varthabharthi


ನಿಮ್ಮ ಅಂಕಣ

ತೆರೆಯ ಹಿಂದೆ...

‘ಸೆಕ್ಷನ್ 375’: ಕಾನೂನು-ನ್ಯಾಯಗಳ ನಡುವೆ ತಿಕ್ಕಾಟ

ವಾರ್ತಾ ಭಾರತಿ : 15 Sep, 2019
ಮುಸಾಫಿರ್

ಇತ್ತೀಚಿನ ದಿನಗಳಲ್ಲಿ ಈ ದೇಶದ ಕಾಯ್ದೆ, ಕಾನೂನುಗಳು ಸಾಮಾಜಿಕ ಚರ್ಚೆಗಳಾಗಿ ಬದಲಾಗುತ್ತಿವೆ. ಈ ಸಂದರ್ಭವನ್ನು ಬಳಸಿಕೊಳ್ಳುವುದಕ್ಕೆ ಬಾಲಿವುಡ್ ಕೂಡ ಹಿಂದೇಟು ಹಾಕಿಲ್ಲ. ಪರಿಣಾಮವಾಗಿ, ವಿವಿಧ ಸೆಕ್ಷನ್‌ಗಳೇ ಸಿನೆಮಾ ಹೆಸರುಗಳಾಗಿ ಬದಲಾಗುತ್ತಿವೆ. ರ್ಯಾಗಿಂಗ್ ಕಾಯ್ದೆಗೆ ಸಂಬಂಧ ಪಟ್ಟ ‘ಆರ್ಟಿಕಲ್ 21’ನ್ನು ಆಧರಿಸಿದ ‘ಟೇಬಲ್ 21’ ಥ್ರಿಲ್ಲರ್ ಚಿತ್ರ ಈ ಹಿಂದೊಮ್ಮೆ ಸುದ್ದಿ ಮಾಡಿತ್ತು. ದಲಿತ ದೌರ್ಜನ್ಯ ಕಾಯ್ದೆಗಳಿಗೆ ಸಂಬಂಧ ಪಟ್ಟ ‘ಆರ್ಟಿಕಲ್ 15’ ಇತ್ತೀಚೆಗೆ ಬಹುಚರ್ಚೆಗೊಳಗಾದ ಚಿತ್ರ ಮಾತ್ರವಲ್ಲ, ಬಾಲಿವುಡ್‌ನಲ್ಲಿ ಯಶಸ್ಸನ್ನು ಕಂಡ ಚಿತ್ರ ಕೂಡ. ಹಾಸ್ಯ ಪಾತ್ರಗಳ ಮೂಲಕ ಗುರುತಿಸಲ್ಪಡುತ್ತಿದ್ದ ಆಯುಶ್ಮಾನ್ ಖುರಾನಾ ಅವರಿಗೆ ಈ ಚಿತ್ರ ಗಂಭೀರ ವರ್ಚಸ್ಸನ್ನು ತಂದುಕೊಟ್ಟಿತು. ಈ ದೇಶದ ದಲಿತರ ಮೇಲಾಗುತ್ತಿರುವ ಅನ್ಯಾಯಗಳ ಬಗ್ಗೆ ದಿಟ್ಟತನದಿಂದ ಮಾತನಾಡಿದ ಸಿನೆಮಾ ಇದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕಾಶ್ಮೀರದ ಸಮಸ್ಯೆಯನ್ನು ಮುಂದಿಟ್ಟುಕೊಂಡು ‘ಆರ್ಟಿಕಲ್ 370’ ಹೆಸರಿನಲ್ಲಿ ಸಿನೆಮಾ ಬಂದರೆ ಅಚ್ಚರಿಯೇನೂ ಇಲ್ಲ. ‘ಮೀ ಟೂ’ ಚಳವಳಿಯ ಬಳಿಕ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ಕುರಿತಂತೆ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ‘ಸೆಕ್ಷನ್ 375’ ಥ್ರಿಲ್ಲರ್ ಚಿತ್ರ ಇದೀಗ ಬಿಡುಗಡೆಗೊಂಡಿದ್ದು, ಚಿತ್ರಪಂಡಿತರ ಮೆಚ್ಚುಗೆಗೆ ಪಾತ್ರವಾಗಿದೆ. ನಿರೀಕ್ಷೆಯಂತೆಯೇ ಚರ್ಚೆ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರವನ್ನೇ ಕೇಂದ್ರ ವಸ್ತುವನ್ನಾಗಿಸಿಕೊಂಡಿದೆ. ಸೆಕ್ಷನ್ 375 ಇದರ ಪರಿಣಾಮ ಮತ್ತು ಲೋಪಗಳನ್ನು ಮುಂದಿಟ್ಟುಕೊಂಡು ಚಿತ್ರಕತೆಯನ್ನು ಹೆಣೆಯಲಾಗಿದೆ.

 ಖ್ಯಾತ ಚಿತ್ರ ನಿರ್ದೇಶಕ ರೋಹನ್ ಖುರಾನಾ (ರಾಹುಲ್ ಭಟ್) ಅವರ ಮೇಲೆ, ಚಿತ್ರ ತಂಡದ ವಸ್ತ್ರ ವಿನ್ಯಾಸಕಿಯ ಸಹಾಯಕಿ ಅಂಜಲಿ (ಮೀರಾ ಛೋಪ್ರಾ) ಅತ್ಯಾಚಾರದ ಆರೋಪ ಹೊರಿಸುತ್ತಾಳೆ. ಖುರಾನಾ ಮನೆಗೆ ವಸ್ತ್ರಗಳನ್ನು ಕೊಂಡೊಯ್ದ ಹೊತ್ತಿನಲ್ಲಿ ಆಕೆಯ ಮೇಲೆ ಖುರಾನಾ ಅತ್ಯಾಚಾರ ನಡೆಸುತ್ತಾನೆ. ಅಂದು ಸಂಜೆ ಖುರಾನಾನ ಬಂಧನವಾಗುತ್ತದೆ. ಬಲವಾದ ಸಾಕ್ಷಾಧಾರಗಳು ದೊರಕಿದ ಕಾರಣ, ಸುದೀರ್ಘ ವಿಚಾರಣೆಗಳ ಬಳಿಕ ಕೆಳ ನ್ಯಾಯಾಲಯದಲ್ಲಿ ಖುರಾನಾಗೆ ಹತ್ತು ವರ್ಷಗಳ ಕಠಿಣ ಸಜೆಯಾಗುತ್ತದೆ. ಆದರೆ ಈ ಪ್ರಕರಣ ಹೈಕೋರ್ಟ್‌ನಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತದೆ. ಖುರಾನಾ ಪರವಾಗಿ ಪ್ರಕರಣವನ್ನು ಕೈಗೆತ್ತಿಕೊಂಡ ಪ್ರತಿಷ್ಠಿತ ನ್ಯಾಯವಾದಿ ತರುಣ್ ಸೆಲೂಜಾ (ಅಕ್ಷಯ್ ಖನ್ನ) ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಳ ಕೆಲವು ಸೂಕ್ಷ್ಮ ಲೋಪಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತಾರೆ. ಇದೇ ಸಂದರ್ಭದಲ್ಲಿ ಸಂತ್ರಸ್ತೆ ಅಂಜಲಿ ಪರವಾಗಿ ಸರಕಾರಿ ವಕೀಲೆ, ಮಹಿಳಾ ಪರ ಕಾರ್ಯಕರ್ತೆ ಹಿರಾಲ್ ಗಾಂಧಿ (ರಿಚಾ ಛಡ್ಡಾ) ವಾದಿಸುತ್ತಾರೆ. ದೇಶಾದ್ಯಂತ ಈ ಪ್ರಕರಣ ಚರ್ಚೆಗೀಡಾಗುತ್ತ್ತದೆ. ಸಾಮಾಜಿಕ ತಾಣಗಳಲ್ಲಿ ಆರೋಪಿಯ ವಿರುದ್ಧ ಮತ್ತು ಆತನ ಪರವಾಗಿ ವಾದಿಸುವ ನ್ಯಾಯವಾದಿಯ ವಿರುದ್ಧ ಆಕ್ರೋಶ ಭುಗಿಲೇಳುತ್ತದೆ. ಆರೋಪಿಗೆ ಗಲ್ಲಾಗಬೇಕು ಎಂದು ಸಾರ್ವಜನಿಕರು ಬೀದಿಗಿಳಿಯುತ್ತಾರೆ. ರೋಹನ್ ಖುರಾನಾ ನಿಜಕ್ಕೂ ಆರೋಪಿ ಹೌದೇ ಅಲ್ಲವೇ? ಎನ್ನುವುದನ್ನು ನಿರ್ಧರಿಸುವುದೇ ಚಿತ್ರದ ಗುರಿ.

 ಒಬ್ಬ ನ್ಯಾಯವಾದಿ ಯಾವುದಕ್ಕೆ ಬದ್ಧನಾಗಿರಬೇಕು? ಕಾನೂನಿಗೋ ಅಥವಾ ನ್ಯಾಯಕ್ಕೋ? ಕಾನೂನು ಬೇರೆ, ನ್ಯಾಯ ಬೇರೆ ಎನ್ನುವುದನ್ನು ಈ ಪ್ರಕರಣದಲ್ಲಿ ಪ್ರತಿಷ್ಠಿತ ನ್ಯಾಯವಾದಿ ತರುಣ್‌ಸೆಲೂಜಾ, ತನ್ನ ಪ್ರತಿ ನ್ಯಾಯವಾದಿ, ಒಂದು ಕಾಲದ ಶಿಷ್ಯೆ ಹಿರಾಲ್ ಗಾಂಧಿಗೆ ಸ್ಪಷ್ಟ ಪಡಿಸಲು ಪ್ರಯತ್ನಿಸುತ್ತಾನೆ. ಕಾನೂನು ಪ್ರಕಾರ ಅತ್ಯಾಚಾರ ಅನ್ನಿಸಿರುವುದು, ಕಾನೂನಿನಾಚೆಗೆ ಅತ್ಯಾಚಾರ ಅಲ್ಲದೇ ಇರಬಹುದು. ಸೆಕ್ಷನ್ 375ರ ದೌರ್ಬಲ್ಯಗಳನ್ನು ಎತ್ತಿ ತೋರಿಸುವ ಪ್ರಯತ್ನ ನ್ಯಾಯವಾದಿ ತರುಣ್ ಸೆಲೂಜಾನಿಂದ ನಡೆಯುತ್ತದೆ. ಬಹುಶಃ ಇತ್ತೀಚಿನ ‘ಮೀ ಟೂ’ ಚಳವಳಿಯ ಬಳಿಕ ದೇಶಾದ್ಯಂತ ಸಾಮಾಜಿಕ ತಾಣಗಳು ಮತ್ತು ಟ್ವಿಟರ್‌ಗಳೇ ನ್ಯಾಯಾಲಯದ ಸ್ಥಾನಗಳನ್ನು ವಹಿಸುತ್ತಿರುವ ವಿದ್ಯಮಾನವನ್ನು ಖಂಡಿಸುವ ಉದ್ದೇಶವೂ ಈ ಚಿತ್ರಕ್ಕಿದೆ. ಮೇಲ್ಮಧ್ಯಮ ವರ್ಗಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳು ಹೇಗೆ ಬೇರೆ ಬೇರೆ ಸಂದರ್ಭಗಳಲ್ಲಿ ದುರ್ಬಳಕೆಯಾಗಬಹುದು ಎನ್ನುವುದನ್ನೂ ಈ ಚಿತ್ರ ಹೇಳುತ್ತದೆ. ಚಿತ್ರದ ಬಹುತೇಕ ದೃಶ್ಯಗಳು ಕೋರ್ಟ್ ರೂಂನ್ನು ಕೇಂದ್ರೀಕರಿಸಿಕೊಂಡಿದೆ. ಸಿನೆಮೋದ್ಯಮಗಳಲ್ಲಿ ದಿನನಿತ್ಯ ನಡೆಯಬಹುದಾದ ಪ್ರಕರಣಗಳ ಒಂದು ಸಣ್ಣ ಎಳೆಯನ್ನು ಬಿಗಿ ಚಿತ್ರಕತೆಯ ಮೂಲಕ ಥ್ರಿಲ್ಲರ್ ಚಿತ್ರವಾಗಿ ಪರಿವರ್ತಿಸಿದ್ದಾರೆ ನಿರ್ದೇಶಕ ಅಜಯ್ ಬೆಹ್ಲ್. ಚಿತ್ರ ಕೆಲವು ಪ್ರಶ್ನೆಗಳನ್ನು ನೋಡುಗರ ಎದೆಯೊಳಗೆ ಇಳಿಸುವಲ್ಲಿ ಯಶಸ್ವಿಯಾಗುತ್ತದೆ. ನಗರ ಪ್ರದೇಶ ಅದರಲ್ಲೂ ಮೇಲ್ಮಧ್ಯಮ ವರ್ಗದ ನಡುವೆ ಅತ್ಯಾಚಾರ ಕಾನೂನಿನ ದುರ್ಬಳಕೆಯ ಕುರಿತಂತೆ ಚಿತ್ರ ಕಾಳಜಿಯನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಅಥವಾ ನಗರ ಪ್ರದೇಶಗಳ ಬಡ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳ ಕ್ರೌರ್ಯಗಳಿಗೆ ನ್ಯಾಯ ನೀಡುವ ದಾರಿಯನ್ನು ಹುಡುಕುವ ಪ್ರಯತ್ನ ಚಿತ್ರ ನಡೆಸುವುದಿಲ್ಲ ಎನ್ನುವುದು ಅಷ್ಟೇ ಮುಖ್ಯವಾಗಿದೆ. ಅತ್ಯಾಚಾರ ಸಂತ್ರಸ್ತೆಯೊಬ್ಬಳು ನ್ಯಾಯಕ್ಕಾಗಿ ಹೋರಾಡುವ ಹಾದಿಯಲ್ಲಿ ಎದುರಾಗುವ ಕ್ರೌರ್ಯಗಳನ್ನೂ ಪರಿಣಾಮಕಾರಿಯಾಗಿ ಚಿತ್ರ ತೆರೆದಿಟ್ಟಿದೆ. ಅತ್ಯಾಚಾರದ ಸಂದರ್ಭವನ್ನು ಪೊಲೀಸರ ಮುಂದೆ, ವೈದ್ಯರ ಮುಂದೆ, ನ್ಯಾಯವಾದಿಗಳ ಮುಂದೆ, ನ್ಯಾಯಾಧೀಶರ ಮುಂದೆ ಪದೇ ಪದೇ ಮಂಡಿಸುವಾಗ ಆಕೆ ಮತ್ತೆ ಮತ್ತೆ ಹೇಗೆ ಅನ್ಯಾಯಕ್ಕೊಳಗಾಗಬೇಕಾಗುತ್ತದೆ ಎನ್ನುವ ಅಂಶದತ್ತಲೂ ಸಿನೆಮಾ ಬೆರಳು ಮಾಡುತ್ತದೆ.

 ಪ್ರತಿಷ್ಠಿತ ನ್ಯಾಯವಾದಿ ಪಾತ್ರದಲ್ಲಿ ಅಕ್ಷಯ್ ಖನ್ನಾ, ಸರಕಾರಿ ವಕೀಲೆಯಾಗಿ ರಿಚಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆರೋಪಿಯಾಗಿ ರಾಹುಲ್ ಭಟ್, ಸಂತ್ರಸ್ತೆಯಾಗಿ ಮೀರಾ ಛೋಪ್ರಾ ನಟನೆಯೂ ಪರಿಣಾಮಕಾರಿಯಾಗಿದೆ. ಕೋರ್ಟ್ ರೂಂನೊಳಗೆ ಯಾವುದೇ ನಾಟಕೀಯತೆಗಳಿಗೆ ನಿರ್ದೇಶಕರು ಅವಕಾಶ ನೀಡಿಲ್ಲ. ಸದ್ಯ ಹೆಚ್ಚು ಚರ್ಚೆಯಲ್ಲಿರುವ ಸೆಕ್ಷನ್ 375ರ ಕುರಿತು ಆಲೋಚನೆಗೆ ಹಚ್ಚುವ ಈ ಚಿತ್ರ ಪ್ರತಿ ಹಂತದಲ್ಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ. ಸಾಮಾಜಿಕ ಕಾಳಜಿಗಳನ್ನು ಇಟ್ಟುಕೊಂಡಿರುವುದರಿಂದ ಚಿತ್ರದ ಥ್ರಿಲ್ಲರ್ ಓಘಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಬಿಗಿ ನಿರೂಪಣೆ ಚಿತ್ರವನ್ನು ಎಲ್ಲೂ ಎಡವದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)