varthabharthi


ಸುಗ್ಗಿ

ಬೆಳೆಯುವ ಪೈರು - ಭಾಗ- 3

ಹಠಾತ್ ಪ್ರವೃತ್ತಿ

ವಾರ್ತಾ ಭಾರತಿ : 27 Oct, 2019
ಯೋಗೇಶ್ ಮಾಸ್ಟರ್

ಹಟವೆಂಬುದು ಸಾಮಾನ್ಯವಲ್ಲ

ಮಕ್ಕಳು ತಮಗೇನೋ ಬೇಕೆಂದು ರಚ್ಚೆ ಹಿಡಿಯುವುದು, ಯಾರ ಮೇಲಾದರೂ ಕೋಪ ಬಂದರೆ ಅದನ್ನು ತಡೆದುಕೊಳ್ಳಲಾರದೆ ಹೊಡೆದುಬಿಡುವುದು, ಬೇರೊಂದು ಮಗುವನ್ನು ಹಠಾತ್ತನೆ ಕಚ್ಚಿಬಿಡುವುದು ಅಥವಾ ಗಿಲ್ಲುವುದು, ಯಾರದೋ ವಸ್ತುವನ್ನು ತನಗೆ ಬೇಕೆಂದು ಹಠಾತ್ತನೆ ಕಿತ್ತುಕೊಳ್ಳುವುದು, ಮುಜುಗರವಾಗುವಂತೆ ಏನೋ ಹೇಳಿಬಿಡುವುದು; ಇಂಥವೆಲ್ಲಾ ಮಗುವಾಗಿದ್ದಾಗ ಸಾಮಾನ್ಯವಾದುದೆಂದೂ ದೊಡ್ಡವರಾದಂತೆಲ್ಲಾ, ಪ್ರಬುದ್ಧರಾಗುತ್ತಾ ಹೋದಂತೆಲ್ಲಾ ಸರಿಹೋಗುತ್ತಾರೆ ಎಂದು ಉಪೇಕ್ಷಿಸುವ ಮಂದಿಯನ್ನು ಅನೇಕ ಪ್ರಸಂಗಗಳಲ್ಲಿ ಕಾಣುತ್ತಲೇ ಇರುತ್ತೇವೆ. ಮಕ್ಕಳು ಯಾವುದೇ ಕಾರಣಕ್ಕೆ ಹಾಗೆ ಸ್ಪೋಟಗೊಳ್ಳುತ್ತಾರೆ ಎಂದರೆ ಅವರಲ್ಲಿ ಅನಿಯಂತ್ರಿತ ಹಠಾತ್ ಪ್ರವೃತ್ತಿಯ ಸಮಸ್ಯೆ ಅಂದರೆ ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ (ಐಸಿಡಿ) ಇರಬಹುದು ಎಂಬ ಎಚ್ಚರಿಕೆ ಹೊಂುವುದು ಯಾವುದಕ್ಕೂ ಒಳ್ಳೆಯದು.

ಒಂದು ವಿಷಯ ಚೆನ್ನಾಗಿ ನೆನಪಿಡಿ. ಅವರಿಗೆ ಕೋಪ ಬಂದರೆ ಮನುಷ್ಯನೇ ಅಲ್ಲ. ಅವನಿಗೆ ಏನು ಮಾತಾಡುತ್ತಾನೆ, ಮಾಡುತ್ತಾನೆ ಎಂಬುದೇ ತಿಳಿಯುವುದಿಲ್ಲ. ಅಂತಹ ಕೆಟ್ಟ ಕೋಪ ಎಂದು ಗಂಡನ ಬಗ್ಗೆಯೋ, ಬಾಸ್ ಬಗ್ಗೆಯೋ, ಇನ್ಯಾರ ಬಗ್ಗೆಯೋ ಮಾತಾಡಿಕೊಳ್ಳುತ್ತಾರಲ್ಲಾ, ಅವರು ಬಾಲ್ಯದಿಂದ ತಮ್ಮ ಹಠಾತ್ ಪ್ರವೃತ್ತಿಯನ್ನು ನಿಯಂತ್ರಿಸುವಂತಹ ತರಬೇತಿಯನ್ನು ಪಡೆದಿಲ್ಲ ಎಂದೇ ಅರ್ಥ. ಬಾಲ್ಯದಲ್ಲಿ ಮಗುವಿಗೆ ಯಾವುದೇ ಕೌಶಲ್ಯ, ವಿದ್ಯೆ, ಕ್ರೀಡಾ ತರಬೇತಿ ಇತ್ಯಾದಿಗಳನ್ನು ಹೇಳಿಕೊಡುವಂತೆ, ತನ್ನ ಭಾವೋದ್ರೇಕ, ಭಾವೋದ್ವೇಗಗಳನ್ನು ನಿಯಂತ್ರಿಸುವುದನ್ನೂ ಹೇಳಿ ಕೊಡಬೇಕು ಮತ್ತು ತಾವೇ ಅದಕ್ಕೆ ಉದಾಹರಣೆಯೂ ಆಗಬೇಕು.

ತಮಗೆ ಉಂಟಾದ ಭಾವೋದ್ವೇಗವನ್ನು ತಡೆದುಕೊಳ್ಳಲಾರದೆ ಹಾದಿರಂಪ ಬೀದಿರಂಪ ಮಾಡುವುದು, ಕೋಪವನ್ನು ತಡೆಯ ಲಾರದೆ ಕೊಚ್ಚಿ ಕೊಚ್ಚಿ ಕೊಲೆ ಮಾಡುವುದು, ಶೀತಲ ದ್ವೇಷವನ್ನು ಸಾಧಿಸಿಕೊಂಡು ಮಸೆಯುವುದು, ಸಭೆ ಸಮಾರಂಭಗಳಂತಹ ಜನ ಸೇರಿರುವ ಜಾಗಗಳಲ್ಲಿ ತಮಗೆ ಆದ ಬೇಸರವನ್ನು ಕಿರುಚಿ, ಕೂಗಾಡಿ, ಅತ್ತು ಹೊರಹಾಕುವುದು, ತಮಗೆ ಆಗದವರನ್ನು ಕಂಡ ಕೂಡಲೇ ಉದ್ವಿಗ್ನರಾಗಿ, ಉದ್ರೇಕವನ್ನು ಹತ್ತಿಕ್ಕಿಕೊಳ್ಳಲಾಗದೆ ಅವರ ಮೇಲೆ ದಿಢೀರನೇ ದಾಳಿ ಮಾಡುವುದು, ಲೈಂಗಿಕ ಕಿರುಕುಳವನ್ನು ಕೊಡುವುದು, ಅತ್ಯಾಚಾರಕ್ಕೆ ಮುಂದಾಗುವುದು; ಇತ್ಯಾದಿಗಳೆಲ್ಲಾ ಬಾಲ್ಯದಲ್ಲಿ ಅಥವಾ ಆರಂಭಿಕ ವಯಸ್ಸುಗಳಲ್ಲಿ ಉಪೇಕ್ಷಿಸುವಂತಹ ಮನೋರೋಗಗಳೇ ಆಗಿರುತ್ತವೆ. ಅಂತಹ ಮನೋರೋಗಗಳಲ್ಲಿ ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ ಅಥವಾ ಅನಿಯಂತ್ರಿತ ಹಠಾತ್ ಪ್ರೃತ್ತಿಯ ಸಮಸ್ಯೆಯೂ ಕೂಡಾ ಒಂದು.

ಬಾಲ ಗೂಂಡಾಗಳು

ಕೆಲವು ಮಕ್ಕಳಿಗೆ ಅವರ ವಸ್ತುವನ್ನು ಅವರಿಂದ ತೆಗೆದುಕೊಳ್ಳಲಾಗುವುದಿಲ್ಲ. ಜೋರಾಗಿ ಕಿರುಚುವುದು, ಅಳುವುದು ಮಾತ್ರವಲ್ಲ, ದೊಡ್ಡವರಾಗಲಿ, ಚಿಕ್ಕವರಾಗಲಿ ಪಟಪಟನೆ ಹೊಡೆದು, ಕೈ ಕಾಲು ಬಡಿಯುತ್ತಾ ರಂಪಾಟ ಮಾಡುತ್ತಾರೆ. ಹೋಗೋಲೈ ಎನ್ನುವುದೋ ಅಥವಾ ಇನ್ಯಾವುದಾದರೂ ಬೈಗುಳದ ಪದವನ್ನು ಜೋರಾಗಿ ಹೇಳುವುದು, ಕಚ್ಚುವುದು, ಪರಚುವುದು ಅಥವಾ ಯಾವುದನ್ನಾದರೂ ತೆಗೆದುಕೊಂಡು ಚುಚ್ಚಿ ಬಿಡುವುದೂ ಉಂಟು. ಆಗ ಕೆಲವು ಪಾಲಕರು ಈ ಮಗು ಅವನ ತಾತನ ತರನೋ, ಅತ್ತೆಯ ತರನೋ, ಅಪ್ಪನ ತರನೋ ಕೋಪಿಷ್ಟ ಎಂದು ತಮ್ಮ ವಂಶಾವಳಿಯಲ್ಲಿ ಯಾರೋ ಒಬ್ಬರನ್ನು ಗುರುತಿಸಿ ಏನೂ ಮಾಡಲಾಗದು ಸರಿಪಡಿಸಲಾಗದ ಮೂಲ ಸಮಸ್ಯೆ ಎಂದು ಸುಮ್ಮನಾಗಿ ಬಿಡುತ್ತಾರೆ. ಇಂತಹ ಪ್ರವೃತ್ತಿಗಳು ಅನುವಂಶೀಯವೇ ಅಲ್ಲವೇ ಎನ್ನುವುದು ಚರ್ಚೆಯ ಇನ್ನೊಂದು ಮಗ್ಗುಲು. ಆದರೆ ಈಗ ಗಮನಿಸಬೇಕಾದ ಅಂಶವೆಂದರೆ, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸೂಕ್ತ ಕ್ರಮ ಮತ್ತು ಚಿಕಿತ್ಸೆಗಳನ್ನು ಒದಗಿಸುವಿರೋ ಇಲ್ಲವೊೀ ಎಂಬುದು.

ಇನ್ನೂ ಹಲ್ಲುಗಳೇ ನೆಟ್ಟಗೆ ಬಂದಿರದ ವಯಸ್ಸಿನಲ್ಲೇ ಕಚ್ಚುವ ಮಕ್ಕಳನ್ನು ನೋಡುತ್ತೀರಿ. ನೆಟ್ಟಗೆ ನಿಲ್ಲಲು, ಸಮತೋಲದಲ್ಲಿ ನಡೆಯಲು ಬರದ ಮಗುವು ಒದೆಯುವುದನ್ನು ನೋಡುತ್ತೀರಿ. ಕೂಡಲೇ ಅದಕ್ಕೆ ಹಾಗೆ ಮಾಡಕೂಡದು ಎಂದು ಕಟ್ಟುನಿಟ್ಟಾಗಿ ಹೇಳಬೇಕು. ಅದರಿಂದ ನೋವಾಗುತ್ತೆ ಎಂಬುದನ್ನು ಸ್ಪಷ್ಟಪಡಿಸಬೇಕು.

ನಮ್ಮ ಸ್ನೇಹಿತರ ಮಗುವೊಂದಕ್ಕೆ ಕೋಪ ಬಂದಾಗೆಲ್ಲಾ ಜಿಗುಟುವ ಸಮಸ್ಯೆ ಇತ್ತು. ಆ ಮಗುವಿನ ಬಳಿ ಆಡುತ್ತಿದ್ದ ಮಕ್ಕಳಿಗೆಲ್ಲಾ ಚರ್ಮ ಕಿತ್ತು ಬರುವಂತೆ, ರಕ್ತ ಬರುವಂತೆ, ಉಗುರುಗಳು ಬೀಳುವಂತೆ ಮಗು ಗಿಂಡುತ್ತಿತ್ತು. ಮೊದಲು ತಂದೆ ಮತ್ತು ತಾಯಿ ಮಗುವು ಹಾಗೆ ಮಾಡಲು ಹೋದಾಗೆಲ್ಲಾ ಪಟ್ಟನೆ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಗಿಂಡಬೇಡ ಎಂದು ಗಟ್ಟಿಯಾಗಿ ಹೇಳುತ್ತಿದ್ದರು. ಆದರೂ, ಅವರೊಂದಿಗೆ ಹೋರಾಟ ಮಾಡಿ ಹೇಗಾದರೂ ಜಿಗುಟಿಯೇ ತೀರುವ ಪ್ರಯತ್ನ ಮಾಡುತ್ತಿತ್ತು ಆ ಮಗು. ಕೆಲವು ಸಲ ಅಂತರದಲ್ಲಿರುವ ಕಾರಣದಿಂದ ಅಥವಾ ಹಠಾತ್ತನೆ ಜಿಗುಟಿಬಿಡುವುದರಿಂದ ಅವರಿಗೆ ಕೈಗಳನ್ನು ಹಿಡಿದುಕೊಳ್ಳಲು ಆಗುತ್ತಿರಲಿಲ್ಲ. ಇದು ವಿಪರೀತಕ್ಕೆ ಹೋಗುವ ಲಕ್ಷಣಗಳು ಕಾಣಿಸಿದಾಗ, ತಂದೆ ಅಥವಾ ತಾಯಿ ಯಾರಾದರೂ ಸರಿಯೇ ಆ ಮಗುವು ಜಿಗುಟಿದ ಕೂಡಲೇ ಅದಕ್ಕೂ ಚರ್ಮ ಕಿತ್ತುಬರುವಂತೆ ಜಿಗುಟುತ್ತಿದ್ದರು. ನಾನು ಮೊದಮೊದಲು ವಿರೋಧಿಸುತ್ತಿದ್ದೆ. ಆದರೆ, ನೀನು ಜಿಗುಟಿದರೆ ನಾನೂ ಜಿಗುಟುತ್ತೇನೆ ಎಂಬ ಈ ಸೂತ್ರ ಕೆಲವೇ ದಿನಗಳಲ್ಲಿ ಯಶಸ್ವಿಯಾಯಿತು. ಆ ಮಗು ಈಗ ದೊಡ್ಡದಾಗಿದೆ. ಹಠಾತ್ ಪ್ರವೃತ್ತಿ ಏನಾದರೂ ಇದೆಯಾ ಎಂದು ಗಮನಿಸುತ್ತಿರುತ್ತೇನೆ. ಆದರೆ ಆ ಲಕ್ಷಣಗಳೇನೂ ಈಗ ಇಲ್ಲ. ಹಾಗೆಯೇ ಏನೇ ಪ್ರತಿಕ್ರಿಯೆ ಕೊಡುವಾಗಲೂ, ತನ್ನ ಭಾವನೆಗಳನ್ನು ವ್ಯಕ್ತಪಡಿಸುವಾಗಲೂ ಅದು ನಿಯಂತ್ರಿತವಾಗಿಯೂ ಮತ್ತು ಪ್ರಜ್ಞೆಯಿಂದಲೇ ಕೊಡುತ್ತದೆ. ಮಗುವಿನ ತಂದೆ ತಾಯಿ ಮಗುವು ಜಿಗುಟಿದಾಗ ಅವರೂ ಕೋಪಗೊಂಡು ಜಿಗುಟುತ್ತಿರಲಿಲ್ಲ. ಕೂಗಾಡುತ್ತಿರಲಿಲ್ಲ. ಕೋಪದಿಂದ ಪಟಪಟನೆ ಹೊಡೆಯುತ್ತಿರಲಿಲ್ಲ. ಬದಲಾಗಿ ನೀನು ಜಿಗುಟಿದರೆ ಆ ನೋವು ಹೇಗಿರುತ್ತದೆ ನಿನಗೆ ಗೊತ್ತಾಗಬೇಕು, ನೋಡು ಎಂಬರ್ಥದಲ್ಲಿ ತಾವೊಂದು ಕಾನೂನನ್ನು ನಿರ್ದಾಕ್ಷಿಣ್ಯವಾಗಿ ಪಾಲಿಸುತ್ತಿದ್ದೇವೆ ಎಂಬ ಮುಖಭಾವದಲ್ಲಿ ಜಿಗುಟುತ್ತಿದ್ದರು. ಮರಳಿ ಜಿಗುಟುವ ಸೂತ್ರವು ಸರಿ ಎಂದು ನನಗೆ ಹೇಳಲಾಗದಿದ್ದರೂ, ಆ ರೀತಿಯಲ್ಲಿ ಗಟ್ಟಿಯಾದ ಸಂದೇಶವನ್ನು ಮಗುವಿಗೆ ಕೊಡಲೇಬೇಕು ಎಂಬುದಂತೂ ಸರಿ.

ಭಾವೋದ್ರೇಕಗಳ ನಿಯಂತ್ರಣದ ತರಬೇತಿ

ನಿನಗೆ ಇಷ್ಟ ಆಗಲಿಲ್ಲವಾ? ನಿನಗೆ ಕೋಪ ಬಂತಾ? ನಿನಗೆ ಇದು ಬೇಡವಾ? ಇದು ನಿನಗೆ ಬೇಕಾ? ಹೇಳು, ಬಾಯ್ಬಿಟ್ಟು ಹೇಳು. ಕೂಗಾಡಿದರೆ, ರಚ್ಚೆ ಹಿಡಿದು ಅತ್ತರೆ, ಕಿತ್ತುಕೊಂಡರೆ, ಹೊಡೆದರೆ, ಜಿಗುಟಿದರೆ ಅದಕ್ಕೆ ನಾವು ಬಗ್ಗುವುದಿಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ಮಗುವಿಗೆ ರವಾನಿಸಲೇ ಬೇಕು. ಅದಕ್ಕೆ ತನ್ನ ಭಾವೋದ್ರೇಕದ ಪ್ರದರ್ಶನದ ಇತಿಮಿತಿಗಳನ್ನು ಅರಿತುಕೊಳ್ಳಲು ರೂಢಿ ಮಾಡಿಸಬೇಕು. ಅಂತೆಯೇ, ಅವರು ತಮ್ಮ ಇಷ್ಟ ಕಷ್ಟಗಳನ್ನು ಸರಿಯಾಗಿ ಹೇಳಿದಾಗ ದೊಡ್ಡವರು ಕೂಡಾ ಅತಿರೇಕದಿಂದ ಪ್ರತಿಕ್ರಿಯಿಸದೆ ಸಾವಧಾನದಿಂದಲೇ ಸ್ಪಂದಿಸಬೇಕು. ಅದರ ಹೊರತಾಗಿ ಮಗುವು ಕೆಟ್ಟದಾಗಿ ವರ್ತಿಸಿದರೆ ಅದೆಷ್ಟೇ ಅತ್ತರೂ, ಕೂಗಾಡಿದರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಕೂಡದು. ಈಗೀಗಂತೂ ಮಗುವು ಮೊಬೈಲ್ ಬೇಕು ಎಂದು ಹಟ ಮಾಡುತ್ತದೆ, ರಚ್ಚೆ ಹಿಡಿಯುತ್ತದೆ ಎಂದು ದೊಡ್ಡವರು ಕೊಟ್ಟು ಬಿಡುತ್ತಾರೆ. ಇವರು ಕೊಡುವ ಕಾರಣಗಳೆಂದರೆ, ಅದು ಹಾಗೆ ಕಿರುಚುವುದರಿಂದ ಗಂಡ ಅಥವಾ ಮನೆಯ ಹಿರಿಯರು ಮಗುವನ್ನು ಗೋಳಾಡಿಸಬೇಡ, ಅದೇನು ಕೇಳುತ್ತೋ ಕೊಟ್ಟು ಸುಮ್ಮನಾಗಿಸು ಎನ್ನುತ್ತಾರೆ ಎನ್ನುವರು ಅಥವಾ ಅದು ಮಾಡುವ ಗಲಾಟೆಯನ್ನು ಕೇಳಲಾಗುವುದಿಲ್ಲ ಎನ್ನುವರು. ಯಾವುದೇ ಕಾರಣಕ್ಕೆ ನೀವು ಮಗುವಿನ ಹಟಕ್ಕೆ ಬಗ್ಗಿದರೆ ಅದಕ್ಕೆ ತನ್ನ ಹಟದ ಅಥವಾ ಪ್ರವೃತ್ತಿಯ ವಿಜಯವನ್ನು ಕಂಡುಕೊಳ್ಳುತ್ತದೆ ಮತ್ತು ಅದನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುತ್ತದೆ. ಅದೆಷ್ಟು ಕಿರುಚಾಡುವುದೋ, ಗೋಳಾಡುವುದೋ, ನೆಲದ ಮೇಲೆ ಬಿದ್ದು ಹೊರಳಾಡುವುದೋ; ಮಾಡಲಿ ಬಿಡಿ. ಅದೆಷ್ಟು ಹೊತ್ತು ಮಾಡುವುದೋ ಮಾಡಲಿ. ಅದಕ್ಕೆ ತಿಳಿಯಲಿ ನೀವು ಬಗ್ಗುವುದಿಲ್ಲ ಎಂದು. ಮಗುವು ಹಠಾತ್ ಪ್ರವೃತ್ತಿಯನ್ನು ಮನೋಗತ ಮಾಡಿಕೊಳ್ಳಬಾರದೆಂಬ ಆಸಕ್ತಿ ಇದ್ದರೆ, ಅದರ ರಚ್ಚೆ, ಗೋಳು ಮತ್ತು ಹಟವನ್ನೂ ಸಹಿಸುವ ಶಕ್ತಿಯನ್ನು ಕೆಲವು ಕಾಲವಾದರೂ ಪಡೆದುಕೊಳ್ಳಬೇಕು. ಮಗುವಿಗೆ ತನ್ನ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳುವ ತರಬೇತಿ ನೀಡಲೇಬೇಕು.

ನೆನಪಿಡಿ, ಮಕ್ಕಳ ನಕಾರಾತ್ಮಕವಾದ, ರೌದ್ರವಾದ ಹಟಮಾರಿತನಕ್ಕೆ ನಿಮ್ಮದು ಧನಾತ್ಮಕ ಮತ್ತು ಸಮತೋಲಿತ ಪಟ್ಟು ಇರಲಿ. ಶಿಕ್ಷಿಸುವ ಅಥವಾ ದಂಡಿಸುವ ಅಥವಾ ಹೊಡೆಯುವ, ಬಡಿಯುವ, ಬರೆ ಹಾಕುವ, ಮೆಣಸಿನಕಾಯಿ ಘಾಟು ಹಾಕುವಂತಹ ಕ್ರೌರ್ಯಗಳನ್ನು ಖಂಡಿತ ಪ್ರದರ್ಶಿಸಬೇಡಿ. ಮಗುವಿನೊಂದಿಗೆ ಮಲ್ಲ ಯುದ್ಧ ಸಲ್ಲ. ಕಲರಿ ಪಯಟ್ಟು ಬೇಡ.

ಮಗುವಿನ ಹಟಮಾರಿತನಕ್ಕೆ ನಮ್ಮ ನಿಯಮದ ಪಟ್ಟನ್ನು ಸಡಿಲಿಸುವುದು ಬೇಡ ಮತ್ತು ಮಗುವಿನ ಎದುರು ಇತರರಿಗೆ ಇವನು ಹಾಗೆನೇ, ತುಂಬಾ ಕೋಪ, ಅವರ ತರ, ಇವರ ತರ ಅಂತ ಖಂಡಿತಾ ಹೆಳುವುದು ಬೇಡ.

ತಮ್ಮ ಭಾವನೆಗಳನ್ನು ಮತ್ತು ವರ್ತನೆಗಳನ್ನು ನಿಯಂತ್ರಿಸ ಲಾಗದೆ ಹಠಾತ್ತನೆ ಪ್ರದರ್ಶಿಸುವ ಪ್ರವೃತ್ತಿಯು ಬಹಳ ಅಪಾಯಕಾರಿ. ಅದರ ಬಗ್ಗೆ ಮತ್ತಷ್ಟು ಮುಂದೆ ತಿಳಿಯೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)