varthabharthi


ನಿಮ್ಮ ಅಂಕಣ

ಗ್ರಾಮ ಲೆಕ್ಕಿಗ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆಯಿಂದ ನೇಮಕವಾಗಲಿ

ವಾರ್ತಾ ಭಾರತಿ : 19 Sep, 2019
-ಪುನೀತ್ ಎನ್., ಅಶೋಕಪುರಂ, ಮೈಸೂರು

ಮಾನ್ಯರೇ,

ನಮ್ಮ ರಾಜ್ಯ ಸರಕಾರವು ಗ್ರಾಮ ಲೆಕ್ಕಿಗ (ಗ್ರೂಪ್-ಸಿ) ಹುದ್ದೆಯ ನೇಮಕಾತಿಯ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಆಯ್ಕೆಯ ಪ್ರಾಧಿಕಾರ ಮತ್ತು ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿರುತ್ತದೆ. ಈ ನೇಮಕಾತಿಯನ್ನು ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಗೆ ಮುಕ್ತ ಅಧಿಸೂಚನೆ ಅಡಿಯಲ್ಲಿ ಪ್ರಕಟಿಸುವುದು ಸರಿಯಷ್ಟೆ. ಪ್ರಾಧಿಕಾರವು ಈ ಹುದ್ದೆಯ ನೇಮಕಾತಿಯನ್ನು ಅರ್ಹ ಅಭ್ಯಥಿಗಳ ‘‘ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದಲ್ಲಿ ಮೀಸಲಾತಿಗನುಗುಣವಾಗಿ ಪರಿಶೀಲನಾ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಹಾಜರಾಗಬೇಕಾಗುತ್ತದೆ’’ ಎಂದು ತಿಳಿಸಿರುತ್ತದೆ. ನಾವಿಂದು ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಪ್ರತಿಯೊಂದು ಕ್ಷೇತ್ರದ ಉದ್ಯೋಗದಲ್ಲೂ ಅಭ್ಯರ್ಥಿಯ ಶೈಕ್ಷಣಿಕ ಗುಣಮಟ್ಟ, ಮಾನಸಿಕ ಸಾಮರ್ಥ್ಯ, ಪ್ರಚಲಿತ ವಿದ್ಯಮಾನ, ಸಂದರ್ಶನ ಹಾಗೂ ಇನ್ನಿತರ ಅರ್ಹತೆಗಳ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ನೇಮಕ ಮಾಡುತ್ತದೆ.

ಆದರೆ, ಇಲ್ಲಿ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ಕೇವಲ ಗಳಿಸಿದ ಅಂಕಗಳ ಆಧಾರದ ಮೇಲೆ ಗ್ರಾಮ ಲೆಕ್ಕಿಗ (ಗ್ರೂಪ್-ಸಿ) ಹುದ್ದೆಯನ್ನು ನೇಮಕ ಮಾಡಿಕೊಳ್ಳುತ್ತಾರೆ. ನಾವು ಕಾಣುವಂತೆ ಶಾಲಾ-ಕಾಲೇಜು ಶೈಕ್ಷಣಿಕ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿ ಹಿಂದುಳಿದ ಮಕ್ಕಳು ಕೂಡ ದೇಶದ ಪ್ರಚಲಿತ ವಿದ್ಯಮಾನ, ಮಾನಸಿಕ ಸಾಮರ್ಥ್ಯ, ದೃಢತೆ ಹಾಗೂ ಇನ್ನೂ ಹಲವು ವಿಚಾರಗಳಲ್ಲಿ ಹೆಚ್ಚು ಬುದ್ಧಿವಂತರಿರುತ್ತಾರೆ. ಉದಾಹರಣೆಗೆ ಎಷ್ಟೋ ವಿದ್ಯಾರ್ಥಿಗಳು ತಾವು ಶಾಲೆ-ಕಾಲೇಜುಗಳಲ್ಲಿ ಕಡಿಮೆ ಅಂಕ ಗಳಿಸಿದವರು ಐಎಎಸ್ ಅಧಿಕಾರಿಗಳಂತಹ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಸಾಕ್ಷ್ಯ ನಮ್ಮ ಮುಂದಿವೆೆ. ಹಾಗಾಗಿ, ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ನಿಗದಿತ ವಿದ್ಯಾರ್ಹತೆ ಅಂಕಗಳಿಂದ ಗ್ರಾಮ ಲೆಕ್ಕಿಗ (ಗ್ರೂಪ್-ಸಿ) ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕ ಮಾಡುವುದರಿಂದ ವಿದ್ಯಾರ್ಹತೆ ಜೊತೆಗೆ ಇನ್ನೂ ಹಲವು ಪರೀಕ್ಷಾ ಪೂರಕ ವಿಷಯಗಳಲ್ಲಿ ನಿಪುಣತೆ ಇರುವ ಬೇರೆ ಬುದ್ಧಿವಂತಿಕೆಯ ಅಭ್ಯರ್ಥಿಗಳನ್ನು ಅವಗಣಿಸಿದಂತಾಗುತ್ತದೆ. ಆದ್ದರಿಂದ ಕೂಡಲೇ ಸರಕಾರ ಗ್ರಾಮ ಲೆಕ್ಕಿಗ (ಗ್ರೂಪ್-ಸಿ) ವೃಂದದ ಹುದ್ದೆಗೆ ನಿಗದಿತ ವಿದ್ಯಾರ್ಹತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಯ್ಕೆ ಮಾಡಿಕೊಳ್ಳಬೇಕಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)