varthabharthi


ಸುಗ್ಗಿ

ಮನುಕುಲದ ಒಳಿತಿಗೆ ‘ವೆದ್ಯಕೀಯ ನೊಬೆಲ್ ಪ್ರಶಸ್ತಿ’

ವಾರ್ತಾ ಭಾರತಿ : 12 Oct, 2019
ಪ್ರೊ. ಎಂ. ನಾರಾಯಣ ಸ್ವಾಮಿ

ಪ್ರಾಣಿಗಳಲ್ಲಿ ಜೀವಕೋಶಗಳ ಚಯಾಪಚಯ (ಮೆಟಬಾಲಿಸಂ) ಕ್ರಿಯೆಗೆ ಆಮ್ಲಜನಕವು ಅತ್ಯವಶ್ಯಕ. ಪ್ರತಿ ಜೀವಕೋಶದ ಮೈಟೊಕಾಂಡ್ರಿಯಾದಲ್ಲಿ ಚಯಾಪಚಯ ಕ್ರಿಯೆ ನಡೆಯುವಾಗ ಪೋಷಕಾಂಶಗಳು ಬಳಕೆಯಾಗಿ ಅವು ಶಕ್ತಿಯಾಗಿ ಬದಲಾವಣೆ ಯಾಗಲು ಆಮ್ಲಜನಕವು ಬೇಕೇಬೇಕು. ಆದರೆ, ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ಜೀವಕೋಶಗಳು ಹೇಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತವೆ? ಅಂತಹ ಹೊಂದಿಕೊಳ್ಳುವ ಅನ್ಯೋನ್ಯತೆಗೆ ಕಾರಣ ವಾಗಿರುವ ಕೋಶಾಣುಗಳು ಯಾವುವು? ಎಂಬ ಸಂಶೋಧನೆಗೆ 2019ರ ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿ ಕೊಡಲಾಗಿದೆ.

ವೈದ್ಯಕೀಯ ವಿಜ್ಞಾನದ 2019ರ ನೊಬೆಲ್ ಪ್ರಶಸ್ತಿ

ಅಮೆರಿಕದ ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ವಿಜ್ಞಾನಿಯಾದ ಪ್ರೊ. ವಿಲಿಯಂ ಕೇಲಿನ್, ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಪ್ರೊ. ಗ್ರೆಗ್ ಸೆಮೆಂಜಾ ಮತ್ತು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪ್ರೊ. ಸರ್. ಪೀಟರ್ ರಾಟ್‌ಕ್ಲಿಫ್ ಅವರು ಶರೀರ ಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

► ಸಹಜ ಶರೀರ ಕ್ರಿಯೆಗೆ ಆಮ್ಲಜನಕದ ಪ್ರಮಾಣವೇ ಕಾರಣ

► ಶುದ್ಧ ಪರಿಸರ, ಶುದ್ಧ ಗಾಳಿ ಸಾರ್ವಜನಿಕ ಪ್ರಜ್ಞೆಯಾಗಲಿ

ಜೀವಕೋಶಗಳಿಗೆ ಆಮ್ಲಜನಕ ಪ್ರಮಾಣ ಆಧಾರಿತ ಸಂವೇದನೆಯಿದೆ. ಅವು ಆಮ್ಲಜನಕದ ಲಭ್ಯತೆಯನ್ನು ಗ್ರಹಿಸಬಲ್ಲವು. ಹಾಗೆ ಗ್ರಹಿಸುತ್ತಾ, ಆಮ್ಲಜನಕದ ಏರಿಳಿತದ ಪ್ರಮಾಣಗಳಿಗೆ ಅವು ಹೊಂದಿಕೊಳ್ಳಬಲ್ಲವು. ಜೀವಕೋಶದ ಚಯಾಪಚಯ ಕ್ರಿಯೆಯು ಆಮ್ಲಜನಕದ ಪ್ರಮಾಣವನ್ನು ಅವಲಂಬಿಸಿದೆ. ಅದು ನೇರ ಸಂಬಂಧವನ್ನು ಹೊಂದಿದೆ. ತೀವ್ರತರದ ದೈಹಿಕ ವ್ಯಾಯಾಮ, ರಕ್ತ ನಾಳಗಳ ಜನ್ಯತೆ, ಕೆಂಪು ರಕ್ತಕಣಗಳ ಉತ್ಪತ್ತಿ, ರೋಗನಿರೋಧಕ ವ್ಯವಸ್ಥೆ, ಭ್ರೂಣ ಬೆಳವಣಿಗೆ, ಪ್ಲಾಸೆಂಟಾ ಬೆಳವಣಿಗೆಗೆ ಆಮ್ಲಜನಕ ಅತ್ಯವಶ್ಯಕ. ಆಮ್ಲಜನಕದ ಕೊರತೆಯಿಂದ ರಕ್ತಹೀನತೆ, ಮೂತ್ರಕೋಶದ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಯು, ಸೋಂಕು, ನಿಧಾನ ಗತಿಯಲ್ಲಿ ಗಾಯ ವಾಸಿಯಾಗುವಿಕೆ, ಹೃದಯ ಕಾಯಿಲೆ, ದೈಹಿಕ ನ್ಯೂನತೆಗಳು, ಮುಂತಾದ ರೋಗಗಳು ಹುಟ್ಟಿಕೊಳ್ಳುತ್ತವೆ. ಆಮ್ಲಜನಕದ ಕೊರತೆ ಯಿಂದ ಶರೀರಕ್ರಿಯೆಗಳು ಹಳಿತಪ್ಪಿದರೆ ರೋಗ ಬರುವುದು ನಿಶ್ಚಿತ.

ಭಾರತವು ಯೋಗಕ್ಕೆ ಹೆಸರು ವಾಸಿ. ಯೋಗ ದಲ್ಲಿ ಪ್ರಾಣಾಯಾಮಕ್ಕೆ ಆದ್ಯತೆಯಿದೆ. ನಾವು ಹೇಗೆ ಉಸಿರಾಡಬೇಕು ಎಂದು ಅರಿಯುವುದು ಉತ್ತಮ. ಉಸಿರನ್ನು ಪ್ರಾಣವಾಯು ಎನ್ನುತ್ತೇವೆ. ಚಲನಚಿತ್ರಗಳ ಪ್ರೇಮಗೀತೆಗಳಲ್ಲಿಯೂ ಉಸಿರಿಗೆ, ಪ್ರಾಣವಾಯುವಿಗೆ ಪ್ರಾಧಾನ್ಯತೆಯೋ ಪ್ರಾಧಾನ್ಯತೆ. ಆ ಪ್ರಾಣ ವಾಯುವಿನಲ್ಲಿರುವ ಆಮ್ಲಜನಕದ ಬಳಕೆಯನ್ನು ಜೀವಕೋಶಗಳು ಕೋಶಾ ಣುಗಳ ಮೂಲಕ ಹತೋಟಿಯಲ್ಲಿ ಇಟ್ಟುಕೊಳ್ಳುವುದಕ್ಕೆ 2019ರ ವೈದ್ಯಕೀಯ ನೊಬೆಲ್ ಪ್ರಶಸ್ತಿ ಬಂದಿದೆ. ಜೀವಕೋಶಗಳು ಆಮ್ಲ ಜನಕದ ಲಭ್ಯತೆಯನ್ನು ತಮ್ಮ ಸಂವೇದನೆಗಳ ಮೂಲಕ ಗ್ರಹಿಸುತ್ತವೆ ಮತ್ತು ಹೊಂದಿ ಕೊಳ್ಳುತ್ತವೆ. ಒಮ್ಮಿಮ್ಮೆ ಆ ಕ್ರಿಯೆ ಕಷ್ಟವೂ ಆಗಬಹುದು. ನಮ್ಮ ಜೀವಕೋಶಗಳಿಗೆ ಕಷ್ಟ ಕೊಡುವುದು ಬೇಡವೆಂದರೆ, ನಾವು ವಾಯು ಮಾಲಿನ್ಯ ವನ್ನು ತಡೆಗಟ್ಟಬೇಕು. ಶುದ್ಧ ಪರಿಸರ, ಶುದ್ಧ ಗಾಳಿಗೆ ಆದ್ಯತೆ ನೀಡುವುದು ಸಾರ್ವಜನಿಕ ಪ್ರಜ್ಞೆಯಾಗಬೇಕು.

******************************************************

ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಶೇ.20ರಿಂದ 21ರಷ್ಟು. ಆ ಪ್ರಮಾಣವು ಕುಗ್ಗುತ್ತಾ ಹೋದಲ್ಲಿ ಉಸಿರುಗಟ್ಟಿಸುವ ಪರಿಸ್ಥಿತಿ ಉಂಟಾಗುತ್ತದೆ. ಆದರೂ ಕೂಡ ಜೀವಕೋಶಗಳು ಒಂದು ಹಂತದವರೆಗೆ ಮಾತ್ರ ಆಮ್ಲಜನಕದ ಕೊರತೆಗೆ ಹೊಂದಿಕೊಳ್ಳಬಲ್ಲವು. ಎತ್ತರದ ಪರ್ವತ ಪ್ರದೇಶಗಳಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ. ಆಗ ಜೀವಕೋಶಗಳು ಅನಿವಾರ್ಯವಾಗಿ ಆ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಆ ಹೊಂದಿಕೊಳ್ಳುವ ಹಾದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ರಕ್ತಕಣಗಳು ತಯಾರಾಗಿ ಅಗತ್ಯವಿರುವ ಆಮ್ಲಜನಕವನ್ನು ದೇಹದ ಎಲ್ಲಾ ಜೀವಕೋಶಗಳಿಗೆ ಪೂರೈಸುತ್ತವೆ. ಆಮ್ಲಜನಕ ಹೆಚ್ಚಾದರೂ ಜೀವಕೋಶಗಳು ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತವೆ. ಆ ಸಂವೇದನೆ ಮತ್ತು ಹೊಂದಾಣಿಕೆಯ ಹಿಂದಿರುವ ಮಾಲೆಕ್ಯೂಲಾರ್ ಹಂತದ ಕೋಶಾಣುಗಳ ಸಂಶೋಧನೆಗೆ 2019 ರ ವೈದ್ಯಕೀಯ ನೊಬೆಲ್ ಪ್ರಶಸ್ತಿ ಸಂದಿದೆ. ಜೀವಕೋಶಗಳಿಗೆ ಬೇಕಾಗಿರುವ ಆಮ್ಲಜನಕ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಶರೀರ ಕ್ರಿಯೆಗಳ ಸಂಶೋಧನೆಗಳು ಅತ್ಯಂತ ಸೋಜಿಗದ ಹಾಗೂ ಆಸಕ್ತಿದಾಯಕ ವಿಷಯಗಳಾಗಿವೆ. ಸಂಶೋಧನೆಯ ಇತಿಹಾಸದ ಮೈಲುಗಲ್ಲುಗಳತ್ತ ಒಂದು ಪಕ್ಷಿನೋಟ ಬೀರುವುದಾದರೆ ವಿಜ್ಞಾನಿಗಳು ಮನುಕುಲದ ಒಳಿತಿಗಾಗಿ ಶ್ರಮಿಸಿರುವ ಅಂಶಗಳು ದಟ್ಟವಾಗಿ ಗೋಚರಿಸುತ್ತವೆ.

ಒಂದು ಐತಿಹಾಸಿಕ ನೋಟ

ಗ್ರೀಕ್ ವೈದ್ಯನಾದ ಕ್ಲಾಡಿಯಸ್ ಗ್ಯಾಲೆನ್ ಅವರು ಕ್ರಿಸ್ತಶಕ 200 ರಲ್ಲಿ ಶರೀರದ ರಕ್ತಸಂಚಲನದಲ್ಲಿ ರಕ್ತವು ಶ್ವಾಸಕೋಶಕ್ಕೆ ಹೋಗಿ ನವಚೈತನ್ಯ (vital spirit) ವನ್ನು ಪಡೆದು ಬರುತ್ತಿದೆ ಎಂದನು. ಆ ನಂತರ, ಸಾವಿರಾರು ವರ್ಷಗಳಾದ ಮೇಲೆ ಆ ನವಚೈತನ್ಯವೆಂದರೆ ರಕ್ತವು ಆಮ್ಲಜನಕೀಕರಣ ಗೊಳ್ಳುವುದು ಎಂದು ಅರಿಯಲಾಯಿತು. ಯಾಕೆಂದರೆ, ಗ್ಯಾಲೆನ್ ಕಾಲದಲ್ಲಿ ಮಾನವಕುಲಕ್ಕೆ ಆಮ್ಲಜನಕದ ಅಸ್ತಿತ್ವದ ಕುರಿತು ಅರಿವಿರಲಿಲ್ಲ.

ಫ್ರಾನ್ಸಿನ ವಿಜ್ಞಾನಿಯಾದ ಆಂಟಾಯ್ನಿ ಲೇವಾಯ್ಸಿಯರ್ ಅವರು 1778 ರಲ್ಲಿ ಪ್ರಾಣಿ ಗಳಲ್ಲಿ ಉಸಿರಾಟದ ನಿಜ ಚಿತ್ರಣವನ್ನು ವಿಷದ ಪಡಿಸಿದರು. ಗಾಳಿಯಲ್ಲಿನ ಆಕ್ಸಿಜೆನ್ (ಆಗ ಬಳಸಿದ ಸ್ಪೆಲ್ಲಿಂಗ್ oxygine ಆಗಿತ್ತು) ಅನ್ನು ಜೀವಕೋಶಗಳು ಬಳಸಿಕೊಂಡು ಕಾರ್ಬೋನಿಕ್ ಆಸಿಡ್ ಅನಿಲ (carbonic acid gas)  ತಯಾರಾಗುತ್ತದೆ ಎಂದರು. ಈ ಅನಿಲವನ್ನು ನಂತರ ಕಾರ್ಬನ್ ಡೈ ಆಕ್ಸೈಡ್ ಎಂದು ಕರೆಯಲಾಯಿತು.

ಅಮೆರಿಕದ ಜೀವರಸಾಯನ ವಿಜ್ಞಾನಿಯಾದ ಯೂಜಿನ್ ಗೋಲ್ಡ್ ವಾಸರ್ ಎಂಬವರು 1977ರಲ್ಲಿ ಮೊತ್ತ ಮೊದಲಿಗೆ ಕುರಿಗಳ ಮೂತ್ರಕೋಶದಲ್ಲಿ ಎರಿತ್ರೋ ಪೊಯೆಟಿನ್ (erythropoietin, EPO) ಎಂಬ ಹಾರ್ಮೋ ನನ್ನು ಶುದ್ಧೀಕರಣ ಮಾಡಿ ತೋರಿಸಿದರು. ಎರಿತ್ರೋ ಪೊಯೆಟಿನ್  ಕೆಂಪು ರಕ್ತಕಣಗಳ ಉತ್ಪಾದನೆಗೆ ಅಗತ್ಯವಾಗಿ ಬೇಕು. ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಯಿತೆಂದರೆ, ಮೂತ್ರಕೋಶವು ತಕ್ಷಣ ಅದನ್ನು ಗ್ರಹಿಸಿ ಎರಿತ್ರೋಪೊಯೆಟಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಎರಿತ್ರೋಪೊಯೆಟಿನ್ ಮೂಳೆಮಜ್ಜೆಯ ಮೇಲೆ ತನ್ನ ಕ್ರಿಯೆ ಬೀರಿ ಹೆಚ್ಚು ಕೆಂಪು ರಕ್ತಕಣಗಳನ್ನು ಉತ್ಪಾದಿಸುತ್ತದೆ. ಆಗ ಹೆಚ್ಚಿನ ಸಂಖ್ಯೆಯ ಕೆಂಪುರಕ್ತಕಣಗಳಲ್ಲಿರುವ ಹೀಮೊಗ್ಲೋಬಿನ್ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕವನ್ನು ದೇಹದ ಎಲ್ಲಾ ಜೀವಕೋಶಗಳಿಗೆ ಪೂರೈಸುತ್ತವೆ. ಕೆಂಪು ರಕ್ತಕಣಗಳ ಉತ್ಪಾದನೆಯಲ್ಲಿ ಯಾವುದೋ ಒಂದು ವಸ್ತುವಿನ ಪಾತ್ರವಿರಬಹುದೆಂದು 1900 ರಿಂದ ಸುಮಾರು ಎಂಟು ದಶಕಗಳ ಕಾಲ ಹಲವಾರು ವಿಜ್ಞಾನಿಗಳು ಎರಿತ್ರೋಪೊಯೆಟಿನ್ ಹುಡುಕಾಟದಲ್ಲಿ ತಮ್ಮ ಬೆವರು ಹರಿಸಿದರು. ಆ ವಸ್ತುವಿಗೆ ಎರಿತ್ರೋಪೊಯೆಟಿನ್ ಎಂಬ ಹೆಸರಿಟ್ಟಿದ್ದು ಅದನ್ನು ಕಂಡು ಹಿಡಿದಾದ ಮೇಲೆಯೇ, 1948ರ ಸುಮಾರಿಗೆ. ಅಮೆರಿಕದ ಟೆನ್ನೆಸ್ಸೀ ವಿಶ್ವವಿದ್ಯಾನಿಲಯದ ಜೇಮ್ಸ್ ಫಿಷರ್ ಎಂಬವರು ಕೂಡ ಹಲವು ದಶಕಗಳ ಕಾಲ ಎರಿತ್ರೋ ಪೊಯೆಟಿನ್ ಚೋಧಕದ ಸಂಶೋಧನೆಯಲ್ಲಿ ತೊಡಗಿಸಿಕೊಂಡವರೇ. ಹಾಗೆ ಅವರು ತಮ್ಮ ಪ್ರಯೋಗಾಲಯದಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾಗ ನೀವು ಇಲ್ಲದ ವಸ್ತುವಿನ ಬಗ್ಗೆ ಸಂಶೋಧನೆ ಮಾಡುತ್ತಿದ್ದೀರಾ? ದೆವ್ವದ ಹುಡುಕಾಟದಲ್ಲಿದ್ದೀರಾ? ಎಂದು ಕೆಲ ಸಂಶೋಧಕರು ಛೇಡಿಸಿದ್ದರಂತೆ. ಆದರೆ, ಕೆಂಪುರಕ್ತಕಣಗಳ ಉತ್ಪಾದನೆಯಲ್ಲಿ ತೊಡಗುವ ಎರಿತ್ರೋಪೊಯೆಟಿನ್ ವಸ್ತುವನ್ನು ಕಂಡುಹಿಡಿದು, ಮರುಸಂಯೋಜನೆ ಡಿಎನ್‌ಎ ತಂತ್ರಜ್ಞಾನ (recombinant DNA technology)  ಬಳಸಿ ಎರಿತ್ರೋಪೊಯೆಟಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ, ಔಷಧವಾಗಿ ಬಳಸಿ, ಮಿಲಿಯನ್‌ಗಟ್ಟಲೆ ರೋಗಿಗಳನ್ನು ಕಾಪಾಡಲಾಗಿದೆ.

ಇಂದು ಮಾರುಕಟ್ಟೆಯಲ್ಲಿ ಎರಿತ್ರೋಪೊಯೆಟಿನ್ ಎಂಬ ಜೀವರಕ್ಷಕ ಔಷಧ ಲಭ್ಯವಿದೆ. ಇದು ತೀವ್ರತರಹದ ರಕ್ತಹೀನತೆ ಮತ್ತು ಮೂತ್ರಕೋಶದ ವೈಫಲ್ಯದ ರೋಗಿಗಳಿಗೆ ರಾಮಬಾಣದಂತಹ ಔಷಧ. ಅದು ಕೆಂಪು ರಕ್ತಕಣಗಳ ಉತ್ಪಾದನೆಗೆ ಬೇಕು. ರಕ್ತದಲ್ಲಿ ಆಮ್ಲಜನಕದ ಕೊರತೆ ಯಾದರೆ, ಹೃದಯದ ಮೇಲಿರುವ ಕೆರೋಟಿಡ್ ರಕ್ತನಾಳದ ವಿಭಜನೆಯ ಸ್ಥಳದಲ್ಲಿರುವ ಕೆರೋಟಿಡ್ ಆಕೃತಿಗಳು ಆ ಸಂದರ್ಭವನ್ನು ಗ್ರಹಿಸಿ ಹೃದಯದ ಬಡಿತವನ್ನು ಹೆಚ್ಚು ಮಾಡಿ, ಉಸಿರಾಟ ವನ್ನು ವೇಗೋತ್ಕರ್ಣಗೊಳಿಸಿ, ಹೆಚ್ಚಿನ ಪ್ರಮಾಣದ ಆಮ್ಲಜನಕವು ಜೀವ ಕೋಶಗಳಿಗೆ ಪೂರೈಕೆಯಾಗುವಂತೆ ಮಾಡುತ್ತವೆ. ಆ ಕ್ರಿಯೆಯಲ್ಲಿ ನರವ್ಯೆಹವು ಭಾಗಿಯಾಗುವುದರಿಂದ ಅದನ್ನು ಕೀಮೋರಿಸೆಪ್ಟಾರ್ ರಿಫ್ಲೆಕ್ಸ್ (chemorecptor reflex, ರಸಗ್ರಾಹಕ ಪ್ರತಿವರ್ತನ) ಎಂದು ಕರೆಯಲಾಗಿದೆ. ಗಾಳಿಯ ಸರಾಗ ಚಲನೆಯಿಲ್ಲದ, ಆಮ್ಲಜನಕ ಕೊರತೆಯ ಕೊಠಡಿಯಲ್ಲಿ ಕುಳಿತರೆ ಹೃದಯ ಬಡಿತವು ಹೆಚ್ಚಾಗಿ ಗಾಬರಿಯಾಗುವುದೂ ಉಂಟು. ಉಸಿರು ಕಟ್ಟಿದಂತಾಗುವುದೂ ನಿಜವೇ. ಆದರೆ, ಅದು ಶರೀರಕ್ರಿಯೆಯ ಹೊಂದಾಣಿಕೆ ಮಾತ್ರ. ಇವಿಷ್ಟೂ ಆಮ್ಲಜನಕ - ಕೆಂಪುರಕ್ತಕಣ - ಎರಿತ್ರೋ ಪೊಯೆಟಿನ್ ಕುರಿತ ಸಂಶೋಧನಾ ಇತಿಹಾಸ. ಸಂಶೋಧನೆಗೆ ಆದಿಯಿದ್ದರೂ ಅಂತ್ಯವಿರುವುದಿಲ್ಲ. ಅಂತಹ ಹಾದಿಯಲ್ಲಿ ಕ್ರಮಿಸಿ ಜೀವ ಕೋಶಗಳಲ್ಲಿನ ಕೋಶಾಣುಗಳು ಆಮ್ಲಜನಕದ ಕೊರತೆಗೆ ಹೇಗೆ ಪ್ರತಿಕ್ರಿಯಿಸುತ್ತವೆ, ಸಂವೇದಿಸು ತ್ತವೆ ಎಂಬುದನ್ನು ಇನ್ನಷ್ಟು ಮನವರಿಕೆ ಮಾಡಿಕೊಟ್ಟ ಮೂವರು ವಿಜ್ಞಾನಿಗಳಿಗೆ 2019ರ ವೈದ್ಯಕೀಯ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ಪ್ರಾಣಿಗಳಲ್ಲಿ ಜೀವಕೋಶಗಳ ಚಯಾಪಚಯ (ಮೆಟಬಾಲಿಸಂ) ಕ್ರಿಯೆಗೆ ಆಮ್ಲಜನಕವು ಅತ್ಯವಶ್ಯಕ. ಪ್ರತಿ ಜೀವಕೋಶದ ಮೈಟೊಕಾಂಡ್ರಿಯಾದಲ್ಲಿ ಚಯಾಪಚಯ ಕ್ರಿಯೆ ನಡೆಯುವಾಗ ಪೋಷಕಾಂಶಗಳು ಬಳಕೆಯಾಗಿ ಅವು ಶಕ್ತಿಯಾಗಿ ಬದಲಾವಣೆಯಾಗಲು ಆಮ್ಲಜನಕವು ಬೇಕೇಬೇಕು. ಆದರೆ, ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ಜೀವಕೋಶಗಳು ಹೇಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತವೆ? ಅಂತಹ ಹೊಂದಿಕೊಳ್ಳುವ ಅನ್ಯೋನ್ಯತೆಗೆ ಕಾರಣವಾಗಿರುವ ಕೋಶಾಣುಗಳು ಯಾವುವು? ಎಂಬ ಸಂಶೋಧನೆಗೆ 2019ರ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ವಿಜ್ಞಾನದ ನೊಬೆಲ್ ಪ್ರಶಸ್ತಿ ಕೊಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)