varthabharthi


ನಿಮ್ಮ ಅಂಕಣ

ಜೆಎನ್‌ಯು: ಮುಂದುವರಿದ ಆಡಳಿತ ವರ್ಗದ ಕೆಂಗಣ್ಣು

ವಾರ್ತಾ ಭಾರತಿ : 28 Aug, 2019
ಮ. ಶ್ರೀ. ಮುರಳಿ ಕೃಷ್ಣ, ಬೆಂಗಳೂರು

ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು) ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವೆತ್ತ ವಿದ್ಯಾಸಂಸ್ಥೆಯಾಗಿದೆ. ಇದು ನಮ್ಮ ದೇಶದ ಉತ್ತಮ ಶಿಕ್ಷಣ ಸಂಸ್ಥೆಗಳ ಪೈಕಿ ಮುಂಚೂಣಿ ಸ್ಥಾನದಲ್ಲಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಬಲಪಂಥೀಯ ರಾಜಕೀಯ ಶಕ್ತಿಗಳು ಪ್ರವರ್ಧಮಾನಕ್ಕೆ ಬಂದ ತರುವಾಯ ಈ ವಿಶ್ವವಿದ್ಯಾನಿಲಯದ ಮೇಲೆ ನಿರಂತರವಾಗಿ ಪ್ರಹಾರಗಳು ಜರುಗುತ್ತಿವೆ. ಇದು ಎಡಪಂಥೀಯರನ್ನು ಸೃಷ್ಟಿಸುತ್ತಿರುವ ವಿದ್ಯಾಸಂಸ್ಥೆ ಎಂಬುದು ಈ ಆಕ್ರಮಣಗಳ ಹಿಂದಿರುವ ಪ್ರಮುಖ ಕಾರಣ ಎಂದರೆ ಅತಿಶಯೋಕ್ತಿಯಾಗುವುದಿಲ್ಲ.

ಆದರೆ ಅರಿತವರ ಅಭಿಪ್ರಾಯಗಳಲ್ಲಿ ಜೆಎನ್‌ಯುನಲ್ಲಿ ಶಿಕ್ಷಣದ ಜೊತೆ ಅಲ್ಲಿನ ವಿದ್ಯಾರ್ಥಿಗಳು ಅನೇಕ ವಿಚಾರ-ಪ್ರಚೋದಕ ಸಂಗತಿಗಳ ಜೊತೆ ಮುಖಾಮುಖಿಯಾಗುತ್ತಾರೆ; ವಿನಿಮಯಗಳನ್ನು ನಡೆಸುತ್ತಾರೆ. ಅಂದರೆ ಒಬ್ಬ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುವಂತಹ ವಿದ್ಯಾ ವಾತಾವರಣ ಅಲ್ಲಿ ಕಂಡುಬರುತ್ತದೆ. ಈ ವಿಶ್ವವಿದ್ಯಾನಿಲಯದಿಂದ ಹೊರಬಂದ ಅನೇಕ ವಿದ್ಯಾರ್ಥಿಗಳು ವಿಶ್ವದ ನಾನಾ ರಂಗಗಳಲ್ಲಿ ಅನುಪಮ ಕೊಡುಗೆಗಳನ್ನು ನೀಡಿದ್ದಾರೆ; ಇತರರು ಗುರುತಿಸುವಂತಹ ಕೆಲಸಗಳನ್ನು ಮಾಡಿದ್ದಾರೆ. ಪ್ರಸ್ತುತ ಕೇಂದ್ರ ಸರಕಾರದಲ್ಲಿರುವ ಇಬ್ಬರು ಸಚಿವರು ಇದೇ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿಗಳು. ವಾಸ್ತವಗಳು ಹೀಗಿರಬೇಕಾದರೇ ಜೆಎನ್‌ಯು ಮೇಲೆ ಏಕೆ ಬಲಪಂಥೀಯ ಸರಕಾರ ತನ್ನ ಆಯುಧಗಳನ್ನು ಜಳಿಪಿಸುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ತನ್ನ ಕಾರ್ಯಸೂಚಿಗೆ ತಕ್ಕಂತೆ ವಿಶ್ವವಿದ್ಯಾನಿಲಯಗಳನ್ನು ನಿಯಂತ್ರಿಸಬೇಕು ಎಂಬುದು ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿರುವ ಎನ್‌ಡಿಎ ಸರಕಾರದ ಕಾರ್ಯತಂತ್ರವಾಗಿದೆ. ಈ ನಿಟ್ಟಿನಲ್ಲಿ ಸಂಘ ಪರಿವಾರ ಹಾಗೂ ಅದರ ಅಂಗ ಸಂಸ್ಥೆಗಳು ಅವ್ಯಾಹತವಾಗಿ ಜೆಎನ್‌ಯು ವಿರುದ್ಧ ಅಪಪ್ರಚಾರಗಳನ್ನು ಮಾಡುತ್ತ ಬಂದಿವೆ. ಹೆಚ್ಚಿನ ನಮ್ಮ ಸಾಮಾನ್ಯ ಜನ ಜೆಎನ್‌ಯುನ ಪೂರ್ವಾಪರಗಳನ್ನು ತಿಳಿಯದೆ ಈ ಕುತ್ಸಿತ ಪ್ರಚಾರಗಳಿಗೆ ಬಲಿಯಾಗುತ್ತಿದ್ದಾರೆ; ಚದುರಂಗದಾಟದ ಕಾಯಿಗಳಾಗುತ್ತಿದ್ದಾರೆ.

ಜೆಎನ್‌ಯುನ ವಿದ್ಯಾರ್ಥಿ/ಶಿಕ್ಷಕರ ಸಂಘಗಳ ಮೇಲೆ 2016ರಿಂದ ಸತತವಾಗಿ ಹೊಡೆತಗಳಾಗುತ್ತಿವೆ. ಡಾ. ಕನ್ಹಯ್ಯಿ ಕುಮಾರ್ ಮತ್ತು ಇತರ ಕೆಲವು ವಿದ್ಯಾರ್ಥಿಗಳ ಮೇಲೆ ದ್ವೇಷದ ಆಪಾದನೆಗಳನ್ನು ಹೇರಲಾಯಿತು; ಅನೇಕ ವಿಧದ ಕಿರುಕುಳಗಳನ್ನು ನೀಡಲಾಯಿತು. ಈ ವಿಶ್ವವಿದ್ಯಾನಿಲಯಕ್ಕೆ ನೀಡಲಾಗಿದ್ದ ಅನೇಕ ಸೌಲಭ್ಯಗಳನ್ನು ಮೊಟಕುಗೊಳಿಸಲಾಯಿತು. ‘‘ಜೆಎನ್‌ಯು ದೇಶದ್ರೋಹಿಗಳನ್ನು ತಯಾರಿಸುತ್ತಿರುವ ಒಂದು ಕಾರ್ಖಾನೆ’’ ಎಂಬ ಸುಳ್ಳನ್ನು ಅಂತಿಮ ಸತ್ಯವೆಂದು ಸಾರಿ ಹೇಳುವ ನಿಟ್ಟಿನಲ್ಲಿ ಹುನ್ನಾರಗಳು ಹೆಣೆಯಲ್ಪಟ್ಟವು.

ಪ್ರಸ್ತುತ ಜೆಎನ್‌ಯುನ ಆಡಳಿತ ವರ್ಗ 48 ಉಪಾಧ್ಯಾಯರ ಮೇಲೆ ಸೆಂಟ್ರಲ್ ಸಿವಿಲ್ ಸರ್ವೀಸಸ್(ಕ್ಲಾಸ್ಸಿಫಿಕೇಷನ್, ಕಂಟ್ರೋಲ್ ಆ್ಯಂಡ್ ಅಪೀಲ್) ರೂಲ್ಸ್(1965) ಅನ್ವಯ ಜುಲೈ 2018ರಲ್ಲಿ ಒಂದು ದಿನದ ಮುಷ್ಕರ ಹೂಡಿದ್ದಕ್ಕೆ ದುರ್ನಡತೆ ಆಪಾದನೆಯನ್ನು ಹೊರಿಸಲಾಗಿದೆ. ಅಲ್ಲದೆ ಸರಕಾರಿ ಉದ್ಯೋಗಿಗಳಿಗೆ ಅನ್ವಯಿಸುವ ಸೆಂಟ್ರಲ್ ಸಿವಿಲ್ ಸರ್ವೀಸಸ್(ಕಾಂಡಕ್ಟ್) ರೂಲ್ಸ್(1964)ಗಳನ್ನು ಬಳಸಲಾಗಿದೆ. ಈ ವಿಷಯದಲ್ಲಿ ಜುಲೈ 24, 2019ರಂದು ಸಂಬಂಧಪಟ್ಟ ಉಪಾಧ್ಯಾಯರಿಗೆ ಒಂದು ಮೆಮೊ ಕೂಡ ನೀಡಲಾಗಿದೆ. ಇದರಲ್ಲಿ ಅವರಿಗೆ ಮೇಜರ್ ಮತ್ತು ಮೈನರ್ ಪೆನಾಲ್ಟಿಗಳನ್ನು (ಸೆಂಟ್ರಲ್ ಸಿವಿಲ್ ಸರ್ವೀಸಸ್ ರೂಲ್ಸ್ ಅನ್ವಯ), ವೇತನ ಮತ್ತು ಇಂಕ್ರಿಮೆಂಟ್ ಕಡಿತವನ್ನು ಮಾಡಲಾಗುತ್ತದೆ ಎಂಬ ಬೆದರಿಕೆಯನ್ನು ಒಡ್ಡಲಾಗಿದೆ.

ಆದರೆ ಅಚ್ಚರಿಯ ಮತ್ತು ಗಮನೀಯ ವಿಷಯವೆಂದರೆ ಸೆಂಟ್ರಲ್ ಸಿವಿಲ್ ಸರ್ವೀಸಸ್ ರೂಲ್ಸ್ ಪ್ರಕಾರ ಶಾಲೆ, ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಶಿಕ್ಷಕರು ಸರಕಾರಿ ನೌಕರರೆಂದು ಪರಿಗಣಿಸಲ್ಪಡುವುದಿಲ್ಲ. ಆದಾಗ್ಯೂ ಶಿಕ್ಷಕರನ್ನು ಸರಕಾರಿ ನೌಕರರೆಂದು ಪರಿಗಣಿಸಿ, ಅವರ ಮೇಲೆ ಶಿಸ್ತುಕ್ರಮವನ್ನು ಜರುಗಿಸಲಾಗಿದೆ. ಇದಾಗಿರುವುದು ಮುಷ್ಕರ ಜರುಗಿದ ಒಂದು ವರ್ಷದ ತರುವಾಯ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಸಂಸತ್‌ನ ಪ್ರತ್ಯೇಕ ಕಾಯ್ದೆ ಮೂಲಕ ಅಸ್ತಿತ್ವಕ್ಕೆ ಬಂದಿರುವ ಇಂತಹ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯನ್ನು ವ್ಯವಸ್ಥಿತವಾಗಿ ಧ್ವಂಸ ಮಾಡುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಚಾರ್ಜ್‌ಶೀಟ್ ಹಾಕಲ್ಪಟ್ಟಿರುವ ಅನೇಕ ಪ್ರಾಧ್ಯಾಪಕರು ಸುಮಾರು ಮೂರು ದಶಕಕ್ಕಿಂತಲೂ ಹೆಚ್ಚಿನ ಅವಧಿಯ ಸೇವೆಯನ್ನು ಸಲ್ಲಿಸಿದ್ದಾರೆ. ಈ ಶಿಸ್ತುಕ್ರಮ ಜೆಎನ್‌ಯುನ ಇತರ ಅಧ್ಯಾಪಕರ ಮೇಲಷ್ಟೆ ಅಲ್ಲದೆ ಇತರ ಕಾಲೇಜು/ವಿಶ್ವವಿದ್ಯಾನಿಲಯಗಳ ಶಿಕ್ಷಕರಿಗೆ ತಲ್ಲಣವನ್ನುಂಟು ಮಾಡಿದೆ. ಆದರೆ ಈ ಶಿಸ್ತುಕ್ರಮ ಕಾನೂನಾತ್ಮಕವಾಗಿ ಸಿಂಧುವಾಗಬಲ್ಲದೆ ಎಂಬ ಪ್ರಶ್ನೆಯಿದೆ. ಇದಕ್ಕೆ ಒಂದು ಹಿನ್ನೆಲೆಯಿದೆ. 2015ರ ರಿಟ್ ಪೆಟಿಶನ್ ನಂ. 4178ಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ವಿಶ್ವವಿದ್ಯಾನಿಲಯದ ಶಿಕ್ಷಕರು ಯಾವ ರೀತಿಯಲ್ಲೂ ಸರಕಾರಿ ನೌಕರರಲ್ಲ ಎಂಬ ಅರ್ಥಬರುವ ತೀರ್ಪನ್ನು ನೀಡಿತು.

ಜೆಎನ್‌ಯುನ ಬೋಧನಾ ವರ್ಗದ ಕೆಲವು ಶಿಕ್ಷಕರು ಹೂಡಿದ್ದ ಒಂದು ದಿನದ ಮುಷ್ಕರ ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗ ತರಲಿಲ್ಲ. ಅಚ್ಚರಿಯ ವಿಷಯವೆಂದರೆ, ಜೆಎನ್‌ಯು ಆಡಳಿತ ವರ್ಗ ಅಕ್ಟೋಬರ್ 2018ರಲ್ಲಿ ತಾನೇ ಪ್ರಸ್ತಾವಿಸಿದ್ದ ಸೆಂಟ್ರಲ್ ಸಿವಿಲ್ ಸರ್ವೀಸಸ್ ರೂಲ್ಸ್(ನೂತನ ಆರ್ಡಿನೆನ್ಸ್‌ಗಳಲ್ಲಿ)ಗಳನ್ನು ಹಿಂಪಡೆಯಿತು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇನ್ನೂ ಹೆಚ್ಚಿನ ಸೀಟ್‌ಗಳನ್ನು ಪಡೆದು ಬಲಶಾಲಿಯಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ, ಅದು ವಿಶ್ವವಿದ್ಯಾನಿಲಯಗಳ ಶಿಕ್ಷಕರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಕಡಿವಾಣ ಹಾಕಲು ಸ್ಕೆಚ್ ಹಾಕುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆ ನಮ್ಮೆದುರಿಗಿದೆ. ಜೆಎನ್‌ಯು ಶಿಕ್ಷಕರ ಮೇಲಣ ಈ ಗದಾಪ್ರಹಾರವನ್ನು ನಮ್ಮ ದೇಶದ ಶಿಕ್ಷಕರ ಅನೇಕ ಸಂಘಗಳು ಪ್ರತಿಭಟಿಸಿವೆ. ಹಾಗೆಯೇ ಇದಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದ ವಿದ್ವಾಂಸರಾಗಿರುವ ಅಕೀಲ್ ಬಿಲ್‌ಗ್ರಮಿ(ಕೊಲಂಬಿಯಾ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದ ಪ್ರಾಧ್ಯಾಪಕರು), ಅರ್ಜುನ್ ಅಪ್ಪಾ ದೊರೈ(ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು), ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರೊ. ಗಾಯತ್ರಿ ಚಕ್ರವರ್ತಿ ಸ್ಪಿವಾಕ್, ಶೆಲ್ಡನ್‌ಪೊಲ್ಲಾಕ್, ಪಾರ್ಥ ಚಟರ್ಜಿ, ವಾರ್ವಿಕ್ ವಿಶ್ವವಿದ್ಯಾನಿಲಯದ ಡೇವಿಡ್ ಹಾರ್ಡಿಮನ್, ಆ್ಯಮ್ಸ್ಟರ್‌ಡಮ್ ವಿಶ್ವವಿದ್ಯಾನಿಲಯದ ಜಾನ್ ಬ್ರೆಮನ್, ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ವೀಣಾ ದಾಸ್ ಹಾಗೂ ಇತರರು ಜೆಎನ್‌ಯು ಶಿಕ್ಷಕರಿಗೆ ಬೆಂಬಲವನ್ನು ಸೂಚಿಸಿದ್ದಾರೆ.

ಈ ವಿಚಾರವನ್ನು ಮಂಥನ ಮಾಡುವಾಗ, ಇತಿಹಾಸದ ಪುಟಗಳಲ್ಲಿನ, ಪುರಾತನ ಭಾರತದಲ್ಲಿದ್ದ ಕೆಲವು ವಿಶ್ವವಿದ್ಯಾನಿಲಯಗಳ ಸಂಗತಿಗಳತ್ತ ಗಮನವನ್ನು ಹರಿಸಬೇಕು. ಉದಾಹರಣೆಗಾಗಿ ನಳಂದ ವಿಶ್ವವಿದ್ಯಾನಿಲಯದ ಕೆಲವು ವಿಷಯಗಳನ್ನು ಮನನ ಮಾಡೋಣ. ಸುಮಾರು ಕ್ರಿ.ಶ. 5ನೇ ಶತಮಾನದಲ್ಲಿ ನಳಂದ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದಿತು ಎಂಬುದು ಇತಿಹಾಸಜ್ಞರ ಅಭಿಪ್ರಾಯ. ಸುಮಾರು 800 ವರ್ಷಗಳ ಕಾಲ ಅಂದರೆ ಕ್ರಿ.ಶ. 12ನೇ ಶತಮಾನದವರೆಗೆ ಅದು ಉತ್ತುಂಗದಲ್ಲಿತ್ತು. ಅಲ್ಲಿ ಸುಮಾರು 2,000 ಶಿಕ್ಷಕರು ಹಾಗೂ 10,000 ವಿದ್ಯಾರ್ಥಿಗಳಿದ್ದರು ಎನ್ನಲಾಗಿದೆ. ಅದು ಒಂದು ವಸತಿ ವಿಶ್ವವಿದ್ಯಾನಿಲಯವಾಗಿತ್ತು. ಅನೇಕ ಜ್ಞಾನಶಿಸ್ತುಗಳ ಅಧ್ಯಯನಗಳಿಂದ ಅದು ಹೆಸರುವಾಸಿಯಾಗಿತ್ತು. ಅದು ಚೀನಾ, ಕೊರಿಯಾ, ಜಪಾನ್, ಟಿಬೇಟ್, ಮಂಗೋಲಿಯಾ, ಟರ್ಕಿ, ಶ್ರೀಲಂಕಾ ಮತ್ತು ಆಗ್ನೇಯ ಏಶ್ಯಾದ ಪ್ರಾಂತಗಳ ವಿದ್ವಾಂಸರನ್ನು ಆಕರ್ಷಿಸಿತ್ತು. ಚೀನಿ ಯಾತ್ರಿಕ ಹುಯೆನ್ ತ್ಸಾಂಗ್ ತನ್ನ ಉಲ್ಲೇಖಗಳಲ್ಲಿ ಈ ವಿದ್ಯಾಕೇಂದ್ರದ ವಿವರಗಳನ್ನು ಪ್ರಸ್ತಾಪಿಸಿದ್ದಾನೆ. ಸುಮಾರು 12ನೇ ಶತಮಾನದ ಕೊನೆಯಲ್ಲಿ ಈ ವಿಶ್ವವಿದ್ಯಾನಿಲಯ ಆಕ್ರಮಣಕಾರರಿಗೆ ತುತ್ತಾಗಿ ನಾಶವಾಯಿತು. ಈ ಕಾಲದ ವಿಶ್ವವಿದ್ಯಾನಿಲಯಗಳ ಶಿಕ್ಷಕರ ಮತ್ತು ವಿದ್ಯಾರ್ಥಿ ಸಂಘಗಳ ಮೇಲಣ ದಾಳಿಗಳನ್ನು ವಿಶ್ಲೇಷಿಸುವಾಗ, ಇತಿಹಾಸ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ!

ಇತ್ತೀಚಿನ ವರ್ಷಗಳಲ್ಲಿ, ನಮ್ಮ ದೇಶದ ವಿಶ್ವವಿದ್ಯಾನಿಲಯಗಳ ಬೋಧನಾ ವರ್ಗ ಮತ್ತು ವಿದ್ಯಾರ್ಥಿ ಸಂಘಗಳ ಮೇಲಣ ದಾಳಿಗಳನ್ನು ವಿಶ್ಲೇಷಿಸಿದಾಗ, ಆಳುವ ವರ್ಗಗಳಿಗೆ ಶಿಕ್ಷಣದಿಂದ ಪರಿಣಮಿಸುವ ಜಾಗೃತಿ ಕುರಿತಂತೆ ಇರುವ ಭಯ ಮತ್ತು ಆತಂಕದ ಹಿಂದಿರುವ ಕಾರಣಗಳು ಅರಿವಾಗುತ್ತವೆ. ಸರಿಯಾದ ಶಿಕ್ಷಣವನ್ನು ಪಡೆದ ವ್ಯಕ್ತಿ ಒಳ್ಳೆಯ ಹಾಗೂ ಜವಾಬ್ದಾರಿಯುತ ನಾಗರಿಕನಾಗುವ ಸಾಧ್ಯತೆಗಳು ಜಾಸ್ತಿಯಿರುತ್ತವೆ. ಆತ ತನ್ನ ಸ್ವಂತ ಹಿತಾಸಕ್ತಿಗಳ ಜೊತೆ ಸಮಷ್ಟಿಯ ಹಿತದಲ್ಲಿ ಕೆಲಸವನ್ನು ಮಾಡಲು ಬಯಸುತ್ತಾನೆ. ಸರಕಾರಗಳ ಆಡಳಿತದ ರೀತಿ-ನೀತಿಗಳನ್ನು ವಿಶ್ಲೇಷಿಸುತ್ತಾನೆ; ಟೀಕೆಗಳಿಗೆ ಒಳಪಡಿಸುತ್ತಾನೆ. ಇಂತಹವರ ಸಂಖ್ಯೆ ಹೆಚ್ಚಾದಷ್ಟು ಆಳುವ ವರ್ಗಗಳ ಸ್ಥಿತಿಸ್ಥಾಪಕ ನಡವಳಿಕೆಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಸರಕಾರಗಳು ಶಿಕ್ಷಣ ವ್ಯವಸ್ಥೆಯ ಮೇಲೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇರುತ್ತವೆ. ಪ್ರಜ್ಞಾವಂತ ನಾಗರಿಕರು ಇದನ್ನರಿತು ಮಧ್ಯಪ್ರವೇಶ ಮಾಡಬೇಕು.

ಇಮೈಲ್: msmurali1961@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)