varthabharthi


ಕರಾವಳಿ

ಮಂಗಳೂರು: ಕೃಷ್ಣಮೃಗ ಚರ್ಮ ಮಾರಾಟ ಜಾಲ ಪತ್ತೆ; ನಾಲ್ವರ ಬಂಧನ

ವಾರ್ತಾ ಭಾರತಿ : 23 Sep, 2019

ಮಂಗಳೂರು, ಸೆ.23: ಮಂಗಳೂರು ವಿಶೇಷ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಕೃಷ್ಣಮೃಗ ಚರ್ಮ ಮಾರಾಟ ಜಾಲವನ್ನು ಸೋಮವಾರ ಬೆಳಗ್ಗೆ ಪತ್ತೆ ಹಚ್ಚಿದ್ದಾರೆ. ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಾಟ್ನಾಳ್ ನಿವಾಸಿಗಳಾದ ರವಿ ಹನುಮಂತಪ್ಪ (32), ಮಲ್ಲಪ್ಪ (32), ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ನಿವಾಸಿಗಳಾದ ಪರಶುರಾಮ ಲಮಾಣಿ (32), ಟಿಪ್ಪು ಸುಲ್ತಾನ್ (33) ಬಂಧಿತ ಆರೋಪಿಗಳು.

ಘಟನೆ ವಿವರ: ಸೋಮವಾರ ಬೆಳಗ್ಗೆ 8:30ಕ್ಕೆ ಅರಣ್ಯ ಸಂಚಾರ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಲಾಯಿತು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪ ನಾಲ್ವರು ಅನುಮಾನಾಸ್ಪದವಾಗಿ ನಿಂತುಕೊಂಡಿದ್ದರು. ಪೊಲೀಸರು ಜೀಪಿನಿಂದ ಇಳಿಯುತ್ತಿರುವುದನ್ನು ನೋಡಿದ ಆರೋಪಿಗಳು ಓಡಿ ಹೋಗಲು ಯತ್ನಿಸಿದರು. ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃಷ್ಣಮೃಗದ ಚರ್ಮ ಹಾಗೂ ಕೊಂಬುಗಳನ್ನು ಮಾರಾಟಕ್ಕೆ ತಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಎರಡು ಕೃಷ್ಣಮೃಗಗಳ ಚರ್ಮಗಳು, ಒಂದು ಜೊತೆ ಕೊಂಬುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿಗಳು ವನ್ಯಜೀವಿ ಕೃಷ್ಣಮೃಗಗಳನ್ನು ಅಕ್ರಮವಾಗಿ ಬೇಟಿಯಾಗಿ ಅವುಗಳ ಚರ್ಮ, ಕೊಂಬುಗಳನ್ನು ಮಾರಾಟಕ್ಕೆ ಯತ್ನಿಸಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ಮಂಗಳೂರು ವಲಯ ಅರಣ್ಯ ಅಧಿಕಾರಿಗೆ ಹಸ್ತಾಂತರಿಸಲಾಗಿದೆ.

ಸಿಐಡಿ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ರವೀಂದ್ರನಾಥನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು, ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ಪುರುಷೋತ್ತಮ ಎ., ಸಿಬ್ಬಂದಿ ಜಗನ್ನಾಥ ಶೆಟ್ಟಿ, ಪ್ರವೀಣ, ಉದಯ ನಾಯ್ಕಿ, ಎನ್.ಮಹೇಶ, ದೇವರಾಜ್, ದೇನಿಕಾ, ಸುಂದರ್ ಶೆಟ್ಟಿ ಪಾಲ್ಗೊಂಡಿದ್ದರು. ಪ್ರಕರಣವನ್ನು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ಮಾರ್ಗದರ್ಶನದಲ್ಲಿ ಮಂಗಳೂರು ವಲಯ ಅಧಿಕಾರಿ ಶ್ರೀಧರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)