varthabharthi


ನಿಮ್ಮ ಅಂಕಣ

ನಮ್ಮ ಉಳಿವಿಗಾಗಿ ಬೇರೆ ಜೀವಿಗಳೂ ಬದುಕಲಿ

ವಾರ್ತಾ ಭಾರತಿ : 22 Oct, 2019
ಅಂಬಿಕಾ ಹೀರಾನಂದಾನಿ

ಇತ್ತೀಚೆಗೆ (ಅಕ್ಟೋಬರ್ 4ರಂದು) ವಿಶ್ವ ಪ್ರಾಣಿ ಹಕ್ಕುಗಳ ದಿನವನ್ನು ನಾವು ಆಚರಿಸಿದ್ದೇವೆ. ವೈಜ್ಞಾನಿಕ ಅಧ್ಯಯನಗಳ ಫಲವಾಗಿ ಪರಿಸರದಲ್ಲಿರುವ ಎಲ್ಲ ಜೀವಿಗಳಿಗೂ ಕರುಣೆ ತೋರುವುದು ನಮ್ಮ ಉಳಿವಿಗಾಗಿ ಅಗತ್ಯವೆಂದು ಈಗ ನಾವು ಕಂಡುಕೊಂಡಿದ್ದೇವೆ. ಪ್ರಾಣಿಗಳ ವಾಸಸ್ಥಳವನ್ನು ರಕ್ಷಿಸುವುದು ಇರಲಿ ಅವುಗಳನ್ನು ನಮ್ಮ ಲಾಭಕ್ಕಾಗಿ ಉಪಭೋಗಕ್ಕಾಗಿ ತೀವ್ರವಾಗಿ ಸಾಕಿ ಸಲಹಿ ಬಳಿಕ ನಮ್ಮ ಆಹಾರಕ್ಕಾಗಿ ಅವುಗಳನ್ನು ಕೊಲ್ಲುವುದಿರಲಿ- ಒಟ್ಟಿನಲ್ಲಿ ಅವುಗಳ ಕಲ್ಯಾಣದಲ್ಲೇ ಮಾನವ ಕಲ್ಯಾಣ ಇದೆ ಎಂಬುದನ್ನು ನಾವೀಗ ಅರ್ಥ ಮಾಡಿಕೊಂಡಿದ್ದೇವೆ. ಮನುಷ್ಯರ ಹಾಗೂ ಪ್ರಾಣಿಗಳ ಉಳಿವು ಅಳಿವು ಪರಸ್ಪರ ಅವಲಂಬಿಸಿದೆ.

ಉದಾಹರಣೆಗೆ, ದುಂಬಿಯನ್ನೇ ತೆಗೆದುಕೊಳ್ಳೋಣ. ಇಂದು ಹವಾಮಾನ ಬದಲಾವಣೆಯಿಂದಾಗಿ ದುಂಬಿಗಳ ಸಂಖ್ಯೆ ಭಯಾನಕವಾದ ಆಘಾತಕಾರಿಯಾದ ದರದಲ್ಲಿ ಕಡಿಮೆಯಾಗುತ್ತಿದೆ. ಕೀಟನಾಶಕಗಳು ಹಾಗೂ ದುಂಬಿಗಳ ವಾಸಸ್ಥಳಗಳು ಕಣ್ಮರೆಯಾಗುತ್ತಿರುವುದು ಕೂಡ ಅವುಗಳು ಅಳಿವಿನತ್ತ ಸಾಗಲು ಕಾರಣವಾಗಿವೆೆ. ವಿಶ್ವದ ಶೇ. 90 ಜನರಿಗೆ ಆಹಾರ ಪೂರೈಸುವ ಸುಮಾರು ನೂರು ರೀತಿಯ ಬೆಳೆಗಳಿಗೆ ಶೇ.70ರಷ್ಟು ಪರಾಗಸ್ಪರ್ಶ ಆಗುವುದು ದುಂಬಿಗಳಿಂದ. ಅಲ್ಲದೆ, ಕೀಟಗಳು, ಸಾವಯವ ವಸ್ತುಗಳು, ಸತ್ತ ಪ್ರಾಣಿಗಳ ಶವಗಳು ಎಲ್ಲವೂ ಕೊಳೆತು ಮಣ್ಣಿನಲ್ಲಿ ಸೇರಿ ಹೋಗುವಂತೆ ಮಾಡುವ ಪ್ರಕ್ರಿಯೆಯಲ್ಲಿ ದುಂಬಿಗಳು ಮುಖ್ಯ ಪಾತ್ರ ವಹಿಸುತ್ತವೆ. ಆ ಮೂಲಕ ಮಣ್ಣನ್ನು ಫಲವತ್ತಾಗಿಸುತ್ತದೆ.

ಸೆಗಣಿ ದುಂಬಿಗಳು 65 ಮಿಲಿಯ ವರ್ಷಗಳ ಹಿಂದೆ ವಿಕಾಸಗೊಂಡು ಅಂದಿನಿಂದ ಇಂದಿನವರೆಗೆ ಪರಿಸರದಲ್ಲಿ ತಮ್ಮ ಪಾತ್ರ ವಹಿಸುತ್ತಾ ಬಂದಿವೆ. ಅವುಗಳ ಹೆಸರೇ ಸೂಚಿಸುವಂತೆ ಅವುಗಳು ಸೆಗಣಿಯನ್ನು ತಿನ್ನುತ್ತವೆ. ಪೌಷ್ಟಿಕಾಂಶಗಳನ್ನು ರೀಸೈಕಲ್ ಮಾಡುತ್ತದೆ ಮತ್ತು ಮಣ್ಣನ್ನು ಫಲವತ್ತಾಗಿಸುತ್ತದೆ. ವಿಶ್ವದಲ್ಲಿರುವ ಒಟ್ಟು ಜೀವಸಂಕುಲದ ಅರ್ಧದಷ್ಟು ಭಾಗ ದುಂಬಿಗಳೇ ಆಗಿವೆ. ಕೀಟಗಳು ವಿನಾಶವಾಗಿ ಹೋದಲ್ಲಿ ನಮ್ಮ ಭೂಮಿಯ ಮೇಲಿನ ಮಣ್ಣು ಸಂಪೂರ್ಣ ನಿರುಪಯೋಗವಾಗುತ್ತದೆ. ಇದರ ಪರಿಣಾಮವಾಗಿ ಭೂಮಿಯ ಮೇಲಿರುವ ಇತರ ಎಲ್ಲ ಜೀವರಾಶಿಗಳು ಕೂಡ ನಾಶವಾಗುತ್ತವೆ. ಪ್ರಾಣಿ ಹಕ್ಕುಗಳ ಇನ್ನೊಂದು ಮುಖ್ಯ ವಿಷಯವೆಂದರೆ, ಬೇಸಾಯ, ಪ್ರಾಣಿಗಳ ಸಾಕಾಣಿಕೆ. ಮಾಂಸ, ಮೊಟ್ಟೆ ಹಾಗೂ ಹಾಲಿಗಾಗಿ ನಾವು ಬಿಲಿಯಗಟ್ಟಲೆ ಪ್ರಾಣಿಗಳನ್ನು ಕಾರ್ಖಾನೆಗಳ ಫಾರ್ಮ್‌ಗಳಲ್ಲಿ ಕೂಡಿ ಹಾಕಿ ಸಾಕುತ್ತೇವೆ. ಪ್ರಾಣಿಗಳಿಗೆ ಮತ್ತು ಮಾನವರಿಗೆ ಇಬ್ಬರಿಗೂ ಕೂಡ ಇದರಿಂದ ಗಂಭೀರ ಸ್ವರೂಪದ ಪರಿಣಾಮಗಳಾಗುತ್ತವೆ. ಬ್ಯಾಟರಿ ಪಂಜರ ಫಾರ್ಮ್‌ಗಳಲ್ಲಿ ಇಟ್ಟು ಸಾಕಲಾಗುವ ಕೋಳಿಗಳು ಅವುಗಳ ಜೀವಿತದಲ್ಲಿ ಎರಡು ಬಾರಿ ಮಾತ್ರ ಸೂರ್ಯನನ್ನು ನೋಡುತ್ತವೆ. ಒಂದು ಬಾರಿ ಅವುಗಳನ್ನು ಫಾರ್ಮಿಗೆ ಕೊಂಡೊಯ್ಯುವಾಗ ಮತ್ತು ಎರಡನೆಯ ಬಾರಿ ವಧಾಗ್ರಹಕ್ಕೆ ಸಾಗಿಸುವಾಗ. ಈ ಫ್ಯಾಕ್ಟರಿ ಫಾರ್ಮ್‌ಗಳ ಸುತ್ತ ಹುಟ್ಟಿಕೊಳ್ಳುವ ಕೊಳಕು ನೀರಿನ ಕೊಳಗಳ ನಿರ್ಮಾಣಕ್ಕೆ ಈ ಫ್ಯಾಕ್ಟರಿಗಳೇ ಕಾರಣ.

ಕೊಳದ ವಾಸನೆಯಿಂದಾಗಿ ನೊಣಗಳು ಸುತ್ತ ಮುತ್ತುತ್ತವೆ. ಈ ಫಾರ್ಮ್‌ಗಳ ಸಮೀಪ ವಾಸಿಸುವ ಜನರು ಉಸಿರಾಟದ ಸಮಸ್ಯೆಯೂ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಆದ್ದರಿಂದ ಫ್ಯಾಕ್ಟರಿ ಫಾರ್ಮ್ ಗಳಿಗೆ ಮಿತಿ ಮೀರಿದ ಸಂಖ್ಯೆಯಲ್ಲಿ ಪ್ರಾಣಿಗಳನ್ನು ತಳ್ಳುವುದರಿಂದ ಆರ್ಥಿಕವಾಗಿ ಲಾಭವಾದರೂ ಅದರ ಪರಿಣಾಮಗಳು ತುಂಬಾ ಹಾನಿಕಾರಕವಾಗಬಲ್ಲವು. ಇದನ್ನು ತಡೆಯಲು ಫಾರ್ಮ್ ಪ್ರಾಣಿಗಳ ಉತ್ಪಾದನೆಯನ್ನು ಹೆಚ್ಚು ಮಾನವೀಯವಾಗಿಸಿ ಕಡಿಮೆ ಶೋಷಣೆ ಯಾಗುವಂತೆ ನೋಡಿಕೊಳ್ಳಬೇಕು. ಬ್ಯಾಟರಿ ಪಂಜರಗಳ ಕ್ರೌರ್ಯವನ್ನು ಕಾನೂನು ರೀತಿಯಲ್ಲಿ ನಿಷೇಧಿಸುವ ಮೂಲಕ ಸರಕಾರಗಳು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಬಹುದು.

ಪ್ರಾಣಿ ಬೇಸಾಯದ ಅಪಾಯಕಾರಿಯಾದ ಪರಿಣಾಮಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಪಶುಗಳಿಗೆ ಮೇವು ಒದಗಿಸಲು ಗೋಮಾಳಕ್ಕಾಗಿ ಹಾಗೂ ಬೇಸಾಯಕ್ಕಾಗಿ ಜಮೀನನ್ನು ಬಳಸಲು ಬಯಸಿದ ವ್ಯಕ್ತಿಗಳೇ ಇತ್ತೀಚೆಗೆ ಅಮೆಝಾನ್ ಕಾಡುಗಳು ಹೊತ್ತಿ ಉರಿಯಲು ಕಾರಣ.
ಪ್ರಾಣಿ ಬೇಸಾಯದ ವಿಪರೀತ ಒತ್ತಡಗಳಿಂದಾಗಿಯೇ ಭಾರತದ ಕಾಡುಗಳು ಕೂಡ ನಶಿಸುತ್ತಿವೆ. ವಿಶ್ವದ ಅತ್ಯಂತ ಗಂಭೀರ ಸ್ವರೂಪದ ಪರಿಸರ ಸಮಸ್ಯೆಗಳಾದ ಜಾಗತಿಕ ತಾಪಮಾನ ಏರಿಕೆ, ಭೂ ಸವೆತ, ವಾಯು ಹಾಗೂ ಜಲ ಮಾಲಿನ್ಯ ಮತ್ತು ಜೀವ ವೈವಿಧ್ಯದ ನಾಶದೊಂದಿಗೆ ಪ್ರಾಣಿಗಳ ಉತ್ಪಾದನೆಯೂ ಒಂದು ಪ್ರಮುಖ ಕಾರಣವೆಂದು ವಿಶ್ವಸಂಸ್ಥೆ ಹೇಳಿದೆ.

ಪ್ರಾಣಿಗಳೆಂದರೆ ಜನರು ತಾವು ಮಾಲಕರಾಗಿ ಅವುಗಳನ್ನು ತಮಗೆ ಬೇಕಾದಾಗ ಪಡೆದುಕೊಂಡು ಬೇಡವಾದಾಗ ಎಸೆದು ಬಿಡಬಹುದಾದ ಸರಕುಗಳಂತೆ ನೋಡುತ್ತಾರೆ. ಪಶು ಸಂಗೋಪನೆಗಾಗಿಯೇ ಒಂದು ಇಡೀ ವಿಭಾಗವಿದೆ. ಕೋಟಿಗಟ್ಟಲೆ ಹಣವನ್ನು ಕಸಾಯಿಖಾನೆಗಳಿಗೆ ವಿನಿಯೋಗಿಸಲಾಗುತ್ತದೆ. ಆದರೆ ದೇಶದ ಮಿಲಿಯಗಟ್ಟಲೆ ಪ್ರಾಣಿಗಳನ್ನು ನೋಡಿಕೊಳ್ಳಲು ಇರುವುದು ಒಂದೇ ಒಂದು ಮಂಡಳಿ. ಪ್ರಾಣಿಗಳ ಕಲ್ಯಾಣಕ್ಕಾಗಿ ಸರಕಾರ ಒಂದು ಸಚಿವಾಲಯ ಸ್ಥಾಪಿಸಿ ಅದಕ್ಕೆ ಸೂಕ್ತವಾದ ಬಜೆಟ್ ನಿಗದಿಪಡಿಸಬೇಕಾದ ಸಮಯ ಬಂದಿದೆ.

ಸಸ್ಯಾಧಾರಿತ ಮತ್ತು ಸಂಸ್ಕರಿತ ಅಥವಾ ಸ್ವಚ್ಛ ಮಾಂಸ ತಯಾರಿಸುವ ತಂತ್ರಜ್ಞಾನಗಳನ್ನು ಬೃಹತ್ ಮಟ್ಟದಲ್ಲಿ ವಾಣಿಜ್ಯೀಕರಿಸುವ ಮೂಲಕ ಪ್ರಾಣಿಗಳ ಜೀವಗಳನ್ನು ಉಳಿಸಬಹುದು. ಅವುಗಳನ್ನು ಮಾಂಸಕ್ಕಾಗಿ ಈಗ ಕಡಿಯುತ್ತಿರುವ ಪ್ರಮಾಣದಲ್ಲಿ ಕಡಿಯುವುದನ್ನು ತಪ್ಪಿಸಬಹುದು. ಪ್ರಾಣಿಯೊಂದರ ದೇಹದಿಂದ ಪಡೆಯಲಾದ ಮಾದರಿ ಜೀವಕೋಶಗಳನ್ನು ಬಳಸಿ ಪ್ರಯೋಗಾಲಯದಲ್ಲಿ ಸ್ವಚ್ಛ ಮಾಂಸವೆಂದು ಆ ಮಾಂಸವನ್ನು ಬೆಳೆಸಲಾಗುತ್ತದೆ.

ಬಿಲಿಯಗಟ್ಟಲೆ ಪ್ರಾಣಿಗಳ ಭವಿಷ್ಯ ನಮ್ಮ ಕೈಯಲ್ಲಿದೆ. ವಸುದೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ) ಎಂಬ ನಮ್ಮ ತತ್ವಜ್ಞಾನವನ್ನು ಕಾರ್ಯರೂಪದಲ್ಲಿ ಅಳವಡಿಸುವ ಅನುಷ್ಠಾನಿಸುವ ಅವಕಾಶ ನಮ್ಮ ಎದುರಿದೆ. ನಮ್ಮ ಎಲ್ಲರ ಸಾಮೂಹಿಕ ಹಿತಾಸಕ್ತಿಗಾಗಿ ನಮ್ಮ ಭವಿಷ್ಯವನ್ನು ಉಳಿಸುವುದಕ್ಕಾಗಿ ನಾವು ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ.


ಕೃಪೆ: ದಿ ಹಿಂದೂ
(ಲೇಖಕಿ ಓರ್ವ ವಕೀಲೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ಪರಿಸರವಾದಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)