊಳೆಯಲು ಸಜ್ಜನರ ಒಡನಾಟ ಹೆಚ್ಚಬೇಕು: ಪಂಡಿತಾರಾಧ್ಯ ಸ್ವಾಮೀಜಿ

ವಾರ್ತಾ ಭಾರತಿ : 13 Aug, 2019

ಕೋಲಾರ, ಆ.12: ಮನಸ್ಸಿನ ಕೊಳೆಯನ್ನು ತೊಳೆಯಲು ನೀರು, ಸಾಬೂನು ಸಹಾಯ ಮಾಡದು. ಅದಕ್ಕೆ ಸಜ್ಜನರ ಒಡನಾಟ ಹೆಚ್ಚಬೇಕು ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. 

ಇಲ್ಲಿನ ಟಿ ಚೆನ್ನಯ್ಯ ರಂಗಮಂದಿರದಲ್ಲಿ 'ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿದ ಅವರು, ಇಂದು ಬೆಳಕು ಬೀರುವವರಿಗಿಂತ ಭ್ರಮೆಗಳನ್ನು ಬಿತ್ತುವವರೇ ಹೆಚ್ಚಾಗಿದ್ದಾರೆ. ನಮಗೆ ಬೆಳಕು ಬೇಕೋ ಅಥವ ಭ್ರಮೆ ಬೇಕೋ ಯೋಚಿಸಬೇಕು. ಬೆಳಕು ಬೇಕು ಎನ್ನುವವರು ವಚನಗಳ ಕಡೆ, ಭ್ರಮೆ ಬೇಕು ಎನ್ನುವವರು ದೇವಸ್ಥಾನಗಳು, ಮಠಗಳು, ಜೋತಿಷ್ಯಗಳು, ಹೊತ್ತಿಗೆಗಳು, ಗಿಳಿಶಾಸ್ತ್ರ ಮುಂತಾದ ಮೌಢ್ಯಬಿತ್ತುವವರ ಕಡೆ ಮುಖ ಮಾಡಬೇಕು ಎಂದರು. 

ಹೊರಗಿನ ಕತ್ತಲೆ ಕಳೆಯುವುದು ಸುಲಭ. ಒಳಗಿನ ಕತ್ತಲೆಯನ್ನು ಗುರುತಿಸುವುದು, ಹೋಗಲಾಡಿಸುವುದು ಅಷ್ಟು ಸುಲಭವಲ್ಲ. ಕಾಮ, ಕ್ರೋಧ, ಮೋಹ, ಮದ, ಮತ್ಸರ, ದ್ವೇಷ, ಅಜ್ಞಾನ, ಅಸೂಯೆ ಮುಂತಾದವುಗಳು ಒಳಗಿನ ಕತ್ತಲೆ. ಸಾಹಿತ್ಯದ ಅಧ್ಯಯನ, ಸಜ್ಜನರ ಸಹವಾಸವೇ ಒಳಗಿನ ಕತ್ತಲೆಯನ್ನು ಕಳೆದುಕೊಳ್ಳುವ ವಿಧಾನ. 

ಇಂದು ಸಜ್ಜನರ ಸಂಗಕ್ಕಿಂತ ದುರ್ಜನರ ಸಂಗವೇ ಹೆಚ್ಚಾಗುತ್ತಿದೆ. ದುರ್ಜನರ ಸಂಗ ಬಚ್ಚಲ ನೀರ ಮಿಂದಂತೆ. ದುರ್ಜನರು ಒಳಗೂ, ಹೊರಗೂ ಕಾಡುವರು. ಎಲ್ಲರೂ ಗೋಮುಖವ್ಯಾಘ್ರರೇ ಆಗಿರುವಾಗ ನಾವು ಯಾರನ್ನು ನಂಬುವುದು ಎನ್ನುವ ಪ್ರಶ್ನೆ ಹಲವರದು. ಒಳ್ಳೆಯವರು ಇಲ್ಲದೇ ಇರಬಹುದು; ಅವರ ವಿಚಾರಗಳು ಸಾಹಿತ್ಯದ ರೂಪದಲ್ಲಿವೆ. ಅವುಗಳ ಅಧ್ಯಯನ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು. 

12ನೆಯ ಶತಮಾನದಲ್ಲಿ ಕಳ್ಳತನ ಮಾಡುವ, ಹೆಂಡ ಮಾರುವ, ವೇಶ್ಯಾವೃತ್ತಿ ಮಾಡುವವರೂ ಸೇರಿದಂತೆ ಹಲವರು ಇದ್ದರು. ಬಸವಣ್ಣ ಅವರೆಲ್ಲರನ್ನೂ ಪರಿವರ್ತಿಸುವ ಪ್ರಯತ್ನದಲ್ಲಿ ಯಶಸ್ವಿಯಾದರು. ದೂರದೃಷ್ಟಿ ನಮ್ಮ ಇಂದಿನ ರಾಜಕೀಯ ನೇತಾರರಿಗೆ ಕಡಿಮೆ. ನಮ್ಮ ಕರ್ನಾಟಕ ಸರಕಾರ ಒಂದು ವರ್ಷದ ಅವಧಿಗೆ ಎಲ್ಲಾ ಜಯಂತಿಗಳನ್ನು ಹಾಗೂ ಕೆಲವು ಯೋಜನೆಗಳನ್ನು ರದ್ದುಗೊಳಿಸಿ ಕರ್ನಾಟಕದ ಎಲ್ಲ ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.  

ಸರಕಾರಗಳು ಜನರಿಗೆ ಬೇಡುವುದನ್ನು ಕಲಿಸುತ್ತಿವೆಯೋ ಹೊರತು ಕೊಡುವುದನ್ನು ಕಲಿಸುತ್ತಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಪೂಜೆ, ಪುನಸ್ಕಾರಗಳ ಮೂಲಕ ಇಂದಿನ ಪೀಳಿಗೆಯನ್ನು ಮತ್ತೆ ಮೌಢ್ಯಕ್ಕೆ ಎಳೆಯುತ್ತಿದ್ದಾರೆ. ಕಾಯ ಮತ್ತು ಕಾಯಕವೇ ಕೈಲಾಸ ಎಂದು ಶರಣರು ಹೇಳಿದರು. ವಿಲಾಸಿ ಜೀವನದ ಬದಲಿಗೆ ವಿಕಾಸ ಜೀವನವನ್ನು ಅಪ್ಪಿಕೊಳ್ಳಬೇಕು. ಅಂತರಂಗದ ವಿಕಾಸವಾಗದೆ ಬಹಿರಂಗದ ವಿಕಾಸ ಸಾಧ್ಯವಾಗದು. ಆದರ್ಶ ಸಮಾಜವನ್ನು ಕಟ್ಟಿದರೆ ಅದು ಎಂದೂ ಬಿದ್ದು ಹೋರುವಂಥದ್ದಲ್ಲ ಎಂದರು. 

ಶರಣರು ತಮ್ಮ ಕುರುಹನ್ನು ಬಿಟ್ಟವರಲ್ಲ, ಅರಿವನ್ನು ಕೊಟ್ಟವರು. ಕುರುಹು ದಾರಿ ತಪ್ಪಿಸುತ್ತದೆ. ಅರಿವು ದಾರಿ ತೋರಿಸುತ್ತದೆ. ಅರಣ್ಯ ನಾಶ, ಪ್ರಕೃತಿಯನ್ನು ಭೋಗದ ವಸ್ತುವನ್ನಾಗಿಸಿದ್ದೇ ಇಂದಿನ ಪ್ರಾಕೃತಿಕ ವಿಕೋಪಕ್ಕೆ ಕಾರಣ. ಮತ್ತೆ ಕಲ್ಯಾಣ-ಸಹಮತ ವೇದಿಕೆಯ ಜಿಲ್ಲಾ ಸಮಿತಿಗಳ ಮೂಲಕ ನೆರೆ ಸಂತ್ರಸ್ತರಿಗೆ ಸಹಾಯ ನೀಡುವ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದ್ದೇವೆ. ಸಾರ್ವಜನಿಕರೂ ಸಹ ಹೆಚ್ಚಿನ ಸಹಾಯ ನೀಡಲು ಸನ್ನದ್ಧರಾಗಬೇಕು ಎಂದರು. 

ವಚನಕಾರರ ಬದುಕು-ಬರಹ’ ಕುರಿತಂತೆ ಡಾ. ಹೆಚ್ ಎಲ್ ಪುಷ್ಪಾ ಮಾತನಾಡಿ, ತರಗತಿಯ ಪಠ್ಯಗಳು ನಿಮಿತ್ತ ಮಾತ್ರ. ಅದನ್ನೂ ಮೀರಿದಂತೆ ವಿದ್ಯಾರ್ಥಿಗಳು ಬದುಕನ್ನು ಕಂಡುಕೊಳ್ಳುವ ಕ್ರಿಯೆಗೆ ಒಳಗಾಗಬೇಕು. ವಚನಕಾರರ ಬದುಕು-ಬರಹಗಳು ಬೇರೆ ಬೇರೆ ಯಾಗಿರಲಿಲ್ಲ. ಕಲ್ಯಾಣ ಸಾಮಾಜಿಕ, ಸಾಹಿತ್ತಿಕ, ರಾಜಕೀಯ, ಧಾರ್ಮಿಕ ಸಂಗತಿಗಳ ಮುಖ್ಯ ಕೇಂದ್ರವಾಗಿತ್ತು. ಇಂದಿನ ಮೌಲ್ಯ ನಾಳೆಗೆ ಅಪಮೌಲ್ಯವಾಗುವ, ಚದುರಿದ ಮನಸ್ಸಿನ ಯುವ ಪೀಳಿಗೆ ನಮ್ಮ ಮುಂದೆ ಇದೆ ಎಂದರು. 

ಇಂಥ ಸಂದರ್ಭದಲ್ಲಿ ಮತ್ತೆ ಕಲ್ಯಾಣದ ಅವಶ್ಯಕತೆ ತುಂಬ ಇತ್ತು. ಭಾರತ ಬಹುಸಂಸ್ಕೃತಿಯ ಬಹುತ್ವವುಳ್ಳ ನಾಡು. ವಿಪ್ರ ಕುಲದಲ್ಲಿ ಹುಟ್ಟಿದ ಬಸವಣ್ಣನವರಿಗೆ ತನ್ನ ಕುಲವೇ ಉಸಿರುಗಟ್ಟಿಸುವಂತೆ ಮಾಡಿತ್ತು. ಈ ಕಾರಣಕ್ಕಾಗಿಯೇ ಬಸವಣ್ಣ ತನ್ನ ಕುಲದ ಹಂಗು ತೊರೆದು ಹೊರಬಂದರು. ಕಾಯಕ-ದಾಸೋಹಗಳೇ ವಚನಕಾರರ ವ್ರತ, ನಿಯಮ, ನಿಷ್ಠೆಯಾಗಿತ್ತು. ದೇಹವನ್ನೇ ದೇವಾಲಯವನ್ನಾಗಿಸಿಕೊಳ್ಳುವ ಸರಳ ವಿಚಾರಗಳನ್ನು ಉನ್ನತೀಕರಿಸಿದರು. ಏಕ ದೈವ,  ಧರ್ಮದ ಕೆಳಗೆ ಕಾಯಕ ಜೀವಿಗಳನ್ನೆಲ್ಲ ಒಂದು ಕಡೆ ಸೇರಿಸುವ ಕೆಲಸವನ್ನು ಬಸವಣ್ಣ ಮಾಡಿದರು. 

ವಚನಕಾರರು ತಮ್ಮ ಅನುಭವಕ್ಕೆ ಬಂದುದನ್ನು ಮಾತ್ರ ವಚನವಾಗಿಸಿದರು. ದೇವರನ್ನು ನಾವು ಬಿಟ್ಟರೂ ದೇವರು ನಮ್ಮನ್ನು ಬಿಡದೇ ಇರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬಸವಣ್ಣ ಡಂಭಾಚಾರದ ಪೂಜೆಯನ್ನು ನಿರಾಕರಿಸಿ 'ನಿಮ್ಮ ನಿಮ್ಮ ತನುವ, ಮನವ ಸಂತೈಸಿಕೊಳ್ಳಿ’ ಎಂದರು. ವಚನಕಾರರ ಪ್ರತಿಯೊಂದು ವಚನಗಳೂ ಆತ್ಮ ಕಥಾನಕವೇ ಆಗಿವೆ. ಇಂದು ಸಂವಿಧಾನವಿದ್ದೂ ಜಾರಿಗೆ ತರಲಾಗದ್ದನ್ನು ನಂಬಿಕೆ, ಪ್ರೀತಿ ವಿಶ್ವಾಸದಿಂದ ಬದಲಾವಣೆಯನ್ನು ಬಸವಣ್ಣ ಅಂದು ತಂದರು. ತಳಸಮುದಾಯದ ಕಾಯಕಜೀವಿಗಳೇ ಬಸವಣ್ಣನ ಕಲ್ಯಾಣದ ಶಕ್ತಿಕೇಂದ್ರವಾಗಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನ ಮಾಡುತ್ತಿರುವ ಈ ಕಾಲದಲ್ಲಿ ಬಸವಣ್ಣ ಅನುಭವ ಮಂಟಪದ ಮೂಲಕ ನೀಡಿದ್ದ ಸ್ವಾತಂತ್ರ್ಯ ಬೆರಗನ್ನುಂಟು ಮಾಡುವಂಥದ್ದು. ಕೈಲಾಸಕ್ಕಿಂತ ಕಾಯಕ ಮಾಡಿ ಗಳಿಸುವ ಕೂಲಿ ದೊಡ್ಡದು, ಕುಲಕ್ಕಿಂತ ಕಾಯಕ ದೊಡ್ಡದು, ಕುಲದ ಹಂಗಿಲ್ಲದೆ ಹೊಸ ಸಮಾಜವನ್ನು ಕಟ್ಟಬೇಕು ಎನ್ನುವ ಕನಸು ಕಂಡವವರು ಶರಣರು. ಏಸು, ಬುದ್ಧರ ಹೋರಾಟವೂ ಇದೇ ಆಗಿತ್ತು. ಇದಕ್ಕೆ ಸಂಘಟನಾತ್ಮಕ ರೂಪ ಕೊಟ್ಟ ಹೆಗ್ಗಳಿಕೆ ಬಸವಣ್ಣನವರಿಗೆ ಸಲ್ಲಬೇಕು. 

ಇಂದಿನ ಆರ್ಥಿಕ ಸಂಕಷ್ಟಗಳಿಗೆ ಕಾರಣ ಜನರಲ್ಲಿ ಕಾಯಕ-ದಾಸೋಹ ಪ್ರಜ್ಞೆ ಇಲ್ಲದಿರುವುದೇ ಆಗಿದೆ. ಕಂಬಾಲಪಲ್ಲಿ ಘಟನೆ ಕೋಲಾರಕ್ಕೆ ಒಂದು ಕಪ್ಪು ಚುಕ್ಕಿಯಾಗಿ ಉಳಿದಿದೆ. 12 ನೆಯ ಶತಮಾನದಲ್ಲಿದ್ದ ಸಮಸ್ಯೆಗಳೇ ಇಂದು ಬೇರೆ ಬೇರೆ ಮುಖವಾಡ ಹೊತ್ತು 21 ನೆಯ ಶತಮಾನದ ನಮ್ಮ ಮುಂದೆ ಬಂದಿವೆ. ಹಣ ಸಂಪಾದನೆಯಿಂದ ಅಹಂ, ದಬ್ಬಾಳಿಕೆ ಹೆಚ್ಚಾಗಿದೆ. ಆದರೆ ವಚನಕಾರರು ಸಂಗ್ರಹ ಬುದ್ಧಿಯನ್ನು ವಿರೋಧಿಸಿದರು. ಅಕ್ಕಮಹಾದೇವಿ ಮುಂತಾದ ವಚನಕಾರ್ತಿಯರು ಇಂದಿನ ಮಹಿಳೆಯರಿಗೆ ಮಾದರಿಯಾದವರು. 12 ನೆಯ ಶತಮಾನದ ವಚನಕಾರರ ಬದುಕು-ಬರಹಗಳನ್ನು ಇಂದಿನ ಜನರ ಬಳಿಗೆ ಕರೆದುಕೊಂಡು ಹೋಗುವ ಪ್ರಯತ್ನವೇ ಮತ್ತೆ ಕಲ್ಯಾಣ ಎಂದರು.  

'ಮನುಕುಲದ ಕನಸು ಕಲ್ಯಾಣ’ ವಿಷಯ ಕುರಿತಂತೆ ಡಾ. ಕೆ ವೈ ನಾರಾಯಣಸ್ವಾಮಿ ಮಾತನಾಡಿ, ಶರಣರ ನಡೆ-ನುಡಿಗಳು ಜೀವ ಸಂವಿಧಾನವಾಗಿವೆ. ಇಷ್ಟು ಶತಮಾನಗಳು ಕಳೆದರೂ ಶರಣರ ಆಚಾರ-ವಿಚಾರಗಳನ್ನು ತಮ್ಮ ಬದುಕಿನಲ್ಲಿ ಸೂಚ್ಯವಾಗಿ ಹಿಡಿದಿಟ್ಟುಕೊಂಡು ಬಂದಿರುವುದೇ ಆಶ್ಚರ್ಯಕರವಾಗಿದೆ. ವಚನಗಳು ಶರಣರ ಎದೆಯ ದನಿಯ ಪಿಸು ಮಾತುಗಳು. ಅದರ ಝುಳು-ಝುಳು ನಿನಾದವೇ ಮತ್ತೆ ಕಲ್ಯಾಣ. ಬಸವಾದಿ ಶರಣರು ಮಾಡಿದ್ದು ಪ್ರಯೋಗ. ಅದನ್ನು ನಾವಿಂದು ಆಂದೋಲನ, ಚಳುವಳಿ ಎಂದು ಕರೆಯುತ್ತಿದ್ದೇವೆ. ವಚನಗಳು ಮನುಕುಲವನ್ನು ಒಗ್ಗೂಡಿಸುವ ಸಂವಿಧಾನ. ವಚನಕಾರರು ಕೇವಲ ಕರ್ನಾಟಕವನ್ನುದ್ದೇಶಿಸಿ ಮಾತನಾಡುವುದಿಲ್ಲ. ಇಡೀ ಮನುಕುಲವನ್ನು ಉದ್ದೇಶಿಸಿ ಮಾತನಾಡಿದರು. ಮನುಷ್ಯನ ಸ್ವಾರ್ಥದ ವಿರುದ್ಧದ ನಡೆ ವಚನಕಾರರದು. ಮಾನವ ಜಗತ್ತಿನಲ್ಲಿ ಎಲ್ಲಿಯೂ ನಡೆಯದ ಸಂಗತಿಯನ್ನು ಕನ್ನಡದ ನೆಲದಲ್ಲಿ ವಚನಕಾರರು ನಡೆಸಿಕೊಟ್ಟರು. ಭೂಮಿ ಕಂಡ, ಮಾನವ ಕುಲದ ಸ್ವಪ್ನ ಈ ಕಲ್ಯಾಣ ಎಂದರು. 

ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ನಂಗಲಿ ಮಾತನಾಡಿ, 12 ನೆಯ ಶತಮಾನದ ವಚನ ಚಳುವಳಿ ಮತ್ತು ಹೋರಾಟ 800 ವರ್ಷಗಳ ಕಾಲ ಅಜ್ಞಾತದಲ್ಲಿತ್ತು. ವಚನಗಳಿಗೆ ಸಾಹಿತ್ಯದ ಸ್ಥಾನಮಾನ ನೀಡಲೂ ಹಿಂದುಮುಂದು ನೋಡಲಾಗಿತ್ತು. ಸಾಹಿತ್ಯ ರಚನೆ ವಚನಕಾರರ ಉದ್ದೇಶವಾಗಿರಲಿಲ್ಲ. ಹೋರಾಟವೇ ಅವರ ಉದ್ದೇಶವಿತ್ತು. ಇಂದು ವಚನ ಸಾಹಿತ್ಯಕ್ಕೆ ಮತೀಯ ಮೇಕಅಪ್ ಗಳಿಂದಾಗಿ ಅದರ ನಿಜ ಸ್ವರೂಪ ಗೊತ್ತಾಗುತ್ತಿಲ್ಲ. ಡಾ. ಎಲ್ ಬಸವರಾಜ್ ಮೇಕ್ಅಪ್ ಕಳಚಿ ನಿಜ ಸ್ವರೂಪವನ್ನು ಬೆಳಕಿಗೆ ತಂದರು. ಮೌಖಿಕ ಪರಂಪರೆಯ ಮೂಲಕ ಮಂಟೆಸ್ವಾಮಿಯಲ್ಲಿ ಕಲ್ಯಾಣದ ಬೆಳಕಿದೆ. ಅಲ್ಲಮಪ್ರಭು ಮತ್ತು ಮಂಟೇಸ್ವಾಮಿ ಒಂದೇ. ವಚನ ಸಾಹಿತ್ಯವನ್ನು ಒಳಗೊಳ್ಳುವುದಾದರೆ ಮಂಟೇಸ್ವಾಮಿ ಅಥವ ಅಲ್ಲಮನ ಮೂಲಕ ಒಳಗೊಳ್ಳಬೇಕು. ಮಾಲೂರು ಸಂತರ ತಾಲ್ಲೂಕು. ಕೈವಾರ ತಾತಯ್ಯ ತೆಲುಗಿನಲ್ಲಿ ಬರೆದರೂ ಕನ್ನಡದಲ್ಲಿ ಗುರುತಿಸಿಕೊಂಡವರು. ಮತೀಯ ಶಕ್ತಿಗಳು ಬೆಳೆಯಲು ಅವಕಾಶವನ್ನೇ ಕೋಲಾರ ಜಿಲ್ಲೆಯ ಸಂತರು ಕೊಡಲಿಲ್ಲ. ನಾವು ವಚನಕಾರರ ವಾರಸುದಾರರಾಗಬೇಕು. ಲಿಂಗವನ್ನು ಮೈಮೇಲೆ ಧರಿಸದ ಗುಪ್ತ ಭಕ್ತರೂ ಇದ್ದರು. ಅವರು ಸರ್ವಾಂಗವೂ ಲಿಂಗವೆಂದರು. ಇಂಥ ಶರಣರ ವಿಚಾರಧಾರೆಗಳನ್ನು ಮತ್ತೆ ಮತ್ತೆ ಜನರಬಳಿ ತೆಗೆದುಕೊಂಡು ಹೋಗುವ ಮೂಲಕ ಜನರನ್ನು ಕಲ್ಯಾಣದ ಕಡೆ ಕರೆದುಕೊಂಡು ಹೋಗಬೇಕಿದೆ ಎಂದರು.  

ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಹ ಮಾ ರಾಮಚಂದ್ರ ಸ್ವಾಗತಿಸಿದರು. ಹೆಚ್ ಎ ಪುರುಷೋತ್ತಮರಾವ್ ಕಾರ್ಯಕ್ರಮ ನಿರ್ವಹಿಸಿದರು. ಪಿಚ್ಚಳ್ಳಿ ಶ್ರೀನಿವಾಸ್ ವಂದಿಸಿದರು. ನಂತರ ಸಾಣೇಹಳ್ಳಿಯ ಶಿವಸಂಚಾರ ತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಂಡಿತು. 

ಅಂಬೇಡ್ಕರ್ ವೃತ್ತದಿಂದ ಆರಂಭವಾದ ಸಾಮರಸ್ಯ ನಡಿಗೆಯಲ್ಲಿ ವಿವಿಧ ಧರ್ಮದ ಮುಖಂಡರು, ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು, ಕಲಾ ತಂಡಗಳು, ವಚನಕಾರರ ಸ್ಥಬ್ದ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದೊಂದಿಗೆ ಚೆನ್ನಯ್ಯ ರಂಗಮಂದಿರ ತಲುಪಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)