varthabharthi


ವಿಶೇಷ-ವರದಿಗಳು

ಸರಕಾರಿ ಶಾಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಕೇರಳ ಮೂಲದ ಯುಎಇ ದಂಪತಿ

ಫೈಝಲ್ ಶಬಾನಾ ಮಾದರಿಯನ್ನು 141 ಶಾಲೆಗಳಿಗೆ ವಿಸ್ತರಿಸಿದ ಕೇರಳ ಸರಕಾರ

ವಾರ್ತಾ ಭಾರತಿ : 26 Oct, 2019

# ಇವರು ನವೀಕರಿಸಿದ ಸರಕಾರಿ ಶಾಲೆ ಈಗ ದೇಶದಲ್ಲೆ ನಂಬರ್ 2 

ಕೇರಳದ ಕ್ಯಾಲಿಕಟ್ ಸಮೀಪದ ನಡಕ್ಕವು ಎಂಬಲ್ಲಿನ ಸರ್ಕಾರಿ ಹೆಣ್ಣುಮಕ್ಕಳ ಶಾಲೆಗೆ ಹೊಸ ರೂಪ ನೀಡಿ ಅದರ ಸಮಗ್ರ ಅಭಿವೃದ್ಧಿ ಮಾಡುವ ದುಬೈನಲ್ಲಿ ನೆಲೆ ನಿಂತ ಭಾರತ ಮೂಲದ ದಂಪತಿ ಕೈಗೊಂಡ ಪ್ರಯತ್ನಗಳು ಫಲ ನೀಡಿವೆ. ಈ ವಿಶಿಷ್ಟ ಹಾಗು ಯಶಸ್ವಿ ಮಾದರಿಯನ್ನು ರಾಜ್ಯದ ವಿವಿಧೆಡೆಗಳ 141 ಶಾಲೆಗಳಲ್ಲೂ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರಿಂದ 3 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ.

ನಡಕ್ಕಾವು ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಸ್ಕೂಲ್ ಫಾರ್ ಗರ್ಲ್ಸ್ ಇದೀಗ ಇಡೀ ಭಾರತದಲ್ಲಿ ಶೈಕ್ಷಣಿಕ ಶ್ರೇಷ್ಠತೆಯ ಅಗ್ರಗಣ್ಯ ಸಂಸ್ಥೆಯಾಗಿ ರೂಪುಗೊಂಡಿದೆ. ಇದಕ್ಕೆ ಕಾರಣ ಕ್ಯಾಲಿಕಟ್ ಮೂಲದ ಈಗ ದುಬೈಯಲ್ಲಿರುವ ಖ್ಯಾತ ಉದ್ಯಮಿ ಫೈಝಲ್ ಕೊಟ್ಟಿಕೊಲ್ಲನ್ ಹಾಗು ಅವರ ಪತ್ನಿ ಮಂಗಳೂರು ಮೂಲದ ಶಬಾನಾ ಫೈಝಲ್ ಅವರ ದೂರದೃಷ್ಟಿಯ ಮಹತ್ವಾಕಾಂಕ್ಷಿ ಯೋಜನೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಈ ಶಾಲೆಯನ್ನು ಫೈಝಲ್, ಶಬಾನಾ ಫೌಂಡೇಶನ್ ಪುನರ್ನವೀಕರಣ ಮಾಡಿದ ಮೇಲೆ ಈ ಸರಕಾರಿ ಶಾಲೆ, ವಿಶ್ವದಲ್ಲೇ ಪ್ರಾಥಮಿಕ ಹಾಗು ಪ್ರೌಢಶಾಲೆಗಳ ಸಮೀಕ್ಷೆಯಲ್ಲಿ ಅತಿದೊಡ್ಡ ಸಮೀಕ್ಷೆ ಎಂಬ ಖ್ಯಾತಿಯ ಎಜ್ಯುಕೇಶನ್ ವರ್ಲ್ಡ್ (ಇಡಬ್ಲ್ಯ) ಇಂಡಿಯಾ ಸ್ಕೂಲ್ ರ್ಯಾಂಕಿಂಗ್ 2019-20ರಲ್ಲಿ ದೇಶದಲ್ಲೇ ಎರಡನೇ ರ್ಯಾಂಕ್ ಪಡೆದಿದೆ ! ಈ ಸಮೀಕ್ಷೆಯಲ್ಲಿ ಶಾಲೆಗಳನ್ನು 14 ವಿಭಿನ್ನ ವರ್ಗಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ.

  ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ 120 ವರ್ಷ ಹಳೆಯ ಜಿವಿಎಚ್‌ಎಸ್‌ಎಸ್ 2015ರಲ್ಲಿ, ಯುಎಇ ಕಂಪೆನಿ ಕೆಇಎಫ್ ಹೋಲ್ಡಿಂಗ್ಸ್‌ನ ದತ್ತಿ ಸಂಸ್ಥೆಯಾದ ಫೈಝಲ್ ಮತ್ತು ಶಬಾನಾ ಫೌಂಡೇಶನ್ ನೀಡಿದ ನೆರವಿನೊಂದಿಗೆ ಸಂಪೂರ್ಣವಾಗಿ ಹೊಸ ರೂಪ ಪಡೆಯಿತು. ಅತ್ಯಾಧುನಿಕ ಮೂಲ ಸೌಲಭ್ಯಗಳು ಹಾಗು ಶೈಕ್ಷಣಿಕ ಸಾಧನಗಳು ಇಲ್ಲಿಗೆ ಬಂದವು. ಈಗ ಈ ಶಾಲೆಯನ್ನು ಫೌಂಡೇಷನ್‌ನ ಸಹ ಸಂಸ್ಥಾಪಕರಾದ ಫೈಝಲ್ ಮತ್ತು ಶಬಾನಾ ಕೊಟ್ಟಿಕೊಲ್ಲನ್ ನಿರ್ವಹಿಸುತ್ತಿದ್ದಾರೆ.

 "ನಡಕ್‌ಕಾವು ಶಾಲೆಗೆ ಅಗ್ರ ರ್ಯಾಂಕಿಂಗ್ ಲಭಿಸಿರುವುದು ‘ಶ್ರೇಷ್ಠ ಪರಿಣಾಮ ಬೀರುವ ಸಲುವಾಗಿ ಕೊಡುಗೆ’ ಎಂಬ ನಮ್ಮ ಸಂಸ್ಥಾಪಕರ ದೂರದೃಷ್ಟಿಯ ಯಶಸ್ಸಿಗೆ ಸಿಕ್ಕಿದ ನೈಜ ಪ್ರತಿಫಲ. ಸಮಗ್ರ ಮತ್ತು ಪಾಲುದಾರಿಕೆ ದೃಷ್ಟಿಕೋನದ ಮೂಲಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಧನಾತ್ಮಕ ಬದಲಾವಣೆಗೆ ಚಾಲನೆ ನೀಡುವುದು ನಮ್ಮ ಗುರಿ. ಭಾರತದಲ್ಲಿ ಶೈಕ್ಷಣಿಕ ಶ್ರೇಷ್ಠತೆಯ ಈ ಮಾನದಂಡವನ್ನು ಸೃಷ್ಟಿಸಿರುವುದು ನಮಗೆ ಹೆಮ್ಮೆಯ ವಿಚಾರ. ಈ ಯೋಜನೆಯನ್ನು ದೇಶಾದ್ಯಂತ ಹಾಗೂ ಇತರ ದೇಶಗಳಲ್ಲಿ ನಾವು ಮುಂದುವರಿಸುತ್ತೇವೆ" ಎಂದು ಕೆಇಎಫ್ ಹೋಲ್ಡಿಂಗ್ಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ಫೈಝಲ್ ಹೇಳುತ್ತಾರೆ.

ಆರಂಭ ಹೇಗೆ?

"ಭಾರತದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಬದಲಾಗಬೇಕಿದ್ದರೆ ಏನು ಮಾಡಬೇಕು ಎಂದು ಸಂದರ್ಶನವೊಂದರಲ್ಲಿ ನನ್ನನ್ನು ಕೇಳಿದಲ್ಲಿಂದ ಈ ಯೋಚನೆ ಹುಟ್ಟಿಕೊಂಡಿತು. ಸರಕಾರಿ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಮೂಲ ಸೌಕರ್ಯವನ್ನು ಬದಲಿಸಬೇಕಾದ್ದು ಮೊದಲ ಕೆಲಸ ಎನ್ನುವುದು ಮನವರಿಕೆಯಾಯಿತು. ಕಳಪೆ ಸ್ಥಿತಿಯು ಕೇವಲ ಮಕ್ಕಳ ಆತ್ಮಾಭಿಮಾನವನ್ನು ಕೆಳಮಟ್ಟಕ್ಕೆ ಇಳಿಸುವುದು ಮಾತ್ರವಲ್ಲದೇ, ಶಾಲೆಗೆ ಗೈರುಹಾಜರಾಗಲು ಮತ್ತು ಅಧಿಕ ಪ್ರಮಾಣದಲ್ಲಿ ಮಕ್ಕಳು ಶಾಲೆ ಬಿಡಲು ಕೂಡಾ ಕಾರಣವಾಗುತ್ತದೆ. ಆದ್ದರಿಂದ ಸ್ಥಳೀಯ ಶಾಸಕ ಪ್ರದೀಪ್ ಕುಮಾರ್ ಅವರ ಸಹಯೋಗದಲ್ಲಿ ನಮ್ಮ ಕೆಲಸ ಆರಂಭಿಸಿದೆವು. 2014ರಲ್ಲಿ ಮೊದಲ ಬಾರಿಗೆ ನಾವು ಶಾಲೆಗೆ ಭೇಟಿ ನೀಡಿದಾಗ, ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದುದನ್ನು ಕಂಡೆವು. ವಿವಿಧ ತರಗತಿಗಳಲ್ಲಿ 2,400 ಹೆಣ್ಣುಮಕ್ಕಳಿದ್ದರು. ಆದರೆ ಕೇವಲ ಎಂಟು ಶೌಚಾಲಯಗಳಿದ್ದವು. ಮಕ್ಕಳಿಗೆ ನೀಡುತ್ತಿದ್ದ ಮಧ್ಯಾಹ್ನದೂಟದಲ್ಲಿ ಸಾಕಷ್ಟು ಪೌಷ್ಟಿಕಾಂಶ ಇರಲಿಲ್ಲ. ಶಿಕ್ಷಕರು ಅರ್ಹರಾದರೂ ಅವರ ಕೌಶಲ ಮೇಲ್ದರ್ಜೆಗೇರಿಸುವ ಕೆಲಸ ಆಗಿರಲಿಲ್ಲ" ಎಂದು ಫೈಝಲ್ ನೆನಪಿಸಿಕೊಳ್ಳುತ್ತಾರೆ.

 ಶಾಸಕ ಪ್ರದೀಪ್ ಕುಮಾರ್ ಪ್ರಿಸಂ (ಪ್ರೊಮೋಟಿಂಗ್ ರೀಜನಲ್ ಸ್ಕೂಲ್ಸ್ ಟೂ ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಥ್ರೂ ಮಲ್ಟಿಪಲ್ ಇಂಟರ್‌ವೆನ್ಶನ್ಸ್) ಯೋಜನೆಯಡಿ ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯ ಒಂದು ಕೋಟಿ ರೂಪಾಯಿ ನೀಡಿ ಶಿಥಿಲಗೊಂಡ ಕಟ್ಟಡದ ದುರಸ್ತಿಗೆ ಮುಂದಾದರು. ಅನುಭವಿ ಶಿಕ್ಷಕರು, ಉಚಿತ ಮಧ್ಯಾಹ್ನದೂಟ, ಉಚಿತ ಶಿಕ್ಷಣ ನೀಡುವ ಹೊರತಾಗಿಯೂ ವಿದ್ಯಾರ್ಥಿಗಳನ್ನು ಏಕೆ ಈ ಶಾಲೆ ಆಕರ್ಷಿಸುತ್ತಿಲ್ಲ ಎಂದು ಸಂಶೋಧನೆ ನಡೆಸಲು ಕ್ಯಾಲಿಕಟ್ ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)ಗೆ ಕೊಟ್ಟಿಕೊಲ್ಲನ್ ಅವರು ಆಹ್ವಾನ ನೀಡಿದರು. ಸಂಶೋಧನೆಯಲ್ಲಿ ಕಂಡುಕೊಂಡ ಅಂಶಗಳು ಮತ್ತು ಅಭಿಪ್ರಾಯಗಳ ಆಧಾರದಲ್ಲಿ ಶಾಲೆಗೆ ಏನು ಅಗತ್ಯ ಎನ್ನುವುದನ್ನು ಕಂಡುಕೊಳ್ಳಲಾಯಿತು. ಬಳಿಕ ಡೆನ್ಮಾರ್ಕ್ ಮತ್ತು ಇಂಗ್ಲೆಂಡಿನ ಅಂತಾರಾಷ್ಟ್ರೀಯ ಆರ್ಕಿಟೆಕ್ಟ್ ಗಳ ಸಲಹೆಯೊಂದಿಗೆ ನೂತನ, ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಲಾಯಿತು.

"ನಾವು ಒಂದು ದಿನವೂ ತರಗತಿಗೆ ಅಡ್ಡಿಪಡಿಸದೇ ಬೇಸಿಗೆ ರಜೆಯಲ್ಲಿ ಇಡೀ ಯೋಜನೆಯನ್ನು ಕಾರ್ಯಗತಗೊಳಿಸಿದೆವು. ಕೇವಲ 95 ದಿನಗಳಲ್ಲಿ ಹbಳೆಯ ಗೋಡೆಗಳನ್ನು ಕಿತ್ತುಹಾಕಿ ಹೊಸ ವಿನ್ಯಾಸ ರೂಪಿಸಲಾಯಿತು. ಶೌಚಾಲಯಗಳನ್ನು ನಿರ್ಮಿಸಲಾಯಿತು; ಕ್ಯಾಲಿಕಟ್ ಐಐಎಂ ಮೂಲಕ ಶಿಕ್ಷಕರಿಗೆ ತರಬೇತಿ ನೀಡಲಾಯಿತು. 2015ನೇ ಶೈಕ್ಷಣಿಕ ವರ್ಷ ಆರಂಭವಾದಾಗ ಶಾಲೆಯ ಹೊಸ ರೂಪ ನೋಡಿ ದಿಢೀರನೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆತ್ಮ ವಿಶ್ವಾಸ ಹಲವು ಪಟ್ಟು ಹೆಚ್ಚಿತು" ಎಂದು ಫೈಝಲ್ ಹೇಳುತ್ತಾರೆ.

ಹೊಸ ನೋಟ

ಹೊಸ ಶಾಲಾ ಕ್ಯಾಂಪಸ್‌ನಲ್ಲಿ 1.32 ಚದರ ಅಡಿಯ ಉತ್ತಮ ಉದ್ಯಾನವನ, ಸುಮಾರು 25 ಸಾವಿರ ಪುಸ್ತಕಗಳ ಗ್ರಂಥಾಲಯ ಮತ್ತು ಅಥ್ಲೆಟಿಕ್ಸ್, ಫುಟ್ಬಾಲ್ ಮತ್ತು ಹಾಕಿ ಕ್ರೀಡೆಗಾಗಿ 18,100 ಚದರ ಅಡಿಯ ಆಸ್ಟ್ರೋ ಟರ್ಫ್ ವಿವಿಧೋದ್ದೇಶದ ಆಟದ ಮೈದಾನ ರೂಪುಗೊಂಡಿತು. ಮರಹಾಸಿನ ಬಾಸ್ಕೆಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್, ವಿಶಾಲವಾದ ಬಟ್ಟೆ ಬದಲಾಯಿಸುವ ಕೊಠಡಿ ಹಾಗೂ ವಿದ್ಯಾರ್ಥಿಗಳಿಗೆ ಲಾಕರ್ ಸೌಲಭ್ಯವನ್ನೂ ಒಳಗೊಂಡ 13 ಸಾವಿರ ಚದರ ಅಡಿಯ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಯಿತು.

 ಕಲಿಕೆ ಇಲ್ಲಿ ಖುಷಿಯಾಗಿ ಪರಿವರ್ತನೆಯಾಯಿತು. ಡಿಜಿಟಲ್ ತರಗತಿಗಳಿಂದಾಗಿ ಸಂವಾದಾತ್ಮಕ ಬೋಧನೆ ಆರಂಭವಾಯಿತು. ಹೊಸ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಯೋಗಗಳನ್ನು ಹೆಮ್ಮೆಯಿಂದ ಕೈಗೊಂಡರು. 92 ಕಲೆರಹಿತ ಶೌಚಾಲಯ, ಕಾರ್ಪೊರೇಟ್ ಶೈಲಿಯ ಅಡುಗೆಮನೆ ಹಾಗೂ 600 ವಿದ್ಯಾರ್ಥಿಗಳು ಕುಳಿತುಕೊಳ್ಳುವಷ್ಟು ವಿಶಾಲ ಊಟದ ಹಾಲ್ ನಿರ್ಮಾಣದೊಂದಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಆಯಿತು.

ಆರ್ಥಿಕ ಸಬಲೀಕರಣ ಪ್ರಯೋಗವೊಂದರಲ್ಲಿ, ಗ್ರಾಮೀಣ ಮಹಿಳೆಯರು ಶಾಲೆಯಲ್ಲಿ ಅಡುಗೆ ಮಾಡುವ ಉದ್ಯೋಗವನ್ನು ಪಡೆದರು. ಪಾಕಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯಕರ, ಸಮಗ್ರ ಊಟ ಸಿದ್ಧಪಡಿಸುವ ಮೂಲಕ ಒಂದಷ್ಟು ಆದಾಯವನ್ನೂ ಗಳಿಸತೊಡಗಿದರು. ಈ ಎಲ್ಲ ಅಂಶಗಳೂ ವಿದ್ಯಾರ್ಥಿಗಳ ಸರಾಸರಿ ಸಾಧನೆಯಲ್ಲಿ ಗಮನಾರ್ಹ ಬದಲಾವಣೆ ತಂದಿದ್ದನ್ನು ಫಲಿತಾಂಶವೇ ಎತ್ತಿ ತೋರಿಸಿತು. 2015ರ ಬೋರ್ಡ್ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾದರು. 393 ವಿದ್ಯಾರ್ಥಿಗಳ ಪೈಕಿ 21 ಮಂದಿ ಶೇಕಡ 92ಕ್ಕಿಂತ ಅಧಿಕ ಅಂಕ ಪಡೆದು ಎ ಪ್ಲಸ್ ಗ್ರೇಡ್ ಸಂಪಾದಿಸಿದರು. 2012ಕ್ಕೆ ಹೋಲಿಸಿದರೆ ಎ+ ಶ್ರೇಣಿ ಪಡೆದ ವಿದ್ಯಾರ್ಥಿನಿಯರ ಪ್ರಮಾಣ ಶೇಕಡ 400ರಷ್ಟು ಹೆಚ್ಚಿತು.

ಸ್ವಯಂ ಸುಸ್ಥಿರ

ಈ ಶಾಲೆ ಕ್ಯಾಲಿಕಟ್ ನ ಹೆಮ್ಮೆ ಹಾಗೂ ಇಡೀ ಸಮಾಜದ ಕೇಂದ್ರಸ್ಥಾನವಾಗಿ ಮಾರ್ಪಟ್ಟಿತು ಎಂದು ಫೈಝಲ್ ಹೇಳುತ್ತಾರೆ. ಎಲ್ಲ ಸೌಲಭ್ಯಗಳನ್ನು ನಿಗದಿತ ಶುಲ್ಕದೊಂದಿಗೆ ಜನರಿಗೆ ಬಳಕೆಗೆ ಮುಕ್ತಗೊಳಿಸಲಾಯಿತು. ಅಕ್ಕಪಕ್ಕದ ಎಲ್ಲರೂ ಬೆಳಗ್ಗೆ ವಾಯುವಿಹಾರಕ್ಕೆ ಶಾಲಾ ಮೈದಾನ ಬಳಸಲಾರಂಭಿಸಿದರು ಹಾಗೂ ವಾರಾಂತ್ಯದಲ್ಲಿ ಯೋಗ ಶಿಬಿರಗಳಿಗೆ ಕ್ಯಾಂಪಸ್ ಬಳಸತೊಡಗಿದರು. ಆತ್ಯಾಧುನಿಕ ಕ್ರೀಡಾಂಗಣ ಮತ್ತು ಆಟದ ಮೈದಾನವನ್ನು ಸಮುದಾಯ ಕಾರ್ಯಕ್ರಮಗಳಿಗೆ ಲೀಸ್ ಆಧಾರದಲ್ಲಿ ನೀಡಲಾಯಿತು.

"ಸುಮಾರು ಹತ್ತು ವರ್ಷ ಹಿಂದೆ ಫೌಂಡೇಷನ್ ಆರಂಭವಾದಾಗಿನಿಂದಲೂ ನಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಪರಿಣಾಮ ಬೀರುವ ಯೋಜನೆಗಳಿಗೆ ನಾವು ಗಮನಹರಿಸಿದ್ದೆವು. ಸುಮಾರು 120 ವರ್ಷಕ್ಕೂ ಸುದೀರ್ಘ ಇತಿಹಾಸ ಇರುವ ಶಾಲೆಗೆ ನೆರವು ನೀಡುವ ಅವಕಾಶವನ್ನು ಬಳಸಿಕೊಂಡು ಅದನ್ನು ಭಾರದ ಅಗ್ರಗಣ್ಯ ಶಾಲೆಗಳಲ್ಲೊಂದಾಗಿ ರೂಪಿಸಲು ಸಾಧ್ಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಈ ಅಭಿವೃದ್ಧಿಯಿಂದ ಮೌಲ್ಯ ವೃದ್ಧಿಯಾದ್ದನ್ನು ನಾವು ಕಂಡಿದ್ದೇವೆ. ಬದ್ಧತೆಯ ಶಿಕ್ಷಕರು ನೀಡುವ ಉತ್ತಮ ಗುಣಮಟ್ಟದ ಶಿಕ್ಷಣದಿಂದ ನಮ್ಮ ಎಲ್ಲ ವಿದ್ಯಾರ್ಥಿನಿಯರು ಲಾಭ ಪಡೆದಿದ್ದಾರೆ. ಸಮಾಜಕ್ಕೆ ನಂಬಲಸಾಧ್ಯ ಮೌಲ್ಯವನ್ನು ನೀಡುವ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ ಸಮಗ್ರ ಬದಲಾವಣೆ ಕಂಡಿದ್ದೇವೆ" ಎಂದು ಫೌಂಡೇಶನ್‌ನ ಸಹಸಂಸ್ಥಾಪಕಿ ಮತ್ತು ಕೆಇಎಫ್ ಹೋಲ್ಡಿಂಗ್ಸ್‌ನ ಉಪಾಧ್ಯಕ್ಷೆ ಶಬಾನಾ ಹೇಳುತ್ತಾರೆ.

ಶಬನಾ ಮಂಗಳೂರಿನ ತುಂಬೆಯ ಖ್ಯಾತ ಉದ್ಯಮಿ, ಸಾಮಾಜಿಕ ಧುರೀಣ ಬಿ.ಅಹ್ಮದ್ ಹಾಜಿ ಅವರ ಪುತ್ರಿ ಹಾಗು ಮಂಗಳೂರಿನ ಸಂತ ಆ್ಯಗ್ನೆಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ.


ವಿದ್ಯಾರ್ಥಿಗಳು ಏನು ಹೇಳುತ್ತಾರೆ?

ನಡಕ್ಕಾವು ಶಾಲೆಯಲ್ಲಿ 5ನೇ ತರಗತಿಯಿಂದಲೂ ಓದುತ್ತಿರುವ 12ನೇ ತರಗತಿ ವಿದ್ಯಾರ್ಥಿನಿ ಆಯಿನಾ

 "ನಮ್ಮದು ಮಧ್ಯಮ ವರ್ಗದ ಕುಟುಂಬ. ನಾನು ಐದನೇ ತರಗತಿಯಿಂದಲೇ ಇಲ್ಲಿ ಓದುತ್ತಿದ್ದೇನೆ. ಆಗ ಪುಟ್ಟ ಕ್ಯಾಂಟಿನ್ ಇತ್ತು ಹಾಗೂ ಕಟ್ಟಡ ಸ್ವಚ್ಛ ಇರಲಿಲ್ಲ. ಬಳಿಕ ದಿಢೀರನೇ ಬದಲಾವಣೆಗಳಾದವು. ಏನು ಆಯಿತು ಎನ್ನುವುದು ಆಗ ಅರ್ಥವಾಗದಿದ್ದರೂ, ಇದಕ್ಕೆ ನಡೆಸಿದ ಪ್ರಯತ್ನಗಳು ನನಗೆ ಇಂದು ತಿಳಿದಿವೆ. ಈ ಶಾಲೆಯ ಬಗ್ಗೆ ನನಗೆ ಇರುವ ಉತ್ತಮ ಭಾವನೆಯೆಂದರೆ, ನಮ್ಮ ಬಗ್ಗೆ ನಾವೇ ನಿರ್ಧಾರ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಇದು ನಮ್ಮಲ್ಲಿ ಹೆಚ್ಚಿನ ಜವಾಬ್ದಾರಿ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ಆತ್ಮವಿಶ್ವಾಸ ಮೂಡಿಸಿತು. ತಪ್ಪುಗಳನ್ನು ಮಾಡಿದರೂ ನಮ್ಮತನದಲ್ಲಿ ವಿಶ್ವಾಸ ಮೂಡುವಂತೆ ಮಾಡಿತು. ಈ ಶಾಲೆಯ ಭಾಗವಾಗಿರುವುದಕ್ಕೆ ಹಾಗೂ ಇದು ನನ್ನ ಜೀವನದ ಚೌಕಟ್ಟನ್ನೇ ಬದಲಿಸಿರುವುದಕ್ಕೆ ನನಗೆ ಅತೀವ ಸಂತಸವಿದೆ"


ನಡಕ್ಕಾವು ಶಾಲೆಯಲ್ಲಿ 5ನೇ ತರಗತಿಯಿಂದಲೂ ಓದುತ್ತಿರುವ 12ನೇ ತರಗತಿ ವಿದ್ಯಾರ್ಥಿನಿ ನೀಹಾರಾ

"ಈ ಶಾಲೆ ನಾವು ಬೆಳೆಯಲು ಮತ್ತು ನಮ್ಮದೇ ಕಲ್ಪನೆಯನ್ನು ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ನನ್ನ ಶಿಕ್ಷಕರಾಗಿರುವ ಶಿಜು ಸರ್ ನನ್ನನ್ನು ಭಾಷಣಕ್ಕೆ, ದಿನದ ಚಿಂತನೆಯನ್ನು ಪ್ರಸ್ತುತಪಡಿಸಲು ಒತ್ತಾಯಿಸುತ್ತಿದ್ದರು. ಇದು ನನಗೆ ಕೌಶಲ ಬೆಳೆಸಿಕೊಳ್ಳಲು ನೆರವಾಯಿತು. ನಾನು ಈಗ ಹೆಚ್ಚು ಆತ್ಮವಿಶ್ವಾಸದಿಂದ ಇದ್ದೇನೆ ಹಾಗೂ ಕಳೆದ ವರ್ಷಗಳಲ್ಲಿ ನನ್ನ ಸಾಧನೆ ಉತ್ತಮವಾಗಿದೆ. ಐಐಎಂಕೆಯಲ್ಲಿ ಮುಂದೆ ಅಧ್ಯಯನ ಮಾಡಿ ಉದ್ಯಮಿಯಾಗುವುದು ನನ್ನ ಕನಸು. ಈ ಶಾಲೆಯಲ್ಲಿ ನನ್ನ ವೈಯಕ್ತಿಕ ಬದುಕು ಕೂಡಾ ಧನಾತ್ಮಕವಾಗಿ ಬದಲಾಗಿದೆ"


2010-2012ರಲ್ಲಿ ನಡಕ್ಕಾವು ಶಾಲೆಯಲ್ಲಿ ಕಲಿತು ಇದೀಗ ಆರೋಗ್ಯಸೇವೆ ತಂತ್ರಜ್ಞರಾಗಿ ಉದ್ಯೋಗದಲ್ಲಿದ್ದು, ಪಿಎಚ್‌ಡಿ ಮಾಡಲು ಸಿದ್ಧತೆ ನಡೆಸುತ್ತಿರುವ ಸುನಿಹಾ ಚೆರೋಟ್:

"ಮೊದಲು ಅಂದರೆ ನಾನು ಓದುತ್ತಿದ್ದಾಗ ಈ ಶಾಲೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿತ್ತು. ನಾನು ಉತ್ತೀರ್ಣಳಾದ ಸಂದರ್ಭದಲ್ಲಿ ದಿಢೀರ್ ಬದಲಾವಣೆ ಸಂಭವಿಸಿತು. ಬದಲಾದ ಈ ದಿನಗಳಲ್ಲಿ ನಾನು ಅಲ್ಲಿರಬೇಕಿತ್ತು ಎಂದು ನಾನು ಬಯಸಿದ್ದೆ"

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)