varthabharthi


ಸಂಪಾದಕೀಯ

ರಾಜ್ಯ ಬಿಜೆಪಿಯೊಳಗೆ ಮತ್ತೆ ವೈದಿಕ-ಲಿಂಗಾಯತ ರಾಜಕೀಯ ತಿಕ್ಕಾಟ

ವಾರ್ತಾ ಭಾರತಿ : 10 Oct, 2019

ರಾಜ್ಯ ಬಿಜೆಪಿಯ ಶಾಸಕರು ಒಬ್ಬೊಬ್ಬರಾಗಿ ತಮ್ಮ ಅಸಮಾಧಾನಗಳನ್ನು ಬಹಿರಂಗಗೊಳಿಸುತ್ತಿದ್ದಂತೆಯೇ ಕೇಂದ್ರ ಸರಕಾರ ನೆರೆಪರಿಹಾರವನ್ನು ಬಿಡುಗಡೆ ಮಾಡಿದೆ. ಆದರೆ ಈ ಪರಿಹಾರದ ಜೊತೆಗೇ ರಾಜ್ಯ ಬಿಜೆಪಿಯೊಳಗೆ ಯಾವುದೂ ಸರಿ ಇಲ್ಲ ಎನ್ನುವ ಅಂಶವೂ ಬಹಿರಂಗವಾಗಿದೆ. ನೆರೆ ಸಂತ್ರಸ್ತರ ಪರವಾಗಿ ಬಿಜೆಪಿ ಸರಕಾರದೊಳಗೆ ಮೊತ್ತ ಮೊದಲು ಧ್ವನಿಯೆತ್ತಿದವರು ಬಸನಗೌಡ ಪಾಟೀಲ್ ಯತ್ನಾಳ್. ಇದು ಕೇವಲ ‘ಪರಿಹಾರ’ಕ್ಕೆ ಸಂಬಂಧಿಸಿದ ಆಕ್ರೋಶ ಮಾತ್ರವಲ್ಲ, ಈ ಆಕ್ರೋಶದ ಹಿಂದೆ ಇತರೆಲ್ಲ ರಾಜಕೀಯ ಕಾರಣಗಳೂ ತಳಕು ಹಾಕಿಕೊಂಡಿರುವ ಎನ್ನುವ ಅಂಶ ನಿಧಾನಕ್ಕೆ ಹೊರಬರುತ್ತಿದೆ. ನೆರೆ ಪರಿಹಾರಕ್ಕಾಗಿ ಬಹಿರಂಗ ಆಕ್ರೋಶವನ್ನು ವ್ಯಕ್ತಪಡಿಸಿದ ಬೆನ್ನಿಗೇ ಯತ್ನಾಳ್‌ಗೆ ಬಿಜೆಪಿ ವರಿಷ್ಠರಿಂದ ಶೋಕಾಸ್ ನೋಟಿಸ್ ಬಂದಿತು. ಪಕ್ಷದ ನಾಯಕರ ವಿರುದ್ಧ ಅಥವಾ ಪಕ್ಷ ಒಡೆಯುವ ಕೆಲಸಗಳಿಗೆ ಕೈ ಹಾಕಿದರೆ, ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದರೆ ಅವರಿಗೆ ಶೋಕಾಸ್ ನೋಟಿಸ್ ನೀಡುವುದು ಸಾಮಾನ್ಯ. ಆದರೆ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಧ್ವನಿಯೆತ್ತಿದ ಯತ್ನಾಳ್ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಹಾಗಾದರೆ, ಜನಸಾಮಾನ್ಯರ ಪರವಾಗಿ ಬಿಜೆಪಿಯೊಳಗಿರುವ ಶಾಸಕರು ಮಾತನಾಡುವುದು ತಪ್ಪು ಎಂದು ವರಿಷ್ಠರು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆಯೇ? ಇದೇ ಸಂದರ್ಭದಲ್ಲಿ ‘‘ನೆರೆ ಸಂತ್ರಸ್ತರ ಬಗ್ಗೆ ನಾನು ಧ್ವನಿ ಎತ್ತದೇ ಇದ್ದಿದ್ದರೆ 15 ದಿನಗಳಲ್ಲೇ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗಿತ್ತು’’ ಎನ್ನುವ ಅಂಶವನ್ನು ಯತ್ನಾಳ್ ಹೊರಗೆಡಹಿದ್ದಾರೆ. ಅಂದರೆ, ಯಡಿಯೂರಪ್ಪ ಅವರಿಗೆ ಇರಿಸು ಮುರಿಸು ಉಂಟು ಮಾಡುವುದಕ್ಕಾಗಿಯೇ ಕೇಂದ್ರ ಸರಕಾರ ಪರಿಹಾರವನ್ನು ಬಿಡುಗಡೆ ಮಾಡಲು ತಾಯಿಸಿದೆ? ಎಂಬ ಪ್ರಶ್ನೆ ಈಗ ಎದ್ದಿದೆ.

ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ನೆರೆಯ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ ಬಿಜೆಪಿಯ ನಾಯಕರು ಕೇಂದ್ರಕ್ಕೆ ಮನವಿ ನೀಡಲು ಹೋದಾಗ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ರಾಜ್ಯದ ಸ್ಥಿತಿಗತಿಯ ಕುರಿತಂತೆ ಚರ್ಚಿಸಿದ್ದರು. ಈ ಬಾರಿ ರಾಜ್ಯದಲ್ಲೂ, ಕೇಂದ್ರದಲ್ಲೂ ಬಿಜೆಪಿ ಸರಕಾರವಿದೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕೇಂದ್ರದ ಬಿಜೆಪಿ ನಾಯಕರು ಎಷ್ಟು ನಿಕೃಷ್ಟವಾಗಿ ಕಂಡರೆಂದರೆ, ಭೇಟಿಯಾಗುವುದಕ್ಕೂ ಅವರು ಅವಕಾಶ ನೀಡಲಿಲ್ಲ. ಪರಿಹಾರ ಪಡೆಯುವುದಂತೂ ದೂರದ ಮಾತಾಯಿತು. ಇದನ್ನು ಕೇವಲ ಮುಖ್ಯಮಂತ್ರಿಗಾದ ಅವಮಾನ ಎಂದು ಭಾವಿಸುವಂತಿಲ್ಲ. ಯಡಿಯೂರಪ್ಪ ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ. ಕರ್ನಾಟಕಕ್ಕೆ ಕೇಂದ್ರದ ನಾಯಕರು ನೀಡಿದ ಮಹತ್ವವೆಷ್ಟು ಎನ್ನುವುದನ್ನು ಇದು ಹೇಳುತ್ತದೆ. ಕೇಂದ್ರ ವರಿಷ್ಠರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಇಷ್ಟವಿಲ್ಲದೆ ಇದ್ದರೆ, ಅವರನ್ನು ಕೆಳಗಿಳಿಸಿ ಇನ್ನೋರ್ವ ಅರ್ಹ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿಸಬೇಕು. ಅಂದರೆ, ಕೇಂದ್ರ ವರಿಷ್ಠರು ಯಡಿಯೂರಪ್ಪರ ಮುಂದೆ ಅಸಹಾಯಕರಾಗಿದ್ದಾರೆ ಎನ್ನುವುದನ್ನೂ ಇದು ಸ್ಪಷ್ಟಪಡಿಸಿದೆ. ಯಡಿಯೂರಪ್ಪರ ಬೆನ್ನಿಗಿರುವ ಲಿಂಗಾಯತ ಬಲ ಆರೆಸ್ಸೆಸ್‌ಗೆ ತಲೆನೋವಾಗಿದೆ. ಅವರನ್ನು ನೇರವಾಗಿ ಎದುರಿಸಲಾಗದೆ, ಕಿರುಕುಳ ನೀಡುವ ಮೂಲಕ ಅವರ ಆಡಳಿತವನ್ನು ವಿಫಲಗೊಳಿಸುವುದು ಬಿಜೆಪಿಯೊಳಗಿರುವ ಕೆಲವು ಶಕ್ತಿಗಳ ಉದ್ದೇಶವೆನ್ನುವುದು ಯತ್ನಾಳ್ ಮಾತಿನಿಂದ ಗೊತ್ತಾಗುತ್ತದೆ. ‘‘ಬಿಎಸ್‌ವೈ ಪದಚ್ಯುತಿಗೆ ಕೇಂದ್ರದ ಇಬ್ಬರು ಸಚಿವರು ಷಡ್ಯಂತ್ರ ನಡೆಸುತ್ತಿದ್ದಾರೆ’’ ಎಂಬ ಯತ್ನಾಳ್ ಹೇಳಿಕೆಯನ್ನು ಈವರೆಗೆ ಯಡಿಯೂರಪ್ಪ ಸ್ಪಷ್ಟವಾಗಿ ನಿರಾಕರಿಸಿಲ್ಲ. ಒಂದು ವೇಳೆ ಯತ್ನಾಳ್ ಅವರ ಹೇಳಿಕೆಯಲ್ಲಿ ಸುಳ್ಳಿದ್ದರೆ ಅವರು ತಕ್ಷಣವೇ ಅದನ್ನು ನಿರಾಕರಿಸಿ, ಯತ್ನಾಳ್‌ರನ್ನು ಖಂಡಿಸುತ್ತಿದ್ದರು.

ಬಿಜೆಪಿಯೊಳಗೆ ಯಡಿಯೂರಪ್ಪ ವಿರುದ್ಧ ಇರುವ ಪ್ರತಿರೋಧ ಇಂದು ನಿನ್ನೆಯದಲ್ಲ. ಹಿಂದೆ ದಿವಂಗತ ಅನಂತಕುಮಾರ್ ಅವರೂ ಯಡಿಯೂರಪ್ಪರ ವಿರುದ್ಧ ದಿಲ್ಲಿಯಲ್ಲಿ ಇದೇ ರೀತಿಯಲ್ಲಿ ಸಂಚು ನಡೆಸಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪರಿಗೆ ವಿರೋಧಪಕ್ಷಗಳು ಕೊಟ್ಟ ಕಿರುಕುಳಕ್ಕಿಂತ ಬಿಜೆಪಿಯೊಳಗಿರುವ ನಾಯಕರು ಕೊಟ್ಟ ಕಿರುಕುಳವೇ ದೊಡ್ಡದು. ಒಂದು ಹಂತದಲ್ಲಿ ಅವರು ಪಕ್ಷ ತೊರೆದು ಕೆಜೆಪಿಯನ್ನು ಕಟ್ಟಬೇಕಾಯಿತು. ಕೆಜೆಪಿಯ ಮೂಲಕ ಬಿಜೆಪಿಯನ್ನು ರಾಜ್ಯದಲ್ಲಿ ಸರ್ವನಾಶಗೊಳಿಸಿ ತನ್ನ ಅನಿವಾರ್ಯವನ್ನು ಬಿಜೆಪಿ ವರಿಷ್ಠರಿಗೆ ಸಾಬೀತು ಪಡಿಸಿದರು. ಇದೀಗ ಆರೆಸ್ಸೆಸ್ ನಾಯಕ ಸಂತೋಷ್ ರಾಜ್ಯದ ಚುಕ್ಕಾಣಿಯನ್ನು ಕೈಗೆತ್ತಿಕೊಳ್ಳಲು ಹೊರಟಿದ್ದಾರೆ. ‘ಸಂತೋಷ್ ಹಸ್ತಕ್ಷೇಪ’ಗಳನ್ನು ಹಿಂದೆ ಯಡಿಯೂರಪ್ಪ ಬಹಿರಂಗವಾಗಿಯೇ ಆಡಿಕೊಂಡಿದ್ದರು. ಕಚೇರಿಯೊಳಗಿರುವ ಸಂತೋಷ್ ಬೆಂಬಲಿಗ ಸಿಬ್ಬಂದಿಯನ್ನು ಎತ್ತಿ ಹೊರಹಾಕಿದ್ದರು. ಇದೀಗ ಅದೇ ಸಂತೋಷ್ ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರಾಗಿದ್ದಾರೆ ಮಾತ್ರವಲ್ಲ, ಸೈದ್ಧಾಂತಿಕವಾಗಿ, ರಾಜಕೀಯವಾಗಿ ಬೆನ್ನೆಲುಬು ಇಲ್ಲದ ನಳಿನ್ ಕುಮಾರ್ ಕಟೀಲು ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡಿ ಅವರ ಬೆನ್ನ ಹಿಂದೆ ನಿಂತು ಯಡಿಯೂರಪ್ಪ ಅವರ ಕಡೆಗೆ ಬಾಣ ಬಿಡುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಎರಡು ಗುಂಪುಗಳ ನಡುವಿನ ತಿಕ್ಕಾಟದಂತೆ ಕಂಡರೂ, ವೈದಿಕ ಮತ್ತು ಲಿಂಗಾಯತ ಲಾಬಿಗಳ ನಡುವಿನ ತಿಕ್ಕಾಟವಾಗಿದೆ. ಉತ್ತರ ರಾಜ್ಯಗಳಲ್ಲಿ ಸರಕಾರದ ಮೇಲೆ ಆರೆಸ್ಸೆಸ್ ನೇರ ನಿಯಂತ್ರಣವನ್ನು ಹೊಂದಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಅದಕ್ಕೆ ಯಡಿಯೂರಪ್ಪ ಬಹುದೊಡ್ಡ ತಡೆಯಾಗಿದ್ದಾರೆ. ರಾಜ್ಯದ ಆರೆಸ್ಸೆಸ್‌ನೊಳಗಿರುವ ಬ್ರಾಹ್ಮಣ್ಯಕ್ಕೆ ಯಡಿಯೂರಪ್ಪರ ಬೆನ್ನಿಗಿರುವ ಲಿಂಗಾಯತ ಶಕ್ತಿ ಗಂಟಲ ಮುಳ್ಳಾಗಿದೆ. ಜೊತೆಗೆ ರಾಜ್ಯದಲ್ಲಿ ‘ಲಿಂಗಾಯತ ಸ್ವತಂತ್ರ ಧರ್ಮ’ ಆಂದೋಲನವೂ ಜೀವಂತವಿದೆ. ಅದೇನಾದರೂ ಚಿಗುರಿಕೊಂಡರೆ, ಅದರ ನೇರ ಪರಿಣಾಮವನ್ನು ಆರೆಸ್ಸೆಸ್ ಉಣ್ಣಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೇರೆ ಬೇರೆ ಮಾರ್ಗಗಳ ಮೂಲಕ ಯಡಿಯೂರಪ್ಪ ಸರಕಾರ ಸುಗಮವಾಗಿ ಸಾಗದಂತೆ ನೋಡಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಕೆಲವು ಕೇಂದ್ರ ಸಚಿವರನ್ನೂ ಇದಕ್ಕಾಗಿ ಬಳಸಿಕೊಳ್ಳುತ್ತಿದೆ. ರಾಜ್ಯದ ಪಕ್ಷದ ಚುಕ್ಕಾಣಿಯನ್ನು ಆರೆಸ್ಸೆಸ್‌ನ ಮುಖಂಡ ಸಂತೋಷ್ ಕೈಗೆ ಕೊಟ್ಟು, ಇಡೀ ಕರ್ನಾಟಕ ರಾಜಕೀಯವನ್ನು ವೈದಿಕೀಕರಣಗೊಳಿಸುವ ಹುನ್ನಾರ ಬಲಿಪಶುವಾಗುತ್ತಿದ್ದಾರೆ ಯಡಿಯೂರಪ್ಪ.

 ಆರೆಸ್ಸೆಸ್‌ನ ಈ ಪ್ರಯತ್ನ ಯಡಿಯೂರಪ್ಪರನ್ನು ಮತ್ತೊಮ್ಮೆ ಬಂಡಾಯ ಏಳುವಂತೆ ಮಾಡಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಹಾಗೊಂದು ವೇಳೆ ಬಂಡಾಯವೆದ್ದರೆ ಅದು ‘ಸ್ವತಂತ್ರ ಲಿಂಗಾಯತ ಧರ್ಮ’ ಆಂದೋಲನಕ್ಕೂ ಪೂರಕವಾಗಬಹುದು. ಲಿಂಗಾಯತ ಧರ್ಮದ ಮೇಲೆ ಹೇರಲ್ಪಟ್ಟಿರುವ ವೈದಿಕ ಚಿಂತನೆಗಳನ್ನು ಕೊಡವಿ, ಮತ್ತೆ ಬಸವ ತತ್ವ ಮೇಲೆ ಬರುವುದಕ್ಕೂ ಸಹಾಯ ಮಾಡಬಹುದು. ಲಿಂಗಾಯತ ಧರ್ಮವನ್ನು ಆರೆಸ್ಸೆಸ್‌ಗೆ ಬಲಿಕೊಟ್ಟು ಯಡಿಯೂರಪ್ಪ ಬಿಜೆಪಿಯ ನಾಯಕರಾದರು. ಇದೀಗ ಯಡಿಯೂರಪ್ಪರನ್ನು ಅಥವಾ ಲಿಂಗಾಯತರನ್ನು ಬಲಿಕೊಟ್ಟು ಆರೆಸ್ಸೆಸ್ ಬಿಜೆಪಿಯ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಎಲ್ಲಿಯವರೆಗೆ ಯಡಿಯೂರಪ್ಪ ತನ್ನೊಳಗಿನ ಹಿಂದುತ್ವ ಎನ್ನುವ ಮಾಯದ ಬಲೆಯನ್ನು ಹರಿದು, ಬಸವ ತತ್ವಕ್ಕೆ ಬದ್ಧರಾಗುವುದಿಲ್ಲವೋ ಅಲ್ಲಿಯವರೆಗೆ ಆರೆಸ್ಸೆಸ್‌ನ ಈ ಶೋಷಣೆ ಯಡಿಯೂರಪ್ಪ ಮತ್ತು ಲಿಂಗಾಯತರ ಮೇಲೆ ಮುಂದುವರಿಯುತ್ತಲೇ ಹೋಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)