varthabharthi


ವೈವಿಧ್ಯ

ಎ. ಕೆ. ಸುಬ್ಬಯ್ಯ ಎಂಬ ಹೋರಾಟದ ಬದುಕು

ವಾರ್ತಾ ಭಾರತಿ : 28 Aug, 2019
ಡಾ.ಡಿ.ಬಿ.ಚಂದ್ರೇಗೌಡ ಹಿರಿಯ ಮುತ್ಸದ್ದಿಗಳು, ಮಾಜಿ ಸಚಿವರು ನಿರೂಪಣೆ: ಜಯಶಂಕರ ಹಲಗೂರು.

ಸುಬ್ಬಯ್ಯನವರು ಅಧಿಕಾರದ ಆಸೆಗಾಗಿ ಮುಂದಾಗದೆ, ಪಕ್ಷದ ವರಿಷ್ಠರೊಡನೆ ಹೊಂದಾಣಿಕೆಯ ತಂತ್ರ ಮಾಡದೆ ಆಳುವವರನ್ನು ಸದಾ ಒಂದು ಎಚ್ಚರಿಕೆಯ ಸ್ಥಿತಿಯಲ್ಲಿಡುವ ದನಿಯಾಗಿದ್ದವರು. ಅವರ ಸಾಮಾಜಿಕ ಹೋರಾಟಗಳು, ವಕೀಲಿ ಕೆಲಸ ಮತ್ತು ರಾಜಕಾರಣ ಎಲ್ಲದರ ಗುರಿಯೂ ಒಂದೇ ಆಗಿತ್ತು. ಹಾಗಾಗಿ ಎ.ಕೆ. ಸುಬ್ಬಯ್ಯನವರು ರಾಜಕಾರಣಿ ಮಾತ್ರವಲ್ಲ ರಾಜಕೀಯ ಹೋರಾಟಗಾರ. ಅವರು ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳನ್ನು ನಿರಂತರವಾಗಿ ಹೇಗಿರಬೇಕು ಎಂದು ಹೇಳಿ ಕಟ್ಟುತ್ತಾ ಬಂದವರು. ಸುಬ್ಬಯ್ಯನವರ ರಾಜಕಾರಣವನ್ನು ಸಕ್ಸಸ್‌ಫುಲ್, ಅನ್‌ಸಕ್ಸ್‌ಸ್‌ಫುಲ್ ಅಂತ ನೋಡಲೇಬಾರದು. ಇವರದು ರಾಮಮನೋಹರ ಲೋಹಿಯಾ ಮಾದರಿಯ ರಾಜಕಾರಣ.

ಯಾವಾಗಲೂ ತಪ್ಪನ್ನು ತಪ್ಪು ಅಂತ ಸರಿಯನ್ನು ಸರಿ ಅಂತ ಹೇಳುವ ನಿರ್ದಾಕ್ಷಿಣ್ಯ ವ್ಯಕ್ತಿತ್ವ ಸುಬ್ಬಯ್ಯನವರದು. ಪ್ರಾಮಾಣಿಕತೆ, ಮಾನವೀಯತೆ, ನಿರ್ದಾಕ್ಷಿಣ್ಯತೆ, ನಿರ್ಭಿಡೆ ಅವರ ಸ್ವಭಾವಗಳು. ಆತ ಒಬ್ಬ ಅದ್ವಿತೀಯ ಮಾತುಗಾರ, ಪ್ರಾಮಾಣಿಕ ಚಿಂತಕ.

ಸುಬ್ಬಯ್ಯನವರು ಒಂದು ದಾವೆ ಹಾಕಿದ್ರು. ಅದನ್ನು ವಾದ ಮಾಡೋಕೆ ದಿಲ್ಲಿಯಿಂದ ರಾಮ್ ಜೇಠ್ಮಲಾನಿ ಬಂದಿದ್ರು. ಜೇಠ್ಮಲಾನಿ ಆ ಕಾಲಕ್ಕೆ ತುಂಬ ದೊಡ್ಡ ಅಡ್ವೊಕೇಟ್, ಬಹಳ ಹಿರಿಯ ವಕೀಲರು, ಹಿ ವಾಸ್ ನಂಬರ್ ಒನ್ ಇನ್ ಇಂಡಿಯಾ. ಸುಬ್ಬಯ್ಯನವರನ್ನು ಜೇಠ್ಮಲಾನಿಯವರು ಕೋರ್ಟಿನಲ್ಲಿ ಸಬ್ಬಯ್ಯ ಸಬ್ಬಯ್ಯ ಅಂತ ಉಚ್ಚಾರಣೆ ಮಾಡ್ತಾ ಇದ್ರು. ಆಗ ಸುಬ್ಬಯ್ಯನವರು ಹೇಳಿದ್ರು ನಾನು ಸಬ್ಬಯ್ಯ ಅಲ್ಲ ಸುಬ್ಬಯ್ಯ ಅಂತ, ನಾಲ್ಕಾರು ಸಾರಿ ಹೇಳಿದ್ರು. ಅವರು ಸರಿಮಾಡ್ಕೊಳ್ಳಲಿಲ್ಲ. ಆಗ ಸುಬ್ಬಯ್ಯನವರು ಹಾಗಾದ್ರೆ ನಾನು ಇನ್ಮೇಲೆ ನಿಮ್ಮನ್ನು ಜೂಠ್ಮಲಾನಿ ಅಂತ ಕರೀತೀನಿ ಅಂದ್ರು. ಹೀಗೆ ಯಾವುದು ತಪ್ಪು ಅಂತ ಕಾಣ್ತದೆ ಅದನ್ನು ಸುಬ್ಬಯ್ಯನವರು ಸಹಿಸ್ತಾ ಇರಲಿಲ್ಲ. ಆ ಸಂದರ್ಭದಲ್ಲಿ ಕೇಸ್ ಏನಾಗ್ತದೋ, ವಕೀಲರು ಏನಂತಾರೋ ಅಂತ ಯೋಚಿಸ್ತಾನೇ ಇರಲಿಲ್ಲ. ಕೋರ್ಟಿನಲ್ಲಿ ಎಲ್ಲರೂ ಗೌರವದಿಂದ ನಡೆದುಕೊಳ್ಳಬೇಕು ಅನ್ನೋದು ಅದರ ಹಿನ್ನೆಲೆ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. ಸುಬ್ಬಯ್ಯನವರು ಅಧಿಕಾರಕ್ಕಾಗಿ ಯಾರ ಬಳಿಯೂ ಕೈಚಾಚಿದವರಲ್ಲ.

ಶಾಸನ ಸಭೆಯಲ್ಲಿ ಸುಬ್ಬಯ್ಯನವರ ಮಾತುಗಳನ್ನು ಎಲ್ಲರೂ ಬಹಳ ಮನಸ್ಸಿಟ್ಟು ಕೇಳ್ತಾ ಇದ್ರು. ಮೇಲಾಗಿ ಅವರಿಗೆ ಕನ್ನಡ ಭಾಷೆ ಮೇಲೆ ಇರುವ ಪಾಂಡಿತ್ಯ, ಹಿಡಿತ ಬಹಳ ದೊಡ್ಡದು. ಸುಬ್ಬಯ್ಯನವರ ಮತ್ತೊಂದು ಹೆಸರೇ ಸುದ್ದಿ ಸುಬ್ಬಯ್ಯ ಅಂತ. ಇವರು ಸುದ್ದಿ ಮಾಡ್ತಾರೆ ಅಂದರೆ ಮಾಧ್ಯಮಗಳಿಗೆ ಹಬ್ಬ. ಅಷ್ಟು ಸುದೀರ್ಘವಾಗಿ ಅಭ್ಯಾಸ ಮಾಡಿ, ಆಳವಾಗಿ ಚಿಂತನೆ ಮಾಡಿ, ತನ್ನ ಅಭಿಪ್ರಾಯವನ್ನೂ ಸೇರಿಸಿ ಸತ್ಯ ಕಥೆಯನ್ನು ಬಟಾಬಯಲು ಮಾಡ್ತಾ ಇದ್ರು. ಸಾರ್ವಜನಿಕ ಬದುಕಿನಲ್ಲಿ ಅಷ್ಟು ಬಹಿರಂಗವಾಗಿ ಅನೇಕ ವರ್ಷಗಳ ಕಾಲ ವಿಷಯಗಳನ್ನು ಶಾಸನ ಸಭೆಯಲ್ಲಿಡುವಾಗ ಅಲ್ಲಿ ಇಡೀ ಒಂದು ಸರಕಾರವೇ ಕುಳಿತಿರುತ್ತದೆ ಎಂಬ ನೆನಪು ಅವರಿಗೂ ಇತ್ತು. ಸುದ್ದಿಯನ್ನು ಅವರು ಸುಗ್ಗಿಯನ್ನಾಗಿ ಪರಿವರ್ತಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆ ಅವಕಾಶ ಮಾಡಿಕೊಡ್ತಾ ಇದ್ರು. ಯಾವುದೇ ವಿಚಾರವನ್ನಾದರೂ ವಿಧಿವತ್ತಾಗಿ ಪ್ರಸ್ತಾಪ ಮಾಡ್ತಾ ಇದ್ದರು. ನಗ್ನ ಸತ್ಯವನ್ನು ಬಿಚ್ಚಿಡ್ತಾ ಇದ್ರು. ಸಂಪೂರ್ಣವಾಗಿ ವಿಷಯ ಅವರಿಗೆ ತಿಳಿದಿರುತ್ತಾ ಇತ್ತು. ಸುಮ್ಮನೆ ನೆಪಮಾತ್ರಕ್ಕೆ ಯಾವುದನ್ನೂ ಪ್ರಸ್ತಾಪ ಮಾಡ್ತಾ ಇರಲಿಲ್ಲ. ಇಂಥ ಸಂಸದೀಯ ಪಟು ಕನ್ನಡದಲ್ಲಿ ಮಾತಾಡ್ತಾ ಇದ್ರೆ ಆನಂದ ಆಗೋದು. ಪಕ್ಷಾತೀತವಾಗಿ ಸದನವನ್ನು ಸರಿ ದಾರಿಗೆ ಎಳೆದು ತರ್ತಾ ಇದ್ದರು. ಸಂಸದೀಯ ಬದುಕಿನಲ್ಲಿ ಒಬ್ಬ ವ್ಯಕ್ತಿ, ಒಬ್ಬ ಸದಸ್ಯ ಇಡೀ ಸರಕಾರವನ್ನು ಹತೋಟಿಯಲ್ಲಿಟ್ಟು ಮಾತಾಡಬಹುದು ಎಂಬ ಸತ್ಯವನ್ನು ತೋರಿಸಿಕೊಟ್ಟರು. ಶಾಸನ ಸಭೆಯಲ್ಲಿ ಆಡಳಿತ ದೋಷವನ್ನು, ಸರಕಾರದ ತಪ್ಪುಸರಿಗಳನ್ನು ತೋರಿಸುವುದು, ಸಾರ್ವಜನಿಕವಾಗಿ ಜನರನ್ನು ಒಟ್ಟುಗೂಡಿಸಿ, ಜನಾಭಿಪ್ರಾಯ ರೂಪಿಸಿ ಸರಕಾರಕ್ಕೆ ಅವರ ಸಂದೇಶವನ್ನು ಕಳಿಸತಕ್ಕಂಥದ್ದು ಅವರಿಗೆ ಕರಗತವಾಗಿತ್ತು.

ಶಾಸನ ಸಭೆಯಲ್ಲಿ ಸಂಜಯ್ ಗಾಂಧಿ ಅವರ ಸಾವಿನ ಸಂದರ್ಭದ ಸಂತಾಪ ಸೂಚಕ ಸಭೆಯಲ್ಲಿ ಸುಬ್ಬಯ್ಯನವರು ಮಾತಾಡಿದ್ದು ಹಾಗೆಯೇ ವರದಿಯಾಗಿದ್ದಿದ್ದರೆ ಅದೊಂದು ಅದ್ಭುತವಾದ ವರದಿ ಆಗುತ್ತಾ ಇತ್ತು. ವಿಮಾನದ ತರಬೇತಿ ಆಗದೆ ವಿಮಾನ ಹಾರಾಡಿಸಲು ಹೋಗಿ ಅಪಘಾತವಾಗಿ ಸಂಜಯ್ ಗಾಂಧಿ ಸತ್ತರು. ಅದಕ್ಕೆ ಸುಬ್ಬಯ್ಯನವರು ಸದನದಲ್ಲಿ ‘‘ಇದನ್ನು ಯಾರು ತಪ್ಪಿಸಬಹುದಿತ್ತು, ಸಂಜಯ್ ಗಾಂಧಿ ಅವರಿಗೆ ಹೇಳುವವರು ಆಗ ಯಾರಿದ್ದರು, ಆ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ತಾಯಿಯಾಗಿ ಇಂದಿರಾ ಗಾಂಧಿ ಮಗನಿಗೆ ಹೇಳಬಹುದಿತ್ತು, ಪ್ರಧಾನಿಯಾಗಿ ವಿಮಾನ ಹಾರಾಟ ನಡೆಸದಂತೆ ಆದೇಶ ಮಾಡಬಹುದಿತ್ತು. ಅವರು ಎರಡನ್ನೂ ಮಾಡಲಿಲ್ಲ. ಸಂಜಯ್ ಗಾಂಧಿ ಹಾಗೆ ಹೋಗಿ ಹೀಗೆ ಕೆಳಗೆ ಬಂದರು’’ ಎಂದು ಸುಬ್ಬಯ್ಯನವರು ಕೈ ಮೇಲಕ್ಕೆ ಕೆಳಕ್ಕೆ ಎತ್ತಿ ಇಳಿಸಿ ಅಭಿನಯಿಸಿ ವಿಮಾನ ಹಾರುವ, ಇಳಿಯುವ ರೀತಿಯನ್ನು ತೋರುತ್ತಾ ಸಭೆಯಲ್ಲಿ ಮಾತಾಡಿದರು. ಪ್ರಶ್ನಾತೀತ ನಾಯಕಿಯ ಮಗನ ತಪ್ಪನ್ನು ಸಂತಾಪ ಸೂಚಕ ಸಭೆಯಲ್ಲಿ ಗುರುತಿಸುವ ಆ ನಿರ್ಭಿಡೆಯ ನಡವಳಿಕೆ ಸುಬ್ಬಯ್ಯನವರಿಗೆ ಮಾತ್ರ ಸಾಧ್ಯವಿತ್ತು. ಶಾಸನ ಸಭೆ ಇರಲಿ, ಸಾರ್ವಜನಿಕ ಸಭೆ ಇರಲಿ, ಕೋರ್ಟ್ ವಕೀಲರಾಗಿರಲಿ ಹೇಳಬೇಕಾದ್ದನ್ನು ನಿರ್ಭಿಡೆಾಗಿ ಸ್ಪಷ್ಟವಾಗಿ ಹೇಳುತ್ತಾ ಇದ್ದರು.

ಮೊದಲಿನಿಂದಲೂ ನಾವಿಬ್ಬರೂ ಸ್ನೇಹಿತರೇ. ನಮ್ಮ ನಡುವೆ ದ್ವೇಷ ಅಸೂಯೆ ಇರಲಿಲ್ಲ. ಚಿಕ್ಕಮಗಳೂರಿನಲ್ಲಿ ನಾನು ಇಂದಿರಾ ಗಾಂಧಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಾಗ ಸುಬ್ಬಯ್ಯನವರು ಬಹಿರಂಗ ಸಭೆಗಳಲ್ಲಿ ಅದು ತಪ್ಪುಅಂತ ಪ್ರಚಾರ ಮಾಡಿದ್ರು. ಅದು ಬಿಟ್ರೆ ನಮ್ಮ ನಡುವೆ ವ್ಯಾತ್ಯಾಸಗಳಿರಲಿಲ್ಲ. ನಾನು ಮಡಿಕೇರಿಗೆ ಹೋದ್ರೆ ಅವರನ್ನು ಕಾಣ್ತಾ ಇದ್ದೆ. ಅವರು ಬೆಂಗಳೂರಿಗೆ ಬಂದಾಗ ನನ್ನ ನೋಡೋರು. ಹೀಗೆ ಕ್ಷೇಮ ಸಮಾಚಾರವನ್ನು ಮಾಡ್ತಾ ಇದ್ವಿ. ಒಮ್ಮೆ ನಮ್ಮಿಬ್ಬರಿಗೂ ಸ್ಪರ್ಧೆ ಬಿತ್ತು, ಯಾರು ವಿರೋಧ ಪಕ್ಷದ ನಾಯಕರಾಗಬೇಕು ಅಂತ. ಬಹುಮತ ಯಾರಿಗೂ ಇಲ್ಲದೆ ಇರೋದರಿಂದ ಅವರೇ ಆಗಲಿ ಅಂತ ನಾನಂದೆ. ಆಮೇಲೆ ರಾಮಕೃಷ್ಣ ಹೆಗಡೆ ಅವರು ಮುಂದಾಳತ್ವ ವಹಿಸಿ ಸುಬ್ಬಯ್ಯನವರನ್ನೇ ನಾಯಕರನ್ನಾಗಿ ಮಾಡಿದರು. ಆ ನಂತರ ನಾನು ಬಿಜೆಪಿಗೆ ಹೋದಾಗಲೂ ಸುಬ್ಬಯ್ಯನವರು ಅದು ತಪ್ಪು ಅಂತ ಹೇಳಿದರು.

ಸುಬ್ಬಯ್ಯನವರ ಮಗ ನನ್ನ ಅಳಿಯ. ನನ್ನ ಮಗಳು ಮತ್ತೆ ಅವರ ಮಗ ಪ್ರೀತಿಸ್ತಾ ಇದ್ರು. ಒಂದಿವಸ ಊಟ ಮಾಡ್ತಾ ಕೂತಿದ್ದೆ. ಅವರು ಗಂಡ ಹೆಂಡ್ತಿ ಇಬ್ರು ಬಂದ್ರು. ‘‘ಬನ್ನಿ ಬನ್ನಿ ನೀರ್ ಕುಡೀರಿ, ಊಟ ಮಾಡಿ’’ ಅಂದೆ. ‘‘ಇಲ್ಲ ಇಲ್ಲ ಊಟ ಮಾಡೋಕೆ ಮುಂಚೆ ನನ್ನದೊಂದು ಪ್ರಸ್ತಾಪ ಇದೆ’’ ಅಂದ್ರು. ‘‘ಏನು?’’ ಅಂದೆ. ‘‘ನಿಮ್ಮ ಮಗಳನ್ನ ನನ್ನ ಮಗನಿಗೆ ಕೇಳೋಕೆ ಬಂದಿದೀನಿ’’ ಅಂದ್ರು. ಅಂದರೆ ಅಷ್ಟು ಸರಳ ಅವರು. ಎಷ್ಟು ವಿಚಾರ ಮಾಡಿ ಹೇಳಬೇಕಾದ್ದನ್ನ ಸರಳವಾಗಿ ಕೇಳಿದ್ರು. ‘‘ಇದು ನಾನೊಬ್ಬನೆ ತಗೋಬೇಕಾದ ತೀರ್ಮಾನ ಅಲ್ಲ; ಸ್ವಲ್ಪ ಸಮಯ ಬೇಕು’’ ಅಂದೆ. ಅವರು ‘‘ಮಕ್ಕಳೇ ತೀರ್ಮಾನ ತೆಗೆದುಕೊಂಡುಬಿಟ್ಟಿದ್ದಾರೆ, ನನಗೊಪ್ಪಿಗೆ ಇದೆ. ನಿಮ್ಮದೇನು ಅಭಿಪ್ರಾಯ ಹೇಳಿ’’ ಅಂದ್ರು. ‘‘ಹಾಗಾದ್ರೆ ನಂದೂ ಒಪ್ಗೆ ಇದೆ’’ ಅಂದೆ ನಾನು. ಮದುವೆ ಆಯ್ತು. ನಾವು ಬೀಗರೂ ಆದಿವಿ. ಖಾಸಗಿಯಾಗಿರಲಿ, ಸಾರ್ವಜನಿಕವಾಗಿರಲಿ ಈ ಥರ ನೇರವಾಗಿ ಪ್ರಸ್ತಾವನೆ ಾಡುವ ಗುಣ ಸುಬ್ಬಯ್ಯನವರದು.

ಸುಬ್ಬಯ್ಯನವರು ರಾಜಕಾರಣಿ, ಅಡ್ವೊಕೇಟ್, ಕೃಷಿಕ, ಸಾಮಾಜಿಕ ಹೋರಾಟಗಾರರು. ಇವೆಲ್ಲ ಬೇರೆ ಬೇರೆ ಅಲ್ಲ, ಇವುಗಳ ಜೊತೆ ಜೊತೆಗೆ ಅವರು ನಡೆದು ಬಂದವರು. ಕೃಷಿಕ ವಿದ್ಯಾವಂತನಾಗಿದ್ದರೆ, ವಿಷಯಗಳನ್ನು ಅರಿತಿದ್ರೆ ಆತ ಹೇಗೆ ಬದುಕಬಲ್ಲ ಅನ್ನೋದಕ್ಕೆ ಸುಬ್ಬಯ್ಯನವರು ಉದಾಹರಣೆ. ಅವರ ಮನೇಲಿ ಸುಮಾರು ಇನ್ನೂರು ಇನ್ನೂರೈವತ್ತು ಹಸುಗಳು ಕರುಗಳು ಇದ್ದಾವೆ. ಆದರೆ ಹಾಲು ಕರಿಯೋಲ್ಲ, ಇವರಿಗೆ ಬೇಕಾಗಿರೋದು ಸೆಗಣಿ ಮಾತ್ರ. ಕೆಲಸಗಾರ್ರು ಹಾಲು ಕರ್ಕೋತಾರೆ, ಇಲ್ಲ ಕರುಗಳು ಕುಡಿತಾವೆ. ಇಲ್ಲಿ ಸುಬ್ಬಯ್ಯನವರ ಮಾನವೀಯತೆ ಕಾಣ್ತದೆ. ನಮ್ಮ ಕಡೆ ಕಾಫಿ, ಮೆಣಸು ಎಲ್ಲವನ್ನು ಒಣಗಿಸ್ತೀವಿ. ಅವರು ಹಸಿಯದನ್ನೇ ಕೊಟ್ಟುಬಿಡ್ತಾರೆ, ಅದನ್ನು ಹಸಿರುವಾಣಿ ಅಂತಾರೆ. ನಾನು ಎಷ್ಟೋ ಸಾರಿ ಹೇಳ್ದೆ ಕಣ ಮಾಡಿ ಒಣಗಿಸಿ ಅಂತ. ಅದಕ್ಕವರು ‘‘ಇಲ್ಲ ಅದೆಲ್ಲ ಒಣಗೋದ ನಾ ನೋಡೋದಿಲ್ಲ’’ ಅಂತ ಹೇಳಿದ್ರು. ಅರ್ಥ ಮಾಡ್ಕೊಳಿ ಅವರ ಮನಸ್ಸು ಎಂಥದ್ದು ಅಂತ. ಕೃಷಿಯಲ್ಲಿ ಸುಬ್ಬಯ್ಯನವರಿಗೆ ವಿಶೇಷ ಆಸಕ್ತಿ. ರೈತಾಪಿ ವರ್ಗದವರ ಕಷ್ಟಗಳನ್ನು ಸರಕಾರದ ಗಮನಕ್ಕೆ ತರುವುದರಲ್ಲಿ ಅವರು ಯಶಸ್ವಿಯಾಗಿದ್ರು.

ಇನ್ನು ರಾಜಕೀಯಕ್ಕೆ ಬಂದರೆ ಪಕ್ಷ ಬದಲಾವಣೆ ಮಾತ್ರವಲ್ಲ, ಅವರು ಹೊಸ ಪಕ್ಷವನ್ನೂ ಕಟ್ಟಿದ್ದಾರೆ. ಅದನ್ನು ಎಲ್ಲರೂ ಮಾಡಿದ್ದಾರೆ, ಕೆಂಗಲ್ ಹನುಮಂತಯ್ಯ ಹೊಸ ಪಕ್ಷ ಮಾಡಿದ್ರು, ದೇವರಾಜ ಅರಸು ಮಾಡಿದ್ರು. ಸುಬ್ಬಯ್ಯನವರು ಬರಿಗೈಯಲ್ಲಿ ಪಕ್ಷ ಕಟ್ಟೋ ಪ್ರಯತ್ನಾನೂ ಮಾಡಿದ್ರು, ‘ಕನ್ನಡ ನಾಡು’ ಅಂತ. ಜನಸಂಘವನ್ನು ಕಟ್ಟಿ ಬೆಳೆಸಿದ್ರು. ಬಿಜೆಪಿಲಿದ್ರು. ಅದನ್ನೂ ತೊರೆದರು. ಯಾಕೆ ಆ ಪಕ್ಷ ತೊರೆದರು ಅಂದರೆ, ಅಧ್ಯಕ್ಷ ಸ್ಥಾನದ ಆಯ್ಕೆಯ ಸಂದರ್ಭ ಬಂದಾಗ ಇವರಿಗೆ ಮೋಸ ಮಾಡಿದ್ರು, ಆಗ ಅದನ್ನ ತೊರೆದರು. ಅದಕ್ಕೆ ಹೊಸ ಪಕ್ಷ ಕಟ್ಟಿದರು. ಅರಸು ಅವರು ಹೇಗಾದರೂ ಸುಬ್ಬಯ್ಯನವರನ್ನು ತಮ್ಮ ಜೊತೆ ಸೇರಿಸಿಕೊಳ್ಳೋದಕ್ಕೆ ಪ್ರಯತ್ನ ಮಾಡಿದ್ರು. ಅದು ಆಗಲಿಲ್ಲ. ಒಂದೇ ಪಕ್ಷದಲ್ಲಿದ್ದು, ವರಿಷ್ಠರಿಗೆ ನಿಷ್ಠರಾಗಿದ್ದುಕೊಂಡು, ಹೊಂದಾಣಿಕೆ ರಾಜಕಾರಣ ಮಾಡಿ ಅಧಿಕಾರ ಅನುಭವಿಸುವುದು ಸುಬ್ಬಯ್ಯನವರಿಗೆ ಯಾವತ್ತೂ ಮುಖ್ಯ ಆಗಿರಲೇ ಇಲ್ಲ.

‘‘ರಾಜಕಾರಣದಲ್ಲಿ ಸಕ್ಸ್‌ಸ್‌ಫುಲ್ ರಾಜಕಾರಣ ಅನ್ನೋದು ಇದೆಯಾ?’’ ಅಂತ ಕೇಳುತ್ತಾರೆೆ! ಸಕ್ಸ್‌ಸ್‌ಫುಲ್ ರಾಜಕಾರಣ ಅಂದ್ರೇನು? ನನಗೆ ಅದರಲ್ಲಿ ನಂಬಿಕೆ ಇಲ್ಲ. ಒಂದೇ ಪಕ್ಷದಲ್ಲಿದ್ರೆ, ಸದಾ ಅಧಿಕಾರದಲ್ಲಿದ್ರೆ ಸಕ್ಸ್‌ಸ್‌ಫುಲ್ ರಾಜಕಾರಣ ಅಂತ ಜನ ಭಾವಿಸ್ತಾರೆ, ಹಾಗೆ ತಿಳಿಯಬಾರದು. ಎ.ಕೆ. ಸುಬ್ಬಯ್ಯನವರದು ಈ ಥರದ ರಾಜಕಾರಣ ಅಲ್ಲ. ಐ ಡೋನ್ಟ್ ಕಾಲ್ ಹಿಮ್ ಎ ಪಾಲಿಟೀಷಿಯನ್ ಅಟ್ ಆಲ್. ಬಿಕಾಸ್ ಪಾಲಿಟೀಷಿಯನ್ ಇಸ್ ಒನ್ ಹೂ ಮೇಕ್ಸ್ ಆ್ಯಂಡ್ ಅನ್‌ಮೇಕ್ಸ್ ಫ್ರೆಂಡ್ಸ್‌ಶಿಫ್, ಹೂ ಮೇಕ್ಸ್ ಆ್ಯಂಡ್ ಅನ್‌ಮೇಕ್ಸ್ ಪಾಲಿಸೀಸ್, ಪ್ರೊಗ್ರಾಮ್ಸ್, ಅನ್‌ಮೇಕ್ಸ್ ರಿಸ್ಟ್ರಿಕ್ಷನ್ ಬಿಟ್‌ವೀನ್ ಹಿಮ್‌ಸೆಲ್ಫ್ ಆ್ಯಂಡ್ ಹಿಸ್ ಎನಿಮೀಸ್. ಇವೆಲ್ಲ ನೀವು ಸಕ್ಸಸ್‌ಫುಲ್ ಅಂತೀರಲ್ಲ, ಆ ಸಕ್ಸಸ್‌ಫುಲ್ ಪಾಲಿಟೀಷಿಯನ್ ಜೊತೆಗಿರ್ತಾವೆ. ಸುಬ್ಬಯ್ಯನವರು ಈ ಥರದವರಲ್ಲ.

ಸುಬ್ಬಯ್ಯನವರು ಅಧಿಕಾರದ ಆಸೆಗಾಗಿ ಮುಂದಾಗದೆ, ಪಕ್ಷದ ವರಿಷ್ಠರೊಡನೆ ಹೊಂದಾಣಿಕೆಯ ತಂತ್ರ ಮಾಡದೆ ಆಳುವವರನ್ನು ಸದಾ ಒಂದು ಎಚ್ಚರಿಕೆಯ ಸ್ಥಿತಿಯಲ್ಲಿಡುವ ದನಿಯಾಗಿದ್ದವರು. ಅವರ ಸಾಮಾಜಿಕ ಹೋರಾಟಗಳು, ವಕೀಲಿ ಕೆಲಸ ಮತ್ತು ರಾಜಕಾರಣ ಎಲ್ಲದರ ಗುರಿಯೂ ಒಂದೇ ಆಗಿತ್ತು. ಹಾಗಾಗಿ ಎ.ಕೆ. ಸುಬ್ಬಯ್ಯನವರು ರಾಜಕಾರಣಿ ಮಾತ್ರವಲ್ಲ ರಾಜಕೀಯ ಹೋರಾಟಗಾರ. ಅವರು ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳನ್ನು ನಿರಂತರವಾಗಿ ಹೇಗಿರಬೇಕು ಅಂತ ಹೇಳಿ ಕಟ್ಟುತ್ತಾ ಬಂದವರು. ಸುಬ್ಬಯ್ಯನವರ ರಾಜಕಾರಣವನ್ನು ಸಕ್ಸಸ್‌ಫುಲ್, ಅನ್‌ಸಕ್ಸ್‌ಸ್‌ಫುಲ್ ಅಂತ ನೋಡಲೇಬಾರದು. ಇವರದು ರಾಮಮನೋಹರ ಲೋಹಿಯಾ ಮಾದರಿಯ ರಾಜಕಾರಣ. ಲೋಹಿಯಾ ಒಮ್ಮೆ ನೆಹರೂ ಅವರ ವಿರುದ್ಧ ಚುನಾವಣೆಗೆ ನಿಂತರು. ನೆಹರೂ ಅವರು ಲೋಹಿಯಾ ಅವರನ್ನು ಕರೆದು ‘‘ನೀವು ಪಾರ್ಲಿಮೆಂಟಲ್ಲಿ ಇರಲೇ ಬೇಕು, ನನ್ನ ವಿರುದ್ಧ ನಿಲ್ಲಬೇಡಿ ನೀವು ಸೋಲ್ತೀರಿ. ಬೇರೆ ಎಲ್ಲಾದರೂ ನಿಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನೇ ನಿಲ್ಲಿಸದೆ ನಿಮ್ಮನ್ನ ಗೆಲ್ಲಿಸಿಕೊಳ್ತೀನಿ’’ ಅಂದ್ರು. ಅದಕ್ಕೆ ಲೋಹಿಯಾ ಏನಂದ್ರು ಅಂದ್ರೆ; ‘‘ಬೇರೆ ಕಡೆ ನಿಂತು ಗೆದ್ದು ಸಂಸತ್ತಿಗೆ ಬರೋದು ನನ್ನ ಉದ್ದೇಶ ಅಲ್ಲ, ಜನರ ಜೊತೆಗೆ ಸಂವಾದ ಮಾಡೋಕೆ ಚುನಾವಣೆಗೆ ನಿಲ್ಲೋದು ಅಂತ. ಅಲ್ಲದೆ ನಿಮ್ಮ ಎದುರು ನಿಂತೇ ನಿಮ್ಮ ತಪ್ಪುಗಳನ್ನು ಜನರಿಗೆ ಸಾರಿ ಹೇಳಬೇಕು’’ ಅಂತ. ಹೀಗೆ ಲೋಹಿಯಾ, ನೆಹರೂ ಅವರನ್ನು ಬಯಲು ಮಾಡ್ತಾರೆ. ಈಗ ಹೇಳಿ ಲೋಹಿಯಾ ಸಕ್ಸ್‌ಸ್‌ಫುಲ್ ರಾಜಕಾರಣಿ ಅಲ್ವೇ?

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎ.ಕೆ. ಸುಬ್ಬಯ್ಯನವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ್ದರು. ತುರ್ತುಪರಿಸ್ಥಿತಿ ಬಗ್ಗೆ ನನಗೆ ಬೇರೆ ಥರ ಅಭಿಪ್ರಾಯ ಇದೆ. ತುರ್ತುಪರಿಸ್ಥಿತಿಯನ್ನ ಆ ಕಾಲಕ್ಕೆ ತರದೇ ಇದ್ದಿದ್ದರೆ ಈ ದೇಶ ಛಿದ್ರ ಛಿದ್ರವಾಗ್ತಾ ಇತ್ತು. ಆಗ ನಮ್ಮ ದೇಶ ಆರ್ಥಿಕವಾಗಿ ಕೆಟ್ಟ ಮಟ್ಟಕ್ಕೆ ಹೋಗಿತ್ತು, ಇಂದಿರಾ ಗಾಂಧಿ ಅವರಿಗೆ ಜೀವ ಬೆದರಿಕೆ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆರ್ಮಿಯಲ್ಲಿ ಎರಡು ಮೂರು ಭಾಗಗಳಾಗಿದ್ದವು. ಇದೆಲ್ಲವನ್ನು ಯೋಚಿಸಿ ಕೊನೆಗೆ ತುರ್ತುಪರಿಸ್ಥಿಯನ್ನು ಜಾರಿಗೆ ತರಲಾಯಿತು. ಆಗ ಕರ್ನಾಟಕದಲ್ಲಿ ಜನಸಂಘದವರು, ಜನತಾ ಪಕ್ಷದವರು ವಿರೋಧವನ್ನು ತೋರಿದ್ರು. ಎ.ಕೆ. ಸುಬ್ಬಯ್ಯನವರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿ ಜೈಲು ಪಾಲಾದ್ರು. ಆಗ ಸುಬ್ಬಯ್ಯನವರನ್ನು ಯಾರೂ ದ್ವೇಷ ಮಾಡ್ತಾ ಇರಲಿಲ್ಲ, ಮಾತೂ ಆಡ್ತಾ ಇರಲಿಲ್ಲ, ಆದ್ರೆ ಒಳಗೊಳಗೆೀ ಅನುಕಂಪ ತೋರ್ತಾ ಇದ್ರು.

ಆದರೆ ಸುಬ್ಬಯ್ಯನವರ ರಾಜಕೀಯ ನಡೆಯಲ್ಲಿ ಕೆಲವು ತಪ್ಪುಹೆಜ್ಜೆ ಅಂತ ಇದಾವೆ. ಆದರೆ ವಿಚಿತ್ರ ಅಂದ್ರೆ ಅವು ಸುಬ್ಬಯ್ಯನವರಿಗೇ ತಪ್ಪುಅಂತ ಅನ್ನಿಸಲಿಲ್ಲ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿದವರು ಅವರೇ. ಇಡೀ ರಾಜ್ಯವನ್ನು ಏಕಾಂಗಿಯಾಗಿ ಸುತ್ತಿ ಜನಸಂಘ ಅನ್ನುವ ಒಂದು ಪಕ್ಷ ಇದೆ ಅಂತ ಜಗತ್ತಿಗೆ ತೋರಿಸಿದರು. ಆದ್ರೆ ಕೊನೆಗೆ ಅಲ್ಲಿ ಅವರಿಗೇ ಜಾಗ ಇಲ್ಲದಂಗೆ ಆಯ್ತು. ಜನಸಂಘದಿಂದ, ಬಿಜೆಪಿಯಿಂದ ಅವರನ್ನು ಹೊರಗೆ ಹಾಕಿದ್ದು ಬಹಳ ದೊಡ್ಡ ಅನ್ಯಾಯ. ಸುಬ್ಬಯ್ಯನವರಿಗೆ ಆದ ದೊಡ್ಡ ರಾಜಕೀಯ ಅನ್ಯಾಯಗಳಲ್ಲಿ ಇದೂ ಒಂದು. ಹಲವಾರು ಜನ ಅವರಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಆದರೆ ಸುಬ್ಬಯ್ಯನವರು ಇದನ್ನೆಲ್ಲ ಕ್ಯಾರೇ ಮಾಡ್ಲಿಲ್ಲ. ಬಿಜೆಪಿ ಬೆಳೆದು ಯಡಿಯೂರಪ್ಪನವರ ಸರಕಾರ ರಚನೆಯಾದುದರ ಹಿಂದೆ ಆರಂಭದಲ್ಲಿ ಜನಸಂಘವನ್ನು ಬೆಳೆಸಿದ ಸುಬ್ಬಯ್ಯನವರ ಶ್ರಮ ಇದ್ದೇ ಇದೆ. ಅದು ಎಲ್ಲರಿಗೂ ಗೊತ್ತು.

(ಕೃಪೆ: ಎ.ಕೆ.ಸುಬ್ಬಯ್ಯ ಅವರ ಅಭಿನಂದನಾ ಗ್ರಂಥ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)