varthabharthi


ಕರಾವಳಿ

ಮೋದಿಯಿಂದ ಸಂವಿಧಾನ ನಿಷ್ಕ್ರಿಯ, ಪ್ರಜಾಪ್ರಭುತ್ವದ ಕೊಲೆ: ಮಹೇಂದ್ರ ಕುಮಾರ್

ವಾರ್ತಾ ಭಾರತಿ : 22 Sep, 2019

ಮಂಗಳೂರು, ಸೆ.22: ಆರೆಸ್ಸೆಸ್ಸಿನ ಅಣತಿಯಂತೆ ನಡೆಯುವ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದ ಸಂವಿಧಾನ ನಿಷ್ಕ್ರಿಯಗೊಂಡಿವೆ, ಪ್ರಜಾಪ್ರಭುತ್ವದ ಕೊಲೆಯಾಗುತ್ತಿವೆ. ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಸಮಾಜವನ್ನು ಅತ್ಯಂತ ವ್ಯವಸ್ಥಿತವಾಗಿ ಅವರು ಒಡೆದಾಳುತ್ತಿದ್ದಾರೆ. ಆದಾಗ್ಯೂ ಯುವ ಜನತೆ ಅರ್ಥ ಮಾಡಿಕೊಂಡಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಸಾಮಾಜಿಕ ಚಿಂತಕ, ಹೋರಾಟಗಾರ ಮಹೇಂದ್ರ ಕುಮಾರ್ ಹೇಳಿದರು.

‘ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ, ಜೀವನ ಭದ್ರತೆಯ ಉದ್ಯೋಗ, ಘನತೆಯ ಬದುಕಿಗಾಗಿ’ ಎಂಬ ಘೋಷವಾಕ್ಯದೊಂದಿಗೆ ರವಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಡಿವೈಎಫ್‌ಐ 12ನೇ ನಗರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ಅವಧಿಯಾಂತ್ಯಕ್ಕೆ ಮೋದಿ-ಆರೆಸ್ಸೆಸ್ಸಿನವರು ಪುಲ್ವಾಮಾ ದಾಳಿಯನ್ನು ಹರಿಯಬಿಟ್ಟರು. ಚುನಾವಣೆಯಲ್ಲಿ ಹಿನ್ನಡೆಯಾಗುವುದನ್ನು ತಪ್ಪಿಸಲು ಅವರು ನಡೆಸಿದ ವ್ಯವಸ್ಥಿತ ಷಡ್ಯಂತ್ರವದು. ಪಾಕಿಸ್ತಾನದ ನೆಲದಲ್ಲಿ ಹೋರಾಡಿದ ಅಭಿನಂದನ್‌ರ ಕಾರ್ಯವೈಖರಿಯನ್ನು ಪ್ರಮುಖವಾಗಿ ಬಿಂಬಿಸುವ ಆಡಳಿತ ವ್ಯವಸ್ಥೆಯು ಗಡಿಭಾಗದಲ್ಲಿ ವೀರಮರಣವನ್ನಪ್ಪಿದ ಇಬ್ಬರು ಪೈಲಟ್‌ಗಳ ಬಗ್ಗೆ ಸೊಲ್ಲೆತ್ತುತ್ತಿಲ್ಲ ಎಂದ ಮಹೇಂದ್ರ ಕುಮಾರ್, ಇತ್ತೀಚಿನ ಆರ್ಥಿಕ ಕುಸಿತವು ಉದ್ದೇಶಪೂರ್ವಕವಾಗಿದೆ. ಜನರು ಏನನ್ನೂ ಪ್ರಶ್ನಿಸಬಾರದು. ಸ್ವತಂತ್ರಪೂರ್ವದ ಭಾರತದ ಬಡತನ, ಶೋಷಣೆಯತ್ತ ಜನರನ್ನು ತಳ್ಳಲು ಪ್ರಯತ್ನ ಮಾಡಲಾಗುತ್ತದೆ ಎಂದರು.

ಇತಿಹಾಸವನ್ನು ಕೆದಕಿದಷ್ಟು ಸಮಸ್ಯೆಗಳು ಎದುರಾಗುತ್ತಲೇ ಇದೆ. ಹಿಂದೆಯೂ ಭಾರತೀಯರು ಗುಲಾಮಗಿರಿಯ ಮನಸ್ಥಿತಿಗೆ ಒಪ್ಪಿಕೊಂಡಿದ್ದರೆ, ಸ್ವಾತಂತ್ರ ಲಭಿಸಿ 73 ವರ್ಷ ಕಳೆದರೂ ಕೂಡ ಭಾರತೀಯರು ಗುಲಾಮಗಿರಿಯಿಂದ ಹೊರಬರುವ ಮನಸ್ಥಿತಿಯಲ್ಲಿಲ್ಲ. ದೇಶದ ಸಮಸ್ಯೆಗೆ ನಾವೂ ಕೂಡ ಕಾರಣರಾಗಿದ್ದೇವೆ. ನಾವು ಯಾವುದನ್ನೂ ಪ್ರಶ್ನಿಸದೆ ಎಲ್ಲವನ್ನೂ ಒಪ್ಪಿಕೊಳ್ಳುವ ಮನಸ್ಥಿತಿಗೆ ಒಗ್ಗಿ ಹೋಗುತ್ತಿದ್ದೇವೆ ಎಂದರು.

ಗಾಂಧೀಜಿ, ಭಗತ್‌ಸಿಂಗ್, ಶಿವಾಜಿಯನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವ ಬಿಜೆಪಿ, ಆರೆಸ್ಸೆಸ್‌ನನ್ನು ಎದುರಿಸುವಲ್ಲಿ ಕಾಂಗ್ರೆಸ್ ದೇಶಾದ್ಯಂತ ವಿಫಲವಾಗಿದೆ. ಕಮ್ಯುನಿಸ್ಟರು ಕಷ್ಟಕರ ಪರಿಸ್ಥಿತಿಯಲ್ಲೂ ಬಿಜೆಪಿ, ಆರೆಸ್ಸೆಸ್ಸಿಗರನ್ನು ಮಟ್ಟಹಾಕಲು ಪ್ರಯತ್ನಿಸುತ್ತಿದ್ದಾರೆ. ವೈಭವದ ಹೆಸರಿನಲ್ಲಿ ದೇಶವನ್ನು ಅಧಃಪತನಕ್ಕೆ ತಳ್ಳುವವರ ವಿರುದ್ಧ ಸ್ವಾತಂತ್ರದ ಚಳುವಳಿಯ ಮಾದರಿಯಲ್ಲಿ ಹೋರಾಟ ಮಾಡಬೇಕಿದೆ ಎಂದು ಮಹೇಂದ್ರ ಕುಮಾರ್ ನುಡಿದರು.

ಡಿವೈಎಫ್‌ಐ ನಗರ ಅಧ್ಯಕ್ಷ ನವೀನ್ ಬೊಲ್ಪುಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ನಾಯಕರಾದ ಜೀವನ್‌ರಾಜ್ ಕುತ್ತಾರ್, ಮನೋಜ್ ವಾಮಂಜೂರು, ಎಬಿ ನೌಶಾದ್,ಆಶಾ ಬೋಳೂರ್, ಚರಣ್‌ಶೆಟ್ಟಿ ಪಂಜಿಮೊಗರು ಮತ್ತಿತರರು ಪಾಲ್ಗೊಂಡಿದ್ದರು.

ಮಾಧುರಿ ಬೋಳಾರ್ ಸ್ವಾಗತಿಸಿದರು.ಶ್ರೀನಾಥ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

'ಗನ್ ಹಿಡಿದು ನಡೆದಾಡುವ ‘ಕಾಲ’ ಬರಬಹುದು'
ದ.ಕ.ಜಿಲ್ಲೆಯ ಕಲುಷಿತ ವಾತಾವರಣ ಇನ್ನೂ ಸುಧಾರಿಸಿಲ್ಲ. ಹಿಂದೂ-ಮುಸ್ಲಿಮರು ಪರಸ್ಪರ ಮುಖ ನೋಡದಂತಹ ಪರಿಸ್ಥಿತಿ ಮುಂದುವರಿದಿರುವುದು ವಿಷಾದನೀಯ. ಪೊಲೀಸರು, ಕಾನೂನು ಯಾವುದರ ಅಗತ್ಯವಿಲ್ಲ ಎಂಬಂತಹ ಸ್ಥಿತಿ ಇಲ್ಲಿದೆ. ಇದು ಆರೆಸ್ಸೆಸ್‌ನ ಸಂಚಿನ ಭಾಗವಾಗಿದ್ದು, ಹೀಗೆ ಮುಂದುವರಿದರೆ ಮುಂದೊಂದು ದಿನ ಗನ್ ಹಿಡಿದು ನಡೆದಾಡುವ ‘ಕಾಲ’ ಮಂಗಳೂರಿನಲ್ಲೂ ಬರಬಹುದು. ಹೀಗಾಗದಂತೆ ಯುವ ಜನತೆ ಜಾಗೃತರಾಗಬೇಕಾಗಿದೆ ಎಂದು ಮಹೇಂದ್ರ ಕುಮಾರ್ ಹೇಳಿದರು.

ದೇಶಭಕ್ತಿಯ ಹೆಸರಿನಲ್ಲಿ ಆರೆಸ್ಸೆಸ್‌ನವರು ಮುಸಲ್ಮಾನರನ್ನು ದ್ವೇಷಿಸುವಂತೆ ಮಾಡುತ್ತಾರೆ. ಹಿಂದೂ ಮುಸ್ಲಿಮರ ಮಧ್ಯೆ ಗೋಡೆ ಕಟ್ಟುತ್ತಾರೆ. ದೇಶ ಕಟ್ಟಲು ಹೊರಟವರು ಯಾಕೆ ಈ ರೀತಿಯ ಗೋಡೆ ಕಟ್ಟಬೇಕು. ಇದು ಅವರ ದೇಶಭಕ್ತೀನಾ?. ಸಂಸಾರ ನಡೆಸಲು ಗೊತ್ತಿಲ್ಲದ, ಜೋಳಿಗೆ ಹಾಕಿಕೊಂಡ ಮನುಷ್ಯನಿಗೆ ದೇಶವನ್ನು ಆಳಲು ಕೊಟ್ಟರೆ ಆರ್ಥಿಕ ಕುಸಿತವಲ್ಲದೆ ಮತ್ತಿನ್ನೇನು ಆದೀತು? ಎಂದು ಪ್ರಶ್ನಿಸಿದ ಮಹೇಂದ್ರ ಕುಮಾರ್, ಹಿಂದೂ ಧರ್ಮದಲ್ಲಿ ದಲಿತರನ್ನು ಹೇಗೆ ತುಳಿಯಲಾಗುತ್ತಿದೆಯೋ ಅದೇ ರೀತಿ ಆರೆಸ್ಸೆಸ್‌ನಲ್ಲಿ ಬಜರಂಗ ದಳವನ್ನು ತುಳಿಯಲಾಗುತ್ತದೆ. ಇದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹಲವು ವರ್ಷಗಳಿಂದ ಡಿವೈಎಫ್‌ಐ ಅನೇಕ ಜನಪರ ಹೋರಾಟಗಳನ್ನು ನಡೆಸಿದೆ. ಸಾರಿಗೆ ಪ್ರಯಾಣ ದರ ಏರಿಕೆ, ಹೊಟೇಲ್ ತಿಂಡಿತಿನಿಸುಗಳ ದರ ಏರಿಕೆ, ಪೊಲೀಸ್ ದೌರ್ಜನ್ಯ, ಮತೀಯ ಸಂಘಟನೆಗಳ ವಿರುದ್ಧ ಹೋರಾಟವನ್ನೇ ಮಾಡುತ್ತಾ ಬಂದಿವೆ. ಇದರಿಂದ ಹಲವು ನಾಯಕರ ಮೇಲೆ ಅನೇಕ ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಆದರೂ ಯಾರೂ ಎದೆಗುಂದಿಲ್ಲ. ಪ್ರಜಾಸತ್ತಾತ್ಮಕ ಮಾದರಿಯಲ್ಲೇ ಹೋರಾಟವನ್ನು ಮುಂದುವರಿಸಲಿದೆ. ಮತೀಯವಾದಿಗಳ ಪ್ರಯೋಗ ಶಾಲೆಯಂತಿರುವ ದ.ಕ.ಜಿಲ್ಲೆಯಲ್ಲಿ ಅಮಾಯಕರು ಬಲಿಪಶುಗಳಾಗಲು ಬಿಡುವುದಿಲ್ಲ. ಧರ್ಮದ ಅಮಲು ಇಳಿಸುವ ಕೆಲಸವನ್ನು ಮಾಡುತ್ತೇವೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)