varthabharthi


ರಾಷ್ಟ್ರೀಯ

ಮುಕ್ತಕಂಠದಿಂದ ಶ್ಲಾಘಿಸಿದ ನ್ಯಾಯಾಲಯ

ತಾಯಿಯ ಆದೇಶಕ್ಕೆ ಜಗ್ಗದೆ ಅತ್ಯಾಚಾರಿ 'ತಂದೆ'ಗೆ 10 ವರ್ಷ ಜೈಲು ಶಿಕ್ಷೆ ಕೊಡಿಸಿದ ಬಾಲಕಿ!

ವಾರ್ತಾ ಭಾರತಿ : 22 Sep, 2019

ಮುಂಬೈ, ಸೆ.22: ಲಿವ್ ಇನ್ ಸಂಬಂಧದಲ್ಲಿರುವ ‘ತಂದೆ’ ವಿರುದ್ಧ ಸಾಕ್ಷಿ ನುಡಿಯದಂತೆ ತಾಯಿ ನೀಡಿದ್ದ ಆದೇಶವನ್ನು ಧಿಕ್ಕರಿಸಿ ಸಾಕ್ಷಿ ಹೇಳಿದ ಒಂಬತ್ತು ವರ್ಷದ ಬಾಲಕಿಯ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅತ್ಯಾಚಾರಿ 'ತಂದೆ'ಗೆ ಪೋಕ್ಸೋ ವಿಶೇಷ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅತ್ಯಾಚಾರ ಘಟನೆ ವರದಿಯಾದ ಬಳಿಕ ಬಾಲಕಿಯನ್ನು ಪಾಲನಾಗೃಹಕ್ಕೆ ಕಳುಹಿಸಲಾಗಿತ್ತು.

"ಮಕ್ಕಳ ಪಾಲನಾಗೃಹದಲ್ಲಿ ಪ್ರತಿ ತಿಂಗಳು ಬಾಲಕಿಯನ್ನು ನೋಡಲು ಬರುತ್ತಿದ್ದ ತಾಯಿ, ಆರೋಪಿಯ ವಿರುದ್ಧ ಸಾಕ್ಷ್ಯ ನುಡಿಯದಂತೆ ಸೂಚಿಸುತ್ತಿದ್ದರು. ಪ್ರಕರಣ ಮುಗಿದ ಬಳಿಕ ಎಲ್ಲರೂ ಜತೆಯಾಗಿ ಹಳ್ಳಿಗೆ ಹೋಗಿ ವಾಸಿಸೋಣ ಎಂದು ಮನವೊಲಿಸಿದ್ದಳು. ಆದರೆ ತನ್ನ ನಿಲುವಿಗೆ ಅಂಟಿಕೊಂಡ ಬಾಲಕಿ, ಅಪೂರ್ವ ಧೈರ್ಯ ಪ್ರದರ್ಶಿಸಿ ಆರೋಪಿಯ ವಿರುದ್ಧ ಸಾಕ್ಷ್ಯ ನುಡಿದಿದ್ದಾಳೆ" ಎಂದು ವಿಶೇಷ ನ್ಯಾಯಾಧೀಶರಾದ ಭಾರ್ತಿ ಕಾಳೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ವಿಶೇಷ ಸಾರ್ವಜನಿಕ ಅಭಿಯೋಜಕ ರಾಕೇಶ್ ತಿವಾರಿ, ಮಗು, ವೈದ್ಯರು, ಪೊಲೀಸರು ಹಾಗೂ ತಾಯಿ ಸೇರಿದಂತೆ ಆರು ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಗುರಿಪಡಿಸಿದ್ದರು. ತಾಯಿ ಲೈಂಗಿಕ ಕಾರ್ಯಕರ್ತೆಯಾಗಿದ್ದು, ಈ ಪ್ರಕರಣದಲ್ಲಿ ದೂರು ನೀಡಿದ್ದಳು. ಆದರೆ ನ್ಯಾಯಾಲಯದಲ್ಲಿ ವಿರುದ್ಧ ಹೇಳಿಕೆ ನೀಡಿ, ಮದ್ಯದ ಅಮಲಿನಲ್ಲಿ ಪೊಲೀಸರ ಬಳಿ ದೂರು ನೀಡಿದ್ದಾಗಿ ಹೇಳಿಕೊಂಡು ಅಭಿಯೋಜನೆಯ ವಾದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಳು.

2017ರ ಜೂನ್ 14ರಂದು ತಾಯಿ ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು ರಾತ್ರಿ 10ಕ್ಕೆ ಕೆಲಸಕ್ಕೆ ತೆರಳಿದ್ದಳು. ಮಧ್ಯಾಹ್ನ ಮರಳಿದಾಗ ಆರೋಪಿ ಮಗುವನ್ನು ಮನೆಗೆ ಕರೆದೊಯ್ದದ್ದಾಗಿ ನೆರೆಯವರು ಹೇಳಿದ್ದರು. ಆರೋಪಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ ಎಂದು ಆಪಾದಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)