varthabharthi


ಸಿನಿಮಾ

ಬಿಗಿಲ್, ಫುಟ್ಬಾಲ್ ಮತ್ತು ಪ್ರೇಕ್ಷಕರ ವಿಶಿಲ್

ವಾರ್ತಾ ಭಾರತಿ : 26 Oct, 2019
ಶಶಿಕರ ಪಾತೂರು

ಸಾಮಾನ್ಯವಾಗಿ ದೀಪಾವಳಿಗೆ ಬಿಡುಗಡೆಯಾಗುವ ಸ್ಟಾರ್ ಸಿನಿಮಾಗಳೆಂದರೆ ಆ್ಯಕ್ಷನ್ ಮತ್ತು ಮನೋರಂಜನೆ ತುಂಬಿಕೊಂಡಿರುವುದು ಸಹಜ. ಅದರಾಚೆ ಸಂದೇಶಗಳೊಂದಿಗೆ ಬರುವ ಚಿತ್ರಗಳನ್ನು ಕಾದು ನಿಲ್ಲುವ ತಾಳ್ಮೆ ಅಭಿಮಾನಿಗಳಿಗೂ ಇರುವುದಿಲ್ಲ. ಆದರೆ ಮಹಿಳೆಯರ ಬಗ್ಗೆ ಗೌರವ, ಅಭಿಮಾನ ಬೆಳೆಸಲೇಬೇಕು ಎನ್ನುವಂತಹ ಚಿತ್ರವೊಂದನ್ನು ನೀಡಿದ್ದಾರೆ ನಿರ್ದೇಶಕ ಅಟ್ಲೀ.

ಮೈಕೆಲ್ ಒಬ್ಬ ಗ್ಯಾಂಗಸ್ಟರ್. ಸ್ಥಳೀಯರ ಬೆಂಬಲಕ್ಕೆ ನಿಂತು ಸ್ಥಳವೊಂದನ್ನು ಸರಕಾರಕ್ಕೆ ಬಿಟ್ಟು ಕೊಡದಿರಲು ನಡೆಸುವ ಹೋರಾಟದ ಮೂಲಕ ಆತನ ಎಂಟ್ರಿ. ಮೈಕೆಲ್‌ನ ಸ್ನೇಹಿತ ಕದಿರ್ ತಮಿಳುನಾಡು ಮಹಿಳೆಯರ ಫುಟ್ಬಾಲ್ ಟೀಮ್‌ನ ಕೋಚ್ ಆಗಿರುತ್ತಾನೆ. ತನ್ನ ಮಹಿಳಾ ಟೀಮ್ ಜತೆಗೆ ಮೈಕೆಲ್‌ನನ್ನು ಭೇಟಿಯಾಗುತ್ತಾನೆ ಕದಿರ್. ಈ ಸಂದರ್ಭದಲ್ಲಿ ಮೈಕೆಲ್ ಮೇಲೆ ವಿರೋಧಿ ಬಣದವರಿಂದ ಹಲ್ಲೆ ನಡೆಯುತ್ತದೆ. ಈ ಹಲ್ಲೆಯಲ್ಲಿ ಕದಿರ್ ಗಂಭೀರವಾಗಿ ಗಾಯಗೊಳ್ಳುತ್ತಾನೆ. ಹಾಗಾಗಿ ರಾಷ್ಟ್ರ ಮಟ್ಟದ ಮ್ಯಾಚ್‌ಗೆ ಸಿದ್ಧವಾಗಿದ್ದ ಮಹಿಳಾ ತಂಡಕ್ಕೆ ಫುಟ್ಬಾಲ್ ಕೋಚ್ ಒಬ್ಬರ ಅನಿವಾರ್ಯತೆ ಎದುರಾಗುತ್ತದೆ. ಆಗ ಹಿರಿಯರೊಬ್ಬರು ಮೈಕೆಲ್ ಹೆಸರನ್ನು ಸೂಚಿಸುತ್ತಾರೆ. ಹೇಗೆ ರೌಡಿಯೊಬ್ಬ ಫುಟ್ಬಾಲ್ ಕೋಚ್ ಆಗಬಲ್ಲ ಎನ್ನುವುದನ್ನು ಸಮರ್ಥನೀಯವಾಗಿ ಫ್ಲ್ಯಾಶ್ ಬ್ಯಾಕ್ ಕತೆಯೊಂದರಲ್ಲಿ ಹೇಳಲಾಗುತ್ತದೆ. ಆದರೆ ಈ ಕೋಚ್ ಅನ್ನು ಮಹಿಳಾಮಣಿಗಳು ಹೇಗೆ ಒಪ್ಪಿಕೊಳ್ಳುತ್ತಾರೆ? ಆತ ಹೇಗೆ ತಂಡವನ್ನು ಮುನ್ನಡೆಸುತ್ತಾನೆ ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಚೆಲುವು.

ಹುಡುಗಿಯರ ಸ್ಫೋರ್ಟ್ಸ್ ತಂಡವನ್ನು ಮುನ್ನಡೆಸುವ ಕೋಚ್ ಎಂದೊಡನೆ ನಮಗೆ ಶಾರುಕ್ ನಟನೆಯ ‘ಚಕ್ ದೇ ಇಂಡಿಯ’ ಚಿತ್ರ ನೆನಪಾಗುವುದು ಸಹಜ. ಇಲ್ಲಿಯೂ ತಂಡ ಮತ್ತು ಕೋಚ್ ನಡುವಿನ ಹೊಂದಾಣಿಕೆಯ ವಿಚಾರಕ್ಕೆ ಬಂದಾಗ ಸ್ವಲ್ಪಹೋಲಿಕೆ ಕಾಣಿಸುತ್ತದೆ ಎನ್ನುವುದನ್ನು ಬಿಟ್ಟರೆ ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಮಾತ್ರವಲ್ಲ ಇಲ್ಲಿ ರೌಡಿ ಮೈಕೆಲ್ ‘ಬಿಗಿಲ್’ ಎಂಬ ಅದ್ಭುತ ಆಟಗಾರ ಆಗಿದ್ದಂತಹ ಫ್ಲ್ಯಾಶ್‌ಬ್ಯಾಕ್ ಕತೆ ತೆರೆದುಕೊಳ್ಳುತ್ತದೆ. ತಂದೆ ರಾಯಪ್ಪನ್ ಒಬ್ಬ ವಯಸ್ಸಾದ ಗ್ಯಾಂಗಸ್ಟರ್. ಆತನ ಮಗನೇ ಬಿಗಿಲ್ ಖ್ಯಾತಿಯ ಮೈಕೆಲ್! ಮೈಕೆಲ್ ಒಬ್ಬ ಅಪ್ರತಿಮ ಫುಟ್ಬಾಲ್ ಆಟಗಾರ. ಮಗನನ್ನು ರೌಡಿಸಂನಿಂದ ದೂರವಿರಿಸಿ, ಫುಟ್ಬಾಲ್ ಆಟಗಾರನಾಗಿ ಮಾತ್ರ ಉಳಿಸುವ ಆಸೆಯ ತಂದೆಯಾಗಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಿಗಿಲ್ ಮುಂದೆ ಫುಟ್ಬಾಲ್ ಆಡದಿರುವಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಆ ದೃಶ್ಯದಲ್ಲಿ ಮೈಕೆಲ್‌ನಿಂದ ದೂರವಾಗುವ ಫುಟ್ಬಾಲನ್ನು ಸೂಚ್ಯವಾಗಿ ತೋರಿಸಲಾಗಿದೆ. ತಂದೆ ಮಗನ ಪಾತ್ರದಲ್ಲಿ ವಿಜಯ್ ಲವಲವಿಕೆಯಲ್ಲಿ ಅಂತಹ ವ್ಯತ್ಯಾಸ ಏನೂ ಕಾಣಿಸುವುದಿಲ್ಲ. ಆದರೆ ತಂದೆಗೆ ಸ್ಪಲ್ಪಉದ್ವೇಗಕ್ಕೆ ಒಳಗಾದಾಗ ಮಾತಿನಲ್ಲಿ ಉಗ್ಗು ಕಾಣಿಸುತ್ತದೆ. ತಂದೆ ಮಗ ಅಪ್ಪಿಕೊಳ್ಳುವ ಸನ್ನಿವೇಶಗಳಲ್ಲಿ ಭಾವನಾತ್ಮಕತೆ ತುಂಬಲು ನಿರ್ದೇಶಕರಿಗೆ ಸಾಧ್ಯವಾಗಿದೆ. ಮೈಕೆಲ್ ಕೋಚ್ ಆಗಿ ಬದಲಾದಾಗ ನಾಯಕನಾಗಿ ವಿಜಯ್‌ಗೆ ಮತ್ತೊಂದು ಶೇಡ್‌ನಲ್ಲಿ ನಟಿಸುವ ಅವಕಾಶ ಸಿಕ್ಕಂತಾಗಿದೆ. ನಿರ್ದೇಶಕರು ತಮ್ಮದೇ ‘ತೆರಿ’ ಚಿತ್ರದಲ್ಲಿನ ನಾಯಕನ ಚ್ಯೂಯಿಂಗ್ ಗಮ್ ತಿನ್ನುವ ಮ್ಯಾನರಿಸಮ್ಮನ್ನು ಇಲ್ಲಿ ಪುನರಾವರ್ತಿತಗೊಳಿಸಿದ್ದಾರೆ. ಆ್ಯಕ್ಷನ್ ಪ್ರಿಯರ ಜತೆಗೆ ಫುಟ್ಬಾಲ್ ಪ್ರಿಯರಿಗೂ ಚಿತ್ರ ಆಪ್ತವಾಗುತ್ತದೆ. ಆದರೆ ಮೈದಾನದ ಆಟದ ವಿಚಾರದಲ್ಲಾದರೂ ಸ್ವಲ್ಪ ನೈಜತೆ ಇರಬೇಕಿತ್ತು ಅನಿಸುತ್ತದೆ. ಖ್ಯಾತ ಫುಟ್ಬಾಲ್ ಆಟಗಾರ ಐ. ಎಂ. ವಿಜಯನ್ ನಟಿಸಿದ್ದರೂ ಅವರನ್ನು ಆಟಗಾರನಾಗಿ ತೋರಿಸದೇ ಬರೀ ಖಳನಾಗಿ ತೋರಿಸಿರುವುದು ಅವರ ಆಟ ಪ್ರೀತಿಸುವವರಿಗೆ ನಿರಾಶೆ ಮೂಡಿಸಿದರೆ ಅಚ್ಚರಿ ಇಲ್ಲ. ಫುಟ್ಬಾಲ್ ಅಸೋಸಿಯೇಷನ್‌ನ ಮುಖ್ಯಸ್ಥನ ಶರ್ಮಾ ಪಾತ್ರದಲ್ಲಿ ಜಾಕಿಶ್ರಾಫ್ ನಟನೆ ಅಮೋಘ.

ಎ. ಆರ್. ರೆಹಮಾನ್ ಸಂಗೀತದ ಹಾಡುಗಳು ಮಾತ್ರವಲ್ಲ, ಸಂಗೀತವೂ ಆಹ್ಲಾದದಾಯಕವಾಗಿದೆ. ಬಿಡುಗಡೆಗೂ ಮೊದಲು ‘ಸಿಂಗ ಪೆಣ್ಣೇ..’ ಹಾಡು ನಾಯಕಿಯನ್ನು ಹೊಗಳುವ ಗೀತೆಯಂತೆ ಇತ್ತು. ಆದರೆ ಚಿತ್ರ ನೋಡಿದಾಗ ಅದು ಮಹಿಳೆಯರನ್ನು ಗೌರವಿಸುವ ಗೀತೆಯಾಗಿ ಮೂಡಿ ಬಂದು ರೋಮಾಂಚನಗೊಳಿಸುತ್ತದೆ. ಮತ್ತೊಂದೆಡೆ ಟಪ್ಪಾಂಗುಚ್ಚಿ ಸಂಗೀತಕ್ಕೆ ಕೋಟು ಸೂಟು ಧರಿಸಿ ನಯನ್ ತಾರಾ ಜತೆಗೆ ವಿಜಯ್ ಹಾಕುವ ಹೆಜ್ಜೆಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಚಿಕ್ಕ ಪಾತ್ರವಾದರೂ ನಾಯಕಿಯಾಗಿ ನಯನ್ ತಾರಾ ಎಂದಿನಂತೆ ಗಮನ ಸೆಳೆಯುತ್ತಾರೆ. ಮಾತ್ರವಲ್ಲ ‘‘ಟೀಮ್ ಗೆಲ್ಲಲು ನಾನು ಸಾಕು; ಆದರೆ ನಾನು ಗೆಲ್ಲಲು ನೀನು ಬೇಕು’’ ಎನ್ನುವಂತಹ ಸಂಭಾಷಣೆಯನ್ನು ವಿಜಯ್ ಬಾಯಿಯಿಂದಲೇ ಹೇಳಿಸಿಕೊಂಡಿದ್ದಾರೆ! ಆದರೆ ಮಹಿಳಾ ಪ್ರಾಧಾನ್ಯತೆಯ ನಡುವೆಯೇ ನಾಯಕನಿಂದ ಸ್ಪರ್ಧಿ ಓರ್ವಳಿಗೆ ಹಠ ತುಂಬಲು ಗುಂಡಮ್ಮ ಎಂದು ಕರೆಸಿ ಅವಮಾನ ಮಾಡುವ ಸನ್ನಿವೇಶ ಸೇರಿದಂತೆ ಕೆಲವೊಂದು ವಿರೋಧಾಭಾಸಗಳು ಕೂಡ ಚಿತ್ರದಲ್ಲಿವೆ. ಒಟ್ಟಿನಲ್ಲಿ ಮನರಂಜನೆಯ ವಿಚಾರದಲ್ಲಿ ಖಂಡಿತವಾಗಿ ನಿರಾಶೆ ನೀಡದಂತಹ ಸಿನೆಮಾ ಬಿಗಿಲ್ ಎಂದು ಧೈರ್ಯದಿಂದ ಹೇಳಬಹುದು.

ತಾರಾಗಣ: ವಿಜಯ್, ನಯನ್ ತಾರಾ
ನಿರ್ದೇಶನ: ಅಟ್ಲೀ
ನಿರ್ಮಾಣ: ಅಘೋರಮ್, ಗಣೇಶ್ ಮತ್ತು ಸುರೇಶ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)