varthabharthi


ನಿಮ್ಮ ಅಂಕಣ

‘ಪವಿತ್ರ’ ಆರ್ಥಿಕತೆ ಜಾರಿಯಾಗಲಿ ಎಂಬ ಪ್ರಹಸನವೂ ಪ್ರಸನ್ನ ಮೂಡಿಸಲು ಹೊರಟಿರುವ ಗೊಂದಲಗಳೂ...

ವಾರ್ತಾ ಭಾರತಿ : 15 Oct, 2019
ನಂದಕುಮಾರ್ ಕೆ. ಎನ್.

ಇವರು ಮಾಡುತ್ತಿರುವ ಈ ಕಾರ್ಯಗಳು ವಾಸ್ತವದಲ್ಲಿ ಜನಸಾಮಾನ್ಯರ ಉಪಯೋಗಕ್ಕಂತೂ ಬರುವುದಿಲ್ಲ. ಆದರೆ ಆಳುವಂತಹ ಶಕ್ತಿಗಳಿಗೆ ಸಹಾಯವನ್ನಂತೂ ಮಾಡುತ್ತದೆ. ಅದೂ ಇಂದಿನ ಡೋಲಾಯಮಾನ ಹಾಗೂ ಸಂದಿಗ್ಧ ಆರ್ಥಿಕ ಸಾಮಾಜಿಕ ಪರಿಸ್ಥಿತಿಯಲ್ಲಿ ಕೋಮು, ಜಾತಿ, ಮತೀಯ ಕಲಹಗಳ ಜೊತೆಗೆ ಇಂತಹ ಚಟುವಟಿಕೆಗಳು ಕೂಡ ಆಳುವ ಶಕ್ತಿಗಳಿಗೆ ಅಗತ್ಯ.

ರಂಗಭೂಮಿ ಹಿನ್ನೆಲೆಯ ಸಾಗರ ತಾಲೂಕಿನ ಹುಣಸೇಕೊಪ್ಪದ ಪ್ರಸನ್ನ ‘ಪವಿತ್ರ’ ಆರ್ಥಿಕತೆ ಜಾರಿಯಾಗಲಿ, ದುಡಿಮೆ ಗೆಲ್ಲಿಸಿ, ಪರಿಸರ ಗೆಲ್ಲಿಸಿ, ಎಂದು ಇತ್ತೀಚೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಅದು ಸಾಕಷ್ಟು ಮಾಧ್ಯಮ ಪ್ರಚಾರವನ್ನು ಪಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಿಗೂ ಗ್ರಾಸವಾಗಿತ್ತು. ಪ್ರಸನ್ನರ ನಿಲುವುಗಳು ಹಾಗೂ ಮಾಡುತ್ತಿರುವ ಸತ್ಯಾಗ್ರಹದ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ಕಂಡು ಬಂದಿದ್ದವು. ಅವರ ನಿಲುವುಗಳ ಕುರಿತು ವಿಮರ್ಶೆಗಳು ಸಾಕಷ್ಟು ನಡೆದವು. ರಾಜ್ಯ ಸರಕಾರ ಅವರ ವಿಚಾರಗಳನ್ನು ಜಾರಿ ಮಾಡುವ ಬಗ್ಗೆ ಯೋಚಿಸುವು ದಾಗಿಯೂ, ಆ ಬಗ್ಗೆ ಚರ್ಚಿಸಲು ಕೇಂದ್ರ ಸರಕಾರದೊಂದಿಗೆ ಮಾತುಕತೆಗೆ ಪ್ರಸನ್ನರಿಗೆ ವ್ಯವಸ್ಥೆ ಮಾಡಿಕೊಡುವುದಾಗಿಯೂ ಭರವಸೆ ಕೊಟ್ಟಿದ್ದರಿಂದ ಸತ್ಯಾಗ್ರಹವನ್ನು ವಾಪಾಸು ಪಡೆಯಲಾಗಿದೆ ಎಂದು ಹೇಳಲಾಗಿದೆ. ಮೂರು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳುವಿನಲ್ಲಿ ‘‘ಯಂತ್ರ ನಾಗರಿಕತೆ ನಶಿಸಲಿ, ಯಂತ್ರ ನಾಗರಿಕತೆಯನ್ನು ನಿಗ್ರಹಿಸೋಣ, ಶ್ರಮಸಹಿತ ಸರಳ ಬದುಕನ್ನು ಘೋಷಿಸೋಣ, ಯಂತ್ರಗಳನ್ನು ಕಳಚೋಣ ಬನ್ನಿ’’ ಇತ್ಯಾದಿ ಘೋಷಣೆಗಳೊಂದಿಗೆ ಪ್ರಸನ್ನ ಬದನವಾಳು ಸತ್ಯಾಗ್ರಹವನ್ನು ಹಾಗೂ ಸಮಾವೇಶವನ್ನು ಮಾಡಿದ್ದು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಬದನವಾಳು ಗ್ರಾಮದಲ್ಲಿ ಖಾದಿ ಹಾಗೂ ಗ್ರಾಮೋದ್ಯೋಗ ಕೇಂದ್ರವಿದೆ. 1925ರಲ್ಲಿ ಗಾಂಧಿವಾದಿ ತಗಡೂರು ರಾಮಚಂದ್ರರಾಯರು ಅದನ್ನು ಆರಂಭಿಸಿದ್ದರು. 1932ರಲ್ಲಿ ಮೋಹನ ದಾಸ ಕರಮಚಂದ ಗಾಂಧಿ ಇಲ್ಲಿಗೆ ಬೇಟಿ ನೀಡಿದ್ದರು. ಅದೇ ಸ್ಥಳವನ್ನು ಪ್ರಸನ್ನ ತಮ್ಮ ಸತ್ಯಾಗ್ರಹಗಳ ಆರಂಭ ಸ್ಥಳವಾಗಿ ಆರಿಸಿಕೊಂಡಿದ್ದರು. ಎರಡೂವರೆ ದಶಕಗಳ ಹಿಂದೆ ಅದೇ ಬದನವಾಳು ಜಾತೀಯ ಕಿರಾತಕತೆಯ ಕಗ್ಗೊಲೆಗಳಿಗಾಗಿ ದೇಶಾದ್ಯಂತ ಸುದ್ದಿ ಕೂಡ ಮಾಡಿತ್ತು.

ಬದನವಾಳು ಸತ್ಯಾಗ್ರಹ ಯಾರ ವಿರುದ್ಧವೂ ಅಲ್ಲ, ಸರಕಾರದ ಮುಂದೆ ಯಾವುದೇ ಬೇಡಿಕೆಗಳನ್ನೂ ಇಡುವುದಿಲ್ಲ, ಕೇವಲ ಜನರಲ್ಲಿ ಅರಿವು ಮೂಡಿಸಲು ಮಾತ್ರ ಇವುಗಳನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಸನ್ನರೇ ಘೋಷಿಸಿಕೊಂಡಿದ್ದರು.

ನಂತರ ಅವರು ಕೆಲವು ವಿಚಾರ ಸಂಕಿರಣ, ಸತ್ಯಾಗ್ರಹ, ಚಳವಳಿಗಳೆಂಬ ಹತ್ತಾರು ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ.

ಪ್ರಸನ್ನರ ನಿಲುವುಗಳು ಬಹಳ ಗೊಂದಲಗಳನ್ನು ಮೂಡಿಸುವಂತಹವು ಗಳಾಗಿವೆ. ಅವರು ಹೇಳುತ್ತಿರುವ ವಿಚಾರಗಳು ಸಮಕಾಲೀನ ಕಾಲಘಟ್ಟದ ಅವಶ್ಯಕತೆ ಹಾಗೂ ಸಂಕೀರ್ಣತೆಗಳನ್ನು ಎದುರುಗೊಳ್ಳದೆ ಪಲಾಯನ ಮಾಡುತ್ತವೆ. ಜಾರಿಗೆ ಬಾರದಂತಹ ಆದರ್ಶಗಳನ್ನು ಹೇಳುತ್ತಾ ನೇಕಾರರು ಗುಡಿ ಕೈಗಾರಿಕೆಗಳ ಜನರೂ ಸೇರಿದಂತೆ ಜನಸಾಮಾನ್ಯರನ್ನು ಒಳಗೊಳಿಸಿಕೊಳ್ಳಲಾಗದ ಘೋಷಣೆಗಳನ್ನು ರೂಪಿಸಿ ಅಡ್ಡಗೋಡೆಯ ಮೇಲೆ ದೀಪ ಇಡುವಂತಹ ರೀತಿಯಲ್ಲಿ ಹೋರಾಟವೆಂದು ಹೇಳಿಕೊಳ್ಳುವ ಚಟುವಟಿಕೆ ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಅವರದು ಏಕವ್ಯಕ್ತಿ ಕೇಂದ್ರಿತ ಚಟುವಟಿಕೆಗಳಾಗಿವೆ.

ಅವರು ಮಾಡುತ್ತಿರುವ ‘ಯಂತ್ರ ನಾಗರಿಕತೆ’ಯ ವಿರೋಧ, ‘ಪವಿತ್ರ ಆರ್ಥಿಕತೆ’ ಜಾರಿಗಾಗಿ, ದುಡಿಮೆ ಗೆಲ್ಲಿಸಿ, ಪರಿಸರ ಗೆಲ್ಲಿಸಿ, ಎಂದೆಲ್ಲಾ ಇರುವ ಹೋರಾಟಗಳು ಯಾರನ್ನೂ ಗುರಿ ಮಾಡುವುದಿಲ್ಲ. ಜನಸಾಮಾನ್ಯರ ಶ್ರಮವನ್ನು ಕಬಳಿಸುತ್ತಿರುವ ಕಾರ್ಪೊರೇಟ್ ಮತ್ತವರ ಬೆಂಬಲಿಗರ ದುರಾಸೆಗೆ ಬಲಿಪಶುವಾಗುತ್ತಾ ಬಂದಿರುವ ಉದ್ಯೋಗ, ಪರಿಸರ, ಗುಡಿಕೈಗಾರಿಕೆ, ಜನಸಾಮಾನ್ಯರ ಬದುಕುಗಳ ಕುರಿತು ಜೋಡಿಸಿಕೊಂಡು ಪ್ರಸನ್ನರ ದನಿ ಕಾಣುವುದಿಲ್ಲ. ಇಂತಹ ಅವಸ್ಥೆಯ ಕಾರಣಕರ್ತ ಶಕ್ತಿಗಳ ಬಗ್ಗೆ ಪ್ರಸನ್ನರ ಮಾತುಗಳು ಹೊರಳಿದ್ದಾಗಲೀ ಘೋಷಣೆಗಳು ಮೊಳಗಿದ್ದಾಗಲೀ ಅವರ ಈ ಚಟುವಟಿಕೆಗಳಲ್ಲಿ ಕಾಣಿಸುವುದಿಲ್ಲ. ಹಾಗಾದರೆ ಯಾರು ಅವರು ಹೇಳುವ ಪವಿತ್ರ ಆರ್ಥಿಕತೆಯನ್ನು ಜಾರಿಮಾಡಬೇಕು? ಯಾರು ಯಂತ್ರ ನಾಗರಿಕತೆಯ ಅವಲಂಬನೆಯನ್ನು ನಿಲ್ಲಿಸಬೇಕು.? ಅಂದರೆ ಕೇವಲ ತಮ್ಮ ಆಶಯ ಇಲ್ಲವೇ ಬಯಕೆಗಳು ಮಾತ್ರ. ಸರಕಾರ ಮತ್ತಿತರ ಆಳುತ್ತಿರುವ ಶಕ್ತಿಗಳ ಯಂತ್ರಾಂಗಗಳ ಮುಂದೆ ಇಡುತ್ತಿರುವ ಹಕ್ಕೊತ್ತಾಯವಾಗಲೀ ಬೇಡಿಕೆಯಾಗಲೀ ಅಲ್ಲ. ಮೇಲ್ನೋಟಕ್ಕೆ ಅವರು ಹಮ್ಮಿಕೊಳ್ಳುವ ಚಟುವಟಿಕೆಗಳು ಯಾರನ್ನೂ ವಿರೋಧಿಸದಂತೆ ಕಾಣುತ್ತವೆ. ಆದರೆ ವಾಸ್ತವದಲ್ಲಿ ಜನಸಾಮಾನ್ಯರ ವಿರುದ್ಧವೇ ಆಗುತ್ತದೆ. ಯಾಕೆಂದರೆ ನೇಕಾರರು ಗುಡಿಕೈಗಾರಿಕೆಯ ಜನಸಾಮಾನ್ಯರ ಸಮಸ್ಯೆಗಳು ಪರಿಹಾರವಾಗಬೇಕೆನ್ನುವ ನಿಟ್ಟಿನ ಹೋರಾಟ ಅವರದಲ್ಲ. ಅಂತಹ ಸ್ಪಷ್ಟ ವಿಚಾರಗಳನ್ನು ಮುಂದಿಟ್ಟುಕೊಂಡ ಕಾರ್ಯಕ್ರಮಗಳು ಅವರಲ್ಲಿ ಇಲ್ಲ. ಅವರ ಹೋರಾಟದ ಗುರಿ ಯಾರೂ ಅಲ್ಲ. ಕೇವಲ ಆಶಯಗಳ ಅದೂ ಜಾರಿಯಾಗಲು ಸಾಧ್ಯವಾಗದ ಒಣ ಆಶಯಗಳನ್ನು ಮುಂದಿಟ್ಟು ಪ್ರಸನ್ನ ಸಾಕಷ್ಟು ಚಟುವಟಿಕೆ ಮಾಡುತ್ತಿದ್ದಾರೆ. ರೋಚಕತೆ ರಮ್ಯತೆಗಳನ್ನು ಸರಕು ಮಾಡಿಕೊಂಡು ಹೋರಾಟದ ಅಂಗಳಕ್ಕೆ ಗಾಂಧಿವಾದದ ಹೆಸರಲ್ಲಿ ಇಳಿದಿದ್ದಾರೆ. ಹುಸಿತನ ಹಾಗೂ ಭ್ರಮೆ ಮೂಡಿಸುತ್ತಾ ದಿಕ್ಕು ತಪ್ಪಿಸುವ ಕಾರ್ಯ ಮಾತ್ರ ಇಂತಹ ಹೋರಾಟಗಳಿಂದ ಸಾಧ್ಯವಾಗುತ್ತದೆ. ಪ್ರಸನ್ನ ಸೌದೆಯಲ್ಲೇ ಅಡುಗೆ ಮಾಡಿ ಎಂದು ಸೌದೆ ಒಲೆ ಉರುಬುತ್ತಾ ಕೂತು ಫೋಟೊಗೆ ಫೋಸು ಕೊಡುವುದು, ಹಗ್ಗದ ಮಂಚವನ್ನೇ ಬಳಸಿ ಎಂದು ಬೋಧನೆ ಮಾಡುತ್ತಾ ಹಗ್ಗದ ಮಂಚದಲ್ಲೇ ಕೂತು ಮಾಧ್ಯಮ ಸಂದರ್ಶನ ನೀಡುವುದು....ಇತ್ಯಾದಿಗಳನ್ನು ಬಹಳ ನಾಟಕೀಯವಾಗಿ ಮಾಡುತ್ತಾ ಬಂದಿದ್ದಾರೆ.

ಈ ದೇಶದ ಬಹುಸಂಖ್ಯಾತ ಜನರು ಸೌದೆ ಒಲೆ ಹಾಗೂ ಹಗ್ಗದ ಮಂಚವನ್ನು ಬಳಸುವುದು ಬಡತನ ಹಾಗೂ ಹಿಂದುಳಿದಿರುವಿಕೆಯ ಕಾರಣದಿಂದ, ಇತರ ಮೂಲಗಳು ಹಾಗೂ ವಸ್ತುಗಳು ಅವರ ಕೈಗೆ ಎಟುಕದಂತೆ ಮಾಡಿಟ್ಟಿರುವುದರಿಂದ ಎನ್ನುವುದು ಪ್ರಸನ್ನರಿಗೆ ತಿಳಿಯಲಾರದ ವಿಚಾರವೇನಲ್ಲ. ಆದರೆ ಅವುಗಳನ್ನೇ ತಮ್ಮ ಟ್ರಂಪ್ ಕಾರ್ಡ್ ಆಗಿ ಬಳಸಲು ಪ್ರಸನ್ನ ಪ್ರಯತ್ನಿಸುತ್ತಿದ್ದಾರೆ.

ಇವರ ಹೋರಾಟ ಜನಸಾಮಾನ್ಯರನ್ನು ಅದರಲ್ಲೂ ಮಧ್ಯಮ ವರ್ಗವನ್ನು ದಿಕ್ಕು ತಪ್ಪಿಸುವ ಹೋರಾಟವಾಗಬಹುದು. ಆಳುವ ಶಕ್ತಿಗಳು ಮತ್ತವರ ಸರಕಾರಗಳು, ರಾಜಕಾರಣಿಗಳು ಇವರ ಹೋರಾಟಕ್ಕೆ ಮಾನ್ಯತೆ ಕೊಟ್ಟು ಪ್ರಚಾರವನ್ನೂ ಕೊಡಬಹುದು. ಜಾರಿ ಮಾಡಬೇಕಾದ ಒತ್ತಡ ಅವರ ಮೇಲೆ ಬೀಳದಿದ್ದಾಗ ಸಾಪೇಕ್ಷವಾಗಿ ಗಟ್ಟಿ ದನಿ ಎತ್ತಬಲ್ಲ ಮಧ್ಯಮ ವರ್ಗದ ದಿಕ್ಕು ತಪ್ಪಿಸುವ ಕಾರ್ಯ ಇಂತಹ ಹೋರಾಟಗಳಿಂದ ನಡೆಯುತ್ತಿರುವಾಗ ಸಹಜವಾಗಿ ಆ ಶಕ್ತಿಗಳಿಗೆ ಅನುಕೂಲ ತಾನೇ. ಬಾಯಿ ಮಾತಿನ ಬೆಂಬಲ, ಉಪಚಾರಗಳು, ಪ್ರಚಾರಗಳು ಅವರಿಗೆ ಮತ್ತಷ್ಟು ಅನುಕೂಲಗಳನ್ನೇ ಮಾಡಿಕೊಡುತ್ತದಲ್ಲವೆ.?

ನಾಗರಿಕತೆ ಬೆಳೆದದ್ದೇ ಮಾನವ ಹತ್ತು ಹಲವು ಉಪಕರಣಗಳು, ಯಂತ್ರಗಳನ್ನು ಕಂಡುಹಿಡಿದು ಬಳಸಲು ಶುರು ಮಾಡಿದ್ದರಿಂದ ತಾನೆ. ಯಂತ್ರ ನಾಗರಿಕತೆ ಬೇಡ ಅಂದರೆ ದೊಡ್ಡ ಗೊಂದಲದ ಪದವಲ್ಲವೇ. ದುಡಿಮೆ ಗೆಲ್ಲಿಸಿ, ಪರಿಸರ ಗೆಲ್ಲಿಸಿ ಎಂದು ಯಾರು ಮಾಡ ಬೇಕೆಂದು ಹೇಳುತ್ತಿರುವುದು? ಪರಿಸರವನ್ನು ಹಾಗೂ ಜನರ ಶ್ರಮವನ್ನು ಲೂಟಿ ಮಾಡುವವರು, ಅವರ ಜೊತೆಗೆ ನಿಂತು ರಕ್ಷಣೆ ನೀಡುವ ಆಡಳಿತ ವ್ಯವಸ್ಥೆಗೆ ತಾನೆ ಒತ್ತಾಯ ಮಾಡಬೇಕಿರುವುದು.

ಅದೇ ರೀತಿ ‘ಪವಿತ್ರ ಆರ್ಥಿಕತೆ’ ಜಾರಿಗಾಗಿ ಎಂದರೆ ಏನು ಪವಿತ್ರ? ಎಂತಹ ಪವಿತ್ರ.? ಪವಿತ್ರವೆಂದರೆ ಯಾವುದು? ಹೀಗೆಲ್ಲಾ ಹತ್ತಾರು ಪ್ರಶ್ನೆಗಳು, ಅನುಮಾನಗಳು ಮೂಡುವುದು ಸಹಜ.

ಆ ಪದ ಬಳಕೆಯೇ ದೊಡ್ಡ ಸಮಸ್ಯಾತ್ಮಕವಾಗಿದೆ. ಬ್ರಾಹ್ಮಣಿಕೆಯೂ ಸೇರಿದಂತೆ ಹಲವು ಅರ್ಥಗಳನ್ನು ಅದು ನೀಡುತ್ತದೆ. ಇಂತಹ ಪದಪುಂಜಗಳು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಒಗ್ಗಿಸಿಕೊಳ್ಳಬಹುದಾದ ಗುಣಗಳನ್ನು ಹೊಂದಿರುತ್ತವೆ. ಇಂದಿನ ಸ್ಥಿತಿಗಳಿಗೆ ಕಾರಣವಾದ ವ್ಯವಸ್ಥೆಯನ್ನು ಅದರ ನೇತಾರರನ್ನು ಪ್ರಶ್ನಿಸದ ರಮ್ಯವಾದ ಹೆಸರುಗಳನ್ನು ಕೊಟ್ಟುಕೊಂಡು ಮಾಡುತ್ತಿರುವ ಹೋರಾಟವೆಂಬ ಪ್ರಹಸನ ಪ್ರಸನ್ನದವರಾಗಿದೆ.

ಇವರು ಮಾಡುತ್ತಿರುವ ಈ ಕಾರ್ಯಗಳು ವಾಸ್ತವದಲ್ಲಿ ಜನಸಾಮಾನ್ಯರ ಉಪಯೋಗಕ್ಕಂತೂ ಬರುವುದಿಲ್ಲ. ಆದರೆ ಆಳುವಂತಹ ಶಕ್ತಿಗಳಿಗೆ ಸಹಾಯವನ್ನಂತೂ ಮಾಡುತ್ತದೆ. ಅದೂ ಇಂದಿನ ಡೋಲಾಯಮಾನ ಹಾಗೂ ಸಂದಿಗ್ಧ ಆರ್ಥಿಕ ಸಾಮಾಜಿಕ ಪರಿಸ್ಥಿತಿಯಲ್ಲಿ ಕೋಮು, ಜಾತಿ, ಮತೀಯ ಕಲಹಗಳ ಜೊತೆಗೆ ಇಂತಹ ಚಟುವಟಿಕೆಗಳು ಕೂಡ ಆಳುವ ಶಕ್ತಿಗಳಿಗೆ ಅಗತ್ಯ.

ಅಣ್ಣಾ ಹಝಾರೆ ಗಾಂಧಿ ಹೆಸರನ್ನೇ ಬಳಸಿ ಏನು ಮಾಡಿದರು ಎನ್ನುವುದನ್ನು ಈ ದೇಶ ನೋಡಿದೆಯಲ್ಲವೇ? ಅವರನ್ನು ಮುಂದಿಟ್ಟುಕೊಂಡು ಆಳುವಶಕ್ತಿಗಳು ದೇಶಾದ್ಯಂತ ಸೃಷ್ಟಿಸಿದ ಸಮೂಹ ಸನ್ನಿಯೇನು, ಅದರಿಂದ ಜನಸಾಮಾನ್ಯರಿಗೆ ಆದ ನಷ್ಟಗಳೇನು, ಆಳುವ ಶಕ್ತಿಗಳು ಪಡೆದ ಅನುಕೂಲಗಳೇನು ಎನ್ನುವುದು ಈಗ ಸಾಕಷ್ಟು ಜನರಿಗೆ ಅರ್ಥವಾಗಿರುವ ವಿಚಾರವಲ್ಲವೇ? ದೇಶಾದ್ಯಂತ ಭ್ರಷ್ಟಾಚಾರದಿಂದ ರೋಸಿ ಬಸವಳಿದು ಹೋಗಿದ್ದ ಒಂದು ದೊಡ್ಡ ಜನಸಂಖ್ಯೆಯನ್ನು ಭಾರೀ ಮಟ್ಟದಲ್ಲಿ ಕದಲುವಂತೆ ಮಾಡಿದ ಆ ಹೋರಾಟ ಜನಸಾಮಾನ್ಯರನ್ನು ಭ್ರಷ್ಟಾಚಾರದಿಂದ ಕನಿಷ್ಠ ಮಟ್ಟದಲ್ಲಾದರೂ ಮುಕ್ತರಾಗಿಸುವಂತಹ ಫಲಿತಾಂಶಗಳನ್ನು ನೀಡಲಿಲ್ಲ. ಬದಲಿಗೆ ಇದ್ದ ಭ್ರಷ್ಟಾಚಾರ ವಿರೋಧಿ ಯಂತ್ರಾಂಗಗಳೂ ಕೂಡ ಇಲ್ಲದಂತೆ ಮಾಡುವಲ್ಲಿ ಆಳುವ ಶಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಿತು. ಇಂತಹವುಗಳ ಬಗ್ಗೆ ಜನಸಾಮಾನ್ಯರು, ಸಮಾಜಮುಖಿ ಮನಸ್ಸುಗಳು ಬಹಳ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಇವರು ಮೂಡಿಸಲು ಪ್ರಯತ್ನಿಸುತ್ತಿರುವ ಗೊಂದಲಗಳಲ್ಲಿ ಕೊಚ್ಚಿಕೊಂಡು ಎಲ್ಲೆಲ್ಲೋ ಹೋಗಿ ಸೇರಬೇಕಾಗುತ್ತದೆ.

ಇಂದಿನ ಭಾರತದ ಮಧ್ಯಮವರ್ಗವೂ ಸೇರಿದಂತೆ ಜನಸಾಮಾನ್ಯರ ಅಗತ್ಯ, ಜಾಗತಿಕ ಕಾರ್ಪೊರೇಟ್‌ಗಳು ಮತ್ತವುಗಳ ಆಸ್ತಿವಂತ ಬೆಂಬಲಿಗರು ಹಾಗೂ ದಲ್ಲಾಳಿಗಳ ಹಿಡಿತದಿಂದ ದೇಶವನ್ನು ಬಿಡಿಸಿಕೊಳ್ಳುವುದು. ದೇಶದ ಆಸ್ತಿ ಸಂಪನ್ಮೂಲಗಳ ಮೇಲೆ ಜನಸಾಮಾನ್ಯರ ಸಮಾನ ಹಕ್ಕು ಸ್ಥಾಪನೆಗೊಳಿಸುವುದು.

ಯಾಕೆಂದರೆ ಜಾಗತಿಕ ಕಾರ್ಪೊರೇಟ್‌ಗಳು ಮತ್ತವುಗಳ ಬೆಂಬಲಿಗ ಶಕ್ತಿಗಳು ದೇಶದ ಸ್ವತಂತ್ರ ಹಾಗೂ ಸ್ವಾಯತ್ತ, ಸ್ವಯಂಪೂರ್ಣಅಭಿವೃದ್ಧಿಗಳಿಗೆ, ಕೃಷಿ ಅಭಿವೃದ್ಧಿ ಹಾಗೂ ವಿಕೇಂದ್ರೀಕೃತ ಕೈಗಾರಿಕೀಕರಣಗಳಿಗೆ, ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಸ್ಥಳೀಯ ಸಂಪನ್ಮೂಲಗಳ ಅಗತ್ಯಕ್ಕೆ ತಕ್ಕಷ್ಟು ಬಳಕೆ, ಸ್ವಯಂಪೂರ್ಣ ಹಾಗೂ ಸ್ವಾಯತ್ತ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ನಿರ್ಮಾಣ, ದೇಶಿಯ ಗುಡಿ ಹಾಗೂ ಕಲಾತ್ಮಕ ಕೈಗಾರಿಕೆಗಳ ರಕ್ಷಣೆ ಹಾಗೂ ಉತ್ತೇಜನ, ದೇಶಿಯ ಬಹುಸಂಖ್ಯಾತ ಜನಸಮುದಾಯಗಳ ಅನನ್ಯತೆ ಹಾಗೂ ಸಂಸ್ಕೃತಿಗಳ ರಕ್ಷಣೆ, ಬಹುಸಂಖ್ಯಾತ ಜನಸಮುದಾಯಗಳನ್ನೊಳಗೊ ಳ್ಳುವ ನೈಜ ಪ್ರಜಾತಾಂತ್ರೀಕರಣ ಮೊದಲಾದವುಗಳಿಗೆ ಪ್ರಧಾನ ಕಂಟಕರಾಗಿ ಬಹುಸಂಖ್ಯಾತ ಜನಸಾಮಾನ್ಯರ ಬದುಕುಗಳಿಗೆ ಮುಳುವಾಗಿದ್ದಾರೆ.

ಇವರ ಬಾಲಬಡುಕರಂತೆ ಕಾರ್ಯ ನಿರ್ವಹಿಸುತ್ತಿರುವ ದಲ್ಲಾಳಿಗಳು ಇನ್ನಿತರ ಶಕ್ತಿಗಳನ್ನು ಸರಿಯಾಗಿ ಗುರ್ತಿಸಿ ಅವರ ನಿಯಂತ್ರಣವನ್ನು ಎಲ್ಲಾ ರಂಗಗಳಲ್ಲಿ ಹೋಗಲಾಡಿಸಬೇಕು. ಆಗ ಮಾತ್ರ ನಮ್ಮ ಆರ್ಥಿಕತೆ ಹಾಗೂ ಸಾಮಾಜಿಕ ವ್ಯವಸ್ಥೆ ಸಂಯಮಶೀಲವೂ, ಮೇಲ್ಮುಖವಾಗಿ ಸ್ವಯಂಚಲನಶೀಲವೂ ಆಗಿ ಬಹುಸಂಖ್ಯಾತ ಜನಸಮುದಾಯಗಳನ್ನು ಒಳಗೊಳಿಸಿಕೊಂಡು ಸಾಗುವುದಕ್ಕೆ ಸಾಧ್ಯವಾಗುತ್ತದೆ. ಜನಸಾಮಾನ್ಯರ ಅದ್ಭುತ ಕ್ರಿಯಾಶೀಲತೆ ಹಾಗೂ ಕರ್ತೃತ್ವಶಕ್ತಿಗಳನ್ನು ಊಹಿಸಲಾಗದ ಮಟ್ಟದಲ್ಲಿ ಬಡಿದೆಬ್ಬಿಸಿ ಕೆಲಸಕ್ಕೆ ಹಚ್ಚುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಇದು ಕೃಷಿ, ಕೈಗಾರಿಕೆ ಸೇರಿದಂತೆ ಕಲೆ, ಸಾಹಿತ್ಯ ಮೊದಲಾದುವುಗಳನ್ನು ಒಳಗೊಳಿಸಿಕೊಳ್ಳುತ್ತಾ ಪರಸ್ಪರ ಪೂರಕ ಕೊಡುಗೆಗಳನ್ನು ನೀಡುತ್ತಾ ಒಂದಕ್ಕೊಂದು ಬೆಸದುಕೊಂಡಿರುವ ಯಂತ್ರದ ಚಕ್ರದಂತೆ ಕಾರ್ಯ ನಿರ್ವಹಿಸುತ್ತದೆ.

ಜಗತ್ತಿನ ಯಾವುದೇ ತಂತ್ರಜ್ಞಾನವನ್ನಾದರೂ ದೇಶಿಯ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವ, ದುಡಿಸಿಕೊಳ್ಳುವ ಶಕ್ತಿಯನ್ನು ಪಡೆಯಲು ಆಗ ಸಾಧ್ಯವಾಗುತ್ತದೆ. ದೇಶವನ್ನೇ ಮಾರಿ ಮಾಡುವ ಅಭಿವೃದ್ಧಿಯೆಂಬ ಪೊಳ್ಳುತನ, ಜಾಗತಿಕ ಕಾರ್ಪೊರೇಟ್ ತಂತ್ರಜ್ಞಾನ ಪಡೆಯುವ ಹೆಸರಿನಲ್ಲಿ ಕೆಲವೇ ಕಾರ್ಪೊರೇಟ್‌ಗಳು ಮತ್ತವರ ದಲ್ಲಾಳಿಗಳಿಗೆ ಮಾತ್ರ ಅಭಿವೃದ್ಧಿ. ಅಂದರೆ ಕೇವಲ ಶೇ. 1ರಷ್ಟಿರುವವರ ಅಭಿವೃದ್ಧ್ದಿ; ಉಳಿದ 99ರಷ್ಟಿರುವವರ ಶ್ರಮ ಹಾಗೂ ಬದುಕುಗಳ ಲೂಟಿ. ಇವೆಲ್ಲವನ್ನು ಮರೆಮಾಚಿ ಮಾಡುವ ಯಾವುದೇ ಚಟುವಟಿಕೆ ಹೋರಾಟಗಳು ಸೋಗಲಾಡಿತನ ಮಾತ್ರವಾಗುತ್ತದೆ.

ನೈಜ ದೇಶಪ್ರೇಮ ಹಾಗೂ ಸಾಮಾಜಿಕ ಕಾಳಜಿಯ ಮನಸ್ಸುಗಳು ಇಂತಹ ಈ ದೇಶದ ನಿಜವಾದ ಅಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಮಾಡುವ ಅಗತ್ಯ ಬಹಳವಿದೆ.. ಅದು ಖಂಡಿತ ನಮ್ಮ ದೇಶದ ಕೃಷಿ, ಗುಡಿ ಕೈಗಾರಿಕೆಗಳು ಹಾಗೂ ದೇಶಿಯ ತಂತ್ರಜ್ಞಾನಗಳ ರಕ್ಷಣೆ ಹಾಗೂ ಬೆಳವಣಿಗೆಗಳಿಗೆ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಸಾಮಾನ್ಯರನ್ನು ಚಿಂತನೆಗೆ ಹಚ್ಚುತ್ತದೆ. ಜನಸಾಮಾನ್ಯರ ಬದುಕುಗಳನ್ನು ರಕ್ಷಿಸಿ ಬೆಳೆಸುವಲ್ಲಿ ಕೊಡುಗೆ ನೀಡುತ್ತದೆ. ಮತಾಂಧತೆಯನ್ನು ತಡೆಯುವ ಶಕ್ತಿಯನ್ನು ಸಂಚಯಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮಿಂಚಂಚೆ: nandakumarnandana67@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)