varthabharthi


ವಿಶೇಷ-ವರದಿಗಳು

'ಇದು ಬದುಕುಳಿದವರ ಕಥೆ'

ರೊಹಿಂಗ್ಯಾಗಳ ಸಂಪೂರ್ಣ ನಿರ್ಮೂಲನಕ್ಕೆ ಮ್ಯಾನ್ಮಾರ್‌ ನ ಪೂರ್ವನಿಯೋಜಿತ ಸಂಚನ್ನು ಬಿಚ್ಚಿಟ್ಟಿದೆ ಈ ಸಿನೆಮಾ...

ವಾರ್ತಾ ಭಾರತಿ : 25 Oct, 2019
ಕ್ರಿಸ್ಟಿನಾ ಒಕೆಲ್ಲೋ, newslaundry.com

ಮ್ಯಾನ್ಮಾರ್‌ ನಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಲ್ಲಿಯ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಾವಿರಾರು ಜನರು ಜೀವವುಳಿಸಿಕೊಳ್ಳಲು ದೇಶದಿಂದ ಪರಾರಿಯಾಗಿದ್ದರು. ಅದಾಗಿ ಎರಡು ವರ್ಷಗಳ ಬಳಿಕ ಸಿದ್ಧಗೊಂಡಿರುವ ‘ಮೆಕ್ಯಾನಿಕ್ಸ್ ಆಫ್ ಎ ಕ್ರೈಮ್ ’ ಎಂಬ ಸಾಕ್ಷ್ಯಚಿತ್ರವು ರೊಹಿಂಗ್ಯಾಗಳಿಗೆ ಕಿರುಕುಳ ನೀಡಿ ಅವರನ್ನು ದೇಶದಿಂದ ಹೊರದಬ್ಬುವ ಸಂಚು ಪೂರ್ವನಿಯೋಜಿತವಾಗಿತ್ತು ಎನ್ನುವುದನ್ನು ಬಹಿರಂಗಗೊಳಿಸಿದೆ. ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದುಕೊಂಡಿರುವ ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತರು ಪುನರ್‌ ಸ್ಥಳಾಂತರಕ್ಕೆ ಒಪ್ಪಿಕೊಂಡಿರುವ ಸಮಯದಲ್ಲಿಯೇ ಈ ಚಿತ್ರವು ಹೊರಬಂದಿದೆ.

ರೊಹಿಂಗ್ಯಾಗಳ ಕಥೆಯನ್ನು, ಸುಮಾರು 10 ವರ್ಷಗಳಿಂದ ಅವರು ಅನುಭವಿಸುತ್ತಿದ್ದ ಸಂಕಷ್ಟಗಳನ್ನು ಚಿತ್ರದಲ್ಲಿ ತೋರಿಸಲು ತಾನು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ ‘ಮೆಕ್ಯಾನಿಕ್ಸ್ ಆಫ್ ಎ ಕ್ರೈಮ್ ’ನ ಫ್ರೆಂಚ್ ನಿರ್ದೇಶಕ ಗ್ವೆನ್‌ ಲಾವೆನ್ ಲಿ ಗೌಯಿಲ್.

ರೊಹಿಂಗ್ಯಾಗಳ ವಿರುದ್ಧ ಮ್ಯಾನ್ಮಾರ್‌ ನ ‘ನಿರ್ಮೂಲನ ಕಾರ್ಯಾಚರಣೆ ’ಗೆ ಐದು ವರ್ಷಗಳ ಮೊದಲೇ, 2012ರಲ್ಲಿ ಗೌಯಿಲ್ ತನ್ನ ತನಿಖೆಯನ್ನು ಆರಂಭಿಸಿದ್ದರು. ಅದಾಗಲೇ ಮ್ಯಾನ್ಮಾರ್‌ ನಲ್ಲಿ ಮುಸ್ಲಿಂ ವಿರೋಧಿ ಭಾವನೆಗಳು ಕಾವು ಪಡೆದುಕೊಳ್ಳುತ್ತಿದ್ದನ್ನು ಸಾಕ್ಷ್ಯಚಿತ್ರವು ಪ್ರಮುಖವಾಗಿ ಬಿಂಬಿಸಿದೆ.

ಈ ಮುಸ್ಲಿಂ ವಿರೋಧಿ ಭಾವನೆಗಳ ಬೆನ್ನಲ್ಲೇ ದೇಶಾದ್ಯಂತ ಸಂಚರಿಸಿ ತನ್ನ ದ್ವೇಷಪೂರಿತ ಭಾಷಣಗಳ ಮೂಲಕ ಜನರನ್ನು ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಎತ್ತಿ ಕಟ್ಟುವ ಮೂಲಕ ಮೂಲಭೂತವಾದಿ ಬೌದ್ಧ ಸನ್ಯಾಸಿ ಆಶಿನ್ ವಿರಥೂ ಪ್ರವರ್ಧಮಾನಕ್ಕೆ ಬಂದಿದ್ದ. ಬದುಕುಳಿದವರನ್ನು ಬಯಲು ಬಂಧೀಖಾನೆಗಳಿಗೆ ಕಳಹಿಸಲಾಗಿದೆ ಎಂಬ ಸುದ್ದಿಯೊಂದಿಗೆ ಬೌದ್ಧ ಗ್ರಾಮಸ್ಥರು ರೊಹಿಂಗ್ಯಾಗಳ ಮನೆಗಳಿಗೆ ಬೆಂಕಿ ಹಚ್ಚಿದ್ದ ಘಟನೆಗಳು 2012ರಲ್ಲಿ ಮೊದಲು ವರದಿಯಾಗಿದ್ದವು.

ಗೌಯಿಲ್ ಜನರ ಗಮನವನ್ನು ಸೆಳೆಯಲು ಈ ಎಲ್ಲ ಘಟನೆಗಳನ್ನು ಸುದ್ದಿರೂಪದಲ್ಲಿ ಚಿತ್ರದಲ್ಲಿ ತೋರಿಸಿದ್ದಾರೆ.

‘ಈ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಯುರೋಪ್ ಮತ್ತು ಫ್ರಾನ್ಸ್‌ ನ ಜನರಿಗೆ ತಿಳಿಸಲು ನಾನು ಬಯಸಿದ್ದೆ. ಬರ್ಮಾದಲ್ಲಿ ನಿಖರವಾಗಿ ಏನು ನಡೆಯುತ್ತಿದೆ ಎನ್ನುವುದು ನಮಗೆ ಗೊತ್ತಿರಲಿಲ್ಲ ಎಂದು ಗೌಯಿಲ್ ಮ್ಯಾನ್ಮಾರ್‌ ನ ಹಳೆಯ ಹೆಸರನ್ನು ಉಲ್ಲೇಖಿಸಿ ಹೇಳಿದರು. 1989ರಲ್ಲಿ ಮಿಲಿಟರಿಯು ಅಧಿಕಾರಕ್ಕೆ ಬಂದ ನಂತರ ಬರ್ಮಾ ಹೆಸರನ್ನು ಮ್ಯಾನ್ಮಾರ್ ಎಂದು ಬದಲಿಸಲಾಗಿತ್ತು.

ಮ್ಯಾನ್ಮಾರ್‌ನಿಂದ ಜೀವವುಳಿಸಿಕೊಂಡು ಪರಾರಿಯಾಗಿ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾ ನಿರಾಶ್ರಿತರ ಸಂದರ್ಶನಗಳ ಮೂಲಕ ‘ಜನಾಂಗೀಯ ನಿರ್ಮೂಲನಕ್ಕೆ ಪರಿಪೂರ್ಣ ಉದಾಹರಣೆ ’ ಎಂದು ವಿಶ್ವಸಂಸ್ಥೆಯು ಬಣ್ಣಿಸಿರುವ ಸನ್ನಿವೇಶವನ್ನು ಅವರು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

► ವಿಭಿನ್ನ ಸತ್ಯಗಳು

ಅಲ್ಪಸಂಖ್ಯಾತರನ್ನು ದೇಶಕ್ಕೆ ಸೇರಿರದ ಗುಂಪು ಎಂದು ಹೆಸರಿಸುವುದು ಸಂಚಿನ ಆರಂಭ ಮತ್ತು ಅಪರಾಧಗಳ ಬಳಿಕ ಎಲ್ಲ ಸಾಕ್ಷ್ಯಾಧಾರಗಳನ್ನು ಅಳಿಸಿಹಾಕುವುದು ಅದರ ಅಂತಿಮ ಹಂತ ಎಂದಿದ್ದಾರೆ ಗೌಯಿಲ್.

2017ರಲ್ಲಿ ರೊಹಿಂಗ್ಯಾ ಬಂಡುಕೋರರ ಗುಂಪೊಂದು ಹಳೆಯ ಕಾಲದ ಶಸ್ತ್ರಗಳೊಂದಿಗೆ ಹಲವಾರು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದಾಗ ಅತ್ಯಂತ ಘೋರ ಹಿಂಸಾಚಾರ ಭುಗಿಲೆದ್ದಿತ್ತು. ನಂತರ ರೊಹಿಂಗ್ಯಾಗಳ ವಿರುದ್ಧ ತನ್ನ ದಾಳಿಗಳನ್ನು 'ಬಂಡುಕೋರರನ್ನು ಬೇರು ಸಹಿತ ನಿರ್ಮೂಲನಗೊಳಿಸುವ ಕಾರ್ಯಾಚರಣೆ' ಎಂದು ಸೇನೆಯು ಸಮರ್ಥಿಸಿಕೊಂಡಿತ್ತು.

"ನಮಗೆ ಗೊತ್ತು, ಇವರೆಲ್ಲ ಸುಮಾರು 25ರ ಹರೆಯದ ಯುವಕರಾಗಿದ್ದರು. ಅವರ ಬಳಿ ಬಂದೂಕುಗಳಿರಲಿಲ್ಲ. ದೊಣ್ಣೆಗಳು ಅಥವಾ ಚಾಕುಗಳು, ಇವಿಷ್ಟೇ ಅವರ ಬಳಿಯಿದ್ದವು" ಎಂದ ಗೌಯಿಲ್, ದಾಳಿಕೋರರ ಗುರುತು ಇನ್ನೂ ನಿಗೂಢವಾಗಿಯೇ ಇದೆ ಎಂದರು. ಸತ್ಯವೂ ಹೀಗೆಯೇ ನಿಗೂಢವಾಗಿದೆ.

ಚಿತ್ರದ ಒಂದು ಹಂತದಲ್ಲಿ ಮಾಧ್ಯಮಗಳಿಗಾಗಿ ಏರ್ಪಡಿಸಿದ್ದ ಪ್ರವಾಸದಲ್ಲಿ ಗೌಯಿಲ್ ರೊಹಿಂಗ್ಯಾಗಳ ವಿರುದ್ಧದ ಹಿಂಸಾಚಾರದ ಸಾಕ್ಷ್ಯವನ್ನು ದಾಖಲಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಮತ್ತು ಅವರು ಕ್ಯಾಮರಾವನ್ನು ಕ್ಲಿಕ್ಕಿಸುವ ಮೊದಲೇ ಚಾಲಕ ವೇಗವಾಗಿ ಟ್ಯಾಕ್ಸಿಯನ್ನು ಮುನ್ನಡೆಸಿದ್ದನ್ನು ತೋರಿಸಲಾಗಿದೆ. 10 ರೊಹಿಂಗ್ಯಾಗಳನ್ನು ಕೊಲ್ಲಲಾಗಿದ್ದ ಇನ್ ಡಿನ್ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿತ್ತು.

ತಾವೇನು ಮಾಡಿದ್ದೆವು, ಈ ಪ್ರದೇಶದಲ್ಲಿ ಸೈನಿಕರು ಏನು ಮಾಡಿದ್ದರು ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು ಎನ್ನುವುದನ್ನು ಈ ಘಟನೆ ಹೇಳುತ್ತದೆ ಎಂದು ಗೌಯಿಲ್ ನುಡಿದರು.

ರೊಹಿಂಗ್ಯಾಗಳ ವಿರುದ್ಧ ದೌರ್ಜನ್ಯಗಳು ನಡೆಯುತ್ತಿದ್ದರೂ ಹಸ್ತಕ್ಷೇಪ ಮಾಡುವುದರಲ್ಲಿ ಅಂತಾರಾಷ್ಟ್ರೀಯ ಸಮುದಾಯದ ವೈಫಲ್ಯದ ವಿಶ್ಲೇಷಣೆಯನ್ನೂ ಮಾಡಿರುವ ಚಿತ್ರವು ಮ್ಯಾನ್ಮಾರ್‌ ನ ನಾಯಕಿ ಹಾಗು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂ ಕಿಯನ್ನು ಕಟುವಾಗಿ ಟೀಕಿಸಿದೆ.

► ‘ಆದರ್ಶ’ದ ಪತನ

ಸೂ ಕಿ ಬಗ್ಗೆ ರೊಹಿಂಗ್ಯಾಗಳು ತೀವ್ರ ಅಸಮಾಧಾನಗೊಂಡಿದ್ದಾರೆ. ಸೂ ಕಿ ಇರುವುದರಿಂದ ತಮ್ಮ ವಿರುದ್ಧ ದೌರ್ಜನ್ಯಗಳು ನಡೆಯುವುದಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ಎರಡು ವರ್ಷಗಳ ಹಿಂದೆ ಮಾರಣಹೋಮವೇ ನಡೆದಿತ್ತು. ಅಧಿಕಾರದ ಬೆನ್ನು ಹತ್ತಿದ್ದ ಸೂ ಕಿ ಏನನ್ನೂ ಮಾಡಿರಲಿಲ್ಲ. ಆ ಸಂದರ್ಭದಲ್ಲಿ ಅವರು ಎಲ್ಲ ಕೆಲಸವನ್ನು, ಕೆಟ್ಟ ಕೆಲಸವನ್ನು ಸೇನಾಧಿಕಾರಿಗಳಿಗೆ ಬಿಟ್ಟಿದ್ದರು ಎಂದು ಗೌಯಿಲ್ ಹೇಳಿದರು.

ರೊಹಿಂಗ್ಯಾಗಳ ವಿರುದ್ಧ ದೌರ್ಜನ್ಯಗಳ ಸಂಚಿನಲ್ಲಿ ಶಾಮೀಲಾಗಿದ್ದಕ್ಕಾಗಿ ಕಾನೂನಿನನ್ವಯ ಸೂ ಕಿ ಅವರನ್ನು ಉತ್ತರದಾಯಿಯನ್ನಾಗಿಸುವ ಬಗ್ಗೆ ವಿಶ್ವಸಂಸ್ಥೆಯ ತನಿಖಾ ತಂಡವು ಪರಿಶೀಲಿಸುತ್ತಿದೆ.

ಆಗಸ್ಟ್, 2017ರ ಮಿಲಿಟರಿ ಕಾರ್ಯಾಚರಣೆಯನ್ನು ‘ನರಮೇಧ ’ಎಂದು ಕಳೆದ ವರ್ಷ ಬಣ್ಣಿಸಿದ್ದ ಸತ್ಯಶೋಧನಾ ತಂಡವೊಂದು ಸೇನಾ ಮುಖ್ಯಸ್ಥ ಮಿನ್ ಆಂಗ್ ಲೇಂಗ್ ಸೇರಿದಂತೆ ಹಿರಿಯ ಸೇನಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕರೆ ನೀಡಿತ್ತು.

► ಕಠಿಣ ಒಡಂಬಡಿಕೆ

ಮುಂದಿನ ತಿಂಗಳಿನಿಂದ ತನ್ನ ಕರಾವಳಿಯಾಚೆಯ ಪ್ರವಾಹಕ್ಕೆ ಸುಲಭವಾಗಿ ಗುರಿಯಾಗುವ ದ್ವೀಪವೊಂದರಲ್ಲಿ ರೊಹಿಂಗ್ಯಾಗಳ ಪುನರ್ ವಸತಿ ಕಾರ್ಯವನ್ನು ಆರಂಭಿಸುವುದಾಗಿ ಬಾಂಗ್ಲಾದೇಶ ಸರಕಾರವು ರವಿವಾರ ಪ್ರಕಟಿಸಿದೆ. ಇದಕ್ಕೆ ರೊಹಿಂಗ್ಯಾಗಳು ಒಪ್ಪಿಕೊಂಡಿದ್ದಾರಾದರೂ ಹೆಚ್ಚಿನವರು ಈಗಲೂ ಮ್ಯಾನ್ಮಾರ್‌ ಗೆ ಮರಳಲು ಬಯಸಿದ್ದಾರೆ. ತಮ್ಮ ಮೂಲನೆಲೆಗಳಲ್ಲಿ ಸುರಕ್ಷಿತವಾಗಿರಲಷ್ಟೇ ಅವರು ಬಯಸುತ್ತಿದ್ದಾರೆ.

ಆದರೆ ರೊಹಿಂಗ್ಯಾಗಳು ರಾಷ್ಟ್ರೀಯ ದೃಢೀಕರಣ ಚೀಟಿ(ಎನ್‌ ವಿಸಿ)ಗೆ ಮೊದಲು ಸಹಿ ಹಾಕಬೇಕು ಎಂದು ಮ್ಯಾನ್ಮಾರ್ ಸರಕಾರ ಪಟ್ಟು ಹಿಡಿದಿದೆ . ಇದರಿಂದ ರೊಹಿಂಗ್ಯಾ ನಿರಾಶ್ರಿತರು ಸಾರ್ವಜನಿಕ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅದು ಸಮಜಾಯಿಷಿ ನೀಡಿದೆ. ಆದರೆ ಇದು ರೊಹಿಂಗ್ಯಾಗಳನ್ನು ಇನ್ನಷ್ಟು ಕಡೆಗಣಿಸಲಿದೆ ಮತ್ತು ಅವರನ್ನು ರಾಷ್ಟ್ರರಹಿತರನ್ನಾಗಿಸಲಿದೆ ಎಂದು ಮಾನವ ಹಕ್ಕು ಹೋರಾಟಗಾರರು ಪ್ರತಿಪಾದಿಸುತ್ತಿದ್ದಾರೆ.

ಇದರರ್ಥ ಅವರು ತಮ್ಮ ಜನಾಂಗೀಯ ರೊಹಿಂಗ್ಯಾ ಅನನ್ಯತೆಯನ್ನು ತಿರಸ್ಕರಿಸಬೇಕಾಗುತ್ತದೆ. ಅವರು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು ಗೌಯಿಲ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)