varthabharthi


ಬೆಂಗಳೂರು

ದೇಶ ಹಾಳಾಗಲು ಅಕ್ಷರಸ್ಥರ ದುರಾಲೋಚನೆಯೇ ಕಾರಣ: ಮಾಜಿ ಸಚಿವ ಕಿಮ್ಮನೆ ರತ್ನಾಕರ

ವಾರ್ತಾ ಭಾರತಿ : 14 Aug, 2019

ಬೆಂಗಳೂರು, ಆ.14: ದೇಶ ಹಾಳಾಗಿರುವುದಕ್ಕೆ ಅಕ್ಷರಸ್ಥರ ದುರಾಲೋಚನೆ ಕಾರಣವೆ ಹೊರತು ಅನಕ್ಷರಸ್ಥರಾದ ಕೂಲಿಕಾರರಲ್ಲ ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

ಬುಧವಾರ ವಿಶ್ವಮಾನವ ಯುವ ವೇದಿಕೆ ನಗರದ ಪುರಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಕಾಗಿ ಬದಲಾವಣೆ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಕ್ಷರಸ್ಥರು ತಾವು ಪಡೆದ ಶಿಕ್ಷಣ ಸಮಾಜಕ್ಕೆ ಸೇರಿದ್ದಾಗಿದೆಯೇ ಹೊರತು ದುರಾಸೆಗಲ್ಲವೆಂಬ ಮನೋಭಾವ ತಾಳುವವರೆಗೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲವೆಂದು ತಿಳಿಸಿದರು.

ದೇಶದಲ್ಲಿ ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಇರಬಹುದು. ಆದರೆ, ದೇಶದ ಚಿಂತನೆಯನ್ನು ಬದಲಾಯಿಸುವ ಶಕ್ತಿ ಇರುವುದು ಕೇವಲ ಒಬ್ಬೊಬ್ಬರಿಗೆ ಮಾತ್ರ. ಹೀಗಾಗಿ ಬಸವಣ್ಣ, ಗಾಂಧಿ, ವಿವೇಕಾನಂದರ ನಂತರ ಮತ್ತೊಬ್ಬ ಗಾಂಧಿ, ಬಸವಣ್ಣ ಹುಟ್ಟಲು ಸಾಧ್ಯವಾಗಿಲ್ಲ. ಆದರೆ, ಗಾಂಧಿಯಂತಹ ವ್ಯಕ್ತಿಯನ್ನು ರೂಪಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರತಿಯೊಂದು ದೇಶಕ್ಕೂ ಅದರದೇ ಆದ ಆರ್ಥಿಕ ಪರಿಸ್ಥಿತಿ ಇರುತ್ತದೆ. ಒಂದು ದೇಶದ ಆರ್ಥಿಕ ನೀತಿಯನ್ನೇ ಮತ್ತೊಂದು ದೇಶಕ್ಕೆ ಅಳವಡಿಸಲು ಸಾಧ್ಯವಾಗುವುದಿಲ್ಲ. ಇಂತಹ ವಿಚಾರಗಳನ್ನು ನಮ್ಮ ಯುವ ಜನತೆ ಸರಿಯಾಗಿ ಅರ್ಥ ಮಾಡಿಕೊಂಡು, ನಮ್ಮ ದೇಶದ ಅಗತ್ಯವಾದ ಆರ್ಥಿಕ ನೀತಿಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಅವರು ಆಶಿಸಿದರು.

ವಿದ್ಯಾರ್ಥಿಗಳು ಸಂಕಲ್ಪಮಾಡಲಿ: ನಾನು ಕೇವಲ ಎಂಟು ವರ್ಷದವನಾಗಿದ್ದಾಗ ಮದ್ಯಪಾನ, ಗುಟುಕ, ಬೀಡಿ, ಇಸ್ಪೀಟ್ ಆಡುವುದಿಲ್ಲವೆಂದು ಸಂಕಲ್ಪ ಮಾಡಿದ್ದೆ. ಅದೇ ಪ್ರಕಾರವಾಗಿ ನಾನು ಇಲ್ಲಿಯವರೆಗೂ ದುಶ್ಚಟಗಳಿಂದ ದೂರವಿದ್ದೇನೆ. ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸಾಧನೆ, ಗುರಿಗಳನ್ನು ಪಟ್ಟಿಮಾಡಿಕೊಂಡು, ಅದನ್ನು ಸಾಧಿಸಿಯೆ ತೀರುತ್ತೇವೆಂದು ಸಂಕಲ್ಪ ಮಾಡಿ, ಕಠಿಣ ಶ್ರಮವಹಿಸಿದರೆ ಯಾವುದೂ ಅಸಾಧ್ಯವಲ್ಲವೆಂದು ಅವರು ಹೇಳಿದರು.

ಪ್ರೊ.ಕೃಷ್ಣೇಗೌಡ ಮಾತನಾಡಿ, ವಿದ್ಯಾರ್ಥಿಗಳ ಮನಸು ಸ್ವಚ್ಛಂದವಾಗಿರುತ್ತದೆ. ಆ ಮನಸನ್ನು ಸಮಾಜ ಪರವಾಗಿ ರೂಪಿಸುವ ಜವಾಬ್ದಾರಿ ಪೋಷಕರು, ಶಿಕ್ಷಕರು, ಸಂಘ ಸಂಸ್ಥೆಗಳ ಮೇಲಿರುತ್ತದೆ. ಇದನ್ನು ಎಲ್ಲರೂ ಸಂಘಟಿತವಾಗಿ ಮಾಡಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ಶಾಲಾ-ಕಾಲೇಜುಗಳಿಂದ ಕಲಿತದ್ದನ್ನು ಮಾತ್ರ ಶಿಕ್ಷಣವೆಂದು ಅಂದುಕೊಳ್ಳಬಾರದು. ಸಮಾಜದಲ್ಲಿರುವ ಗುರು, ಹಿರಿಯರಿಂದ, ಪ್ರಕೃತಿಯಿಂದ, ಹಿರಿಯ ಸಾಧಕರಿಂದ ಕಲಿಯುವುದು ಸಾಕಷ್ಟಿರುತ್ತದೆ. ಎಲ್ಲವನ್ನು ಮುಕ್ತ ಮನಸಿನಿಂದ, ವಿನಯದಿಂದ ನೋಡುವಂತಹ ಮನಸ್ಥಿತಿ ರೂಪಿಸಿಕೊಳ್ಳಬೇಕೆಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಟಿ.ತಿಮ್ಮೇಗೌಡ, ರಾಜೀವ್‌ಗಾಂಧಿ ವಿವಿಯ ರಿಜಿಸ್ಟ್ರಾರ್ ಡಾ.ಕೆ.ಬಿ.ಲಿಂಗೇಗೌಡ, ಬಿಎಚ್‌ಇಎಲ್‌ನ ವ್ಯವಸ್ಥಾಪಕಿ ಸೀಮಾ ನಾಣಯ್ಯ, ಕ್ವೀನ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕಿ ಮಧುರಾಣಿ ಗೌಡ ಮತ್ತಿತರರಿದ್ದರು.

ನಾನು ಸಮಾಜವಾದಿ ನಾಯಕ ಲೋಹಿಯಾರ ಶಿಷ್ಯನಾಗಿದ್ದೆ. ಲೋಹಿಯಾ ಯಾವಾಗಲು ಜವಾಹರಲಾಲ್ ನೆಹರೂ ಅವರನ್ನು ಟೀಕಿಸುತ್ತಿದ್ದರು. ನಾನು ಅದನ್ನೆ ಅನುಸರಿಸುತ್ತಿದ್ದೆ. ಆದರೆ, ನೆಹರೂ ಆತ್ಮಕತೆಯನ್ನು ಓದಿದ ಬಳಿಕ, ಮತ್ತೊಬ್ಬರ ಬಗ್ಗೆ ತಿಳಿಯದೆ ಟೀಕಿಸಬಾರದೆಂದು ನನ್ನ ಚಿಂತನೆಯನ್ನೆ ಬದಲಾಯಿಸಿಕೊಂಡೆ. ನೆಹರೂ ಕುಟುಂಬ ವರ್ಗ ಆಗರ್ಭ ಶ್ರೀಮಂತರಾಗಿದ್ದರೂ ಎಲ್ಲವನ್ನು ತ್ಯಾಗಮಾಡಿ, ದೇಶಕ್ಕಾಗಿ 10ಕ್ಕಿಂತ ಹೆಚ್ಚು ವರ್ಷ ಜೈಲುವಾಸ ಅನುಭವಿಸಿರುವುದು ಅವರಿಗೆ ದೇಶದ ಮೇಲಿದ್ದ ಪ್ರೀತಿಗೆ ದ್ಯೋತಕವಾಗಿದೆ.

-ಕಿಮ್ಮನೆ ರತ್ನಾಕರ, ಮಾಜಿ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)