varthabharthi


ಅನುಗಾಲ

ಹಿಂದಿ ಹೇರಿಕೆಯ ಹೊರೆ

ವಾರ್ತಾ ಭಾರತಿ : 18 Sep, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಯಾವುದೇ ಭಾಷೆಯನ್ನು ರಾಜಕೀಯ ಕಾರಣಗಳಿಗಾಗಿ, ಸರ್ವಾಧಿಕಾರದ, ಕೇಂದ್ರೀಕರಣದ ಕಾರಣಗಳಿಗಾಗಿ ಹೇರುವ ಎಲ್ಲ ಪ್ರಯತ್ನಗಳನ್ನು ನಿಷ್ಫಲಗೊಳಿಸುವುದು ಪ್ರತಿಯೊಬ್ಬನ ಕರ್ತವ್ಯ. ಮಾತೃಭಾಷೆ ಗುಲಾಮಗಿರಿಗೆ ಸಿಲುಕಬಾರದು. ಭಾರತದಂತಹ ಬಹುವೈವಿಧ್ಯದ ದೇಶದಲ್ಲಿ ಯಾವುದೇ ಒಂದು ಜಾತಿ, ಮತ, ಜನಾಂಗ, ಭಾಷೆ ಸರ್ವಾಧಿಕಾರಿಯಾಗಬಾರದು. ಎಲ್ಲರೂ ಹಳ್ಳಿಯಲ್ಲಿ ಹಿಂದೆ ನಡೆಯುತ್ತಿದ್ದ ಜಾತ್ರೆಗಳಲ್ಲಿ ನಡೆದಾಡುವವರಂತೆ ಸ್ವತಂತ್ರರಾಗಿರಬೇಕು; ವ್ಯವಹರಿಸಬೇಕು. ಆಗ ಎಲ್ಲ ಭಾಷೆಗಳೂ ಬೆರೆಯುತ್ತವೆ; ವೈವಿಧ್ಯದಲ್ಲೂ ಏಕತೆಯನ್ನು ಸಾಧಿಸುತ್ತವೆ.


ಆಳುವ ಪಕ್ಷದ ಅಧ್ಯಕ್ಷರು ಒಂದು ದೇಶಕ್ಕೆ ಒಂದೇ ಭಾಷೆ ಎಂಬ ಹಾಗೆ ಹಿಂದಿ ಭಾಷೆಯನ್ನು ಹೇರುವ ಮಾತನಾಡಿದ್ದರೆ ಜನರು ಅದೂ ಒಂದು ಅಭಿವ್ಯಕ್ತಿ ಮತ್ತು ಅವರವರ ಸ್ವಾತಂತ್ರ್ಯ ಅವರವರಿಗೆ ಎಂದುಕೊಳ್ಳುತ್ತಿದ್ದರೇ ವಿನಾ ಬೇರೇನೂ ಅನ್ನುತ್ತಿರಲಿಲ್ಲ. ಆದರೆ ಅವರು ಕೇಂದ್ರದ ಗೃಹಸಚಿವರೂ ಆಗಿರುವುದರಿಂದ ಅವರ ಮಾತಿಗೆ ಮೊನಚು ಸಿಕ್ಕಿದೆ ಮತ್ತು ಅದು ಬರಲಿರುವ ದಿನಗಳ ಅಪಾಯಕಾರೀ ದಿಕ್ಸೂಚಿಯೂ ಆಗಿದೆ.

 ಹಿಂದೆ ರಾಜಪ್ರಭುತ್ವದಲ್ಲಿ ಎಲ್ಲವೂ ರಾಜನ ಆಸಕ್ತಿ ಮತ್ತು ಹಿತಾಸಕ್ತಿಯನ್ನ ವಲಂಬಿಸಿತ್ತು. ರಾಜಸತ್ತೆಯಲ್ಲಿ ರಾಜನ ಬುದ್ಧಿಮತ್ತೆಯ ಅಳತೆಗೋಲಿರಲಿಲ್ಲ. ಯುದ್ಧಗಳು ನಡೆದದ್ದೂ ಮಹತ್ವಾಕಾಂಕ್ಷೆ ಮತ್ತು ವೈಯಕ್ತಿಕ ಪ್ರತಿಷ್ಠೆಗೇ ಹೊರತು ಜನರ ಹಿತಕ್ಕಲ್ಲ. ರಾಜನ ಸರಿತಪ್ಪುಗಳು ಪ್ರಜೆಗಳ ಸರಿತಪ್ಪುಗಳಾಗಿರುತ್ತಿದ್ದವು. ನಮ್ಮ ಪುರಾಣಗಳು ಸಂಕೇತಿಸಿದ್ದು ಇವನ್ನೇ. ರಾಮಾಯಣದ ಕಾಲದಲ್ಲಿ ಎಷ್ಟು ಬಡಕುಟುಂಬದ ಮಹಿಳೆಯರ ಅಪಹರಣವಾಗಿದೆಯೋ ಯಾರಿಗೆ ಗೊತ್ತು? ಆದರೆ ಸೀತಾಪಹರಣವು ಅಯೋಧ್ಯೆ ಮತ್ತು ಲಂಕೆಯ ನಡುವಣ ಯುದ್ಧಕ್ಕೆ ಕಾರಣವಾಯಿತು. ಟ್ರಾಯ್‌ನ ಹೆಲೆನಳ ಐತಿಹ್ಯವೂ ಇದೇ ರೀತಿಯದ್ದು. ಮಹಾಭಾರತದ ಯುದ್ಧವೂ ಕೌರವ-ಪಾಂಡವರದ್ದೇ ವಿನಾ ಜನಸಾಮಾನ್ಯರ ಅನ್ಯಾಯವನ್ನು ಸರಿಪಡಿಸಲು ಮಾಡಿದ್ದಲ್ಲ. ಇದರಿಂದಾಗಿಯೇ ಯುದ್ಧ ಮುಗಿದು ಪಾಂಡವರು ಗದ್ದುಗೆಯನ್ನೇರಿದರೆ ‘‘...ಮುನ್ನದಾವಂಗಾವ ಪರುಠವ ಭಿನ್ನವಿಲ್ಲದೆ ಪೌರಜನವೆಸೆದಿರ್ದುದಿಭಪುರಿಯ’’ ಎಂದು ಕವಿ ವರ್ಣಿಸುವಂತಾಯಿತು. ಹೀಗೆ ಒಬ್ಬರ ಅಭಿಮತ ಎಲ್ಲರ ಅಭಿಮತವೆಂಬಂತೆ ಪ್ರತಿಫಲಿಸಬಾರದೆಂಬುದಕ್ಕಾಗಿಯೇ ಬಾಸ್ಟಿಲ್ ಸೆರೆಮನೆ ಕುಟ್ಟಿಪುಡಿಯಾಯಿತು; ವಸಾಹತುಶಾಹಿ ನಿರ್ಮೂಲವಾಯಿತು. ಅನೇಕ ಅರಸೊತ್ತಿಗೆಗಳನ್ನೊಳಗೊಂಡ ಭಾರತ ಉಪಖಂಡವು ಇಂಡಿಯಾ ಅಂದರೆ ಭಾರತವೆಂಬಂತಾಯಿತು.

ಬಹುಭಾಷೆ, ಬಹುಜಾತಿ-ಮತ, ಒಟ್ಟಿನಲ್ಲಿ ವೈವಿಧ್ಯತೆಯೇ ಸಮಾಜದ ಮೂಲಲಕ್ಷಣವಾಯಿತು. ಪ್ರದೇಶ-ಜಾತಿ-ಮತ-ಭಾಷೆ-ಲಿಂಗ- ಜನಾಂಗಗಳನ್ನು ಮೀರಿದ ಸಮಾಜವೇ ವರ್ತಮಾನ-ಭವಿಷ್ಯಗಳನ್ನು ಹೊತ್ತೊಯ್ಯುವ ವಾಹಕವಾಗಬೇಕೆಂಬ ಬಯಕೆ ಟಿಸಿಲೊಡೆಯಿತು. ಇದಕ್ಕಾಗಿಯೇ ಎಲ್ಲರೂ ಸಮಾನರು ಮತ್ತು ಎಲ್ಲವೂ ವಿಕೇಂದ್ರೀಕರಣಗೊಳ್ಳಬೇಕೆಂಬ ಮತ್ತು ವೈವಿಧ್ಯಮಯದ ವೈಶಿಷ್ಟ್ಯವೇ ಪ್ರಜಾಪ್ರಭುತ್ವದ ಆಧಾರವಾಗಬೇಕೆಂಬ ಆಶಯವನ್ನು ಹೊತ್ತ ಸಂವಿಧಾನವು ಈ ದೇಶದ ಜೀವನಾಡಿಯಾಯಿತು. ಧಾರ್ಮಿಕ ನಂಬಿಕೆಗಳಲ್ಲೂ ಅಷ್ಟೇ: ಆಸ್ತಿಕರೂ ನಾಸ್ತಿಕರೂ ಒಟ್ಟಾಗಿ ಬೆರೆತು ಬದುಕುವುದೇ ಸಹಜ ಸಮಾಜವಾಗಬೇಕೆಂಬ ಮೂಲ ಆಶಯಕ್ಕೆ ಕೊಡಲಿಪೆಟ್ಟು ಬಂದಾಗೆಲ್ಲ ಅದನ್ನು ಸಮಾಜ ಎದುರಿಸಿ ಜಯಿಸಿದ್ದು ಈ ಕಾರಣದಿಂದಲೇ. ಹಿಂದಿ ಈ ದೇಶದ ರಾಷ್ಟ್ರಭಾಷೆಯಲ್ಲ. ಎಲ್ಲ ಭಾಷೆಗಳ ಹಾಗೆ ಅದೂ ಒಂದು ಭಾಷೆ. ಇಂಗ್ಲಿಷ್ ಈ ದೇಶದ ಸಂಪರ್ಕ ಭಾಷೆಯೆಂಬುದನ್ನು ಎಂತಹ ದೇಶಭಕ್ತನೂ ನಿರಾಕರಿಸುವಂತಿಲ್ಲ. ಬ್ರಿಟಿಷ್ ವಸಾಹತುಶಾಹಿಯ ಗುಣಾತ್ಮಕ ಕೊಡುಗೆಗಳಲ್ಲಿ ಇಂಗ್ಲಿಷ್ ಭಾಷೆಯೂ ಒಂದು. ನಮ್ಮ ದೈನಂದಿನ ಅಗತ್ಯಗಳಲ್ಲಿ ಇಂಗ್ಲಿಷ್ ಮಾಡುವ ಪ್ರಭಾವವು ಅಸದೃಶ. ಅನೇಕ ಬಾರಿ ನಮ್ಮದೇ ಭಾಷೆಗಳಲ್ಲಿರುವ ಪದಗಳ ಅರ್ಥವನ್ನು ಸ್ಪಷ್ಟಗೊಳಿಸಲು ನಾವು ಇಂಗ್ಲಿಷಿನ ಮೊರೆಹೋಗುತ್ತೇವೆ.

ವೈಜ್ಞಾನಿಕ ಪದಸಮುಚ್ಚಯಗಳು ವಿದ್ಯುನ್ಮಾನ ಸಲಕರಣೆಗಳ (ಟಿವಿ, ಕಂಪ್ಯೂಟರ್, ಮೊಬೈಲ್ ಮುಂತಾದ ಸಾಧನಗಳ) ಆವಿಷ್ಕಾರವಾದ ಮೇಲಂತೂ ಇಂಗ್ಲಿಷಿನಲ್ಲಿರುವುದು ಎಂದಿಗಿಂತ ಹೆಚ್ಚಾಗಿದೆ. ಪ್ರಾಯಃ ಈ ದೇಶದಲ್ಲಿ ಇಂಗ್ಲಿಷ್ ಭಾಷೆಯಿಲ್ಲದಿರುತ್ತಿದ್ದರೆ ರವೀಂದ್ರನಾಥ ಟಾಗೋರರ ‘ಗೀತಾಂಜಲಿ’ ನೊಬೆಲ್ ಪ್ರಶಸ್ತಿಯನ್ನು ಕಾಣುತ್ತಿರಲಿಲ್ಲ ಮಾತ್ರವಲ್ಲ, ವಿಶ್ವದ ಇತರ ಭೂಭಾಗಗಳ ಮತ್ತು ಈ ದೇಶದ ಇತರ ರಾಜ್ಯಗಳ, ಜನರು ಓದುತ್ತಿರಲಿಲ್ಲ. ನಾವು ನಿರಾಕರಿಸಲಾಗದ ಇನ್ನೊಂದು ಅಂಶವೆಂದರೆ ದೇಶಿ ಎಂದು ಇಷ್ಟೊಂದು ಗುಲ್ಲೆಬ್ಬಿಸಿದರೂ ಈ ದೇಶದ ಒಂದು ಪ್ರಾಂತ/ಭಾಗ/ರಾಜ್ಯ/ಭಾಷೆಯ ಎಷ್ಟೇ ಶ್ರೇಷ್ಠ ಸಾಹಿತ್ಯ ಕೃತಿಯಾದರೂ ದೇಶದ ಇನ್ನೊಂದು ಪ್ರಾಂತ/ಭಾಗ/ರಾಜ್ಯ/ಭಾಷೆಯ ಜನರಿಗೆ ದಕ್ಕಿದ್ದು ಮತ್ತು ದಕ್ಕುತ್ತಿರುವುದು ಇಂಗ್ಲಿಷಿನ ಮೂಲಕವೇ. (ಹೀಗೆ ಅನುವಾದದಲ್ಲಿ ಮೂಲದ ಸೊಗಡು ಎಷ್ಟರ ಮಟ್ಟಿಗೆ ಲಭಿಸುತ್ತದೆಯೆಂಬುದು ಒಂದು ದೊಡ್ಡ ಚರ್ಚೆಯ ವಿಷಯವಾಗಬಹುದು.) ಆದ್ದರಿಂದ ಇಂಗ್ಲಿಷ್ ನಮ್ಮ ಬೆಳಕಿಂಡಿಯೆಂಬುದನ್ನು ಮರೆಯಲು ಸಾಧ್ಯವೇ ಇಲ್ಲ. ಅಂತಹ ಮರೆವು ಈ ದೇಶದ ಮರಣಶಾಸನವಾಗುವುದು ಅನಿವಾರ್ಯ.

ಇದಕ್ಕೆ ಪೂರಕವೆಂಬಂತೆ ಇಂದು ಪ್ರಾದೇಶಿಕ ಭಾಷೆಗಳಿಗೆ ಪರ್ಯಾಯವಾಗಿ ಬೆಳೆಯುತ್ತಿರುವುದು ಇಂಗ್ಲಿಷೇ ಹೊರತು ಇತರ ಪ್ರಾದೇಶಿಕ ಭಾಷೆಗಳಲ್ಲ. ಮಾತೃಭಾಷೆ ಮತ್ತು ದೇಶೀಭಾಷೆಗಳಾದ ಹಿಂದಿ, ಸಂಸ್ಕೃತದಂತಹ ಭಾಷೆಗಳಿಗೆ ಸರಕಾರ ಎಷ್ಟೇ ಮೆಹನತ್ತು ಮತ್ತು ಸವಲತ್ತುಗಳನ್ನು ನೀಡಿ ಪೋಷಿಸಿದರೂ (ಸಂಸ್ಕೃತ ವಿಶ್ವವಿದ್ಯಾಲಯಗಳ ಉಪಕುಲಪತಿಗಳೂ ಇಂಗ್ಲಿಷ್ ಅಥವಾ ಕನ್ನಡದಲ್ಲೇ ವ್ಯವಹರಿಸುವುದನ್ನು, ಭಾಷಣ ಮಾಡುವುದನ್ನು ಓದುಗರು ಗಮನಿಸಿರಬಹುದು!) ಗರಿಕೆಯಂತೆ ಸ್ವಲ್ಪತೇವಾಂಶವಿದ್ದರೂ ಹುಟ್ಟಿಕೊಳ್ಳುವ, ಚಿಗುರುವ ಭಾಷೆ ಇಂಗ್ಲಿಷೇ ಆಗಿದೆ. ಇದು ಎಷ್ಟು ಪ್ರಭಾವಶಾಲಿಯಾಗಿದೆಯೆಂದರೆ ಅದನ್ನು ಒಂದು ಕಳೆಯಂತೆ ಕಾಣುವ ಪರಿಸ್ಥಿತಿ ಬಂದೊದಗಿದೆ. ಅದರ ನೆರಳಿನಲ್ಲಿ, ಪರಿಸರದಲ್ಲಿ ನಮ್ಮ ಯಾವ ಇತರ ಭಾಷೆಗಳೂ ಬೆಳೆಯಲಾರದೆ ನಲುಗುತ್ತಿವೆ. ಹೊಸ ತಲೆಮಾರಿಗೆ ಇಂಗ್ಲಿಷಿನಷ್ಟು ಸುಲಲಿತವಾಗಿ ತಮ್ಮ ಮಾತೃಭಾಷೆಯೇ ಬಾರದಿರುವಷ್ಟು (ಮಾತನಾಡಿದರೂ ಓದಲಾಗದೆ, ಬರೆಯಲಾಗದೆ) ಆತಂಕ ಸೃಷ್ಟಿಯಾಗಿದೆ. ಒಂದು ವೇಳೆ ಮಾತೃಭಾಷೆಯನ್ನು ಮಾತನಾಡುವವರು ಹೇರಳವಾಗಿ ಇಂಗ್ಲಿಷ್ ಪದಗಳನ್ನು ಬಳಸುವುದನ್ನು ಎಲ್ಲೆಡೆ ಮತ್ತು ಮುಖ್ಯವಾಗಿ ನಮ್ಮ ಪತ್ರಿಕೆಗಳಲ್ಲಿ, ಆಕಾಶವಾಣಿ, ಟಿವಿಗಳಂತಹ ದೃಶ್ಯ ಮಾಧ್ಯಮಗಳಲ್ಲಿ ಕಾಣಬಹುದು. ಆದರೆ ಅದರ ನೆಪದಲ್ಲಿ ನಮ್ಮ ಭಾಷೆಗಳನ್ನು ಅಲಕ್ಷಿಸುವುದಾಗಲೀ ನಿರಾಕರಿಸುವುದಾಗಲೀ ಸರಿಯಾಗದು. ನನಗೆ ನನ್ನ ಕನ್ನಡದ ಪಂಪ, ರನ್ನ, ಕುಮಾರವ್ಯಾಸರನ್ನಾಗಲೀ, ವಚನಕಾರರನ್ನಾಗಲೀ ದಾಸಸಾಹಿತ್ಯವನ್ನಾಗಲೀ ಬೇರೆ ಭಾಷೆಯಲ್ಲಿ ಊಹಿಸಿಕೊಳ್ಳುವುದು ಸಾಧ್ಯವಾಗದು.

ಅವು ಮುಂದಿನ ತಲೆಮಾರಿಗೆ ದಾಟಬೇಕಾದರೆ ಕನ್ನಡ ಭಾಷೆ ಉಳಿಯಬೇಕು. ಅವು ಉತ್ತಮ ಸಾಹಿತ್ಯ ಕೃತಿಗಳಷ್ಟೇ ಅಲ್ಲ, ನಮ್ಮ ಪ್ರಾದೇಶಿಕ ಪರಂಪರೆಯ ಭಾಗಗಳಾಗಿವೆ ಮಾತ್ರವಲ್ಲ, ಅವುಗಳ ಅತ್ಯುನ್ನತಿಯ ಪ್ರತಿಬಿಂಬಗಳೂ ಆಗಿವೆ. ಸಂಗೀತದ ಮಾಧ್ಯಮಗಳಿಗಾದರೂ ನಾದಲಯದ ಮೂಲಕ ಭಾಷೆಯನ್ನು ಮೀರಿ ಹೋಗುವ ಅವಕಾಶವಿದೆ. ಕರ್ನಾಟಕ ಸಂಗೀತವೆಂದು ಕರೆಸಿಕೊಳ್ಳುವ ದಕ್ಷಿಣಾದಿ ಸಂಗೀತದಲ್ಲಿ ಎಲ್ಲ ದ್ರಾವಿಡ ಭಾಷೆಗಳ ಕೃತಿಗಳೂ ಎಲ್ಲ ಭಾಷಿಕ ಸಂಗೀತಗಾರರಿಂದ ಹಾಡಿಸಿಕೊಳ್ಳುತ್ತವೆ. ಈ ಅನುಕೂಲ ಇತರ ಮಾಧ್ಯಮಗಳಿಗಿಲ್ಲ. ನಾಟಕಗಳಿಗೂ ಭಾಷೆಯೇ ಮಾಧ್ಯಮವೆಂಬುದು ಅದರ ಎಲ್ಲ ತಂತ್ರಗಾರಿಕೆಯ ನಡುವೆಯೂ ಸಾಬೀತಾಗಿದೆ. ಆದ್ದರಿಂದ ನಮ್ಮ ನಮ್ಮ ಭಾಷೆಯನ್ನು ಮರೆಯುವುದು ಸಾಧುವಲ್ಲ; ಮತ್ತು ಸಾಮಾಜಿಕ ಹಿತದ ದೃಷ್ಟಿಯಿಂದ ಸಾಧ್ಯವೇ ಇಲ್ಲ. ಹಿಂದಿಯನ್ನು ಹೇರುವ ರಾಜಕೀಯ ಹೊಸತಲ್ಲ. ಸ್ವತಂತ್ರ ಭಾರತದಲ್ಲಿ ಹಿಂದೊಮ್ಮೆ ಹಿಂದಿಯನ್ನು ಹೇರುವ ಪ್ರಯತ್ನವಾದದ್ದು ಹಿಂದಿನ ತಲೆಮಾರಿನವರಿಗೆ ನೆನಪಿರಬಹುದು. ಆಗ ಎಲ್ಲ ಕಡೆ ಮುಖ್ಯವಾಗಿ ದಕ್ಷಿಣ ಭಾರತದಿಂದ ಮತ್ತು ಮುಖ್ಯವಾಗಿ ತಮಿಳುನಾಡಿನಿಂದ ಇದಕ್ಕೆ ಪ್ರತಿರೋಧ ಬಂತು. ಭಾರೀ ಪ್ರಮಾಣದಲ್ಲಿ ನಡೆದ ಈ ಚಳವಳಿ ‘ಹಿಂದಿ ವಿರೋಧಿ’ ಚಳವಳಿಯೆಂದು ಬಿಂಬಿತವಾದದ್ದು ದುರದೃಷ್ಟಕರ. ಅದು ಅಸ್ಮಿತೆಯ, ಮಾತೃಭಾಷೆಯ, ಪ್ರಾದೇಶಿಕ ಹಿರಿಮೆಯ ರಕ್ಷಣೆಯ ಮತ್ತು ಸ್ವಾತಂತ್ರ್ಯದ ಚಳವಳಿ. ಇಂತಹ ಹೋರಾಟ ಭಾಷೆಯ ಕುರಿತೇ ಇರಬೇಕಾಗಿಲ್ಲ. ಭಾರತದ ಸ್ವಾತಂತ್ರ್ಯ ಚಳವಳಿಯು ಹೀಗೆಯೇ- ರಾಜಕೀಯ ಅಸ್ಮಿತೆಯ ಪರವಾದದ್ದು.

ಕನ್ನಡಿಗರೂ ಯಾವತ್ತೂ ಶಾಂತಚಿತ್ತರೇ. (ಯಾವುದೇ ಪ್ರದೇಶ, ಭಾಷೆಯ ಜನರನ್ನು ಹೀಗೆ ಸಾಮಾನ್ಯೀಕರಿಸುವುದು ಸಮರ್ಪಕವಲ್ಲವೆಂಬುದು ಅರಿತೂ ಈ ಮಾತುಗಳನ್ನು ವ್ಯಂಗ್ಯ-ವಿಷಾದಗಳಿಂದ ಹೇಳುತ್ತಿದ್ದೇನೆ!) ಸಮಾಜಕ್ಕೆ, ಪ್ರದೇಶಕ್ಕೆ, ಅಂಟುವ ಜಾಡ್ಯವು ಸಾಮಾನ್ಯವೆಂದು ಭಾವಿಸುವ ಎಲ್ಲ ಅಕ್ಷರಸ್ಥ ಮತ್ತು ಅನಕ್ಷರಸ್ಥ ಕನ್ನಡ ಜನರೂ ಹೀಗೆಯೇ. ಬಹುತೇಕ ಕನ್ನಡಿಗರು ವೈಯಕ್ತಿಕವಾಗಿ ತೊಂದರೆಯಾಗದ ಹೊರತು ಹೋರಾಟಕ್ಕಿಳಿಯುವುದಿಲ್ಲ. ನಮ್ಮ ಅಕಾಡಮಿಗಳು, ಪ್ರಾಧಿಕಾರಗಳು, ರಂಗಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮುಂತಾದ ಸಂಸ್ಥೆಗಳ ವಕ್ತಾರರು ಮತ್ತಿತರ ಬುದ್ಧಿಜೀವಿಗಳು ಈ ದೇಶದ ಪ್ರಜಾಸತ್ತೆಗೆ, ಕಾಶ್ಮೀರದಲ್ಲಿ ನಡೆಯುತ್ತಿರುವ ದಬ್ಬಾಳಿಕೆಯ ರಾಜಕೀಯಕ್ಕೆ, ಮತೀಯ ರಾಜಕಾರಣಕ್ಕೆ ಸೊಪ್ಪುಹಾಕದಿದ್ದರೂ ತಮ್ಮ ಸ್ಥಾನಕ್ಕೆ ಚ್ಯುತಿ ಬಂದಾಗ ಜಗತ್ತೇ ಮುಳುಗಿಹೋಯಿತೆಂಬಂತೆ ಕೂಗಾಡುವುದನ್ನು ನಾವು ಕಾಣುತ್ತೇವೆ! ರಾಜಾಶ್ರಯದಲ್ಲಿ ದಕ್ಕುವ ಎಲ್ಲ ಸ್ಥಾನಗಳೂ ರಾಜಕೀಯವಾಗಿ ಕ್ರಿಯಾಶೀಲರಾಗಿರುವವರಿಗೇ ಹೊರತು ಇತರ ಹೋರಾಟಗಾರರಿಗಲ್ಲವೆಂಬುದನ್ನು ನಾವು ನೆನಪಿಡಬೇಕು. ಮೇಧಾ ಪಾಟ್ಕರ್ ಆಗಲೀ, ವರವರರಾವ್ ಆಗಲೀ ಯಾವುದೇ ಸರಕಾರಕ್ಕೂ ಪಥ್ಯರಲ್ಲ. ಈ ಹಿನ್ನೆಲೆಯಲ್ಲಿ ನಾವು ಜಾಣ ಕಿವುಡು, ಕುರುಡನ್ನು ಬುದ್ಧಿವಂತರ ಸರಕೆಂದು ಭಾವಿಸಬೇಕಾಗುತ್ತದೆ. (ವಿ.ಜಿ.ಭಟ್ಟರು ‘‘ಆ ನಾಡವರ್ಗಳ್ ಕುರಿ...’’ ಎಂಬ ಪದಗಳನ್ನು ತಮ್ಮ ಕೃತಿಯೊಂದರ ಭರತವಾಕ್ಯವಾಗಿ ಬಳಸಿದ್ದನ್ನು ನೆನಪಿಸಬಹುದು!)

 ಹಿಂದಿ ಹೇರುವ ಪ್ರಯತ್ನದ ಹಿಂದೆ ಹಿಂದಿ ಭಾಷೆಯ ಕುರಿತಾದ ಪ್ರೀತಿಯಿದೆಯೆಂದು ಅನ್ನಿಸುವುದಿಲ್ಲ. ಅದು ಕೇಂದ್ರೀಕರಣದ ಭಾಗವಾಗಿ ಮುನ್ನೆಲೆಗೆ ಬಂದಿದೆ. ಪ್ರಾಯಃ ದೇಶಭಕ್ತಿಯೇ ಮುಖ್ಯವಾಗಿದ್ದರೆ ಸಂಸ್ಕೃತವನ್ನು ಹೇರುತ್ತಿದ್ದರು. ಅದು ಆಳುವ ಯಾರಿಗೂ ಬಾರದ ಭಾಷೆಯಾಗಿರುವುದರಿಂದ ಅಷ್ಟರ ಮಟ್ಟಿಗೆ ರಾಜಿ ಮಾಡಿಕೊಂಡು ಹಿಂದಿಯ ಮುಖಾಂತರ ಅಧಿಕಾರವನ್ನು ಕೇಂದ್ರೀಕರಿಸುವುದು ಮುಖ್ಯ ಉದ್ದೇಶವೆಂದು ಮೇಲ್ನೋಟಕ್ಕೇ ಕಾಣುತ್ತದೆ. ಬಹುತೇಕ ಆಳುವ ಮಂದಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ. ದೇಶಭಕ್ತಿಗೆ ಇದೂ ಒಂದು ಕಾರಣವಿರಬಹುದು! ಅನೇಕ ಜನಪ್ರತಿನಿಧಿಗಳು ತಮ್ಮ ಮೂರ್ಖತನವನ್ನೂ ಹಿಂದಿಯಲ್ಲೇ ಅಭಿವ್ಯಕ್ತಿಸುತ್ತಾರೆ ಮತ್ತು ಹೆಚ್ಚು ಮಂದಿಯನ್ನು ಮುಟ್ಟುತ್ತಾರೆ. ಹಿಂದಿಯನ್ನು ಒಪ್ಪದವರು ದೇಶದ್ರೋಹಿಗಳೆಂದು ಒಬ್ಬ ಮುಖ್ಯಮಂತ್ರಿ ಘೋಷಿಸುತ್ತಾರೆಂದರೆ ಭಾಷೆಯ ಕುರಿತಾದ ಅಜ್ಞಾನ ಯಾವ ಹಂತಕ್ಕೂ ಇಳಿಯಬಹುದೆಂಬುದು ಸ್ಪಷ್ಟ. (ಕರ್ನಾಟಕದ ಮಂತ್ರಿ ಈಶ್ವರಪ್ಪನವರು ಇದಕ್ಕೆ ಸಮನಾಗಿ ತಮ್ಮ ಪಕ್ಷಕ್ಕೆ ಮತ ನೀಡದ ಮುಸ್ಲಿಮರು ದೇಶದ್ರೋಹಿಗಳೆಂದು ಘೋಷಿಸಿದರೆಂದು ವರದಿಯಾಗಿದೆ!)

 ಹಿಂದಿಯನ್ನು ಹೇರುವ ಮೂಲಕ ಬೆಳೆಸಲು ಸಾಧ್ಯವಿಲ್ಲ. ಇಂಗ್ಲಿಷನ್ನು ಯಾರೂ ಹೇರಿಲ್ಲ. ಅದು ತಾನಾಗಿ ವ್ಯಾಪಿಸುತ್ತಿದೆ. ಸಾಂಸ್ಥಿಕ ಯೋಜನೆಯ ಮೂಲಕ ಒಂದು ಭಾಷೆಯನ್ನು ಬೆಳೆಸಬಹುದಾದರೆ ಸಾಹಿತ್ಯ, ಸಂಸ್ಕೃತಿಯನ್ನೂ ಹೀಗೆ ಬೆಳೆಸಬಹುದು. ಆದ್ದರಿಂದ ಹಿಂದಿ ಹೇರಿಕೆಯು ಫಲಪ್ರದವಾಗುತ್ತದೆಂದು ನಂಬಬೇಕಾಗಿಲ್ಲ. ಉದಾಹರಣೆಗೆ ಬ್ಯಾಂಕುಗಳಲ್ಲಿ ಹಿಂದಿ ಮಾಧ್ಯಮದ ಸಂಕೇತಗಳಿವೆ. ಆದರೆ ಎಷ್ಟು ಜನರು ಅದನ್ನು ಅನುಸರಿಸುತ್ತಾರೆ ಮತ್ತು ಅಳವಡಿಸಿಕೊಳ್ಳುತ್ತಾರೆಂಬ ಅಂಕಿ-ಅಂಶಗಳನ್ನು ಪರಿಶೀಲಿಸದರೆ ಅದೊಂದು ನಗಣ್ಯವಾದ ಅಂಶವೆಂಬುದು ಗೊತ್ತಾಗುತ್ತದೆ. ಆದರೂ ಪ್ರತಿರೋಧ ಬೇಕು. ಅದು ನಮ್ಮ ಅಭಿವ್ಯಕ್ತಿಯ ಮುಖ. ಈಚೆಗೆ ಬ್ಯಾಂಕು ಪರೀಕ್ಷೆಗಳಿಗೆ ಹಿಂದಿಯನ್ನು ಹೇರಿ, ಕನ್ನಡಕ್ಕೆ ನಿಷೇಧ ಹಾಕಿದಾಗ ಕನ್ನಡಿಗರು (ಉದ್ಯೋಗದ, ಅನ್ನದ ಪ್ರಶ್ನೆ!) ಪ್ರತಿಭಟಿಸಿದರು. ಕನ್ನಡಕ್ಕೆ ಮಾನ್ಯತೆ ದಕ್ಕಿತು. ಆದರೆ ಬೆಂಗಳೂರಿನಂತಹ ಮಹಾ ನಗರದಲ್ಲಿ ಕನ್ನಡ ಗೊತ್ತಿಲ್ಲದೆಯೂ ಬದುಕಬಹುದೆಂಬುದನ್ನು ಸಾಬೀತುಪಡಿಸಿದ ಕನ್ನಡಿಗರು ತಮ್ಮ ಸ್ವಾರ್ಥಸಾಧನೆಗಲ್ಲದೆ ಭಾಷೆಯ, ಸಂಸ್ಕೃತಿಯ ಒಳಿತಿಗೆ ಹಿಂದಿಯ ಕುರಿತು ಪ್ರತಿಭಟನೆಯ ಹಾದಿ ಹಿಡಿಯುತ್ತಾರೆಂದು ನಂಬುವುದು ಕಷ್ಟ. (ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯದ ವೀರಶೂರರೆಲ್ಲ ಬೆಂಗಳೂರಿನಲ್ಲೇ ಬೇರೂರಿದ್ದಾರೆಂಬುದು ಮತ್ತು ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆಂಬುದು ಹಾಸ್ಯಾಸ್ಪದ ವಿರೋಧಾಭಾಸವಾಗಿದೆ!)

ಯಾವುದೇ ಭಾಷೆಯನ್ನು ರಾಜಕೀಯ ಕಾರಣಗಳಿಗಾಗಿ, ಸರ್ವಾಧಿಕಾರದ, ಕೇಂದ್ರೀಕರಣದ ಕಾರಣಗಳಿಗಾಗಿ ಹೇರುವ ಎಲ್ಲ ಪ್ರಯತ್ನಗಳನ್ನು ನಿಷ್ಫಲಗೊಳಿಸುವುದು ಪ್ರತಿಯೊಬ್ಬನ ಕರ್ತವ್ಯ. ಮಾತೃಭಾಷೆ ಗುಲಾಮಗಿರಿಗೆ ಸಿಲುಕಬಾರದು. ಭಾರತದಂತಹ ಬಹುವೈವಿಧ್ಯದ ದೇಶದಲ್ಲಿ ಯಾವುದೇ ಒಂದು ಜಾತಿ, ಮತ, ಜನಾಂಗ, ಭಾಷೆ ಸರ್ವಾಧಿಕಾರಿಯಾಗಬಾರದು. ಎಲ್ಲರೂ ಹಳ್ಳಿಯಲ್ಲಿ ಹಿಂದೆ ನಡೆಯುತ್ತಿದ್ದ ಜಾತ್ರೆಗಳಲ್ಲಿ ನಡೆದಾಡುವವರಂತೆ ಸ್ವತಂತ್ರರಾಗಿರಬೇಕು; ವ್ಯವಹರಿಸಬೇಕು. ಆಗ ಎಲ್ಲ ಭಾಷೆಗಳೂ ಬೆರೆಯುತ್ತವೆ; ವೈವಿಧ್ಯದಲ್ಲೂ ಏಕತೆಯನ್ನು ಸಾಧಿಸುತ್ತವೆ. ಮುಳ್ಳುಗಳ ನಡುವೆ ಅರಳುವ, ಪರಸ್ಪರ ಮುಳ್ಳಾಗದ ಇಂತಹ ಗುಲಾಬಿ ತೋಟವನ್ನೇ ಬೆಳೆಸಬೇಕಲ್ಲದೆ ಮುಳ್ಳಿನ ಗಿಡಗಳನ್ನೇ ಬೆಳೆಸಿ ತೋಟ ಮಾಡುವುದು ಮೂರ್ಖತನವಾದೀತು. ಯಾವುದೇ ಭಾಷೆಯು ಉಪ್ಪನ್ನು ಹೊತ್ತು ನೀರಿನಲ್ಲಿ ನಡೆದಂತಿರಬೇಕೇ ಹೊರತು ಮರಳನ್ನು ಹೊತ್ತು ನೀರಿನಲ್ಲಿ ನಡೆದಂತಿರಬಾರದು. ಉಪ್ಪು ನೀರಿನಲ್ಲಿ ಕರಗಿ ಹಗುರಾಗುತ್ತದೆ; ಮರಳು ನೀರನ್ನು ಸೇರಿಸಿಕೊಂಡು ಭಾರವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)