varthabharthi


ಸಂಪಾದಕೀಯ

ದಲಿತ ದೌರ್ಜನ್ಯ ತಡೆ ಕಾಯ್ದೆ: ನ್ಯಾಯ ವ್ಯವಸ್ಥೆಗೆ ನ್ಯಾಯ

ವಾರ್ತಾ ಭಾರತಿ : 14 Oct, 2019

ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಸುಪ್ರೀಂ ಕೋರ್ಟು ಇತ್ತೀಚೆಗೆ ನೀಡಿರುವ ಆದೇಶ ದಲಿತರಿಗೆ ಮಾಡಿದ ಉಪಕಾರವಲ್ಲ. ಸ್ವತಃ ತನಗೆ ತಾನೇ ನೀಡಿದ ನ್ಯಾಯ. ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟ ನಿರ್ಧಾರದಿಂದ ಸುಪ್ರೀಂಕೋರ್ಟ್ ಹಿಂದೆ ಸರಿಯದೇ ಇದ್ದಿದ್ದರೆ, ನಮ್ಮ ನ್ಯಾಯವ್ಯವಸ್ಥೆಯ ಕುರಿತಂತೆ ಈ ದೇಶದ ದುರ್ಬಲ ವರ್ಗದ ಅಸಮಾಧಾನ ಶಾಶ್ವತವಾಗಿ ಉಳಿದು ಬಿಡುತ್ತಿತ್ತು.

 ಒಂದೆಡೆ ದೇಶಾದ್ಯಂತ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ತನಗೆ ಶಾಪದಂತೆ ಅಂಟಿಕೊಂಡಿರುವ ಜಾತಿಯ ಕಾರಣಕ್ಕಾಗಿ ಹುಟ್ಟಿನಿಂದಲೇ ದಲಿತರು ಶೋಷಣೆಗೊಳಗಾಗುತ್ತಿದ್ದಾರೆ. ಒಂದೆಡೆ ಮಲದ ಗುಂಡಿಗೆ ಬಿದ್ದು ಸಾಯುತ್ತಿದ್ದರೆ, ಇನ್ನೊಂದೆಡೆ ಬಯಲು ಶೌಚ ಮಾಡಿದ ಕಾರಣಕ್ಕಾಗಿ ಗುಂಪಿನಿಂದ ಥಳಿತಕ್ಕೊಳಗಾಗಿ ಸಾಯುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಮನಾರ್ಹ ಮಟ್ಟದಲ್ಲಿ ಹೆಚ್ಚಳವಾಗಿದೆ ಎನ್ನುವುದನ್ನು ವರದಿ ತಿಳಿಸುತ್ತದೆ. ಇಂತಹ ಸಂದರ್ಭದಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ನ್ಯಾಯ ವ್ಯವಸ್ಥೆ ಇನ್ನಷ್ಟು ಬಲಪಡಿಸಬೇಕಾಗಿತ್ತು. ದುರದೃಷ್ಟವಶಾತ್, ದಲಿತ ದೌರ್ಜನ್ಯ ಕಾಯ್ದೆ, ಇತರ ಸಮುದಾಯದ ಶೋಷಣೆಗಳಿಗೆ ಬಳಕೆಯಾಗುತ್ತಿದೆ ಎಂದು ನ್ಯಾಯಾಲಯ ಭಾವಿಸಿತು.

1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆಗೆ (ಪಿಒಎ) ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟು 2018ರಲ್ಲಿ ಒಂದು ಆದೇಶವನ್ನು ನೀಡಿತು. ಇದರಂತೆ, ಪಿಒಎ ಪ್ರಕರಣಗಳಲ್ಲಿ ಸರಕಾರಿ ನೌಕರರನ್ನು ಆರೋಪಿಗಳಾಗಿಸುವ ಮೊದಲು ಸರಕಾರದ ಪೂರ್ವನುಮತಿ ಅಗತ್ಯವಾಗಿತ್ತು ಮತ್ತು ಈ ಕಾಯ್ದೆಯಡಿ ಎಫ್‌ಐಆರ್ ಅನ್ನು ದಾಖಲು ಮಾಡುವ ಮೊದಲು ಡಿಎಸ್‌ಪಿ ಮಟ್ಟದ ಅಧಿಕಾರಿಯೊಬ್ಬರು ಪ್ರಕರಣದ ಪೂರ್ವತನಿಖೆ ಮಾಡುವುದು ಅಗತ್ಯ ಎಂದೂ ಆದೇಶಿಸಿತ್ತು. ನ್ಯಾಯಾಲಯ ಮೊತ್ತ ಮೊದಲು ಗಮನಿಸಬೇಕಾದುದು ಶೋಷಿತ ಸಮುದಾಯದ ಕುರಿತಂತೆ. ಈ ಕಾನೂನಿನ ಮೂಲಕ ಅವರ ಮೇಲಿನ ದೌರ್ಜನ್ಯ ನಿಂತಿದೆಯೇ ಎನ್ನುವುದರ ಬಗ್ಗೆ ಸಂಪೂರ್ಣ ವೌನವಾಗಿದ್ದ ನ್ಯಾಯಾಲಯ, ಈ ಕಾನೂನಿಂದ ಮೇಲ್ಜಾತಿಯ ಜನರಿಗೆ ಕಿರುಕುಳವಾಗುವುದನ್ನೇ ದೇಶದ ಸಮಸ್ಯೆಯಾಗಿ ಪರಿಗಣಿಸಿತು. ಈಗ ಇರುವ ಕಾನೂನೇ ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ವಿಫಲವಾಗಿರುವ ಬಗ್ಗೆ ಚಿಂತಿಸದ ನ್ಯಾಯಾಲಯ, ಕಾನೂನು ದುರುಪಯೋಗವಾದ ಒಂದೆರಡು ಪ್ರಕರಣಗಳನ್ನೇ ಮುಂದಿಟ್ಟು, ಅದರಲ್ಲಿ ಹಸ್ತಕ್ಷೇಪ ನಡೆಸಿತು. ಇದು ದಲಿತರ ಗಾಯಗಳಿಗೆ ನ್ಯಾಯವ್ಯವಸ್ಥೆಯೇ ಎಳೆದ ಬರೆಯಾಗಿತ್ತು. ಆದರೆ ಇದೀಗ ಆ ಆದೇಶವನ್ನು ಸುಪ್ರೀಂಕೋರ್ಟ್ ಹಿಂದೆಗೆದುಕೊಂಡಿದೆ. ಜೊತೆಗೆ, ಭಾರತದ ಉದ್ದಗಲಕ್ಕೂ ದಲಿತ ವರ್ಗಗಳ ಮೇಲೆ ದೌರ್ಜನ್ಯಗಳು ಮುಂದುವರಿದಿದೆಯೆಂಬುದನ್ನೂ ಮತ್ತು ಕ್ರಿಮಿನಲ್ ನ್ಯಾಯವಿಚಾರಣೆ ವ್ಯವಸ್ಥೆಯಲ್ಲಿನ ಸಾಂಸ್ಥಿಕ ವೈಫಲ್ಯದಿಂದಾಗಿಯೇ ಇಂತಹ ಪ್ರಕರಣಗಳಲ್ಲಿ ಶಿಕ್ಷಾ ಪ್ರಮಾಣವು ತೀರಾ ಕಡಿಮೆ ಇದೆಯೆಂಬುದನ್ನು ಸಹ ಅದು ಗುರುತಿಸಿದೆ ಮತ್ತು ಒಪ್ಪಿಕೊಂಡಿದೆ. ಹೀಗಾಗಿ ಈ ದೇಶದ ದಲಿತರನ್ನು ಮತ್ತು ಆದಿವಾಸಿಗಳನ್ನು ಸಬಲೀಕರಿಸುವ ರಕ್ಷಣಾತ್ಮಕ ಕ್ರಮಗಳು ಇನ್ನಷ್ಟು ಹೆಚ್ಚಾಗಬೇಕಿದೆಯೇ ವಿನಹ ಕಡಿಮೆಯಾಗಕೂಡದೆಂಬುದನ್ನೂ ಸಹ ಸುಪ್ರೀಂಕೋರ್ಟು ಹೇಳಿದೆ. ಹಿಂದಿನ ಮಹಾಜನ್ ಆದೇಶವನ್ನು ಇಬ್ಬರೂ ಸವರ್ಣೀಯರೇ ಇದ್ದ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವು ನೀಡಿದ್ದರೆ, ಈಗಿನ ಈ ಮಹಾಜನ್ ಪುನರಾವಲೋಕನ ಆದೇಶವನ್ನು ಒಬ್ಬ ದಲಿತ ನ್ಯಾಯಾಧೀಶರನ್ನು ಒಳಗೊಂಡಿದ್ದ ತ್ರಿಸದಸ್ಯ ಪೀಠವು ನೀಡಿದೆ ಎನ್ನುವುದೂ ಗಮನಾರ್ಹ. ಈ ಬದಲಾದ ಆದೇಶವನ್ನು ಕೊಟ್ಟ ತ್ರಿಸದಸ್ಯ ಪೀಠದಲ್ಲಿ ಸುಮಾರು ಹತ್ತು ವರ್ಷಗಳ ನಂತರ ಸುಪ್ರೀಂ ಕೋರ್ಟಿನ ಏಕೈಕ ದಲಿತ ನ್ಯಾಯಾಧೀಶರಾಗಿರುವ ಬಿ.ಆರ್. ಗವಾಯಿಯವರು ಇದ್ದರೂ ಅವರು ಸ್ವತಂತ್ರವಾಗಿ ತಮ್ಮ ಅಭಿಪ್ರಾಯವನ್ನು ದಾಖಲಿಸಿಲ್ಲ. ಬದಲಿಗೆ ಮೇಲ್ವರ್ಣೀಯ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರಾಗಿರುವ ಅರುಣ್ ಮಿಶ್ರಾ ಅವರು ಇಡೀ ಪೀಠದ ಪರವಾಗಿ ಆದೇಶ ನೀಡಿದರು ಎನ್ನುವ ವಿಪರ್ಯಾಸವನ್ನು ಕೂಡ ನಾವು ಗಮನಿಸಬೇಕಾಗಿದೆ.

ನ್ಯಾಯಾಲಯ ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುವ ಸಂದರ್ಭದಲ್ಲೂ, ಈ ತಿದ್ದುಪಡಿಯ ಸಂದರ್ಭದಲ್ಲೂ ಕೇಂದ್ರ ಸರಕಾರ ತನ್ನ ಪರಿಣಾಮ ಬೀರಿರುವುದನ್ನು ಅಲ್ಲಗಳೆಯುವಂತಿಲ್ಲ. ದಲಿತ ದೌರ್ಜನ್ಯ ಕಾಯ್ದೆಯ ಕುರಿತಂತೆ ಆರೆಸ್ಸೆಸ್ ಯಾವ ಧೋರಣೆಯನ್ನು ಹೊಂದಿದೆಯೋ ಅದನ್ನೇ ಈ ಹಿಂದೆ ನ್ಯಾಯಾಲಯ ಆದೇಶದ ಮೂಲಕ ವ್ಯಕ್ತಪಡಿಸಿತ್ತು. ದಲಿತರ ಪರವಾಗಿರುವ ಕಾನೂನು ಕಾಯ್ದೆಗಳ ಕುರಿತಂತೆ ಸರಕಾರ ಮತ್ತು ಆರೆಸ್ಸೆಸ್ ಸಮಾನ ಮನಸ್ಥಿತಿಯನ್ನು ಹೊಂದಿದೆ. ‘ಮೀಸಲಾತಿ ಚರ್ಚೆಯಾಗಬೇಕು’ ಎನ್ನುವುದನ್ನು ಇತ್ತೀಚೆಗೆ ಆರೆಸ್ಸೆಸ್ ಬಹಿರಂಗವಾಗಿ ಹೇಳಿತ್ತು. ಚರ್ಚೆಯ ಅಂತಿಮ ಉದ್ದೇಶ, ಮೀಸಲಾತಿಯನ್ನು ತೆಗೆದು ಹಾಕುವುದು. ದಲಿತ ದೌರ್ಜನ್ಯದಿಂದ ಮೇಲ್ಜಾತಿಯವರಿಗೆ ಕಿರುಕುಳವಾಗುತ್ತಿರುವುದರ ಬಗ್ಗೆ ಆರೆಸ್ಸೆಸ್‌ಗೆಇರುವ ಆಸಕ್ತಿ, ದಲಿತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಅದನ್ನು ತಡೆಯುವಲ್ಲಿ ಕಾನೂನಿನ ವೈಫಲ್ಯದ ಕುರಿತಂತೆ ಇಲ್ಲ. ದಲಿತರ ಮೇಲೆ ನಡೆದ ಯಾವುದೇ ದೌರ್ಜನ್ಯಗಳನ್ನು ಆರೆಸ್ಸೆಸ್ ಖಂಡಿಸಿದ ಇತಿಹಾಸವೇ ಇಲ್ಲ. ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುವ ಸಂಚಿನ ಹಿಂದೆ ಆರೆಸ್ಸೆಸ್ ಚಿಂತನೆಗಳು ಕೆಲಸ ಮಾಡಿರುವುದು ಸ್ಪಷ್ಟ. ಆದರೆ ದೇಶಾದ್ಯಂತ ಈ ತೀರ್ಪಿನ ವಿರುದ್ಧ ದಲಿತರು ಬಂಡೆದ್ದರು. ಉತ್ತರಭಾರತ ಬಂದ್ ಆಚರಿಸಿತು. ದಲಿತರು ಬೀದಿಗಿಳಿದಾಗ, ಬರೇ ಪೊಲೀಸರು ಮಾತ್ರವಲ್ಲ, ಸಂಘಪರಿವಾರದ ಮುಖಂಡರು ಕೂಡ ದಲಿತರ ಮೇಲೆ ಗುಂಡು ಹಾರಿಸಿದ್ದಾರೆ. ಹತ್ತಕ್ಕೂ ಅಧಿಕ ದಲಿತ ಕಾರ್ಯಕರ್ತರು ಚಳವಳಿಯಲ್ಲಿ ಮೃತಪಟ್ಟಿದ್ದಾರೆ ಮತ್ತು ಉತ್ತರ ಭಾರತದಲ್ಲಿ ದಲಿತರನ್ನು ಪುನರ್ ಸಂಘಟಿಸುವಲ್ಲಿ ಸುಪ್ರೀಂಕೋರ್ಟ್‌ನ ತೀರ್ಪು ಮಹತ್ವದ ಪಾತ್ರವಹಿಸಿತು. ತಕ್ಷಣ ಸರಕಾರ ಎಲ್ಲ ತಪ್ಪನ್ನು ಸುಪ್ರೀಂಕೋರ್ಟ್‌ನ ತಲೆಗೆ ಹಾಕಿ, ಈ ಆದೇಶದ ವಿರುದ್ಧ ಹೇಳಿಕೆಯನ್ನು ನೀಡಿತು. ಕಾಯ್ದೆಯನ್ನು ಮರುಸ್ಥಾಪಿಸುವ ಕುರಿತಂತೆಯೂ ಭರವಸೆ ನೀಡಿತು. ಇದೀಗ ನ್ಯಾಯಾಲಯ ತನ್ನ ತಪ್ಪುಗಳನ್ನು ತಿದ್ದಿಕೊಂಡಿದೆ. ಆದರೆ ಇಷ್ಟಕ್ಕೇ ನೊಂದ ದಲಿತರಿಗೆ ನ್ಯಾಯ ಸಿಗುತ್ತದೆ ಎಂದು ಹೇಳುವಂತಿಲ್ಲ. ಮುಖ್ಯವಾಗಿ ಈ ಮೊದಲು ತಾನು ನೀಡಿದ ತೀರ್ಪನ್ನು ತಿದ್ದುವ ಮೂಲಕ ನ್ಯಾಯಾಲಯವೇ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ನ್ಯಾಯಾಲಯದ ತಪ್ಪನ್ನು ವಿರೋಧಿಸಿ ದೇಶಾದ್ಯಂತ ಸಾವಿರಾರು ಜನ ದಲಿತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಆ ಸಂದರ್ಭದಲ್ಲಿ ನೂರಾರು ದಲಿತ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಅಂತಹ ಕಾರ್ಯಕರ್ತರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂದೆಗೆಯುವುದು ಸರಕಾರದ ಕರ್ತವ್ಯ. ಅಷ್ಟೇ ಅಲ್ಲ, ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಮತ್ತು ಮೇಲ್ಜಾತಿಯ ಗುಂಡಿಗೆ ಬಲಿಯಾದ ದಲಿತರಿಗೆ ಸೂಕ್ತ ಪರಿಹಾರವನ್ನು ನೀಡುವ ಅಗತ್ಯವೂ ಇದೆ. ಅಲ್ಲದೆ, ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆಯಾದರೂ, ಈ ಕಾಯ್ದೆ ದಲಿತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದೆ. ಇದರ ಕಾರಣಗಳನ್ನು ಹುಡುಕುವುದು ಮತ್ತು ಲೋಪಗಳನ್ನು ಸರಿಪಡಿಸುವುದು ಸರಕಾರದ ಹೊಣೆಯಾಗಿದೆ. ಹಾಗಾದಲ್ಲಿ ಮಾತ್ರ, ದಲಿತರಿಗೆ ಪೂರ್ಣ ನ್ಯಾಯ ದಕ್ಕಿದಂತಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)