varthabharthi


ಕ್ರೀಡೆ

► ಇಂದು ವೆಸ್ಟ್ಇಂಡೀಸ್ ವಿರುದ್ದ ಮೂರನೇ ಏಕದಿನ ► ದೊಡ್ಡ ಮೊತ್ತ ಗಳಿಸುವ ಒತ್ತಡದಲ್ಲಿ ಶಿಖರ್ ಧವನ್

ಸರಣಿ ಗೆಲ್ಲುವತ್ತ ಭಾರತ ಚಿತ್ತ

ವಾರ್ತಾ ಭಾರತಿ : 13 Aug, 2019

ಪೋರ್ಟ್ ಆಫ್ ಸ್ಪೇನ್, ಆ.13: ವೆಸ್ಟ್‌ಇಂಡೀಸ್ ವಿರುದ್ಧ ಬುಧವಾರ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಆಡಲಿರುವ ಭಾರತ ಮತ್ತೊಂದು ಸರಣಿ ಗೆಲ್ಲುವತ್ತ ಕಣ್ಣಿಟ್ಟಿದೆ. ಸತತ ನಾಲ್ಕು ಇನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡಿರುವ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ದೊಡ್ಡ ಮೊತ್ತ ಗಳಿಸಬೇಕಾದ ಒತ್ತಡ ಎದುರಿಸುತ್ತಿದ್ದಾರೆ.

ಕೈಬೆರಳಿನ ಮೂಳೆ ಮುರಿತದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾದ ಬಳಿಕ ಧವನ್ ಮೊದಲಿನ ಲಯ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ. 3 ಪಂದ್ಯಗಳ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಯಲ್ಲಿ 1,23 ಹಾಗೂ 3 ರನ್ ಗಳಿಸಲಷ್ಟೇ ಶಕ್ತವಾಗಿದ್ದ ಧವನ್ ಎರಡನೇ ಏಕದಿನ ಪಂದ್ಯದಲ್ಲಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಒಳನುಗ್ಗಿ ಬರುವ ಎಸೆತಗಳಿಂದ ಸಮಸ್ಯೆ ಎದುರಿಸುತ್ತಿದ್ದ ಧವನ್ ಎರಡು ಬಾರಿ ವೇಗದ ಬೌಲರ್ ಶೆಲ್ಡನ್ ಕೊಟ್ರೆಲ್‌ಗೆ ವಿಕೆಟ್ ಒಪ್ಪಿಸಿದ್ದರು. ಧವನ್ ಟೆಸ್ಟ್ ತಂಡದಲ್ಲಿಲ್ಲ. ದಿಲ್ಲಿ ಎಡಗೈ ಬ್ಯಾಟ್ಸ್ ಮನ್ ಕೆರಿಬಿಯನ್ ಪ್ರವಾಸವನ್ನು ಭರ್ಜರಿ ಬ್ಯಾಟಿಂಗ್‌ನಿಂದ ಕೊನೆಗೊಳಿಸಲು ಬಯಸಿದ್ದಾರೆ.

 ಭಾರತದ ಬ್ಯಾಟಿಂಗ್ ಸರದಿಯ ನಾಲ್ಕನೇ ಕ್ರಮಾಂಕದಲ್ಲಿ ಮಿನಿ ಸ್ಪರ್ಧೆ ಏರ್ಪಟ್ಟಿದೆ. ಶ್ರೇಯಸ್ ಅಯ್ಯರ್ ಅವರು ರಿಷಭ್ ಪಂತ್ ಮೇಲೆ ಭಾರೀ ಒತ್ತಡ ಹೇರಲಾರಂಭಿಸಿದ್ದಾರೆ. ಪಂತ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಅದರಲ್ಲೂ ಮುಖ್ಯವಾಗಿ ನಾಯಕ ವಿರಾಟ್ ಕೊಹ್ಲಿಯ ಬೆಂಬಲವಿದೆ. ಪಂತ್ ಅವರ ನಿರಂತರ ವೈಫಲ್ಯ ಹಾಗೂ 2ನೇ ಏಕದಿನದಲ್ಲಿ 68 ಎಸೆತಗಳಲ್ಲಿ 71 ರನ್ ಗಳಿಸಿರುವ ಅಯ್ಯರ್ ಇಡೀ ಚಿತ್ರಣವನ್ನು ಬದಲಿಸಿದೆ.

ನಾಲ್ಕನೇ ಕ್ರಮಾಂಕದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಅಯ್ಯರ್‌ರನ್ನು ಲೆಜೆಂಡರಿ ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ. ಪಂತ್‌ರನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಬೇಕು. ಅವರು ಇನಿಂಗ್ಸ್ ಅಂತ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಬಲ್ಲರು ಎಂದು ಗವಾಸ್ಕರ್ ಹೇಳಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ 125 ಎಸೆತಗಳಲ್ಲಿ 120 ರನ್ ಸಿಡಿಸಿರುವ ಕೊಹ್ಲಿ ಉತ್ತಮ ಬ್ಯಾಟಿಂಗ್ ಫಾರ್ಮ್‌ನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಧವನ್ ಹಾಗೂ ರೋಹಿತ್ ಶರ್ಮಾ ಅಲ್ಪ ಮೊತ್ತಕ್ಕೆ ಔಟಾದಾಗ ಅಯ್ಯರ್ ಜೊತೆ ಕೈಜೋಡಿಸಿದ ಕೊಹ್ಲಿ ಭಾರತದ ಇನಿಂಗ್ಸ್‌ನ್ನು ಆಧರಿಸಿದ್ದರು.

ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಭುವನೇಶ್ವರ ಕುಮಾರ್ 2ನೇ ಏಕದಿನ ಪಂದ್ಯದಲ್ಲಿ 8 ಓವರ್‌ಗಳಲ್ಲಿ 31 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದಾರೆ. ಮುಂಬರುವ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಲು ಬಯಸಿದ್ದಾರೆ. ಇನ್ನೋರ್ವ ವೇಗದ ಬೌಲರ್ ಮುಹಮ್ಮದ್ ಶಮಿ(2-39) ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್(2-59)ತಲಾ ಎರಡು ವಿಕೆಟ್ ಪಡೆದರು.

ನಾಯಕ ಕೊಹ್ಲಿ ಕೊನೆಯ ಏಕದಿನ ಪಂದ್ಯದಲ್ಲಿ ಶಮಿಗೆ ವಿಶ್ರಾಂತಿ ನೀಡಿ ನವದೀಪ್ ಸೈನಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

 ಮತ್ತೊಂದೆಡೆ ವೆಸ್ಟ್‌ಇಂಡೀಸ್ ತಂಡ 3ನೇ ಪಂದ್ಯವನ್ನು ಜಯಿಸಿ ಸರಣಿಯಲ್ಲಿ 1-1ರಿಂದ ಡ್ರಾಗೊಳಿಸುವ ವಿಶ್ವಾಸದಲ್ಲಿದೆ. ಪಂದ್ಯವನ್ನು ಗೆಲ್ಲಬೇಕಾದರೆ ವೆಸ್ಟ್‌ಇಂಡೀಸ್ ಬ್ಯಾಟಿಂಗ್ ವಿಭಾಗ ಹೆಚ್ಚಿನ ಹೊಣೆ ಹೊತ್ತು ಸಂಘಟಿತ ಪ್ರದರ್ಶನ ನೀಡಬೇಕಾಗಿದೆ. ಶೈ ಹೋಪ್, ಶಿಮ್ರಿನ್ ಹೆಟ್ಮೆಯರ್ ಹಾಗೂ ನಿಕೊಲಸ್ ಪೂರನ್ ಪ್ರತಿಭಾವಂತ ಆಟಗಾರರಾಗಿದ್ದಾರೆ.

ಕೊನೆಯ ಏಕದಿನ ಪಂದ್ಯವನ್ನು ಆಡಿದ ಬಳಿಕ ಉಭಯ ತಂಡಗಳು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ. ಟೆಸ್ಟ್ ಸರಣಿಯು ಆ್ಯಂಟಿಗುವಾದ ನಾರ್ತ್ ಸೌಂಡ್‌ನಲ್ಲಿ ಆಗಸ್ಟ್ 22ರಿಂದ ಆರಂಭವಾಗಲಿದೆ.

ತಂಡಗಳು

► ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ ಧವನ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್(ನಾಯಕ), ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಕೇದಾರ್ ಜಾಧವ್, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ.

► ವೆಸ್ಟ್‌ಇಂಡೀಸ್: ಜೇಸನ್ ಹೋಲ್ಡರ್(ನಾಯಕ), ಕ್ರಿಸ್ ಗೇಲ್, ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ಶೈ ಹೋಪ್, ಶಿಮ್ರಾನ್ ಹೆಟ್ಮೆಯರ್, ನಿಕೊಲಸ್ ಪೂರನ್, ರೊಸ್ಟನ್ ಚೇಸ್, ಫ್ಯಾಬಿಯನ್ ಅಲ್ಲೆನ್, ಕಾರ್ಲೊಸ್ ಬ್ರಾತ್‌ವೇಟ್, ಕೀಮೊ ಪಾಲ್, ಶೆಲ್ಡನ್ ಕೊಟ್ರೆಲ್, ಒಶಾನ್ ಥಾಮಸ್, ಕೆಮರ್ ರೋಚ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)