varthabharthi


ರಾಷ್ಟ್ರೀಯ

2022ರ ಕಾಮನ್‌ವೆಲ್ತ್ ಗೇಮ್ಸ್

ಶೂಟಿಂಗ್ ಸೇರ್ಪಡೆಗೆ ಆಗ್ರಹಿಸಿ ಬ್ರಿಟನ್ ಸಚಿವರಿಗೆ ಬಾಂಗ್ಲಾ ಮನವಿ

ವಾರ್ತಾ ಭಾರತಿ : 16 Sep, 2019

ಢಾಕಾ, ಸೆ.16: ಬ್ರಿಟನ್‌ನ ಕಾಮನ್‌ವೆಲ್ತ್, ವಿಶ್ವಸಂಸ್ಥೆ ಹಾಗೂ ದಕ್ಷಿಣ ಏಶ್ಯದ ಸಚಿವ ತಾರಿಕ್ ಅಹ್ಮದ್‌ಗೆ ರವಿವಾರ ಪತ್ರ ಬರೆದಿರುವ ಬಾಂಗ್ಲಾದೇಶದ ಕ್ರೀಡಾ ಸಚಿವ ಮುಹಮ್ಮದ್ ಝಹಿದ್ ಅಹ್ಸಾನ್ ರಸೆಲ್, 2022ರ ಕಾಮನ್‌ವೆಲ್ತ್ ಗೇಮ್ಸ್ ನಿಂದ ಶೂಟಿಂಗ್ ಸೇರ್ಪಡೆ ಸಂಬಂಧ ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು.

‘‘ಇದೀಗ ಫುಟ್ಬಾಲ್, ಕ್ರಿಕೆಟ್, ಆರ್ಚರಿ ಹಾಗೂ ಶೂಟಿಂಗ್ ನಮ್ಮ ಸಾಮರ್ಥ್ಯದ ಪಂದ್ಯಗಳೆಂದು ನಿಮಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಶೂಟಿಂಗ್‌ನ ಕುರಿತು ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ನಿಂದ ಶೂಟಿಂಗ್‌ನ್ನು ಹೊರಗಿಡಲು ಪ್ರಸ್ತಾವ ಇಡಲಾಗಿದೆ. ನೀವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್‌ನ್ನು ಸೇರ್ಪಡೆಗೊಳಿಸಿದರೆ ಅದೊಂದು ಪ್ರಶಂಸನಾರ್ಹ ಕಾರ್ಯವಾಗಲಿದೆ’’ ಎಂದು ರಸೆಲ್ ಹೇಳಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯದ ಬಳಿಕ 2022ರ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್‌ನ್ನು ಹೊರಗಿಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟನೆ ವ್ಯಕ್ತಪಡಿಸಿರುವ ಮೂರನೇ ರಾಷ್ಟ್ರ ಬಾಂಗ್ಲಾ.

ಈ ಹಿಂದೆ ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಬ್ರಿಟನ್‌ನ ಡಿಜಿಟಲ್, ಕಲ್ಚರ್ ಹಾಗೂ ಸ್ಪೋರ್ಟ್ಸ್ ಕಾರ್ಯದರ್ಶಿ ನಿಕಿ ಮೊರ್ಗನ್‌ಗೆ ಪತ್ರ ಬರೆದು, ಶೂಟಿಂಗ್ ಸೇರ್ಪಡೆ ಸಂಬಂಧ ತಾವು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದರು.

ಸರಕು ಸಾಗಾಟ ವಿಷಯವನ್ನು ಮುಂದಿಟ್ಟು ಕೊಂಡು 1974ರ ಬಳಿಕ ಮೊದಲ ಬಾರಿ ಶೂಟಿಂಗ್ ಕ್ರೀಡೆಯನ್ನು ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗಿಡಲಾಗುತ್ತಿದೆ. ಆಸ್ಟ್ರೇಲಿಯದ ಶೂಟಿಂಗ್ ಒಕ್ಕೂಟ, 2022 ಕಾಮನ್‌ವೆಲ್ತ್ ಗೇಮ್ಸ್‌ನ್ನು ಬಹಿಷ್ಕರಿಸುವ ಭಾರತದ ಹೆಜ್ಜೆಗೆ ಬೆಂಬಲ ವ್ಯಕ್ತಪಡಿಸಿತ್ತು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯದ ಶೂಟರ್‌ಗಳ ಸಾಧನೆ ಗಮನಾರ್ಹವಾಗಿದೆ. ಆಸ್ಟ್ರೇಲಿಯದಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳು 9 ಚಿನ್ನದ ಪದಕ ಜಯಿಸಿದ್ದರು. ಆಸ್ಟ್ರೇಲಿಯ 3 ಚಿನ್ನ ಸಹಿತ 9 ಪದಕಗಳನ್ನು ತನ್ನದಾಗಿಸಿಕೊಂಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)