varthabharthi


ಕರ್ನಾಟಕ

ಅತಿವೃಷ್ಟಿ, ಪ್ರವಾಹದಿಂದಾಗಿ ಜಿಲ್ಲೆಯಲ್ಲಿ 7 ಮಂದಿ ಮೃತ್ಯು, ಇಬ್ಬರು ನಾಪತ್ತೆ: ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ

ವಾರ್ತಾ ಭಾರತಿ : 13 Aug, 2019

ಚಿಕ್ಕಮಗಳೂರು, ಆ.13: ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಒಟ್ಟು ಏಳು ಮಂದಿ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಭೂಕುಸಿತ ಮತ್ತು ಮನೆಕುಸಿತಕ್ಕೆ ಸಿಲುಕಿದ 1970 ಮಂದಿಯನ್ನು ರಕ್ಷಿಸಿ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ. ಅವರಿಗೆ ಸ್ಥಳದಲ್ಲೇ ಅಧಿಕಾರಿಗಳ ತಂಡವನ್ನು ನಿಯೋಜಿಸಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿ ದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಳೆಯಿಂದ ತೀವ್ರ ತೊಂದರೆ ಎದುರಾಗಿದ್ದ ಕಡೆ ಇಪ್ಪತ್ತೇಳು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿಗೆ ಓರ್ವ ಜಿಲ್ಲಾ ಮಟ್ಟದ ಅಧಿಕಾರಿ, ಮತ್ತೋರ್ವ ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಓರ್ವ ಗ್ರಾಮಲೆಕ್ಕಿಗರನ್ನು ನಿಯೋಜಿಸಿ ನಿರಾಶ್ರಿತರ ಯೋಗ ಕ್ಷೇಮ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಪ್ರತಿ ಪರಿಹಾರಕ್ಕೆ ಕೇಂದ್ರಕ್ಕೆ ಒಂದು ಲಕ್ಷ ರೂ.ಗಳನ್ನು ಈಗಾಗಲೇ ಒದಗಿಸಲಾಗಿದೆ. ಸರಣಿ ಬ್ಯಾಂಕ್ ರಜೆಯ ಹಿನ್ನೆಲೆಯಲ್ಲಿ ಹಣದ ಕೊರತೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ  ವಿಶೇಷ ಹಿರಿಯ ಬ್ಯಾಂಕ್ ಅಧಿಕಾರಿ ಗಳಿಂದ ವಿಶೇಷ ಅನುಮತಿ ಪಡೆದು ಹಣನಗದೀಕರಿಸಿ ಪರಿಹಾರ ಕೇಂದ್ರಕ್ಕೆ ಒದಗಿಸಿ ನಿರಾಶ್ರಿತರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದ ಅವರು, ಮೂಡಿಗೆರೆ  ಬ್ಯಾಂಕಿನಲ್ಲಿ ತಾಂತ್ರಿಕ ಕಾರಣದಿಂದ ಹಣದ ಕೊರತೆ ಉಂಟಾಗಿದ್ದು, ಈಗ ತಲಾ ಐವತ್ತು ಸಾವಿರ ಒದಗಿಸಲಾಗಿದೆ. ನಾಳೆ ಮತ್ತೆ ಐವತ್ತು ಸಾವಿರ ಹಣ ನೀಡಲಾಗುವುದು ಎಂದು ಅವರು ಹೇಳಿದರು.

ಅತಿವೃಷ್ಟಿಗೆ ಸಿಲುಕಿ ತೊಂದರೆಗೆ ಒಳಗಾದ ಕುಟುಂಬಕ್ಕೆ ತಕ್ಷಣಕ್ಕೆ 3800ರೂ. ಪರಿಹಾರ ನೀಡಲು ನಿಯಮದಲ್ಲಿ ಅವಕಾಶವಿದೆ. ಉಳಿದಂತೆ ಮನೆ ಇತರ ನಷ್ಟಕ್ಕೆ ಪ್ರತ್ಯೇಕ ಪರಿಹಾರ ದೊರೆಯಲಿದೆ. ಈ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಎಂದ ಅವರು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಗಳ ಪರಿಹಾರ ದೊರೆಯಲಿದೆ. ಮೂಡಿಗೆರೆ ತಾಲೂಕಿನಲ್ಲಿ ಈಗಾಗಲೇ ಶಾಸಕರು ಕೆಲವರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ ಎಂದ ಅವರು, ಸಾರ್ವಜನಿಕ ಆಸ್ತಿ ಪಾಸ್ತಿಗೂ ಅಪಾರ ಹಾನಿ ಸಂಭವಿಸಿದೆ. ಆದರೆ ನಿರಾಶ್ರಿತರಿಗೆ ಅಗತ್ಯಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಪ್ರಥಮ ಆದ್ಯತೆ ನೀಡುತ್ತಿದೆ ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿಗೆ ಸಿಲುಕಿ 652 ಮನೆಗಳು ಕುಸಿತ ಅಥವಾ ಹಾನಿಗೀಡಾಗಿದೆ. ಸುಮಾರು 494 ಕಿಮೀ ರಸ್ತೆಗಳು ಹಾನಿಯಾಗಿದೆ. ಅದರಲ್ಲಿ ಜಿಲ್ಲಾ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದೆ ಎಂದ ಅವರು ವಿವಿಧ ಇಲಾಖೆಗೆ ಸೇರಿದ ಸುಮಾರು ತೊಂಬತ್ತೆರಡು ಸೇತುವೆಗಳು, ಮೂವತ್ತು ಕೆರೆಗಳಿಗೆ ಹಾನಿಯಾಗಿದೆ. ಮೆಸ್ಕಾಂ ಇಲಾಖೆಗೆ ಸೇರಿದ 1181ಕಂಬಗಳು ಉರುಳಿ ಬಿದ್ದಿದ್ದು ಬಿಎಸ್ಸೆನೆಲ್ ಕಂಬಗಳು, ಟವರ್ ಗಳು ಮತ್ತು ಕೇಬಲ್‍ಗ ಳಿಗೆ ಹಾನಿಯಾಗಿದೆ ಎಂದು ತಿಳಿಸಿದ ಅವರು ಜೀವಹಾನಿಯ ಬಗ್ಗೆ ಪೂರ್ಣ ವಿವರ ಲಭ್ಯವಾಗಿಲ್ಲ ಆದರೆ ಇದುವರೆಗೆ 1451ಹೆಕ್ಟೇರ್ ಕೃಷಿಭೂಮಿ 118 ಹೆಕ್ಟೇರ್ ತೋಟಗಾರಿಕೆ ಜಮೀನುಗಳಲ್ಲಿ ನಷ್ಟ ಉಂಟಾಗಿದೆ. ಕಾಫಿ ಬೆಳೆ ಕುರಿತಂತೆ ವಿವರಲಭ್ಯವಾಗಿಲ್ಲ ಎಂದು ಅವರು ಹೇಳಿದರು.

ಭಾರಿ ಮಳೆಯಿಂದ ನಿರಾಶ್ರಿತರಾದ ವರಿಗೆ ಸಾರ್ವಜನಿಕರು ಅಗತ್ಯ ವಸ್ತುಗಳ ನೆರವು ನೀಡಬಹುದಾಗಿದ್ದು ಅದನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿಸಬೇಕು. ನಗದು ಹಣ ನೀಡುವಂತಿಲ್ಲ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್‍ ಬರೆದು ಅದನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿಸಬಹುದು ಎಂದ ಅವರು ಖಾಸಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ನಿರಾಶ್ರಿತರ ಹೆಸರಲ್ಲಿ ದೇಣಿಗೆ ಅಥವಾ ವಸ್ತುಗಳನ್ನು ಸಂಗ್ರಹಿಸುವಂತಿಲ್ಲ ಎಂದು ಸ್ಪಷ್ಟಪಡಿ ಸಿದರು.

ಪ್ರಶ್ನೆಯೊಂದಕ್ಕೆಉತ್ತರಿಸಿದ ಅವರು ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸಲು ಹೆಲಿಕಾಪ್ಟರ್ ನೆರವು ಕೇಳಲಾಗಿತ್ತು. ಆದರೆ ನಿನ್ನೆ ಜಿಲ್ಲೆಗೆ ಆಗಮಿಸಿದ ಹೆಲಿಕಾಪ್ಟರ್ ಹವಾಮಾನ ಪೂರಕವಾಗಿಲ್ಲ ಎಂಬ ಹಿನ್ನೆಲೆಯಲ್ಲಿ ವಾಪಸ್ ಹೋಗಿದೆ. ಆದರೆ ಸೇನಾಪಡೆಯ ಸಿಬ್ಬಂದಿ ಜಿಲ್ಲೆಯಲ್ಲಿದ್ದು, ರಕ್ಷಣೆಗೆ ನೆರವಾಗಿದ್ದಾರೆ. ಸೋಮವಾರ ಮೂಡಿಗೆರೆ ತಾಲೂಕಿನಹಲಗಡಕ, ಕೂಗಿಯಾಳ, ಮಲೆಮನೆ ಗಳಿಂದ ನಲವತ್ತು ಮಂದಿಯನ್ನು ರಕ್ಷಿಸಿ ಕರೆತರಲಾಗಿದೆ ಎಂದರು.

ಸಾವಿನ ಪ್ರಕರಣದಲ್ಲಿ ಮೂಡಿಗೆರೆಯ ಜೋಗಣ್ಣನ ಕೆರೆಯಲ್ಲಿ ಹರ್ಷ(21) ಎಂಬಾತ ಹೇಮಾವತಿ ನದಿಗೆ ಜಾರಿಬಿದ್ದು ಪ್ರಾಣ ಕಳೆದುಕೊಂಡಿದ್ದರೆ, ಮರಸಣಿಗೆಯಲ್ಲಿ ಮನೆ ಕುಸಿತದಿಂದ ಪೆಟ್ಟಾಗಿ ಸಂತೋಷ್ (45) ಎನ್ನುವವರು ಮೃತಪಟ್ಟಿದ್ದರು. ಬಾಳೂರು ಹೊರಟ್ಟಿಯಲ್ಲಿ ಶಾಲಾ ಆವರಣದ ಗೋಡೆ ಕುಸಿತಗೊಂಡು ಶೇಷಮ್ಮ (65), ಅವರ ಪುತ್ರ ಸತೀಶ್ (45) ಸಾವನ್ನಪ್ಪಿದ್ದರು. ದುರ್ಗದ ಹಳ್ಳಿಯಲ್ಲಿ ರಸ್ತೆ ದಾಟುತ್ತಿದ್ದ ಸುಮಂತ್(9) ಎಂಬ ಬಾಲಕ ಹಳ್ಳದ ನೀರಲ್ಲಿ ಕೊಚ್ಚಿಹೋಗಿ ಪ್ರಾಣ ಕಳೆದುಕೊಂಡಿದ್ದರೆ, ಮಧುಗುಂಡಿಯಲ್ಲಿ ನಾಗಪ್ಪಗೌಡ(82) ಎಂಬ ವೃದ್ಧರು ಗುಡ್ಡ ಕುಸಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದ ಅಪರ ಜಿಲ್ಲಾಧಿಕಾರಿ ಕುಮಾರ್, ಬಾನಳ್ಳಿಯ ಕುಮಾರ್ (60) ಎಂಬುವವರು ಸಬ್ಬೇನಹಳ್ಳಿ ಬಳಿ ಹೇಮಾವತಿ ನದಿ ನೀರಿನಲ್ಲಿ  ಕೊಚ್ಚಿ ಹೋಗಿದ್ದಾರೆ. ಬಣಕಲ್ ಬಳಿ ಅವರ ಮೃತದೇಹ ಪತ್ತೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಕೂದು ವಳ್ಳಿಯಲ್ಲಿ ಹಳ್ಳಕ್ಕೆ ಕಾಲುಜಾರಿಬಿದ್ದು ಚಂದ್ರೇಗೌಡ (46) ಎನ್ನುವವರು ಮೃತಪಟ್ಟಿದ್ದಾರೆ, ನರಸಿಂಹರಾಜಪುರ ತಾಲೂಕಿನ ಮಾಳೂರು ದಿಣ್ಣೆಯಲ್ಲಿ ಮಳೆ ಬರುತ್ತಿದ್ದಾಗ ಗದ್ದೆಯಲ್ಲಿ ಕೆಲಸಮಾಡುತ್ತಿದ್ದ ಕುಮಾರ (40) ಎಂಬುವವರ ಮೇಲೆ ವಿದ್ಯುತ್ ತಂತಿ ªಬಿದ್ದು ಅವರು ಮೃತಪಟ್ಟಿದ್ದಾರೆ ಎಂದು ಸಾವಿನ ಪ್ರಕರಣಗಳ ವಿವರ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)