varthabharthi


ಅನುಗಾಲ

ಉಂಡ ಜಾಣರು

ವಾರ್ತಾ ಭಾರತಿ : 17 Oct, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪ್ರಾಯಃ ಆದಷ್ಟು ಬೇಗ ಆಯ್ಕೆಮಾಡಬೇಕೆಂಬ ಒಂದು ಅವಸರದಲ್ಲಿ ಕೆಲವು ಹೆಸರುಗಳನ್ನು ರೇಷನ್ ಕಾರ್ಡ್, ಮತದಾರರ ಚೀಟಿ ಮುಂತಾದವುಗಳನ್ನು ನೋಡಿ ನಮೂದಿಸಿದಂತಿದೆ. ಇಂತಹ ಆಯ್ಕೆ/ನೇಮಕಾತಿಯಲ್ಲಿ ಯಾವ ಸಂಸ್ಥೆಗೆ ಯಾರು ಎಂಬ ತರ್ಕ ಬೇಕಾಗಿಲ್ಲ. ಫುಟ್‌ಬಾಲ್ ಆಟಗಾರರನ್ನು ಕ್ರಿಕೆಟ್ ತಂಡಕ್ಕೂ, ಬ್ಯಾಡ್‌ಮಿಂಟನ್ ಆಟಗಾರರನ್ನು ಹಾಕಿತಂಡಕ್ಕೂ ಆಯ್ಕೆಮಾಡಬಹುದು. ಅಥವಾ ಇವ್ಯಾವುದೂ ತಿಳಿಯದವರನ್ನೂ ಯಾವುದೇ ತಂಡಕ್ಕೂ ಆಯ್ಕೆ/ನೇಮಕ ಮಾಡಬಹುದು. ಅಂಕಿ-ಅಂಶಗಳ ತರ್ಕಶಾಸ್ತ್ರ ಹೀಗೆಯೇ. ಎಲ್ಲರಿಗೂ ದಕ್ಕುವ ಮತ್ತು ಯಾರಿಗೂ ದಕ್ಕದಿರುವ ವಿಚಾರಗಳು ಸಮಾನವಾಗಿರುತ್ತವೆ.

‘ಅನರ್ಹತೆ’ ಎಂಬುದೇ ಒಂದು ಅರ್ಹತೆಯಾದದ್ದು ಕರ್ನಾಟಕದ ಈ ವರ್ಷದ ರಾಜಕಾರಣದ ಒಂದು ವಿಶೇಷ ಬೆಳವಣಿಗೆ. ಅದರ ಕುರಿತು ಅಲ್ಲಿ ಇಲ್ಲಿ ಚರ್ಚೆಗಳಾದರೂ ಅವು ಪೂರ್ಣ ಪ್ರಮಾಣದ ವಿಚಾರಗಳಾಗಿ ಕಂಗೊಳಿಸಿರಲಿಲ್ಲ. ಆ ಕುರಿತು ಬರೆಯಬೇಕೆಂದಿದ್ದೆ. ಆದರೆ ಮನಸ್ಸು ಬರಲಿಲ್ಲ. ಈ ಬಾರಿ ರಾಜಕಾರಣವನ್ನು ಬದಿಗೊತ್ತಿ ಲಲಿತ ಪ್ರಬಂಧ ಅಥವಾ ವಿಡಂಬನೆ, ಹಾಸ್ಯ ಲೇಖನ ಈ ಯಾವುದಾದರೂ ಮಾದರಿಯನ್ನು ಕೈಗೆತ್ತಿಕೊಳ್ಳೋಣವೆಂದು ಯೋಚಿಸುತ್ತಿದ್ದೆ. ಅಷ್ಟರಲ್ಲೇ ಕರ್ನಾಟಕದ ವಿವಿಧ ಅಕಾಡಮಿಗಳು, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಘೋಷಣೆಯಾಯಿತು. ಈ ಮತ್ತು ಇಂತಹ ಇತ್ತೀಚೆಗಿನ ಬೆಳವಣಿಗೆಗಳು ಶುದ್ಧ ಮನರಂಜನೆ ನೀಡುತ್ತವೆಂಬ ಕಾರಣಕ್ಕೆ ಅವುಗಳಿಗಾಗಿ ಈ ಬಾರಿ ಈ ಅಂಕಣವನ್ನು ಮೀಸಲಿಟ್ಟಿದ್ದೇನೆ.

ಪ್ರಾಯಃ ಕಳೆದ ಕೆಲವು ತಿಂಗಳುಗಳ ಮಾಧ್ಯಮ ವರದಿಗಳನ್ನು ಗಮನಿಸುವವರು ‘ಅನರ್ಹ’ ಎಂಬ ಪದವು ಹೊಸದಾಗಿ ಜೀವತಳೆಯದಿದ್ದರೂ ಹೊಸ ಅರ್ಥವನ್ನು ಮೈಗೂಡಿಸಿಕೊಂಡು ನಮ್ಮ ಮುಂದಿರುವುದನ್ನು ಕಂಡಿರಬಹುದು. ಮಾಧ್ಯಮಗಳಲ್ಲಿ ಭಾಷೆ ವಿಕೃತಗೊಳ್ಳುವುದೇ ಹೆಚ್ಚಾದರೂ ಅವು ಮಾಡಬೇಕಾದ ಅನೇಕ ಕೆಲಸಗಳಲ್ಲಿ ಹೀಗೆ ಭಾಷೆಯನ್ನು ಹೊಸ ವಿನ್ಯಾಸಕ್ಕೊಳಪಡಿಸುವುದೂ ಒಂದು. ಆದ್ದರಿಂದ ‘ಅನರ್ಹರಿಗೆ ಟಿಕೆಟ್’ ಎಂಬ ವರದಿ ಮುಖಪುಟದಲ್ಲಿ ಬಂದರೆ ಜನರು ವಿಸ್ಮಯಗೊಳ್ಳುವುದಿಲ್ಲ. ಅವರಿಗೆ ತಕ್ಷಣ ಈ ‘ಅನರ್ಹ’ರು ಯಾರು ಎಂಬುದು ಗೊತ್ತಿರುತ್ತದೆ ಅಥವಾ ಗೊತ್ತಾಗುತ್ತದೆ. ಕೇವಲ 15-17 ರಾಜಕಾರಣಿಗಳು ಮತ್ತು ಅವರ ಪರ-ವಿರೋಧಿ ಬಣಗಳು ಜೊತೆಯಾಗಿ ಕನ್ನಡದ ಈ ಪದಕ್ಕೆ ಹೊಸ ಹೊಳಪನ್ನು ನೀಡಿದ್ದು ಕನ್ನಡದ ಸದ್ಯದ ಸಂದರ್ಭದಲ್ಲಿ ಭಾರೀ ಕೊಡುಗೆಯೆನ್ನಬಹುದು.

ಅನರ್ಹರಿಗೆ ಟಿಕೆಟ್ ಎಂಬ ಮಾತು ಕಳೆದ ಕೆಲವು ಚುನಾವಣೆಗಳಲ್ಲಿ ಸತ್ಯವೇ. ಅರ್ಹರು ಸಾಮಾನ್ಯವಾಗಿ ಟಿಕೆಟ್ ಪಡೆಯುವುದಿಲ್ಲ. ಒಂದು ರೀತಿಯಲ್ಲಿ ಚುನಾವಣೆಯೆಂದರೆ ಅನರ್ಹರ ಆಯ್ಕೆ ಮಾತ್ರವಲ್ಲ, ಯಾರು ಹೆಚ್ಚು ಅನರ್ಹರು ಎಂದು ಗುರುತಿಸಿ ಅವರನ್ನೇ ಆಯ್ಕೆ ಮಾಡುವ ಪ್ರಕ್ರಿಯೆಯೆನ್ನಬಹುದು. ಅನರ್ಹತೆಗೆ ಹಣದ ಬಲ, ಜನರ ಬಲ ಹೀಗೆ ಅನೇಕ ಬಲಗಳು ಬೇಕಾಗುತ್ತವೆ. ಈ ಅರ್ಥದಲ್ಲಿ ಚುನಾವಣೆಯೆಂದರೆ ಬಲಪಂಥ ಮತ್ತು ಬಲಪಂಥಾಹ್ವಾನ! (ನಮ್ಮ ಜನರು ಖುಷಿಪಡಬೇಕಾದ್ದು, ಸುಖಪಡಬೇಕಾದ್ದು ಇದಕ್ಕೇ: ಅನರ್ಹರನ್ನು ಆಯ್ಕೆಮಾಡುತ್ತೇವೆ-ನಮ್ಮ ಪ್ರತಿನಿಧಿಗಳಾಗಿ!)

ಭಾಷೆಗೆ ದಿನವೂ ಇಂತಹ ಅನೇಕ ಹೊಸ ಪದಗಳು ಸೇರಿಕೊಳ್ಳುತ್ತವೆ.

ಇದನ್ನು ಹೇಳಬೇಕಾಗಿ ಬಂದದ್ದು ಪ್ರಾಸಂಗಿಕವಾಗಿ.

ಈ ಬಾರಿ ಕರ್ನಾಟಕ ಸರಕಾರವು ಎಲ್ಲ ಅಕಾಡಮಿ, ಪ್ರಾಧಿಕಾರಗಳಿಗೆ ನಾಮಕರಣ ಮಾಡಿದೆ. ಸರಕಾರದ ನೇಮಕ ಇಲ್ಲವೇ ಆಯ್ಕೆ ಎಂಬುದೇ ಗೊಂದಲದ್ದು ಮತ್ತು ಸಂಶಯವನ್ನುಂಟುಮಾಡುವಂಥಾದ್ದು. ಅದಕ್ಕೆ ಯಾವುದೇ ನೀತಿ, ನಿಯಮಗಳಿದ್ದರೂ ಅವೆಲ್ಲವೂ ಆದೇಶ/ಪುಸ್ತಕದ ಪುಟಗಳಲ್ಲಿರುತ್ತವೆಯೇ ಹೊರತು ಕಾರ್ಯದಲ್ಲಿರುವುದಿಲ್ಲ. ಅಲ್ಲಿರುವುದು ದೊರೆಯ ಕೃಪೆ. ಇದು ಎಲ್ಲ ಸರಕಾರಗಳಡಿ ಕಳೆದ ಅನೇಕ ದಶಕಗಳಿಂದ ನಡೆದುಬಂದ ಬೆಳವಣಿಗೆ. ಆದರೂ ಅಕಾಡಮಿ, ಪ್ರಾಧಿಕಾರಗಳ ಆಯ್ಕೆ ಮಂತ್ರಿಮಂಡಳದಂತಹ ಆಯ್ಕೆಗಳಲ್ಲ. ಸಂಬಂಧಪಡದ ವ್ಯಕ್ತಿಗಳನ್ನು ಎಲ್ಲೂ ಕೂರಿಸುತ್ತಿರಲಿಲ್ಲ. ಸಚಿವ ಸಂಪುಟದ ಆಯ್ಕೆಗಳು ಹಾಗಲ್ಲ: ನಿನ್ನೆ ರಕ್ಷಣಾ ಸಚಿವರಾಗಿದ್ದವರು ಇಂದು ವಿತ್ತಸಚಿವರಾಗುತ್ತಾರೆ. ವೈದ್ಯರು ಕಾನೂನು ಸಚಿವರಾಗಿಯೂ ವಕೀಲರು ಆರೋಗ್ಯ ಸಚಿವರಾಗಿಯೂ ನೇಮಕಗೊಳ್ಳುತ್ತಾರೆ. ಅನಕ್ಷರಸ್ಥರು ಮಾನವ ಸಂಪನ್ಮೂಲ ಸಚಿವರಾಗುತ್ತಾರೆ. ನಾಲ್ಕು ಕಾಲಿನ ಖಾಲಿ ಕುರ್ಚಿಗೆ ಎರಡು ಕಾಲಿನ ಜೀವ ತುಂಬಿಸಬೇಕು, ಮತ್ತು ಈ ಜೀವಗಳು ವ್ಯವಹಾರತಜ್ಞರಾಗಿರಬೇಕು ಅಥವಾ ಪಕ್ಷನಿಷ್ಠರಾಗಿರಬೇಕು, ಅಷ್ಟೇ.

ಕರ್ನಾಟಕ ಸರಕಾರ ಸಾಹಿತ್ಯ, ಕಲೆ, ಭಾಷೆ ಹೀಗೆ ವಿವಿಧ ಪ್ರಕಾರಗಳ ಅಕಾಡಮಿಗಳನ್ನು, ಪ್ರಾಧಿಕಾರಗಳನ್ನು ರಚಿಸಿದೆ. ಇವುಗಳಲ್ಲಿ ಆಯಾಯ ಪ್ರಕಾರಗಳ ಬೆಳವಣಿಗೆಗಾಗಿ ಹುಟ್ಟಿದ ಸಂಸ್ಥೆಗಳೆಷ್ಟು ಮತ್ತು ರಾಜಕೀಯ ಕಾರಣಗಳಿಗಾಗಿ ಹುಟ್ಟಿದ ಸಂಸ್ಥೆಗಳೆಷ್ಟು ಎಂಬುದನ್ನು ಯಾರಾದರೂ ಸಂಶೋಧನೆ ಮಾಡಿದರೆ ಅದು ಒಳ್ಳೆಯ ಕೊಡುಗೆಯಾಗಬಹುದು. ಆದರೆ ಇವುಗಳಿಗೆ ನೇಮಕಮಾಡುವಾಗ ರಾಜಕೀಯವಷ್ಟೇ ಕೆಲಸಮಾಡುತ್ತಿರಲಿಲ್ಲ. ಏಕೆಂದರೆ ಆ ಸಂಸ್ಥೆಗೊಂದು ಸಾರ್ವಜನಿಕ ಮತ್ತು ಕಾಲದೇಶ ಸಾಂದರ್ಭಿಕ ಪ್ರಾತಿನಿಧ್ಯ ದೊರಕಿಸಿಕೊಡುವ ಹೊಣೆಯನ್ನು ಸರಕಾರ ಲಜ್ಜಾಪೂರ್ವಕವಾಗಿಯಾದರೂ ಒಪ್ಪಿಕೊಳ್ಳಬೇಕಿತ್ತು. ಆದ್ದರಿಂದ ನಮ್ಮೆಲ್ಲ ಸೃಜನಶೀಲ ಅವಕಾಶವಾದದ ನಡುವೆಯೂ ಇವು ಒಂದು ಕನಿಷ್ಠ 35 ಅಂಕಗಳ ತೇರ್ಗಡೆಯ ಮಾನವನ್ನಾದರೂ ಉಳಿಸಿಕೊಂಡು ಹೋಗುತ್ತಿದ್ದವು. ಅಧ್ಯಕ್ಷರು, ಸದಸ್ಯರು ಕನ್ನಡವನ್ನು, ಕರ್ನಾಟಕವನ್ನೋದುವವರಿಗೆ, ಕೇಳುವವರಿಗೆ ಸ್ವಲ್ಪಮಟ್ಟಿಗಾದರೂ ಪರಿಚಿತರಾಗಿರುತ್ತಿದ್ದರು. ಖ್ಯಾತಿಯೆಂದರೆ ಕೆಲವು ಬಾರಿ ಕುಖ್ಯಾತಿಯೆಂದೂ ಅರ್ಥವಾಗುತ್ತದೆ. ಅಂತಹ ಕುಖ್ಯಾತಿಗಳೂ ಇಂತಹ ಸಂಸ್ಥೆಗಳಲ್ಲಿದ್ದೇ ತಮ್ಮ ಅರ್ಧಾಯುಷ್ಯವನ್ನು ಕಳೆದದ್ದಿದೆ. ನಮಗೆ ಗೊತ್ತಿರುವ ಕೆಲವು ಸಾಹಿತಿಗಳಾದರೂ ಒಮ್ಮೆ ಈ ಅಕಾಡಮಿ, ಇನ್ನೊಮ್ಮೆ ಆ ಪ್ರಾಧಿಕಾರ, ಮತ್ತೊಮ್ಮೆ ವಿಶ್ವವಿದ್ಯಾಲಯದ ಕುಲಪತಿತ್ವ ಹೀಗೆ ನೆಲವನ್ನು ಮುಟ್ಟದೆಯೇ ಮರದಿಂದ ಮರಕ್ಕೆ ಹಾರಿದ್ದಿದೆ. ಇವರಲ್ಲನೇಕರು ತಮ್ಮ ಸ್ಥಾನಕ್ಕಿಂತಲೂ ಹೆಚ್ಚಾಗಿ ವಿಧಾನಸೌಧದ ಮೂರನೇ ಮಹಡಿಯತ್ತಲೇ ತಮ್ಮ ನಿಷ್ಠೆಯನ್ನಿಟ್ಟ ವಿಚಾರ ಪುಣ್ಯಕೋಟಿಗಳಂತಿರುವ ಜನಕೋಟಿಗೆ ಗೊತ್ತಿತ್ತು. ಆದರೂ ಅವರನ್ನು ನಾವು-ಅಂದರೆ ನಾನು ಪ್ರತಿನಿಧಿಸುವ ಮತ್ತು ಪ್ರತಿನಿಧಿಸದೇ ಇರಬಹುದಾದ ಬಹುಪಾಲು ಕನ್ನಡಿಗರು- ಒಪ್ಪಿಕೊಂಡಿದ್ದೇವೆ ಇಲ್ಲವೇ ತಾಳಿಕೊಂಡಿದ್ದೇವೆ ಅಥವಾ ಕ್ಷಮಿಸಿದ್ದೇವೆ. ಪ್ರಾಧ್ಯಾಪಕರನೇಕರು ಹೀಗೆ ಸಾರ್ವಜನಿಕ ಸೇವೆ, ಸಂಶೋಧನೆ, ಶಿಬಿರ, ಪ್ರವಾಸ, ಉಪನ್ಯಾಸ ಮತ್ತು ಇಂತಹ ಸ್ಥಾನಾಕ್ರಮಣ ಇವುಗಳಲ್ಲಿ ಮಗ್ನರಾಗಿ ತಮ್ಮ ಸೇವಾವಧಿಯಲ್ಲಿ ಪಾಠಮಾಡದೆಯೇ ನಿವೃತ್ತರಾದದ್ದೂ ಇರಬಹುದು. (ಉದ್ಯೋಗವನ್ನು ಸೇವೆಯೆಂದು ಪರಿಗಣಿಸುವುದು ಈ ದೇಶದ ಮಹಾನ್ ಹಾಸ್ಯ/ವ್ಯಂಗ್ಯಗಳಲ್ಲೊಂದು!)

ಕೆಲವು ಸಂಸ್ಥೆಗಳ ಆಯ್ಕೆಗಳ ಬಗ್ಗೆ ಮಾತನಾಡದಿರುವುದು ಒಳ್ಳೆಯದು. ಏಕೆಂದರೆ ಅವುಗಳಲ್ಲಿ ಪೂರ್ಣ ಪ್ರಮಾಣದ ಆಯ್ಕೆಗೆ ಬೇಕಷ್ಟು ಪ್ರತಿಭೆಗಳೂ ಇಲ್ಲ, ವ್ಯಕ್ತಿಗಳೂ ಇಲ್ಲ. ಅವಿನ್ನೂ ಅರುಣೋದಯದಲ್ಲೇ ಇವೆ. ಹಾಗೆಂದು ಒಮ್ಮೆ ಹುಟ್ಟಿದ ಜೀವಗಳನ್ನು ಸಾಯಿಸುವುದು ಸಾಧ್ಯವಿಲ್ಲ; ಅದು ಸುಲಭ ಸಾಧ್ಯವೂ ಅಲ್ಲ. (ರಾಜಕೀಯ ಮನುಷ್ಯ ಜೀವನದ ಎಲ್ಲ ಆಯಾಮಗಳಲ್ಲಿ ಕೆಲಸಮಾಡುವುದೆಂದರೆ ಹೀಗೆ!) ಆದ್ದರಿಂದ ಇರುವುದರಲ್ಲೇ ಹಾಗೂ ಹೀಗೂ ತೇಪೆ ಹಚ್ಚಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸರಕಾರಕ್ಕಿದೆ. ಭಾಷೆ, ಸಾಹಿತ್ಯ ಇವುಗಳು ಒಂದೊಂದು ಜಾತಿಗೆ ಸೀಮಿತವಾದ ಸಂಸ್ಥೆಗಳೂ ಇವೆ. ಇವುಗಳಿಗಿರುವ ಲಾಭವೆಂದರೆ ಇತರ ವಿಶಾಲ ಸಂಸ್ಥೆಗಳಾದ ಸಾಹಿತ್ಯ/ಲಲಿತಕಲಾ/ಸಂಗೀತ/ನಾಟಕ ಅಕಾಡಮಿಗಳಿಗಿರುವ ಸವಲತ್ತುಗಳೊಂದಿಗಿನ ಸಮಾನತೆ. ಉದಾಹರಣೆಗೆ ಈ (ಸಾಹಿತ್ಯ/ಲಲಿತಕಲಾ/ಸಂಗೀತ/ನಾಟಕ) ಅಕಾಡಮಿಗಳ ಅವಕಾಶವು ಆರು ಕೋಟಿ (ಹಾಗೆಂದುಕೊಳ್ಳಬಹುದು) ಕನ್ನಡಿಗರ ಪಾಲಾದರೆ ಇತರ ಅಕಾಡಮಿಗಳಲ್ಲಿ ಅವಕಾಶ ಕೆಲವೇ ಸಾವಿರ ಮಂದಿಗಿರುತ್ತದೆ. ಇದರಲ್ಲಿರುವವರು ತಮ್ಮ ಅಕಾಡಮಿಗಳ ಜೊತೆಗೆ ಸಾಮಾನ್ಯ ವರ್ಗದಲ್ಲೂ ಸ್ಪರ್ಧಿಸಬಹುದು ಮತ್ತು ನೇಮಕಗೊಳ್ಳಬಹುದು. ಜಾತ್ಯಾಧಾರಿತ, ಸಾಂವಿಧಾನಿಕ ಮೀಸಲಾತಿಯು ಸಾಮಾಜಿಕ ಕಾರಣಗಳನ್ನು ಹೊಂದಿ ಸಮರ್ಥನೀಯವಾದರೆ, ಇದೊಂದು ರೀತಿಯ ಸೃಜನಶೀಲ ಮತ್ತು ಅಕಾರಣವಾದ ಮೀಸಲಾತಿ!

ಈ ಬಾರಿಯ ಅಕಾಡಮಿ, ಪ್ರಾಧಿಕಾರಗಳ ಆಯ್ಕೆಗಳಲ್ಲಿ ವೈಯಕ್ತಿಕವಾಗಿ ಅಥವಾ ಪ್ರತ್ಯೇಕವಾಗಿ ಯಾರನ್ನೂ ಹೆಸರಿಸಿ ದೂಷಿಸುವಂತಿಲ್ಲ. ಇವೆಲ್ಲ ಬಲಪಂಥದ ಆಯ್ಕೆಗಳು ಅನ್ನುವುದಕ್ಕಿಂತಲೂ ಉಗ್ರ ಹಿಂದುತ್ವದ ಆಯ್ಕೆಗಳೆನ್ನಬಹುದು. (ಜಾತಿ ಮತ್ತು ಭಾಷೆಯ ಇತರ ಅಕಾಡಮಿಗಳಲ್ಲಿ ಇದು ಸಾಧ್ಯವಿಲ್ಲ. ಉದಾಹರಣೆಗೆ ಬ್ಯಾರಿ, ಕೊಡವ, ಅರೆಭಾಷೆ ಮುಂತಾದ ಅಕಾಡಮಿಗಳಿಗೆ ಆಯಾಯ ಸಮುದಾಯದ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕಮಾಡಲೇಬೇಕು!) ಎಡಪಂಥದ ಒಲವಿರುವ ಯಾರೇ ಆಗಲಿ ಆಯ್ಕೆಗೊಳ್ಳುವುದು ಸರಕಾರದ ದೃಷ್ಟಿಯಲ್ಲಿ ಮಾರಕವೆನಿಸಬಹುದು. ಆದರೆ ಇವುಗಳಲ್ಲಿ ಬಹುಪಾಲು ಆಯ್ಕೆಗಳು ಬಲಪಂಥದ ನಿತ್ರಾಣವನ್ನು ತೋರಿಸುತ್ತವೆ. ಬಹುಪಾಲು ಹೆಸರುಗಳು ಸಹಜವೇ. ಅವರು ತಮ್ಮ ಕ್ಷೇತ್ರಗಳಿಗಿಂತ ಹೆಚ್ಚಾಗಿ ಬಲಪಂಥದ ಮತ್ತು ಸದ್ಯದ ಆಳುವ ಪಕ್ಷದ ವಕ್ತಾರರಾಗಿ ದುಡಿದಿದ್ದಾರೆ. ಆದರೆ ತಾವು ಆಯ್ಕೆಯಾದದ್ದು ಅವರಿಗೂ ಅಚ್ಚರಿ ತಂದಿರಬಹುದು! ಕೆಲವು ಹೆಸರುಗಳನ್ನು ಗಮನಿಸುವಾಗ (ಉದಾ: ಎನ್. ಎಸ್. ತಾರಾನಾಥ್, ಕೃಷ್ಣೇಗೌಡ ಮುಂತಾದವರು; ನಾನು ಹೇಳದೇ ಬಿಟ್ಟಿರಬಹುದಾದ ಹೆಸರಿನ ಶ್ರೇಷ್ಠರು ಮನ್ನಿಸಬೇಕು.) ಇವರಿಗೆ ಈ ಗತಿ ಬಂತಲ್ಲವೇ ಎಂದು ಅನುಕಂಪ ಮೂಡದಿರದು. ಆದರೆ ಕೆಲವು ಹೆಸರುಗಳು ಏಕೆ ಸರಕಾರದ ಗಮನಕ್ಕೆ ಬರಲಿಲ್ಲವೋ ಗೊತ್ತಿಲ್ಲ. ಎಸ್.ಎಲ್. ಭೈರಪ್ಪ, ಜಿ.ಬಿ.ಹರೀಶ್, ಡಾ. ಪ್ರಭಾಕರ ಜೋಶಿ ಮುಂತಾದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಒಳ್ಳೆಯ ಸೇವೆಯನ್ನು ಸಲ್ಲಿಸುವುದರೊಂದಿಗೆ ರಾಜಕೀಯವಾಗಿ ಸರಕಾರದ ನೀತಿಗನುಗುಣವಾದ ರಾಜನೀತಿಯನ್ನು ಹೊಂದಿದ್ದರು. ವೈಯಕ್ತಿಕ ನಿಲುವಿನ, ಅಭಿವ್ಯಕ್ತಿಯ ಕುರಿತು ಭಿನ್ನಾಭಿಪ್ರಾಯಗಳಿದ್ದಾಗಲೂ ಅವರ ಪ್ರತಿಭೆ-ಪಾಂಡಿತ್ಯ-ಸೃಜನಶೀಲತೆಯ ಕುರಿತು ಮನ್ನಣೆಯಿದೆ. (ಸಜ್ಜನರಿಗೆ ‘ವ್ರತಕೆಟ್ಟರೂ ಸುಖಪಡಲಿಲ್ಲ’ ಎಂಬ ಸ್ಥಿತಿ!) ಇದರಿಂದಾಗಿ ಈ ಆಯ್ಕೆಯಲ್ಲೂ ಒಂದು ತಾಳ-ಮೇಳವಿದೆಯೆಂದು ಅನ್ನಿಸುವುದಿಲ್ಲ. ಪ್ರಾಯಃ ಆದಷ್ಟು ಬೇಗ ಆಯ್ಕೆಮಾಡಬೇಕೆಂಬ ಒಂದು ಅವಸರದಲ್ಲಿ ಕೆಲವು ಹೆಸರುಗಳನ್ನು ರೇಷನ್ ಕಾರ್ಡ್, ಮತದಾರರ ಚೀಟಿ ಮುಂತಾದವುಗಳನ್ನು ನೋಡಿ ನಮೂದಿಸಿದಂತಿದೆ. ಇಂತಹ ಆಯ್ಕೆ/ನೇಮಕಾತಿಯಲ್ಲಿ ಯಾವ ಸಂಸ್ಥೆಗೆ ಯಾರು ಎಂಬ ತರ್ಕ ಬೇಕಾಗಿಲ್ಲ. ಫುಟ್‌ಬಾಲ್ ಆಟಗಾರರನ್ನು ಕ್ರಿಕೆಟ್ ತಂಡಕ್ಕೂ, ಬ್ಯಾಡ್‌ಮಿಂಟನ್ ಆಟಗಾರರನ್ನು ಹಾಕಿತಂಡಕ್ಕೂ ಆಯ್ಕೆಮಾಡಬಹುದು. ಅಥವಾ ಇವ್ಯಾವುದೂ ತಿಳಿಯದವರನ್ನೂ ಯಾವುದೇ ತಂಡಕ್ಕೂ ಆಯ್ಕೆ/ನೇಮಕ ಮಾಡಬಹುದು. ಅಂಕಿ-ಅಂಶಗಳ ತರ್ಕಶಾಸ್ತ್ರ ಹೀಗೆಯೇ. ಎಲ್ಲರಿಗೂ ದಕ್ಕುವ ಮತ್ತು ಯಾರಿಗೂ ದಕ್ಕದಿರುವ ವಿಚಾರಗಳು ಸಮಾನವಾಗಿರುತ್ತವೆ.

ಆದರೆ ಇದಕ್ಕಿಂತಲೂ ವಿಷಾದದ ಸಂಗತಿಯೆಂದರೆ ಕಳೆದ ಕೆಲವು ಕಾಲದಿಂದ ನೇರ ನಿಂತವರಂತೆ ಮೂಗು ಮುಚ್ಚಿ, ಬಾಯಿ ಹೊಲಿದುಕೊಂಡು, ಕೈಕಟ್ಟಿಕೊಂಡು ಕಾದು ಅತ್ತ ಬಲವೂ ಅಲ್ಲದ ಎಡವೂ ಅಲ್ಲದ ಎಡೆಬಿಡಂಗಿ ಮೌನನಗ್ನತೆಯ ಭಂಗಿಗಳಲ್ಲಿ ಕುಳಿತವರ ಪಾಡು ಹೇಳತೀರದು. ಅದೀಗ ಶೋಚನೀಯ. ಅವರು ವಯಸ್ಸಿನಲ್ಲಿ ಹಿರಿಯರು; ಸಾಕಷ್ಟು ಜನಪ್ರಿಯರು; ಯಾವುದೇ ಪತ್ರಿಕೆಗಾದರೂ ಅದರ ಜಾಯಮಾನಕ್ಕನುಗುಣವಾಗಿ ಬರೆಯಬಲ್ಲರು. ಖಾಸಗಿಯಾಗಿ ಕ್ರಾಂತಿಮಾಡುವ ಮಾತನಾಡಿದರೂ ಸಾರ್ವಜನಿಕವಾಗಿ ಯಾರನ್ನೂ ಎದುರುಹಾಕಿಕೊಳ್ಳರು. ಪುಸ್ತಕ ಬಿಡುಗಡೆ, ಅಭಿನಂದನೆ, ಸನ್ಮಾನ, ಇತ್ಯಾದಿ ಸಮಾರಂಭಗಳಲ್ಲಿ ಭಾಗವಹಿಸುತ್ತ ಯಾವುದೇ ವಿವಾದಾಸ್ಪದ ಚರ್ಚೆಗೆ ಅವಕಾಶಮಾಡಿಕೊಡದೆ ತಮ್ಮ ಒಲವುನಿಲುವುಗಳನ್ನು ಬಹಿರಂಗಗೊಳಿಸದೆ ಎಲ್ಲರನ್ನೂ ಖುಷಿಪಡಿಸಿ ಸ್ಮರಣಿಕೆಯೊಂದಿಗೆ ಹಿಂದಿರುಗುವವರು. ಅನುಭವ ಮತ್ತು ಅರ್ಹತೆಯೊಂದಿಗೆ ತಾವು ಒಂದಿಲ್ಲೊಂದು ಸಂಸ್ಥೆಗಳಲ್ಲಿ ಸ್ಥಾನ (ಸಾಧ್ಯವಾದರೆ ನಾಯಕಪಟ್ಟ) ಪಡೆಯಬಹುದೆಂಬ ಕನಸು ಕಂಡವರು. ಎಲ್ಲಕಾಲದಲ್ಲೂ, ಎಲ್ಲರೂ ಸಂತತಿ ಸಾವಿರವಾಗಬಲ್ಲ ಉಂಡ ಜಾಣರು. ಎಲ್ಲ ಸಂದರ್ಭಗಳಲ್ಲೂ ಉಣಲು ಸಿದ್ಧರಿರುವ ಸಿದ್ಧಿಯುಪಾಧ್ಯರಿವರು. ಅವರಿಗೆ ಈಗ ಆಗಿರುವ ಆಯ್ಕೆಗಳು ಖಂಡಿತವಾಗಿಯೂ ಮೆದುಘಾತವನ್ನು ನೀಡಿರಬಹುದು. ಗೂಟವಿಲ್ಲದ ಕಾರೂ ಅದರಲ್ಲಿ ಸೀಟೂ ತಪ್ಪಿತು!

ಸಾಹಿತ್ಯದ ‘ಸಂಗ’ ಬಯಸುವವರಿಗೆ ಸಾಹಿತ್ಯದ ‘ಸಂಘ’ಗಳು ಬೇಕಾಗುವುದಿಲ್ಲ. ಸಂಸ್ಥೆಗಳು ಬೇಕಾಗುವುದೇ ಸ್ಥಾಪಿತ ಹಿತಾಸಕ್ತಿಗಳನ್ನು ಸಾಂಘಿಕವಾಗಿ, ಸಾಂಸ್ಥಿಕವಾಗಿ ಬೆಳೆಸುವುದಕ್ಕೆ. ಈ ಎಲ್ಲ ಸಂಸ್ಥೆಗಳು ಇತರ ಸರಕಾರಿ/ಸಾರ್ವಜನಿಕ ಉದ್ದಿಮೆಗಳಂತೆ ಕಾರ್ಯನಿರ್ವಹಿಸದಿದ್ದರೂ ಅವಕ್ಕೆ ಸರಕಾರಿ ನಿಯಂತ್ರಣವಿರುವುದರಿಂದ ಅವು ತಮ್ಮ ಇತಿಮಿತಿಯಲ್ಲಿ ಸರಕಾರಿ ಕೃಪಾಪೋಷಿತವೇ ಆಗುತ್ತವೆ. ಆದ್ದರಿಂದ ಯಾವ ಸರಕಾರ ಬಂದರೂ ಅರ್ಹತೆಯ ಹೊರತಾಗಿಯೂ ಈ ಯಾವ ಸಂಸ್ಥೆಗಳಲ್ಲೂ ಆಯ್ಕೆ/ನೇಮಕ/ನಾಮಕರಣವಾಗದ ಸಂವೇದನಾಶೀಲರು ಬೇಕಷ್ಟಿದ್ದಾರೆ.

ಒಟ್ಟಿನಲ್ಲಿ ಮುಗ್ಧಜನರು ನಿಜವಾಗಿಯೂ ಅವಶ್ಯವೆಂದು ಭಾವಿಸದ, ಆದರೆ ಕೆಲವರಿಗೆ ತೀರ ಅಗತ್ಯದಂತಿರುವ ಸರಕಾರದ ಈ ಅಂಗಸಂಸ್ಥೆಗಳಲ್ಲಿ ಜೋಳವಾಳಿಗೆಯ ಅಂಗರಾಜರೇ ಜಾಸ್ತಿಯಿರುತ್ತಾರೆ. ಅರಿವನ್ನು ಮೂಡಿಸುವ ಬದಲು ಮನರಂಜನೆಯನ್ನು ನೀಡುವ ಈ ಸಂಸ್ಥೆಗಳು ಸಾರ್ವಜನಿಕ ಹಣವನ್ನು ರಾಜಕಾರಣಿಗಳಷ್ಟೇ ಅಥವಾ ಅದಕ್ಕೂ ಮಿಗಿಲು ಲೂಟಿಮಾಡುವ ಹಂತಕ್ಕೆ ತಲುಪಿದ್ದಾರೆ. ಆದ್ದರಿಂದ ಈ ಆಯ್ಕೆಗಳು ಒಂದರ್ಥದಲ್ಲಿ ‘ಅರ್ಥ’ಪೂರ್ಣ; ಇನ್ನೊಂದು ಅರ್ಥದಲ್ಲಿ ‘ಅರ್ಥಹೀನ’.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)