varthabharthi


ಬುಡಬುಡಿಕೆ

ಕಾಶ್ಮೀರದಲ್ಲಿ ಸ್ವರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ....!

ವಾರ್ತಾ ಭಾರತಿ : 29 Sep, 2019
*ಚೇಳಯ್ಯ chelayya@gmail.com

‘‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’’ ಎಂದು ಪ್ರಧಾನಿ ಮೋದಿಯವರು ಅಮೆರಿಕದಲ್ಲಿ ಘೋಷಿಸಿದ ಬಳಿಕ ಭಾರತದಲ್ಲಿ ಎಲ್ಲವೂ ಚೆನ್ನಾಗಿರಲೇ ಬೇಕು ಎನ್ನುವುದನ್ನು ಪತ್ರಕರ್ತ ಎಂಜಲು ಕಾಸಿ ದೃಢವಾಗಿ ನಂಬಿದ. ಸುಖ ಸಂತೋಷದಿಂದ ಸಂಭ್ರಮಿಸುತ್ತಿರುವ ಭಾರತವನ್ನು ವೀಕ್ಷಿಸಲು ಜೋಳಿಗೆಯ ಜೊತೆಗೆ ಹೊರಟೇ ಬಿಟ್ಟ.

ಒಂದೆಡೆ ಒಂದಿಷ್ಟು ಜನರು ಗುಂಪು ಸೇರಿದ್ದರು. ಇಣುಕಿ ನೋಡಿದರೆ ಕೇಸರಿಧಾರಿಗಳು ಅಮಾಯಕನೊಬ್ಬನನ್ನು ಹಿಡಿದು ಥಳಿಸುತ್ತಿದ್ದರು. ಆದರೂ ಅಮಾಯಕ ಸಂಭ್ರಮಿಸುತ್ತಿದ್ದ ‘‘ಆಹಾ...ಇನ್ನಷ್ಟು ಥಳಿಸಿ....ಏಟು ತಿನ್ನುವುದರಲ್ಲಿ ಇಷ್ಟೊಂದು ಖುಷಿಯಿದೆ ಎಂದು ಗೊತ್ತೇ ಇರಲಿಲ್ಲ....’’ ಎಂದು ಅವನು ಥಳಿಸುವವರಿಗೆ ಕೃತಜ್ಞತೆ ಹೇಳುತ್ತಿದ್ದ. ಥಳಿಸಿ ಸುಸ್ತಾದವರು ಕೂಡ ಸಂಭ್ರಮದಲ್ಲಿದ್ದರು ‘‘ಆಹಾ...ಒಬ್ಬನಿಗೆ ಥಳಿಸಿದರೆ ಇಷ್ಟೊಂದು ಖುಷಿ ಇದೆ ಎಂದು ಗೊತ್ತೇ ಇರಲಿಲ್ಲ....’’ ಎಂದು ಅವರು ಬೆವರೊರೆಸತೊಡಗಿದರು. ತುಸು ಹೊತ್ತಿನಲ್ಲೇ ಅಮಾಯಕ ಸಂತೋಷದಿಂದ, ನಗು ನಗುತ್ತಾ ಪ್ರಾಣ ಬಿಟ್ಟ. ಎಂಜಲು ಕಾಸಿ ನೋಟ್ ಬುಕ್‌ನಲ್ಲಿ ತಲೆಬರಹ ಬರೆದೇ ಬಿಟ್ಟ ‘‘ಗುಂಪು ಥಳಿತದಿಂದ ಅತಿ ಸಂತೋಷಗೊಂಡ ವೃದ್ಧನಿಗೆ ಹೃದಯಾಘಾತ’’.

 ಕಾಸಿ ತನ್ನ ಪ್ರಯಾಣ ಮುಂದುವರಿಸಿದ. ದಿನಸಿ ಅಂಗಡಿಯ ಮುಂದೆ ಒಬ್ಬ ನೀರುಳ್ಳಿ ಕೊಳ್ಳುತ್ತಿದ್ದ. ನೂರು ರೂಪಾಯಿಗೆ ಎರಡು ನೀರುಳ್ಳಿಯಂತೆ ಮಾರಲಾಗುತ್ತಿತ್ತು. ಆದರೂ ಗ್ರಾಹಕ ಸಂಭ್ರಮದಿಂದ ಹೇಳುತ್ತಿದ್ದ ‘‘ನಿಮಗೆ ಗೊತ್ತಾ...ಪಾಕಿಸ್ತಾನದಲ್ಲಿ ನೀರುಳ್ಳಿಯೇ ಇಲ್ಲವಂತೆ. ಗಡಿಯಲ್ಲಿ ಮೋದಿಯವರು ಬಂದೋಬಸ್ತ್ ಮಾಡಿದ ಬಳಿಕ ಅವರು ನೀರುಳ್ಳಿ, ಟೊಮೆಟೋ ಇತ್ಯಾದಿಗಳನ್ನು ಉಪಯೋಗಿಸುವುದೇ ಇಲ್ಲವಂತೆ. ಭಾರತದಲ್ಲಿ ನೂರು ರೂಪಾಯಿಗೆ ಎರಡು ನೀರುಳ್ಳಿ ಸಿಗುತ್ತದೆ. ಮೋದಿಯವರನ್ನು ಪಡೆದ ನಾವೆಷ್ಟು ಭಾಗ್ಯವಂತರು....’’ ಎಂದು ಖುಷಿ ಖುಷಿಯಾಗಿ ಎರಡು ನೀರುಳ್ಳಿಯ ಜೊತೆಗೆ ಮನೆಗೆ ತೆರಳಿದ. ‘‘ನೂರು ರೂಪಾಯಿಗೆ ಎರಡು ನೀರುಳ್ಳಿ: ಸಂಭ್ರಮದಲ್ಲಿ ಗ್ರಾಹಕರು’’ ಎಂದು ನೋಟ್ ಬುಕ್‌ನಲ್ಲಿ ತಲೆ ಬರಹ ಬರೆದುಕೊಂಡ.

ಇನ್ನಷ್ಟು ಮುಂದೆ ಹೋದರೆ ದೂರದಲ್ಲಿ ದಲಿತರ ಕಾಲನಿ ಕಂಡು ಬಂತು. ಆ ಕಡೆ ಸಾಗಬೇಕು ಎಂದಾಗ ಒಂದೆಡೆ ಜನರು ಗುಂಪು ಸೇರಿ ಅದೇನೋ ಸಂಭ್ರಮಾಚರಿಸುತ್ತಿದ್ದರು. ನೇರ ಅತ್ತ ಧಾವಿಸಿದ. ನೋಡಿದರೆ ಇಬ್ಬರು ದಲಿತರ ಮಕ್ಕಳ ಹೆಣ. ಪಕ್ಕದಲ್ಲೇ ಮಗುಚಿರುವ ಚೆಂಬು. ಬಯಲಿನಲ್ಲಿ ಬಹಿರ್ದೆಸೆ ಮಾಡುವ ಸಂದರ್ಭದಲ್ಲಿ ಆ ಮಕ್ಕಳನ್ನು ಅದರಿಂದ ತಡೆದಿದ್ದರು. ಕೊನೆಗೂ ಪರಿಸರ ಮಾಲಿನ್ಯವೊಂದು ತಪ್ಪಿತ್ತು. ‘‘ಪರಿಸರ ಮಾಲಿನ್ಯವನ್ನು ತಡೆದ ಜಾಗೃತ ಜನರು: ಸ್ವಚ್ಛತಾ ಆಂದೋಲನ ಯಶಸ್ವಿ’’ ಎಂಬ ತಲೆಬರಹವನ್ನು ಕೊಟ್ಟು, ಘಟನೆಯನ್ನು ದಾಖಲಿಸಿದ. ಅಲ್ಲಿಂದ ನೇರವಾಗಿ ಬೆಂಗಳೂರು ನಗರೆದೆಡೆಗೆ ಧಾವಿಸಿದ. ನೋಡಿದರೆ ವಾಹನಗಳೆಲ್ಲ ಶಿಸ್ತಿನಿಂದ ಚಲಿಸುತ್ತಿದ್ದವು. ಟ್ರಾಫಿಕ್ ಉಲ್ಲಂಘಿಸಿದವರೆಲ್ಲ ಸಂಭ್ರಮದಿಂದ ತಾಮುಂದು, ನಾಮುಂದು ಎಂದು ದಂಡವನ್ನು ಕಟ್ಟುತ್ತಿದ್ದರು. ‘‘ಸಾರ್...ದಂಡ ಸ್ವಲ್ಪ ಜಾಸ್ತಿಯಾಗಲಿಲ್ಲವೇ?’’ ಎಂದು ಯಾರಲ್ಲೋ ಕೇಳಿದ. ಆತ ಕಾಸಿಯನ್ನು ಭಯೋತ್ಪಾದಕನೋ ಎಂಬಂತೆ ನೋಡಿ ಕೇಳಿದ ‘‘ನೋಡ್ರಿ...ದಂಡ ಹೆಚ್ಚು ಹೆಚ್ಚು ಕಟ್ಟಿದಷ್ಟು ದೇಶದ ಖಜಾನೆ ತುಂಬುತ್ತದೆ. ದೇಶ ಶ್ರೀಮಂತವಾಗುವುದು ಬೇಡವೆ? ಅಲ್ಲಿ ಗಡಿಯಲ್ಲಿ ಮೋದಿಯವರು ಅಷ್ಟೆಲ್ಲ ಮಾಡುತ್ತಿರುವಾಗ ನಾವಿಲ್ಲ ಒಂದಿಷ್ಟು ದಂಡ ಕಟ್ಟಿದರೆ ಏನು? ಕೊಲ್ಲಿ ರಾಷ್ಟ್ರದಲ್ಲಿ ಇದಕ್ಕಿಂತ ಹೆಚ್ಚು ದುಡ್ಡು ಕಟ್ಟುತ್ತಿದ್ದಾರೆ. ಅಲ್ಲಿಗೆ ಹೋಲಿಸಿದರೆ ಇದು ಭಾರೀ ಕಡಿಮೆ. ನಾವು ಕೊಲ್ಲಿರಾಷ್ಟ್ರಗಳಿಗಿಂತ ಮುಂದುವರಿಯಬೇಡವೇ....ನೀವೂ ದಂಡ ಕಟ್ಟಿ....’’

‘‘ಆದರೆ ನನ್ನಲ್ಲಿ ವಾಹನವೇ ಇಲ್ಲವಲ್ಲ....’’ ಕಾಸಿ ಆತಂಕದಿಂದ ಕೇಳಿದ.

‘‘ವಾಹನ ಇಲ್ಲದಿದ್ದರೇನಾಯಿತು. ತಲೆ ಇದೆಯಲ್ಲ...ಹೆಲ್ಮೆಟ್ ಹಾಕಿಲ್ಲವಲ್ಲ. ದಂಡ ಕಟ್ಟಿ....’’ ಆತ ಆದೇಶಿಸಿದ. ಸರಿ ದಂಡ ಕಟ್ಟಿ ಕಾಸಿ ‘‘ದೇಶಾದ್ಯಂತ ಟ್ರಾಫಿಕ್ ಸುಧಾರಣೆ: ದಂಡ ಕಟ್ಟಿ ಸಂಭ್ರಮಿಸುತ್ತಿರುವ ದೇಶ ಭಕ್ತರು’ ಎಂದು ನೋಟ್ ಮಾಡಿಕೊಂಡ. ಇದೀಗ ಎಲ್ಲಿ ನೋಡಿದರೂ ಸಂಭ್ರಮವೇ. ಅಂಗಡಿಯಾತ ವ್ಯಾಪಾರವಿಲ್ಲದಿದ್ದರೂ ಸಂಭ್ರಮದಲ್ಲಿದ್ದ ‘‘ನೋಡ್ರೀ...ಈಗ ಬಿಸಿನೆಸ್ ಕಮ್ಮಿ.. ಆದುದರಿಂದ ಅಂಗಡಿಯನ್ನು ಬೇಗ ಮುಚ್ಚಿ ಮನೆಗೆ ಹೋಗಲು ಸಾಧ್ಯವಾಗುತ್ತದೆ...ಇಲ್ಲದೇ ಇದ್ದರೆ ಮನೆಗೆ ಹೋಗಲು ತುಂಬಾ ಕಷ್ಟವಾಗುತ್ತಿತ್ತು’’ ಎಂದು ನಗು ನಗುತ್ತಾ ಹೇಳಿದ. ಸಂತ ರಾಜಕಾರಣಿಯಿಂದ ಅತ್ಯಾಚಾರಕ್ಕೊಳಗಾದ ಹೆಣ್ಣು ಮಗಳು ಸಂಭ್ರಮದಿಂದ ‘‘ಸಾಧಾರಣವಾಗಿ ಬೇರೆಯವರಾದರೆ ಅತ್ಯಾಚಾರ ವೆಸಗಿದ ಬಳಿಕ ಕೊಂದು ಹಾಕುತ್ತಿದ್ದರು. ಆದರೆ ಈ ರಾಜಕಾರಣಿಗಳು ಭಾರತೀಯ ಸಂಸ್ಕೃತಿಯ ರಕ್ಷಕರಾಗಿರುವುದರಿಂದ ನನ್ನನ್ನು ಅತ್ಯಾಚಾರ ಮಾಡಿದ ಬಳಿಕ ಭದ್ರತೆಯ ಜೊತೆಗೆ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ನಿಜಕ್ಕೂ ಇದು ನನ್ನ ಭಾಗ್ಯವೇ ಆಗಿದೆ...’’ ಆಕೆ ಸಂಭ್ರಮದಿಂದ ತನ್ನ ಮೇಲಾದ ಅತ್ಯಾಚಾರವನ್ನು ವಿವರಿಸುತ್ತಿದ್ದಳು. ಎಲ್ಲಿಯೂ ದುಃಖವೇ ಇಲ್ಲ....ಸರಿ, ಕಾಶ್ಮೀರದಲ್ಲಾದರೂ ಹೋಗಿ ಕೇಳುವ ಎಂದು ಕಾಶ್ಮೀರದೆಡೆಗೆ ಧಾವಿಸಿದ. ಹೆಬ್ಬಾಗಿಲಲ್ಲೇ ಸೇನಾ ಯೋಧನೊಬ್ಬ ತಡೆದ ‘‘ನೋಡಿ ....ಕಾಶ್ಮೀರದಲ್ಲಿ ಹೊಸತೊಂದು ಸ್ವರ್ಗವನ್ನು ನಿರ್ಮಿಸಲಾಗುತ್ತಿದೆ. ಈಗ ಯಾರಿಗೂ ಪ್ರವೇಶವಿಲ್ಲ. ಈ ಸ್ವರ್ಗ ಕಾಶ್ಮೀರಿಗಳಿಗಷ್ಟೇ ಮೀಸಲು...’’

 ‘‘ಉಳಿದ ಭಾರತೀಯರಿಗೂ ಆ ಸ್ವರ್ಗ ಯಾವಾಗ ಸಿಗುತ್ತದೆ?’’ ಕಾಸಿ ಆಸೆಯಿಂದ ಕೇಳಿದ. ‘‘ಸಿಗುತ್ತದೆ ಸಿಗುತ್ತದೆ...ಸ್ವಲ್ಪ ಕಾಯಿರಿ. ಮೋದಿಯವರು ಫಾರಿನ್ನಿಗೆ ಹೋಗಿರುವುದೇ ಆ ಸ್ವರ್ಗವನ್ನು ತರುವುದಕ್ಕಾಗಿ....’’ ಎಂದದ್ದೇ ಕಾಸಿ ಹಿರಿ ಹಿರಿ ಹಿಗ್ಗುತ್ತಾ ಬೆಂಗಳೂರಿಗೆ ವಾಪಸಾದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)