varthabharthi


ವೈವಿಧ್ಯ

ರಾಜ್ಯಗಳನ್ನು ಸಾಲದ ಪ್ರಪಾತಕ್ಕೆ ತಳ್ಳುತ್ತಿರುವ ಮೋದಿಯವರ ಉದಯ್ ಯೋಜನೆ

ವಾರ್ತಾ ಭಾರತಿ : 13 Oct, 2019
ಹಿಮಾಂಶು ಶರ್ಮಾ

ಡಿಸ್ಕಾಮ್‌ಗಳ ಭವಿಷ್ಯದಲ್ಲಿ ಅನುಭವಿಸಲಿರುವ ನಷ್ಟಗಳಲ್ಲಿ ಇನ್ನಷ್ಟು ದೊಡ್ಡ ಪಾಲನ್ನು ರಾಜ್ಯ ಸರಕಾರಗಳೇ ವಹಿಸಿಕೊಳ್ಳಬೇಕಾಗಿರುವುದರಿಂದ ಇದು ರಾಜ್ಯ ಸರಕಾರಗಳ ಆರ್ಥಿಕ ಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಉದಯ್ ಯೋಜನೆಯ ಅಡಿಯಲ್ಲಿ 2018-19ರಲ್ಲಿ ರಾಜ್ಯ ಸರಕಾರಗಳು 2,726 ಕೋಟಿ ರೂಪಾಯಿಯಷ್ಟು ಮೊತ್ತ ನೀಡಬೇಕಾಗಿತ್ತು. ಆದರೆ ಇದರ ಅರ್ಧ ಪಾಲಿಗಿಂತಲೂ ಕಡಿಮೆ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದಿದೆ, ಆರ್‌ಬಿಐ ವರದಿ.

 ಭಾರತದ ವಿದ್ಯುತ್ ವಿತರಣಾ ಕಂಪೆನಿಗಳಿಗೆ ನೆರವಾಗುವ ಉದ್ದೇಶದಿಂದ 2015ರಲ್ಲಿ ಆರಂಭಿಸಲಾದ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ‘ಉಜ್ವಲ್ ಡಿಸ್ಕಾಮ್ ಅಶ್ಯೂರನ್ಸ್ ಯೋಜನಾ’ ಅಥವಾ ಉದಯ್ ಯೋಜನೆ ಹಲವು ರಾಜ್ಯಗಳ ಪಾಲಿಗೆ ಹೊರಲಾರದ ಹಣಕಾಸಿನ ಹೊರೆಯಾಗಿದೆ. 2020ರ ವಿತ್ತ ವರ್ಷದ ಅಂತ್ಯದ ವೇಳೆಗೆ ಭಾರತದ ರಾಜ್ಯಗಳ ಒಟ್ಟು ಋಣಭಾರ ರೂ. 52.58 ಲಕ್ಷ ಕೋಟಿಗಳಾಗಬಹುದೆಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 11.5 ಹೆಚ್ಚಳವಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ಒಂದು ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ರಾಜ್ಯಗಳ ಸಾಲದ ಹೊರೆ ಅವುಗಳ ಒಟ್ಟು ಜಿಡಿಪಿಯ ಶೇ. 25ರಷ್ಟಾಗಿದೆ. ಇದಕ್ಕೆ ಮುಖ್ಯ ಕಾರಣ ಸಾಲದಲ್ಲಿ ಮುಳುಗಿರುವ ವಿದ್ಯುತ್ ವಿತರಣಾ ಕಂಪೆನಿಗಳು (ಡಿಸ್ಟ್ರಿಬ್ಯೂಷನ್ ಕಂಪೆನಿಗಳು) ಅಥವಾ ಡಿಸ್‌ಕ್ಯಾಮ್ಸ್ ಗಳು.

ಕೇರ್ ರೇಟಿಂಗ್ಸ್ ಎಂಬ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವೀಸ್‌ರವರ ಪ್ರಕಾರ ಮೀಟರಿಂಗ್, ನಷ್ಟಗಳಲ್ಲಿ ಕಡಿತ, ಟ್ಯಾರಿಫ್‌ಗಳಲ್ಲಿ ಏರಿಕೆ ಇತ್ಯಾದಿಗಳ ಹೊರೆಯನ್ನು, (ಉದಯ್ ಯೋಜನೆಯ ಪ್ರಕಾರ) ಡಿಸ್‌ಕ್ಯಾಮ್ಸ್‌ಗಳ ಆರ್ಥಿಕ ಹೊರೆಯನ್ನು ರಾಜ್ಯಗಳೇ ಹೊರಬೇಕಾಯಿತು. ರಾಜ್ಯಗಳ ಋಣಭಾರವನ್ನು ಅವುಗಳ ಜಿಡಿಪಿಯ ಶೇ.20ಕ್ಕೆ ಇಳಿಸಬೇಕೆಂದು ರಿಸರ್ವ್ ಬ್ಯಾಂಕ್ ಹೇಳಿದೆಯಾದರೂ ಇದು ಸುಲಭ ಸಾಧ್ಯವಲ್ಲ.

2015-16 ಮತ್ತು 2016-17ರಲ್ಲಿ ವಿದ್ಯುತ್ ರಂಗದಲ್ಲಿ ರಾಜ್ಯಗಳ ಒಟ್ಟು ವೆಚ್ಚ ಗಣನೀಯ ಏರಿಕೆ ಕಂಡಿತು. (ಉದಯ್) ಉಜ್ವಲ್ ಡಿಸ್ಕಾಮ್ ಅಶ್ಯುರನ್ಸ್ ಯೋಜನೆಯ ಆರಂಭದ ಬಳಿಕ ಕಂಡುಬಂದ ಏರಿಕೆ ಇದು. ಉದಯ್ ಯೋಜನೆಯ ಪ್ರಕಾರ, ರಾಜ್ಯ ಸರಕಾರಗಳು ಡಿಸ್ಕಾಮ್‌ಗಳ ಬಾಕಿ ಆರ್ಥಿಕ ಹೊರೆಯ (ಲಯಾಬಿಲಿಟೀಸ್) ಶೇ. 75 ಭಾಗವನ್ನು ಅನುದಾನ ಅಥವಾ ಈಕ್ವಿಟಿಯ ರೂಪದಲ್ಲಿ ತಾವೇ ವಹಿಸಿಕೊಂಡವು. ‘‘ಆರ್‌ಬಿಐ ದಾಖಲೆ ಪ್ರಕಾರ, ಈ ಉದಯ್ ಬಾಂಡ್‌ಗಳ ಮೇಲೆ 1.97 ಲಕ್ಷ ಕೋಟಿ ರೂಪಾಯಿ ಪಾವತಿ ಬಾಕಿ ಇದೆ ಎನ್ನುತ್ತಾರೆ’’ ಸಬ್ನವೀಸ್. ಯೋಜನೆಯು ಡಿಸ್ಕಾಮ್‌ಗಳನ್ನು ಸಾಲದ ಹೊರೆಯಿಂದ ಮುಕ್ತಗೊಳಿಸಿಲ್ಲ.

ರಾಜ್ಯಗಳ ವಿದ್ಯುತ್ ಡಿಸ್ಕಾಮ್‌ಗಳ ಋಣಭಾರ ಮಾರ್ಚ್ 2020ರ ವೇಳೆಗೆ 2.6 ಲಕ್ಷ ಕೋಟಿ ರೂಪಾಯಿಗೆ ಏರಲಿದೆ. ಮುಂಬೈಯ ಒಂದು ರೇಟಿಂಗ್ಸ್ ಏಜೆನ್ಸಿಯಾಗಿರುವ ಕ್ರಿಸಿಲ್ ರೇಟಿಂಗ್ಸ್ ದೇಶದ 15 ರಾಜ್ಯಗಳಲ್ಲಿ ವಿತರಣಾ ಕಂಪೆನಿ (ಡಿಸ್ಕಾಮ್ಸ್)ಗಳ ವಿಶ್ಲೇಷಣೆ ನಡೆಸಿದೆ. ಇದು ಹೇಳುವಂತೆ, ಈ ರಂಗದ ಒಟ್ಟುನಷ್ಟಗಳಲ್ಲಿ 15 ರಾಜ್ಯಗಳ ಪಾಲು ಶೇ. 80ರಷ್ಟು ಇದೆ.

ಡಿಸ್ಕಾಮ್‌ಗಳ ಭವಿಷ್ಯದಲ್ಲಿ ಅನುಭವಿಸಲಿರುವ ನಷ್ಟಗಳಲ್ಲಿ ಇನ್ನಷ್ಟು ದೊಡ್ಡ ಪಾಲನ್ನು ರಾಜ್ಯ ಸರಕಾರಗಳೇ ವಹಿಸಿಕೊಳ್ಳಬೇಕಾಗಿರುವುದರಿಂದ ಇದು ರಾಜ್ಯ ಸರಕಾರಗಳ ಆರ್ಥಿಕ ಕಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಉದಯ್ ಯೋಜನೆಯ ಅಡಿಯಲ್ಲಿ 2018-19ರಲ್ಲಿ ರಾಜ್ಯ ಸರಕಾರಗಳು 2,726 ಕೋಟಿ ರೂಪಾಯಿಯಷ್ಟು ಮೊತ್ತ ನೀಡಬೇಕಾಗಿತ್ತು. ಆದರೆ ಇದರ ಅರ್ಧ ಪಾಲಿಗಿಂತಲೂ ಕಡಿಮೆ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದಿದೆ, ಆರ್‌ಬಿಐ ವರದಿ.

ಡಿಸ್ಕಾಮ್‌ಗಳಿಗೆ ನೀಡುವ ಅನುದಾನದಿಂದ ಬರುವ ಆದಾಯದಲ್ಲಿ ಕಡಿತವಾದಾಗ ಡಿಸ್ಕಾಮ್ ನಷ್ಟಗಳಲ್ಲಿ ಹೆಚ್ಚಾಗುತ್ತದೆ. ಇದು ವಿಶೇಷವಾಗಿ ಉತ್ತರ ಪ್ರದೇಶ, ತೆಲಂಗಾಣ, ರಾಜಸ್ಥಾನ, ಜಾರ್ಖಂಡ್ ಮತ್ತು ಆಂಧ್ರಪ್ರದೇಶಗಳಲ್ಲಿ ಕಂಡುಬರಲಿದೆ ಎಂದಿದೆ ಆರ್‌ಬಿಐ ವರದಿ. ಇವು ಭಾರತದಲ್ಲಿ ಜಿಡಿಪಿಯ ಅತ್ಯಂತ ಹೆಚ್ಚು ಭಾಗದಷ್ಟು ಸಾಲದ ಹೊರೆ ಇರುವ ರಾಜ್ಯಗಳು.

ಆರ್‌ಬಿಐ ವರದಿಯ ಶಿಫಾರಸಿನಂತೆ, ನಷ್ಟ ಅನುಭವಿಸಿತ್ತಿರುವ ಡಿಸ್ಕಾಮ್‌ಗಳನ್ನು ನಷ್ಟದಿಂದ ಪಾರು ಮಾಡಬೇಕಾದರೆ ರಾಜ್ಯ ಸರಕಾರಗಳು ಕಾಲ ಬಂಧಿತ ವಾದ ಒಂದು ಕ್ರಮದಲ್ಲಿ, ಆದಾಯದಲ್ಲಿ ಆಗುತ್ತಿರುವ ನಷ್ಟವನ್ನು, ಆದಾಯದ ಅಂತರಗಳನ್ನು ತಪ್ಪಿಸಬೇಕು. ‘‘ರಾಜ್ಯಗಳ ಬಜೆಟ್‌ಗಳಲ್ಲಿ ಡಿಸ್ಕಾಮ್‌ಗಳ ಲಯಾಬಿಲಿಟಿ ಗಳನ್ನು ಪಾರದರ್ಶಕವಾಗಿ ಬಹಿರಂಗಪಡಿಸುವುದು ಸರಕಾರಗಳು ಈ ನಿಟ್ಟಿನಲ್ಲಿ ಇಡಬಹುದಾದ ಮೊದಲ ಹೆಜ್ಜೆ. ಈ ಹಣಕಾಸುಗಳನ್ನು ಮಧ್ಯಮ ಅವಧಿಯ ಒಂದು ಆರ್ಥಿಕ/ಹಣಕಾಸು (ಫಿಸ್ಕಲ್) ರಿಸ್ಕ್ ಎಂದು ಪರಿಗಣಿಸಬೇಕು ಮತ್ತು ಇವುಗಳನ್ನು ಸೂಕ್ತವಾದ ಮಟ್ಟದಲ್ಲೇ ಉಳಿಸಿಕೊಳ್ಳಬೇಕು’’ ಎಂದು ಆರ್‌ಬಿಐ ವರದಿ ಹೇಳುತ್ತದೆ.

ಜೊತೆಗೆ, ಮೂಲ ಚೌಕಟ್ಟಿನಲ್ಲೂ ಸುಧಾರಣೆಗಳಾಗಬೇಕಾದ ಅಗತ್ಯವಿದೆ. ಉದಯ್ ಪೂರ್ವ ಮಟ್ಟಗಳಿಗೆ ಹೋಲಿಸಿದಾಗ, ತಾಂತ್ರಿಕ ಹಾಗೂ ವಾಣಿಜ್ಯ ನಷ್ಟಗಳಲ್ಲಿ 2018ರ ಅಂತ್ಯದಲ್ಲಿ ಕೇವಲ 400 ಬೇಸಿಕ್ ಪಾಯಿಂಟ್‌ಗಳ ಇಳಿಕೆ ಕಂಡು ಬಂತು. ಅದೇ ವೇಳೆ ವಾರ್ಷಿಕ ಟ್ಯಾರಿಫ್‌ಗಳಲ್ಲಿ ಏರಿಕೆಯಾಗಿದ್ದು ಅತ್ಯಲ್ಪ, ಶೇ. 30’’ ಎಂದು ಮೇ ತಿಂಗಳಲ್ಲಿ ಕ್ರಿಸಿಲ್ ರೇಟಿಂಗ್ಸ್ ಹೇಳಿತ್ತು. ನೂರು ಬೇಸಿಸ್ ಪಾಯಿಂಟ್‌ಗಳೆಂದರೆ ಒಂದು ಶೇಕಡಾ ಪಾಯಿಂಟ್.

2016ರಲ್ಲಿ ಬಹುತೇಕ ರಾಜ್ಯಗಳು ತಮ್ಮ ರಾಜ್ಯಗಳ ಡಿಸ್ಕಾಮ್‌ಗಳ ಸಾಲದ ಹೊರೆಯ ನಾಲ್ಕನೇ ಮೂರು ಪಾಲನ್ನು ಹೊರುವ ಸ್ಥಿತಿಯಲ್ಲಿದ್ದವು. ಆದರೆ ಅವುಗಳ ಹಣಕಾಸು ಪರಿಸ್ಥಿತಿಯಲ್ಲಾಗಿರುವ ಅವನತಿಯಿಂದಾಗಿ ಈಗ ಅವುಗಳ ಸ್ಥಿತಿ ಬಹಳ ಹದಗೆಟ್ಟಿದೆ ಎಂದು ಕ್ರಿಸಿಲ್ ರೇಟಿಂಗ್ಸ್ ಏಜೆನ್ಸಿ ಹೇಳಿದೆ.

ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)