varthabharthi


ಸಂಪಾದಕೀಯ

ಭೂಸ್ವಾಧೀನಕ್ಕೆ ಯೋಗ್ಯ ಪರಿಹಾರ; ತಿಣುಕಾಡುತ್ತಿರುವ ರಾಜ್ಯ ಸರಕಾರಗಳು

ವಾರ್ತಾ ಭಾರತಿ : 12 Oct, 2019

ಇಂದಿರಾಗಾಂಧಿಯ ಕಾಲದಲ್ಲಿ ‘ಭೂಸ್ವಾಧೀನ’ ಭಾರೀ ಸುದ್ದಿಯನ್ನು ಮಾಡಿತ್ತು. ಹಲವರ ಕಣ್ಣನ್ನು ಕೆಂಪು ಮಾಡಿತ್ತು. ಆದರೆ ಆ ಭೂಸ್ವಾಧೀನ ಅತ್ಯಂತ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ರೂಪುಗೊಂಡ ಕಾನೂನಾಗಿತ್ತು. ‘ಉಳುವವನೇ ಹೊಲದೊಡೆಯ’ ಎಂಬ ಘೋಷಣೆಯಡಿಯಲ್ಲಿ, ಯಾರೆಲ್ಲ ಜಮೀನ್ದಾರರ ಹೊಲಗಳನ್ನು, ಗದ್ದೆಗಳನ್ನು ಗೇಣಿಗೆ ಉಳುತ್ತಾರೆಯೋ ಅವರೇ ಆ ಭೂಮಿಯ ಒಡೆಯರು ಎಂದು ಭೂಮಿಯನ್ನು ಉಳುವವರ ಸ್ವಾಧೀನಕ್ಕೆ ಒಪ್ಪಿಸಲಾಯಿತು. ಈ ದೇಶದ ಲಕ್ಷಾಂತರ ರೈತರು, ಶ್ರಮಿಕರು, ಹಿಂದುಳಿದವರ್ಗ ಮತ್ತು ದಲಿತರು ಈ ಕಾಯ್ದೆಯ ಲಾಭ ಪಡೆದರು. ಕರಾವಳಿಯಲ್ಲಿ ಬಂಟ ಸಮುದಾಯದ ಒಕ್ಕಲುಗಳಾಗಿ ದುಡಿಯುತ್ತಿದ್ದ ಬಿಲ್ಲವ ಸಮುದಾಯದ ಪಾಲಿಗೆ ಈ ಕಾಯ್ದೆ ಬಿಡುಗಡೆಯ ರೂಪದಲ್ಲಿ ಬಂತು. ಆದರೆ ಇಂದಿನ ದಿನಗಳಲ್ಲಿ ಭೂಸ್ವಾಧೀನವೆನ್ನುವುದು ತಿರುವುಮುರುವಾಗಿದೆ. ಇಂದು ರೈತರ ಜಮೀನನ್ನು ಕಾರ್ಪೊರೇಟ್ ಸಂಸ್ಥೆಗಳಿಗಾಗಿ ವಶ ಮಾಡಿಕೊಳ್ಳಲಾಗುತ್ತಿದೆ. ಬೃಹತ್ ಯೋಜನೆಯ ಹೆಸರಿನಲ್ಲಿ ವಶಪಡಿಸಿಕೊಂಡ ಭೂಮಿಯನ್ನು ಕೆಲವು ಸಂಸ್ಥೆಗಳಂತೂ ರಿಯಲ್ ಎಸ್ಟೇಟ್‌ಗೆ ಬಳಸಿಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ ನೀಡುವ ಪರಿಹಾರ ಎಷ್ಟರ ಮಟ್ಟಿಗೆ ನ್ಯಾಯಯುತವಾಗಿದೆ ಎಂದರೆ ಅಲ್ಲೂ ನಿರಾಶೆ ಎದುರಾಗುತ್ತದೆ.

2013ರಲ್ಲಿ ಕೇಂದ್ರ ಸರಕಾರ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ‘ರೈಟ್ ಟು ಫೇರ್ ಕಾಂಪೆನ್ಸೇಷನ್ ಆ್ಯಂಡ್ ಟ್ರಾನ್ಸ್‌ಪರೆನ್ಸಿ ಇನ್ ಲ್ಯಾಂಡ್ ಅಕ್ವಿಷನ್, ರಿಹ್ಯಾಬಿಲಿಟೇಷನ್ ಆ್ಯಂಡ್ ರಿಸೆಟ್ಲ್‌ಮೆಂಟ್ ಆ್ಯಕ್ಟ್’ (ಲಾರಾ ಕಾನೂನು) ಜಾರಿಗೊಳಿಸಿದೆ. ಆದರೆ ಕೆಲವು ರಾಜ್ಯಗಳು ಈ ಕಾನೂನಿನ ಅಡಿಯಲ್ಲಿ ಪರಿಹಾರ ನೀಡದೇ ಇರುವುದು ಇದೀಗ ಬೆಳಕಿಗೆ ಬರುತ್ತಿವೆ. ಮುಖ್ಯವಾಗಿ ಮಹಾರಾಷ್ಟ್ರ , ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳು ಬೃಹತ್ ಯೋಜನೆಗಳ ಸ್ಥಾಪನೆಗೆ ಭೂಸ್ವಾಧೀನ ಮಾಡಿಕೊಳ್ಳುವಾಗ ನ್ಯಾಯವಾದ ಪರಿಹಾರ ನೀಡುವುದನ್ನು ತಪ್ಪಿಸುವ ಉದ್ದೇಶದಿಂದ ದಶಕಗಳಷ್ಟು ಹಿಂದಿನ ಅವಧಿಯ ಭೂಸ್ವಾಧೀನ ಕಾಯ್ದೆಯನ್ನು ಬಳಸಿಕೊಳ್ಳುತ್ತಿವೆ. ಈ ಮೂರು ರಾಜ್ಯಗಳು ಗತಕಾಲದ ಕಾನೂನನ್ನು ಬಳಸಿಕೊಂಡು ಮಹಾರಾಷ್ಟ್ರದಲ್ಲಿ ವಿಶ್ವದ ಅತ್ಯಂತ ಬೃಹತ್ ತೈಲಸಂಗ್ರಹಾಗಾರದ ಸ್ಥಾಪನೆ, ತಮಿಳುನಾಡಿನಲ್ಲಿ ಚೆನ್ನೈ ಮೆಟ್ರೋ ರೈಲು ಯೋಜನೆ ಹಾಗೂ ಕರ್ನಾಟಕದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಮುಂದಾಗಿವೆ ಎನ್ನುವ ಅಂಶ ಬಹಿರಂಗವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಸಂದರ್ಭ ರಾಜ್ಯಗಳು, ಕೇಂದ್ರದ ನಿರ್ದೇಶನವನ್ನು ಪಾಲಿಸದೇ ತಮ್ಮದೇ ಕಾನೂನು ರೂಪಿಸಬಹುದು. ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ಕೈಗಾರಿಕೆ ಸ್ಥಾಪನೆ, ಹೆದ್ದಾರಿ ನಿರ್ಮಾಣ ಮುಂತಾದ ಸಂದರ್ಭದಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಲು ಹೊರಟಿವೆ. 1996ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾನೂನು (ಕೆಐಎಡಿ) ಯಾವುದೇ ಭೂಮಿಯನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಿ, ಜಮೀನಿನ ಮಾಲಕ ಒಪ್ಪಲಿ ಅಥವಾ ಒಪ್ಪದಿರಲಿ ಅದನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರನ್ನು ರಾಜ್ಯ ಸರಕಾರಕ್ಕೆ ನೀಡಿದೆ. ಜಮೀನಿನ ಮಾಲಕರು ಹಾಗೂ ಸರಕಾರದ ಮಧ್ಯೆ ಚರ್ಚೆ, ಮಾತುಕತೆಯ ಬಳಿಕ ಪರಿಹಾರ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಸರಕಾರ ನಿಗದಿಪಡಿಸಿದ ದರವನ್ನು ಜಮೀನಿನ ಮಾಲಕರು ಒಪ್ಪದಿದ್ದರೆ, 1894ರ ಕಾಯ್ದೆಯಡಿ ಪರಿಹಾರ ಮೊತ್ತವನ್ನು ಲೆಕ್ಕ ಹಾಕಲು ಅವಕಾಶವಿದೆ. ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ಕಾಯ್ದೆ 1961 ಮತ್ತು ತಮಿಳುನಾಡು ಕೈಗಾರಿಕಾ ಉದ್ದೇಶಗಳಿಗೆ ಜಮೀನು ಕಾಯ್ದೆ 1997 ಕೂಡಾ ಇದೇ ರೀತಿಯ ಅಂಶಗಳನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ, ಲಾರಾ ಕಾಯ್ದೆಯಡಿ- ಬೃಹತ್ ಕೈಗಾರಿಕೆ ಸ್ಥಾಪನೆಗೆ ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ಜಮೀನು ಕಳೆದುಕೊಳ್ಳುವ ಜನರಲ್ಲಿ ಶೇ.70ರಷ್ಟು ಮಂದಿ ಒಪ್ಪಿದರೆ ಮಾತ್ರ ಭೂಸ್ವಾಧೀನಕ್ಕೆ ಅವಕಾಶವಿದೆ. ಅಲ್ಲದೆ ಭೂಮಿಯನ್ನು ಲೀಸ್‌ಗೆ ನೀಡಿದವರು ಅಥವಾ ಕೃಷಿ ಕಾರ್ಮಿಕರಿಗೂ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯ ಪಡೆಯಲು ಅವಕಾಶವಿದೆ. ದಲಿತರು ಮತ್ತು ಆದಿವಾಸಿ ಕುಟುಂಬದವರಿಗೆ ವಿಶೇಷ ಅವಕಾಶ ನೀಡಲಾಗಿದೆ. ಆದರೆ ರಾಜ್ಯದ ಕಾನೂನಿನಲ್ಲಿ ಇಂತಹ ಯಾವುದೇ ವ್ಯವಸ್ಥೆಗಳಿಲ್ಲ. ಲಾರಾ ಕಾಯ್ದೆ ಜಾರಿಯಾದ ಬಳಿಕ ರಾಜ್ಯಗಳು ತಮ್ಮ ಗತಕಾಲದ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಿದೆ. ಆದರೆ ಇದುವರೆಗೂ ಈ ತಿದ್ದುಪಡಿ ನಡೆದಿಲ್ಲ ಎಂದು ಸರಕಾರೇತರ ಸಂಘಟನೆಗಳ ಕಾರ್ಯಕರ್ತರು ಆರೋಪಿಸುತ್ತಾರೆ.

ಕರ್ನಾಟಕದಲ್ಲಿ ಯಾವುದೇ ತಿದ್ದುಪಡಿ ನಡೆಸದೆ 2014ರಿಂದ 2017ರ ನಡುವೆ ಕೆಐಎಡಿ ಅನ್ವಯ 4,300 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ನಿಯಂತ್ರಕ ಮತ್ತು ಮಹಾಲೆಕ್ಕಪಾಲರ (ಸಿಎಜಿ) ವರದಿ ತಿಳಿಸಿದೆ. 2019ರ ಮಾರ್ಚ್‌ನಲ್ಲಿ ಕರ್ನಾಟಕ ಸರಕಾರ ಲಾರಾ ಕಾಯ್ದೆಗೆ ತಿದ್ದುಪಡಿ ಮಸೂದೆ ಅಂಗೀಕರಿಸಿತು. ಇದರ ಪ್ರಕಾರ ಕೈಗಾರಿಕೆ, ವಸತಿ ಮತ್ತು ಹೆದ್ದಾರಿ ಸೇರಿದಂತೆ ಆರು ಕಾನೂನುಗಳಿಗೆ ಲಾರಾದಿಂದ ವಿನಾಯಿತಿ ನೀಡಲಾಗಿದೆ. ಈಗ ಐದು ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದು ಇದಕ್ಕೆ ಕೆಐಎಡಿ ಕಾನೂನು ಅನ್ವಯಿಸುತ್ತದೆ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೇಳುತ್ತದೆ. ಕೆಐಎಡಿ ಒಂದು ಸ್ವಾಯತ್ತ ಸಂಸ್ಥೆ . ಅದಕ್ಕೆ ಲಾರಾ ಅನ್ವಯಿಸುವುದಿಲ್ಲ ಎನ್ನುವುದು ಮಂಡಳಿಯ ಸಮರ್ಥನೆ. ಮಂಗಳೂರಿನಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಕಂಪೆನಿ ತನ್ನ ಸುತ್ತಮುತ್ತಲಿನ 960 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದೆ. ಈ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೆಐಎಡಿ ಕಾಯ್ದೆಯಡಿ ಸ್ವಾಧೀನ ಪಡಿಸಿಕೊಂಡಿದೆ. 2017ರಲ್ಲಿ ಜಮೀನು ಸ್ವಾಧೀನ ಪಡಿಸುವುದಾಗಿ ನೋಟಿಸ್ ಜಾರಿಗೊಳಿಸಿದೆ. ಆದರೆ ಜಮೀನು ಮಾಲಕರು ಲಾರಾ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು ಎಂದು ಹೋರಾಟ ಮಾಡುತ್ತಿರುವ ಕಾರಣ ಈ ಪ್ರಕ್ರಿಯೆ ಇತ್ಯರ್ಥವಾಗಿಲ್ಲ. ಮೂರು ರಾಜ್ಯಗಳು ಕೇಂದ್ರ ಸರಕಾರದ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದರೂ ಇದಕ್ಕೆ ಕೇಂದ್ರ ಸರಕಾರ ಮೌನವಾಗಿ ಸಮ್ಮತಿಸುತ್ತಿದೆ. ಕೇಂದ್ರ ಸರಕಾರ ಕಾರ್ಪೊರೇಟ್ ಒಲವನ್ನು ಹೊಂದಿರುವುದರಿಂದ ರಾಜ್ಯದ ಈ ನಡೆಯನ್ನು ಪ್ರಶ್ನಿಸದೆ ಮೌನವಾಗಿದೆ. ತಮ್ಮ ಭೂಮಿಯ ಮೇಲಿನ ಹಕ್ಕಿಗಾಗಿ ಜನರೇ ಒಂದಾಗಿ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವಂತಹ ಅಗತ್ಯ ಎದ್ದು ಕಾಣುತ್ತಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)