varthabharthi


ಅನುಗಾಲ

ಭಾರತ ರತ್ನಗಳು

ವಾರ್ತಾ ಭಾರತಿ : 23 Oct, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾರತ ರತ್ನ ಎಂಬ ಪ್ರಶಸ್ತಿ ವಿವಾದಕ್ಕೆ ಒಳಗಾಗಬಾರದು. ಎಲ್ಲರೂ ಸಿರಿವಂತರಾಗುವವರೆಗೆ ಯಾವುದೇ ರತ್ನವು ದುರ್ಲಭವಾಗಿರಬೇಕು. ಆದರೆ ದಕ್ಕದ ಮೂರ್ತ ವಸ್ತುವನ್ನು ಅಮೂರ್ತವಾಗಿಸಿ ಎಲ್ಲರಿಗೆ ನೀಡಹೊರಟಾಗ ಅದರ ಬೆಲೆ ಅಗ್ಗವಾಗುತ್ತದೆ ಮತ್ತು ಅದು ಅತಿಯಾಗಿ ನೀರು ಬೆರೆಸಿದ ಹಾಲಿನಂತೆ ದುರ್ಬಲವಾಗುತ್ತದೆ. ಆದರೆ ಈ ಪ್ರಶಸ್ತಿ ನೀಡಿಕೆಗೆ ರಾಜಕಾರಣಿಗಳು ಪದನಿಮಿತ್ತವಾಗಿ ಆಯ್ಕೆದಾರರಾದಾಗ ಸಹಜವಾಗಿಯೇ ಈ ಪ್ರಶಸ್ತಿಗೆ ರಾಜಕೀಯದ ಕರಿಮೋಡ ವ್ಯಾಪಿಸುತ್ತದೆ.


ಭಾರತವನ್ನು ಸಾವಿರ ಕ್ರಾಂತಿಗಳ ಭೂಮಿಯೆಂದು ವಿ.ಎಸ್. ನೈಪಾಲ್ ಉಲ್ಲೇಖಿಸಿದ್ದರು. ವಿ.ಎಸ್.ನೈಪಾಲ್ ಎಂದರೆ ಸಾಕಾಗುವುದಿಲ್ಲ; ಬದಲಿಗೆ ನೊಬೆಲ್ ಪ್ರಶಸ್ತಿ ವಿಜೇತ ಎಂದು (ಸಾಹಿತ್ಯದಲ್ಲಿ ಎಂದು ಹೇಳಿದರೆ ಒಂದಿಷ್ಟು ಮಾಹಿತಿ ನೀಡಿದಂತಾದೀತು.) ಒತ್ತು ನೀಡಿ ಹೇಳಿದರೆ ಅವರು ಹೇಳಿದ ಮಾತುಗಳನ್ನು ಒಂದಿಷ್ಟು ಗಂಭೀರವಾಗಿ ಸ್ವೀಕರಿಸಬಹುದು.

ಏಕೆಂದರೆ ಇದು ಪ್ರಶಸ್ತಿಗಳ ಕಾಲ. ಇಲ್ಲಿ ಕ್ರಾಂತಿ ನಡೆಯುವುದು ಪ್ರಶಸ್ತಿಗಳನ್ನು ನೀಡುವುದರ ಮೂಲಕವೇ. ಕಾಲ ಮತ್ತು ದೇಶ ಗೌರವಿಸುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದು ಒಂದು ರೀತಿಯಾದರೆ, ತಮ್ಮ ಇಷ್ಟಾನಿಷ್ಟಗಳಿಗನುಗುಣವಾಗಿ ಅಥವಾ ಯಾವುದಾದರೂ ಗೊತ್ತಾದ ಅಥವಾ ಗುಪ್ತ ಕಾರ್ಯಸೂಚಿಯ ಈಡೇರಿಕೆಗಾಗಿ ಪ್ರಶಸ್ತಿ ನೀಡುವುದು ಇನ್ನೊಂದು ರೀತಿ. ಹಿಂದೆ ರಾಜರು ತಮಗೆ ಸಂತೋಷವಾದಾಗ ಸಂತೋಷಕ್ಕೆ ಕಾರಣವಾದ ಸುದ್ದಿ ತಲುಪಿಸಿದ ಓಲೆಕಾರನಿಗೂ ಮುತ್ತಿನ ಹಾರ ಎಸೆಯು/ಹಾಕುತ್ತಿದ್ದರಂತೆ; ಚಿನ್ನದ ನಾಣ್ಯಗಳನ್ನು ನೀಡುತ್ತಿದ್ದರೋ ಎಸೆಯುತ್ತಿದ್ದರೋ ಗೊತ್ತಿಲ್ಲ! ಅಂತೂ ಅಳುವವರ ತುತ್ತಿನ ಚೀಲ ತುಂಬದಿದ್ದರೂ ಹೀಗೆ ಒಬ್ಬೊಬ್ಬರಿಗೆ ಆಳುವವರ ಸುಖ-ಸಂತೋಷದ ಒಂದು ಪಾಲು ಸಿಗುತ್ತಿತ್ತು. ಸಾರ್ವಜನಿಕ ಬೊಕ್ಕಸದ ಸಂಪತ್ತನ್ನು ಹೀಗೆ ನೀಡಬಹುದೇ ಎಂದು ಯಾರೂ ಪ್ರಶ್ನಿಸುತ್ತಿರಲಿಲ್ಲ. ಇಂದು ರಾಜರ ಬದಲು ಮಂತ್ರಿಗಳಿದ್ದಾರೆ. ಬಹುಮಾನ, ಪ್ರಶಸ್ತಿ ನೀಡುವ ಪರಿಸ್ಥಿತಿ ಬದಲಾಗಿಲ್ಲ. ಇವನ್ನು ಶ್ರೇಣೀಕರಿಸಿ ನೀಡಲಾಗುತ್ತದೆ. ಮಂತ್ರಿ ಪದವಿ ಮತ್ತು ನಿಗಮ ಮಂಡಳಿಯ ಅಧ್ಯಕ್ಷತೆಯ ಹಾಗೆ ಅಥವಾ ಅಕಾಡಮಿಗಳ ಅಧ್ಯಕ್ಷತೆ, ಸದಸ್ಯತ್ವದ ಹಾಗೆ. ಸಂದರ್ಭೋಚಿತವಾಗಿ ಹೇಳುವುದಾದರೆ ಪದ್ಮ ಪ್ರಶಸ್ತಿಗಳ ಹಾಗೆ.

‘ಭಾರತ ರತ್ನ’ವೆಂಬ ಅತ್ಯುಚ್ಚ ಪ್ರಶಸ್ತಿಯಿದೆ. ಇದನ್ನು 1954ರಲ್ಲಿ ಸ್ಥಾಪಿಸಲಾಯಿತು. ಮೊದಲ ವರ್ಷದ ಪ್ರಶಸ್ತಿಯನ್ನು ರಾಜಾಜಿಯೆಂದೇ ಪ್ರಸಿದ್ಧರಾಗಿರುವ ಚಕ್ರವರ್ತಿ ಸಿ. ರಾಜಗೋಪಾಲಾಚಾರಿ, ಪ್ರಸಿದ್ಧ ತತ್ವಶಾಸ್ತ್ರಜ್ಞ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಮತ್ತು ನೋಬೆಲ್ ಪ್ರಶಸ್ತಿ ವಿಜೇತ ಸರ್ ಸಿ.ವಿ.ರಾಮನ್ ಅವರಿಗೆ ನೀಡಲಾಯಿತು. ಆಗಿನ್ನೂ ಮರಣೋತ್ತರವಾಗಿ ಮತ್ತು ಪೂರ್ವಸೂರಿಗಳಿಗೆ ಪ್ರಶಸ್ತಿಯನ್ನು ನೀಡುವ ಪದ್ಧತಿಯಿರಲಿಲ್ಲ. (ಇದ್ದಿದ್ದರೆ ಗಾಂಧಿಗೆ ಸಿಗುತ್ತಿತ್ತು!) ಆನಂತರ ಅನೇಕ ಹಿರಿಯರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮೊದಲ ಮರಣೋತ್ತರ ಪ್ರಶಸ್ತಿ ಪ್ರಧಾನಿಯಾಗಿರುವಾಗಲೇ ಗತಿಸಿದ ಲಾಲ್‌ಬಹದೂರ್‌ಶಾಸ್ತ್ರಿಯವರಿಗೆ ನೀಡಲಾಯಿತು. ಹಾಗೆಯೇ ಭಾರತೀಯರಿಗಷ್ಟೇ ನೀಡಲಾಗುತ್ತಿದ್ದ ಈ ಪ್ರಶಸ್ತಿಯನ್ನು ಗಡಿನಾಡಗಾಂಧಿಯೆಂದೇ ಪ್ರಸಿದ್ಧರಾಗಿದ್ದ ಖಾನ್‌ಅಬ್ದುಲ್‌ಗಫಾರ್‌ಖಾನ್, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲ ಇವರಿಗೆ ನೀಡುವುದರ ಮೂಲಕ ಅಂತರ್‌ರಾಷ್ಟ್ರೀಯಗೊಳಿಸಲಾಯಿತು.

ಮದರ್ ತೆರೆಸಾ ಅವರಿಗೂ ನೀಡಲಾಯಿತಾದರೂ ಅವರು ದಾಖಲೆಗಳಲ್ಲಿ ವಿದೇಶೀಯರಾದರೂ ಭಾರತದ ಸಂತೋಷ ನಗರಿ ಕೋಲ್ಕತಾದಲ್ಲಿ ನೊಂದವರ ಬೆಳಕಾಗಿ ಜೀವನ ಸವೆಸಿದ್ದರಿಂದ ಅವರನ್ನು ವಿದೇಶೀ ಎನ್ನಲಾಗದು. 1977ರಿಂದ 1980ರ ನಡುವೆ ಈ ಪ್ರಶಸ್ತಿಯನ್ನು ನೀಡಲಾಗಿಲ್ಲ. ಹಾಗೆಯೇ ಈ ಪ್ರಶಸ್ತಿಯ ಕುರಿತ ವಿವಾದವೆದ್ದು ಅದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದರಿಂದ 1992ರಿಂದ 1995ರ ನಡುವೆಯೂ ಈ ಪ್ರಶಸ್ತಿಯನ್ನು ಯಾರಿಗೂ ನೀಡಿಲ್ಲ. ಇನ್ನುಳಿದಂತೆ ಅನೇಕರಿಗೆ ಈ ಪ್ರಶಸ್ತಿಯ ಮನ್ನಣೆಯನ್ನು ನೀಡಲಾಗಿದೆ. ನಿಯಮಗಳನುಸಾರ ಒಂದು ವರ್ಷದಲ್ಲಿ ಮೂವರಿಗಷ್ಟೇ ಈ ಪ್ರಶಸ್ತಿಯನ್ನು ನೀಡಬಹುದು. ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಿ ನೀಡಲಾಗದ್ದೆಂದರೆ 1990ರ ದಶಕದಲ್ಲಿ. ನೇತಾಜಿ ಸುಭಾಶ್‌ಚಂದ್ರ ಭೋಸ್ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ಘೋಷಿಸಿದಾಗ ಅವರ ಬಂಧು-ಬಳಗ ಇದನ್ನು ನಿರಾಕರಿಸಿ ಅವರ ಸಾವು ದೃಢೀಕೃತವಾಗದಿರುವಾಗ ಇದನ್ನು ನೀಡಲು ಸಾಧ್ಯವಿಲ್ಲ ಎಂದು ಹುಯ್ಲೆಬ್ಬಿಸಿದ ಕಾರಣವಾಗಿ ಆ ಸಾಲಿನ ಪ್ರಶಸ್ತಿ ನೀಡಿಕೆ ಶೈತ್ಯಾಗಾರವನ್ನು ಸೇರಿತು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಎಂ.ಜಿ.ಆರ್. ಅವರಿಗೆ 1988ರಲ್ಲಿ ಈ ಪ್ರಶಸ್ತಿ ನೀಡಿದಾಗ ರಾಜಕೀಯ ಕಾರಣಗಳಿಗಾಗಿ ಮತ್ತು ತಮಿಳರನ್ನು ಖುಷಿಪಡಿಸುವುದಕ್ಕಾಗಿ ಈ ಪ್ರಶಸ್ತಿ ನೀಡಲಾಯಿತೆಂಬ ಗುಮಾನಿಯಿಂದ ವಿವಾದವೆದ್ದಿತು. ಮದನ್ ಮೋಹನ ಮಾಳವೀಯ, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂತಾದವರು ಭಾರತರತ್ನ ಪ್ರಶಸ್ತಿ ಸ್ಥಾಪನೆಯಾಗುವ ಮೊದಲೇ ಗತಿಸಿದವರಾದ್ದರಿಂದ ಅವರಿಗೆ ಈ ಪ್ರಶಸ್ತಿ ನೀಡಿದ್ದು ಅಥವಾ ನೀಡುವುದು ತಾಂತ್ರಿಕವಾಗಿ ಎಷ್ಟು ಸರಿ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಸಚಿನ್ ತೆಂಡುಲ್ಕರ್ ಈ ಪ್ರಶಸ್ತಿಗೆ ಭಾಜನರಾದಾಗಲೂ ಅನೇಕರು ಇದನ್ನು ಪ್ರಶ್ನಿಸಿದರು. ಆದರೆ ಕಲೆ, ಸಾಹಿತ್ಯ, ರಾಜಕೀಯ, ವಿಜ್ಞಾನಕ್ಕೆ ಭಾರತರತ್ನ ನೀಡಬಹುದಾದರೆ ಕ್ರೀಡೆಗೇಕೆ ಕೊಡಬಾರದು ಎಂಬ ಉತ್ತರ ಬರುತ್ತದೆ.

1997ರಲ್ಲಿ ಸರ್ವೋಚ್ಚ ನ್ಯಾಯಾಲಯವು ಭಾರತರತ್ನವನ್ನು ಘೋಷಿಸಬಾರದು ಮತ್ತು ನೀಡುವುದಷ್ಟೇ ಸುದ್ದಿಯಾಗಬೇಕೆಂಬಂತೆ ನಿರ್ದೇಶಿಸಿದೆ. ಬರಬರುತ್ತ ಯೋಗ್ಯರೊಂದಿಗೆ ಇತರರಿಗೂ ಈ ಬೇರೆಬೇರೆ ಕಾರಣಗಳಿಂದ ಈ ಪ್ರಶಸ್ತಿಯನ್ನು ನೀಡಲಾಗಿದೆಯೆಂಬ ಆರೋಪವಿದೆ. ಭಾರತ ರತ್ನ ಎಂಬ ಪ್ರಶಸ್ತಿ ವಿವಾದಕ್ಕೆ ಒಳಗಾಗಬಾರದು. ಎಲ್ಲರೂ ಸಿರಿವಂತರಾಗುವವರೆಗೆ ಯಾವುದೇ ರತ್ನವು ದುರ್ಲಭವಾಗಿರಬೇಕು. ಆದರೆ ದಕ್ಕದ ಮೂರ್ತ ವಸ್ತುವನ್ನು ಅಮೂರ್ತವಾಗಿಸಿ ಎಲ್ಲರಿಗೆ ನೀಡಹೊರಟಾಗ ಅದರ ಬೆಲೆ ಅಗ್ಗವಾಗುತ್ತದೆ ಮತ್ತು ಅದು ಅತಿಯಾಗಿ ನೀರು ಬೆರೆಸಿದ ಹಾಲಿನಂತೆ ದುರ್ಬಲವಾಗುತ್ತದೆ. ಆದರೆ ಈ ಪ್ರಶಸ್ತಿ ನೀಡಿಕೆಗೆ ರಾಜಕಾರಣಿಗಳು ಪದನಿಮಿತ್ತವಾಗಿ ಆಯ್ಕೆದಾರರಾದಾಗ ಸಹಜವಾಗಿಯೇ ಈ ಪ್ರಶಸ್ತಿಗೆ ರಾಜಕೀಯದ ಕರಿಮೋಡ ವ್ಯಾಪಿಸುತ್ತದೆ. ರಾಜಕೀಯದ ಸೋಂಕಿಲ್ಲದವರಿಗೆ ಅಥವಾ ರಾಜಕೀಯದ ಕುರಿತು ನಿಷ್ಪಕ್ಷಪಾತ ದೃಷ್ಟಿಯನ್ನು ಹೊಂದಿದವರ ಕುರಿತು ಸರಕಾರವಾಗಲೀ ರಾಜಕಾರಣವಾಗಲೀ ಗಮನ ಹರಿಸುವುದು ಕಡಿಮೆ.

ಯಾವುದೇ ಸರಕಾರ ತನ್ನ ಇಷ್ಟಪಾತ್ರರನ್ನು ಆಯಕಟ್ಟಿನ ಸ್ಥಾನಗಳಿಗೆ ನೇಮಕ ಮಾಡುವುದಕ್ಕೆ ಅಥವಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವುದಕ್ಕೆ ಸಹಜವಾಗಿಯೇ ಆಸಕ್ತಿಹೊಂದಿರುತ್ತದೆ. ಹಾಗೆಂದು ಇಂತಹ ದೃಷ್ಟಿಕೋನವನ್ನು ಜನಪ್ರಿಯ ಶ್ರೇಷ್ಠರ ಕುರಿತು ಹೊಂದಿದೆಯೆಂದು ಭಾವಿಸದಂತೆ ಕೆಲವು ಆಯ್ಕೆಗಳು ನಡೆಯುತ್ತವೆ. ಸತ್ಯಜಿತ್ ರೇ, ಎಂ.ಎಸ್.ಸುಬ್ಬುಲಕ್ಷ್ಮೀ, ಭೀಮಸೇನ ಜೋಶಿ ಮುಂತಾದವರು ಈ ರಾಜಕಾರಣವನ್ನು ಮೀರಿ ಬೆಳೆದವರು. ಆದ್ದರಿಂದ ಮತ್ತು ಭಾರತರತ್ನ ಪ್ರಶಸ್ತಿಯು ಸಮಾಜದ ವಿವಿಧ ಕ್ಷೇತ್ರಗಳ ಶ್ರೇಷ್ಠರಿಗೆ ಮತ್ತು ದೇಶದ ಗೌರವವನ್ನು ಹೆಚ್ಚಿಸಿದವರಿಗೆ ನೀಡಬೇಕಾದ್ದರಿಂದ ಇಂತಹವರಿಗೆ ಪ್ರಶಸ್ತಿ ಸಿಕ್ಕಾಗ ಸಮಾಜ ಸಂತೋಷಿಸುತ್ತದೆ. ಆದರೆ ರಾಜಕೀಯದ ಯಾವುದೇ ಪ್ರಶಸ್ತಿ ನೀಡಿಕೆಯು ಅದೂ ಒಂದು ಲಾಭದಾಯಕ ಉದ್ಯಮವಾಗಿ ಪರಿವರ್ತಿತವಾದ ಇಂದಿನ ಕಲುಷಿತ ರಾಜಕಾರಣದಲ್ಲಿ ಸಮಾಜಸೇವೆಯ ಹೊಸ ಅವತಾರದ ಕುರಿತಂತೆ ‘‘ಇದರಿಂದ ಈತನಿಗೇನು ಲಾಭವಿದೆ?’’ ಎಂಬ ಪ್ರಶ್ನೆಯೊಂದಿಗೇ ಆರಂಭವಾಗಿ ಅದೇ ಪ್ರಶ್ನೆಯ ಉತ್ತರದ ಹುಡುಕಾಟದೊಂದಿಗೆ ಮುಕ್ತಾಯವಾಗುವುದರಿಂದ ಅಪವಾದಕ್ಕೆ ಬಾಧ್ಯವಾದರೆ ಅಚ್ಚರಿಪಡಬೇಕಾಗಿಲ್ಲ.

 ಯಾವುದೇ ಪ್ರಶಸ್ತಿಯು ನಮ್ಮನ್ನರಸಿಕೊಂಡು ಬರಬೇಕು, ಆಗ ಆ ಪ್ರಶಸ್ತಿಗೂ, ಪ್ರಶಸ್ತಿಗೆ ಭಾಜನರಾದವರಿಗೂ, ಗೌರವ. ಹಿಂದೆಲ್ಲ ಭಾರತರತ್ನ ಪ್ರಶಸ್ತಿಯು ಬೇಡಿಕೆಯಿಟ್ಟು ಪಡೆಯುವ ಸರಕಾಗಿರಲಿಲ್ಲ. ಆದರೆ ಕಳೆದ ಕೆಲವು ವರ್ಷ/ದಶಕಗಳಿಂದ ಅದು ಒಂದು ಹೆಗ್ಗಳಿಕೆಯಾಗಿದೆ ಮತ್ತು ವ್ಯಾವಹಾರಿಕ ಗಳಿಕೆಯಾಗಿದೆ. ತನಗೆ ಅದು ಲಭಿಸಬೇಕೆನ್ನುವವರಿಂದ ಮೊದಲ್ಗೊಂಡು ನಮಗೇ ಅಂದರೆ ನಾವು ಪ್ರತಿನಿಧಿಸುವ ಧರ್ಮ/ಜಾತಿ/ಪಕ್ಷ/ ಜನಾಂಗ/ಸಮುದಾಯದ ವ್ಯಕ್ತಿಯೊಬ್ಬರಿಗೆ ನೀಡಬೇಕೆಂದು ಆಗ್ರಹಿಸುವ ಹಂತಕ್ಕೆ ತಲುಪಿದೆ. ಭಜನೆಮಾಡಿ ಪಡೆದ ಗೌರವವು ಗೌರವವಲ್ಲ; ರೌರವ. ಇಷ್ಟಕ್ಕೂ ಯಾವನೇ ಸತ್ತ ವ್ಯಕ್ತಿಯು ತನಗೆ ಭಾರತ ರತ್ನ ಪದವಿಯು ಬರಲಿಲ್ಲವೆಂದು ಅತೃಪ್ತಿಯಿಂದ ಸತ್ತ ಐತಿಹ್ಯವಿಲ್ಲ. ಅಂತಹ ಅತೃಪ್ತಿಯು ಆ ವ್ಯಕ್ತಿಗೆ ಶೋಭೆಯೂ ಅಲ್ಲ. ಇತ್ತೀಚೆಗೆ ಈ ಬೇಡಿಕೆ ಹೆಚ್ಚುವುದನ್ನು ಗಮನಿಸಿದರೆ ಇವುಗಳ ಹಿನ್ನೆಲೆಯನ್ನು ಅಧ್ಯಯನ ಮಾಡಬೇಕೆಂದನ್ನಿಸುತ್ತದೆ. ಮೃತರಿಗೆ ಭಾರತರತ್ನ ಪದವಿ ನೀಡಿದರೆ ಮೃತರಿಗೇನು ಲಾಭ? ಅಥವಾ ಅವರ ಬಂಧುವರ್ಗಕ್ಕೇನು ಲಾಭ? ಎಂಬ ಪ್ರಶ್ನೆಗಳನ್ನು ಯಾರೂ ಉತ್ತರಿಸುವುದಿಲ್ಲ.

ಅನೇಕರಿಗೆ ಗೊತ್ತಿಲ್ಲದ ಒಂದು ವಿಚಾರವೆಂದರೆ ಸರಕಾರ ನೀಡುವ ಈ ಪ್ರಶಸ್ತಿ ಒಂದು ಗೌರವವೇ ಹೊರತು ಅದರೊಂದಿಗೆ ಯಾವ ಸವಲತ್ತೂ ಇರುವುದಿಲ್ಲ. ಬದುಕಿದ್ದು ಭಾರತರತ್ನ ಪಡೆದರೆ ಅವರಿಗೆ ಸರಕಾರೀ ಶಿಷ್ಟಾಚಾರದಲ್ಲಿ ‘7ಎ’ ಸ್ಥಾನ ಲಭಿಸುತ್ತದೆ- ಅಂದರೆ, 1.ರಾಷ್ಟ್ರಪತಿ, 2. ಉಪರಾಷ್ಟ್ರಪತಿ, 3. ಪ್ರಧಾನಿ, 4. ರಾಜ್ಯಪಾಲರು, 5. ಮಾಜಿ ರಾಷ್ಟ್ರಪತಿ, 5ಎ. ಉಪಪ್ರಧಾನಿ, 6. ಸರ್ವೋಚ್ಚ ಮುಖ್ಯ ನ್ಯಾಯಾಧೀಶರು ಮತ್ತು ಲೋಕಸಭಾಪತಿಗಳು, 7.ಕೇಂದ್ರ ಸರಕಾರದ ಕ್ಯಾಬಿನೆಟ್ ಸಚಿವರು, ಮುಖ್ಯಮಂತ್ರಿಗಳು, ಯೋಜನಾ ಆಯೋಗದ ಉಪಾಧ್ಯಕ್ಷರು, ಮಾಜಿ ಪ್ರಧಾನಿಗಳು, ಸಂಸತ್ತಿನ ಉಭಯ ಸದನಗಳ ವಿರೋಧ ಪಕ್ಷಗಳ ನಾಯಕರು, ಇವರಾದ ಮೇಲೆ ‘7ಎ’ ಎಂಬ ಹೊಸ ತ್ರಿಶಂಕು ಸ್ವರ್ಗವನ್ನು ಸೃಷ್ಟಿಸಿ ಭಾರತರತ್ನರನ್ನು ಗೌರವಿಸಲಾಗಿದೆ. ಈ ಪಟ್ಟಿ ಇನ್ನೂ ಮುಂದಕ್ಕೆ 26ನೇ ಕ್ರಮಸಂಖ್ಯೆಯ ವರೆಗೆ ಮತ್ತು ಪ್ರತೀ ಕ್ರಮಸಂಖ್ಯೆಯಲ್ಲೂ ಹಲವಾರು ಉನ್ನತ ಶ್ರೇಣಿಗಳು ಹೀಗೆ ಏಣಿಮೆಟ್ಟಲಿನಂತೆ ಬೆಳೆದಿದೆ.

ಈ ಪಟ್ಟಿಯನ್ನು ಸಮೀಕ್ಷಿಸಿದರೆ ಕ್ಯೂ ಮಾದರಿಯ ಸರದಿಯಲ್ಲಿ ಸಾಲು ತಪ್ಪಿಸುವ ರೀತಿಯಲ್ಲಿ ಕ್ರಮಸಂಖ್ಯೆಯ ಜೊತೆಗೆ ‘ಎ’ ಶ್ರೇಣಿಯನ್ನು ಸೇರಿಸಿ ಹಿಂದಿನವರನ್ನು ಮತ್ತೂ ಹಿಂದೆ ತಳ್ಳಿದ್ದು ಕಂಡುಬರುತ್ತದೆ. ಆದ್ದರಿಂದಲೇ ಸಂವಿಧಾನವು ಉಲ್ಲೇಖಿಸದ ಉಪಪ್ರಧಾನಿ ‘5ಎ’ ಆಗಿದ್ದಾರೆ; ಮತ್ತು ಭಾರತರತ್ನಗಳು ‘7ಎ’ ಆಗಿದ್ದಾರೆ. ಪ್ರಾಯಃ ಈ ಶಿಷ್ಟಾಚಾರದ ಕೆಲವು ರಿಯಾಯಿತಿಗಳು ವಿನಾಯಿತಿಗಳು ಲಭಿಸಬಹುದೇನೋ? ಕೀರ್ತಿಶೇಷರಿಗೆ ಯಾವ ಸವಲತ್ತು? ಆದ್ದರಿಂದ ಅವರ ಪರವಾಗಿ ಯಾರೇ ಆಗಲೀ ಎಬ್ಬಿಸುವ ಹುಯ್ಲು ಸ್ಥಾಪಿತ ಹಿತಾಸಕ್ತಿಯ ಪ್ರದರ್ಶನವೇ ಹೊರತು ಪ್ರಾಮಾಣಿಕವಾಗಲು ಸಾಧ್ಯವಿಲ್ಲ. ದೇಶದಲ್ಲಿ ಯಾವುದೇ ಪ್ರಶಸ್ತಿ ಬಂದರೂ ಅವರ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳುವುದಕ್ಕೆ ಭಾರತದ ರಾಜಕೀಯದಲ್ಲಾಗಲೀ, ಕಾನೂನಿನಲ್ಲಾಗಲೀ, ಮನಸ್ಥಿತಿಯಲ್ಲಾಗಲೀ ಯಾವ ಅಡತಡೆಗಳೂ ಇಲ್ಲವಾದ್ದರಿಂದ ಈ ಯಾವ ಪ್ರಶಸ್ತಿಗಳೂ ವಿಜೇತರನ್ನು ಕಾಯುವುದಿಲ್ಲ.

ಉದಾಹರಣೆಗೆ ಭಾರತರತ್ನದ ಆನಂತರದ ಅತ್ಯುಚ್ಚ ಪ್ರಶಸ್ತಿಯಾದ ಪದ್ಮವಿಭೂಷಣವನ್ನು 2017ರಲ್ಲಿ ಇದೇ ಮೋದಿ ಸರಕಾರದಿಂದ ಪಡೆದ ಮಹಾರಾಷ್ಟ್ರದ ಹಿರಿಯ ರಾಜಕಾರಣಿಯೂ ಹಿಂದೆ ಕೇಂದ್ರ ಸಚಿವರಾಗಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬದುಕಿದ ಮತ್ತು ಇನ್ನೂ ಸಕ್ರಿಯರಾಗಿರುವ ಶರದ್ ಪವಾರ್ ಈಗ ಅದೇ ಮೋದಿ ಸರಕಾರದ ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ಕ್ರಿಮಿನಲ್ ಪ್ರಕರಣವನ್ನು ಮತ್ತು ದಸ್ತಗಿರಿಯ ಭೀತಿಯನ್ನೆದುರಿಸುತ್ತಿದ್ದಾರೆ. ಅವರಿಗೆ ಪ್ರಶಸ್ತಿ ಬಂದಾಗ ಅದು 2019ರ ಮಹಾಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದೊಂದಿಗಿನ ಅವರ ಸಂಬಂಧವನ್ನು ಕುಂದಿಸುವ ಪ್ರಯತ್ನವೆಂದು ಟೀಕಿಸಲಾಗಿತ್ತು. ಈಗ 2019ರ ಚುನಾವಣೆಯ ಆನಂತರ ಬಂದ ಮಹಾರಾಷ್ಟ್ರ ರಾಜ್ಯ ಚುನಾವಣೆಯಲ್ಲಿ ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡ ತರುವಾಯ ಅವರ ವಿರುದ್ಧ ಈ ಪ್ರಕರಣವು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಯಾವ ಗೌರವವೂ ಸೇಡಿನ ರಾಜಕೀಯವನ್ನು ದಮನಿಸಲಾಗದು ಎಂಬುದು ಸ್ಪಷ್ಟವಾಗುತ್ತದೆ.

ಇವನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸಿದರೆ ಸತ್ತವರನ್ನು ಅವರ ಪಾಡಿಗೆ ಬಿಟ್ಟುಬಿಡಿ; ಭಾರತರತ್ನ ಪ್ರಶಸ್ತಿಯ ನೆಪದಲ್ಲಿ ಅವರ ಆತ್ಮದ ಮೇಲೆ ಕೆಸರೆರೆಚುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದಷ್ಟೇ ಪ್ರಾರ್ಥಿಸಬಹುದು. ತಿದ್ದುಪಡಿಗಳಿಗೆ ಹೆಸರಾದ ಈ ದೇಶದಲ್ಲಿ ಪ್ರಶಸ್ತಿ ಕೊಡಬಹುದಾದ ಸಂಖ್ಯೆಯನ್ನು 3ರಿಂದ 33 ಕೋಟಿಗೂ ಹಿಗ್ಗಿಸಬಹುದು ಅಥವಾ ಭವಿಷ್ಯದಲ್ಲಿ ಯಾರಿಗಾದರು ‘ಭಾರತ ರತ್ನ’ ಎಂಬ ಹೆಸರು ಬರಬೇಕೆಂದರೆ ಹುಟ್ಟಿದಾಗಲೇ ಆ ಹೆಸರನ್ನು ಜನನ ನೋಂದಣಾಧಿಕಾರಿಗಳಲ್ಲಿ ನೋಂದಾಯಿಸುವುದು ಒಳ್ಳೆಯದು. ಅದು ಸಾವಿನವರೆಗೆ ಮಾತ್ರವಲ್ಲ, ಆನಂತರವೂ ದಾಖಲೆಗಳಲ್ಲಿ ಉಳಿಯುತ್ತದೆ! ಮಾತ್ರವಲ್ಲ, ‘‘ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು’’ ಎಂದು ತಾಯಿ ಮಗುವಿಗೆ ಜೋಗುಳ ಹಾಡಲು ತೊಂದರೆಯಿಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)