varthabharthi


ಕರ್ನಾಟಕ

ಹೆಚ್ಚಿನ ನೆರವು ಕೊಡಿಸಲು ಶ್ರಮಿಸುವೆ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ವಾರ್ತಾ ಭಾರತಿ : 13 Aug, 2019

ಹೊಸದಿಲ್ಲಿ, ಆ. 13: ರಾಜ್ಯದಲ್ಲಿನ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ನೆರವು ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ಕಡಿಮೆಯಾದ ನಂತರ ಎಷ್ಟು ಮೊತ್ತದ ನಷ್ಟ ಸಂಭವಿಸಿದೆ ಎಂದು ರಾಜ್ಯ ಸರಕಾರ ಅಂದಾಜು ಮಾಡಲಿದೆ. ಪ್ರವಾಹ ತಗ್ಗಿದ ಮೇಲೆ ಗೃಹ ಇಲಾಖೆಯಿಂದ ರಾಜ್ಯಕ್ಕೆ ಸಮಿತಿ ರವಾನಿಸಲಿದೆ. ಸಮಿತಿ ಅಧ್ಯಯನ ನಡೆಸಿದ ಬಳಿಕ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.

ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಬಂದು ಸಮೀಕ್ಷೆ ನಡೆಸಿದ್ದಾರೆ. ಉಭಯ ನಾಯಕರ ಭೇಟಿಯು ಕರ್ನಾಟಕದ ಬಗ್ಗೆ ಅವರಿಗೆ ಇರುವ ವಿಶೇಷ ಕಾಳಜಿಯನ್ನು ತೋರುತ್ತದೆ. ಹೀಗಾಗಿ ಹೆಚ್ಚಿನ ಪರಿಹಾರ ಧನ ಸಿಗುವ ವಿಶ್ವಾಸವನ್ನು ಹೊಂದಿದ್ದೇನೆ ಎಂದರು.

ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಸಮಸ್ಯೆಗಳನ್ನು ನೇರವಾಗಿ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ನನ್ನ ಮುಖ್ಯ ಪ್ರಾಮುಖ್ಯತೆ ಜೀವ ರಕ್ಷಣೆ, ಆಸ್ತಿ-ಪಾಸ್ತಿ ನಷ್ಟವನ್ನು ತಡೆಯುವುದಾಗಿದೆ. ಇದಾದ ಬಳಿಕ ಹಂತ-ಹಂತವಾಗಿ ಎಲ್ಲವನ್ನೂ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ 8 ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದಲ್ಲಿ 6 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ವಿವಿಧ ಜಲಾಶಯಗಳ ನೀರು ಬಿಡುಗಡೆಯಿಂದ ಎಷ್ಟು ಹಾನಿ ಬಗ್ಗೆ ಮಾಹಿತಿ ಪ್ರಧಾನಿ ಮೋದಿ ಪಡೆದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ನಾನು ಕರಾವಳಿ ಭಾಗದಲ್ಲಿ ಸಮೀಕ್ಷೆ ನಡೆಸಿದ್ದೇನೆ ಎಂದರು.

ಪ್ರಧಾನಿ ಮೋದಿ ಅವರು ಎನ್‌ಡಿಆರ್‌ಎಫ್ ಸಿಬ್ಬಂದಿಯ ಕೆಲಸದ ಬಗ್ಗೆ ಶ್ಲಾಘನೆಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಕೇಂದ್ರ ಸರಕಾರದಿಂದ ಎಲ್ಲ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದ ಬಗ್ಗೆ ವಿಶೇಷವಾಗಿ ನನ್ನಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)