ಕರ್ನಾಟಕ
ಕರ್ನಾಟಕ ಪ್ರವಾಹ: ವಾಯುಪಡೆಯಿಂದ 500 ಮಂದಿಯ ರಕ್ಷಣೆ; ಏರ್ ವಾರ್ಷಲ್ ಎಸ್.ಕೆ.ಗೋಟಿಯಾ
ಬೆಂಗಳೂರು, ಆ.13: ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಲುಕಿದ್ದ ಸುಮಾರು 500 ಜನರನ್ನು ವಾಯುಪಡೆ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಏರ್ ವಾರ್ಷಲ್ ಎಸ್.ಕೆ.ಗೋಟಿಯಾ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ವಾಯುಪಡೆಯ ಪೈಲೆಟ್ಗಳು ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವ ತರಬೇತಿ ಪಡೆದಿರುತ್ತಾರೆ. ಕಠಿಣ ಸವಾಲುಗಳನ್ನು ಎದುರಿಸಿಯೂ ರಕ್ಷಣಾ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಂಪಿಯಲ್ಲಿ ಸಿಲುಕಿದ್ದ 25 ವಿದೇಶಿಗರು ಸೇರಿದಂತೆ 360 ಜನರನ್ನು ಸೋಮವಾರ ಹಾಗೂ 200 ಜನರನ್ನು ಮಂಗಳವಾರ ರಕ್ಷಿಸಲಾಗಿದೆ. ನೆರೆಯಲ್ಲಿ ಸಿಲುಕಿದ 16 ಜನರು ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಗ್ರಾಮಗಳು ಹಾಗೂ 40 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು.
ನಿನ್ನೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳಿದ್ದ ದೋಣಿ ನೀರಿನಲ್ಲಿ ಮುಳುಗಿತ್ತು. ವಾಯುಪಡೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ರಕ್ಷಿಸಿದ್ದಾರೆ. ರಾಜ್ಯದಲ್ಲಿ ಸದ್ಯ 5 ವಾಯುಪಡೆ ತಂಡಗಳಲ್ಲಿ 50ರಿಂದ 60 ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮೊದಲ ಹಂತದ ರಕ್ಷಣಾ ಕಾರ್ಯ ಹುಬ್ಬಳ್ಳಿಯಲ್ಲಿ ಕೈಗೊಳ್ಳಲಾಯಿತು. ನಂತರ ಹೆಚ್ಚು ಹಾನಿಗೊಳಗಾಗಿದ್ದ ಬೆಳಗಾವಿಗೆ ತೆರಳಿದೆವು. ಅಲ್ಲಿನ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆವು. ಕೆಲ ದಿನಗಳ ಕಾಲ ರಾಜ್ಯದಲ್ಲಿ ಸೇನೆ ರಕ್ಷಣಾ ಕಾರ್ಯ ಮುಂದುವರಿಸಲಿದೆ. ತಮ್ಮ ತಂಡ ರಾತ್ರಿ ಕೂಡ ಕಾರ್ಯಾಚರಣೆ ನಡೆಸಲು ಸಿದ್ಧವಿದೆ. ಆದರೆ, ಇಲ್ಲಿಯವರೆಗೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ಅವರು ಹೇಳಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ