varthabharthi


ವೈವಿಧ್ಯ

ಇದು ‘ನವಭಾರತ’ದ ಪರಿಕಲ್ಪನೆಯೇ?

ವಾರ್ತಾ ಭಾರತಿ : 27 Aug, 2019
ಜ್ಯೋತಿರಾದಿತ್ಯ ಸಿಂಧಿಯಾ

ಸಂಸತ್ತಿನಲ್ಲಿ ಪ್ರಧಾನಿ ಅವರು ಸುರಕ್ಷಿತವಾದ, ಒಗ್ಗಟ್ಟಿನ, ಏಕತೆಯ, ಅಭಿವೃದ್ಧಿ ಹೊಂದಿದ ಒಂದು ‘ನವಭಾರತ’ದ ತನ್ನ ಪರಿಕಲ್ಪನೆಯನ್ನು ವರ್ಣಿಸಿದರು. ದುರದೃಷ್ಟವಶಾತ್, ಈ ನವಭಾರತ ಕಾನೂನೇ ಇಲ್ಲದಂತಹ, ತಥಾಕಥಿತ ರಕ್ಷಕರು ನಡೆಸುವ ಹಿಂಸಾ ಕೃತ್ಯಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದೆ. ಸರಕಾರವು ಉದ್ಯೋಗಾವಕಾಶಗಳು, ನೌಕರಿಗಳು ಹೆಚ್ಚುತ್ತಿವೆ ಎಂದು ಹೇಳುತ್ತಿದೆಯಾದರೂ, ಗುಂಪುಗಳು (ಮಾಬ್ಸ್) ಓಟದಲ್ಲಿ ಗೆಲುವು ಸಾಧಿಸುತ್ತಿರುವುದು ಸ್ಪಷ್ಟವಾಗಿದೆ. ಉದ್ಯೋಗಗಳ (ಜಾಬ್ಸ್) ಬದಲು ಮಾಬ್ಸ್ (ಗುಂಪುಗಳು) ಹೆಚ್ಚುತ್ತಿವೆ.

ಸಾಮಾಜಿಕ ತಾಣಗಳನ್ನು, ಅವಕಾಶಗಳನ್ನು ಪುನರ್‌ವ್ಯವಸ್ಥೆಗೊಳಿಸುವ ಒಂದು ಪ್ರಯತ್ನ ನಡೆಯುತ್ತಿದೆ. ನಾಗರಿಕತ್ವದ ನಿಯಮಗಳನ್ನು ಪುನರ್‌ಲೇಖಿಸಲಾಗುತ್ತಿದೆ. ನಾಗರಿಕರ ಹಾಗೂ ಸರಕಾರದ ಸಂಬಂಧಗಳ ಪರಿಕಲ್ಪನೆಗಳು ಬಹುಸಂಖ್ಯಾತರ ಆಜ್ಞೆಗಳಿಗೆ ಅನುಗುಣವಾಗಿ ಬದಲಾಗುತ್ತಿವೆ. ಇದಕ್ಕೆ ಬಳಸಲಾಗುತ್ತಿರುವ ಆಯುಧ: ಒಂದು ಗುಂಪು. ಇದೊಂದು ತುಂಬಾ ಬುದ್ಧಿವಂತಿಕೆಯ ಉಪಕರಣ. ಇದು ಬಹುಸಂಖ್ಯಾತರ ಉದ್ದೇಶ ಈಡೇರಿಸುತ್ತಿದೆ. ಯಾಕೆಂದರೆ ಒಂದು ಗುಂಪಿನಲ್ಲಿ ಅಪರಾಧ ಎಸಗಿದಾಗ ಅಪರಾಧ ಅನಾಮಿಕವಾಗುತ್ತದೆ. ಅಪರಾಧಿ ಯಾರೆಂದು ಗೊತ್ತೇ ಆಗುವುದಿಲ್ಲ. ಅಪರಾಧ ಹಲವರ ನಡುವೆ ಹಂಚಿ ಹೋಗುವುದರಿಂದ ಅದು ದಾಳಿ ನಡೆಸಿದವರೂ, ಮೂಕ ಪ್ರೇಕ್ಷಕರಾದವರೂ ಮತ್ತು ಪೊಲೀಸರೂ ಒಳಗೊಂಡ ಒಂದು ಗುಂಪು ಕ್ರಿಯೆ ಆಗುತ್ತದೆ.
ಈ ಗುಂಪು ಪ್ರಭುತ್ವ (ಮಾಬೊಕ್ರಸಿ) ಈಗ ಪ್ರಧಾನವಾದ ಒಂದು ನಡೆಯಾಗಿದೆ. ಶಿಕ್ಷೆಯ ಭಯವಿಲ್ಲದ ಸನ್ನಿಗೊಳಗಾದ ಗುಂಪುಗಳು ನಿರಪರಾಧಿಗಳನ್ನು, ಅಲ್ಪಸಂಖ್ಯಾತರನ್ನು ಹಾಗೂ ತುಳಿತಕ್ಕೊಳಗಾದ ಸಮುದಾಯಗಳನ್ನು ಥಳಿಸುತ್ತಾ ಬಂದಿವೆ. ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್, ಪೆಹ್ಲೂಖಾನ್, ಪೂನಾದಲ್ಲಿ ನಾಲ್ವರು ದಲಿತರು, ಜಾರ್ಖಂಡ್‌ನಲ್ಲಿ ತಬ್ರೇಝ್ ಅನ್ಸಾರಿ, ತ್ರಿಪುರಾದಲ್ಲಿ ಬುಧಿ ಕುಮಾರ್ ಗುಂಪು ಥಳಿತಕ್ಕೊಳಗಾದ ಇವರೆಲ್ಲರ ಪ್ರಕರಣಗಳಲ್ಲೂ ಒಂದೇ ಮಾದರಿ ಕಂಡುಬರುತ್ತದೆ. ಹೊಂಚು ದಾಳಿ ನಡೆಸಿ ಹಾಡ ಹಗಲೇ ದೊಣ್ಣೆಗಳಿಂದ ಥಳಿಸುವುದು, ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಲ್ಲುವುದು ಅಥವಾ ಅಪರಾಧಿಗಳನ್ನೇ ಬಂಧಿಸುವುದು, ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಸಂಬಂಧಿತರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು.
ಆ ಗುಂಪುಗಳ ಉದ್ದೇಶ ಬಲಿಪಶುಗಳು ‘‘ಜೈ ಶ್ರೀರಾಮ್’’ ಮತ್ತು ‘‘ಜೈ ಹನುಮಾನ್’’ ಎಂದು ಹೇಳುವಂತೆ ಬಲವಂತ ಪಡುವುದಷ್ಟೇ ಅಲ್ಲ; ಬದಲಾಗಿ ಇಷ್ಟರವರೆಗೆ ಅಲ್ಲಿ ಇಲ್ಲಿ ನಡೆದ ಬಿಡಿ ಘಟನೆಗಳು ಇನ್ನು ಮುಂದೆ ಬಹತ್ ಪ್ರಮಾಣದಲ್ಲಿ ಮುಕ್ತವಾಗಿ ನಡೆಯಬಹುದೆಂಬ ಎಚ್ಚರ ನೀಡುವುದಾಗಿದೆ.
ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದಿಗಿಂತ ಹೆಚ್ಚಿನ ಬಹುಮತ ದೊರಕಿರುವುದರಿಂದ ಇದು ತಮ್ಮ ಹಿಂಸಾತ್ಮಕ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳನ್ನು ಮುಂದುವರಿಸಲು ತಮಗೆ ದೊರೆತ ಪರವಾನಿಗೆ ಎಂದು ಅವರ ಹಲವಾರು ಬೆಂಬಲಿಗರು ತಿಳಿದಿದ್ದಾರೆ. ಈಗ ಅಪರಾಧಗಳನ್ನೆಸಗುವವರಿಗೆ ಸಂಸತ್ತಿನಲ್ಲಿ ಹಿಂದಿಗಿಂತ ಹೆಚ್ಚಿನ ರಕ್ಷಣೆಯ ಜಾಲ ದೊರಕಿರುವಂತೆ ಕಾಣುತ್ತದೆ.
ನೈತಿಕವಾಗಿ ತೆರಬೇಕಾದ ಬೆಲೆ ಏನೇ ಇರಲಿ, ನೀವು ಬಿಜೆಪಿಯ ಪರವಾಗಿ ನಿಂತಲ್ಲಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಬಹುದು. ದಾದ್ರಿ ಗುಂಪು ಥಳಿತ ಪ್ರಕರಣದಲ್ಲಿ ಆಪಾದಿತ ಯುಪಿ ಮುಖ್ಯಮಂತ್ರಿಯವರ ರ್ಯಾಲಿಯಲ್ಲಿ ಮುಂದಿನ ಆಸನಗಳಲ್ಲಿ ಆಸೀನರಾಗುವ ಸವಲತ್ತು ಪಡೆದರು. ನಾಗರಿಕ ಅಧಿಕಾರಿಯೊಬ್ಬರನ್ನು ಥಳಿಸಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಾಗ ಅವರಿಗೆ ಹೀರೋ ಒಬ್ಬನಿಗೆ ನೀಡುವಂತಹ ಸ್ವಾಗತ ನೀಡಲಾಯಿತು. ಹಲವಾರು ಅಪರಾಧಿಗಳಿಗೆ (ಸಚಿವರುಗಳಿಂದಲೇ)ಹಾರಾರ್ಪಣೆ ಮಾಡಲಾಗಿದೆ. ಕೆಲವರಿಗೆ ಹುತಾತ್ಮರ ಗೌರವದ ಸ್ಥಾನ ನೀಡಲಾಯಿತು. ಕೆಲವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಯಿತು. ಬಲಿಪಶುಗಳು, ಸಂತ್ರಸ್ತರ ಪರವಾಗಿ ನಿಲ್ಲುವ ಬದಲು ಬಿಜೆಪಿ ಸತತವಾಗಿ ಅಪರಾಧಿಗಳ ಪರವಾಗಿ ನಿಂತಿದೆ.


ಕಾಂಗ್ರೆಸ್ ಕೂಡ ಇಂತಹ ತಪ್ಪುಮಾಡಿಲ್ಲವೆಂದಲ್ಲ. ಮಹಾರಾಷ್ಟ್ರದಲ್ಲಿ ಶಾಸಕ ನಿತೇಶ್ ರಾಣೆ ಮತ್ತವರ ಸಹಚರರ ವರ್ತನೆ ಅಕ್ಷಮ್ಯ. ಇನ್ನೊಂದೆಡೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾನೂನನ್ನು ಎತ್ತಿ ಹಿಡಿದು ಸುವ್ಯವಸ್ಥೆ ಕಾಪಾಡಲು ಸತತವಾಗಿ ಸೋತಿವೆ. ಕಳೆದ ವರ್ಷ ಯುಪಿಯ ಬುಲಂದ್ ಶಹರ್‌ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಅವರನ್ನು ಪೊಲೀಸರು ಹಾಗೂ ಒಂದು ಗುಂಪಿನ ನಡುವಿನ ಘರ್ಷಣೆಯಲ್ಲಿ ಹತ್ಯೆಗೈಯಲಾಯಿತು. ಗೋಹತ್ಯೆಯ ಬಗ್ಗೆ ವದಂತಿಯೊಂದು ಹರಡಿದಾಗ ಕಾನೂನು ರಕ್ಷಿಸುವ ಓರ್ವ ಪೊಲೀಸ್ ಅಧಿಕಾರಿಯ ಜೀವಕ್ಕೆ ಕೂಡ ರಕ್ಷಣೆ ಇರುವುದಿಲ್ಲ.
ಮೊದಲು, ಆರಂಭದ ಹಂತದಲ್ಲಿ, ಈ ಹಿಂಸಾ ಕೃತ್ಯಗಳು ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿದ್ದವು. ಆದರೆ ಈಗ ಈ ಮುಖವಾಡ ಕಳಚಿ ಬೀಳುತ್ತಿದೆ. ಬಹುಸಂಖ್ಯಾತರು ಮುಕ್ತವಾಗಿ, ನೇರವಾಗಿಯೇ ಗುಂಪು ಹಿಂಸೆಗೆ ಇಳಿಯುತ್ತಿದ್ದಾರೆ. ದಾಳಿ, ದ್ವೇಷ ಹರಡುವ ಭಾಷಣ ಮಾಮೂಲಿಯಾಗುತ್ತಿದೆ.
ಅನ್ಯಾಕ್ರಮಣಶೀಲತೆಯ ಈ ಬೆಂಕಿಗೆ ತುಪ್ಪಸುರಿಯುವ ಹಾಗೆ ಸಂಸತ್ತಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸುವಾಗ ಆಡಳಿತ ಪಕ್ಷದ ಸಂಸದರು ಸ್ಪಷ್ಟವಾದ ಒಂದು ರಾಜಕೀಯ ಉದ್ದೇಶಕ್ಕಾಗಿ (ಜೈ ಶ್ರೀರಾಮ್) ಘೋಷಣೆ ಕೂಗಿದರು. ಅವರು ತಮ್ಮ ತಮ್ಮ ಸಂಬಂಧಿತ ಚುನಾವಣಾ ಕ್ಷೇತ್ರಗಳಿಗಷ್ಟೇ ಸಂದೇಶ ಕಳಿಸುವುದಲ್ಲದೆ, ತಮ್ಮ ರಾಜಕೀಯ ಎದುರಾಳಿಗೂ ಕೂಡ ಬೆದರಿಕೆ ಒಡ್ಡುವುದು, ಎಚ್ಚರಿಕೆ ನೀಡುವುದು ಇದರ ಹಿಂದಿನ ಉದ್ದೇಶವಾಗಿತ್ತು. 1947ರಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕಿರುವ ಅಪಾಯಗಳ ಬಗ್ಗೆ ವಿವೇಕವುಳ್ಳ ಹಲವು ಮಂದಿ ನಾಯಕರು ಎಚ್ಚರಿಕೆ ನೀಡಿದ್ದರು. ಭಿನ್ನಾಭಿಪ್ರಾಯಗಳಿಂದ ಕಿಕ್ಕಿರಿದಿರುವ ನಮ್ಮ ದೇಶದಂತಹ ಒಂದು ದೇಶ ಖಂಡಿತವಾಗಿಯೂ ಸೋಲಬಹುದು. ಆದರೆ ನಮ್ಮ ಅಂದಿನ ನಾಯಕರ ಕಲ್ಪನೆ ಮತ್ತು ಹೃದಯ ವೈಶಾಲ್ಯ, ಔದಾರ್ಯ ನಮ್ಮನ್ನು ಉಳಿಸಿತು. ಭಾರತೀಯ ಎಂದರೆ ಏನು ಎಂಬ ಕುರಿತು ಬಹುತ್ವದ ಹಾಗೂ ಎಲ್ಲರನ್ನೂ ಜೊತೆಗೂಡಿಸುವ ಒಂದು ಪರಿಕಲ್ಪನೆ ಅವರದ್ದಾಗಿತ್ತು. ಈಗ ಅಪಾಯ ಒದಗಿರುವುದು ಇದೇ ಬಹುತ್ವದ ಪರಿಕಲ್ಪನೆಗೆ. ಬಿಜೆಪಿ ಮತ್ತು ಅದರ ನಾಯಕರು ಪ್ರತಿಪಾದಿಸುತ್ತಿರುವ ಮತಾಂಧತೆಯ ಪರಿಣಾಮವಾಗಿ ಈ ಅಪಾಯ ಎದುರಾಗಿದೆ.
ರಕ್ತಸಿಕ್ತವಾದ ಹಲವಾರು ಬಲಿಪಶುಗಳನ್ನು ಕಂಬಕ್ಕೆ ಬಿಗಿದು ಥಳಿಸುವ, ಆಗ ಅವರು ಕ್ಷಮಿಸಿ ಎಂದು ಅಂಗಲಾಚುವ ಸಾಲು ಸಾಲು ಚಿತ್ರಗಳು ಹಿಂಸೆಯನ್ನು ಸಾಮಾನ್ಯ ಎಂಬಂತೆ ಮಾಡಿದೆ. ಇವರ, ಈ ಬಲಿಪಶುಗಳ ಹಿಂದೆ ಅವರವರ ಕುಟುಂಬಗಳಿವೆ ಎಂಬುದನ್ನೂ ನಾವು ಮರೆತು ಬಿಡುತ್ತೇವೆ.
ಸಂಸತ್ತಿನಲ್ಲಿ ಪ್ರಧಾನಿ ಅವರು ಸುರಕ್ಷಿತವಾದ, ಒಗ್ಗಟ್ಟಿನ, ಏಕತೆಯ, ಅಭಿವೃದ್ಧಿ ಹೊಂದಿದ ಒಂದು ‘ನವಭಾರತ’ದ ತನ್ನ ಪರಿಕಲ್ಪನೆಯನ್ನು ವರ್ಣಿಸಿದರು. ದುರದೃಷ್ಟವಶಾತ್, ಈ ನವಭಾರತ ಕಾನೂನೇ ಇಲ್ಲದಂತಹ, ತಥಾಕಥಿತ ರಕ್ಷಕರು ನಡೆಸುವ ಹಿಂಸಾ ಕೃತ್ಯಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದೆ. ಸರಕಾರವು ಉದ್ಯೋಗಾವಕಾಶಗಳು, ನೌಕರಿಗಳು ಹೆಚ್ಚುತ್ತಿವೆ ಎಂದು ಹೇಳುತ್ತಿದೆಯಾದರೂ, ಗುಂಪುಗಳು (ಮಾಬ್ಸ್) ಓಟದಲ್ಲಿ ಗೆಲುವು ಸಾಧಿಸುತ್ತಿರುವುದು ಸ್ಪಷ್ಟವಾಗಿದೆ. ಉದ್ಯೋಗಗಳ (ಜಾಬ್ಸ್) ಬದಲು ಮಾಬ್ಸ್ (ಗುಂಪುಗಳು) ಹೆಚ್ಚುತ್ತಿವೆ.

ಕೃಪೆ: ಟೈಮ್ಸ್ ಆಫ್ ಇಂಡಿಯಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)