varthabharthi


ನಿಮ್ಮ ಅಂಕಣ

ಬದಲಾದ ಸಂದರ್ಭಗಳೂ ಬರಡಾದ ಮನಸ್ಸುಗಳೂ

ವಾರ್ತಾ ಭಾರತಿ : 22 Oct, 2019
ನಾ. ದಿವಾಕರ

ಗ್ಯಾಟ್ ವಿರುದ್ಧ ದನಿ ಎತ್ತಿದ ಮನಸ್ಸುಗಳೇ ಆರ್‌ಸಿಇಪಿ ವಿರುದ್ಧವೂ ದನಿ ಎತ್ತುತ್ತಿವೆ. ಆದರೆ ಸಾರ್ವಜನಿಕರಿಗೆ ಚಿಂತಿಸಲು ಬೇರೆ ವಿಚಾರಗಳಿವೆಯಲ್ಲ! ಎನ್‌ಆರ್‌ಸಿ, ಪೌರತ್ವ ಕಾಯ್ದೆಯ ತಿದ್ದುಪಡಿ, ಅಕ್ರಮ ವಲಸೆ, ವಿಧಿ 370, ಕಾಶ್ಮೀರ, ಉದ್ವಿಗ್ನ ಗಡಿ, ನೆರೆ ರಾಷ್ಟ್ರದ ಹಾವಳಿ ಹೀಗೆ. ಈ ಎಲ್ಲ ಜ್ವಲಂತ(?) ಸಮಸ್ಯೆಗಳು ನಮ್ಮನ್ನು ಕಾಡುತ್ತಿರುವಾಗ ಆರ್‌ಸಿಇಪಿ ಕುರಿತು ಚಿಂತೆಯೇಕೆ? ಆತಂಕವೇಕೆ?


ಭಾರತ ಮುಕ್ತ ಮಾರುಕಟ್ಟೆ ನೀತಿಯನ್ನು ಅಪ್ಪಿಕೊಳ್ಳುವುದಕ್ಕೂ, ದೇಶದಲ್ಲಿ ಮತೀಯವಾದ, ಸಾಮಾಜಿಕ ಕ್ಷೋಭೆ ಮತ್ತು ಜಾತಿ ಸಂಘರ್ಷಗಳು ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯೇ ಎಂದು ಯೋಚಿಸುವುದು ಅಗತ್ಯ. ಭಾರತ ಅರೆ ಸಮಾಜವಾದಿ ಅರ್ಥವ್ಯವಸ್ಥೆಯಿಂದ ಪೂರ್ಣ ಬಂಡವಾಳ ವ್ಯವಸ್ಥೆಗೆ ಜಿಗಿಯಲು ಆರಂಭಿಸಿದ್ದು 1980ರ ದಶಕದಲ್ಲಿ. ರಾಜೀವ್ ಗಾಂಧಿ ಆಡಳಿತಾವಧಿಯಲ್ಲಿ ಆಂತರಿಕವಾಗಿ ಆರಂಭವಾದ ಬದಲಾವಣೆಗಳಿಗೆ ಅಧಿಕೃತ ಮೊಹರು ದೊರೆತದ್ದು 1991ರಲ್ಲಿ, ನರಸಿಂಹರಾವ್-ಮನಮೋಹನ್ ಸಿಂಗ್ ಅವಧಿಯಲ್ಲಿ. ಕಾಕತಾಳೀಯವೋ ಅಥವಾ ಸಮಾಜೋ ರಾಜಕೀಯ ಅನಿವಾರ್ಯತೆಯೋ ಕಾಶ್ಮೀರ ಸಮಸ್ಯೆ ಉಲ್ಬಣಿಸಿದ್ದೂ ಈ ಅವಧಿಯಲ್ಲೇ, ಪ್ರಾದೇಶಿಕ ಪಕ್ಷಗಳ ಜಾತಿ ರಾಜಕಾರಣ ಹೆಚ್ಚಾಗಿದ್ದೂ ಈ ಅವಧಿಯಲ್ಲೇ, ಮತೀಯವಾದ-ರಾಮಮಂದಿರ-ಮಂದಿರ ಮಸೀದಿ ವಿವಾದ ಉಲ್ಬಣಿಸಿದ್ದೂ ಈ ಅವಧಿಯಲ್ಲೇ.

ಅಯೋಧ್ಯೆ ಗಲಭೆ, ಸೋಮನಾಥ ರಥಯಾತ್ರೆ, ಕಾಶ್ಮೀರ ಪಂಡಿತರ ವಲಸೆ, ಉಗ್ರವಾದಿಗಳ ಉಪಟಳ, ಬಾಬರಿ ಮಸೀದಿಯ ಧ್ವಂಸ, ಮುಂಬೈ ಕೋಮು ಗಲಭೆಗಳು, ಕಾಶ್ಮೀರದಲ್ಲಿ ಉಗ್ರವಾದಿಗಳ ಹಿಂಸಾಚಾರ ಇವಿಷ್ಟೂ ಬೆಳವಣಿಗೆಗಳ ನಡುವೆ 1991-92ರಲ್ಲಿ ಸದ್ದಿಲ್ಲದೆ ಭಾರತ ತನ್ನ ಸ್ವಾವಲಂಬನೆಯನ್ನು ಒತ್ತೆ ಇಟ್ಟು ಗ್ಯಾಟ್ ಒಪ್ಪಂದಕ್ಕೆ ಸಹಿ ಮಾಡಿತ್ತು. ಗ್ಯಾಟ್ ವಿರೋಧಿ ಆಂದೋಲನದಲ್ಲಿ ಪಾಲ್ಗೊಳ್ಳಬೇಕಾಗಿದ್ದ ದೇಶದ ಯುವ ಪೀಳಿಗೆ, ಮೇಲೆ ಉಲ್ಲೇಖಿಸಿದ ಪ್ರಕ್ಷುಬ್ಧತೆಯಲ್ಲಿ ಮುಳುಗಿಹೋಗಿತ್ತು. ದೇಶಾದ್ಯಂತ ಗ್ಯಾಟ್ ವಿರೋಧಿ ಆಂದೋಲನ ನಡೆಯಿತು, ಸ್ವದೇಶಿ ಜಾಗರಣ್ ಮಂಚ್ ಸಹ ಎಡಪಕ್ಷಗಳೊಡನೆ ದನಿಗೂಡಿಸಿದವು. ಆದರೆ ಹಾಗೆಯೇ ಮರೆಯಾಗಿದ್ದೂ ಹೌದು. ಗ್ಯಾಟ್‌ಗೆ ಸಹಿ ಮಾಡುವುದನ್ನು ತಪ್ಪಿಸಲಾಗಲಿಲ್ಲ. ಏಕೆಂದರೆ ಇದರಿಂದ ಬಾಧಿತರಾಗುವ ಜನಸಮುದಾಯಗಳು ದಂಗೆ ಏಳದಂತೆ ಇತರ ಭಾವುಕ ವಿಚಾರಗಳನ್ನು ಮುನ್ನೆಲೆಗೆ ತರಲಾಗಿತ್ತು.

1998ರ ವೇಳೆಗೆ ಭಾರತದಲ್ಲಿ ನವ ಉದಾರವಾದ ನೆಲೆಯೂರಿತ್ತು. ಆದರೆ ಮಾರುಕಟ್ಟೆ ಆರ್ಥಿಕತೆಯಿಂದ ಉದ್ಭವಿಸಿದ ಸಂಕಷ್ಟಗಳೂ ಜನಸಾಮಾನ್ಯರನ್ನು ಕಾಡತೊಡಗಿದ್ದವು. ಅಂತರ್‌ರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಿದ್ದ ಭಾರತದ ಆಳುವ ವರ್ಗಗಳು ವಿಶ್ವಬ್ಯಾಂಕ್, ಐಎಂಎಫ್ ಮುಂತಾದ ಹಣಕಾಸು ಬಂಡವಾಳದ ಮಾಲಕರ ಮುಂದೆ ಮಂಡಿಯೂರುವುದು ಅನಿವಾರ್ಯವೂ ಆಗಿತ್ತು. ಆಗಲೇ ವಾಜಪೇಯಿ ಸರಕಾರ ಸಾರ್ವಜನಿಕ ಉದ್ದಿಮೆಗಳ ಸಮಾಧಿಗೆ ಇಟ್ಟಿಗೆಗಳನ್ನು ಪೇರಿಸಲು ಆರಂಭಿಸಿತ್ತು. ಇದರ ಸಾರಥಿಯಾಗಿದ್ದು ಅರುಣ್ ಶೌರಿ, ಬಂಡವಾಳ ಹಿಂದೆಗೆತಕ್ಕಾಗಿಯೇ ಸಚಿವರಾಗಿ ನೇಮಿಸಲ್ಪಟ್ಟವರು. ಭಾರತದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗತೊಡಗಿದ್ದವು. ರೈತರು ಬೀಜದ ಹಕ್ಕಿಗಾಗಿ ಹೋರಾಟ ಆರಂಭಿಸಿದ್ದರು. ವಾಜಪೇಯಿ ಸರಕಾರದ ಕೇಂದ್ರ ಸಂಪುಟದಲ್ಲಿ ಕೃಷಿ ಸಚಿವರೇ ಇರಲಿಲ್ಲ ಎನ್ನುವುದು ಗಮನಾರ್ಹ. ರೈತರ ಸಮಸ್ಯೆ ಉಲ್ಬಣಿಸುವ ಸಂದರ್ಭದಲ್ಲೇ ಹಣಕಾಸು ಕ್ಷೇತ್ರದ ಸುಧಾರಣೆಗಳು ಮೆಲ್ಲನೆ ಸದ್ದು ಮಾಡತೊಡಗಿದ್ದವು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನರಸಿಂಹನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಸರಕಾರ ಸಜ್ಜಾಗಿತ್ತು.

ಇಂದು ನಾವು ಕಾಣುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆ (ಸಮಸ್ಯೆ)ಗಳಿಗೆ ಮೊದಲ ಇಟ್ಟಿಗೆ ಇಟ್ಟಿದ್ದೂ ಇದೇ ಅವಧಿಯಲ್ಲಿ. ಮತ್ತೊಮ್ಮೆ ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಜನಸಾಮಾನ್ಯರನ್ನು ಕಾಡಿತ್ತು. ಅಷ್ಟರಲ್ಲೇ ಒಂದು ಕಾರ್ಗಿಲ್, ಒಂದು ಗುಜರಾತ್, 2002. ಎಷ್ಟೇ ರಾಜಧರ್ಮವನ್ನು ಪಾಲಿಸಿದರೂ ನವ ಉದಾರವಾದದ ವಿರುದ್ಧ ದನಿಗೂಡಿಸಲು ಜನಸಾಮಾನ್ಯರಿಗೆ ಅವಕಾಶವೇ ಇರಲಿಲ್ಲ. ಮತ್ತೊಮ್ಮೆ ಹಿಂದೂ, ಮುಸ್ಲಿಂ, ಕ್ರೈಸ್ತರ ಮೇಲಿನ ದಾಳಿ, ಗ್ರಾಹಂ ಸ್ಟೈನ್ಸ್, ಗೋಧ್ರಾ, ಗುಜರಾತ್ ಹೀಗೆ. ಮಾರುಕಟ್ಟೆಯ ನಡಿಗೆ ಬಿರುಸಾಯಿತು. ಭಾರತ ಪ್ರಕಾಶಿಸಲಿಲ್ಲ. ಸಮಸ್ಯೆಗಳೂ ಬಗೆಹರಿಯಲಿಲ್ಲ. ರಕ್ತದ ಕೋಡಿ ಹರಿಯಿತು. ಬೆವರಿನ ಕಾಲುವೆ ಬತ್ತಿಹೋಯಿತು.

ನಂತರ ಅಧಿಕಾರ ಹಸ್ತಾಂತರ. 1991ರ ಗ್ಯಾಟ್ ರೂವಾರಿಯೇ ಪ್ರಧಾನಿ. ಜಾಗತಿಕ ಬಂಡವಾಳದ ಹೂರಣಕ್ಕೆ ದೇಸಿ ಮಾರುಕಟ್ಟೆಯ ಹೋಳಿಗೆ ಸಿದ್ಧವಾಯಿತು. ಆದರೂ ಜನಸಾಮಾನ್ಯರನ್ನು ತಲುಪುವ ಕೆಲವು ಕಾಯ್ದೆ ಕಾನೂನುಗಳಾದ ಆಹಾರದ ಹಕ್ಕು, ಅರಣ್ಯದ ಹಕ್ಕು, ಉದ್ಯೋಗ ಹಕ್ಕು, ಉದ್ಯೋಗ ಖಾತ್ರಿ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು. ಮಧ್ಯಮ ಮತ್ತು ಕೆಳಮಧ್ಯಮ ವರ್ಗಗಳಿಗೆ ಕೊಂಚವಾದರೂ ಸಮಾಧಾನ ತರಬಹುದಾದ ಕಾಯ್ದೆಗಳು ಅಂಚಿಗೆ ತಳ್ಳಲ್ಪಟ್ಟವರ, ಬೀದಿ ಪಾಲಾದವರ, ಅವಕಾಶ ವಂಚಿತರ ಬದುಕನ್ನೇನೂ ಸುಧಾರಿಸದಿದ್ದರೂ ಉಸಿರಾಡಲು ಸ್ವಲ್ಪಆಮ್ಲಜನಕ ಒದಗಿಸಿತ್ತು. ಕೃಷಿ ಬಿಕ್ಕಟ್ಟು ಪುನಃ ಅನಾಥಶಿಶು ರೈತರು ಮತ್ತೊಮ್ಮೆ ನೇಣಿಗೆ ಶರಣು. ಸಾವಿರಗಟ್ಟಲೆ ಆತ್ಮಹತ್ಯೆಗಳು, ಲಕ್ಷ ಸಂಖ್ಯೆ ದಾಟಿದರೂ ಮರದ ಟೊಂಗೆಗಳೂ ಮುರಿಯಲಿಲ್ಲ, ವಿಷದ ಬಾಟಲಿಗಳೂ ಖಾಲಿಯಾಗಲಿಲ್ಲ. ರೈತ ಕುಟುಂಬಗಳು ಬರಿದಾದವು. ಇಷ್ಟಾದರೂ ಜನರು ದಂಗೆ ಏಳಲಾಗಲಿಲ್ಲ. ಏಕೆಂದರೆ 2008ರ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವನ್ನು ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಹಿಂದಕ್ಕೆ ತಳ್ಳಿಬಿಟ್ಟಿತ್ತು. ಮತ್ತೊಮ್ಮೆ ಭಾರತ-ಪಾಕ್, ಭಯೋತ್ಪಾದನೆ ಇತ್ಯಾದಿ ಇತ್ಯಾದಿ. ಈ ಪ್ರಕ್ಷುಬ್ಧತೆಯ ನಡುವೆ ನಮ್ಮ ಮಧ್ಯೆ ಸೃಷ್ಟಿಯಾದ ಭ್ರಮೆಗೆ ಹೊದಿಕೆಯಾದದ್ದು ಯುಪಿಎ ಸರಕಾರದ ಭ್ರಷ್ಟಾಚಾರ ಹಗರಣಗಳು. ಅಂತೂ ಇಂತೂ ಜನರ ಪ್ರತಿರೋಧ ಗುಡ್ಡದಾಚೆಯ ದನಿಯಂತೆ ಕೇಳಿಸಿ ಮರೆಯಾಗಿಬಿಟ್ಟಿತು.

 2014 ಮತ್ತೊಂದು ಅಧಿಕಾರ ಹಸ್ತಾಂತರ. 2009-14ರ ಭೀಕರ ಭ್ರಷ್ಟಾಚಾರದ ಹಗರಣಗಳಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ ಎನ್ನುವುದನ್ನು ಪಕ್ಕಕ್ಕಿಡೋಣ. ನವ ಉದಾರವಾದ ಮತ್ತು ನಾಲ್ಕನೆಯ ಔದ್ಯಮಿಕ ಕ್ರಾಂತಿಗೆ ಕೆಂಪು ಕಂಬಳಿಯ ಸ್ವಾಗತ ಕೋರಲು ಭಾರತ ಸಜ್ಜಾಯಿತು. ರೈತರ ಆತ್ಮಹತ್ಯೆಗಳೇನೂ ನಿಂತಿರಲಿಲ್ಲ. ಇಂದಿಗೂ ನಿಂತಿಲ್ಲ. ವರದಿಯಾಗುವುದು ಕಡಿಮೆಯಾಗಿದೆ. ಏಕೆಂದರೆ ಬದಲಾದ ಸನ್ನಿವೇಶದಲ್ಲಿ ಮಾಧ್ಯಮಗಳೂ ಬದಲಾಗಿಬಿಟ್ಟವು. ಸಾರ್ವಜನಿಕ ಚರ್ಚೆಯ ವಿಷಯಗಳೇ ಬದಲಾಗಿಬಿಟ್ಟವು. ಜ್ವಲಂತ ಸಮಸ್ಯೆಗಳ ಸ್ವರೂಪ ಮತ್ತು ಮೇಲ್ಮೈ ಲಕ್ಷಣಗಳು ಬದಲಾಗಿಬಿಟ್ಟವು. ಉನಾ, ದಾದ್ರಿ, ಪೆಹ್ಲೂ ಖಾನ್, ನಿರ್ಭಯ, ಕಥುವಾ, ಗುಂಪು ಥಳಿತ ಹೀಗೆ ಸಾರ್ವಜನಿಕ ಜೀವನದಲ್ಲಿ ಸಮಸ್ಯೆಗಳು ಹೊಸ ಸ್ವರೂಪ ಪಡೆದವು. ಆಹಾರ ಭದ್ರತೆಯ ಕಾಯ್ದೆ ಎಷ್ಟು ಉಪಯುಕ್ತವಾಯಿತೋ ಗೊತ್ತಿಲ್ಲ, ತಿನ್ನುವ ಕೂಳು, ಉಡುವ ಬಟ್ಟೆ, ಆಡುವ ಮಾತು ಸಾವಿನ ರಹದಾರಿಯಾಗಿ ಪರಿಣಮಿಸಿತು. ತಿನ್ನಲು ಏನೂ ಇಲ್ಲ ಎನ್ನುವುದು ಪ್ರಶ್ನೆಯಾಗಲೇ ಇಲ್ಲ. ಏನು ತಿಂತಿದ್ದೀಯಾ ಎನ್ನುವುದು ಪ್ರಶ್ನೆಯಾಯಿತು! ಬದುಕಲು ನೆರವಾಗುತ್ತಿದ್ದ ಕಸುಬು ಉನಾ ಘಟನೆಯ ಮೂಲಕ ಸಾಯುವ ಮಾರ್ಗವಾಯಿತು. ನಡುವೆಯೇ ಜೇಬುಗಳಲ್ಲಿದ್ದ, ಸಾಸಿವೆ ಡಬ್ಬಿಗಳಲ್ಲಿದ್ದ ಕಾಸು ನಮ್ಮದಲ್ಲ ಎಂದಾಯಿತು. ಇಷ್ಟೆಲ್ಲಾ ಜ್ವಲಂತ (?) ಸಮಸ್ಯೆಗಳು ಭಾರತದ ಸ್ವಾವಲಂಬಿ (?) ಪ್ರಜೆಗಳನ್ನು ಕಾಡುತ್ತಿರುವಂತೆಯೇ ನಾಲ್ಕನೆಯ ಔದ್ಯಮಿಕ ಕ್ರಾಂತಿ ಶಾಮಿಯಾನಾ ಹಾಕಿ ವೇದಿಕೆಯನ್ನೂ ನಿರ್ಮಿಸಿಬಿಟ್ಟಿತ್ತು.

 2019 ಮತ್ತೊಂದು ಚುನಾವಣೆ. ಅಧಿಕಾರ ಹಸ್ತಾಂತರ ಇಲ್ಲ. ಮುಂದುವರಿಕೆ. ಅಷ್ಟರಲ್ಲೇ ಮತ್ತೊಮ್ಮೆ ನೆರೆ ರಾಷ್ಟ್ರದಿಂದ ಭಯೋತ್ಪಾದಕ ದಾಳಿ. ಮತ್ತೊಮ್ಮೆ ದೇಶ ಅಪಾಯದಲ್ಲಿದೆ ಎನ್ನುವ ಭಾವನೆ. ಮತ್ತೊಮ್ಮೆ ಪ್ರಕ್ಷುಬ್ಧತೆ. ಹುತಾತ್ಮ ಯೋಧರ ನೆನಪುಗಳು ನಿರುದ್ಯೋಗಿಗಳನ್ನೂ ನಿಷ್ಕ್ರಿಯರನ್ನಾಗಿ ಮಾಡಿಬಿಟ್ಟಿತು. 1991ರಲ್ಲಿ ಹಾಕಿದ ಹೊಸ ತಳಪಾಯದ ಮೇಲೆ 28 ವರ್ಷಗಳಲ್ಲಿ ನಿರ್ಮಿಸಿದ ಅರಮನೆಯ ಸೂರಿನಿಂದ ಮಳೆ ನೀರು ತೊಟ್ಟಿಕ್ಕುತ್ತಿದೆ. ನೆಲದ ಮೇಲೆ ಬೀಳದಿರಲು ಬಕೆಟುಗಳನ್ನಿಟ್ಟು ಹನಿ ನೀರಾವರಿಗಾಗಿ ಸಂಗ್ರಹಿಸಲಾಗುತ್ತಿದೆ. ರಾವ್-ಸಿಂಗ್ ಜೋಡಿ ನಿರ್ಮಿಸಿದ ಅಡಿಪಾಯವನ್ನು ಮತ್ತಷ್ಟು ಭದ್ರಪಡಿಸಲು ಅರ್ಥ ವ್ಯವಸ್ಥೆಗೆ ಕಾಯಕಲ್ಪಒದಗಿಸಲಾಗುತ್ತಿದೆ. ಸೂರಿನಿಂದ ನೀರು ತೊಟ್ಟಿಕ್ಕುತ್ತಲೇ ಇದೆ. ಅದು ಮಳೆ ನೀರಲ್ಲ ಪನ್ನೀರ ಹನಿ ಎಂದು ಭಾವಿಸಿ ನಾವು ಸಂಭ್ರಮಿಸುತ್ತಿದ್ದೇವೆ. ಸದ್ದಿಲ್ಲದೆ ಸಾರ್ವಜನಿಕ ಉದ್ದಿಮೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಲಕ್ಷಾಂತರ ನೌಕರರು ರಸ್ತೆಯ ನಡುವೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದಾರೆ. 28 ವರ್ಷಗಳ ಪರಿಶ್ರಮ(?)ದಿಂದ ಪರಿಪರಿಯಾದ ಮಾರ್ಗಗಳನ್ನು ಅನುಸರಿಸಿ ನಿರ್ಮಿಸಿದ ಅರಮನೆಯ ಗೋಡೆಗಳೂ ಬಿರುಕು ಬಿಡುತ್ತಿವೆ. ತೇಪೆ ಹಾಕಲು ಕಟ್ಟಡದ ತಳಪಾಯದಿಂದಲೇ ಕೆಮ್ಮಣ್ಣು ತೆಗೆದು ಮೆತ್ತಲಾಗುತ್ತಿದೆ. ಗೋಡೆ ಭದ್ರವಾಗುತ್ತದೆ ತಳ ಖಾಲಿಯಾಗುತ್ತದೆ. ಕುಸಿಯುವವರೆಗೂ ಸುರಕ್ಷಿತ. ಅಷ್ಟರೊಳಗೆ ಮತ್ತೇನಾದರೂ ಸಂಭವಿಸಬಹುದು. ಹೇಗೋ ಏನೋ ಮತ್ತೊಮ್ಮೆ ಜನಸಾಮಾನ್ಯರು ತಮ್ಮ ಬದುಕಿಗಾಗಿ ಹೋರಾಡಲು ಮನಸ್ಸು ಮಾಡದಂತಹ ಪರಿಸ್ಥಿತಿ.

ಈಗ ಶವಪೆಟ್ಟಿಗೆಗೆ ಕೊನೆಯ ಮೊಳೆ. ಕ್ಷೀರ ಕ್ರಾಂತಿಗೆ ನಾಂದಿ ಹಾಡಿದ ಭಾರತದೊಳಗೆ ವಿದೇಶದಿಂದ ಹಾಲಿನ ಹೊಳೆ ಹರಿಯಲಿದೆ. ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಮಾಡಲು ಸಜ್ಜಾಗಿರುವ ಭಾರತ ಸರಕಾರ ಉದ್ಯಮಿಗಳನ್ನು ಜೇನಿನ ಮಳೆಯಲ್ಲಿ ತೊಯ್ದು ತೊಪ್ಪೆಯಾಗುವಂತೆ ಮಾಡಲು ಸಜ್ಜಾಗಿದೆ. ಉತ್ಪಾದಕ ಶಕ್ತಿಗಳು ಹೇಗೂ ಬೆವರಿನ ಗೂಡುಗಳಲ್ಲಿ ಸಿಲುಕಿದ್ದಾಗಿದೆ. ಈ ಒಪ್ಪಂದಕ್ಕೆ ಸಹಿ ಮಾಡಿಬಿಟ್ಟರೆ ಜಾಗತಿಕ ಮಾರುಕಟ್ಟೆಯ ಬಕಾಸುರರು ನಮ್ಮ ಹಳ್ಳಿಯ ಸಂತೆಮಾಳಗಳನ್ನೂ ಆಕ್ರಮಿಸಿಬಿಡುತ್ತಾರೆ. ಕೃಷಿ ಉತ್ಪನ್ನ, ಕೃಷಿ ಸಲಕರಣೆ ಎಲ್ಲವೂ ವಿದೇಶಿ. ಅಮೆಜಾನ್, ಫ್ಲಿಪ್‌ಕಾರ್ಟ್, ಆ್ಯಪಲ್ ಹೀಗೆ ಶಾಪಿಂಗ್ ಮಾಲ್‌ಗಳು ನಮ್ಮ ಕಿರಾಣಿ ಅಂಗಡಿಗಳನ್ನೂ ಮುಳುಗಿಸಿಬಿಡುತ್ತವೆ. ಗ್ಯಾಟ್ ವಿರುದ್ಧ ದನಿ ಎತ್ತಿದ ಮನಸ್ಸುಗಳೇ ಆರ್‌ಸಿಇಪಿ ವಿರುದ್ಧವೂ ದನಿ ಎತ್ತುತ್ತಿವೆ. ಆದರೆ ಸಾರ್ವಜನಿಕರಿಗೆ ಚಿಂತಿಸಲು ಬೇರೆ ವಿಚಾರಗಳಿವೆಯಲ್ಲ! ಎನ್‌ಆರ್‌ಸಿ, ಪೌರತ್ವ ಕಾಯ್ದೆಯ ತಿದ್ದುಪಡಿ, ಅಕ್ರಮ ವಲಸೆ, ವಿಧಿ 370, ಕಾಶ್ಮೀರ, ಉದ್ವಿಗ್ನ ಗಡಿ, ನೆರೆ ರಾಷ್ಟ್ರದ ಹಾವಳಿ ಹೀಗೆ. ಈ ಎಲ್ಲ ಜ್ವಲಂತ(?) ಸಮಸ್ಯೆಗಳು ನಮ್ಮನ್ನು ಕಾಡುತ್ತಿರುವಾಗ ಆರ್‌ಸಿಇಪಿ ಕುರಿತು ಚಿಂತೆಯೇಕೆ? ಆತಂಕವೇಕೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)