varthabharthi


ಸಂಪಾದಕೀಯ

ಬ್ಯಾನರ್ಜಿಯ ಆರ್ಥಿಕ ಚಿಂತನೆಯನ್ನು ಭಾರತ ತಿರಸ್ಕರಿಸಿದೆಯೇ?

ವಾರ್ತಾ ಭಾರತಿ : 22 Oct, 2019

ಭಾರತೀಯ ಮೂಲಕದ ಅಭಿಜಿತ್ ಬ್ಯಾನರ್ಜಿಯವರಿಗೆ ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾಗಿರುವ ‘ನೊಬೆಲ್’ ದೊರಕಿದಾಗ, ಭಾರತ ಸರಕಾರ ತೀವ್ರ ಮುಜುಗರ ಅನುಭವಿಸುತ್ತಲೇ ತನ್ನ ಅಭಿನಂದನೆಗಳನ್ನು ಹೇಳಿತು. ನರೇಂದ್ರ ಮೋದಿಯವರಂತೂ ತೀರಾ ತಡವಾಗಿ, ಬೇಕೋ ಬೇಡವೋ ಎಂಬಂತೆ ತಮ್ಮ ಶುಭಾಶಯ ತಿಳಿಸಿದರು. ಆದರೆ ಈ ಶುಭಾಶಯ ತಿಳಿಸಿದ ಎರಡೇ ದಿನಗಳಲ್ಲಿ, ಭಾರತ ಸರಕಾರದ ಘನವೆತ್ತ ಸಚಿವರು ಬ್ಯಾನರ್ಜಿ ವಿರುದ್ಧ ದಾಳಿಗಳನ್ನು ಆರಂಭಿಸಿದರು. ಒಬ್ಬರು ಬ್ಯಾನರ್ಜಿಯನ್ನು ಕಮ್ಯುನಿಸ್ಟ್ ಎಂದು ಕರೆದರೆ, ಮಗದೊಬ್ಬರು, ಅಭಿಜಿತ್ ಬ್ಯಾನರ್ಜಿಯವರ ಆರ್ಥಿಕ ಚಿಂತನೆಗಳನ್ನು ಭಾರತ ತಿರಸ್ಕರಿಸಿದೆ ಎನ್ನುವಂತಹ ಮಾತುಗಳನ್ನು ಆಡಿದರು. ಜೆಎನ್‌ಯುವಿನಲ್ಲಿ ಬ್ಯಾನರ್ಜಿಯವರ ಸಮಕಾಲೀನ ವಿದ್ಯಾರ್ಥಿನಿಯಾಗಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಬ್ಯಾನರ್ಜಿ ಚಿಂತನೆಗಳಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಇಡೀ ವಿಶ್ವ ಗೌರವಿಸಿದ ಒಬ್ಬ ಭಾರತೀಯ ಮೂಲದ ಆರ್ಥಿಕ ತಜ್ಞನನ್ನು ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಮಾತ್ರ ತಿರಸ್ಕರಿಸುವುದಕ್ಕೆ ಏನು ಕಾರಣ? ನಿಜಕ್ಕೂ ಭಾರತಕ್ಕೆ ಬ್ಯಾನರ್ಜಿ ಅವರ ಹಸಿವು ಕೇಂದ್ರಿತವಾಗಿರುವ ಆರ್ಥಿಕ ಚಿಂತನೆಯ ಅಗತ್ಯವಿಲ್ಲವೇ? ಎಂಬ ಚರ್ಚೆಗೆ ಇದು ಸಕಾಲವಾಗಿದೆ.

 ಬ್ಯಾನರ್ಜಿಯವರಿಗೆ ನೊಬೆಲ್ ದೊರಕಿದಾಗ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲದೇ ಇರುವುದಕ್ಕೂ ಕಾರಣಗಳಿವೆ. ಅಂಬಾನಿ ಕೇಂದ್ರಿತವಾದ ಆರ್ಥಿಕ ಚಿಂತನೆಗಳನ್ನು ಇಟ್ಟುಕೊಂಡು ಕೇಂದ್ರ ಸರಕಾರ ಆಡಳಿತ ನಡೆಸುತ್ತಿದೆ. ಬಡವರನ್ನು, ದೇಶದೊಳಗಿರುವ ಹಸಿವನ್ನು ಅದು ಸಂಪೂರ್ಣ ತಿರಸ್ಕರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಬಾರಿ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷ ದೇಶದ ಜನರ ಮುಂದಿಟ್ಟ ಕನಿಷ್ಠ ಮೂಲಭೂತ ಆದಾಯದ ಹಿನ್ನೆಲೆಯಿರುವ ‘ನ್ಯಾಯ್’ ಯೋಜನೆಯ ಹಿಂದೆಯೂ ಬ್ಯಾನರ್ಜಿಯವರಿದ್ದಾರೆ. ಈ ಕಲ್ಪನೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟಿರುವುದು ಬ್ಯಾನರ್ಜಿ. ಭಾರತದ ಯಾವುದೇ ಕುಟುಂಬದ ಆದಾಯವು ಮಾಸಿಕವಾಗಿ 6 ಸಾವಿರ ರೂ.ಗಿಂತ ಕಡಿಮೆ ಇರಕೂಡದು ಎಂಬುದೇ ಈ ಅಭಿಯಾನದ ನೀತಿಯಾಗಿದೆ. ಅದರ ಪ್ರಕಾರ ಒಂದು ವೇಳೆ ಅಷ್ಟು ವರಮಾನ ಸಂಪಾದನೆ ಅವರಿಗೆ ಸಾಧ್ಯವಾಗದೆ ಹೋದಲ್ಲಿ, ಉಳಿದ ಹಣವನ್ನು ಸರಕಾರವು ಅವರಿಗೆ ನೀಡಬೇಕಾಗುತ್ತದೆ. ಬಡವರನ್ನು ಕೇಂದ್ರೀಕರಿಸಿದ ಇಂತಹ ಮಹತ್ವದ ಯೋಜನೆಯನ್ನು ಮುಂದಿಟ್ಟು ಚುನಾವಣೆಯನ್ನು ಎದುರಿಸಿದರೂ, ಕಾಂಗ್ರೆಸ್ ದಯನೀಯ ಸೋಲನ್ನು ಕಂಡಿತು. ಈ ಸೋಲನ್ನು ಮುಂದಿಟ್ಟುಕೊಂಡೇ ‘ಬ್ಯಾನರ್ಜಿ ಚಿಂತನೆಗಳನ್ನು ಭಾರತ ತಿರಸ್ಕರಿಸಿದೆ’ ಎಂದು ಕೇಂದ್ರ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜೊತೆಗೆ, ಕಾಂಗ್ರೆಸ್ ಕೂಡ ತಾನೇ ಪ್ರತಿಪಾದಿಸಿದ ‘ನ್ಯಾಯ್’ ಅಭಿಯಾನವನ್ನು ಸಂಪೂರ್ಣ ಮರೆತು ಬಿಟ್ಟಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮಂಡಿಸಿದ ‘ನ್ಯಾಯ್’ ಯೋಜನೆಯನ್ನು ಜನರು ನಿಜಕ್ಕೂ ತಿರಸ್ಕರಿಸಿದ್ದಾರೆಯೇ? ಈ ದೇಶದಲ್ಲಿ ಬಡವರು ಅಧಿಕ ಸಂಖ್ಯೆಯಲ್ಲಿರುವುದು ನಿಜವಾದರೆ, ಶೇ. 50ರಷ್ಟು ಅಪೌಷ್ಟಿಕತೆಯನ್ನು ದೇಶ ಹೊಂದಿರುವುದು ಹೌದಾದರೆ, ‘ನ್ಯಾಯ್’ ಯೋಜನೆ ದೇಶಕ್ಕೆ ಅಪ್ರಸ್ತುತವಾಗುವುದು ಸಾಧ್ಯವೇ ಇಲ್ಲ. ಪಾಕಿಸ್ತಾನದ ಗಡಿಯಲ್ಲಿ ನಡೆಯಿತೆನ್ನಲಾದ, ಮಾಧ್ಯಮಗಳ ಮುಖಪುಟದಲ್ಲಿ ಭಾರೀ ಸದ್ದುಗಳನ್ನು ಮಾಡಿದ ಸರ್ಜಿಕಲ್ ಸ್ಟ್ರೈಕ್‌ನ ಮುಂದೆ, ಜನರ ಬದುಕಿನ ಘನತೆಯನ್ನು ಮೇಲೆತ್ತಬಹುದಾದ ನ್ಯಾಯ್ ಬದಿಗೆ ಸರಿಯಿತು. ಇಷ್ಟಕ್ಕೂ ಹಣ, ಮದ್ಯ ಮತ್ತು ವಂಚನೆಗಳ ಮೂಲಕ ನಡೆಯುವ ಚುನಾವಣೆ, ದೇಶದ ಬಹುಸಂಖ್ಯಾತ ಜನರ ಅಗತ್ಯಗಳನ್ನು ಪ್ರತಿನಿಧಿಸುವುದಿಲ್ಲ. ಈ ದೇಶದಲ್ಲಿ ಸಂಘಪರಿವಾರ ಆಳವಾಗಿ ಬೇರಿಳಿಸಿದ ಬಳಿಕವಂತೂ ಚುನಾವಣೆ ಹೆಸರಿಗಷ್ಟೇ ಸೀಮಿತವಾಗಿದೆ. ಮಾಧ್ಯಮಗಳೆಲ್ಲ, ಎಲ್ಲಿಯವರೆಗೆ ಬಹುಸಂಖ್ಯಾತರ ಧ್ವನಿಯಾಗುವುದಿಲ್ಲವೋ, ಅಲ್ಲಿಯವರೆಗೆ ಬಡವರ ಬಗ್ಗೆ ತಲೆಕೆಡಿಸಿಕೊಳ್ಳುವ ‘ನ್ಯಾಯ್’ ಸುದ್ದಿಯಾಗುವುದಿಲ್ಲ. ಈ ದೇಶದ ಬಹುಸಂಖ್ಯಾತ ಜನರಿಗೆ ‘ನ್ಯಾಯ್’ ಯೋಜನೆಯ ಉದ್ದೇಶ, ಗುರಿಯೇ ಸ್ಪಷ್ಟವಿಲ್ಲ. ಹೀಗಿರುವಾಗ ದೇಶ ಅಭಿಜಿತ್ ಬ್ಯಾನರ್ಜಿಯನ್ನು ತಿರಸ್ಕರಿಸಿದೆ ಎನ್ನುವ ಮಾತಿಗೆ ಯಾವ ಅರ್ಥವಿದೆ?

ಪ್ರಸಕ್ತ ಭಾರತ ಎದುರಿಸುತ್ತಿರುವ ಆರ್ಥಿಕ ಹಿಂಜರಿತವು 1991ರಿಂದೀಚೆಗೆ ದೇಶದ ಅತಿ ದೊಡ್ಡ ಬಿಕ್ಕಟ್ಟೆನಿಸಿದೆ. ಲಕ್ಷಾಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಆದಾಯ ಹಾಗೂ ವೇತನದಲ್ಲಿ ಏರಿಕೆಯಾಗುತ್ತಿಲ್ಲ. ಒಳಉಡುಪು ಹಾಗೂ ಬಿಸ್ಕತ್ತುಗಳಂತಹ ಅವಶ್ಯಕ ವಸ್ತುಗಳ ಖರೀದಿಗೆ ಬೇಕಾದ ಹಣ ಕೂಡಾ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ.ಮೋದಿಯವರು ಘೋಷಿಸಿಕೊಂಡಿರುವ ಹಾಗೆ ಭಾರತದಲ್ಲಿ ಎಲ್ಲವೂ ಚೆನ್ನಾಗಿರುತ್ತಿದ್ದರೆ, ಭಾರತದ ಯಾವುದೇ ಕುಟುಂಬಕ್ಕೆ ಮಾಸಿಕವಾಗಿ 6 ಸಾವಿರ ರೂ.ಗಿಂತ ಕಡಿಮೆ ಆದಾಯ ಇಲ್ಲದೆ ಇರಲು ಸಾಧ್ಯವಿಲ್ಲ. ಒಂದು ವೇಳೆ ಅದು ಸಾಧ್ಯವಾಗದೆ ಹೋದಲ್ಲಿ ಸರಕಾರವು ಮಧ್ಯಪ್ರವೇಶಿಸಿ ಅವರಿಗೆ ಕೊರತೆ ಬಿದ್ದಿರುವ ಹಣವನ್ನು ತುಂಬಬಹುದಾಗಿತ್ತು. ಆದರೆ ಅದ್ಯಾವುದೂ ನಮ್ಮ ದೇಶದಲ್ಲಿ ಸಾಧ್ಯವಾಗುತ್ತಿಲ್ಲ.

ಪ್ರಸಕ್ತ ಸಮಯದಲ್ಲಿ ಮೋದಿ ಸರಕಾರವೇ ಬಹುತೇಕವಾಗಿ ದೇಶದ ಕಾರ್ಯಸೂಚಿಗಳನ್ನು ರೂಪಿಸುತ್ತದೆ ಮತ್ತು ಅದಕ್ಕೆ ಪ್ರತಿಕ್ರಿಯಿಸುವುದಷ್ಟೇ ಪ್ರತಿಪಕ್ಷಗಳ ಕೆಲಸವಾಗಿ ಬಿಟ್ಟಿದೆ. 2024ರೊಳಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗುವುದೇ ಅಥವಾ ಇಲ್ಲವೇ? ಕಾಶ್ಮೀರದಲ್ಲಿ ಭಾರತೀಯರಿಗೆ ಭೂಮಿಯನ್ನು ಖರೀದಿಸಲು ಸಾಧ್ಯ ವಾಗಲಿದೆಯೇ ಅಥವಾ ಇಲ್ಲವೇ?, ಅಕ್ರಮ ವಲಸಿಗರನ್ನು ಗುರುತಿಸಲು ನಮಗೆ ಅಖಿಲ ಭಾರತ ಮಟ್ಟದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ನಡೆಯಬೇಕೇ ಅಥವಾ ಬೇಡವೇ?, ಅಯೋಧ್ಯೆಯಲ್ಲಿ ಧ್ವಂಸಗೊಳಿಸಲಾದ ಬಾಬರಿ ಮಸೀದಿಯ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೇ ಅಥವಾ ಬೇಡವೇ? ಹೀಗೆ ಕೇಂದ್ರ ಸರಕಾರ ಪ್ರಸ್ತಾವಿಸುವ ವಿಷಯಗಳ ಸುತ್ತ ಮಾತ್ರವೇ ನಮ್ಮ ಚರ್ಚೆ ಕೇಂದ್ರೀಕೃತವಾಗುತ್ತಿದೆ.ಇಂತಹ ಪ್ರಶ್ನೆಗಳಿಗೆ ಯಾವ ಉತ್ತರ ದೊರೆಯುತ್ತದೆಯೆಂಬುದು ಇಲ್ಲಿ ಮುಖ್ಯವಲ್ಲ. ಯಾಕೆಂದರೆ ಈ ಪ್ರಶ್ನೆಗಳಿಗೆ ಇರುವ ಎಲ್ಲಾ ಉತ್ತರಗಳನ್ನು ಆಡಳಿತಾರೂಢ ಸರಕಾರಕ್ಕೆ ಅನುಕೂಲಕರವಾಗುವ ರೀತಿಯಲ್ಲೇ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ರೂಪಿಸಲಾಗುತ್ತದೆ. 2024ರೊಳಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ನೀವು ಹೇಳಿದರೂ ಕೂಡಾ, ಮೋದಿಯವರು ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂಬ ಉತ್ತರದೊಂದಿಗೆ ಚರ್ಚೆಯನ್ನು ಕೊನೆಗೊಳಿಸಲಾಗುತ್ತದೆ.

ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿರುವುದರ ವಿರುದ್ಧ ಪ್ರತ್ಯಾಸ್ತ್ರವಾಗಿ ನ್ಯಾಯ್ ಅಭಿಯಾನವನ್ನು ಬಳಸಬಹುದಾಗಿದೆ. ಸಂಘಪರಿವಾರ ಕಾಶ್ಮೀರ, ಎನ್‌ಆರ್‌ಸಿ, ರಾಮಮಂದಿರ ಹೀಗೆ ಜನಸಾಮಾನ್ಯರ ಬದುಕಿನಲ್ಲಿ ಯಾವ ರೀತಿಯ ಬದಲಾವಣೆಗಳನ್ನೂ ಮಾಡದ ವಿಷಯಗಳನ್ನು ಮುಂದಿಟ್ಟು ಬೃಹದಾಕಾರವಾಗಿ ಬೆಳೆಯುತ್ತಿರುವ ಸಮಯ ಇದು. ದೇಶವು ಎದುರಿಸುತ್ತಿರುವ ಆರ್ಥಿಕ ಹಿಂಜರಿತದಿಂದ ಜನತೆಯ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ನವೆಂಬರ್ 18ರಿಂದ ಡಿಸೆಂಬರ್ 13ರವರೆಗೆ ನಡೆಯಲಿರುವ ಸಂಸತ್‌ನ ಚಳಿಗಾಲದ ಅಧಿವೇಶನವನ್ನು ಅನಗತ್ಯ ವಿಷಯಗಳನ್ನು ಮುಂದಿಟ್ಟು ಪೋಲು ಮಾಡುವ ಸೂಚನೆ ಕಾಣುತ್ತಿದೆ. ಈ ಸಲದ ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ರಾಮಮಂದಿರ ವಿಷಯದ ಬದಲಿಗೆ, ದೇಶದಲ್ಲಿ ಸಾರ್ವತ್ರಿಕ ಮೂಲಭೂತ ಆದಾಯ ಕಾನೂನನ್ನು ಜಾರಿಗೊಳಿಸಲು ಸರಕರದ ನಿರಾಕರಣೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಬೇಕಾಗಿದೆ.

ನ್ಯಾಯ್ ಬಗ್ಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದೇ, ಆ ಯೋಜನೆಯ ಬಗ್ಗೆ ಜನರಿಗೆ ಮನದಟ್ಟು ಮಾಡಲು ಯೋಗ್ಯವಾದ ವಿಧಾನವಾಗಿದೆ. ಪ್ರತಿಪಕ್ಷಗಳ ಅಭಿಯಾನವನ್ನು ಮಾಧ್ಯಮಗಳು ಕಡೆಗಣಿಸಿದರೂ ಸಹ, ನ್ಯಾಯ್ ಬಗ್ಗೆ ಸಮಾಜದ ತಳಮಟ್ಟದಿಂದಲೇ ಜನಬೆಂಬಲ ವ್ಯಕ್ತವಾಗಬಹುದಾಗಿದೆ. ಇಂತಹ ಸಾಮೂಹಿಕ ಚಳವಳಿಗಳು, ಉತ್ಸಾಹಿ ಯುವಜನತೆಗೆ ರಾಜಕೀಯ ಪಕ್ಷಗಳಿಗೆ ಸೇರ್ಪಡೆಗೊಳ್ಳಲು ಸ್ಫೂರ್ತಿಯನ್ನೂ ನೀಡಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)