ನಿಮ್ಮ ಅಂಕಣ
ಯಾರು ಗೆಲ್ಲುತ್ತಾರೆಂದು ಮೊದಲೇ ಊಹಿಸಬಹುದು!
ಮಾನ್ಯರೇ,
ನವೆೆಂಬರ್ 12ಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಿಗದಿಯಾಗಿದೆ. ಈಗ ಮಂಗಳೂರು ನಗರದ ಸಮಸ್ಯೆಗಳ ಚರ್ಚೆ ಮುನ್ನೆಲೆಗೆ ಬಂದು ಜನರ ಅಹವಾಲುಗಳನ್ನು ಅಭ್ಯರ್ಥಿಗಳು ಆಲಿಸುತ್ತಾರೆ ಎಂದು ಜನರು ನಿರೀಕ್ಷಿಸಿದರೆ ಅದು ತಪ್ಪು. ಬಿಜೆಪಿ ಎಂದಿನಂತೆ ವಿರೋಧ ಪಕ್ಷಗಳ ಹಾದಿ ತಪ್ಪಿಸಿ ಯಾವುದೋ ಒಂದು ಧಾರ್ಮಿಕ ದ್ವೇಷದ ವಿಷಯವನ್ನು ಪಾಕಿಸ್ತಾನದ ಗಡಿಯಿಂದ ಅಥವಾ ಕಾಶ್ಮೀರ ಕಣಿವೆಯಿಂದ ಎಳೆದು ತರುತ್ತದೆ. ಆ ಹಗ್ಗದ ಇನ್ನೊಂದು ತುದಿಯ ಉರುಳು ಕೊರಳಿಗೆ ಹಾಕಿಕೊಂಡು ಕಾಂಗ್ರೆಸ್ ನೇತಾಡುತ್ತದೆ. ಅಲ್ಲಿಗೆ ಮಂಗಳೂರಿಗರ ನೈಜ ಸಮಸ್ಯೆಗಳು ಮೂಲೆ ಸೇರುತ್ತವೆ.
ಮಹಾರಾಷ್ಟ್ರ-ಹರ್ಯಾಣ ಚುನಾವಣೆಯಲ್ಲಿ ಸಾವರ್ಕರ್ಗೆ ಭಾರತ ರತ್ನ ಕೊಡುವ ಅನಗತ್ಯ ವಿಷಯ ಮಾತ್ರ ಚರ್ಚೆಯಾಗಿ, ನಿರುದ್ಯೋಗ, ಆರ್ಥಿಕ ಹಿಂಜರಿತದಂತಹ ಜ್ವಲಂತ ಸಮಸ್ಯೆಗಳು ಮೂಲೆ ಸೇರಿದ್ದರಿಂದ ಬಿಜೆಪಿಗೆ ಸುಲಭವಾಯಿತು. ಅದರಂತೆಯೇ ಮಂಗಳೂರು ಕಾರ್ಪೊರೇಶನ್ನಲ್ಲಿ ಬಿಜೆಪಿ ಗೆದ್ದರೆ ಸಾವರ್ಕರ್ರ ಪ್ರತಿಮೆ ನೆಹರೂ ಮೈದಾನದಲ್ಲಿ ಸ್ಥಾಪಿಸುವುದಾಗಿ ಬಿಜೆಪಿ ‘ಹೇಳುತ್ತದೆ’. ಈ ಹೇಳಿಕೆಯನ್ನು ಹಿಡಿದು ಕಾಂಗ್ರೆಸ್ ಕೊಸರಾಡುತ್ತದೆ ಹಾಗೂ ನಮ್ಮ ನಗರದ ನೈಜ ಸಮಸ್ಯೆಗಳು ಸಮಾಧಿ ಸೇರುತ್ತವೆ. ಜತೆಗೆ ಮಂಗಳೂರಿಗೆ ಯಾವುದೇ ಸಂಬಂಧವಿಲ್ಲದ ವಿಧಿ 370, ಎನ್ಆರ್ಸಿ ಮುಂತಾದ ಧಾರ್ಮಿಕ ಸೂಕ್ಷ್ಮವಿಷಯಗಳನ್ನು ಹಿಡಿದು ಬಿಜೆಪಿ ಬೊಬ್ಬಿರಿಯುತ್ತದೆ.
ಊಹಿಸಿದಂತೆ ಶೇ. 99 ಮಂಗಳೂರಿಗರು ಎಂದೂ ನೋಡಿರದಿದ್ದ ಕಾಶ್ಮೀರದ ವಿಷಯ ಅಥವಾ ಮಂಗಳೂರಿನ ಓಎನ್ಜಿಸಿ-ಸೇಜ್ನಲ್ಲಿ ಉತ್ತರ ಭಾರತೀಯ ಕಾರ್ಮಿಕರಲ್ಲಿ ಬಾಂಗ್ಲಾದೇಶಿಯ ಉಗ್ರರು ಇದ್ದಾರೆ ಎಂಬ ಹಿಂದೂ-ಮುಸ್ಲಿಂ ದ್ವೇಷ ಹರಡುವ ಎನ್ಆರ್ಸಿ ವಿಷಯ ಕಾರ್ಪೊರೇಶನ್ ಚುನಾವಣೆಯಲ್ಲೂ ಮೇಲೆದ್ದು ಬರಬಹುದು. ಅಲ್ಲಿಗೆ ಮಂಗಳೂರಿಗರು ಮಂಗ ಆಗುತ್ತಾರೆ ಮತ್ತು ಕಾರ್ಪೊರೇಶನ್ ಚುನಾವಣೆಯನ್ನು ಅನಾಯಾಸವಾಗಿ ಗೆಲ್ಲುವುದು ಯಾರೆಂದು ಹೇಳಬೇಕಿಲ್ಲ ತಾನೇ? ಬುದ್ಧಿವಂತ (?) ಜನರಿರುವ ಮಂಗಳೂರು ಕಾರ್ಪೊರೇಶನ್ನ ಚುನಾವಣೆ ಹೀಗೆ ಸಂಪನ್ನಗೊಳ್ಳುತ್ತದೆ. ನಗರಪಾಲಿಕೆ ಚುನಾವಣೆ ಕೂಡಾ ಇವಿಎಂ ಮೂಲಕವೇ ನಡೆಯಲಿರುವುದರಿಂದ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಸುಲಭ ಬಿಡಿ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ