varthabharthi


ನಿಮ್ಮ ಅಂಕಣ

ಪರಾಕಾಷ್ಟೆಗೆ ಏರುತ್ತಿರುವ ರೈತರ ಸಂಕ್ಷೋಭೆ

ವಾರ್ತಾ ಭಾರತಿ : 18 Oct, 2019
ದೇವಿಂದರ್ ಶರ್ಮ, ಕನ್ನಡಕ್ಕೆ: ಕಸ್ತೂರಿ

2019ರವರೆಗೆ ಪಂಜಾಬ್‌ನಲ್ಲಿ ನಡೆದ ರೈತರ ಆತ್ಮಹತ್ಯೆಗಳನ್ನು ಪರಿಶೀಲಿಸಿದರೆ ಪ್ರತಿ ದಿನವೂ ಸರಾಸರಿ ಮೂವರು ರೈತರು ಬಲಿಯಾಗುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ. 2017-18ರಲ್ಲಿ ಭತ್ತದ ಉತ್ಪಾದನೆಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಿದ್ದಕ್ಕೆ ಪ್ರತಿಷ್ಠಿತವಾದ ಕೃಷಿ ಕರ್ಮಾನ್ ಪ್ರಶಸ್ತಿಯನ್ನು ಪಡೆದುಕೊಂಡ ಪಂಜಾಬ್‌ನಲ್ಲಿ ಮತ್ತೊಂದು ಕಡೆ ಇಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ ಅಂಶ.

ಲವ್ಪ್ರೀತ್ ಸಿಂಗ್ ಎಷ್ಟೋ ಕನಸುಗಳೊಂದಿಗೆ ಬದುಕುತ್ತಿದ್ದ ಯುವ ರೈತ. ಕುಟುಂಬ ವಾರಸತ್ವದಿಂದ 8 ಲಕ್ಷ ರೂ. ಸಾಲ ತನ್ನ ನೆತ್ತಿಯ ಮೇಲೆ ಇದೆ ಎಂದು ತಿಳಿದು ಕೂಡಾ ವ್ಯವಸಾಯದಲ್ಲಿ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳಬೇಕು ಎಂದು ಭಾವಿಸಿದ. ಆದರೆ ಸಾಲ ತೀರಿಸಲಾಗದೆ ಹೋದಾಗ ಕೊನೆಗೆ ಬದುಕನ್ನೇ ಅಂತ್ಯ ಮಾಡಿಕೊಂಡ. ಆತನ ವಯಸ್ಸು 22 ವರ್ಷಗಳು ಮಾತ್ರ. ಬರ್ನಾಲಾ ಜಿಲ್ಲೆಗೆ ಸೇರಿದ ಲವ್ಪ್ರೀತ್ ಸಿಂಗ್ ಆತ್ಮಹತ್ಯೆ ಇಡೀ ಪಂಜಾಬ್‌ನಲ್ಲಿ ಸಂಕ್ಷೋಭೆ ಸೃಷ್ಟಿಸಿತು.

ಮೂರು ತಲೆಮಾರುಗಳಿಂದ ಇವರ ಕುಟುಂಬದಲ್ಲಿ ಐವರನ್ನು ವ್ಯವಸಾಯ ಸಂಕ್ಷೋಭೆ ಬಲಿ ತೆಗೆದುಕೊಂಡಿತು. ಒಂದೂವರೆ ವರ್ಷದ ಕೆಳಗೆ ಅವನ ತಂದೆ ಕುಲವಂತ್ ಸಿಂಗ್ ನೇಣು ಹಾಕಿಕೊಂಡು ಜೀವಬಿಟ್ಟಿದ್ದರು. ಪಂಜಾಬ್ ಸರಕಾರ ಸಾಲ ಮನ್ನಾ ಮೊದಲ ಕಂತಿನ ಹಂಚಿಕೆಯನ್ನು ಪ್ರಾರಂಭಿಸುವುದಕ್ಕೆ ಸರಿಯಾಗಿ ಒಂದು ದಿನ ಮೊದಲು ಈ ದುರಂತ ಸಂಭವಿಸಿತು. ಇದಕ್ಕೂ ಮುನ್ನ ಲವ್ಪ್ರೀತ್ ಸಿಂಗ್ ತಾತ ಕೂಡ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ‘‘ಎಕರೆಗೆ ವರ್ಷಕ್ಕೆ ರೂ. 50,000 ತೆತ್ತು ಎಂಟು ಎಕರೆಗಳ ಭೂಮಿಯನ್ನು ಲೀಸಿಗೆ ತೆಗೆದುಕೊಂಡಿದ್ದೆವು. ಆದರೆ 2017ರಲ್ಲಿ ಚಂಡಮಾರುತದಿಂದ ಗೋಧಿ ಬೆಳೆ ಪೂರ್ತಿಯಾಗಿ ನಾಶವಾಯಿತು. ಅದರಿಂದ ನಾವು ಚೇತರಿಸಿಕೊಳ್ಳಲಾಗದೆ ಹೋದೆವು’’ ಎಂದು ಲವ್ಪ್ರೀತ್ ಸಿಂಗ್ ತಾಯಿ ಮಾಧ್ಯಮಕ್ಕೆ ಹೇಳಿದರು.

ಸಾಲದ ಭಾರ ಹೊರಲಾರದೆ ಪಂಜಾಬ್‌ನಲ್ಲಿ ಮೂರು ತಲೆಮಾರುಗಳಿಗೆ ಸೇರಿದ ಕುಟುಂಬ ಸದಸ್ಯರು ಪ್ರಾಣ ತೆಗೆದುಕೊಳ್ಳುವುದು ಇದೇ ಮೊದಲ ಘಟನೆ ಇರಬೇಕು. ಆರ್ಥಿಕ ಸಂಕ್ಷೋಭೆ ಒಬ್ಬ ರೈತನಿಂದ ಆತನ ಮುಂದಿನ ಎರಡು ತಲೆಮಾರುಗಳವರೆಗೆ ಪ್ರಭಾವ ತೋರಿಸಿದೆ ಎಂದರೆ ಇದರ ಗಂಭೀರತೆ ಎಷ್ಟಿರಬಹುದೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಜಸ್ವಂತ್ ಸಿಂಗ್ ಎಂಬ ಮತ್ತೊಬ್ಬ ರೈತ ತನ್ನ ಐದು ವರ್ಷದ ಮಗನನ್ನು ಬೆನ್ನಿಗೆ ಕಟ್ಟಿಕೊಂಡು ನೀರಿನ ಕಾಲುವೆಗೆ ಧುಮುಕಿದ ಘಟನೆ ನನ್ನ ನೆನಪಿಗೆ ಬಂತು. ನೀರಿನ ರೂಪದಲ್ಲಿನ ಸಮಾಧಿಗೆ ತನ್ನ ಐದು ವರ್ಷದ ಹಸುಳೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುವುದು ಕ್ರೌರ್ಯ ಎಂದು ಅವನಿಗೆ ಗೊತ್ತು. ಆದರೆ ತನ್ನ ಮೇಲಿರುವ 10 ಲಕ್ಷ ರೂಪಾಯಿಗಳ ಸಾಲವನ್ನು ತನ್ನ ಮಗ ಎಂದಿಗೂ ತೀರಿಸಲಾರ ಎಂದು ಗೊತ್ತಾದ್ದರಿಂದ ಆ ಕ್ರಮಕ್ಕೆ ಮುಂದಾಗುತ್ತಿರುವುದಾಗಿ ಡೆತ್‌ನೋಟ್ ಬರೆದು ನಂತರ ಕಾಲುವೆಗೆ ಧುಮುಕಿದ್ದ ಆತ.

ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದಲ್ಲಿನ ಸರಕಾರ ರೈತರಿಗೆ ಸಾಲ ಮನ್ನಾ ಯೋಜನೆಯನ್ನು ಆರಂಭಿಸಿ, ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿದ ಸಾಲಗಳಲ್ಲಿ ಎರಡು ಲಕ್ಷ ರೂ.ಗಳ ವರೆಗೆ ಮನ್ನಾ ಮಾಡಲಿರುವುದಾಗಿ ಘೋಷಿಸಿದ್ದರೂ, ಪಂಜಾಬ್‌ನಲ್ಲಿ ರೈತರ ಆತ್ಮಹತ್ಯೆಗಳು ನಿಲ್ಲುತ್ತಿಲ್ಲ. ಈ ವರ್ಷದಲ್ಲಿ ಜನವರಿಯಿಂದ ಜುಲೈ ಮಧ್ಯದವರೆಗೆ 645 ಮಂದಿ ರೈತರು ಸಾಲಗಳಿಂದ ಉಂಟಾದ ಅವಮಾನಗಳನ್ನು ಭರಿಸಲಾಗದೆ ಘೋರವಾಗಿ ಬದುಕನ್ನು ಮುಗಿಸಿಕೊಂಡರು. ಖಾಸಗಿ ಬಡ್ಡಿ ವ್ಯಾಪಾರಿಗಳು, ಬ್ಯಾಂಕುಗಳು, ಸೂಕ್ಷ್ಮಸಾಲ ಕಲ್ಪನೆಯ ಸಂಸ್ಥೆಗಳ ಏಜೆಂಟರು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಒಟ್ಟಾಗಿ ರೈತರ ಉಸಿರು ನಿಲ್ಲಿಸುತ್ತಿದ್ದಾರೆ. ಅವರು ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ರೂಪಿಸಿದ ಅಂಕಿಸಂಖ್ಯೆಗಳ ಪ್ರಕಾರ 2017 ಎಪ್ರಿಲ್ 1ರಿಂದ 2019ರ ಆಗಸ್ಟ್ 31ರ 1,280 ಮಂದಿ ರೈತರು, ವ್ಯವಸಾಯ ಕೂಲಿಗಳು ಪಂಜಾಬ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬರುತ್ತದೆ.

ದೇಶದ ಗೋಧಿ ಉಗ್ರಾಣ ಎಂದು ಹೆಸರಾದ ಪಂಜಾಬ್ ವಾಸ್ತವವಾಗಿ ಕೆಲ ವರ್ಷಗಳಿಂದ ರೈತರ ಆತ್ಮಹತ್ಯೆಗಳ ಮೃತ್ಯುಶಯ್ಯೆಯಾಗಿ ಪ್ರಚಾರ ಪಡೆದಿದೆ. ಈ ಆತ್ಮಹತ್ಯೆಗಳಿಗೆ ನಿಗೂಢ ಕಾರಣಗಳಾವುವೂ ಇಲ್ಲ. ಕಾಂಗ್ರೆಸ್ ಸರಕಾರ ರೈತರ ಸಾಲ ಮನ್ನಾ ಯೋಜನೆ ಆರಂಭಿಸಿದ್ದಾಗ್ಯೂ ರೂ. 4,609 ಕೋಟಿ ವ್ಯವಸಾಯ ವ್ಯರ್ಥ ಬಾಕಿಗಳನ್ನು ರದ್ದು ಮಾಡಿತ್ತು. ಈ ಯೋಜನೆ ಮೂಲಕ ಇದುವರೆಗೂ ಸಾಲದ ಕೆಸರಿನಲ್ಲಿ ಹೂತು ಹೋಗಿದ್ದ 5,61,886 ಮಂದಿ ರೈತರು ಲಾಭ ಪಡೆಯುವುದು ವಾಸ್ತವವೇ... ಆದರೆ ಭವಿಷ್ಯದಲ್ಲಿ ತಮ್ಮ ಇನ್ನೂ ಬಾಕಿ ಬಿದ್ದಿರುವ ವ್ಯರ್ಥ ಸಾಲಗಳನ್ನು ರದ್ದು ಮಾಡುತ್ತಾರೆಂಬ ಆಸೆ ಕಿಂಚಿತ್ತು ಮಾತ್ರವೂ ಇಲ್ಲದೆ ಹೋಗಿರುವುದರಿಂದ ರೈತರು ಬೇರೊಂದು ಮಾರ್ಗ ನೋಡಿಕೊಳ್ಳುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಆಡಳಿತ ಪಕ್ಷವು ರೈತರು ಸಹಕಾರ ಬ್ಯಾಂಕ್‌ಗಳು, ರಾಷ್ಟ್ರೀಯ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಮತ್ತು ಖಾಸಗಿ ಬಡ್ಡಿ ವ್ಯಾಪಾರಿಗಳ ಬಳಿ ತೆಗೆದುಕೊಂಡ ವ್ಯವಸಾಯ ಸಾಲಗಳನ್ನು ಇಡಿಯಾಗಿ ತೀರಿಸುತ್ತೇವೆ ಎಂದು ವಾಗ್ದಾನ ಮಾಡಿತ್ತು. ಈಗ ಕೂಡಾ ಸರಕಾರ ಇದನ್ನು ನಿರ್ಲಕ್ಷಿಸುತ್ತಿಲ್ಲವಾದರೂ, ಈ ಸಾಲಗಳನ್ನು ಪೂರ್ತಿಯಾಗಿ ತೀರಿಸಬೇಕೆಂದರೆ ರೂ. 90,000 ಕೋಟಿಗಳ ಅಗತ್ಯ ಬೀಳುತ್ತದೆ, ಇಷ್ಟು ದೊಡ್ಡ ಮೊತ್ತ ತನ್ನ ಬಳಿ ಇಲ್ಲ ಎಂದು ಕೈ ಎತ್ತಿದೆ.

2019ರವರೆಗೆ ಪಂಜಾಬ್‌ನಲ್ಲಿ ನಡೆದ ರೈತರ ಆತ್ಮಹತ್ಯೆಗಳನ್ನು ಪರಿಶೀಲಿಸಿದರೆ ಪ್ರತಿ ದಿನವೂ ಸರಾಸರಿ ಮೂವರು ರೈತರು ಬಲಿಯಾಗುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ. 2017-18ರಲ್ಲಿ ಭತ್ತದ ಉತ್ಪಾದನೆಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಿದ್ದಕ್ಕೆ ಪ್ರತಿಷ್ಠಿತವಾದ ಕೃಷಿ ಕರ್ಮಾನ್ ಪ್ರಶಸ್ತಿಯನ್ನು ಪಡೆದುಕೊಂಡ ಪಂಜಾಬ್‌ನಲ್ಲಿ ಮತ್ತೊಂದು ಕಡೆ ಇಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ ಅಂಶ. 2009-10ರಿಂದ ರಾಷ್ಟ್ರೀಯ ಧಾನ್ಯ ಭಂಡಾರಕ್ಕೆ ಭತ್ತವನ್ನು ಅತ್ಯಧಿಕವಾಗಿ ಒದಗಿಸುತ್ತಿರುವ ರಾಜ್ಯ ಪಂಜಾಬ್. 2010-11ರಲ್ಲಿ ಮಾತ್ರವೇ ಪಂಜಾಬ್ ಆಂಧ್ರ ಪ್ರದೇಶಕ್ಕಿಂತ ಹಿಂದೆ ಬಿದ್ದಿತ್ತು. ಇನ್ನು ಗೋಧಿ ವಿಷಯಕ್ಕೆ ಬಂದರೆ 2008-09ರಿಂದ ಪಂಜಾಬ್ ರಾಷ್ಟ್ರೀಯ ಧಾನ್ಯ ಭಂಡಾರಕ್ಕೆ ಗೋಧಿಯನ್ನು ಪೂರೈಸುತ್ತಿರುವ ಅಗ್ರಗಣ್ಯ ರಾಜ್ಯ ಎಂದು ದಾಖಲೆ ಮಾಡಿತ್ತು. ಅಂದರೆ ನಮ್ಮ ದೇಶದ ಆಹಾರ ಸಂಗ್ರಹದಲ್ಲಿ ಶೇ. 37.83 ಭಾಗ ಪಂಜಾಬ್‌ನಿಂದಲೇ ಬರುತ್ತಿವೆ ಅಂತಾಯಿತು.

ತನ್ನ ಭೂಭಾಗದಲ್ಲಿನ ಶೇ. 98 ಭಾಗ ವ್ಯವಸಾಯ ಯೋಗ್ಯವಾಗಿರುತ್ತಾ, ಗೋಧಿ, ಭತ್ತಗಳ ಉತ್ಪಾದನೆಯಲ್ಲಿ ಅಧಿಕ ಭಾಗವನ್ನು ರಾಷ್ಟ್ರೀಯ ಧಾನ್ಯ ಭಂಡಾರಕ್ಕೆ ಸಮರ್ಪಿಸುತ್ತಿರುವ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಬೆಳೆಗಳ ಉತ್ಪಾದನೆಗೆ, ತೀವ್ರವಾಗುತ್ತಿರುವ ವ್ಯವಸಾಯ ದುರ್ಗತಿಗೆ ಮಧ್ಯೆ ಅಷ್ಟು ಅಂತರಕ್ಕೆ ಕಾರಣ ಏನೆನ್ನುವುದನ್ನು ಬಹುಶಃ ಯಾರೂ ವಿವರಿಸಲಾರರೇನೋ?

ಈಗ ಕೃಷಿ ಕರ್ಮಾನ್ ಪ್ರಶಸ್ತಿಗೋಸ್ಕರ ನಿರ್ದೇಶಿಸಲಾದ ಮೂರು ವರ್ಗೀಕರಣದತ್ತ ನೋಡೋಣ. ಅತ್ಯಧಿಕ ಉತ್ಪಾದನೆಯನ್ನು ಸಾಧಿಸುತ್ತಿರುವುದಕ್ಕೆ 55 ಅಂಕಗಳನ್ನು ನೀಡಿದ್ದಾರೆ. ಎರಡನೆಯದು ದಾಖಲೆ ಮಟ್ಟದಲ್ಲಿ ಉತ್ಪಾದನೆ ಸಾಧಿಸುವುದಕ್ಕೋಸ್ಕರ ವಿಶೇಷ ಕಾಳಜಿ ತೆಗೆದುಕೊಳ್ಳುತ್ತಿರುವುದಕ್ಕೆ 30 ಅಂಕಗಳನ್ನು ನೀಡಿದ್ದಾರೆ. ಕೊನೆಗೆ ಆಹಾರ ಧಾನ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಆಗಿರುವ ವೆಚ್ಚಕ್ಕೋಸ್ಕರ 15 ಅಂಕಗಳನ್ನು ಮೀಸಲು ಮಾಡಿದ್ದರು.

ಪಂಜಾಬ್‌ನಲ್ಲಿ ವ್ಯವಸಾಯ ಸಂಕ್ಷೋಭೆ ಸತತವಾಗಿ ಏಕೆ ಮುಂದುವರಿಯುತ್ತಿದೆ ಎಂದು ಈಗ ಸ್ಪಷ್ಟವಾಗಿ ಅರ್ಥವಾಗುತ್ತದೆ. ರೈತರು ಬೆಳೆಸುತ್ತಿರುವ ಬೆಳೆಗಳಿಂದ ಶೇಕಡ 50ನ್ನು ಅವರ ಕಲ್ಯಾಣಕ್ಕೆ ನೀಡುವಂತೆ ಮಾದರಿ ಯೋಜನೆ ನಿರೂಪಿಸಿದ್ದರೆ ಈ ಸಂಕ್ಷೋಭೆ ಮುಂದುವರಿಯುತ್ತಿರಲಿಲ್ಲ.

ತೀವ್ರ ಸಂಕ್ಷೋಭೆಯಲ್ಲಿ ಒದ್ದಾಡುತ್ತಿರುವ ರೈತ ಸಮುದಾಯಕ್ಕೆ ಸ್ವಾವಲಂಬನೆಯೊಂದಿಗೆ ಕೂಡಿದ ಬದುಕಿನ ಭರವಸೆ ಕಲ್ಪಿಸುವಂತೆ ಸರಕಾರಿ ನೀತಿಗಳು ಇನ್ನಾದರೂ ರೂಪುಗೊಳ್ಳಬೇಕು.

ಸರಕಾರಗಳು ಸಾಲಾಗಿ ಗುರಿಯಾಗಿ ವಿಧಿಸುತ್ತಿರುವ ದಾಖಲೆ ಬೆಲೆಯನ್ನು ಉತ್ಪತ್ತಿ ಮಾಡುವುದಕ್ಕೋಸ್ಕರ ನಿರಂತರ ಕೃಷಿ ಮಾಡುತ್ತಿರುವ ರೈತರ ಸಂರಕ್ಷಣೆಗೆ ಪ್ರಯತ್ನ ಪಡದೆ, ಹೇಗಾದರೂ ಸರಿ ಆಹಾರ ಧಾನ್ಯಗಳ ಉತ್ಪನ್ನವನ್ನು ಹೆಚ್ಚಿಸುವುದರ ಮೇಲೆಯೇ ಸರಕಾರಿ ನೀತಿಗಳು ದೃಷ್ಟಿ ಇಡುತ್ತಿರುವಷ್ಟು ಕಾಲವೂ ಪಂಜಾಬ್ ರೈತರ ದುಃಸ್ಥಿತಿ ಬದಲಾಗದು. ಕೆಲವು ಅಧ್ಯಯನಗಳ ಪ್ರಕಾರ ತೃಣಧಾನ್ಯಗಳಾದ ಗೋಧಿ, ಭತ್ತ, ಜೋಳದ ಬೆಳೆಗಳಲ್ಲಿ ಪಂಜಾಬ್ ವಿಶ್ವ ಮಟ್ಟದ ಉತ್ಪಾದನಾ ಪ್ರಮಾಣದಲ್ಲಿ ಅಗ್ರಗಣ್ಯವಾಗಿ ಇರುತ್ತದೆ. ಆದರೆ ಅದೇ ಪಂಜಾಬ್ ತನ್ನ ರೈತರ ಪಾಲಿನ ಸಮಾಧಿಯಾಗಿದೆ

ಮತ್ತೊಂದು ಉದಾಹರಣೆ ತೆಗೆದುಕೊಳ್ಳೋಣ. ಹೊಲದಲ್ಲಿನ ಕಸವನ್ನು ಸುಟ್ಟು ಹಾಕುವುದನ್ನು ನಿರ್ಬಂಧಿಸುವುದಕ್ಕೆ ಪಂಜಾಬ್ 6,400 ರೈತ ತಂಡಗಳನ್ನು ರಚಿಸಿ ಅವರಿಗೆ ಯಂತ್ರಗಳನ್ನು ಕೊಡುವುದಕ್ಕೆ ಮುಂದಾಯಿತು. ಬೆಳೆ ಕೊಯ್ಲು ಪೂರ್ತಿಯಾದ ಮೇಲೆ ಹೊಲದಲ್ಲಿ ಉಳಿಯುವ ಭತ್ತದ ದಂಟುಗಳನ್ನು ಏಕೆ ಸುಟ್ಟು ಹಾಕಬಾರದೆಂದು ರೈತರಿಗೆ ತಿಳಿಹೇಳಲು ಕೂಡ ಸರಕಾರ ಮುಂದಾಗುತ್ತಿದೆ. ಪಂಜಾಬ್ ವ್ಯವಸಾಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ರಾಜ್ಯ ವ್ಯವಸಾಯ ಇಲಾಖೆಗೆ ಸೇರಿದ ವಿಜ್ಞಾನಿಗಳು ಈ ರೈತರ ತಂಡಗಳೊಂದಿಗೆ ನಿತ್ಯ ಸಂಪರ್ಕದಲ್ಲಿರುತ್ತಾರೆ. ಅತ್ಯಧಿಕ ಸಬ್ಸಿಡಿಯೊಂದಿಗೆ ನೀಡುವ ಯಂತ್ರಗಳನ್ನು ಮಾರುವುದಕ್ಕೆ 6,400 ರೈತರ ತಂಡಗಳನ್ನು ರಚಿಸಲಾಗಿದೆ. ಇದೇ ಸಮಯದಲ್ಲಿ ತೀವ್ರವಾಗುತ್ತಿರುವ ವ್ಯವಸಾಯ ಸಂಕ್ಷೋಭೆಯನ್ನು ಪರಿಹರಿಸುವುದಕ್ಕೆ, ರೈತರ ಆತ್ಮಹತ್ಯೆಗಳಿಗೆ ಯಾವ್ಯಾವ ಕಾರಣಗಳೆಂದು ತಿಳಿದುಕೊಳ್ಳುವುದಕ್ಕೆ ಇಂತಹ ತಂಡಗಳನ್ನು ಸರಕಾರ ಏಕೆ ರಚಿಸುವುದಿಲ್ಲ ಎಂದು ನಾನು ಅರ್ಥ ಮಾಡಿಕೊಳ್ಳಲಾಗದೆ ಹೋಗಿದ್ದೇನೆ. ಈ ಮಾಹಿತಿಯನ್ನು ಪೂರ್ತಿಯಾಗಿ ಸಂಗ್ರಹಿಸಿ ಕಾರ್ಯಾಚರಣೆಗೆ ಸರಕಾರ ಏಕೆ ಮುಂದಾಗುತ್ತಿಲ್ಲ? ಕೃಷಿ ಯಂತ್ರಗಳನ್ನು ಮಾರುವುದಕ್ಕೆ ಮಾತ್ರವೇ ಕಾರ್ಯಾಚರಣೆಗೆ ಇಳಿಯುತ್ತಿರುವ ಸರಕಾರ ಮತ್ತೊಂದು ಕಡೆಯಲ್ಲಿ ಇಷ್ಟು ದೊಡ್ಡ ಮಾನವೀಯ ಕರ್ತವ್ಯವನ್ನು ಪರಿಪೂರ್ಣಗೊಳಿಸುವುದಕ್ಕೋಸ್ಕರ ಏಕೆ ಮುಂದಾಗುವುದಿಲ್ಲ?

ಕೃಪೆ: ಸಾಕ್ಷಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)