varthabharthi


ನಿಮ್ಮ ಅಂಕಣ

ಪರಿಸರ ಬಿಕ್ಕಟ್ಟಿಗೆ ತಂತ್ರಜ್ಞಾನ ಪರಿಹಾರವಲ್ಲ

ವಾರ್ತಾ ಭಾರತಿ : 23 Oct, 2019
ಆರ್ಯಮಾನ್ ಜೈನ್ ಮತ್ತು ಅಸೀಮ್ ಶ್ರೀವಾತ್ಸವ

ಕೃತಕ ಮಾಂಸ ಉತ್ಪಾದಿಸುವುದರಿಂದ ಹಿಡಿದು ಪುನರ್ಬಳಕೆ ಮಾಡಬಹುದಾದ ಶಕ್ತಿಯವರೆಗೆ ವಾಣಿಜ್ಯೋದ್ಯಮಿಗಳು ನಮ್ಮ ಭೂಮಿಯ ಬಗ್ಗೆ ಬಹಳ ಕಾಳಜಿ ಇರುವವರ ಹಾಗೆ ಕಾಣಿಸುತ್ತಾರೆ. ಆದರೆ ಅವರ ಎಲ್ಲ ಚಟುವಟಿಕೆಗಳು ನಿಜವಾಗಿ ಕಾಳಜಿಯಿಂದ ಪ್ರೇರಿತವಾದವುಗಳೇ? ಅಥವಾ ಲಾಭದ ಉದ್ದೇಶವಿರುವ ಒಂದು ಯೋಜನೆಗೆ ವಿಶ್ವಾಸಾರ್ಹತೆಯನ್ನು ಪಡೆಯುವ ಒಂದು ಪ್ರಯತ್ನವೇ? ತಪ್ಪುಮಾಹಿತಿಯ ಈ ಯುಗದಲ್ಲಿ ಯಾವುದು ನಿಜವಾದ ಪರಿಸರ ಕಾಳಜಿ ಯಾವುದು ಗ್ರೀನ್ ಮತ್ತು ಯಾವುದು ಕೇವಲ ತೋರಿಕೆಯ ಪರಿಸರ ಕಾಳಜಿ ಅಥವಾ ಗ್ರೀನ್ ವಾಶ್ ಎಂದು ವಿಂಗಡಿಸಿ ಹೇಳುವುದು ಕಷ್ಟ.

ಉದಾಹರಣೆಗೆ ಮುಂಬಯಿಯಲ್ಲಿ ಅರೆ ಕಾಡನ್ನು ಉಳಿಸಿಕೊಳ್ಳಲು ನಾಗರಿಕರು ಬಹಳ ಸಮಯದವರೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸಿದರು, ಚಳವಳಿ ನಡೆಸಿದರು. ಆದರೂ ಆ ಕಾಡಿನ ಮರಗಳನ್ನು ಕಡಿದು ನೆಲಸಮ ಮಾಡಲಾಯಿತು. ಮೆಟ್ರೋ ಕಾರ್ ಡಿಪೋಗೆ ಇತರ ಹಲವು ಬದಲಿ ನಿವೇಶನಗಳು ಲಭ್ಯವಿದ್ದರೂ ಮೆಟ್ರೊ ಗುತ್ತಿಗೆದಾರರು ಅರಣ್ಯ ಭೂಮಿಯೇ ಬೇಕೆಂದು ಪಟ್ಟು ಹಿಡಿದರು. ಭಾರೀ ಬಂಡವಾಳ ಬೇಕಾಗುವ ಮೆಟ್ರೋ ಯೋಜನೆ ಮಾತ್ರ ಮುಂಬೈ ಮಹಾನಗರದ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸಲು ಇರುವ ಆಯ್ಕೆ ಬೇರೆ ಆಯ್ಕೆ ಇಲ್ಲ ಎಂದು ವಾದಿಸಲಾಯಿತು.

ಮರಗಳನ್ನು ಕಡಿದ ಬಗ್ಗೆ ದುಃಖ ಇರುವಾಗಲೇ ಹಲವರು ಮರಗಳನ್ನು ಕಡಿದದ್ದು ಸರಿಯಾದ ಕ್ರಮವೆಂದು ಸಮರ್ಥಿಸುತ್ತಿದ್ದಾರೆ. ಒಂದು ಮೆಟ್ರೊ ನಿರ್ಮಾಣ ಹೊಗೆ ಮಾಲಿನ್ಯದ ಹೆಚ್ಚಳವನ್ನು ತಡೆಯುತ್ತದೆ ಎಂಬುದು ಅವರ ವಾದ. ಕಾರುಗಳು ಮತ್ತು ಬಸ್ಸುಗಳು ಉಂಟು ಮಾಡುವ ಹೊಗೆ ಮಾಲಿನ್ಯವನ್ನು ಮೆಟ್ರೋ ಸಾರಿಗೆ ತಡೆಯುತ್ತದೆ; ಒಂದು ಕಾಡು ಅಂಗಾರಾಮ್ಲ ಅನಿಲವನ್ನು ಹೀರಿ ಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದ ಹೊಗೆ ಮಾಲಿನ್ಯವನ್ನು ಕಾರು ಬಸ್ಸುಗಳು ಉಂಟು ಮಾಡುವುದರಿಂದ ಕಾಡನ್ನು ಕಡಿದು ಮೆಟ್ರೋ ಸಾರಿಗೆಯನ್ನು ನಿರ್ಮಿಸುವುದೇ ಉತ್ತಮ ಎಂದು ಅವರು ಎರಡನ್ನೂ ಹೋಲಿಸಿ ವಾದಿಸುತ್ತಾರೆ.

ಆದರೆ ಸಾರ್ವಜನಿಕ ಸಾರಿಗೆ ಅಂಗಾರಾಮ್ಲವನ್ನು ಹೀರಿಕೊಳ್ಳುವುದಿಲ್ಲ. ಅದು ಪ್ರಾಣಿಗಳಿಗೆ ವಾಸಸ್ಥಳ ನೀಡಲಾರದು; ಅಂತರ್ಜಲವನ್ನು ಪುನಃ ತುಂಬಿಸಲಾರದು; ರೀಚಾರ್ಜ್ ಮಾಡಲಾರದು ಅಥವಾ ನಮ್ಮ ಮಣ್ಣನ್ನು ಸಂರಕ್ಷಿಸಲಾಗದು. ಪರಿಸರ ಮಾಲಿನ್ಯ ಬಿಕ್ಕಟ್ಟು ಇಂಗಾಲದ ಹೊರಸೂಸುವಿಕೆ ಸಮಸ್ಯೆಗಿಂತ ತುಂಬಾ ದೊಡ್ಡ ಸಮಸ್ಯೆ ಹದಗೆಡುವ ವಾಯುವಿನ ಗುಣಮಟ್ಟ ಹಾಗೂ ವಾತಾವರಣವಷ್ಟೇ ಅಲ್ಲದೆ ಪರಿಸರ ಬಿಕ್ಕಟ್ಟು ಎಂಬುದು ಹಲವಾರು ವಿಷಯಗಳ ಬಿಕ್ಕಟ್ಟು: ಜೀವ ವೈವಿಧ್ಯ, ಶುದ್ಧ ನೀರು, ಮಣ್ಣು ಮತ್ತು ಕಾಡುಗಳು. ಈ ಬಿಕ್ಕಟ್ಟು, ಗಂಡಾಂತರ ನಮ್ಮ ಆತ್ಮಗಳ ನಷ್ಟದ ಬಿಕ್ಕಟ್ಟು.

ಪರಿಸರ ಬಿಕ್ಕಟ್ಟನ್ನು ವಿಶೇಷವಾಗಿ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಬೇಕಾದಲ್ಲಿ ನಾವು ಹೊಗೆ ಉಗುಳುವಿಕೆ (ಎಮಿಶನ್) ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಎಮಿಶನ್‌ನ ವೇಗ, ಪ್ರಮಾಣ ಎಷ್ಟು ಕಡಿಮೆಯಾಗುತ್ತದೆಂದು ಅಂದಾಜಿಸುತ್ತಾ ಕುಳಿತುಕೊಳ್ಳುವುದರಿಂದ ಯಾವ ಉಪಯೋಗವೂ ಇಲ್ಲ. ಕಾಡುಗಳನ್ನು ಕಡಿಯುವುದನ್ನು ಸಮರ್ಥಿಸುವವರು ತರ್ಕವನ್ನು ಮುಂದೂಡುತ್ತಾರೆ. ಮೆಟ್ರೋ ನಿರ್ಮಾಣದಿಂದಾಗಿ ನಾವು ಎಷ್ಟು ಎಮಿಶನ್‌ಗಳನ್ನು ಉಳಿಸಿದ್ದೇವೆ, ತಡೆದಿದ್ದೇವೆ ಎಂದು ಹೋಲಿಕೆಯ ತಖ್ತೆ ನೀಡುತ್ತಾರೆ.

ಇದರ ಹಿಂದೆ ಹಲವು ರೀತಿಯ ರಾಜಕೀಯ ಹಾಗೂ ಆರ್ಥಿಕ ಲೆಕ್ಕಾಚಾರಗಳಿರುತ್ತವೆ. ಆದರೆ ಪರಿಸರ ಗಂಡಾಂತರವನ್ನು ತಡೆಯಬೇಕಾದಲ್ಲಿ ಎಮಿಶನ್ ದರ ಯಾವುದರಲ್ಲಿ ಎಷ್ಟು ಕುಸಿಯ ಬೇಕು ಎಂಬುದು ಮಾತ್ರ ನಿಜವಾಗಿ ಮಾಡಬೇಕಾದ ಹೋಲಿಕೆ.

 ಕೊನೆಯದಾಗಿ, ನಾವು ಒಂದು ಮುಖ್ಯ ಪ್ರಶ್ನೆ ಕೇಳಬೇಕು: ಮೆಟ್ರೋ ನಿಜವಾಗಿಯೂ ಕಾರುಗಳ ಸ್ಥಾನವನ್ನು ತುಂಬುತ್ತದೆಯೇ? ಅಥವಾ ಮೆಟ್ರೋ ಸಾರಿಗೆ ಅನುಷ್ಠಾನಗೊಂಡ ಬಳಿಕ ಈಗ ಕಾರುಗಳಲ್ಲಿ, ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿರುವವರು ತಮ್ಮ ವಾಹನಗಳನ್ನು ಮನೆಯಲ್ಲೇ ಇಟ್ಟು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆಯೇ? ಮೆಟ್ರೋದಲ್ಲಿ ಪ್ರಯಾಣಿಸುವವರು ಪ್ರತಿದಿನ ಕಾರಿನಲ್ಲಿ ಪ್ರಯಾಣಿಸುವವರಿಗಿಂತ ಕೆಲವು ಮೆಟ್ಟಿಲುಗಳಷ್ಟು ಕೆಳಗೆ ಇರುವವರಲ್ಲವೇ? ಅಂದರೆ, ಈಗ ಸ್ವಂತ ಕಾರುಗಳಲ್ಲಿ ಓಡಾಡುವವರು, ಶ್ರೀಮಂತರು ಸಮಾಜದ ಮೇಲ್ಪದರವು ಮೆಟ್ರೋದಲ್ಲಿ ಪ್ರಯಾಣಿಸುವುದು ಆರ್ಥಿಕವಾಗಿ ಲಾಭದಾಯಕವಾದರೂ ಅವರು ಮೆಟ್ರೋದಲ್ಲಿ ಪ್ರಯಾಣಿಸುವವರೊಂದಿಗೆ ಕುಳಿತು ಪ್ರಯಾಣಿಸಲಾರರು ಎಂಬುದು ಸತ್ಯವಲ್ಲವೇ?

ನಗರವೊಂದರಲ್ಲಿ ಮೆಟ್ರೋ ಬಂದಾಗ ಅಥವಾ ಬಸ್ ಸಾರಿಗೆ ವ್ಯವಸ್ಥೆ ಉತ್ತಮಗೊಂಡಾಗ ಆ ನಗರದಲ್ಲಿ ಕಾರುಗಳ ಮಾರಾಟ ಕಡಿಮೆಯಾಗುತ್ತದೆ ಎಂಬುದಕ್ಕೆ ಯಾವ ಪುರಾವೆಯೂ ಲಭ್ಯವಿಲ್ಲ. ನಿಜವಾಗಿಯೂ ಮೆಟ್ರೋ ಸಾರಿಗೆ ಕಾರುಗಳ ಜಾಗವನ್ನು ಆಕ್ರಮಿಸುವುದಾದಲ್ಲಿ, ಮೆಟ್ರೋದ ಮೂಲ ಚೌಕಟ್ಟು ನಗರದಲ್ಲಿ ಕಾರುಗಳು ಇರುವ, ಆಕ್ರಮಿಸಿಕೊಂಡಿರುವ ಸ್ಥಳವನ್ನು ಬಳಸಿಕೊಳ್ಳಬೇಕು. ಆದರೆ ಮೆಟ್ರೋ ಯೋಜನೆಯು ಮರಗಳು, ಮಣ್ಣು ಮತ್ತು ನೀರು ಇರುವ ಜಾಗವನ್ನು ಕಬಳಿಸುತ್ತಿದೆ. ಹಾಗಾದರೆ ಪರಿಸರ ಬಿಕ್ಕಟ್ಟಿಗೆ ಮೆಟ್ರೋ, ಹೊಸ ಫ್ಲೈಓವರ್‌ಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳು ನಾವು ನೀಡುವ ಪರಿಹಾರವೇ?

ಹೆಚ್ಚುತ್ತಿರುವ ಸಾರ್ವಜನಿಕ ಸಾರಿಗೆ ಹಾಗೂ ವೈಯಕ್ತಿಕ ಕಾರು ಸಾರಿಗೆಯನ್ನು ಏಕಕಾಲದಲ್ಲಿ ಹೊಂದಿರುವುದು ಸಾಧ್ಯ ಎಂಬುದನ್ನು ದುರದೃಷ್ಟವಶಾತ್ ನಾವು ಮರೆತಿದ್ದೇವೆ. ಭಾರತದಲ್ಲಿ ಜನರು ಹೆಚ್ಚು ಹೆಚ್ಚು ದೂರ ಪ್ರಯಾಣಿಸಬೇಕಾಗುತ್ತದೆ. ಯಾಕೆಂದರೆ ನೌಕರಿಗಳು ಜನರ ಮನೆಗಳಿಂದ, ಊರಿನಿಂದ ಬಹಳ ದೂರ ದೂರದ ನಗರ ಪ್ರದೇಶಗಳಲ್ಲಿ ಮಾತ್ರ ಸಿಗುತ್ತವೆ. ಸಂಪತ್ತು ಬೆರಳೆಣಿಕೆಯ ನಗರಗಳಲ್ಲಿ ಸಂಗ್ರಹವಾಗುತ್ತಿರುವುದರಿಂದ ನೌಕರಿಗಳು ಕೂಡ ಅಲ್ಲೇ ಸೃಷ್ಟಿಯಾಗುತ್ತವೆ.
ತಾಂತ್ರಿಕ ಪರಿಹಾರಗಳು ಸರಕು ಮತ್ತು ಸೇವೆಗಳ ಪೂರೈಕೆಯನ್ನು ಹೆಚ್ಚಿಸುವ ಮೂಲಕ ತಮ್ಮ ಉದ್ದೇಶವನ್ನು ಸಾಧಿಸುತ್ತವೆ. ಆದರೆ ಪೂರೈಕೆಗೆ ಅನುಗುಣವಾಗಿ ಬೇಡಿಕೆ ಕೂಡ ಬಹಳ ಬೇಗನೆ ಹೆಚ್ಚುತ್ತದೆ. ಉದಾಹರಣೆಗೆ 1982ರ ಏಶ್ಯನ್ ಗೇಮ್ಸ್‌ನ ಮೊದಲು ಹೊಸದಿಲ್ಲಿಯಲ್ಲಿ ಕೇವಲ ಕೆಲವೇ ಫ್ಲೈಓವರ್‌ಗಳಿದ್ದವು. ಆಗ ಜನರು ಸಾರಿಗೆ ಸಮಸ್ಯೆಗಳ ಬಗ್ಗೆ ದೂರಿದರು. ಪರಿಣಾಮವಾಗಿ ಸಾವಿರಾರು ಮರಗಳನ್ನು ಕಡಿದು ಹೊಸ ಫ್ಲೈಓವರ್‌ಗಳನ್ನು ನಿರ್ಮಿಸಲಾಯಿತು. ಆದರೆ ಅಂತಿಮವಾಗಿ ಸಾರಿಗೆ ಸಮಸ್ಯೆ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಯಿತು.

ಅದೇ ರೀತಿಯಾಗಿ ಕಡಿಮೆ ಪೆಟ್ರೋಲ್ ಬಳಸುವ ಕಾರುಗಳು ಮಾರುಕಟ್ಟೆಗೆ ಬಂದಾಗ ಕಾರುಗಳ ಮಾಲಕರು ಹಿಂದಿಗಿಂತ ಹೆಚ್ಚು ಬಾರಿ ಕಾರು ಓಡಿಸುತ್ತಾರೆ; ಹೊಸ ತಂತ್ರಜ್ಞಾನದಿಂದ ಉಳಿತಾಯವಾಗುವ ಪೆಟ್ರೋಲ್ ವ್ಯಯವಾಗಿ ಹೋಗುತ್ತದೆ. ಆದ್ದರಿಂದಲೇ ಪರಿಸರ ಸವಾಲಿಗೆ ಯಾವುದೇ ದೀರ್ಘಕಾಲಿನ ತಾಂತ್ರಿಕ ಪರಿಹಾರವೂ ಪರಿಸರ ಸಮಸ್ಯೆಗಳ ಮುಂದಿನ ತಲೆಮಾರಿಗೆ ಒಂದು ರಂಗಸಿದ್ಧತೆಯಷ್ಟೇ ಆಗುತ್ತದೆ. ಅದು ಉದ್ಯಮಿಗಳಿಗೆ ಮಾರುಕಟ್ಟೆಯಲ್ಲಿ ವ್ಯಾಪಾರದ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಒಟ್ಟಿನಲ್ಲಿ ನಾವು ಬಹಳ ಬೇಗನೆ ದುರಂತ ಕಡೆಗೆ ಸಾಗುತ್ತೇವೆ.


ಕೃಪೆ: ದಿ ಹಿಂದೂ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)