varthabharthi


ನಿಮ್ಮ ಅಂಕಣ

7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬೇಕಿತ್ತೇ?

ವಾರ್ತಾ ಭಾರತಿ : 22 Oct, 2019
-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರ್ಗಿ

ಮಾನ್ಯರೇ,

ಉಚಿತ ಕಡ್ಡಾಯ ಶಿಕ್ಷಣ ಕಾಯ್ದೆ ಅನ್ವಯ ದೇಶದ ಯಾವ ಮಗು ಕೂಡಾ ಶಿಕ್ಷಣದಿಂದ ವಂಚಿತವಾಗಬಾರದು. ಮಗು ಎಲ್ಲಾದರೂ ಒಂದು ಕಡೆ ಶಾಲೆಗೆ ದಾಖಲಾಗಿರಲೇ ಬೇಕು, 14 ವರ್ಷದವರೆಗೆ ಅನುತ್ತೀರ್ಣಗೊಳಿಸಬಾರದು ಎನ್ನುವ ನಿಯಮವಿದೆ. ಪರಿಸ್ಥಿತಿ ಹೀಗಿರುವಾಗ ಮತ್ತೆ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕೆಂದು ರಾಜ್ಯ ಸರಕಾರ ಮುಂದಾಗಿದೆ. 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುವ ಕ್ರಮವು ವಿವಿಧ ಮಜಲುಗಳಿಂದ ಚಿಂತಿಸಿದಾಗ, ಬಹು ಸಂಕೀರ್ಣವೆನಿಸುತ್ತಿದೆ. ಅನುತ್ತೀರ್ಣರಾದ ಮಕ್ಕಳು ಮತ್ತೆ ಶಿಕ್ಷಣ ಮುಂದುವರಿಸುವರೆ? ಈ ಮಕ್ಕಳ ಶಿಕ್ಷಣದತ್ತ ಶಿಕ್ಷಕರು ಕಾಳಜಿ ವಹಿಸುತ್ತಾರೆಯೇ? ಅನುತ್ತೀರ್ಣರಾಗಿ ಶಾಲೆ ಬಿಟ್ಟ ಮಕ್ಕಳಿಂದ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚದಿದ್ದೀತೆ? ಈ ಸಮಸ್ಯೆಗಳ ಬಗ್ಗೆಯೂ ಸರಕಾರ ಯೋಚಿಸಬೇಕಾಗಿದೆ. ಅಲ್ಲದೆ ಪಬ್ಲಿಕ್ ಪರೀಕ್ಷೆಯಿಂದ ಮಾತ್ರ ಶಿಕ್ಷಣದ ಗುಣಮಟ್ಟ ಸಾಧಿಸಲು ಸಾಧ್ಯವೇ? ಪ್ರತಿ ವಿಷಯಕ್ಕೂ ಪರಿಣಿತ ವಿಷಯ ಶಿಕ್ಷಕರಿರುವರೆ, ಇರುವ ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆ ಇದೆಯೇ? ಶಿಕ್ಷಕರೇ ಇಲ್ಲದಿದ್ದರೆ ಪಠ್ಯಕ್ರಮ ಮುಗಿಸಲು ಸಾಧ್ಯವೇ? ಈ ಎಲ್ಲದರ ಬಗ್ಗೆಯೂ ಸರಕಾರ ಚಿಂತಿಸಬೇಕಿದೆ.

ಪಬ್ಲಿಕ್ ಪರೀಕ್ಷೆ ಮೂಲಕ ಶಿಕ್ಷಣದಲ್ಲಿ ಗುಣ ಮಟ್ಟ ನಿರೀಕ್ಷಿಸಿದರೆ, ಗ್ರಾಮೀಣ ಭಾಗದಲ್ಲಿ ಡ್ರಾಪೌಟ್ ಆಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗುವುದು ಖಂಡಿತ. ಹೀಗಾಗಿ ಸಮಗ್ರ ಚಿಂತನೆಯ ಮೂಲಕ ಶಿಕ್ಷಣ ಕ್ರಮವನ್ನು ಬದಲಿಸಬೇಕಿದೆ. ದೂರದೃಷ್ಟಿ ಇಲ್ಲದೆ ಸರಕಾರಿ ಶಾಲಾ ಮಕ್ಕಳ ಮೇಲೆ ವಿವಿಧ ಪ್ರಯೋಗಗಳು ಮಾಡಿದರೆ, ಇನ್ನಷ್ಟು ಸರಕಾರಿ ಶಾಲೆಗಳು ಬಾಗಿಲು ಮುಚ್ಚಬೇಕಾಗುತ್ತದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)